-೧-
ಮಂಗಳೂರಿನ ನ್ಯಾಯಾಲಯವದು...ಸಂಸ್ಕೃತಿಯ ‘ರಕ್ಷಕರು’ ಅನುಭವಿಸುವ ಹಕ್ಕು ‘ಉಳ್ಳವರಿಗೆ’ ತದುಕಿದ ಪ್ರಕರಣ*ದ ವಿಚಾರಣೆ ಮೊನ್ನೆ ನಡೆಯುತ್ತಿತ್ತು...ಅಲ್ಲಿ ಮಂಗಳೂರನ್ನು ತಾಲೀಬಾನ್ ಎಂದು ಹೆಸರಿಸಿದವರ ದಂಡೂ ಇತ್ತು...ಈ ದಂಡು(ಅನುಮತಿ ಪಡೆಯದೇ) ಕೋರ್ಟ್ ಸಭಾಂಗಣದಲ್ಲಿ ವಕೀಲರನ್ನೂ ತಳ್ಳಿಕೊಂಡು ಹೋಯಿತು..ಅಷ್ಟೇ ಅಲ್ಲ, ಕೋರ್ಟ್ ಕಲಾಪವನ್ನೇ ಮೊಬೈಲ್ನಲ್ಲಿ ದಾಖಲಿಸಲು ಶುರುವಿಟ್ಟರು ದಂಡಿನ ಸದಸ್ಯರು...ಇದನ್ನು ನ್ಯಾಯವಾದಿಗಳು ಪತ್ತೆ ಮಾಡಿ ನ್ಯಾಯಾಧೀಶರ ಗಮನಕ್ಕೆ ತಂದರು, ಕೊನೆಗೆ ಇವರನ್ನೆಲ್ಲ ಛೀಮಾರಿ ಹಾಕಿ ಹೊರಗೆ ಕಳುಹಿಸಲಾಯಿತು.
ಮಂಗಳೂರಿನಲ್ಲಿ ಯಾವ ರೀತಿ ರಾಷ್ಟ್ರೀಯ ದುರಂತ ನಡೆದಿದೆ ಎಂದು ವರದಿ ಮಾಡಲು ಬಂದಿದ್ದವರಿಗೆ, ಮೋರಲ್ ಪೊಲೀಸಿಂಗ್ ಬಗ್ಗೆ ಮೈಕ್ ಹಿಡಿದು ಸುದ್ದಿ ಬದಲು ಅಭಿಪ್ರಾಯಗಳನ್ನೇ ಹೇರುತ್ತಾ ಬಂದ ಛಾನೆಲ್ ಅಣ್ಣಂದಿರಿಗೆ ಕೋರ್ಟ್ನಲ್ಲಿ ಮೊಬೈಲ್ ಬಳಸಬಾರದು ಎಂಬ ಕನಿಷ್ಠ ಜ್ಞಾನವಿರಲಿಲ್ಲ....
*(ಅರ್ಥವಾಗಿರುತ್ತೆ...ಈಗಾಗಲೇ ಎಲ್ಲ ಬ್ಲಾಗ್ಗಳಲ್ಲೂ ಬಂದಿದೆ, ಅಂತಾರಾಷ್ಟ್ರೀಯ ಸುದ್ದಿ..ಅದೇ ಮಂಗಳೂರು ಪಬ್ ದಾಳಿ)
-೨-
ಅದಾಯ್ತು....
ಎಲ್ಲ ೨೮ ಮಂದಿ ಆರೋಪಿಗಳಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಕೊಟ್ಟಿತು...ಅದು ನ್ಯಾಯಾಲಯದ ತೀರ್ಪು. ತೀರ್ಪು ಕೊಟ್ಟದ್ದು ಇಷ್ಟವಾಗದಿದ್ದರೆ ಸಂಬಂಧಿಸಿದವರು ಮೇಲ್ಮನವಿ ಸಲ್ಲಿಸಬಹುದು..ಅಷ್ಟಕ್ಕೂ ಜಾಮೀನು ಕೊಟ್ಟಾಕ್ಷಣ ದೋಷಮುಕ್ತರಾಗುವುದಿಲ್ಲ...ಚಾನೆಲ್ಲೊಂದರಲ್ಲಿ ವರದಿಗಾರ್ತಿಯೊಬ್ಬಳು ೧೦ ಮಂದಿ ಹೈಪ್ರೊಫೈಲಿಗರನ್ನು ನಿಲ್ಲಿಸಿ ಅವರ ಬಾಯಿಂದ ಏನೋ ಹೇಳಿಸಲು ಯತ್ನಿಸುತ್ತಿದ್ದಳು.
ನಿಮಗೆ ರಸ್ತೆಯಲ್ಲಿ ಹೋದಾಗ ಯಾರಾದರೂ ಹೊಡೆದರೆ, ಅವರೆಲ್ಲರೂ ಜೇಲಿನಿಂದ ಹೊರಬಂದರೆ ನಿಮಗೆ ಏನನ್ನಿಸುತ್ತದೆ? ಮುಂತಾದ ಪ್ರಶ್ನೆಗಳನ್ನು ಹಾಕಿದಳು.
-೩-
ನಿನ್ನೆಯಷ್ಟೇ ನಿವೃತ್ತರಾದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಶ್ರೀಕುಮಾರ್ ಮಂಗಳೂರಿಗೆ ಬಂದಿದ್ದರು. ಎಸಿ ಹಾಲ್ನಲ್ಲಿ ನಡೆದ ಉದ್ಯಮಿಗಳ ಸಭೆಯೊಂದರಲ್ಲಿ ಮಹಿಳಾಮಣಿಯೊಬ್ಬರು ಡಿಜಿಪಿಗೆ ಹಾಕಿದ ಪ್ರಶ್ನೆ - ‘ನನಗೂ ಟೀನೇಜ್ ಮಕ್ಕಳಿದ್ದಾರೆ, ಅವರು ರಸ್ತೆಯಲ್ಲಿ ನಡೆಯುವಾಗ ಯಾರಾದರೂ ಹೊಡೆದರೆ, ನಿಮ್ಮ ಪೊಲೀಸರು ರಕ್ಷಣೆ ಕೊಡಬೇಡ್ವೇ’
ಅದಕ್ಕೆ ಡಿಜಿಪಿಯವರ ಉತ್ತರ - ‘ಪೊಲೀಸರು ಖಂಡಿತಾ ಕ್ರಮ ಕೈಗೊಳ್ಳಲೇಬೇಕು, ಆದರೆ ಮಕ್ಕಳ ಹೆತ್ತವರಿಗೂ ಸ್ವಲ್ಪ ಜವಾಬ್ದಾರಿ ಇರಬೇಕು’
-೪-
ಮೊನ್ನೆ ಪಬ್ ದಾಳಿ ನಡೆದ ಬಳಿಕ ವಿಚಾರಣೆಗೆ ಕೇಂದ್ರ ಮಹಿಳಾ ಆಯೋಗ ಮಂಗಳೂರಿಗೆ ಬಂತು. ಅಮ್ನೆಸಿಯಾ ಪಬ್ಗೆ ಭೇಟಿ ನೀಡಿತು. ಆಯೋಗದ ಸದಸ್ಯೆ ರಾಜ್ಯದವರೇ..ನಿರ್ಮಲಾ ವೆಂಕಟೇಶ್.
ಅಮ್ನೆಸಿಯಾ(ಇದು ಪಬ್ ಅಲ್ಲ, ಬಾರ್, ಇಲ್ಲಿ ಬಿಯರ್ ಮಾತ್ರವಲ್ಲ ಇತರೇ ಮದ್ಯಕ್ಕೂ ಅವಕಾಶ ಇದೆ, ಪಕ್ಕದಲ್ಲೇ ಇರೋ ವುಡ್ಸೈಡ್ ಹೊಟೇಲಲ್ಲಿ ರೂಮ್ ಮಾಡೋವ್ರಿಗೆ ಲಿಕ್ಕರ್ ನೀಡೋ ಬಾರ್ ಎನ್ನೋದು ಅಬಕಾರಿ ಇಲಾಖೆ ಅಧಿಕಾರಿ ಸಮಜಾಯಿಷಿ ಇದೆ)ಗೆ ಭೇಟಿ ನೀಡಿದ ಮಹಿಳಾ ಆಯೋಗದ ಸದಸ್ಯೆ ಹಾಸ್ಯಗೋಷ್ಠಿ ಮಾದರಿಯಲ್ಲಿ ಪಬ್ ಮ್ಯಾನೇಜರ್ಗೆ ಕ್ಲಾಸ್ ತೆಗೆದುಕೊಂಡರು...ಹೀಗೆ...
‘ಏನಪ್ಪಾ ಹುಡುಗೀರು ನಿನ್ನ ಪಬ್ಗೆ ಬರೋವಾಗ ಸೆಕ್ಯೂರಿಟಿ ಕೊಡಬೇಡ್ವ?
‘ಅಲ್ಲ... ಗಂಡಸಾಗಿ ಹೊರಗಿನವ್ರನ್ನ ತಡೆಯೋಕೆ ಆಗಿಲ್ವ? ಇಷ್ಟು ದಪ್ಪಕ್ಕಿದ್ದೀಯಾ ಅವ್ರನ್ನ ಸುಮ್ನೇ ಹೊಡೆಯೋಕೆ ಬಿಟ್ಯಾ’
‘ಈಗ ನಾನೇ ಬರ್ತೀನಿ, ಪ್ರಾಂಸ್ ತಿನ್ನೋಕೆ ಅಂತ, ಎಲ್ರೂ ಕುಡಿಯೋಕಂತಾನೇ ಬರ್ತಾರಾ?’
ಹೀಗೆ ಕ್ಲಾಸ್ ಆದ ಬಳಿಕ ಮೇಡಮ್ಮು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ರು - ಈ ಪಬ್ಬಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ, ಲೈಸೆನ್ಸ್ ರದ್ದು ಮಾಡಿ..ಉಳಿದ ಪಬ್ಗಳಲ್ಲೂ ರಕ್ಷಣೆ ಉಂಟೇ ನೋಡಿ...
ಲೇಟೆಸ್ಟ್ ಸುದ್ದಿ : ಆಯೋಗದ ಸದಸ್ಯೆ ಶ್ರೀರಾಮಸೇನೆಯಿಂದ ಪೆಟ್ಟು ತಿಂದ ಅಕ್ಕಂದಿರನ್ನು ಭೇಟಿಯೇ ಮಾಡಿಲ್ಲಾಂತ ಅಧ್ಯಕ್ಷೆ ಗಿರಿಜಾ ವ್ಯಾಸರಿಗೆ ಕೋಪ ಬಂದಿದೆ!
-೫-
ಮಂಗಳೂರು ತಾಲಿಬಾನ್ ಆಗಿದೆ ಅಂತ ರಾಷ್ಟ್ರೀಯ ಛಾನೆಲ್ಗಳು ಬೊಬ್ಬೆ ಹಾಕಿದ್ದೇ ಹಾಕಿದ್ದು. ಶ್ರೀರಾಮ ಸೇನೆಯ ಮಂಗಳೂರಿನ ಲೀಡರ್ಗಳೂ ತಾವೀಗ ನ್ಯಾಷನಲ್ ಫಿಗರ್ಗಳಾಗಿದ್ದೇವೆ ಎಂಬ ಹೆಮ್ಮೆಯಲ್ಲಿದ್ದಾರೆ.
ಎನೀ ಪಬ್ಲಿಸಿಟಿ ಈಸ್ ಪಬ್ಲಿಸಿಟಿ!
ಮಂಗಳೂರಿನಲ್ಲಿ ಕೋಮು ಗಲಭೆ, ಕರ್ಫ್ಯೂ ಆದಾಗ ಮಾತ್ರ ರಾಷ್ಟ್ರೀಯ ಛಾನೆಲ್ಗಳು ಬರುತ್ತವೆ ಎಂಬ ಆರೋಪ ಸುಳ್ಳಾಗಿದೆ.
-೬-
(ಫ್ಲಾಷ್ಬ್ಯಾಕ್)
ಕಳೆದ ವರ್ಷ ಮಂಗಳೂರಲ್ಲಿ ಟೈಂಸ್ ಪತ್ರಿಕಾಸಮೂಹದ ಮಿಸ್ ಫೆಮಿನಾ ಇಂಡಿಯಾ ಸ್ಪರ್ಧೆಯ ಆಯ್ಕೆ ಏರ್ಪಡಿಸಲಾಗಿತ್ತು...ಕೊನೇ ಹಂತದಲ್ಲಿ ಶ್ರೀರಾಮಸೇನೆ ಸಂಸ್ಕೃತಿ ಹೆಸರಲ್ಲಿ ಇದಕ್ಕೂ ಅಡ್ಡಿಪಡಿಸಿತ್ತು...ಆಗ ಟೈಂಸ್ ಗ್ರೂಪ್ಗೆ ಸೇನೆಯ ಪರಿಚಯವಾಗಿ ಪ್ರೀತಿಗೆ ತಿರುಗಿತು. ಅದುವೇ times now ಚಾನೆಲಲ್ಲಿ ಸೇನೆ ದಿನವೂ ಪ್ರಚಾರ ಪಡೆಯಲು ಕಾರಣ ಇರಬಹುದು ಎಂಬುದೊಂದು ವಿಶ್ಲೇಷಣೆಯೊಂದಿಗೆ ಈ ಅಂಕವು ಪರಿಸಮಾಪ್ತಿಗೊಂಡಿದೆ.
7 comments:
ಮಾರಾಯ್ರೆ, ನಿಮಗ ಗೊತ್ತುಂಟ? ಈ ದೊಡ್ಡ ಚಾನೆಲ್ ಬಿತ್ತರಿಸಿದ್ದು ಸಂಡೆ ಪಬ್ ದಾಳಿ ಆಯಿತು ಎಂದು. ಆದರೆ ಅದು ಶನಿವಾರ ಸಂಜೆ ೫ರ ಹೊತ್ತಿಗೆ ಟಿ.ವಿ.ಯಲ್ಲಿ ಬಂದಿತ್ತಲ್ಲ? ಹಾಗಾದರೆ ಇವುಗಳು ಒದರಿದ್ದು ಹಸೀ ಸುಳ್ಳಿನ ಕಂತೆ ಅಂದಂತಾಯ್ತಲ್ಲಾ?
ವೇಣು ಆನಂದ್,
ಈ ಪಬ್ ದಾಳಿ ಬಗ್ಗೆ ಓದಿ ಓದಿ ಸಾಕಾಗಿದೆ...ಈ ಮಾದ್ಯಮದವರಿಗೆ ಯಾಕೆ ಈ ರೀತಿ ಬುದ್ದಿ ಬಂತೋ ಗೊತ್ತಿಲ್ಲ......ಅವರಿಗೆ ಒಟ್ಟಿನಲ್ಲಿ ತಮ್ಮ ಛಾನಲ್ಲಿನಲ್ಲಿ ಮೊದಲು ಪ್ರಸಾರ ಮಾಡಿ ಹೆಸರು ಗಿಟ್ಟಿಸುವ ವಿಚಿತ್ರ ಗೀಳು ಅಂಟಿಬಿಟ್ಟಿದೆ.....
ಆಹಾಂ! ಅಂದ ಹಾಗೆ ನೀವಿನ್ನು ನನ್ನ ಹೊಸ ಲೇಖನವನ್ನು ನೋಡಿಲ್ಲವೆನಿಸುತ್ತೆ....
ಮನಃಪೂರ್ವಕವಾಗಿ ನಗಬೇಕೆ! ಹಾಗಾದರೆ ನೋಡಬನ್ನಿ ನಡೆದಾಡುವ ಭೂಪಟ!
http://chaayakannadi.blogspot.com/
Very comprehensive report.
ಹ್ಹಹ್ಹಹ್ಹ.. ವೇಣು ಅವರೆ ತುಂಬಾ ವಿನೋದವಾಗಿ, ಆದರೆ ಸ್ಪಷ್ಟವಾಗಿ ಬರೆದಿರುವಿರಿ. ನಿಷ್ಪಕ್ಷವಾಗಿದೆ ಲೇಖನ. ತುಂಬಾ ಇಷ್ಟವಾಯಿತು ನಿಮ್ಮ ಯೋಚನಾ ಲಹರಿ..:)
"ಕಡ್ಡಿ ಚಾನಲ್"(ಅರ್ಥ ಆಗಿರಬೇಕು ಯಾವ ಚಾನಲ್ ಇದೆಂದು :) ) ಕೆಲ್ಸವೇ ಇದು. ಸಣ್ಣದನ್ನು ದೊಡ್ಡದು ಮಾಡಿ... ಇಲ್ಲದ ಮಸಾಲೆಗಳನ್ನೆಲ್ಲಾ ತುಂಬಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಜನ ಅವರು. ಏನೂ ಇಲ್ಲದಿದ್ದರೂ ಎಲ್ಲವುದಕ್ಕೂ "ಹೀಗೂ ಉಂಟೆ? "ಎಂದು ದೊಡ್ಡ ಕಣ್ಣು ಬಿಟ್ಟು, ಬಾಯಗಲಿಸಿ ಬೊಬ್ಬಿರುವವರಿಂದ ಇಂಥದ್ದನ್ನೇ ನಿರೀಕ್ಷಿಸಬಹುದು ಅಲ್ಲವೇ? :)
ಹಹಹ ಸೂಪರ್ರು..ಹಾಸ್ಯಮಯವಾಗಿ ಅರ್ಥಪೂರ್ಣ ಬರಹ ನೀಡಿದ್ದೀರಿ ಸರ್.
-ಚಿತ್ರಾ
ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿತ್ತು ನಿಮ್ಮ ಲೇಖನ..ಈಗಲಾದರು ಗೊತ್ತಾಯಿತಲ್ಲ ರಾಷ್ಟೀಯ ಚಾನೆಲ್ಲುಗಳ ಹಣೆಬರ..!
ಮಹಿಳಾ ಆಯೋಗದ ಸದಸ್ಯೆಯ ಹಾಸ್ಯಗೋಷ್ಠಿ! ಹ್ಹೆ ಹ್ಹೆ ಎಂಜಾಯ್ ಮಾಡಿದೆ.
Post a Comment