ಆತ್ಮಹತ್ಯೆಯೇ ಲೇಸು....
ರಾತ್ರಿ ಇಡೀ ನಿದ್ದೆಯಿಲ್ಲದೆ ಮಗ್ಗುಲು ಬದಲಾಯಿಸಿ ಕಳೆದ ಆತ ಬೆಳಗ್ಗೆ ಕೋಳಿ ಕೂಗುವ ಹೊತ್ತಿಗೆ ಹಾಗೆಂದು ನಿರ್ಧರಿಸಿಯಾಗಿತ್ತು.
ಚಳಿಗಾಗಿ ಹೊದ್ದಿದ್ದ ಕಂಬಳಿ ಒಳಗೇ ಕಾಡುತ್ತಿದ್ದ ಯೋಚನೆಗಳು ಇರಿಯುವ ಈಟಿಯಂತೆ ಭಾಸವಾಗಿ ಬಲವಂತವಾಗಿಯೇ ಆತ ಎದ್ದು ಮನೆಯಿಂದ ಹೊರನಡೆದ.
ಬೆಳಕು ಹರಿದಿತ್ತು, ಪತ್ನಿ ಅಡುಗೆ ಕೋಣೆಯಿಂದ ಕೆಮ್ಮಿದಂತೆ ಕೇಳಿತು, ರೋಗಿಷ್ಟ ನಾಯಿ ಬಚ್ಚಲು ಮನೆಯ ಒಲೆಯ ಬೂದಿಯಲ್ಲಿ ಮೈಮರೆತು ಮಲಗಿತ್ತು, ಅಲ್ಲೊಮ್ಮೆ ದೃಷ್ಟಿ ಹಾಯಿಸಿದಾತ ಮನೆಯ ಮುಂದಿನ ಬೇಲಿ ದಾಟಿ ಸರಸರನೆ ಸಾಗಿದ.
ಮೈಲಿ ದೂರದಲ್ಲೇ ಭೋರ್ಗರೆಯುತ್ತಿದೆ ಸಮುದ್ರ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಅಬ್ಬರವಿದ್ದೂ ಇಲ್ಲದಂತೆ ಮಲಗಿದ ಹುಲಿಯಂತೆ ಅದು ಆತನಿಗೆ ಕಾಣಿಸಿತು. ಸಮುದ್ರ ತೀರದ ಎತ್ತರದ ಬಂಡೆಯೊಂದರ ಅಂಚಿನಲ್ಲಿ ಬಂದು ಕುಳಿತು ಬಿಟ್ಟ.
ಅಲ್ಲಿಂದ ಹಾರಿ ಸತ್ತವರು ಹಲವರು. ಅಂಚಿಗೆ ಯಾರೂ ಹೋಗಬಾರದು, ಅಪಾಯಕಾರಿ ಜಾಗ ಎಂಬ ಹಳೆಯ ಮಾಸಲು ಫಲಕ ತನ್ನನ್ನು ನೋಡಿ ಅಣಕಿಸಿದಂತಾಯಿತು.
ಏನಿದೆ ಬದುಕಲ್ಲಿ?
೪೦ ವರ್ಷದ ಬದುಕಿನ ಹೋರಾಟದಲ್ಲಿ ಸೋತು ಸುಣ್ಣವಾದವನು. ಗದ್ದೆ ಬೇಸಾಯ ಮಾಡಿ ಸುಖವಿಲ್ಲ ಎಂದು ಅಡಕೆ ಹಾಕಿ, ಆ ಮಣ್ಣಿಗೆ ಅಡಕೆ ಒಗ್ಗಿಕೊಳ್ಳದೆ ಪೀಚಾಗಿ ಹೋದದ್ದು, ಮಾಡಿದ ಸಾಲ ಮುಗಿಸಲಾಗದೆ ತೋಟದಿಂದ ಬರುವ ಅಲ್ಪಸ್ವಲ್ಪ ಆದಾಯವೆಲ್ಲ ಬಡ್ಡಿಗೇ ಹೋಗುವುದು, ಮನೆಯಲ್ಲಿ ಪತ್ನಿಯೂ ಏನಾದರೂ ಚುಚ್ಚಿ ಮಾತನಾಡುವುದು.....ಇಷ್ಟೆಲ್ಲದರ ಮಧ್ಯೆ ಈಗ ಕೈಗಾರಿಕಾ ವಲಯ ಯೋಜನೆ ಆತನಿಗೆ ಗರಬಡಿಸಿದೆ.
ಭೂಮಿ ಉಳಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಊರಿನ ಮೇಷ್ಟರು ಹೇಳಿದ್ದಾಗಿದೆ. ಸಿಗುವ ಪರಿಹಾರದಲ್ಲಿ ಇನ್ನೊಂದು ತನಗೆ ಬೇಕಿರುವ ಭೂಮಿ ಖರೀದಿ ಆಗದ ಮಾತು.
ಇವೆಲ್ಲ ನೋಡಿಯೂ ಮನೆಯಲ್ಲಿ ಮುದುಕಿ ತಾಯಿ, ಪತ್ನಿ ಇಬ್ಬರೂ ಬೆದರಿಲ್ಲ. ಅದೇ ಆತನಿಗೆ ಒಗಟು. ಯೋಜನೆ ವಿರೋಧಿ ಆಂದೋಲನದಲ್ಲಿ ಪಾಲ್ಗೊಂಡವರೇ ಅವರು. ಆದರೂ ಅವರಿಗೆ ಇರುವ ಧೈರ್ಯ ತನಗೇಕಿಲ್ಲ ಅನಿಸುವುದಿದೆ. ಏನಿದ್ದರೂ ಸಾಯುವುದೇ ಲೇಸು ಎನ್ನುತ್ತಾ ಎದ್ದು ಸಮುದ್ರ ನೋಡಿದ.
ಒಂದು ವೇಳೆ ಹಾರಿದರೆ ಏನಾಗಬಹುದು. ಇದು ವರೆಗೆ ಹಾರಿದವರಲ್ಲಿ ಎಲ್ಲರೂ ಸತ್ತಿದ್ದಾರೆ ಅನ್ನೋದು ಅವನಿಗೆ ಗೊತ್ತು.
ಹಾರುವ ವೇಗ ಹೆಚ್ಚು ಕಡಮೆ ಆದರೆ ಕೆಳಗಿರುವ ಬಂಡೆಗೆ ತಲೆ ಬಡಿದು ಚೂರಾಗಬಹುದು, ಇಲ್ಲವಾದರೆ ನೇರ ಸಮುದ್ರದ ನೀರಿಗೇ ಬೀಳಬಹುದು, ತಿಮಿಂಗಿಲವೋ ಷಾರ್ಕ್ ಮೀನೋ ಇದ್ದರೆ ನೇರವಾಗಿ ಅವುಗಳ ಹೊಟ್ಟೆಗೇ. ಇಲ್ಲವಾದರೆ ಉಪ್ಪು ನೀರು ಪುಪ್ಪುಸ ಸೇರಿ ಉಸಿರುಗಟ್ಟುತ್ತದೆ. ಇವೆಲ್ಲ ಆಲೋಚಿಸುವಾಗ ಮೈ ಬೆವರಿತು, ಮತ್ತೆ ಹಿಂದೆ ಕುಳಿತ.
ಪ್ಚ್! ಇಷ್ಟೇ ಕಾರಣಕ್ಕೆ ಸಾಯುವುದೇಕೆ ಅನ್ನಿಸತೊಡಗಿತು. ಪಿರಿಪಿರಿ ಎಂದರೂ ಮಡದಿ ಪ್ರೀತಿಸುತ್ತಾಳೆ, ತಾಯಿ ಬೆಂಬಲವೂ ಇದೆ, ಪರಿಹಾರ ಸಿಕ್ಕ ಬಳಿಕ ದೂರ ಊರಲ್ಲಿ ಚಿಕ್ಕದಾದರೂ ಭೂಮಿ ಖರೀದಿಸಿ ಬದುಕುವುದು ಸಾಧ್ಯ ಅನ್ನಿಸಿತು.
ಸಮುದ್ರದತ್ತ ನೋಡುತ್ತಿದ್ದವನು ಈಗ ಸಮುದ್ರಕ್ಕೆ ಬೆನ್ನು ಹಾಕಿದ. ನೀಲಿ ಆಕಾಶ, ದೂರದ ಲೈಟ್ ಹೌಸ್, ಪಕ್ಕದ ದೇವಸ್ಥಾನದ ಗಂಟೆ ಸದ್ದು, ಈಗ ಎಲ್ಲವೂ ಸುಂದರವಾಗಿ ಕಾಣತೊಡಗಿತು.....
ಮೈ ಮರೆತಂತೆ ಆಯಿತು.....
ಕುಳಿತಿದ್ದ ಬಂಡೆ ತುಸು ಜರುಗಿದಂತಾಯಿತು....
ಮತ್ತೆ ಕತ್ತಲೆ.....ಬೆಳಕೇ ಕಾಣದತ್ತ ಪಯಣ ಮಾಡಿದಂತೆ.ಖುಷಿಯೂ ಇಲ್ಲದ ದುಃಖವೂ ಇಲ್ಲದ ಊರಿಗೆ ಹೋದಂತೆ...