5.10.08

ಎರಡು ಸಿನಿಮಾಗಳು ಮತ್ತು ಮಂಗಳೂರಿನ ‘ಶಂಕಿತ’ ಉಗ್ರರು

ಕೆಲವರ್ಷಗಳ ಮೊದಲಷ್ಟೇ ಉತ್ತರ ಭಾರತದಲ್ಲೆಲ್ಲೋ ಆಗುತ್ತಿದ್ದ ಬಾಂಬ್ ಸ್ಫೋಟ, ಶೂಟೌಟ್ ಇವೆಲ್ಲವನ್ನು ನಾವು ಬೆಳಗ್ಗೆ ಬಿಸಿಬಿಸಿ ಕಾಫಿ ಚಪ್ಪರಿಸುತ್ತ ಓದುತ್ತಿದೆವು.
ಈಗ ನಮ್ಮ ಬೆಂಗಳೂರಿನ ಚರಂಡಿಯಲ್ಲೂ ಅಮೋನಿಯಂ ನೈಟ್ರೇಟ್(ಗೊಬ್ಬರವಲ್ಲ!) ಸ್ಫೋಟಕಗಳು ಸಿಗುತ್ತಿವೆ, ಧಾರಾವಾಡದಲ್ಲೂ ಬಾಂಬ್ ಸ್ಫೋಟಗೊಳ್ಳುತ್ತದೆ...ಪರಶುರಾಮ ಸೃಷ್ಟಿ ಎನ್ನಿಸಿಕೊಂಡ ಪಶ್ಚಿಮ ಕರಾವಳಿ ಮಂಗಳೂರಿನ ತೆಕ್ಕೆಯಲ್ಲೂ ‘ಶಂಕಿತ’ ಭಯೋತ್ಪಾದಕರು ಮುಂಬೈ ಪೊಲೀಸರ ಕೈಗೆ ಸಿಕ್ಕಿದ್ದಾರೆ....

**********


ಕೆಲ ದಿನಗಳ ಹಿಂದೆ ಎರಡು ಸಿನಿಮಾ ನೋಡಿದ್ದು ನೆನಪಾಯ್ತು.
ಒಂದು ‘ಅಮೀರ್‍’ ಇನ್ನೊಂದು ‘ಎ ವೆಡೆನ್ಸ್‌ ಡೇ’.
ಎರಡೂ ಭಯೋತ್ಪಾದನೆಗೆ ಸಂಬಂಧಿಸಿದವು, ಹಾಗೆ ನೋಡಿದರೆ ಈಗ ಬಾಲಿವುಡ್ಡಲ್ಲಿ ಭಯೋತ್ಪಾದನೆ ಕುರಿತ ವಸ್ತುವಿನ ಚಿತ್ರಗಳ ಭರಾಟೆ ಈಗ ಹಿಂದೆಂದಿಗಿಂತಲೂ ಹೆಚ್ಚು. ಇರಲಿ...ಅಂತಹ ಅನೇಕ ಸಿನಿಮಾ ನೋಡಿದ್ದೆ, ಆದರೆ ಮೇಲೆ ಹೇಳಿದ ಎರಡೂ ಸಿನಿಮಾಗಳೂ ತಮ್ಮ ವಿಭಿನ್ನ ನಿರೂಪಣೆಯಿಂದ ನನ್ನ ಗಮನ ಸೆಳೆದವು.

ಲಂಡನ್ನಿಂದ ಹಿಂದಿರುಗುವ ಅಚ್ಚ ಭಾರತೀಯ ಮುಸ್ಲಿಂ ಯುವ ವೈದ್ಯ ಡಾ.ಅಮಿರ್‍ ಸುತ್ತ ಗಿರಕಿ ಹೊಡೆಯುವ ‘ಅಮೀರ್‍’ ನೀವು ಒಂದು ಸಿಟ್ಟಿಂಗ್‌ನಲ್ಲೇ ಕುಳಿತು ನೋಡಿಬಿಡಬಹುದು. ಯಾಕೆಂದರೆ ಅಷ್ಟು ಪರಿಣಾಮಕಾರಿಯಾಗಿ ಅದು ವ್ಯಾಪಿಸಿಕೊಳ್ಳುತ್ತದೆ. ಈತ ಮುಂಬೈನಲ್ಲಿ ಬಂದಿಳಿದಂತೇ ಆತನನ್ನು ಅಪರಿಚಿತ ಫೋನ್ ಕರೆ ಹಿಂಬಾಲಿಸತೊಡಗುತ್ತದೆ.

ನಿಜವಾದ ನಾಯಕ(ಅಮೀರ್‍) ಆಗಬೇಕಾದರೆ ನಾನು ಹೇಳಿದಂತೆ ಮಾಡು ಎಂಬ ಫೋನ್ ಆದೇಶ ಅಮೀರ್‍ ಅಲಿಗೆ ಬರುತ್ತದೆ. ಚಿತ್ರವಿಡೀ ಫೋನ್ ಕರೆಗಳು ಮಾತ್ರ. ಇಲ್ಲಿ ಫೋನೇ ವಿಲನ್! ಈ ಫೋನ್ ಕರೆ ಮೂಲಕ ಹಳೆ ಮುಂಬೈ ಶಹರದ ಕತ್ತಲ ಗಲ್ಲಿಗಳಲ್ಲಿ ಕಟು ವಾಸ್ತವಗಳಿಗೆ ಕಣ್ಣಾಗುತ್ತಾ ಕ್ಯಾಮೆರಾ ಸಾಗುತ್ತದೆ. ಕುರಿ ಕಡಿಯುವವನ ಮುಂದೆ ಅಮೀರ್‍ ಸಾಗುವಾಗ ಹಿನ್ನೆಲೆಯಲ್ಲಿನ ಧ್ವನಿಯೊಂದು ಹೇಳುತ್ತದೆ ‘ಆಜ್ ತೋ ತಾಜಾ ಬಕ್ರಾ ಮಿಲಾ ಹೈ ಭಾಯ್’...

ತನ್ನ ಮನೆಯವರನ್ನು ಅಪಹರಿಸುವುದು ತಿಳಿದಾಗಲಂತೂ ಅಮೀರ್‍ ತುಮುಲ...ತನ್ನ ಮನೆಯವರಿಗಾಗಿ ಬಸ್ಸಲ್ಲಿ ಬಾಂಬ್ ಇರಿಸಬೇಕಾಗಿ ಬರುತ್ತದೆ. ಅದೂ ಆತನ ಗಮನಕ್ಕೆ ಬರದತೆ. ಕೊನೆಗೂ ಬಾಂಬ್ ಸ್ಫೋಟಿಸುತ್ತದೆ...ಆದರೆ ಡಾ.ಅಮೀರ ನಿಜಕ್ಕೂ ಅಮೀರ(ಅಮರ)ನಾಗುತ್ತಾನೆ. ಎಂದಿನಂತೆ ಮಾಧ್ಯಮಗಳಲ್ಲಿ ಒಂದೇ ಬದಿಯ ಸತ್ಯ ಪ್ರಕಟಗೊಳ್ಳುತ್ತದೆ.

ರಾಮಗೋಪಾಲ ವರ್ಮರ ‘ಕಾಂಟ್ರಾಕ್ಟ್‌’ಗೆ ಹೋಲಿಸಿದರೆ ಮೊದಲ ಬಾರಿಗೆ ನಿರ್ದೇಶಕರಾದ ರಾಜ್ ಕುಮಾರ್ ಗುಪ್ತ ಅವರ ಅಮೀರ್‍ ಮುಂದಿನ ಸಾಲಿನಲ್ಲಿ ನಿಲ್ಲುತ್ತದೆ. ಅಮೀರ್‍ ಆಗಿ ರಾಜೀವ್ ಖಂಡೇವಾಲ್ ಮನೋಜ್ಞ ಅಭಿನಯದಲ್ಲಿ ಗಮನ ಸೆಳೆದಿದ್ದಾರೆ. ತಾಂತ್ರಿಕವಾಗಿಯೂ ಚಿತ್ರ ಸುಪರ್ಬ್.


*********

‘ಎ ವೆಡೆನ್ಸ್‌ ಡೇ’ ಭಯೋತ್ಪಾದನೆಯ ಮತ್ತೊಂದು ಕೋನವನ್ನು ಚಿತ್ರಿಸಿದೆ. ಒಂದು ಬುಧವಾರ ಮುಂಬೈ ಕಮಿಷನರ್‍ಗೆ ಬರುವ ಫೋನ್‌ ಕರೆ, ಎಂದಿನಂತೆ ಇದೊಂದು ಭಯೋತ್ಪಾದಕ ಕೃತ್ಯ ಎಂದು ಭಾವಿಸುವಂತೆ ಮಾಡುತ್ತಾ ಹೋಗುತ್ತದೆ. ಕಮಿಷನರ್‍ ಆಗಿ ಅನುಪಮ್ ಖೇರ್‍ ಮತ್ತು ಸಂಶಯಿತ ಉಗ್ರಗಾಮಿಯಾಗಿ ನಾಸಿರುದ್ದೀನ್ ಶಾಗೆ ಪೂರ್ಣ ಅಂಕ ಸಲ್ಲುತ್ತದೆ. ಪೊಲೀಸ್ ಇನ್‌ಸ್ಪೆಕ್ಟರ್‍ ಆರಿಫ್ ಆಗಿ ಜಿಮ್ಮಿ ಶೆರ್ಗಿಲ್ ಕೂಡಾ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಸೀಟ್‌ನ ಅಂಚಿನಲ್ಲಿ ಕುಳಿತು ನಿಮ್ಮನ್ನು ಸೆಳೆಯುವ ಅಂಶಗಳು ಈ ಚಿತ್ರದಲ್ಲಿವೆ. ಕೊನೆಯಲ್ಲಿ ಭಯೋತ್ಪಾದಕ ನಿಜವಾಗಿಯೂ ಯಾರೆನ್ನುವುದು ತಿಳಿಯುತ್ತದೆ.

ಯಾವುದೇ ಸಿನಿಮಾ ಸ್ಪರ್ಶಿಸದ ಅಂಶವನ್ನು ವೆಡೆನ್ಸ್‌ ಡೇ ಎತ್ತಿ ಹಿಡಿಯುತ್ತದೆ.

‘ಬ್ಲಡಿ ಕಾಮನ್ ಮನ್ ಆಫ್ ಇಂಡಿಯಾ’ ಅಥವಾ ಭಾರತದ ಸಾಮಾನ್ಯ ನಾಗರಿಕನೊಬ್ಬ ಯಾವ ರೀತಿ ಭಯೋತ್ಪಾದನೆಯಿಂದ, ಅಫ್ಜಲ್ ಗುರುವಿನಂತಹ ಉಗ್ರರ ಬಗ್ಗೆ ಸರ್ಕಾರದ ನಡವಳಿಕೆಯಿಂದ ರೋಸಿ ಹೋಗಿದ್ದಾನೆ ಎನ್ನುವುದಕ್ಕೆ ವೆಡೆನ್ಸ್‌ ಡೇ ಕೈಗನ್ನಡಿ. ಮಾಮೂಲಿ ಆಲೋಚನೆಗೆ ಕಟ್ಟುಬೀಳದೆ ಇಂತಹ ಭಿನ್ನ ಚಿತ್ರ ನೀಡಿದ್ದಕ್ಕೆ ನಿರ್ದೇಶಕ ನೀರಜ್ ಪಾಂಡೆ ಅಭಿನಂದನಾರ್ಹರು.*******************ಮತ್ತೆ ನಿಜ ಜೀವನಕ್ಕೆ ಬರೋಣ. ಮೇಲೆ ಹೇಳಿದ ಎರಡೂ ಚಿತ್ರಗಳಲ್ಲೂ ಭಯೋತ್ಪಾದನೆ ಜನರ ಬದುಕಿಗೆ ಎಷ್ಟು ಬಾಧೆ ತರುತ್ತಿದೆ ಎಂಬುದರ ಚಿತ್ರಣ ವಸ್ತುಸ್ಥಿತಿಗೆ ಹತ್ತಿರವಿದೆ. ಮಂಗಳೂರಿನಲ್ಲಿ ನೆರೆ ಮನೆಯವರಿಗೆ ಅನುಮಾನವೇ ಬಾರದ ರೀತಿಯಲ್ಲಿ ‘ಶಂಕಿತ’ರು ನಡೆದುಕೊಂಡಿದ್ದಾರೆ. ಈಗೇನಿದ್ದರೂ ಅವರು ಆರೋಪಿಗಳು ನಿಜ. ಕೆಲ ಮಾಧ್ಯಮಗಳು ಇವರನ್ನು ಉಗ್ರರೆಂದೇ ಚಿತ್ರಿಸಿವೆ, ಇನ್ನು ಕೆಲವು ಇವರು ಅಮಾಯಕರು, ಇದೆಲ್ಲ ಪೊಲೀಸರ ಕಟ್ಟುಕತೆ ಎಂಬಂತೆ ಬಿಂಬಿಸಿವೆ. ಒಂದು ಪತ್ರಿಕೆಯಂತೂ ಚರ್ಚ್ ಮೇಲಿನ ದಾಳಿಯನ್ನು ಮುಚ್ಚಿ ಹಾಕಲು ಸರ್ಕಾರ ಈ ಕಾರ್ಯಾಚರಣೆ ನಡೆಸಿದೆ ಎಂದು ಬಾಲಿಶವಾಗಿ ಬರೆಯಿತು!
ಇದನ್ನು ಕಂಡು ಕೆಲ ಅಧಿಕಾರಿಗಳಂತೂ ನಮ್ಮಲ್ಲೂ ಒಂದು ಬ್ಲಾಸ್ಟ್ ಆಗಬೇಕು, ಇಲ್ಲವಾದರೆ ನಾವು ಏನನ್ನೂ ನಂಬುವುದಿಲ್ಲ ಎಂದು ನನ್ನಲ್ಲಿ ಹೇಳಿಕೊಂಡರು....ಇಲ್ಲೂ ಸ್ಫೋಟ ನಡೆದ ಬಳಿಕವೇ ಎಚ್ಚೆತ್ತುಕೊಳ್ಳುವಂತಹ ಎಮ್ಮೆ ಚರ್ಮ ನಮ್ಮದಾಗದಿರಲಿ ಎಂದಷ್ಟೇ ಹಾರೈಸಬಹುದೇನೋ


(ಕಳೆದ ಕೆಲ ದಿನಗಳಿಂದ ಮಂಗಳೂರಿನ ಘಟನೆಗಳಿಂದ ಬ್ಲಾಗ್‌ ಕಡೆ ಸುಳಿಯಲಾಗಲಿಲ್ಲ...ಬರೆಯುವುದು ಸಾಕಷ್ಟಿದೆ...ಇನ್ನೊಮ್ಮೆ ಸಿಗೋಣ)

5 comments:

SHREE (ಶ್ರೀ) said...

Thoughtful writeup... Wednesday ಇವತ್ ನೋಡ್ಬೇಕು ಅನ್ಕೊಂಡಿದೇನೆ.
Ammonium nitate ಸಿಡಿಯದ ಹಾಗೆ ಮಾಡ್ತಾರಂತೆ, ಅವಾಗ ಉಗ್ರರು ಏನು ಉಪಯೋಗಿಸಬಹುದು ಅಂತ ಯೋಚಿಸ್ತಿದೇನೆ ... ಹೆದರಿಕೆ ಆಗ್ತಿದೆ !

ಸುಶ್ರುತ ದೊಡ್ಡೇರಿ said...

A Wednesday ನೆನ್ನೆ ನೋಡಿದೆ. ಅದರ ಬಗ್ಗೆ (ಸುತ್ತ) ರಾಜ್‍ದೀಪ್ ಸರ್ದೇಸಾಯಿ ಬರೆದ ಒಂದು ಆರ್ಟಿಕಲ್:

http://www.ibnlive.com/blogs/rajdeepsardesai/1/52720/a-wednesday-and-beyond.html

ಮಾಂಬಾಡಿ said...

ಈಗೀಗ ಮಂಗಳೂರು ಸಹಿತ ದ.ಕ.ದಲ್ಲಿ ಯಾರು ಭಯೋತ್ಪಾದಕರು ಯಾರು ಅಮಾಯಕರು ಎಂದು ಗೊತ್ತಾಗುವುದಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಇಲ್ಲಿ ತೋಟೆ(ನಾಡಬಾಂಬು) ಎಸೆಯುವುದು, ಗಲಭೆ ಮೊದಲಾದವುಗಳಿಂದ ಇವರು ತಮ್ಮ ಇರುವನ್ನು ತೋರಿಸುತ್ತಲೇ ಇದ್ದಾರೆ. ಆದರೆ ಕೆಲವು ರಾಜಕಾರಣಿಗಳು, ಪೊಲೀಸರು ಸುಮ್ಮನೆ ಕೈಕಟ್ಟಿ ಕುಳಿತು ಇದಕ್ಕೆಲ್ಲಾ ಪ್ರಚೋದನೆ ನೀಡುವಂತೆ ಭಾಸವಾಗುತ್ತಿದೆ. ಬೇಸರ ಎಂದರೆ ಕೆಲವೊಂದು ಪತ್ರಿಕೆಗಳು ಇಂಥ ವಿಚಾರದಲ್ಲೂ ಸಂಕುಚಿತ ಮನೋಭಾವ ತೋರಿಸುತ್ತಿರುವುದು..

sunaath said...

ಭಯೋತ್ಪಾದಕರನ್ನು 'ಹಾದಿ ತಪ್ಪಿದ ಅಮಾಯಕರು'ಎಂದು ಬಣ್ಣಿಸುವ ರಾಜಕಾರಣಿಗಳೇ ನಿಜವಾದ ಭಯೋತ್ಪಾದಕರು.

ಯಜ್ಞೇಶ್ (yajnesh) said...

ವೇಣು,

ಉತ್ತಮ ಲೇಖನ.

"ಎ ವೆಡ್ನೆಸ್ ಡೇ" ನಾನೂ ನೋಡಿದೆ. ನನಗೆ ತುಂಬಾ ಇಷ್ಟ ಆಯಿತು. ಅದರ ಬಗ್ಗೆ ಮೊನ್ನೆ ಮೊನ್ನೆಯಷ್ಟೇ ನನ್ನ ಬ್ಲಾಗಿನಲ್ಲಿ ಬರೆದಿದ್ದೇನೆ. ಮುಂಬೈ ಮೆರೀ ಜಾನ್ ಸಹ ಚೆನ್ನಾಗಿದೆ ಅಂತ ಎಲ್ಲರೂ ಹೇಳ್ತಾಯಿದ್ದಾರೆ. ನೋಡಬೇಕು

Related Posts Plugin for WordPress, Blogger...