ಪಟ್ಟಣದ ಬೆಡಗು ಬಿನ್ನಾಣ
ಕಣ್ಣು ತುಂಬಿಕೊಳ್ಳಲು
ಹೊರಟಾಗ ಅದೇಕೋ
ಕಣ್ಣಲ್ಲಿ ಉಳಿದುಬಿಡುತ್ತದೆ
ಧೂಳಿನ ಕಣ
ಅಬ್ಬಾ ಅದೇನು ಕಣ್ಣು ಉರಿ
ಕಣ್ಣ ಸ್ಪಲ್ಪ ಕೆಳಗೆ ನವೆ
ಸ್ವಲ್ಪವೇ ಇಳಿಯುತ್ತವೆ
ಕಣ್ಣಹನಿ
ನೂರಾರೂರುಗಳನ್ನೇ
ತನ್ನ ತೆಕ್ಕೆಗೆ ತೆಗೆದುಕೊಂಡು
ತಿಂದು ತೇಗಿದ
ನಗರಕ್ಕೆತೋಟ ಹೊಲಗದ್ದೆಗಳ ಶಾಪ
ತಟ್ಟಿದೆಯೇನೋ ಎಂಬಂತೆ
ಹರಡಿದೆ ಧೂಳಿನ ತೆರೆ
ಬುಲ್ ಡೋಜರುಗಳ
ಕಬಂಧಬಾಹುಗಳೆಡೆಯಿಂದ
ಅಡ್ಡಲಾಗಿ ಬಿದ್ದ ಮರಗಳ
ಆಕ್ರಂದನದ ಕೊರಳಿಂದ
ಧಾವಿಸಿ ಬಂದು
ವ್ಯಾಪಿಸಿಕೊಳ್ಳುತ್ತದೆ ಧೂಳು
ಮಾಲ್ ಗಳ ಫಳಫಳ
ಗಾಜಿನಲ್ಲಿ, ಭಾರಿದುಬಾರಿ ಕಾರುಗಳ
ಬಾನೆಟ್ಟಿನಲ್ಲಿ,
ಕೆಎಫ್ ಸಿ ಚಿಕನ್ನಿನಂಗಡಿಯ
ಕೆಂಪು ಮಾಡಿನಲ್ಲಿ ಸೇರಿ
ಕುಳಿತಿದೆ ಧೂಳು
ನೀರು ಸುರಿದಷ್ಟೂ ಕೆದರಿ
ಹಾರುತ್ತದೆ!
ಕಾಲಾತೀತವಾಗಿ ಹಾರುತ್ತಾ
ಬಾನಾಡಿಗಳ ಸ್ಪರ್ಶಿಸುತ್ತಾ
ಇಳಿದು ಬಂದು ತಬ್ಬಿಕೊಳ್ಳುವ
ಧೂಳಿನ ಕಣ
ನಮ್ಮ ನೆಲವನ್ನು ನೆನಪಿಸುತ್ತದೆ!
3 comments:
ವೇಣು ವಿನೋದದಿಂದ ಗೋದೂಳಿಗೆ ಕಾರಣನಾದವನಿಂದ ನಗರದೂಳಿಯ ಮೇಲೆ ಜಿಜ್ಞಾಸೆ? ಆದರೂ ಕಣ್ಣಲ್ಲಾದರೂ ಹನಿಕಿ ಅದನ್ನು ಕೂರಿಸುವ ಯತ್ನಕ್ಕೆ ಅಭಿನಂದನೆಗಳು!
ವೇಣು,
ತುಮಕೂರಿನ ಧೂಳು ಸವಿಯುತ್ತ ಪ್ರತಿದಿನವೂ ಸೀನುತ್ತ ಆನಂದಪಡುವ ನನಗೆ ನಿಮ್ಮ ಕವಿತೆ ಬಹಳವೇ ಹಿಡಿಸಿತು!! ಲೈಕ್ ಡೆತ್, ಧೂಳ್ ಈಸ್ ಆಲ್ಸೋ ಎ ಗ್ರೇಟ್ ಈಕ್ವಲೈಜರ್. ಮತ್ತೆ ಮತ್ತೆ ಓದಿದೆ. - ಟೀನಾ.
ಅಶೋಕವರ್ಧನರೇ ನಗರಧೂಳೇ ಸಮಸ್ಯೆಗೆ ಕಾರಣ, ಅದಕ್ಕೇ ಈ ಜಿಜ್ಞಾಸೆ.
ಟೀನಾ, ಧೂಳು ಸವಿಯುತ್ತೀರಾ! ಹೌದು ಧೂಳೂ ಈಕ್ವಲೈಸರ್! ಥ್ಯಾಂಕ್ಸ್ ಫಾರ್ ರೀಡಿಂಗು
Post a Comment