17.6.08
ಜೂನ್ ಮಳೆಯ ಮತ್ತಷ್ಟು ಹನಿ
ತುಂತುರು ಹನಿಗಳು
ಭಾವವಿಲ್ಲದೆ ಸುರಿದು
ಕೊಚ್ಚೆ ಸೇರುತ್ತಿವೆ
ಈ ಥಂಡಿಯಲ್ಲಿ
ಬಿಸಿಕಾಫಿ ಹಂಚಿಕೊಳ್ಳಲು
ನೀನಿಲ್ಲದೆ ಹಾಗೇ ಆರಿಹೋಗಿದೆ....
*************
ವಸುಂಧರೆಯ ಸೇರಲು
ತವಕಿಸಿದ್ದ
ಅಷ್ಟೊಂದು ಮಳೆ
ಹನಿಗಳೆಲ್ಲಾ ಸುರಿದು
ಎತ್ತಲೋ ಹರಿದು
ಅಪರಿಚಿತರಂತೆ
ಹೋಗಿಬಿಟ್ಟವು
********
ಅಂಗಳದಲ್ಲಿ ಧೋ ಎಂದು
ಸುರಿವ ಆಟಿ ಮಳೆಗೆ
ಮಕ್ಕಳಿಲ್ಲದ ಮನೆಯಲ್ಲಿ
ಕುಳಿತ
ಅಜ್ಜ ಅಜ್ಜಿ
ಯಾವಾಗಲೋ
ಮೆದ್ದ ಹಪ್ಪಳ, ಚಕ್ಕುಲಿ
ನೆನೆದುಕೊಳ್ಳುತ್ತಿದ್ದಾರೆ..
**********
ಹಳ್ಳಿಯಲ್ಲಿ ಆಕಾಶ
ತೂತುಬಿದ್ದಂತೆ
ಸುರಿವ ಮಳೆಗೂ
ಯಾಕೋ ಉತ್ಸಾಹವಿಲ್ಲ
ಮಳೆಗೆ ನೆನೆದು ಸೀನುತ್ತಾ
ತೋಡಲ್ಲಿ ಮೀನು
ಹಿಡಿವ ಪುಟಾಣಿಗಳೂ ಊರಲ್ಲಿಲ್ಲ...
10.6.08
ಬುರುಡೆ ಜೋಗದ ಮಡಿಲಲ್ಲಿ..(trek to burude joga)
ಚುನಾವಣೆ ವರದಿಗಾರಿಕೆ ಬಿಸಿ ಮುಗಿದ ಕೂಡಲೇ ಕಾಡಿನತ್ತ ತೆರಳಿ ಏರಿದ್ದ ಮಂಡೆ ಬಿಸಿ ತಣಿಸಲೇಬೇಕಿತ್ತು...ಕುಮಾರ ಪರ್ವತ ಏರಿಬಿಡುವುದು ಎಂದು ನಿರ್ಧಾವಾಗಿ ನಮ್ಮ ತಂಡವೂ ರೆಡಿಯಾಗಿತ್ತು.
ಆದರೆ ಕುಮಾರಪರ್ವತದಲ್ಲಿ ಭಾರೀ ಮಳೆ ಸುರಿಯುತ್ತದೆ, ಮೇಲಾಗಿ ಸುಬ್ರಹ್ಮಣ್ಯದಲ್ಲಿ ಚಿಕುನ್ ಗುನ್ಯಾ ಕೂಡಾ ಹರಡಿದ್ದರಿಂದ ನಮ್ಮ ತಂಡದ ಕೆಲವರಿಂದ ಕುಮಾರಪರ್ವತ ಬೇಡ ಎಂಬ ಅಪಸ್ವರ ಬಂತು...
ಮತ್ತೆ ಕಾರ್ಯಕ್ರಮದಲ್ಲಿ ದಢೀರ್ ಬದಲಾವಣೆ...
ಉತ್ತರಕನ್ನಡದ ಕುಮಟಾ ಸಮೀಪ ಎಲ್ಲೋ ಬುರುಡೆ ಯಾನೆ ಬುರುಡೆ ಜೋಗ ಎಂಬ ಹೆಸರಿನ ಜಲಪಾತ ಇದೆಯೆಂಬ ಮಾಹಿತಿ ಮೊದಲೇ ರಾಜೇಶ್ ನಾಯಕ್, ರಾಕೇಶ ಹೊಳ್ಳರಿಂದ ತಿಳಿದಿತ್ತು..ಹಾಗಾಗಿ ಅಲ್ಲಿಗೇ ಹೋಗುವುದೆಂದು ನಿರ್ಧರಿಸಿಬಿಟ್ಟೆವು.
ಹಿಂದಿನ ದಿನವೇ ಕುಮಟಾದ ಹೆಗಡೆಯಲ್ಲಿರುವ ಹಿರಿಯ ಮಿತ್ರ ಜಿ.ಟಿ.ಭಟ್ಟರ ಆತಿಥ್ಯ. ಅವರಲ್ಲಿ ಲೋಕಾಭಿರಾಮ ಮಾತಾಡಿದಾಗ ಅವರ ಸ್ನೇಹಿತರೊಬ್ಬರು ಗಣೇಶ ಹೆಗಡೆ ಎಂಬವರು ಬುರುಡೆ ಫಾಲ್ಸಿನ ಪಕ್ಕದಲ್ಲೆಲ್ಲೋ ಮನೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಕೊಟ್ಟರು. ನಮಗೂ ಮಧ್ಯಾಹ್ನಕ್ಕೆ ಅನ್ನದಾನಿಯೊಬ್ಬರ ಕೃಪೆ ಬೇಕಿತ್ತು...ಹೆಗಡೆಯವರ ಫೋನ್ ನಂಬರ್ ಹುಡುಕಿ ನಮ್ಮ ಮರುದಿನದ ಭೇಟಿ ಬಗ್ಗೆಯೂ ನಮ್ಮ ಊಟಕ್ಕೆ ವ್ಯವಸ್ಥೆಯಾದರೆ ಉತ್ತಮ ಎಂದು ಜಿ.ಟಿ.ಭಟ್ಟರು ಅರುಹುವ ಮೂಲಕ ನಮ್ಮ ತಲೆಬಿಸಿ ಇಳಿಸಿದರು. ಅಂತೂ ‘ಅಡ್ಡಿಲ್ಲ ಮಧ್ಯಾಹ್ನ ಊಟಕ್ಕೆ ಅಗತ್ಯ ಬನ್ನಿ’ ಎಂಬ ಹೆಗಡೆಯವರ ಸೂಚನೆ ಬಂತು.
ಮರುದಿನ ಮುಂಜಾವ ಬೇರೆಲ್ಲೂ ನಾವು ನೋಡಿರದ ಹೆಸರೇ ಇಲ್ಲದ ಮಾರುತಿ ಆಮ್ನಿಯಂತೆ ಭಾಸವಾಗುವ ಒಂದು ವಾಹನದಲ್ಲಿ ಹೊರಟೆವು. ಕುಮಟಾದಿಂದ ಸಿದ್ಧಾಪುರಕ್ಕೆ ಹೋಗುವ ಮಾರ್ಗದಲ್ಲಿ ೫೫ ಕಿ.ಮೀ ಪ್ರಯಾಣಿಸಿದಾಗ ಇಳಿಮನೆ ಕ್ರಾಸ್ ಸಿಗುತ್ತದೆ. ಅಲ್ಲಿಂದ ಎಡಕ್ಕೆ ಮಾರ್ಗದಲ್ಲಿ ಸುಮಾರು ಐದು ಕಿ.ಮೀ ತೆರಳಬೇಕು(ಈ ಸೂಚನೆಯಿರುವ ಫಲಕ ರಸ್ತೆ ಬದಿಯಲ್ಲೂ ಇದೆ).
ಗಣೇಶ ಹೆಗಡೆಯವರ ಮನೆ ಸಿಗುವ ಮುಂಚೆ ಸಣ್ಣ ನದಿ ಮಾರ್ಗಕ್ಕೆ ಅಡ್ಡಲಾಗಿ ಸಿಗುತ್ತದೆ, ಅದೇ ಮುಂದೆ ಜಲಪಾತವಾಗುತ್ತದೆ ಎಂಬ ಮಾಹಿತಿ ಕೊಟ್ಟರು ಇಲ್ಲಿಗೆ ಮೊದಲೇ ಹೋಗಿದ್ದ ರಾಕೇಶ್ ಹೊಳ್ಳ.
ಹೆಗಡೆಯವರು ನಮಗಾಗಿ ಮೊದಲೇ ಕಾದಿದ್ದರು. ಅವರಲ್ಲಿ ಸಣ್ಣ ಚಹಾ ಆತಿಥ್ಯ ಸ್ವೀಕರಿಸಿ, ಜಲಪಾತ ನೋಡುತ್ತಾ ಮುಕ್ಕಲು ಅಗತ್ಯವಿದ್ದಷ್ಟು ಬಾಳೆಹಣ್ಣನ್ನೂ ಅವರಿಂದಲೇ ನಾಚಿಕೆ ಬಿಟ್ಟು ಸ್ವೀಕರಿಸಿ ತೆರಳಿದೆವು.
ಹೆಗಡೆಯವರ ಮನೆಯಿಂದ ಹೊರಟರೆ ಸುಮಾರು ಅರ್ಧ ಗಂಟೆ ಹಾದಿ ಜಲಪಾತಕ್ಕೆ. ಆದರೆ ಕಾಡಿನ ದಾರಿಯಲ್ಲಿ ನಡೆದು ಮತ್ತೆ ೮೦-೯೦ ಡಿಗ್ರಿ ಕೋನದ ಇಳಿಜಾರಲ್ಲಿ ಇಳಿಯುತ್ತಾ ಸಾಗಿದಾಗ, ಬಂಡೆಗಲ್ಲನ್ನು ಜಾಗ್ರತೆಯಾಗಿ ದಾಟಿ ಇಳಿದಾಗ ಕಾಣಿಸುತ್ತದೆ ಬುರುಡೆ ಜೋಗ ಜಲಪಾತದದ ಶಿಖರ.
ನಾವು ಹೋದದ್ದು ಮೇ ಕೊನೆ ವಾರ. ಆದರೂ ಸಾಕಷ್ಟು ನೀರು ಹರಿಯುತ್ತಿತ್ತು ಜಲಪಾತದಲ್ಲಿ. ಇದೊಂದು ಸರ್ವಋತು ಜಲಪಾತ. ಸುಮಾರು ೬ ಹಂತಗಳಿರುವ ಈ ಜಲಪಾತ ಮಳೆಗಾಲದಲ್ಲಿ ಚಾರಣಾಸಕ್ತರಿಂದ ದೂರ ದೂರ...ಯಾಕೆಂದರೆ ಹೆಗಡೆಯವರ ಮನೆ ಬಳಿ ರಸ್ತೆಗಡ್ಡವಾಗುವ ನದಿ ದಾಡಲು ಇಲ್ಲಿ ಇನ್ನೂ ಸೇತುವೆ ಆಗಿಲ್ಲ... ಸೇತುವೆ ಆಗಿದ್ದರೆ ಸುಮಾರು ೧೦೦೦ ಮಂದಿ ಗ್ರಾಮಸ್ಥರಿಗೆ
ಉಪಕಾರವಾಗುತ್ತಿತ್ತು ಎನ್ನುತ್ತಾರೆ ವಯೋವೃದ್ಧ ಗಣೇಶ ಹೆಗಡೆ. ಇಲ್ಲಿ ಸೇತುವೆ ನಿರ್ಮಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಶಿಲಾನ್ಯಾಸ ಮಾಡಿದ ಕಲ್ಲು ಹಾಗೇ ನಗುತ್ತಿದೆ. ಅದನ್ನು ನೋಡಿ ಜನ ನಗಬೇಕಷ್ಟೇ.
ಇನ್ನು ಜಲಪಾತದ ಬಗ್ಗೆ....
ಮೇಲಿನಿಂದ ಎರಡನೇ ಹಂತದ ಬುಡಕ್ಕೇ ಹೋಗಿ ಧಾರೆಗೆ ತಲೆಕೊಟ್ಟು ಸ್ನಾನ ಮಾಡುವುದು ಅಷ್ಟೇನು ಕಷ್ಟವಲ್ಲ. ಆದರೆ ಕೆಳಗಿನಿಂದ ಮೊದಲ ಎರಡು ಹಂತಗಳಿಗೆ ಹೋಗುವುದು ಬಹಳ ಕಷ್ಟ..ಗೋಡೆಯಂತಹ ಕಲ್ಲನ್ನು ಇಳಿದು ಹೋಗಬೇಕು. ಆದರೆ ರಾಕೇಶ ಹೊಳ್ಳ ಮತ್ತು ಇನ್ನೊಬ್ಬ ಮಿತ್ರ ಅಶೋಕ್ ಅಲ್ಲಿಗೂ ಇಳಿದು ಬಿಟ್ಟರು!
ಇತರ ಜಲಪಾತಗಳಿಗೆ ಹೋಲಿಸಿದರೆ ಇನ್ನೂ ಪರಿಶುದ್ಧ ಬುರುಡೆಜೋಗ. ಅಂದ ಹಾಗೆ ಈ ಬುರುಡೆಗೆ ಜೋಗ ಎಂಬ ಸಫಿಕ್ಸ್ ಸೇರಿದ್ದು ಯಾಕೋ ಗೊತ್ತಿಲ್ಲ.
ಮತ್ತೆ ಹೆಗಡೆಯವರ ಮನೆ ಸೇರಿ ಭೂರಿ ಭೋಜನ ಸ್ವೀಕರಿಸಿ, ಇನ್ನೊಮ್ಮೆ ಬನ್ನಿ ಎಂಬ ಮನಃಪೂರ್ವಕ ಮನವಿ ಕೇಳುತ್ತಾ ಕುಮಟಾಕ್ಕೆ ನಮ್ಮ ಆಮ್ನಿಯಂತೆ ಭಾಸವಾಗುವ ವಾಹನ ಮರಳಿತು.....
ಜಲಪಾತದ ಕೆಲವು ನೋಟಗಳನ್ನು ಹೊಳ್ಳರ ಬ್ಲಾಗಲ್ಲಿ ನೋಡಬಹುದು.
6.6.08
ಜೂನ್ ಮಳೆ
ಇಂದು ಮುಗಿಲಪ್ಯಾಟೆಯಲ್ಲಿ ಸಂಜೆ ಎಂದಿನಂತಿಲ್ಲ.
ಪಶ್ಚಿಮದಲ್ಲಿ ಅದೇಕೋ ಸೂರ್ಯನನ್ನೇ ಮುಚ್ಚಿ ಹಾಕುವಂತಹ ತಳಮಳ....
ಇದ್ದಕ್ಕಿದ್ದಂತೆಯೇ ರಾತ್ರಿಯಾಯಿತೇನೋ ಎಂಬಂತೆ ಬೆಳಕು ಇನ್ನಿಲ್ಲದಂತೆ ಮಾಯ....
ಅಂಗಡಿಯಲ್ಲಿ ಗೋಳಿಬಜೆ ಹಿಟ್ಟು ಕಲಸುತ್ತಿದ್ದವನಿಗೆ, ಮರದಡಿ ಮೀನು ಮಾರುವವರಿಗೆ, ಮುಂದಿನ ಗದ್ದೆಯಲ್ಲಿ ಕಸ ಒಟ್ಟು ಮಾಡಿ ಬೆಂಕಿ ಹಾಕುತ್ತಿದ್ದ ರೈತರಿಗೆ, ಗಂಭೀರವಾಗಿ ಕ್ರಾಪ್ ಬಿಡಿಸುತ್ತಿದ್ದ ಕ್ಷೌರಿಕನಿಗೆ, ಸುಮ್ಮನೇ ಕ್ಯಾಸೆಟ್ ಹಾಡು ಕೇಳುತ್ತಿದ್ದ ರಿಕ್ಷಾವಾಲನಿಗೆ, ಪಕ್ಕದ ಹೊಳೆಯಲ್ಲಿ ಗಾಳ ಇಳಿಸಿ ಧ್ಯಾನ ಮಗ್ನರಾಗಿ ಕುಂತವರಿಗೆಲ್ಲಾ ಇಂದು ಮಳೆ ಬರೋದಂತೂ ಗ್ಯಾರಂಟಿ ಅನ್ನಿಸಿತು.
ಇನ್ನೇನು ಶಾಲೆ ಬಿಡೋದಕ್ಕೂ ಆಯ್ತು. ಶಾಲೆ ಗಂಟೆ ಬಾರಿಸುವುದಕ್ಕೂ ಪಶ್ಚಿಮದಲ್ಲೆಲ್ಲೋ ತಿರುಗುತ್ತಿದ್ದ ಮೋಡಗಳೆಲ್ಲ ಥೇಟ್ ಯುದ್ಧವಿಮಾನಗಳ ರೀತಿ ಪೇಟೆಯತ್ತಲೇ ಧಾವಿಸಿಬಂದವು. ಶಾಲೆ ಅಂಗಳದಲ್ಲಿ ಚಿಣ್ಣರು ಓಡುತ್ತಿರುವಂತೆಯೇ ಸಣ್ಣಗೆ ಸುರಿಯತೊಡಗಿತು ಮಳೆ. ಮಳೆಗಾಗಿ ಅದೆಷ್ಟು ದಿನಗಳ ಕಾಯುವಿಕೆ ಇಂದು ಸಾರ್ಥಕ.
ಅಲ್ಲಿವರೆಗೆ ಮುಗಿಲಪ್ಯಾಟೆಯ ಇಡೀ ಧರೆ ಶುಷ್ಕವಾಗಿತ್ತು. ಗದ್ದೆಗಳೆಲ್ಲ ಒಡೆದಿದ್ದವು. ಇಡೀ ಹಳ್ಳಿಗೆ ಅದೇನೋ ದುಗುಡ ಆವರಿಸಿತ್ತು. ರೈತರು ತಲೆಗೆ ಕೈಹೊತ್ತು ಕುಳಿತಿದ್ದರು. ಮೋಡ ಬಂದರೂ ಮಳೆಯಾಗುತ್ತಿರಲಿಲ್ಲ. ತುರ್ತು ಕೆಲಸಕ್ಕೆಂಬಂತೆ ಮುಗಿಲ ಪ್ಯಾಟೆಯ ಸೂರಿನ ಮೇಲಿಂದಲೇ ಹಾದು ಹೋಗುತ್ತಿತ್ತು.
ಈಗ ಮಳೆ ಬಂದಿದೆ...ಮಳೆ ಬಂದೇ ಬಿಟ್ಟಿದೆ
ಖುಷಿಯಲ್ಲಿ ಚಿಣ್ಣರು ಮಳೆಯಲ್ಲಿಯೇ ಕುಣಿಯುತ್ತಾ ಓಡತೊಡಗಿದರು. ಶಾಲೆಯ ಗೋಡೆಗಂಟಿ ನಿಂತಿದ್ದ ಪುಟ್ಟಿಯೊಬ್ಬಳನ್ನು ಪೋರನೊಬ್ಬ ಮಳೆಗೆ ಎಳೆದ ಕಿಲ ಕಿಲ ನಕ್ಕ, ನೋಡಿದ ಮಕ್ಕಳೆಲ್ಲ ನಗತೊಡಗಿದರು...
ಅದನ್ನು ನೋಡಿದ ಮೇಷ್ಟರೂ ನಕ್ಕರು...ಬಜ್ಜಿ ಹಿಟ್ಟು ಕಲಸಿದವನು, ಗಾಳ ಹಾಕುತ್ತಿದ್ದಾತ, ಮೀನು ಮಾರುವವರು, ರೈತ, ಆಟೋವಾಲ ಎಲ್ಲರ ಬಾಯಿಗೂ ಈಗ ನಗು ಅಂಟಿಕೊಂಡಿತು...ಎಲ್ಲರೂ ನಗತೊಡಗಿದರು...ಬಹಳ ದಿನಗಳ ಬಳಿಕ...
ಮುಗಿಲಪ್ಯಾಟೆಯಲ್ಲಿ ಈಗ ಇಡೀ ಮಳೆಗೇ ಹೆದರಿಕೆ ಹುಟ್ಟುವಂತೆ ನಗುವಿನ ಮಳೆ!
Subscribe to:
Posts (Atom)