14.11.12

ದೀಪಾವಳಿಯ ಪಲುಕುಗಳು

ದೀಪಾವಳಿಯ ಮರುದಿನ
ದೊಡ್ಡ ಕಚೇರಿ ಸಂಕೀರ್ಣದ
ಕಸದ ಡಬ್ಬಿಯಲ್ಲಿ ರಾಶಿ ಬಿದ್ದ
ಖಾಲಿ ಸ್ವೀಟ್‌ ಬಾಕ್ಸ್‌ಗಳನ್ನೇ
ಸೆಕ್ಯೂರಿಟಿಯಾತ ಜೋಪಾನವಾಗಿ
ತಂದು ಮಡಚಿ ಇರಿಸುತ್ತಿದ್ದ..



ಕತ್ತಲಲ್ಲಿ ಬೆಳಕಲೋಕ
ಸೃಷ್ಟಿಸುವ
ಢಂ ಡಮಾರ್‌ ಪಟಾಕಿಗಳನ್ನು
ಅರಳುಕಂಗಳಲ್ಲಿ
ನೋಡಿದ ಹೆಂಚಿನ ಮನೆಯ
ಪುಟಾಣಿಗಳು
ಅಂಗಳಕ್ಕೆ ಬಂದುಬಿದ್ದ ಉರಿದ
ರಾಕೆಟ್‌ ನೋಡಿ ಸಂಭ್ರಮಿಸಿದರು!



ಕತ್ತಲು ದೂರವಾಗಿಸುವ
ಪ್ರಯತ್ನದಲ್ಲಿ ಸಾಲುದೀಪ
ಹಚ್ಚಿದೆ, ವಿದ್ಯುದ್ದೀಪಗಳನ್ನು
ಬೆಳಗಿಸಿದೆ,
ದೀಪವಾರಿಸಿ
ಖಾಲಿ ಮನಸ್ಸಿನಲ್ಲಿ ಮಲಗಿದಾಗ
ಕಿಟಿಕಿ ಹೊರಗೆ
ಮಿಂಚುಹುಳಗಳು ಮಿನುಗಿದವು
ದೀಪಾವಳಿ ಕಥೆ ಹೇಳಿದವು

28.8.12

ಖುಷಿಯ ಅಳು

ಒಳ ಕೋಣೆಯಲ್ಲಿ
ಬಟ್ಟೆ ಬದಲಿಸಿ, ಮುಖವೊರೆಸಿ
ಪೌಡರ್‌ ಬಳಿದು ಬಂದರೂ
ಖುಷಿಯ ಕಣ್ಣೀರು
ಇನ್ನೂ ತೊಟ್ಟಿಕ್ಕುತ್ತಿದೆ
ಸಂತೈಸಲು ಹೋದರೆ
ಸಾಂತ್ವನದ ಶಬ್ದಗಳು ಸಿಗಲಾರವು

ಹೊರಗೆಲ್ಲೋ ಸುತ್ತಾಡಹೋದ
ಖುಷಿಗೆ ಕಂಡಿದ್ದು
ಬರಡು ಗದ್ದೆಗಳು,
ಖಾಲಿ ಖಾಲಿ ಹಳ್ಳಿಗಳು
ಇವೆಲ್ಲದರ ಅರಿವೇ ಇಲ್ಲದೆ
ಗಹಗಹಿಸುವ ನಗರಗಳ
ಅಟ್ಟಹಾಸ ನೋಡಿ
ಖುಷಿಯ ಮಂದಹಾಸ ಕರಗಿದೆ

ಬಾನಾಡಿಗಳ
ಮೊಟ್ಟೆಯನ್ನು ಯಾರೋ
ಕಸಿದು ಒಡೆದಿದ್ದಾರೆ
ಹಸಿರಿನ ಮಧ್ಯೆ ಕೆಂಪುಮಣ್ಣು
ಬಾಯ್ಬಿಟ್ಟಿದೆ,
ಹಳ್ಳಿಗನೊಬ್ಬ ಆಸೆಯಿಂದ ಮೋಡ
ನೋಡುತ್ತಿದ್ದಾನೆ
ಇನ್ನು ಖುಷಿ
ನಗುವುದೆಂದರೆ ಹೇಗೆ!

ಹುಸಿ ಪ್ರಾಮಾಣಿಕತೆಯ
ತೆವಲು, ವಿಶ್ವಾಸದ
ಸೆರಗಿನೆಡೆಯಲ್ಲಿ
ಅಡಗಿರುವ ಅಲಗು,
ದುರಾಸೆಯ ಕೂಪಗಳನ್ನು ಕಂಡು
ಕನಲಿದ್ದಾಳೆ ಖುಷಿ
ಖುಷಿಯ ಖುಷಿ
ಕರಗುತ್ತಲೇ ಇದೆ

ಓ ದೇವರೆ
ಹೊರಗೆ ಸುರಿಯುವ ಮಳೆ
ಹನಿಗಳಲ್ಲಿ ಖುಷಿಯ
ಬಿಕ್ಕಳಿಗೆ ಸೇರಿ ಹೋಗಲಿ
ಮಗುವಿನ ನಗು
ಆಕೆಯ ಮೊಗವರಳಿಸಲಿ
ಅಲ್ಲೋ ಇಲ್ಲೋ ತೆರೆದು
ಕೊಳ್ಳುವ ಸೂರ್ಯಕಾಂತಿ
ಹೂಗಳು ಖುಷಿಗೆ ಹಾರೈಸಲಿ!

20.6.12

ಮಳೆ-ಬಿಸಿಲು

ಕೊಡೆ ಹಿಡಿದರೂ
ಜಡಿ ಮಳೆಗೆ
ಒದ್ದೆಯಾದವನನ್ನು
ಬಂಡೆ ಅಡಿಯಿಂದಲೇ
ನೋಡಿದ
ಕಪ್ಪೆ ಮರಿಗೆ ನಸುನಗೆ!
--------------
ಮಳೆ ಬಿಟ್ಟ ಕಡುಕತ್ತಲ
ರಾತ್ರಿಯಲ್ಲಿ
ಮಿಂಚು ಹುಳ ದಾರಿ ತೋರಿಸಿತು
--------------
ಮಳೆ ಮತ್ತು ಬಿಸಿಲು
ಎಂತಹ ವಿನ್ಯಾಸಕಾರರು!

23.4.12

ಹಳ್ಳಿಗೆ ಹೊರಟ ಬಾಳಿಲನಿಗೊಂದು ಸಲಾಂ!

ನಾನು ಕಳೆದ ಕೆಲವರ್ಷಗಳಿಂದ ಕಂಡ ಕನಸನ್ನು ‘ಹೊಸದಿಗಂತ’ದ ಮಿತ್ರ ನಾರಾಯಣ ಬಾಳಿಲ ಮಾಡಹೊರಟಿದ್ದಾರೆ.
ಸುಳ್ಯದ ಬಾಳಿಲದ ತನ್ನನ್ನು ಪೊರೆದ ಮನೆಯತ್ತ, ತಾನು ಆಡಿಬೆಳೆದ ಮನೆಯತ್ತ ಮತ್ತೆ ಮುಖ ಮಾಡಿದ್ದಾರೆ.
ಸಾಕಷ್ಟು ಹಣ ಉಳಿಸುವ ಬ್ಯಾಂಕ್‌ ಅಧಿಕಾರಿಗಳು, ಸಾಫ್ಟ್‌ವೇರ್‌ ಇಂಜಿನಿಯರ್‌ಗಳು, ಸರ್ಕಾರಿ ಅಧಿಕಾರಿಗಳು ಹಳ್ಳಿಯಲ್ಲಿ ಫಾರ್ಮ್‌‌ಹೌಸ್‌ ಮಾಡುವಂತೆ ಇದು ಅಲ್ಲ. ಪತ್ರಕರ್ತ ಛಾಯಾಗ್ರಾಹಕರಾಗಿದ್ದುಕೊಂಡು ಆ ಕ್ಷೇತ್ರದ ಮೋಹ ಕಳಚಿ, ಮಂಗಳೂರೆಂಬ ಮಾಯೆಯ ಗುರುತ್ವ ಬಲ ಮೀರಿ ತಮ್ಮ ಊರಿನತ್ತ ಮೊಗಮಾಡಿದ್ದಾರಲ್ಲ ಅದು ಗ್ರೇಟ್‌!
ಕೃಷಿ ನನಗೆ ಹೊಸತಲ್ಲ, ಅನೇಕ ವರ್ಷಗಳಿಂದ ಇದೇ ಆಲೋಚನೆ ಮನದಲ್ಲಿತ್ತು, ತಮ್ಮ ಹೇಗೂ ಪತ್ರಿಕೋದ್ಯಮದಲ್ಲಿದ್ದಾನೆ. ಮನೆಯಲ್ಲಿ ತಂದೆ ತಾಯಿ ಮಾತ್ರ, ಅವರಿಗೂ ಪ್ರಾಯ ಆಯ್ತು, ಇನ್ನಾದರೂ ನಾನು ಮನೆಯಲ್ಲಿದ್ದರೆ ಅವರಿಗೂ ನೆಮ್ಮದಿ.

ಆದರೆ ಹಾಗೆಂದು ಅಷ್ಟೇ ಅಲ್ಲ, ಕೃಷಿಯಲ್ಲಿ ಹೊಸ ಪ್ರಯೋಗ ಕೈಗೊಳ್ಳುತ್ತೇನೆ, ಮಿಶ್ರ ಬೆಳೆ ಹಾಕುತ್ತೇನೆ, ಅಡಿಕೆ ಒಂದನ್ನೇ ನಂಬುವುದಲ್ಲ, ಹೀಗೆ ಒಂದಷ್ಟು ತಮ್ಮ ಗುಂಗನ್ನು ಮೊನ್ನೆ ಬಾಳಿಲ ನನ್ನೊಂದಿಗೆ ಹೇಳಿಕೊಂಡರು. ಇದೇ ಏ.೩೦ಕ್ಕೆ ಅವರು ಪೂರ್ಣವಧಿ ಪತ್ರಕರ್ತ ಎಂಬ ಭಾರವನ್ನು ಕಳಚಿಕೊಳ್ಳುತ್ತಿದ್ದಾರೆ.
ಬರವಣಿಗೆ ಮತ್ತು ಕ್ಯಾಮೆರಾ ಕೈಬಿಡುವುದಿಲ್ಲ, ಕೃಷಿ ಚಟುವಟಿಕೆಯ ಮಧ್ಯೆ ಸಿಕ್ಕುವ ಬಿಡುವನ್ನು ಅದಕ್ಕೆ ಬಳಸಿಕೊಳ್ಳುವೆ, ವೈಲ್ಡ್‌ಲೈಫ್‌ ಫೋಟೋಗ್ರಫಿ ಮಾಡಬೇಕು ಎಂಬ ಕನಸೂ ಅವರದ್ದು. ಮನೆಯಲ್ಲಿರುವ ಅಮೂಲ್ಯ ಭೂಮಿಯನ್ನು ವೃದ್ಧರನ್ನೂ ಬರಡಾಗಲು ಬಿಟ್ಟು ನಗರಗಳಲ್ಲಿ ಕನಸು ಬೆಂಬತ್ತುವ ನಮ್ಮ ಅನೇಕ ಯುವಜನರಿಗೆ ಬಾಳಿಲ ಹೊಸ ದಾರಿ ತೋರಿದ್ದಾರೆ.
ನಗರಗಳಲ್ಲಿ ಹೋದರೂ ಒಂದಷ್ಟು ಕಾಲ ಬಯಸಿದ ಕೆಲಸ ಮಾಡಿ, ನಮ್ಮ ಭೂಮಿಯತ್ತ ಮುಖಮಾಡಿದರೆ ನಮ್ಮ ಅನ್ನ ನೀಡುವ ಭೂಮಿ ಬರಡಾಗದು, ಹಳ್ಳಿಗಳು ಬರಡಾಗವು ಮತ್ತು ನಗರದ ಹೊರೆಯೂ ಕಡಿಮೆಯಾದೀತು.  ಏನಂತೀರಿ?
ಅದಕ್ಕಾಗಿಯೇ ಬಾಳಿಲರಿಗೊಂದು ಸಲಾಂ!
ನಗುಮೊಗದ ಮೆಲುನಡೆಯ ಬಾಳಿಲ(9845366791) ಕೃಷಿಯಲ್ಲೂ ಸಾಧಕರಾಗಲಿ ಎಂಬ ಹಾರೈಕೆ ನಮ್ಮದು.

12.4.12

ನನಗೆ ಗತ್ತು ಬಂದಿದೆಯಂತೆ !


ನನಗೆ ಗತ್ತು ಬಂದಿದೆಯಂತೆ
ಹತ್ತಿರದಿಂದ ಬಲ್ಲವರು
ಹಾಗೆ ಹೇಳುತ್ತಾರೆ.
ಇರಬಹುದೋ ಏನೋ!

ನನಗೆ ನನ್ನನ್ನು ಹೊಗಳಿದರೆ
ಖುಷಿಯಾಗುತ್ತದೆ,
ಅದನ್ನು ತೋರಿಸದೆ
ಸುಮ್ಮನೆ ಒಳಗೊಳಗೆ
ಹಿಗ್ಗುತ್ತೇನೆ
ನನ್ನ ಸಹೋದ್ಯೋಗಿಗಳು
ಖುಷಿ ಪಡುವುದು
ಕಂಡು ಹಿಗ್ಗಿದ ಬಲೂನಿಗೆ
ತೂತು ಬೀಳುತ್ತಿರುತ್ತದೆ

ನನಗೆ ಶ್ರೀಮಂತಿಕೆ
ಒಲಿದಿದೆಯಂತೆ
ಬಲ್ಲವರು ಹೇಳುತ್ತಾರೆ
ಇದ್ದರೂ ಇರಬಹುದು
ಬಟ್ಟೆಗಳು ಬಿಗಿಯಾಗುತ್ತವೆ
ಅಷ್ಟೇ ಅಲ್ಲ
ನಗು ಬಹಳ ದುಬಾರಿಯಾಗುತ್ತಿದೆ

ನಾನು ಕನಸಗೋಪುರದಲ್ಲಿ
ವಿಹರಿಸುತ್ತೇನಂತೆ
ಗೊತ್ತಿಲ್ಲ...
ನನ್ನ ಹೊತ್ತು ಕೈ ಗನ್ನಡಿಯೆದುರು
ಕಳೆಯುತ್ತದೆ,
ಬೇರೆಯವರ ಪುಟ್ಟ ಸಾಧನೆಗೆ
ಮೆಚ್ಚುಗೆ ಸೂಸುವುದಕ್ಕೆ ನನಗೆ
ಸಮಯ ಸಿಗುವುದಿಲ್ಲ,
ಸಿಗುವ ಪರಾಕು ಸ್ವೀಕರಿಸುವುರಲ್ಲೇ
ನಾನು ಸಂಭ್ರಮಿಸುತ್ತೇನೆ...

ಹೇಳು ಓ ದೇವರೆ?
ನಾನು ದುಷ್ಟನಲ್ಲ ತಾನೇ!

9.3.12

ನನಗೆ ಗತ್ತು ಬಂದಿದೆಯಂತೆ
ಹತ್ತಿರದಿಂದ ಬಲ್ಲವರು
ಹಾಗೆ ಹೇಳುತ್ತಾರೆ.
ಇರಬಹುದೋ ಏನೋ!

ನನಗೆ ನನ್ನನ್ನು ಹೊಗಳಿದರೆ
ಖುಷಿಯಾಗುತ್ತದೆ,
ಅದನ್ನು ತೋರಿಸದೆ
ಸುಮ್ಮನೆ ಒಳಗೊಳಗೆ
ಹಿಗ್ಗುತ್ತೇನೆ
ನನ್ನ ಸಹೋದ್ಯೋಗಿಗಳು
ಖುಷಿ ಪಡುವುದು
ಕಂಡು ಹಿಗ್ಗಿದ ಬಲೂನಿಗೆ
ತೂತು ಬೀಳುತ್ತಿರುತ್ತದೆ

ನನಗೆ ಶ್ರೀಮಂತಿಕೆ
ಒಲಿದಿದೆಯಂತೆ
ಬಲ್ಲವರು ಹೇಳುತ್ತಾರೆ
ಇದ್ದರೂ ಇರಬಹುದು
ಬಟ್ಟೆಗಳು ಬಿಗಿಯಾಗುತ್ತವೆ
ಅಷ್ಟೇ ಅಲ್ಲ
ನಗು ಬಹಳ ದುಬಾರಿಯಾಗುತ್ತಿದೆ

ನಾನು ಕನಸಗೋಪುರದಲ್ಲಿ
ವಿಹರಿಸುತ್ತೇನಂತೆ
ಗೊತ್ತಿಲ್ಲ...
ನನ್ನ ಹೊತ್ತು ಕೈ ಗನ್ನಡಿಯೆದುರು
ಕಳೆಯುತ್ತದೆ,
ಬೇರೆಯವರ ಪುಟ್ಟ ಸಾಧನೆಗೆ
ಮೆಚ್ಚುಗೆ ಸೂಸುವುದಕ್ಕೆ ನನಗೆ
ಸಮಯ ಸಿಗುವುದಿಲ್ಲ,
ಸಿಗುವ ಪರಾಕು ಸ್ವೀಕರಿಸುವುರಲ್ಲೇ
ನಾನು ಸಂಭ್ರಮಿಸುತ್ತೇನೆ...

ಹೇಳು ಓ ದೇವರೆ?
ನಾನು ದುಷ್ಟನಲ್ಲ ತಾನೇ!

8.3.12

ಗಾಳಿಗೆ ಗುಂಡು ಹೊಡೆಯುವುದು!

ಗಾಳಿಯಲ್ಲಿ ಗುಂಡು
ಹಾರಿಸುವುದು ಎಂದರೆ
ತುಂಬಾ ಕಷ್ಟ
ಕಣ್ಣ ಮುಂದೊಂದು
ಗುರಿಯಿಲ್ಲದೆ ಹೋದರೆ
ಬಂದೂಕದ
ಕುದುರೆ ಎಳೆಯುವಾಗ
ಪುಳಕವಿರುವುದಿಲ್ಲ,
ಗುಂಡು ಈಡು ಸೀಳುವುದೇ?
ಆ ಆತಂಕ ಮಿಶ್ರಿತ
ಖುಷಿಯಾದರೂ ಅಲ್ಲೆಲ್ಲಿ!
ಶತ್ರುವಿನ ಎದೆಸೀಳಬೇಕಾದ
ಗುಂಡು ಹಾಗೆಯೇ ಗಾಳಿಯೊಂದಿಗೆ
ಘರ್ಷಿಸಿ ತೂರುತ್ತಾ ಹೋಗಿ
ವೇಗ ಕಳೆದು
ಕ....ಳೆ.........ದು
ಕೊನೆಗೆ ಬೇವಾರ್ಸಿಯಂತೆ
ಉದುರಿ ಹೋಗುವುದಕ್ಕೆ
ಏನಾದರೂ ಅರ್ಥವುಂಟೇ ಹೇಳಿ!

ಜಟ್ಟಿಯೊಬ್ಬನಿಗೆ ಗಾಳಿಯೊಡನೆ
ಗುದ್ದಾಡಿ ಶಕ್ತಿ ವ್ಯರ್ಥಗೊಳಿಸುವುಕ್ಕಿಂತ
ಗೋಡೆಗೆ ಬಡಿದು ಪುಡಿಗುಟ್ಟಿಸಿ
ತೊಡೆ ತಟ್ಟಿ ಮೆರೆಯುವುದು ಮೇಲು

ಶೂನ್ಯದಲ್ಲಿ ಗುರಿ
ಹುಡುಕಲು ಆಗುವುದಿಲ್ಲ
ಹುಡುಕುತ್ತಾ ಕೊನೆಕೊನೆಗೆ
ಶೂನ್ಯವೇ ನಮ್ಮನ್ನು
ಬೇಟೆಯಾಡುವಂತೆ ಅನ್ನಿಸುತ್ತದೆ


Photo by  Aurelie and Morgan David de Lossy 



4.3.12

ಹಸಿರು ಅರಳುವಾಗ ಖುಷಿಯ ಬಾಗಿಲು ತೆರೆದಂತೆ

ಕಳೆದೆರಡು ವರ್ಷಗಳಿಂದ ಫೇಸ್‌ಬುಕ್ಕಿನ ಫಾರ್ಮ್‌ವಿಲ್ಲೆಯಲ್ಲಿ ಬೀಜ ಬಿತ್ತುವುದು, ಬೆಳೆ ತೆಗೆಯುವುದು ನಡೆಯುತ್ತಿದೆ. ನನಗೂ ಒಂದೊಮ್ಮೆ ಆ ಹುಚ್ಚು ಹಿಡಿದಿತ್ತು. ಆಗ ಬೆಳೆ ತೆಗೆದದ್ದೇ ತೆಗೆದದ್ದು.. ಅಲ್ಲಿವರೆಗೂ ಮನೆಯ ಕೈತೋಟದಲ್ಲಿ ಅಮ್ಮ ಮಾಡುವ ಕೃಷಿಗೆ ನನ್ನಿಂದಾದಷ್ಟು ಸಹಾಯವನ್ನೂ ಮಾಡುತ್ತಿದ್ದೆ, ಆದರೆ ಫಾರ್ಮ್‌ವಿಲ್ಲೆ ಬಂದ ಬಳಿಕ ಕೃಷಿಯ ಮಂಪರು ಮತ್ತಷ್ಟು ನನ್ನನ್ನು ಆವರಿಸಿದ್ದು ಮಾತ್ರ ನಿಜ.
ಫಾರ್ಮ್‌ವಿಲ್ಲೆ ಎನ್ನುವುದು ಒಂದು ವಿಚಾರವನ್ನಂತೂ ಸ್ಪಷ್ಟಗೊಳಿಸಿದೆ, ನಮ್ಮದು ಕೃಷಿ ಪ್ರಧಾನ ರಾಷ್ಟ್ರ, ಬದಲಾದ ಸನ್ನಿವೇಶದಲ್ಲಿ ಕೃಷಿಗೆ ಪ್ರಾಧಾನ್ಯ ಕಡಿಮೆಯಾಗಿ ಕೃಷಿಕರ ಮಕ್ಕಳು ನಗರ ಸೇರಿಕೊಂಡು ಉದ್ಯಮಗಳಲ್ಲಿ ದುಡಿದರೂ ಅವರ ಮನದಲ್ಲೊಬ್ಬ ಕೃಷಿಕ ಇನ್ನೂ ಜೀವಂತವಾಗಿದ್ದಾನೆ! 
ಅದೇನೇ ಇರಲಿ, ನಮ್ಮ ಮನೆಯ ಅಂಗಳದಲ್ಲೀಗ ಹೂಗಳು ಅರಳುತ್ತಿವೆ, ಹಿತ್ತಿಲ ತೋಟದಲ್ಲಿ ತರಕಾರಿ ನಮಗೆ ಬೇಕಷ್ಟಾದರೂ ಆಗುತ್ತಿದೆ. ನಮ್ಮದು ಸುರತ್ಕಲ್‌ನ ಹೊಸಬೆಟ್ಟು ಪ್ರದೇಶ. ಇಲ್ಲಿ ಒಂದು ಕಾಲದಲ್ಲಿ ಸುತ್ತಲೂ ಗದ್ದೆಗಳಿದ್ದವು. ಈಗ ಅವೆಲ್ಲ ಮಾಯವಾಗಿ ಅಲ್ಲೆಲ್ಲ ಮನೆಗಳೇ. ಆದರೆ ನಮ್ಮಲ್ಲೊಬ್ಬ ರೈತರಿದ್ದಾರೆ, ವಲ್ಲಿ ಅಂತ. ಅವರು ಹೈನುಗಾರಿಕೆ ಮಾಡಿ ನಮ್ಮ ಪ್ರದೇಶದಲ್ಲಿ ಹಾಲು ಪೂರೈಸುತ್ತಾರೆ. ಅವರ ಗದ್ದೆಗೂ ರಿಯಲ್‌ ಎಸ್ಟೇಟ್‌ ಧಣಿಗಳು ಲಕ್ಷ ಲಕ್ಷ ಕಂತೆ ಆಫರ್‌ ಮಾಡಿದ್ದಿದೆ, ಆದರೆ ನಾನಿರುವಷ್ಟು ಕಾಲ ಗದ್ದೆ ಮಾರುವುದಿಲ್ಲ, ಭೂಮಿ ನಮ್ಮ ತಾಯಿ ಎಂದು ಗಟ್ಟಿಯಾಗಿ ನಿಂತ ಕುಳ ಈ ವಲ್ಲಿಯಣ್ಣ.
ನನ್ನ ಕೃಷಿಗೆ ಈ ವಲ್ಲಿಯಣ್ಣನ ಸಹಕಾರವೂ ಇದೆ. ಸಣ್ಣ ಪುಟ್ಟ ಟಿಪ್ಸ್‌ ಕೊಡುತ್ತಾರೆ, ಬೀಜ ವಿನಿಮಯವೂ ಇದೆ.
ಹಾಗೆಂದು ಕೃಷಿ ಸುಲಭ ಎಂದುಕೊಳ್ಳಬೇಡಿ. ಬೀಜವೊಡೆದು ಚಿಗುರು ಕಾಣಿಸುತ್ತ ನಾವು ಖುಷಿ ಪಡುತ್ತಿರುವಾಗಲೇ ರೋಗ ಆಕ್ರಮಿಸಿಕೊಂಡದ್ದಿದೆ. ತುಂಬಾ ಚೆನ್ನಾಗಿ ಚಿಗುರಿ, ಹೂ ಬಿಟ್ಟ ಅಲಸಂಡೆಗೆ ಹೇನು ಬಾಧಿಸಿ ಒಣಗಿ ಹೋಗಿದೆ, ಬದನೆಗೆ ಒಡೆಯುವ ರೋಗ ಕಾಡಿದೆ. 
ಮೊದಮೊದಲು ಶ್ರದ್ಧೆಯಿಂದ ಹರಿವೆ ಬೀಜ ಹಾಕಿದ್ದನ್ನು ನಮ್ಮ ಇರುವೆ ಮಿತ್ರರು ರಾತ್ರೋ ರಾತ್ರಿ ತಮ್ಮ ಆಹಾರ ಸಂಗ್ರಹಣಾಗಾರಕ್ಕೂ ಸಾಗಿಸಿದ್ದರು. ಬಳಿಕ ಎಚ್ಚರಿಕೆಯಿಂದ ಸಾಲಿನ ಸುತ್ತಲೂ ಸೆವಿನ್‌ ಪುಡಿ ಚೆಲ್ಲಿದ ನಂತರವಷ್ಟೇ ಹರಿವೆ ಪುಟಿದೆದ್ದದ್ದು. 
ಇವೆಲ್ಲದರ ನಡುವೆಯೂ ನಮ್ಮ ಕುಟುಂಬಕ್ಕೆ, ಪಕ್ಕದ ಕೆಲ ಮನೆಗಳಿಗೆ ಕೊಡುವಷ್ಟು ತರಕಾರಿಗೆ ಕೊರತೆಯಿಲ್ಲ, ಜತೆಗೆ ನಾವೇ ಬೆಳೆದದ್ದು, ಹೆಚ್ಚೇನೋ ರಾಸಾಯನಿಕ ಹಾಕಿಲ್ಲ ಎಂಬ ತೃಪ್ತಿ ಬೇರೆ.
ಇವೆಲ್ಲ ಘಟ್ಟದಲ್ಲೂ ಗಮನ ಕೊಡುತ್ತಿದ್ದುದು ಪತ್ನಿ ರಶ್ಮಿ ಮತ್ತು ಅಮ್ಮ. ಬೆಳಗ್ಗೆ  ತರಕಾರಿ/ಹೂ ಗಿಡಗಳಿಗೆ ನೀರುಣಿಸುತ್ತಾ, ನೀರು ಕುಡಿಯಲು ಬರುವ ಹಕ್ಕಿಗಳ ನೋಡಿ ಖುಷಿ ಪಡುವ ಸರದಿ ರಶ್ಮಿಯದ್ದಾದರೆ  ಸಂಜೆಗೆ ಅದು ಅಮ್ಮನ ಅವಕಾಶ! ಹೀಗೆ ಎಲ್ಲರ ಕೃಪೆಯಿಂದ ಅಂಗಳ, ಹಿತ್ತಿಲಲ್ಲಿ ಹಸಿರು ಚಿಗುರಿದೆ. ಇನ್ನಷ್ಟು ಯೋಜನೆಗಳಿವೆ....
ನಿಮ್ಮ ಮನೆ ಸುತ್ತ ಕೊಂಚ ಜಾಗ ಇದ್ದರೆ, ಒಂದಿಷ್ಟು ಸೆಗಣಿ, ಸುಡುಮಣ್ಣು, ಗೋಮೂತ್ರ ಇವೆಲ್ಲ ಸೇರಿಸಿಕೊಳ್ಳಲು ನಿಮಗೆ ಸಾಧ್ಯವಾದರೆ ನೀವೂ ಕೃಷಿ ಮಾಡಿ ನೋಡಿ...
ನಮ್ಮ ಸುತ್ತ ಹಸಿರಿನ ಜಾಲ ತೆರೆದುಕೊಳ್ಳುವಾಗ ಅದು ಕೊಡುವ ಖುಷಿ  ಅದು ಬೇರೆಯೇ! ಮುಂದಿರುವುದು ನಮ್ಮ ಪುಟ್ಟ ಪ್ರಯತ್ನದ ಫಲದ ದೃಶ್ಯಗಳು....
ಮೊದ ಮೊದಲು ಹುಳಕಾಟದಿಂದ ಆಗೋದೇ ಇಲ್ಲ ಎಂದಿದ್ದ ತೊಂಡೆಯೂ ಈಗ ಕೃಪೆ ತೋರಿದೆ

ಚಿಗುರುತ್ತಿರುವ ಅಲಸಂಡೆ

ಕತ್ತಿ ಅವರೆ

ಎಣ್ಣೆ ಬದನೆ...ಎಣ್ಣೆಗಾಯಿಗೆ ಫೇಮಸ್ಸು!

ಬಸಳೆ ಜಾಲ

ಮಟ್ಟಿಗುಳ್ಳನನ್ನು ಧ್ಯಾನಿಸುತ್ತಾ ಈ ಬದನೆ ತಿನ್ನಬಹುದೇನೋ

ಹಸಿರು ಹರಿವೆ

ಒಂದು ಕಟಾವು ಮುಗಿದ ಬಳಿಕ ಎರಡನೇ ಹರಿವೆ ಕಳಕ್ಕೆ ತಯಾರಿ

ಜರ್ಬೆರಾ ಕೊಂಚ ಸೊರಗಿದ್ದಾಳೆ, ಮುಂದೆ ನೋಡೋಣ...

ಹಸಿ ಮೆಣಸಿನ ಕಾಯಿ ಚಟ್ನಿಗೆ ಇನ್ನಿಲ್ಲದ ರುಚಿ...

ಕೆಂಬಣ್ಣದ ಇಂಪೇಶಿನ್ಸ್‌

ಪಡುವಲ ಕಾಯಿ ಚಪ್ಪರ

ಕುಳ್ಳ ಗುಲಾಲಿ ವರ್ಣದ ಅಂತೂರಿಯಂ

ಪಿಂಕ್‌ ಇಂಪೇಶನ್ಸ್‌

ಹಸಿರು ಪುದೀನಾ

ರಕ್ತವರ್ಣದ ಅಂತೂರಿಯಂ

ಇರುವಂತಿಗೆ

ಬಿಳಿಸೇವಂತಿ

ಸುಗಂಧರಾಜ


16.2.12

ಮೂರು ಮಾತು

ಚಳಿಯ ರಾತ್ರಿ
ಭಗ್ಗನೆ ಉರಿಯುವ
ಅಗ್ಗಿಷ್ಟಿಕೆಯ ಸಾಕ್ಷಿಯಲ್ಲಿ
ನಾನಿಲ್ಲಿ ಅವಳು ಅಷ್ಟು ದೂರದಲ್ಲಿ..
ಎದೆ ಢವಗುಡುತ್ತದೆ,
ಮನಸು ಭಾರವಾಗುತ್ತದೆ
ಕಣ್ಣುಗಳು ಅಡಗುದಾಣ ಹುಡುಕುತ್ತವೆ
ಮೌನ ಕತ್ತು ಹಿಚುಕಿ
ಕೊಲೆ ಮಾಡಿಬಿಡುತ್ತದೆ ಮಾತನ್ನು!
-----------------------------
ಕಣ್ಣು ಕತ್ತಲಾಗಿ
ಮತ್ತಿನ ಜೇಲಿನಲ್ಲಿ
ಹುದುಗಿಹೋಗಿದ್ದಾಗ
ನಿನ್ನ ಪಿಸುಮಾತು
ಮಾರ್ದನಿಸಿತು
ಎದೆಯ ಪಡುಕೋಣೆಯಲ್ಲಿ
-----------------------------
ಮಾತುಗಳಿಗೇನು
ಹೃದಯದ ಕಣ್ಣಿಗೆ
ತಣ್ಣೀರೆರಚಿ
ತಮ್ಮಲ್ಲೇ ಮಂಟಪಕಟ್ಟಿ
ಹುಸಿ ಕನಸುಗಳ ಬೀಜ ಬಿತ್ತಿ
ಮರೆಯಾಗಿಬಿಡುತ್ತವೆ
ಮನಸು ಮಾತ್ರ
ಮಾತಿನ ಅರ್ಥದ ಆಳಕ್ಕಿಳಿಯದೆ
ಒದ್ದಾಡಿ ಪ್ರಾಣ ಬಿಡುತ್ತವೆ!
Related Posts Plugin for WordPress, Blogger...