7.4.09

ಮಾರ್ಚ್ ಮಳೆ


ಸೂರ್ಯ ನಿಗಿನಿಗಿ ಕೆಂಡವಾಗಿ ಪ್ರಜ್ವಲಿಸುತ್ತಿದ್ದಾನೆ. ಮುದುಕರಷ್ಟೇ ಏಕೆ ಜವ್ವನಿಗರೂ ಸೆಖೆಯ ಪೆಟ್ಟು ತಾಳಲಾಗದೆ ಸುಸ್ತು ಹೊಡೆದಂತಿದ್ದಾರೆ. ಈಗೀಗ ಕೆಲ ದಿನಗಳಿಂದ ಬೆಳಗ್ಗೆ ಏಳುವಾಗಲೇ ಮೋಡ ಕ್ರಮಪ್ರಕಾರ ಕಾಣಿಸುತ್ತದೆ. ಪ್ರಾಣಿ, ಪಕ್ಷಿ, ಮನುಷ್ಯರೆಲ್ಲರೂ ಒಂದೆರಡು ಹನಿಯಾದರೂ ಸುರಿದೀತೇ ಮೇಲಿಂದ ಎಂದು ಮೇಲೆ ನೋಡುತ್ತಾರೆ.
ಹುಲು ಮಾನವರೆಲ್ಲ ಕಳೆದ ಮಳೆಗಾಲದ ವೈಭವ ನೆನಪಿಸಿಕೊಳ್ಳುತ್ತಾರೆ. ಹಕ್ಕಿಗಳೂ ಕಳೆದ ತಿಂಗಳು ಯಾವುದೋ ತೋಡಿನ ಕೊಳಕಿನ ನೀರಲ್ಲಿ ಮಿಂದದ್ದು ಜ್ಞಾಪಿಸಿಕೊಳ್ಳುತ್ತವೆ.
ಹೀಗೆ ಎಲ್ಲರೂ ಮಳೆ ನಿರೀಕ್ಷೆಯಲ್ಲಿ ದಿನಾ ಸೆಖೆಯಲ್ಲಿ ಬೇಯುತ್ತಾರೆ. ಒಂದು ದಿನ ಮೋಡ ಕಪ್ಪಾಗಿ ಆಗಸದಲ್ಲಿ ಹೆಪ್ಪುಗಟ್ಟತೊಡಗಿದೆ. ಇದರಪ್ಪನ್‌....ಮಳೆ ಸುಯ್ಯೋದಿಲ್ಲ..ಬೇಯಿಸುತ್ತೆ ಅಷ್ಟೇ..ಎಂದು ಮುದುಕರಾದಿಯಾಗಿ ಊರಿನ ಎಲ್ಲರೂ ಶಪಿಸುತ್ತಾರೆ. ಆದರೆ ಬಾಳೆಲೆಯ ಧೂಳಿನ ಮೇಲೆ ಟಪ್ ಟಪ್ ಎಂದು ನಾಲ್ಕಾರು ಹನಿ ಬಿದ್ದಂತೆ ಕಾಣುತ್ತದೆ. ಕಾಗೆಯೊಂದರ ರೆಕ್ಕೆಯ ಮೇಲೆ ಒಂದು ಹನಿ ಬಿದ್ದು ಕಾಗೆ ಖುಷಿಯಲ್ಲಿ ರೆಕ್ಕೆ ಬಡಿದಿದೆ..ಅರಳುವ ಗುಲಾಬಿ ಮೊಗ್ಗೊಂದು ತನ್ನ ಮೇಲೆ ಬಿದ್ದ ಹನಿಯನ್ನು ಹರಿದು ಹೋಗಲು ಬಿಡದೆ ತನ್ನಲ್ಲೇ ಧರಿಸಿಕೊಂಡು ಖುಷಿಪಡುತ್ತಿದೆ. ಇನ್ನಷ್ಟು ಹನಿಗಳಿಗಾಗಿ ತೋಡುಗಳು ಕಾಯುತ್ತಿವೆ. ನಿರೀಕ್ಷೆ ಮೂಡಿಸುವ ಮಳೆ ಮೋಡ ಎಲ್ಲರಿಗೂ ವಿದಾಯ ಹೇಳಿ ಯಾವುದೋ ದಿಕ್ಕಿಗೆ ಪ್ರಯಾಣ ಬೆಳೆಸುತ್ತದೆ, ತನ್ನ ಬರುವಿಕೆಗೆ ಇನ್ನೂ ಎರಡು ಕಾಯಿರಿ ಎಂದಂತೆ ಹಕ್ಕಿಗಳಿಗೆ ಭಾಸವಾಗಿದೆ!


**********************

ಮಳೆಗಾಲದಲ್ಲಿ ತುಂಬಿ ಹರಿವ ಹೊಳೆಯದು. ಈಗ ನೀರೆಲ್ಲಾ ಬತ್ತಿ ಎತ್ತಲೋ ಹೋಗಿದೆ. ಕೆಲ ಹೊಂಡಗಳಲ್ಲಿ ಮಾತ್ರ ಪಾಚಿಗಟ್ಟಿ ಯಾವ ಕೆಲಸಕ್ಕೂ ಬಾರದ ಹಸಿರು ನೀರು ತುಂಬಿಕೊಂಡಿದೆ. ಅದನ್ನು ಯಾರೂ ಬಳಸುವುದಿಲ್ಲ ಎಂಬ ಬೇಸರದಲ್ಲಿ ನದಿಯೂ ಕೆಲವೊಮ್ಮೆ ಅಳುವುದಿದೆ. ಕಳೆದ ಮಳೆಗಾಲದಲ್ಲಿ ತನುತುಂಬಿ ಹರಿದಿದ್ದು ನೆನಯುತ್ತಾಳೆ ನದಿ. ನದಿಯ ಅವಸ್ಥೆ ನೋಡಿ ಸೇತುವೆ ಮೇಲೆ ಹೋಗುವ ಜನ, ದನ, ನಾಯಿ ಎಲ್ಲರಿಗೂ ಸಂಕಟ. ಪಶ್ಟಿಮದ ಮೋಡದ ಜತೆ ಹೊರಟ ತಣ್ಣನೆ ಗಾಳಿಯೀಗ ನದಿಯ ಒಡಲಲ್ಲಿ ತಂಪುಮೂಡಿಸಿದೆ. ಇನ್ನೆರಡು ತಿಂಗಳ ನಿರೀಕ್ಷೆಗಳು ಮತ್ತೆ ತಾಜಾ ಆಗಿವೆ.

**********************

ಮೊದಲ ಮಳೆಗೆ
ಕಾಯುವುದು ಎಂದರೆ
ಮನಗೆದ್ದಾಕೆಗೆ ಮೊದಲ
ಪತ್ರ ಬರೆದು
ಉತ್ತರಕ್ಕಾಗಿ ಕಾಯುವುದು,
ಅಥವಾ
ಮಗುವಿನ ಮೊದಲ
ನುಡಿ ಕೇಳಲು
ತಾಯಿ ಹಂಬಲಿಸುವುದು
ಅಥವಾ
ಆಗ ತಾನೇ ಮೊಳಕೆ
-ಯೊಡೆದ ಬೀಜ
ಪಕ್ಕದ ಮರ ನೋಡಿ
ಅದರಂತೆ ತಾನೂ
ಆಗಬೇಕೆನ್ನುವುದು!

5 comments:

ಸಾಗರದಾಚೆಯ ಇಂಚರ said...

ಆತ್ಮೀಯ ವೇಣು,
ಬರಹ ತುಂಬಾ ಇಷ್ಟವಾಯಿತು, ಅದರಲ್ಲೂ ''ಮೊದಲ ಮಳೆಗೆ
ಕಾಯುವುದು ಎಂದರೆ
ಮನಗೆದ್ದಾಕೆಗೆ ಮೊದಲ
ಪತ್ರ ಬರೆದು
ಉತ್ತರಕ್ಕಾಗಿ ಕಾಯುವುದು'' ಮನ ತಟ್ಟಿತು.
ಅಭಿನಂದನೆಗಳು.

Sushrutha Dodderi said...

ತುಂಬ ಚಂದ ಬರಹ..

shivu.k said...

ವೇಣು ವಿನೋದ್,

ಬಿಸಿಲನ್ನು ಬೈಯ್ಯುತ್ತಾ...ಹಾಗೇ ನಿದಾನವಾಗಿ ಮಳೆಯ ಚಿತ್ರಗಳನ್ನು ಚಿತ್ತಾರವಾಗಿ ಬಿಡಿಸಿಕೊಡುತ್ತೀರಿ....ಜೊತೆಗೆ ನದಿ, ಹಳ್ಳ, ಸೇತುವೆ, ಇತ್ಯಾದಿಗಳ ಭಾವನೆಗಳು, ಕೊನೆಯಲ್ಲಿರುವ ಕವನವಂತೂ ಲೇಖನಕ್ಕೆ ಪೂರಕವಾಗಿ ತುಂಬ ಸೊಗಸಾಗಿದೆ...ಇದೆಲ್ಲಾ ಓದಿದ ಮೇಲೆ ನನಗೂ ಮಳೆಯ ನಿರೀಕ್ಷೆ ಹೆಚ್ಚಾಗಿದೆ....
ಧನ್ಯವಾದಗಳು...

ಮಿಥುನ ಕೊಡೆತ್ತೂರು said...

ಆಗ ತಾನೇ ಮೊಳಕೆಯೊಡೆದ ಬೀಜ ಪಕ್ಕದ ಮರ ನೋಡುವ ಸೊಬಗು ವಾಹ್ ಎಂಥಾ ಕಲ್ಪನೆ!

Unknown said...

simply super !!! no words to explain !!!!

Related Posts Plugin for WordPress, Blogger...