ಇದುವರೆಗೆ ಸುಮಾರು ೩೦ ಬಾರಿ ಬೆಂಗಳೂರಿಗೆ ಹೋಗಿ ಬಂದಿದ್ದೇನೆ. ಅದರಲ್ಲಿ ಮೊನ್ನೆಯ ನನ್ನ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣ ಮಾತ್ರ ದಾಖಲೆಯ ಪುಟದಲ್ಲಿ ಸೇರಿ ಹೋಯಿತು...
ಕ್ಯಾಮೆರಾ ರಿಪೇರಿ, ಒಂದಷ್ಟು ಪುಸ್ತಕ ಖರೀದಿ ಕೆಲಸ ಇದ್ದ ಕಾರಣ ಶನಿವಾರದ ವಾರದ ರಜೆಯನ್ನು ಉಪಯೋಗ ಮಾಡಿಕೊಳ್ಳೋಣ ಎಂದು ಶುಕ್ರವಾರ ರಾತ್ರಿ ಮಂಗಳೂರಿನಿಂದ ಹೊರಟೆ. ಕೆಟ್ಟ ರಸ್ತೆಯಲ್ಲಿ ಆರ್ಡಿನರಿ ಬಸ್ಗಳಲ್ಲಿ ಹೋದರೆ ಖಂಡಿತಾ ನಿದ್ದೆ ಬರುವುದು ಕಷ್ಟ ಎಂದು ಗೊತ್ತು. ಅದಕ್ಕೇ ೫೦೦ ರು. ಕೊಟ್ಟು ಕೆಎಸ್ಸಾರ್ಟಿಸಿ ಐರಾವತದಲ್ಲೇ ಸೀಟ್ ಬುಕ್ ಮಾಡಿಸಿದ್ದೆ. ೯.೨೩ರ ನನ್ನ ಬಸ್ ಎಸಿ ಸರಿ ಇಲ್ಲ ಎಂದು ಅರ್ಧ ಗಂಟೆ ವಿಳಂಬವಾಗಿ ಹೊರಟಿತು. ಶಿರಾಡಿ ಬ್ಲಾಕ್ ಆದ ಕಾರಣ ಮಡಿಕೇರಿ-ಮೈಸೂರು ರೋಡಲ್ಲಿ ಬಸ್ ಸಾಗಿತ್ತು. ಆದರೆ ಕೆಟ್ಟ ರಸ್ತೆ ಮತ್ತು ವೋಲ್ವೋ ಕೂಡಾ ಹಳೆಯದಾಗಿದ್ದರಿಂದಲೋ ಏನೋ ಚೆನ್ನಾಗಿ ನಿದ್ದೆ ತೆಗೆಯುವ ನನ್ನ ಉದ್ದೇಶ ಈಡೇರಲಿಲ್ಲ. ಘಾಟ್ ರಸ್ತೆಯಲ್ಲಿ ಕ್ರಶರ್ನಲ್ಲಿ ಹಾಕಿ ಕುಲುಕಿಸಿದ ಅನುಭವ.
ಏನೇ ಇರಲಿ ಬೆಂಗಳೂರು ತಲಪಿದ್ದಾಯ್ತು. ಗೆಳೆಯ ಸದಾಶಿವನೊಂದಿಗೆ ಮಧ್ಯಾಹ್ನ ವರೆಗೂ ಕ್ಯಾಮೆರಾ ಸರ್ವಿಸ್, ಮತ್ತಿತರ ಕೆಲಸ. ಬಂಧುವೊಬ್ಬರ ಮನೆಗೆ ಭೇಟಿ, ಪುಸ್ತಕಕ್ಕಾಗಿ ಸಪ್ನ ಬುಕ್ ಹೌಸ್ ಭೇಟಿ...ಹೀಗೆ ನನ್ನ ಪಟ್ಟಿಯಲ್ಲಿದ್ದ ಕೆಲಸಗಳೆಲ್ಲ ಮುಗಿದವು. ಸಂಜೆ ೭-೩೦ರ ವೇಳೆಗೆ ಎಲ್ಲ ಕೆಲಸವೂ ಆಗಿತ್ತು,
ಮೆಜೆಸ್ಟಿಕ್ನ ಕಾಮತ್ದಲ್ಲಿ ಲೈಟಾಗಿ ರವಾ ದೋಸೆ ಸವಿದು, ಇನ್ನು ರಾಜಹಂಸದಲ್ಲೇ ಪ್ರಯಾಣಿಸೋಣ ಎಂದು ಲೆಕ್ಕ ಹಾಕಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದತ್ತ ಪಾದ ಬೆಳೆಸಿದೆ. ಶನಿವಾರವಾದ್ದರಿಂದ ಎಂದಿಗಿಂತ ಹೆಚ್ಚು ಜನರಿದ್ದರು.
‘ಸಾರ್ ನೀವು ಕನ್ನಡ, ಹಿಂದಿ ಅಥವಾ ಮಲಯಾಳಂ’ ಎನ್ನುತ್ತಾ ಸುಮಾರು ೧೭-೧೮ರ ಹುಡುಗನೊಬ್ಬ ದೂರದ ಬಂಧುವಿನಂತೆ ಓಡೋಡಿ ಬಂದ. ಖಾಸಗಿ ಬಸ್ ಏಜೆಂಟ್ ಅನ್ನೋದು ಮೇಲ್ನೋಟಕ್ಕೇ ಗೊತ್ತಾಯ್ತು.
ಕನ್ನಡ...ಯಾಕೆ?
ಎಲ್ಲಿಗೆ ಹೋಗ್ಬೇಕ್ ಸಾ....?
ಮಂಗಳೂರಿಗೆ...ಕೆಎಸ್ಸಾರ್ಟಿಸಿಯಲ್ಲೇ ಹೋಗ್ತೇನೆ...
ನಮ್ಮದು ದುರ್ಗಾಂಬಾ ಬಸ್ಸಿದೆ. ಬರೀ ೩೨೦ ರು ಚಾರ್ಜಷ್ಟೇ...೯ ಗಂಟೆಗೆ ಬಿಡುತ್ತೇವೆ, ೫.೩೦, ೬ಕ್ಕೆಲ್ಲಾ ಮಂಗಳೂರು ತಲಪುತ್ತೆ.
ಯಾವ ಬಸ್ಸೆಂದು ನಾನೂ ನಿರ್ಧರಿಸಿರಲಿಲ್ಲ, ಹಾಗಾಗಿ ಖಾಸಗಿ ಬಸ್ ಸೇವೆ ಹೇಗಿದೆ ಎಂದು ನೋಡೋಣ ಎಂಬ ಕುತೂಹಲವೂ ಇತ್ತು. ದುರ್ಗಾಂಬ ಇದ್ದುದರಲ್ಲೇ ಒಳ್ಳೆ ಬಸ್ ಎಂಬ ಹೆಸರೂ ಇದ್ದ ಕಾರಣ ಅವನೊಂದಿಗೆ ಏಜೆನ್ಸಿಗೆ ಹೆಜ್ಜೆ ಹಾಕಿದೆ.
ನನ್ನನ್ನು ಬರಹೇಳಿದ ಆತ ಸರಕ್ಕನೆ ರಸ್ತೆ ದಾಟಿ ಮೀಡಿಯನ್ನಲ್ಲಿದ್ದ ಬೇಲಿಯನ್ನೂ ಹೈಜಂಪ್ ಮಾಡಿದ. ನಾನೂ ಹಿಂಬಾಲಿಸಿದೆ.
ಕೆಎಫ್ಸಿ ರೆಸ್ಟುರಾ ಪಕ್ಕದ ಅನ್ನಪೂರ್ಣ ಟ್ರಾವೆಲ್ ಏಜೆನ್ಸಿ ಬೋರ್ಡ್ ನೋಡುತ್ತಾ ಒಳ ನಡೆದೆ. ಅಲ್ಲಿ ಕುಳಿತಿದ್ದ ಮಹಾನುಭಾವ ಸೈಡ್ ಸೀಟಲ್ವಾ ಎಂದು, ವಿಚಾರಿಸಿ ೧೯ ಸೀಟ್ ನಂಬರ್ ಬರೆದು ರಶೀದಿ ಕೊಟ್ಟ. ಹಣಕೊಟ್ಟೆ.
ಊಟ-ಗೀಟ ಮಾಡಿ ಬನ್ನಿ ಸಾ....೯.೩೦ಕ್ಕೆ ಇಲ್ಲೇ ಮುಂದೆ ಬಸ್ ಪಿಕಪ್ಗೆ ಬರುತ್ತೆ ಎಂದ.
ಮತ್ತೆ ೯ಕ್ಕೆ ಬಸ್ ಬಿಡುತ್ತೆ ಅಂದಿದ್ದಲಾ? ಕೇಳಿದೆ.
ಬಸ್ ಇಲ್ಲೇ ಹಿಂದೆ ಇದೆ. ಅದು ೯ಕ್ಕೇ ಹೊರಟು, ಕಲಾಸಿಪಾಳ್ಯ ಹೋಗಿ ಇಲ್ಲಿಗೆ ೯.೩೦ಕ್ಕೆ ಬರುತ್ತೆ ಎಂದು ಹೇಳಿದ ಆಸಾಮಿ.
ಇರಲಿ ಅರ್ಧಗಂಟೆಯಲ್ವೇ ಎಂದು ವಾಚ್ ನೋಡಿದರೆ ಇನ್ನೂ ೮.೧೫. ಸಾಕಷ್ಟು ಸಮಯವಿತ್ತು. ಸುಮ್ಮನೇ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೊಂದು ಸುತ್ತು ಹಾಕಿ ಒಂದು ಕೋಲ್ಡ್ ಬಾದಾಮಿ ಹಾಲು ಕುಡಿದು ಅನ್ನಪೂರ್ಣ ಏಜೆನ್ಸಿಯಲ್ಲಿ ಕುಳಿತು ಇದ್ದ ಪುಸ್ತಕ ಓದುತ್ತಲಿದ್ದೆ. ಅಲ್ಲೊಬ್ಬ ಹಿಂದಿ ಮಾತಾಡುವ ಸ್ವಾಮೀಜಿ ಕೂಡಾ ಕುಳಿತಿದ್ದರು.
೯.೩೦ಕ್ಕೆ ಏಜೆನ್ಸಿಯ ಆಸಾಮಿ ನಮ್ಮನ್ನು ಹೊರಗೆ ಕರೆದು. ಅಲ್ಲಿಂದ ಸುಮಾರು ೧೦೦ ಮೀಟರ್ ದೂರ ಸುರಂಗ ಮಾರ್ಗದ ಹತ್ತಿರ ಸಾಲು ಸಾಲಾಗಿ ಖಾಸಗಿ ಬಸ್ ನಿಂತಿದ್ದವು.
ಅಲ್ನೋಡಿ ಸಾ...ಹಿಂದಿನಿಂದ ಎರಡನೇ ಬಸ್...ನಿಮ್ಮದೇ..ಅನ್ನಪೂರ್ಣದಿಂದ ಬಂದಿದ್ದು ಅಂತ ರಶೀದಿ ತೋರಿಸಿ...ಎಂದ.
ನಾನೂ ಮತ್ತು ಹಿಂದಿ ಸ್ವಾಮೀಜಿ ಅಲ್ಲಿಗೆ ಹೋದೆವು.
ನೋಡಿದರೆ ಅದು ಯಾವುದೋ ಎಂಆರ್ಎಲ್ ಬಸ್. ಮಂಜುನಾಥ ರೋಡ್ಲೈನ್ಸ್ ಎಂಬ ಭಗವಂತನ ಹೆಸರು ಬೇರೆ!
ಅಲ್ಲಿದ್ದ ಮತ್ತೊಂದು ಅಸಾಮಿಗೆ ರಶೀದಿ ಕೊಟ್ಟೆ, ಅದನ್ನು ಕಿಸೆಗಿಳಿಸಿ, ಇನ್ನೊಂದು ಬೋರ್ಡಿಂಗ್ ಪಾಸ್ ಕೊಟ್ಟ. ವಿಂಡೋ ಸೀಟಲ್ವೇ ಇನ್ನೊಮ್ಮೆ ವಿಚಾರಿಸಿಕೊಂಡೆ.
ಹೋಗಿ ಹೋಗಿ ಕುತ್ಕಳ್ಳಿ ಎಂದು ದಬಾಯಿಸಿದ !
ನೇರ ೧೯ ಸೀಟಲ್ಲಿ ಹೋಗಿ ಕುಳಿತೆ. ಇನ್ನೊಂದು ಸಾಲಿನ ವಿಂಡೋ ಸೀಟಲ್ಲಿ ಹಿಂದಿ ಸ್ವಾಮೀಜಿ.
ಕುಳಿತು ಬಸ್ ಅವಲೋಕಿಸಿದರೆ ಯಾವುದೋ ೧೫ ವರ್ಷ ಹಿಂದಿನ ಲಡಖಾಸು ಗಾಡಿಯದು. ಸೀಟಿನ ತಲೆಭಾಗದಲ್ಲಂತೂ ಕಪ್ಪುಕಪ್ಪು ಗ್ರೀಸ್ ಬಳಿದಂತೆ ಕಾಣುತ್ತಿತ್ತು. ಬಾಟಲ್, ಪೇಪರ್ ಹೋಲ್ಡರುಗಳೆಲ್ಲಾ ಹರಿದು ನೇತಾಡುತ್ತಿದ್ದವು. ಪ್ರಯಾಣಿಕರೊಬ್ಬರ ಕೈ ಆಕಸ್ಮಿಕವಾಗಿ ತಗಲಿ ಲೈಟೊಂದರ ಮುಚ್ಚಳ ಬಿದ್ದೇ ಹೋಯ್ತು. ಇತಿಹಾಸ ಕಾಲದಲ್ಲಿ ವಿಡಿಯೋ ಕೋಚ್ ಬಸ್ಸಾಗಿತ್ತು ಎಂದು ಸಾರುವಂತೆ ವಿಡಿಯೋ ಇದ್ದ ಜಾಗದಲ್ಲಿ ಬೋರ್ಡೊಂದನ್ನು ಅಂಟಿಸಿದ್ದರು.
ನನ್ನದೇ ಆಲೋಚನೆ ಬಹುಷ ಸ್ವಾಮೀಜಿಗೂ ಕಾಡಿತ್ತು. ಯೇ ಬೋಲ್ತೇ ಕುಚ್, ಓರ್ ಕರ್ತೇ ಕುಚ್ ಔರ್ ಹೇಂ, ಯೇ ತೋ ಥರ್ಡ್ ಕ್ಲಾಸ್ ಬಸ್ ಹೇ ಎಂದು ನನ್ನಲ್ಲಿ ಅಸಮಾಧಾನ ತೋಡಿಕೊಂಡರು.
ಆಗ ಬಸ್ ಒಳಗೆ ಆಸಾಮಿ ನಂಬರ್-೩ ಪ್ರವೇಶ.
ಪಾಸ್ ನೋಡುತ್ತಾ ನನ್ನ ಬಳಿ ಬಂದ. ನಿಮ್ಮದು ವಿಂಡೋ ಸೀಟಲ್ಲ, ಈಚೆ ಕುಳಿತ್ಕಳ್ಳಿ ಎಂದ.
ನಾನು ಪ್ರತಿಭಟಿಸಿದೆ, ಏಜೆನ್ಸಿ ಬಳಿ ನಾನು ಕೇಳಿದ್ದು ವಿಂಡೋಸೀಟೇ ಎಂದೆ.
ನಾನು ಏಳುವುದಿಲ್ಲ ಎಂದು ಗೊತ್ತಾದಾಗ ಸ್ವಾಮೀಜಿಯನ್ನು ಸಾಗಹಾಕಲು ಹೋದ. ಸ್ವಾಮೀಜಿ ಸಿಟ್ಟೇರಿ, ಯು ಗಿವ್ ಬ್ಯಾಕ್ ಮೈ ಮನಿ, ಐ ವಿಲ್ ಗೆಟ್ ಡೌನ್ ಎಂದು ಅಬ್ಬರಿಸಿದರು.
ಮತ್ತೆ ನನ್ನ ಬಳಿ ಬಂದು ಇಬ್ಬರಿಗೂ ವಿಂಡೋ ಸೀಟ್ ಕೊಡಲ್ಲ. ಒಬ್ಬರು ಈಚೆ ಬರಲೇ ಬೇಕು ಅಂದ.
ನನಗೆ ಹಿಂದಿನ ದಿನದ ನಿದ್ದೆ, ಇಡೀ ಹಗಲು ಸುತ್ತಾಡಿದ ಸುಸ್ತು ಎರಡೂ ಇದ್ದರಿಂದ ಸಿಟ್ಟು ಬಂತು, ಸೀದಾ ಇಳಿದು ಅನ್ನಪೂರ್ಣ ಏಜೆನ್ಸಿಗೇ ನಡೆದೆ. ಆಸಾಮಿ ಅಲ್ಲೇ ಕುಳಿತು ಹಲ್ಲು ಗಿಂಜಿದ. ಏನ್ ಈ ಥರಾ ಮೋಸ ಮಾಡ್ತೀರಾ...ಪುನಃ ಬರಲ್ಲ ಎಂದು ತಿಳಿದಿದ್ದೀರಾ ಎಂದೇನೋ ಬಾಯಿಗೆ ಬಂದ ಹಾಗೆ ಒದರಿದೆ. ನನಗೆ ದುರ್ಗಾಂಬಾದಲ್ಲೇ ಸೀಟ್ ಕೊಡಿ, ಇಲ್ಲ ಹಣ ವಾಪಾಸ್ ಮಾಡು ಎಂದೆ.
ಛೇಛೇ ಅಷ್ಟು ಬೇಜಾರ್ ಯಾಕೆ ಮಾಡ್ತೀರಿ ಸಾರ್ ಬೇರೆ ಬಸ್ ಕೊಡೋಣ ಎಂದು ಸಮಾಧಾನ ಹೇಳಿದ. ಎಲ್ಲೆಲ್ಲೋ ಫೋನ್ ಮಾಡಿದ ಎಲ್ಲೂ ಸೀಟ್ ಇದ್ದ ಹಾಗೆ ಕಾಣಲಿಲ್ಲ,
ನನ್ ಜತೆ ಬನ್ನಿ ಸಾರ್, ನಾನ್ ಅದೇ ಬಸ್ಸಲ್ಲಿ ವಿಂಡೋ ಸೀಟ್ ಮಾಡಿಕೊಡುತ್ತೇನೆ ಎಂದ.
ನನಗೂ ಇನ್ನಷ್ಟು ಸುತ್ತಾಡುವ ಜೋಷ್ ಇರಲಿಲ್ಲ. ಮತ್ತೆ ಮಂಜುನಾಥ ಬಸ್ ಗೆ ಬಂದೆವು. ಅಲ್ಲಿ ಈ ಮೂವರೂ ಆಸಾಮಿಗಳಿಗೂ ಅದೇನೇನೋ ಜಗಳ. ನಾನೂ ನನ್ನ ಸಿಟ್ಟನ್ನೂ ಮೂವರ ಮೇಲೂ ಪ್ರದರ್ಶಿಸಿದೆ. ಆಗಲೇ ಗಂಟೆ ೧೦.೩೦ !
ಬಸ್ನಲ್ಲಿದ್ದ ಉಳಿದವರು ತಮಾಷೆ ನೋಡುತ್ತಿದ್ದರು. ೯.೩೦ರ ಬಸ್ ಇನ್ನೂ ಯಾಕೆ ಬಿಟ್ಟಿಲ್ಲ ಎಂದು ಕೇಳುವ ಧೈರ್ಯ ಅವರಲ್ಲಾರಲ್ಲೂ ಇಲ್ಲ. ಅಂತೂ ಅಷ್ಟು ಕಷ್ಟಪಟ್ಟದ್ದಕ್ಕೆ ನನಗೊಂದು ವಿಂಡೋ ಸೀಟ್ ದಯಪಾಲಿಸಿದರು ಮಂಜುನಾಥನ ದೂತರು!
ಕಣ್ಮುಚ್ಚಿ ನಿದ್ದೆಗೆ ಪ್ರಯತ್ನಿಸಿದೆ. ಗಂಟೆ ಸುಮಾರು ೧೧.೧೫ ಆದರೂ ಬಸ್ ಹೊರಡಲಿಲ್ಲ. ನನಗೂ ಜಗಳ ಮುಂದುವರಿಸಲು ಮನಸ್ಸಿರಲಿಲ್ಲ. ಅದಾಗಲೇ ಸಾಕಷ್ಟು ಕೆಟ್ಟ ಆನುಭವ ಆಗಿತ್ತು. ನನ್ನ ಜಗಳದ ತಮಾಷೆ ಸವಿದ ಇತರರೂ ಈಗ ಕಿರಿಕಿರಿ ಶುರುಮಾಡಿದರು. ಅಂತೂ ಮಂಜುನಾಥನ ಕೃಪೆಯಿಂದ ಎಂಆರ್ಎಲ್ ಎಂಬ ಬಸ್ ಕರ್ಕಶ ಇಂಜಿನ್ ಸ್ವರ ಹೊರಡಿಸುತ್ತಾ ಹೊರಟಿತು.
ಅದೆಷ್ಟೋ ಹೊತ್ತಿಗೆ ನಿದ್ದೆ ಬಂತು. ಎಚ್ಚರವಾದಾಗ ಈ ಸಿನಿಮಾದ ಇಂಟರ್ವಲ್! ಎಲ್ಲೋ ಟೀ ಕುಡಿಯಲು ನಿಲ್ಲಿಸಿದ್ದರು. ಮೈಯಲ್ಲೇನೋ ಕಚ್ಚಿದಂತೆ ತುರಿಸಿದಂತೆ ಅನುಭವ. ನೋಡಿದರೆ ತಿಗಣೆಗಳು! ನನಗಷ್ಟೇ ಅಲ್ಲ ಎಲ್ಲರೂ ಮೈ ತುರಿಸುತ್ತಾ ಸೀಟನ್ನು ಕೆಕ್ಕರಿಸುತ್ತಾ ಕುಳಿತಿದ್ದರು!
ಅಂತೂ ಇದೇ ರೀತಿಯ ಮಿಡ್ನೈಟ್ ಮಸಾಲಾ ಮುಂದುವರಿದು, ಚಾರ್ಮಾಡಿ ಘಾಟಿಯ ರಸ್ತೆ ಬ್ಲಾಕ್ನಲ್ಲೂ ಕೆಲ ಗಂಟೆ ಕಳೆದು ಮಂಗಳೂರು ತಲಪುವಾಗ ಬೆಳಗ್ಗೆ ೧೦.೩೦ .
ಪಿವಿಎಸ್ನಲ್ಲೇ ಇರುವ ಮಂಜುನಾಥ ರೋಡ್ಲೈನ್ಸ್ ಕಚೇರಿಗೆ ಹೋಗಿ ಅಲ್ಲಿದ್ದ ಯಜಮಾನನೊಬ್ಬನಿಗೆ ಎಲ್ಲ ಹೇಳಿದೆ.
ತಾಳ್ಮೆಯಿಂದ ಕೇಳಿಸಿಕೊಂಡ ಆತ, ಆ ಬಸ್ನ್ನು ನಾವು ಬೇರೆಯವರಿಗೆ ಕಾಂಟ್ರಾಕ್ಟ್ಗೆ ಕೊಟ್ಟಿದ್ದೇವೆ, ಏನ್ ಮಾಡೋದು ಸಾರ್ ಎಂದು ಸಹಾನುಭೂತಿ ಪ್ರದರ್ಶೀಸಿದ.
ನನಗೆ ಕೆಲಸಕ್ಕೆ ಹೋಗಬೇಕಿದ್ದರಿಂದ ನನ್ನೆಲ್ಲ ಮೂರ್ಖತನಕ್ಕೆ ಮರುಗುತ್ತಾ ಬೇಗನೆ ಮನೆ ಕಡೆ ಹೆಜ್ಜೆ ಹಾಕಿದೆ.
ಸೂಚನೆ: ಹೆಡ್ಲೈನಲ್ಲಿರುವ ರೋಚಕತೆ ಈ ಅನುಭವದಲ್ಲಿ ಇಲ್ಲದ್ದಕ್ಕೆ ಕ್ಷಮೆ ಇರಲಿ
22 comments:
Bitter experiences expressed in a witty style. Thigane bagge odidage, e pvt operators passengersannu yeshtu laguvagi nodthare antha gotthagutthe.
Manjunathavara busnallu nanage heege anubhava aagitthu. Innu Janmake a busnalli hathalla...
ಚೆನ್ನಾಗಿದೆ :). ವಿ. ಆರ್. ಎಲ್., ಸುಗಮದಂತಹ ಒಂದೆರಡು ಕಂಪನಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಖಾಸಾಗಿ ಬಸ್ಸುಗಳದ್ದು ಇದೇ ಗೋಳು. ತಿಗಣೆ ಕಾಟ ಮಾತ್ರ ಎಲ್ಲಾ ಬಸ್ಸುಗಳಲ್ಲೂ ಅನುಭವಿಸಿದ್ದೇನೆ.
ಛೇ..ಛೇ...
ಎಂಥಹ ಅನುಭವ ಮಾರಾಯ್ರೆ..!
ನಿಮ್ಮ ಪರಿಸ್ಥಿತಿಯನ್ನು ಸೊಗಸಾಗಿ ಬಣ್ಣಿಸಿದ್ದೀರಿ..
ಕಣ್ಣಮುಂದೆ ನಡೆದ ಹಾಗೆಯೇ ಇತ್ತು...
ಮೆಜೆಸ್ಟಿಕ್ ಅನ್ನುವ ಮಾಯಾ ರಂಗಸ್ಥಳದಲ್ಲಿ..
ಇವೆಲ್ಲ ದಿನನಿತ್ಯ ನದೆಯುವ ಮಾಮೂಲಿ ನಾಟಕಗಳು..
ಪಾತ್ರಧಾರಿಗಳು ಮಾತ್ರ ಬೇರೆಬೇರೆಯಾಗಿರುತ್ತಾರೆ...
ನಿರ್ದೇಶಕರು ಬದಲಾಗುವದಿಲ್ಲ.......
ಕೆಟ್ಟ ಅನುಭವನ್ನು ಸೊಗಸಾಗಿ ಬರೆದಿದ್ದೀರಿ...
ವೇಣು ಸರ್,
ಬರಹ ಸೊಗಸಾಗಿ ಇದೆ . ಕಣ್ಣಿಗೆ ಕಟ್ಟಿದ೦ತೆ ವಿವರಿಸಿದ್ದೀರಿ... ಸಾರ್ ನಿಮ್ಮ ಅನುಭವವೇ ನನ್ನದು ಸಹ . ಹಾಗಾಗಿ ಇನೊಮ್ಮೆ ಬೆ೦ಗಳೂರು ಕಡೆ ತಲೆ ಹಾಕಿ ಕೊಡ ಮಲಗ ಬಾರದು ಎ೦ದು ನಿರ್ದರಿಸಿದ್ದೇನೆ .
ನಾಲ್ಕು ಕಾಸು ಹೆಚ್ಚು ಕೊಟ್ಟರೂ ಸರಿ, ಖಾಸಗಿ ಬಸ್ ಮಾತ್ರ ಹತ್ತೋಲ್ಲ ಎಂದು ನಾನು ಶಪಥ ಮಾಡಿ ಹತ್ತು ವರ್ಷಗಳೇ ಕಳೆದು ಹೋದವು. ಆ ಹಿಂದೆ ನಾನು ಅನುಭವಿಸುತ್ತಿದ್ದ ಸಂಕಷ್ಟಗಳೆಲ್ಳಾ ಮತ್ತೆ ನೆನಪು ಮಾಡಿತು ನಿಮ್ಮ ಸಂಕಷ್ಟ ಕಥೆ! ಬಹುಶಃ ನಿಮಗೂ ಈಗ ಖಾಸಗಿ ಬಸ್ ಸಹವಾಸ ಮತ್ತೆಂದೂ ಬೇಡ ಎನ್ನಿಸಿರಬೇಕು!!!
ಶೀರ್ಷಿಕೆ ಯಲ್ಲಿನ ರೋಚಕತೆ ಇಲ್ಲ ೆಂದು ಏಕೆ ಅಂದುಕೊಳ್ಳುತ್ತೀರಾ? ಖಂಡಿತಾ ರಾಚಕವಾಗಿದೆ ನಿಮ್ಮ ಬರಹ
ಛೇ! ಟೈಟಲ್ ನೋಡಿ 'ಏನೋ ಸಖತ್' ನಡೆದಿರೊತ್ತೆ ಅಂದ್ಕೊಂಡ್ರೆ ಮತ್ತದೇ ಖಾಸಗಿ ಬಸ್ ಪ್ರಯಾಣದ ಗೋಳು ಹೇಳ್ಕೊಂಡಿದ್ದೀರಲ್ರೀ! ಫುಲ್ ನಿರಾಶೆ ಆಗ್ ಹೋಯ್ತು. :(
ವೇಣು,
ನೀವು ತುಂಬಾ ಚೆಂದವಾಗಿ ಅನುಭವ ತಿಳಿಸಿದ್ದಿರಿ,
ಇದೆ ರೀತಿ ನಾನು ಎಷ್ಟೋ ಸಲ ಮೋಸ ಹೋಗಿದ್ದೇನೆ, ತಿಗಣೆಗಳ ಕಾಟವಂತೂ ಎಲ್ಲ ಬಸ್ಸಗಳಲ್ಲಿ ಮಾಮೂಲಿಯಾಗಿದೆ. ಹಣಕ್ಕೆ ತಕ್ಕ ಸೇವೆ ಸಲ್ಲಿಸಲು ಆಗದವರು ಬಸ್ಸು ಯಾಕೆ ಇಡಬೇಕು ಅಲ್ಲವೇ?
ಮೋಸ ಎಲ್ಲ ಕಡೆ ತುಂಬಿ ತುಳುಕಿದೆ.
ಸುಧಾರಣೆ ಎಲ್ಲಿಂದ ಎಂದು ಹುಡುಕಲು ಹೋದರೆ ಹೋದವನೇ ನಾಪತ್ತೆಯಾಗುತ್ತಾನೆ ಅನ್ನೋ ಕಾಲವಿದು
ನಿಮ್ಮ ಶೀರ್ಷಿಕೆಯ ಲೇಖನಕ್ಕೆ ರಸವತ್ತಾಗಿದೆ.
ವೇಣು ವಿನೋದ್
ನಿಮ್ಮ ಶೀರ್ಷಿಕೆ ನೋಡಿ ನನ್ನ ಕಲ್ಪನೆ ಬೇರೇನೋ ಇತ್ತು. ಆದರೆ ನಿರಾಶೆಯಾಗಲಿಲ್ಲ. "ಮನ್ಮಥ ಲೀಲೆ" ಅ೦ತ ಸಿನೆಮಾ ದ ಬೋರ್ಡು ಹಾಕಿ ಯಾವುದೋ ಪೌರಾಣಿಕ ಕಥೆ ತೋರಿಸಿದ ಹಾಗಿದೆ. ಚೆನ್ನಾಗಿದೆ.
ವೇಣು,
ನಿಮಗೆ ನನ್ನ ಸಹಾನುಭೂತಿಗಳು. ನಾನೂ ಸಹ ಕೆಲವೊಮ್ಮೆ ಇಂಥ ಸಂಕಷ್ಟಗಳಿಗೆ ಒಳಗಾಗಿದ್ದೇನೆ.
ಸೂಚನೆ: ಹೆಡ್ಲೈನಲ್ಲಿರುವ ರೋಚಕತೆ ಈ ಅನುಭವದಲ್ಲಿ ಇಲ್ಲದ್ದಕ್ಕೆ ಕ್ಷಮೆ ಇರಲಿ
ಸಕ್ಕತ್!!:)
-ರಂಜಿತ್.
ಹೆಡ್ಲೈನ್ ನೋಡಿ ಏನೋ ಅಂದುಕೊಂಡಿದ್ದೆ!!!!
ನನಗೂ ಒಮ್ಮೆ ಶಿವಮೊಗ್ಗದಿಂದ ಬರುವಾಗ ಇದೆ ರೀತಿಯ ಅನುಭವವಾಗಿತ್ತು. ಆಮೇಲಿನಿಂದ ನನ್ನ ಪ್ರಯಾಣ ನಮ್ಮ ಕ.ರಾ.ರ.ಸಾ.ಸಂ ಅಥವಾ ಗಜಾನನ!!
ಏನ್ರೀ ಮೋಜು-ಗೋಜು ಟೈಟಲ್ ಕೊಟ್ಟಿದ್ದೀರಾ! :(
Superb...the way its narrated ...
Actually even suguma sleeper has same problem (loads of bedworms)
ಸಕ್ಕತ್ತಾಗಿತ್ತು ವೇಣು ಮಿಡ್ ನೈಟ್ ಮಸಾಲ :) ಅಂತೂ ಭಾನುವಾರದ ನಿದ್ರೆನೂ ಹಾಳು ಮಾಡ್ಕೊಂಡ್ರಿ ಬೆಂಗಳೂರಿಗೆ ಬಂದು :)
ನಾನು ಬೆಂಗಳೂರಿಗೆ ಬಂದ ಹೊಸದರಲ್ಲಿ, ನನ್ನೂರು ಸುಳ್ಯಕ್ಕೆ ಬಸ್ ಟಿಕೆಟ್ ಸಿಗದೆ ಮಡಿಕೇರಿಗೆ ಬುಕ್ ಮಾಡಿದ್ದೆ. 'ಪೂರ್ಣಿಮಾ’ ಬಸ್ಸು. ಬೆಂಗಳೂರಿನ ಗಾಂಧಿನಗರದಲ್ಲಿ ರಾತ್ರಿ ಬಸ್ ಹತ್ತಿದರೆ, ನನ್ನ ನಂಬರಿನ ಸೀಟಲ್ಲಿ ಒಬ್ರು ಮಹಿಳೆ ಕೂತಿದ್ದಾರೆ. ಅವರ ಬಳಿಯೂ ಅದೇ ನಂಬರಿನ ಟಿಕೆಟ್ ! ವಿಚಾರಿಸಿದಾಗ, ತಮ್ಮ ಇನ್ನೊಂದು ಬಸ್ನಲ್ಲಿ ಸೀಟು ಕೊಡಿಸ್ತೇವೆ ಅಂತ ಒಬ್ಬ (ಕ್ಲೀನರ್) ಟಿಕೆಟ್ ತೆಗೆದುಕೊಂಡ. ಆದರೆ ಅದರಲ್ಲೂ ಸೀಟು ಖಾಲಿ ಇರಲಿಲ್ಲ. ಆ ರಾತ್ರಿ, ನನ್ನ ಕೈಯಿಂದ ಟಿಕೆಟ್ ತೆಗೆದುಕೊಂಡವನ ಮುಖದ ನೆನಪೂ ಉಳಿದಿರಲಿಲ್ಲ. ಎಲ್ಲೂ ಸೀಟ್ ಇಲ್ಲ, ಮಿಸ್ಟೇಕ್ ಆಗಿದೆ, ಏನ್ಮಾಡೋದು, ಕ್ಯಾಬಿನ್ನಲ್ಲಿ ಕುಳಿತುಕೊಳ್ಳಿ (ಇಲ್ಲವಾದರೆ ಇಳಿದು ಮನೆಗೆ ಹೋಗಿ ಎಂಬ ದರ್ಪದಿಂದ) ಎಂದ. ನಂತರ ಒಂದಷ್ಟು ಜಗಳ. ಆ ಬಸ್ನಲ್ಲಿದ್ದ ಪೊಲೀಸ್ ಆಫೀಸರ್ ಕೂಡಾ ತುಟಿ ಪಿಟಕ್ ಎನ್ನಲಿಲ್ಲ. ಬಳಿಕ ಡ್ರೈವರ್ ಹಿಂದಿನ ಕ್ಯಾಬಿನ್ ಸೀಟಿನಲ್ಲಿ ಮುದುರಿಕೊಂಡು ಕೂತು ಮಡಿಕೇರಿ ತಲುಪಿದೆ.
ಆ ಥರ್ಡ್ಕ್ಲಾಸ್ ಮಕ್ಳು ಏಳೇಳು ಜನ್ಮದಲ್ಲೂ ಉದ್ಧಾರ ಆಗಲ್ಲ.
ಹ ಹ್ಹಾ .. ಬೇಕಿತ್ತಾ ಇದು?? ಸುಮ್ನೆ ರಾಜಹಂಸ ಬಸ್ ಗೆ ಹೋಗಿದ್ರೆ ಆಗಿರೋದಪ್ಪ.. ತಿಗಣೆ ನ ಮಾತ್ರ ಸಹಿಸ್ಕೊಂದ್ರೆ ಸಾಕಿತ್ತು. :D
- ವೈಶಾಲಿ
ರೈಲಿನಲ್ಲಿ ಹೋಗಿ ಮಾರಾಯ್ರೆ.. ಅಲ್ಲಿ ಜಂಪ್ ಆಗೋದಿಲ್ಲ..ಬ್ಯಾಕ್ ಸೀಟ್, ಫ್ರಂಟ್ ಸೀಟ್ ಎಲ್ಲಾ ಒಂದೇ..
:)
ಅಯ್ಯೋ ಪಾಪ!
ವೇಣು,
ಮೊದಲು ಓದುತ್ತಾ ಎಲ್ಲಿದೆ ಮಸಾಲ ಅಂದುಕೊಂಡರೆ ನೀವು ಇಂಥ ಮಸಾಲ ಕೊಡುವುದೆ.....ಹಾಗೆ ನೋಡಿದರೆ ಸ್ವಾತಿ ಹೋಟಲ್ಲಿನಲ್ಲಿರುವ ದುರ್ಗಾಂಬ ಟ್ರಾವಲ್ಸ್ ನಿಜಕ್ಕೂ ಒಳ್ಳೆಯ ಸೇವೆಯನ್ನು ಕೊಡುತ್ತಾರೆ. ನಾನು ಮಂಗಳೂರು, ಸಿರಸಿ ಕಡೆ ಪ್ರಯಾಣಕ್ಕೆ ಅವರ ಬಸ್ಸಿನಲ್ಲೇ ಹೋಗುವುದು. ನೀವು ಯಾವುದೇ ಕಾರಣಕ್ಕೂ ಮೆಜೆಸ್ಟಿಕ್ಕಿನಲ್ಲಿ ಬುಕ್ ಮಾಡಬಾರದು...ಮಾಡಿದರೇ ಹೀಗೆ ಆಗುತ್ತದೆ....
ನನ್ನಂತೆ ಖಾಸಗಿ ಬಸ್ಸಲ್ಲಿ ಖರಾಬ್ ಅನುಭವ ಪಡೆದವರಿಗೆ, ನನ್ನೊಂದಿಗೆ ಸಹಾನುಭೂತಿ ತೋರಿದ ಮಿತ್ರರೆಲ್ಲರಿಗೆ ಮತ್ತು ಶೀರ್ಷಿಕೆ ನೋಡಿ ಮೋಸಹೋದವರಿಗೆ[:)] ವಂದನೆಗಳು
mosa hodavaralli nannannu serisikolli :(
bengaloorige banda hosatharalli intha anubhava nanagu aagide... eega buddivantha aagiddene bidi :)
ee katheyinda tiliyuva neethi: board nodi bus select madbedi
headline nodi story odbedi :-)
Post a Comment