29.1.13

ಒಂಟಿ ಮಹಿಳೆಯ ಕಯಾಕ್ ಯಾನ!


ಕಯಾಕ್ ಎಂಬ ಚಿಕ್ಕದೋಣಿಯಲ್ಲಿ ಜಗತ್ತು ಸುತ್ತಲು ಹೊರಟವಳು ಈ ಮಹಿಳೆ!
ಜರ್ಮನಿಯಿಂದ ಹೊರಟು ತನ್ನ ತಾಯ್ನಾಡು ಆಸ್ಟ್ರೇಲಿಯಾ ತಲಪುವುದು ಈಕೆಯ ಗುರಿ.
ಹಾಗೆ ಹೊರಟವಳು ಈಗ ಸುತ್ತಾಡುತ್ತಾ ಮಂಗಳೂರು ವರೆಗೆ ಬಂದಿದ್ದಾಗಿದೆ, ಬಂದವಳು ಇಲ್ಲಿನ ಮಾಧ್ಯಮದವರೊಂದಿಗೆ ತನ್ನ ಚಟುವಟಿಕೆ ಬಗ್ಗೆ ಮುಕ್ತವಾಗಿ ಹರಟಿದಳು.
ಈಕೆ ಸ್ಯಾಂಡಿ ರಾಬ್ಸನ್, ಆಸ್ಟ್ರೇಲಿಯಾದ ಪರ್ತ್ ಮಹಿಳೆ. ಕಯಾಕಿಂಗ್ ತರಬೇತಿ ನೀಡುವುದು ಈಕೆಯ ಉದ್ಯೋಗ. 45 ವರ್ಷ ವಯಸ್ಸಿನ ಈಕೆಯ ಮುಖ್ಯ ಗುರಿ ಜರ್ಮನಿಯ ಆಸ್ಕರ್ ಸ್ಪೆಕ್ ಎಂಬಾತ 78 ವರ್ಷ  ಮೊದಲು ಜರ್ಮನಿಯಿಂದ ಆಸ್ಟ್ರೇಲಿಯಾ ವರೆಗೆ ಬಂದ ದಾರಿಯಲ್ಲೇ ಸಾಗಿ ಬರುವುದು. ಆಗ ಆತನಿಗೆ ಈ ಪ್ರಯತ್ನಕ್ಕೆ ತಗಲಿದ್ದು 7 ವರ್ಷ. ಈಕೆ ಅದನ್ನು ಐದು ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದ್ದಾಳೆ.
ತನ್ನ ಕಯಾಕ್ ನಲ್ಲಿ ಸ್ಯಾಂಡಿ ಜಲಯಾನ
2011ರ ಮೇ ತಿಂಗಳಲ್ಲಿ ಸ್ಯಾಂಡಿಯ ಕಯಾಕ್ ಯಾನ ಆರಂಭವಾಗಿದೆ. ನಾನೇನು ದಾಖಲೆ ಬರೆಯುವ ಹುಮ್ಮಸ್ಸಿನಲ್ಲಿ ಕಯಾಕ್ ಮಾಡುತ್ತಿಲ್ಲ, ಬದಲು ಅದರಿಂದ ನನಗೆ ತೃಪ್ತಿ ಸಿಗುತ್ತದೆ, ಆದರೆ ಭಾರತದ ಕರಾವಳಿಯಲ್ಲೇ ಈ ಪ್ರಯಾಣ ಮಾಡಿದರೂ, ಹಾಗೆ ಮಾಡಿರುವ ಮೊದಲ ಮಹಿಳೆ ಎಂಬ ಗರಿಮೆ ನನ್ನದಾಗಬಹುದೇನೋ ಎನ್ನುತ್ತಾಳೆ ಸ್ಯಾಂಡಿ.
ಹಾಗೆಂದು ಏಕಕಾಲಕ್ಕೆ ಈ ಪ್ರಯತ್ನವಲ್ಲ. ವರ್ಷದಲ್ಲಿ 6 ತಿಂಗಳು ದುಡಿಯುತ್ತಾಳೆ, ಮತ್ತೆ ಆರು ತಿಂಗಳು ಈ ಕಯಾಕಿಂಗ್ ಮಾಡುತ್ತಾಳೆ. ಹೀಗೆ ಅನೇಕ ದೇಶಗಳ ಕರಾವಳಿಯ ಮೂಲಕ ಸಾಗಿ ಬಂದ ಸ್ಯಾಂಡಿ ರಾಬ್ಸನ್ ಈಗ ಮಂಗಳೂರಿಗೆ ಬಂದಿದ್ದಾಳೆ.
ತನ್ನ ಪ್ರಯತ್ನದ ಬಗ್ಗೆ ವೆಬ್ ಸೈಟ್ ಹಾಗೂ ಬ್ಲಾಗ್ ನಲ್ಲಿ ಕೆಲ ವಿಚಾರಗಳನ್ನು ಸ್ಯಾಂಡಿ ಹೇಳಿಕೊಂಡಿದ್ದಾಳೆ, ಅಲ್ಲದೆ ದಾನಿಗಳಿಂದ ನೆರವನ್ನೂ ಯಾಚಿಸುತ್ತಾಳೆ.
ಸರಾಸರಿ ದಿನಕ್ಕೆ 40 ಕಿ.ಮೀ ಪ್ರಯಾಣ ಮಾಡುತ್ತೇನೆ, ಭಾರತದಲ್ಲಿ ನವೆಂಬರ್ 24ಕ್ಕೆ ಕೊಚ್ಚಿಯಿಂದ ಪ್ರಯಾಣ ಆರಂಭಿಸಿದ್ದೇನೆ. ಈ ಮಾರ್ಚ್ ವೇಳೆಗ ಪಶ್ಚಿಮ ಕರಾವಳಿ ಮುಗಿಸಿ ಮತ್ತೆ ತಾಯ್ನಾಡಿಗೆ ಮರಳುತ್ತೇನೆ, ಮತ್ತೆ ಬಂದು ಡಿಸೆಂಬರ್ ಒಳಗೆ ಭಾರತದ ಕರಾವಳಿ ಪೂರ್ತಿಯಾಗಿ ಪ್ರಯಾಣಿಸುವೆ ಎಂದು ಸ್ಯಾಂಡಿ ಹೇಳಿದ್ದಾಳೆ.
ಜರ್ಮನಿಯ ದಾನುಬೆ ನದಿ, ಗ್ರೀಸ್, ಟರ್ಕಿ, ಸೈಪ್ರಸ್ ಮೂಲಕ ಭಾರತಕ್ಕೆ ಬಂದವಳೀಕೆ. ಮಹಾರಾಷ್ಟ್ರ, ಕಾರವಾರ, ಗುಜರಾತ್ ಕರಾವಳಿಯಲ್ಲಿ ಪ್ರಯಾಣ ಮಾಡಿದ್ದಾಗಿದೆ.
ನಮ್ಮಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯವೇನೇ ಇರಲಿ, ಭಾರತದ ಕಡಲತೀರದ ವಾಸಿಗಳ ಬಗ್ಗೆ ಸ್ಯಾಂಡಿಗೆ ಗೌರವವಿದೆ. ಭಾರತ ಸುಂದರ ದೇಶ, ಆದರೆ ಕೆಲವು ನಗರಗಳಲ್ಲಿ ಮಾತ್ರ ಸ್ವಚ್ಛತೆ ಕಾಪಾಡಿಕೊಂಡಿಲ್ಲ ಎನ್ನುತ್ತಾಳೆ.ಕಯಾಕ್ ಎಂದರೆ ಚಿಕ್ಕದಾದ ಒಬ್ಬರೇ ಕುಳಿತುಕೊಳ್ಳುವ ದೋಣಿ, ಇದು ಮಗುಚುವುದು ಅಪರೂಪ. ರೇಸಿಂಗ್ ಸ್ಪರ್ಧೆಗೆ ಬಳಸುವುದಕ್ಕೆ, ಸುದೀರ್ಘ ಪ್ರಯಾಣಕ್ಕೆ ಪ್ರತ್ಯೇಕವಾದ ಕಯಾಕ್ ಗಳು ಸಿಗುತ್ತವೆ. ಕಯಾಕ್ ದೋಣಿಗಳಿಗೆ ಕನೋ ಎಂದೂ ಕರೆಯುವುದಿದೆ.ಸ್ಯಾಂಡಿ ಬಳಸುವ ಕಯಾಕ್ ಮಡಚಿ ಬ್ಯಾಗ್ ರೀತಿಯಲ್ಲಿ ಹೆಗಲಿಗೇರಿಸಿಕೊಂಡು ಹೋಗಬಹುದು. ನೀರಿನಲ್ಲಿ ಪ್ರಯಾಣಿಸುವಾಗ, ಅದರೊಳಗೆ ಟೆಂಟ್, ಸ್ಲೀಪಿಂಗ್ ಬ್ಯಾಗ್, ಅಗತ್ಯವಿರುವ ಬಟ್ಟೆಬರೆ, ಆಹಾರ ಇರಿಸಿಕೊಳ್ಳುತ್ತಾಳೆ. ಪ್ರಶಾಂತವಾದ ಕಡಲತೀರದಲ್ಲಿ ಟೆಂಟ್ ಹಾಕಿ ವಿಶ್ರಾಂತಿ ಪಡೆಯುತ್ತಾಳೆ. ಅನೇಕ ಕಡೆಗಳಲ್ಲಿ ಏಕಾಂಗಿ ಮಹಿಳೆ ಎಂದು ಜನ ಕರುಣೆ ತೋರಿ, ತಮ್ಮ ಮನೆಗಳಲ್ಲಿ ವಿಶ್ರಾಂತಿ ಪಡೆಯಲು ಅನುವು ಮಾಡಿಕೊಡುತ್ತಾರೆ. ಅದು ಭಾರತದ ವಿಶೇಷತೆ ಎನ್ನುತ್ತಾಳೆ ಸ್ಯಾಂಡಿ. 

ಸ್ಯಾಂಡಿ ತನ್ನ ಪ್ರಯಾಣದ ಮಧ್ಯೆಯೇ ಪ್ರತಿದಿನದ ಬೆಳವಣಿಗೆ ವಿಶೇಷತೆಗಳನ್ನು ತನ್ನ ವೆಬ್ ಬ್ಲಾಗ್ ನಲ್ಲಿ ದಿನಚರಿ ಮಾದರಿಯಲ್ಲಿ ದಾಖಲಿಸುತ್ತಾಳೆ. ಜರ್ಮನಿ ಬಳಿ ತನ್ನೊಂದಿಗೆ ಬಂದು, ದೋಣಿಯಲ್ಲಿ ಪ್ರಯಾಣಿಸಿದ ನಾಯಿ ಬಗ್ಗೆ, ಗುಜರಾತದಲ್ಲಿ ಆಕೆಯ ವಸ್ತುಗಳನ್ನೇ ಕದ್ದ ಕಹಿ ಅನುಭವದ ಬಗ್ಗೆ ಎಲ್ಲವನ್ನೂ ಹೇಳಿಕೊಂಡಿದ್ದಾಳೆ. ತನಗೆ ನೆರವಾದವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾಳೆ.


 ಸ್ಯಾಂಡಿ ವೆಬ್ ಸೈಟ್ ನೋಡಲು ಇಲ್ಲಿ ಕ್ಲಿಕ್ಕಿಸಿ. 

3 comments:

Anonymous said...

‘ಸ್ಯಾಂಡಿ’ ಚಂಡಮಾರುತದಂತೆ ಗುರಿಯತ್ತ ಮುನ್ನುಗ್ಗಿ ಸಾಗಲಿ.. ಆಕೆಯ ಅಡೆತಡೆಯ ಸವಾಲಿನ ಹಾದಿಯೆಲ್ಲಾ ಸುಗಮವಾಗಿ ಸಾಗಲಿ.. ಆದರೆ ಬಹಳ ಸುಗಮವಾಗಿ ಬೇಡ, ಹಾಗಾದಾಗ ಆಕೆ ಮಹತ್ವಪೂರ್ಣವಾದ ಅನುಭವಗಳನ್ನು ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಆಕೆಯ ಹಾದಿ ತುಂಬಾ ಸುಲಭವಾಗಿರಬೇಕಾಗಿದ್ದರೆ ಆಕೆ ಸಣ್ಣ ನದಿಯನ್ನು ದಾಟಿದರೆ ಸಾಕು!! ಆಕೆಯ ಪಯಣ ಮತ್ತಷ್ಟು ಕುತೂಹಲಕರವಾಗಿ ಮುಂದುವರೆಯಲಿ… ಕಯಾಕ್ ನಂತೆ ಸಂಕೀರ್ಣವಾದ ಸಂದರ್ಭದಲ್ಲಿ ಹೋರಾಡುವ-ಎದುರಿಸಿ ನಿಲ್ಲುವ ಶಕ್ತಿ ಆಕೆಗೊದಗಲಿ.. ಕೆಲವರಿಗಾದರೂ ಆಕೆ ಮಾದರಿಯಾಗಲಿ, ಪ್ರಯತ್ನ ಯಶ್ವಿಯಾಗಲಿ.. ಆಕೆಯಾನುಭವಗಳನ್ನು ಆಕೆಯ ಪಯಣದ ತೀವ್ರತೆಯಂತೆಯೇ ಕಟ್ಟಿಕೊಟ್ಟ; ಆಕೆಯ ಸಾಹಸ ಅದಕ್ಕೆ ಸಿಕ್ಕ ಅಕ್ಷರ ರೂಪ. ವಿಷಯ-ನಿರೂಪಣೆ., ಒಟ್ಟಾರೆ ಬರಹ ಚೆನ್ನಾಗಿದೆ. ಇಂತಹ ಅದೆಷ್ಟೋ ಜನರು ನಮ್ಮ ನಡುವಿದ್ದರೂ ಕೆಲವೊಮ್ಮೆ ತಿಳಿಯುವುದಿಲ್ಲ. ಆಕೆಗೆ ಅಗತ್ಯವಾದ ನೆರವು ಒದಗಲಿ.
ಧನ್ಯವಾದಗಳು.

ಶ್ರೇಯಾಂಕ ಎಸ್ ರಾನಡೆ.

Subrahmanya said...

Wow ! ಆಕೆಯ ಸಾಹಸಕ್ಕೆ ಬೆರಗಾಗಲೇಬೇಕು.

Kalavatimadhisudan said...

visheshavaada mahileyannu parichaisiddakkaagi nimage dhanyavaadagalu.avara saadhaneyalli yashasviyaagali ambudu namma haaraike.

Related Posts Plugin for WordPress, Blogger...