12.9.08

ಹೆದ್ದಾರಿ ಕಥಾನಕಗಳು

ಅಬ್ಬಾ ಇದು ಹೆದ್ದಾರಿಯೇ ಎಂಬ ಅನುಮಾನ ಬರುವಂತಹ ಕೆಟ್ಟ ರಸ್ತೆ ಅದು.
ಸಾಮಾನ್ಯವಾಗಿ ಇಡೀ ದಿನ ಬ್ಯುಸಿಯಾದ ರಸ್ತೆಗೆ ನಿದ್ರಿಸಲೂ ಬಿಡದಂತೆ ಅನಿಲ, ಅದಿರು ಟ್ಯಾಂಕರ್‍ಗಳು ಓಡುತ್ತವೆ.
ಆದರೆ ಇಂದು ಎಂದಿನಂತಿಲ್ಲ...
ಬಹಳ ದಿನದ ಬಳಿಕ ಮಳೆಯಾಗಿ ರಸ್ತೆಯೇ ತೊಯ್ದು ಹೋಗಿದೆ. ಅದಕ್ಕೋ ಏನೋ ರಾತ್ರಿ ಓಡಾಟದ ಲಾರಿ ಚಾಲಕರು ರಸ್ತೆ ಬದಿಯೇ ಲಾರಿ ನಿಲ್ಲಿಸಿ ನಿದ್ರೆಗೆ ಶರಣಾಗಿದ್ದಾರೆ.
ಆದರೆ ಆ ಜಂಕ್ಷನ್‌ನಲ್ಲಿ ಇನ್ನೂ ಮನುಷ್ಯ ಜೀವವೊಂದು ಕಾಣುತ್ತಿದೆ.
ಸರಿಯಾಗಿ ಉರಿಯದೆ ಮಿಣಕ್ ಮಿಣಕ್ ಅನ್ನುವ ಸೋಡಿಯಂ ವೇಪರ್‍ ಲೈಟಿನಡಿಯೇ ಸಣ್ಣ ಗೂಡಂಗಡಿಯಲ್ಲಿ ನೀರು ದೋಸೆ ಮಾರುವವನಾತ.
ಯಾವಾಗಲೂ ಸಾಲುಗಟ್ಟಿ ನಿಂದು ನೀರು ದೋಸೆ ತಿಂದು ಟೀ ಕುಡಿದು ಹೋಗುವವರು ಇಂದೇಕೋ ಕಾಣುತ್ತಿಲ್ಲ. ಹಾಗಾಗಿ ಆತನ ಮುಖದಲ್ಲೂ ನಿರಾಸೆ.
ದೋಸೆಯಾತ ನಿದ್ದೆಗೆ ಜಾರುವಷ್ಟರಲ್ಲಿ ಬೈಕ್ ಹಾರ್ನ್. ನೋಡಿದರೆ ಬೈಕ್ ಮೇಲೆ ಥೇಟ್ ರಸ್ತೆಯಂತೇ ತೊಯ್ದು ಹೋದ ಯುವಕ.
ನೋಡಿದರೆ ಕಾಲ್ ಸೆಂಟರಿನವನೋ, ರಾತ್ರಿ ಬೀಟ್ ಮುಗಿಸಿ ಬರುವ ಪತ್ರಕರ್ತನೋ ಇರಬಹುದು.
೨೦ ಪ್ಲೇಟ್ ಪಾರ್ಸೆಲ್ ಮಾಡು ರೂಂಮೇಟ್‌ಗಳೂ ಹಸಿದಿರಬಹುದು...ಎಂದ ಬೈಕ್ ಸವಾರ.
ಖುಷಿಯಾಯ್ತು ದೋಸೆಯಾತನಿಗೆ.
ಸ್ಯಾಂಪಲ್ ಒಂದು ಕೊಡು, ಎಂದು ಒಂದು ಪ್ಲೇಟ್ ನೀರು ದೋಸೆ ತಿಂದ ಬೈಕ್‌ನವನು.
ಗಿರಾಕಿಯಿಲ್ಲದೆ ಎರೆದ ದೋಸೆ, ಉಳಿದ ಹಿಟ್ಟು ಹಾಳಾಗಿ ಹೋಗುತ್ತಿತ್ತು, ಈ ಮಹಾಮನುಷ್ಯ ಬಂದು ೨೦ ಪ್ಯಾಕ್ ಮಾಡು ಎಂದದ್ದು ದೋಸೆಯಾತನಿಗೆ ಹೊಸ ಉತ್ಸಾಹ ಮೂಡಿಸಿತು.
೨೦ ಪ್ಲೇಟ್ ಪಾರ್ಸೆಲ್ ಕೊಟ್ಟ.
ಬೈಕ್‌ನಾತ ನೋಟೊಂದನ್ನು ಚಾಚಿದ.
ದೋಸೆ ನಿಜಕ್ಕೂ ಚೆನ್ನಾಗಿದೆ...ಹಾಗಾಗಿ ಚಿಲ್ಲರೆ ಬೇಡ ಎಂದ...
ಹಾಗಾದರೆ ಇನ್ನೆರಡು ಬಿಸಿ ದೋಸೆ ಇಕೋ ಎಂದು ಪ್ಯಾಕ್ ಮಾಡಿಕೊಟ್ಟ ದೋಸೆಯಾತ...
ಇಬ್ಬರೂ ನಕ್ಕರು...
ಯಾವುದೋ ಜನ್ಮದ ಬಂಧುಗಳಂತೆ...
ಮಿಣಗುಡುತ್ತಿದ್ದ ಸೋಡಿಯಂ ವೇಪರ್‍ ಈಗ ಪ್ರಕಾಶಮಾನವಾಗಿ ಉರಿಯಿತು.
ಬೈಕ್ ಮುಂದಕ್ಕೋಡಿತು...ಮಳೆ ಸುರಿಯುತ್ತಲೇ ಇತ್ತು....


***************

ಅದು ಎಕ್ಸ್‌ಪ್ರೆಸ್ ಹೈವೇ...
ರಾಷ್ಟ್ರವನ್ನು ವಿಶ್ವದಲ್ಲೇ ಪ್ರಖ್ಯಾತಗೊಳಿಸಲು ಪಣತೊಟ್ಟವರಿಗೆ ತೊಂದರೆಯಾಗಬಾರದು, ಅವರು ಬೇಗಬೇಗನೆ ತಮ್ಮ ಗಮ್ಯ ಸೇರಬೇಕು ಎಂದು ನಿರ್ಮಿಸಿದ ಆರು ಪಥಗಳ ಹೆದ್ದಾರಿ.
ಮಿಂಚಿನಂತೆ ಕಣ್ಣು ಕೋರೈಸುವ ಹೆಡ್‌ಲೈಟ್‌ಗಳೊಂದಿಗೆ ವಾಹನಗಳು ಹರಿದಾಡುತ್ತಿವೆ. ರಸ್ತೆಗೆ ಅಡ್ಡ ಬರುವ ನಾಯಿಗಳಿಗೆ ಯಾವ ವಾಹನವೂ ಅಲ್ಲಿ ಬ್ರೇಕ್ ಹಾಕದು, ಅಪರೂಪಕ್ಕೊಮ್ಮೆ ಓಡುವ ಟೂ ವೀಲರ್‍ ಹೊರತು ಪಡಿಸಿ. ಹಾಗಾಗಿ ಆ ರಸ್ತೆಯನ್ನು ನಾಯಿಗಳು ಆತ್ಮಹತ್ಯಾ ತಾಣವಾಗಿ ಗುರುತಿಸಿಕೊಂಡಿದ್ದವು.
ಲೇಟ್‌ನೈಟ್ ಪಾರ್ಟಿ ಮುಗಿಸಿದ ತಂಡವೊಂದು ಯಾವುದೋ ಪಬ್ಬೊಂದರಿಂದ ಹೊರಬಿದ್ದಿದೆ, ಅವರ ಕಾರಿನ ನಾಗಾಲೋಟಕ್ಕೆ ಬೈಕೊಂದು ಸಿಕ್ಕಿ ಅದರಲ್ಲಿದ್ದ ಇಬ್ಬರು ವಿಲವಿಲನೆ ಒದ್ದಾಡುತ್ತಿದ್ದಾರೆ.
ಕಾರ್‌ನಿಂದ ಹೋ ಎಂಬ ಕೇಕೆ ಬಿಟ್ಟರೆ ಬೇರೇನೂ ಕೇಳಲಿಲ್ಲ. ಹಿಂದಿನಿಂದ ಬಂದ ಮರ್ಸಿಡೀಸ್‌ ಹಾಗೇ ಬ್ರೇಕ್ ಹಾಕಿತು. ಕಿಟಿಕಿ ಕೆಳಗೆ ಸರಿದು ಮುಖವೊಂದು ಇಣುಕಿದು. ರಸ್ತೆ ಮೇಲೆ ನರಳುತ್ತಿದ್ದ ವ್ಯಕ್ತಿ ದೈನ್ಯನಾಗಿ ನೋಡಿದ.
ಕಿಟಿಕಿ ಮತ್ತೆ ಮುಚ್ಚಿತು. ಮರ್ಸಿಡಿಸ್ ಮುಂದಕ್ಕೋಡಿತು.
ನರಳುತ್ತಿದ್ದವರಿಬ್ಬರು ನಿಧಾನವಾಗಿ ನಿಶ್ಚಲರಾಗುತ್ತಿದ್ದುದನ್ನು ರಸ್ತೆ ಮೀಡಿಯನ್‌ನಲ್ಲಿ ಮಲಗಿದ್ದ ನಾಯಿಯೊಂದು ಅಸಹಾಯಕತೆಯಿಂದ ನೋಡಿ ಬಾಲ ಅಲ್ಲಾಡಿಸಿತು.

9 comments:

ತೇಜಸ್ವಿನಿ ಹೆಗಡೆ- said...

ವೇಣು ಅವರೆ,

ಮೊದಲ ಕಥೆಯಲ್ಲಿ ಕಾಣಿಸಿರುವ ಚಿತ್ರ ಮಂಜು ಮುಸುಕಿದ ಹಾದಿಯಂತೆ ಮಬ್ಬಾಗಿದ್ದರೂ ಪಣಂಬೂರು/ಎಂ.ಆರ್.ಪಿ.ಎಲ್ ರಸ್ತೆಯ ಹಾಗೆ ಕಾಣಿಸುತ್ತಿದೆಯಲ್ಲ?! :) ತುಂಬಾ ಚೆನಾಗಿವೆ ಸಣ್ಣ ಕಥೆಗಳು. ಎರಡು ಘಟನೆಗಳು ತೋರುತ್ತಿವೆ.. ಮನುಷ್ಯನ ಮನುಷ್ಯತ್ವಕ್ಕೆ ರಸ್ತೆಗಳೂ ಕನ್ನಡಿಯಾಗುತ್ತಿವೆಯೆಂದು.

ಮಾಂಬಾಡಿ said...

ದೋಸೆ ಎರೆಯುವ ವ್ಯಕ್ತಿ ಕೆಟ್ಟ ಹೆದ್ದಾರಿ ಕಣ್ಮರೆ ಆಗುವಾಗಲೇ ಮಾಯವಾಗುತ್ತಾನೆ. ಅವನೊಂದಿಗೆ ಮಾನವೀಯತೆ, ಅನುಕಂಪಗಳೂ. ಸುಪರ್ ಹೆದ್ದಾರಿ ಸೂಪರ್ ಮಾರ್ಕೆಟ್ ಆದಂತೆ. ಎಲ್ಲವೂ ಪಾಷ್.ಆದರೆ ಅಸ್ಟೇ ಅಸಹಜ. ಕೆಲವರು ಮಹಾನಗರದಲ್ಲಿ ‘ಕಳೆದು’ಹೋಗುವುದು ಹೀಗೆಯೆ.

ರಾಜೇಶ್ ನಾಯ್ಕ said...

ಸೂಪರ್ ಶಾರ್ಟ್ ಸ್ಟೋರೀಸ್! ಎರಡನೆಯದಂತೂ ಬಹಳ ಇಷ್ಟವಾಯಿತು. ಬಾಲ ಅಲ್ಲಾಡಿಸುತ್ತಾ ಆ ನಾಯಿ ಏನನ್ನು ಯೋಚಿಸುತ್ತಿರಬಹುದು ಎಂಬ ಯೋಚನೆಯಲ್ಲಿ ನಾನು ಮುಳುಗಿದೆ.

ಮಿಥುನ said...

ಶ್ಶೆ. ತುಂಬ ನೋವೆನಿಸಿತು.
ಕಥೆ ಬರೆದ ನಿಮ್ಮ ತಲೆಗೆ ಕೊಡಬೇಕು.

Harish kera said...

ಚೆನ್ನಾಗಿವೆ ಕತೆಗಳು. ಎರಡನೆಯದಂತೂ ಕಟು. ಇದನ್ನು ಮುಂದುವರಿಸಬಾರದೆ ? ಹಾಗೇ ಹೆದ್ದಾರಿ ಕತೆಗಳು ಅಂತ ಒಂದು ಸಂಕಲನ ತಂದರೆ ಹ್ಯಾಗೋ !
- ಹರೀಶ್ ಕೇರ

ರಾಧಾಕೃಷ್ಣ ಆನೆಗುಂಡಿ. said...

ರಾತ್ರಿ ಬೀಟ್ ಮುಗಿಸಿ ಬರುವ ಪತ್ರಕರ್ತನೋ ಇರಬಹುದು.
......

ರಸ್ತೆ ಮೇಲೆ ನರಳುತ್ತಿದ್ದ ವ್ಯಕ್ತಿ ದೈನ್ಯನಾಗಿ ನೋಡಿದ.

ನಮ್ಮ ದಿನಚರಿಯ ಸಾಲುಗಳಲ್ವ

ಚೆನ್ನಾಗಿ ಬರೆದಿದ್ದಿಯ ಬಿಡು....

ಜೋಮನ್ said...

ಮೊದಲ ಕಥೆ ಭಾವುಕ, ಆಪ್ತ...ನವಿರು ನಿರೂಪಣೆ.

KRISHNA said...

ರಸ್ತೆಗೂ ಭಾವನೆಗಳಿ‌ದ್ದಿದ್ದರೆ ತುಂಬಾ ಕಷ್ಟ ಆಗ್ತಾ ಇತ್ತು... ಪುಟ್ಟ ಪುಟ್ಟ ಸಾಲಿನ ಕತೆಗಳೂ ಆಪ್ತವಾಗುತ್ತವೆ.

VENU VINOD said...

ತೇಜಸ್ವಿನಿಯವರೆ, :) ಥ್ಯಾಂಕ್ಸ್...ಮನುಷ್ಯನ ಸ್ವಭಾವವನ್ನು ಎಲ್ಲಿಗೂ ಹೋಲಿಸಬಹುದೇನೋ!

ಮಾಂಬಾಡಿ, ಹೌದು ನಾವು ಕಳೆದುಹೋಗುತ್ತಿರುವುದಂತೂ ನಿಜ

ರಾಜೇಶ್, ವಂದನೆ.. ನಾನು ಈಗಲೂ ಅದನ್ನೇ ಯೋಚಿಸುತ್ತಿರುವೆ.

ಮಿಥುನ್, ವಂದನೆ.

ಕೇರ, ಹೌದು ನಿಮ್ಮ ಸಲಹೆಯಂತೆಯೇ ನನ್ನ ಯೋಚನೆ ಕೂಡಾ ಇದೆ

ಆನೆಗುಂಡಿ, ಹೌದು ನಮ್ಮದೆ ದಿನಚರಿ :)

ಜೋಮನ್ ಹಾಗೂ ಕೃಷ್ಣರಿಗೆ ವಂದನೆ..

Related Posts Plugin for WordPress, Blogger...