ಆಧುನಿಕ ಕಾಲಘಟ್ಟದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಯುವಮನಸ್ಸಿನಲ್ಲಿ ದೇಶಪ್ರೇಮ ಮೂಡಿಸುವಲ್ಲಿ ಚಿತ್ರಗಳ ಕೊಡುಗೆ ಸಾಕಷ್ಟಿದೆ.
ಹೀಗೆ ಚಿತ್ರಗಳನ್ನು ವಿಶ್ಲೇಷಿಸಹೊರಟರೆ ಅದಕ್ಕೆ ಒಂದು ದೊಡ್ಡ ವಾದವೇ ಏರ್ಪಡಬಹುದೋ ಏನೋ. ಭಾರತೀಯತೆ ಸಾರುವ ಅನೇಕ ಯುದ್ಧ ಚಿತ್ರಗಳು ನಿರ್ಮಾಣಗೊಂಡಿವೆ. ಹಕೀಕತ್‌ನಂತ ಎವರ್‍ಗ್ರೀನ್ ಚಿತ್ರದ ಮೈನವಿರೇಳಿಸುವ ಹಾಡು ಕರ್ ಚಲೇ ಹಮ್ ಫಿದಾ ಜಾನೊ ತನ್ ಸಾಥಿಯೊ ಅಬ್ ತುಮ್ಹಾರೇ ಹವಾಲೇ ವತನ್ ಸಾಥಿಯೊ ಇಂದಿಗೂ ನಮ್ಮ ಮನದಲ್ಲಿ ಸ್ಥಾನ ಪಡೆದಿದ್ದರೆ, ಅದಕ್ಕೆ ಹಾಡು ನಮ್ಮಲ್ಲಿ ಮೂಡಿಸುವ ಭಾರತೀಯತೆ ಕಾರಣ.
ಹಾಗೆ ನೋಡಿದರೆ, ಆಕ್ರಮಣ್, ದೀವಾರ್, ಬಾರ್ಡರ್, ರೆಫ್ಯೂಜಿ, ಎಲ್‌ಒಸಿ ಕಾರ್ಗಿಲ್, ಟ್ಯಾಂಗೊ ಚಾರ್ಲಿ, ೧೯೭೧ ಮುಂತಾದ ಬೆರಳೆಣಿಕೆ ಯುದ್ಧ ಸಿನಿಮಾಗಳಷ್ಟೇ ಬಾಲಿವುಡ್‌ನಲ್ಲಿ ಬಂದಿವೆ. ಕನ್ನಡದಲ್ಲಿ ನೋಡಿದರೆ ಮುತ್ತಿನ ಹಾರ, ಸೈನಿಕ ಉತ್ತಮ ಪ್ರಯತ್ನಗಳು.
ನಾನು ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗ ತೆರೆ ಕಂಡಿದ್ದ ಬಾರ್ಡರ್ ಚಿತ್ರ
ಎಷ್ಟು ಪರಿಣಾಮ ಬೀರಿತ್ತೆಂದರೆ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೂ ತಾವೇ ಟಿಕೆಟ್ ಕೊಡಿಸಿ ವಿದ್ಯಾರ್ಥಿಗಳಿಗಾಗಿ ಬೆಳ್ತಂಗಡಿಯ ಟಾಕೀಸಲ್ಲಿ ಬಾರ್ಡರ್ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿಸಿದ್ದರು. ಅದನ್ನು ನೋಡಿದ ಬಳಿಕ ಮತ್ತೆ ನಾಲ್ಕು ಬಾರಿ ನೋಡಿದ್ದೆ. ಇದೇ ಚಿತ್ರದಿಂದ ಸ್ಫೂರ್ತಿ ಪಡೆದು ನಾವು ಐದಾರು ಮಿತ್ರರು ಸೇನೆಗೆ ಸೇರುವ, ಅದಕ್ಕೆ ಮೊದಲು ಎನ್‌ಸಿಸಿ ಸೇರುವ ಮನಸ್ಸು ಮಾಡಿದ್ದೆವು. ಎನ್‌ಸಿಸಿಯಲ್ಲಿ ಸಾಧನೆ ಗಮನಾರ್ಹವಿತ್ತಾದರೂ ಸೇನೆಗೆ ಸೇರುವ ಕನಸು ಹಾಗೆಯೇ ಉಳಿಯಿತಾದರೂ ಬಾರ್ಡರ್ ಮನಸ್ಸಲ್ಲಿ ಬಿತ್ತಿದ ಭಾರತೀಯತೆಯ ಅಚ್ಚು ಅಳಿಸಿಹೋಗಿಲ್ಲ. ಸಂದೇಸೆ ಆತೇಂ ಹೈ ಕೂಡಾ ಹಚ್ಚಹಸಿರು. ಹಾಗೆಂದು ಈ ಚಿತ್ರಗಳಲ್ಲಿ ನಾಟಕೀಯತೆ, ಹೆಚ್ಚೇ ಎನಿಸುವ ಹೀರೋಯಿಸಮ್ ಇವೆಲ್ಲ ನೆಗೆಟಿವ್ ಅಂಶ ಪಟ್ಟಿ ಮಾಡಬಹುದು.
ಕೆಲ ತಿಂಗಳ ಹಿಂದೆ ತೆರೆ ಕಂಡ ೧೯೭೧ ಕೂಡಾ ಒಳ್ಳೆಯ ಪ್ರಯತ್ನ. ಪಾಕಿಸ್ತಾನದಲ್ಲಿ ಬಂದಿಗಳಾಗಿ, ಹೊರಜಗತ್ತಿಗೆ ಇಲ್ಲವಾದರೂ ಅಲ್ಲಿನ ಜೇಲುಗಳಲ್ಲಿ ಕೊಳೆಯುತ್ತಿರುವ ಕಥಾ ಹಂದರ ಮನಮಿಡಿಯುವಂಥದ್ದು, ಕೆಲ ಭಾರತೀಯ ಯುದ್ಧಕೈದಿಗಳು ಅಲ್ಲಿಂದ ತಪ್ಪಿಸಿಕೊಳ್ಳಲು ಮಾಡುವ ಯತ್ನವನ್ನು ನಿರೂಪಿಸಲಾಗಿದೆ. ಇದೇ ರೀತಿಯ ಇನ್ನೊಂದು ಚಿತ್ರ ದೀವಾರ್. ಹಾಲಿವುಡ್‌ನಲ್ಲಿ ಸ್ಟಲಗ್ ೧೭ ಎಂಬ ಸಿನಿಮಾ ಕೂಡಾ ಬಂದಿದೆ.
ಯುದ್ಧ ಚಿತ್ರಗಳೇ ಭಾರತೀಯತೆ ಬೆಳೆಸಬೇಕು ಎಂದೇನೂ ಇಲ್ಲ. ಸ್ವಾತಂತ್ರ ಹೋರಾಟದ ಕಥೆ ಹೇಳುವಂತಹ ಲೀಜೆಂಡ್ ಆಫ್ ಭಗತ್ ಸಿಂಗ್, ಇತ್ತೀಚೆಗೆ ಯುವಮನಸ್ಸನ್ನು ಕೆದಕಿ ಕ್ರಾಂತಿಯ ಸ್ಪೂರ್ತಿ ಮೂಡಿಸಿದ ರಂಗ್ ದೇ ಬಸಂತಿ ಕೂಡಾ ತಮ್ಮ ಅನೇಕ ಮಿತಿಗಳ ನಡುವೆ ಉತ್ತಮ ಪ್ರಯತ್ನಗಳು. ಇಂದಿಗೂ ಗಾಂಧೀಜಿಗೆ, ಅವರ ಸಿದ್ಧಾಂತಗಳಿಗೆ ಬೆಲೆ ಇದೆ ಎಂದು ಸಾರಿದ ಲಗೇ ರಹೊ ಮುನ್ನಭಾಯಿ ಭಾರತೀಯರ ಹೃದಯ ಗೆದ್ದಿತು.
ಸ್ವಾತಂತ್ರದ ಅಂತರ್ಜಲ ನಮ್ಮಲ್ಲಿ ಜೀವಂತ ಇರುವಲ್ಲಿ ಅನೇಕ ಅಂಶಗಳು ಅದರಲ್ಲಿ ಸಿನಿಮಾ, ರಂಗಭೂಮಿಯದ್ದೂ ಒಂದು ಮಹತ್ವದ ಪಾಲಿದೆ ಅನ್ನುವುದಷ್ಟೇ ಇಲ್ಲಿ ಬರುವ ಯೋಚನೆ. ಇಂತಹ ಪ್ರಯತ್ನಗಳು ಆಗುತ್ತಲೇ ಇರಬೇಕಾಗಿವೆ.
2 comments:
ಬಾರ್ಡರ್ ನೋಡಲಿಕ್ಕೆ ಆಗಲಿಲ್ಲ. ನೋಡೇ ನೋಡ್ತಿನಿ. ಲೇಖನ ಚೆನ್ನಾಗಿದೆ.
ಚಿಕ್ಕಂದಿನಲ್ಲಿ ಹಾಗೂ ಈಗಲೂ ಇಂತಹ ದೇಶ ಪ್ರೇಮದ ಚಿತ್ರಗಳನ್ನು ನೋಡುವಾಗ, ನೋಡಿದ ನಂತರ ದೇಶಪ್ರೇಮ ಒಂದು ಉನ್ಮಾದದ ರೀತಿಯಲ್ಲಿ ಮೂಡುತ್ತದೆ. ಈಗೀಗ ಆ ಬಗೆಯ ಉನ್ಮಾದದಿಂದ ಪ್ರಯೋಜನವಿಲ್ಲ ಎಂಬುದು ಅರಿವಾಗ್ತಿದೆ. ಕೇವಲ ಹಿಂಸೆಯ ಪ್ರದರ್ಶನವೇ ದೇಶಪ್ರೇಮವಾಗಬೇಕಿಲ್ಲ, ನಿಜಜೀವನಕ್ಕೆ ಹತ್ತಿರಾದ ದೇಶಪ್ರೇಮದ ನಿದರ್ಶನಗಳನ್ನು ಸಿನೆಮಾಗಳಲ್ಲಿ ತೋರಿಸಿದರೆ ಚೆನ್ನೆ ಆದರೆ ಅವು ರೋಚಕವಾಗಿ, ಪ್ರಚೋದಕವಾಗಿ ಇರೋದಿಲ್ಲವಲ್ಲ...
Post a Comment