ನನ್ನ ಅಕ್ಷರಗಳನ್ನು ನೋಡಿ, ಛೇ ನನ್ನ ಬರವಣಿಗೆ ಕಲೆಯೇ ಹೋಗಿ ಬಿಟ್ಟಿತೇನೋ ಎಂಬ ವೈರಾಗ್ಯ ಬರತೊಡಗಿತ್ತು.
ಈಗ ತಿಂಗಳ ಹಿಂದೆ ಮಂಗಳೂರಿನ ವಿಜಯ ಪೆನ್ ಮಾರ್ಟಿಗೆ ಹೋಗಿದ್ದಾಗ ಒಳ್ಳೆಯ ಪೆನ್ನು ತೋರಿಸಿ ಎಂದೆ. 150 ರೂ.ನ ಒಂದು ಪೆನ್ ತೋರಿಸಿದರು. ಬಾಯರ್ ಕಂಪನಿಯದ್ದು. ಒಮ್ಮೆ ಅದರಲ್ಲಿ ಗೀಚಿ ನೋಡಿದರೆ ಚೆನ್ನಾಗಿದ್ದಂತೆ ತೋರಿತು.
ಅದು ತಂದ ಬಳಿಕ ಮತ್ತೆ ನನ್ನ ಕೈಬರಹ ಸುಧಾರಿಸುತ್ತಿದೆ.
ಬರೆಯುವುದಕ್ಕೂ ಪೆನ್ನಿಗೂ ಆತ್ಮೀಯ ಸಂಬಂಧವೇ ಇದೆ. ಒಂದು ಒಳ್ಳೆಯ ಪೆನ್ನಿದ್ದರೆ ಬರೆಯುವುದಕ್ಕೆ ಎಷ್ಟು ಖುಷಿಯಾಗುತ್ತೆ ಗೊತ್ತಾ? ನಾನು ಕನ್ನಡಪ್ರಭಕ್ಕೆ 2002ರಲ್ಲಿ ವರದಿಗಾರನಾಗಿ ಸೇರುವ ವೇಳೆಗೆ ಅದಾಗಲೇ ಕಂಪ್ಯೂಟರ್ ಬಂದಾಗಿತ್ತು. ಕಾರ್ಯಕ್ರಮಗಳಿಗೆ ಹೋಗಿ ಬಂದು ಕಾಗದ ಪೆನ್ ಹಿಡಿದು ಬರೆಯಲು ಕುಳಿತರೆ ನಮ್ಮ ಹಿರಿಯ ವರದಿಗಾರರು, ಬರೆಯಲು ಹೋಗಬೇಡಿ, ನೇರವಾಗಿ ಕಂಪ್ಯೂಟರ್ ನಲ್ಲಿ ವರದಿ ಟೈಪಿಸಿ ಎಂದೇ ಆದೇಶಿಸಿ ಬಿಟ್ಟರು.
ಹಾಗೆ ಕಂಪ್ಯೂಟರಿನಲ್ಲಿ ವರದಿ ಟೈಪ್ ಮಾಡುವುದು ಹೆಚ್ಚು ಅಭ್ಯಾಸವಾಗಿ ಬಿಟ್ಟಿತು. ಪಿಯುಸಿ, ಬಿಎ ಪದವಿಯಲ್ಲಿ ನೋಟ್ಸ್ ಬರೆಯುವುದು ಬಹಳ ಆಪ್ತ ವಿಚಾರವಾಗಿತ್ತು. ಹೀರೋ ಶಾಯಿ ಪೆನ್ನಿನನಲ್ಲಿ ಬರೆಯಲು ಕುಳಿತರೆ ಆಹ್ ಅದೆಂತಹಾ ಅನುಭವ!
ಶಾಯಿ ಪೆನ್ನು ಬಿಳಿಯ ಹಾಳೆಯ ಮೇಲೆ ಜಾರುತ್ತಾ ಹೋಗುವಾಗ ಸುಂದರ ಅಕ್ಷರಗಳು ಮೈದಳೆಯುತ್ತಾ ಹೋಗುತ್ತಿದ್ದವು, ಅಂತಹ ನೋಟ್ಸನ್ನು ಓದುವ ಖುಷಿ ಇನ್ನಿಲ್ಲದ್ದು.
ನಾನು ವರದಿಗಾರನಾದ ಬಳಿಕ ಬರೆಯುತ್ತಿದ್ದುದು ಎಂದರೆ ಪುಟ್ಟ ಪಾಕೆಟ್ ನೋಟ್ ಪುಸ್ತಕದಲ್ಲಿ. 10 ರೂ., 20 ರೂ.ಗೆ ಸಿಗುವ ಅದ್ಯಾವುದೋ ಜೆಲ್ ಪೆನ್ನುಗಳು, ಬಳಸಿ ಎಸೆಯುವ ಪೆನ್ನುಗಳಲ್ಲಿ. ಅವುಗಳಲ್ಲಿ ಬರೆಯುವುದರಲ್ಲಿ ಅಷ್ಟೇನು ಮಜಾ ಇಲ್ಲ. ಇನ್ನು ಪುಟ್ಟ ಪುಸ್ತಕಗಳಲ್ಲಿ ನೋಟ್ಸ್ ಮಾಡಿಕೊಳ್ಳುವ ತುರ್ತಿನಲ್ಲಿ ನನ್ನ ಅಕ್ಷರಗಳೋ ಡಾಕ್ಟರುಗಳ ಬರವಣಿಗೆಯಂತಾಗಿತ್ತು.
ಒಮ್ಮೊಮ್ಮೆ ನಾನು ಬರೆದದ್ದು ಏನೆಂಬುದೇ ನನಗೆ ಗೊತ್ತಾಗುತ್ತಿರಲಿಲ್ಲ.
ನಮ್ಮ ಸಹಪಾಠಿ ಹುಡುಗಿಯರಂತೂ ಮುದ್ದಾದ ಉರುಟುರುಟು ಅಕ್ಷರಗಳಲ್ಲಿ ಬರೆಯುತ್ತಿದ್ದರು, ಅದನ್ನು ಮೀರಿಸಲು ನಾವು ಹುಡುಗರಿಗೆ ಸಾಧ್ಯವೇ ಇರಲಿಲ್ಲ, ಆದರೂ ಹುಡುಗಿಯರ ಅಕ್ಷರ ಶೈಲಿ ಬೇರೆ, ಹುಡುಗರ ಅಕ್ಷರ ಶೈಲಿಯ ಗೆಟಪ್ಪೇ ಬೇರೆ.
ಈಗಿನ ವಿದ್ಯಾರ್ಥಿಗಳಿಗೆ ಇದು ಸಿಗುವ ಸಾಧ್ಯತೆ ಕಡಿಮೆ ಯಾಕೆಂದರೆ ರೆಡಿಮೇಡ್ ಪ್ರಿಂಟ್ ಔಟುಗಳು ಬಂದಿವೆಯಲ್ಲ. ಗೂಗಲ್ ಮಾಡಿ ಅದರಲ್ಲಿ ಸಿಕ್ಕದ್ದನ್ನು ಪ್ರಿಂಟು ತೆಗೆದರಾಯ್ತು. ಅಥವಾ ಪಠ್ಯ ಪುಸ್ತಕ ಫೋಟೊ ಕಾಪಿ ಮಾಡಿಕೊಂಡರಾಯ್ತು.
ಪೆನ್ನಿನಲ್ಲೂ ಕೆಲವು ಪೆನ್ನು ಕೆಲವರಿಗೆ ಇಷ್ಟ. ನನ್ನ ಹಿರಿಯ ಮಿತ್ರ, ಹೊಸದಿಗಂತದ ಗುರುವಪ್ಪ ಬಾಳೆಪುಣಿಯವರದ್ದು ಸುಂದರ ಅಕ್ಷರ. ಎಷ್ಟೇ ವೇಗವಾಗಿ ನೋಟ್ಸ್ ಮಾಡಬೇಕಿದ್ದರೂ ಅವರ ಅಕ್ಷರ ಆಕಾರ ಕಳೆದುಕೊಳ್ಳುವುದಿಲ್ಲ. ಅದೇ ರೀತಿ ಇಂಗ್ಲಿಷ್ ನಲ್ಲಿ ಟೈಮ್ಸಾಫ್ ಇಂಡಿಯಾದ ಜಯದೀಪ್ ಶೆಣೈಯವರದ್ದು ಕೂಡಾ ಸುಂದರ ಅಕ್ಷರ . ಇವರಿಬ್ಬರಿಗೂ ಜೆಲ್ ಪೆನ್ ಎಂದರೆ ಖುಷಿಯಂತೆ. ನನಗೆ ಜೆಲ್ ಪೆನ್ ನಲ್ಲಿ ಬರೆಯಲಾಗದು, ಶಾಯಿಯ ಪೆನ್ನು ಇಷ್ಟ. ಹೀರೋ ಪೆನ್ನು ಫೇವರಿಟ್ ಆಗಿತ್ತು. ಆದರೆ ಎರಡು ತಿಂಗಳ ಹಿಂದೆ ಕೊಂಡು ಕೊಂಡ ಹೀರೊ ಪೆನ್ ಸರಿಯಾಗಿ ಬರೆಯುತ್ತಿಲ್ಲ, ಹಾಗಾಗಿ ವಿಜಯಾ ಪೆನ್ನು ಮಾರ್ಟಿಂದ ಕೊಂಡುಕೊಂಡಿರುವ ಬಾಯರ್ ಪೆನ್ ಈಗ ನನ್ನ ಆಪ್ತ ಮಿತ್ರ.
ನೀವು ಬರೆಯುವವರಾಗಿದ್ದರೆ ಒಳ್ಳೆಯ ಪೆನ್ನು ಖರೀದಿಸಿ, ನಿಮ್ಮಮಿತ್ರರು ಬಂಧುಗಳು ಬರೆಯುವ ಹವ್ಯಾಸದವರಿಗೆ ಒಳ್ಳೆಯ ಪೆನ್ನು ಉಡುಗೊರೆ ನೀಡಿ, ಖುಷಿ ಪಡದಿದ್ದರೆ ಮತ್ತೆ ಕೇಳಿ!
8 comments:
ಇಂಕ್ ಪೆನ್ನಿನಲ್ಲಿ ಬರೆಯುವ ಸುಖವೇ ಬೇರೆ ವೇಣು :) ನನ್ನಲ್ಲೂ ಒಂದು ಪಾರ್ಕರ್ ಪೆನ್ನಿದೆ. ಕನ್ನಡವನ್ನು ಬರೆಯುವ ಖುಷಿಗೆ ಹಾಗು ಬರೆಯುವ ಖುಷಿಗೆ ಆಗಾಗ ವಿಷಯ ಇಲ್ಲದೆಯೂ ಸುಮ್ಮನೆ ಬರೆಯುತ್ತಾ ಇರುತ್ತೇನೆ :) ಎರಡು ವರುಷಗಳ ಹಿಂದೆ, ಕೆಲವು ಬ್ಲಾಗಿಗರು ತಾವು ನೇರವಾಗಿ ಟೈಪ್ ಮಾಡುತ್ತೇವೆ, ಹಾಳೆಯ ಮೇಲೆ ಬರೆಯುವುದಿಲ್ಲ ಎಂದಿದ್ದಾಗ ಆಶ್ಚರ್ಯ ಹಾಗು ಮರುಕಗೊಂಡಿದ್ದೆ...
ತುಂಬ ಸತ್ಯವಾದ ಮಾತನ್ನೇ ಬರೆದಿದ್ದೀರಿ!
ನಾನು ಸಣ್ಣವನಿದ್ದಾಗ ಆರಂಭದಲ್ಲಿ ಹಲಗೆ ಬಳಪ, ತುಸು ದೊಡ್ಡವನಾದ ಬಳಿಕ ಪೆನ್ಸಿಲ್, ಇನ್ನೂ ದೊಡ್ಡವನಾದ ಬಳಿಕ ಇಂಕ್ ಪೆನ್ ನಲ್ಲಿ ಬರೆಯುವುದಕ್ಕೆ ಅರ್ಹತೆ ಪಡೆಯುತ್ತಿದ್ದೆವು. ಇಂಕ್ ಪೆನ್ ನಲ್ಲಿ ಬರೆಯುವ ಹಂತಕ್ಕೆ ಬಂದಾಗ ಅದೇನು ಜಂಬ! ಆಗ ಅಪರೂಪವಾಗಿ ದೊರೆಯುತ್ತಿದ್ದ ಬಾಲ್ ಪಾಯಿಂಟ್ ಪೆನ್ನಲ್ಲಿ ಕದ್ದುಮುಚ್ಚಿ ಬೆರೆಯುತ್ತಿದ್ದೆ. ಅದೊಂದು ಸಂತೋಷ! ಆದರೆ ಬಾಲ್ ಪಾಯಿಂಟ್ ಪೆನ್ನಲ್ಲಿ ಬರೆಯಲು ಮೇಷ್ಟ್ರು ಬಿಡುತ್ತಿರಲಿಲ್ಲ. ಅಕ್ಷರ ಹಾಳಾಗುತ್ತದೆ ಎಂಬುದು ಅದಕ್ಕೆ ಕಾರಣ. ಬಾಲ್ ಪಾಯಿಂಟ್ ಪೆನ್ನಲ್ಲಿ ಸಹಿ ಮಾಡಬಾರದು ಎಂಬ ಕಾಲ ಇತ್ತು! ಆದರೆ ಬರುಬರುತ್ತ ಬಾಲ್ ಪಾಯಿಂಟ್ ಪೆನ್ ಖಾಯಂ ಆಯ್ತು. ಇನ್ನು ಮುಂದೆ ನಿಧಾನವಾಗಿ ಅದೂ ಕಣ್ ಮರೆಯಾಗಿ ಇನ್ನೊಂದು ಇಪ್ಪತ್ತೈದು-ಮೂವತ್ತು ವರ್ಷಗಳಲ್ಲಿ ಕಂಪ್ಯೂಟರ್ ನಲ್ಲಿ ಬರೆಯುವುದೇ ನಿಜವಾದ ಬರವಣಿಗೆ ಎಂದಾಗಬಹುದು. ಪೆನ್ಸಿಲ್, ಬಾಲ್ ಪಾಯಿಂಟ್ ಪೆನ್ ಮತ್ತು ಇಂಕ್ ಪೆನ್ ಗಳು ಶೋ-ಕೇಸ್ ವಸ್ತುಗಳಾದಾವು. ಓಲೆಗರಿ ಮತ್ತು ಟಂಕ ಈಗ ಎಲ್ಲಿವೆ? ಬದಲಾವಣೆ ಪ್ರಕೃತಿ ನಿಯಮ. ನಾವು ನಮ್ಮನ್ನು ಸದಾ ಬದಲಾವಣೆಗೆ ಒಡ್ಡಿಕೊಳ್ಳುತ್ತಿರುವುದೇ ಜೀವಂತಿಕೆಯ ಲಕ್ಷಣ. ಇಲ್ಲವಾದರೆ ನಾವೂ ಔಟ್ ಡೇಟ್ ಆಗುವುದರಲ್ಲಿ ಅನುಮಾನವಿಲ್ಲ. ಕಂಪ್ಯೂಟರ್ ನಲ್ಲಿ ಅಕ್ಷರ ಮೂಡಿಸುವ ಎಳೆಯರು ಅತಿಹಿರಿಯ ವಿದ್ವಾಂಸರನ್ನೂ 'ಅನಕ್ಷರಸ್ಥರು' ಎಂದು ಜರೆಯಬಹುದು!
ವಾಸ್ತವವಾಗಿ ನಮಗಿಂತ ನೂರುಪಟ್ಟು ಹೆಚ್ಚು ಪಾರಂಪರಿಕ ತಿಳಿವಳಿಕೆ, ಬದುಕಿನ ಅನುಭವ ಮತ್ತು ಜ್ನಾನ ಇರುವ ಕೃಷಿಕರನ್ನು, ಹಳ್ಳಿಯ ಜನರನ್ನು ಅವಿದ್ಯಾವಂತರು, ಏನೂ ತಿಳಿಯದವರು ಎಂದು ಎಷ್ಟೋ ಮಂದಿ ಹೇಳುವುದನ್ನು ನಾನು ಕೇಳಿದ್ದೇನೆ. ಅದೂ ಕೂಡ ಒಂದು ದೊಡ್ಡ ಜ್ನಾನಕೋಶ. ಅವರಲ್ಲಿರುವ ಕೃಷಿ ಜ್ನಾನ, ಹವೆಬೆಳೆ ಬಗೆಗಿನ ಜ್ನಾನ ಹಾಗೂ ಬದುಕಿನ ಕುರಿತಾದ ಇನ್ನೆಷ್ಟೋ ಜ್ನಾನ 'ಓದಿದವರು' ಎಂದು ಅಹಂಕಾರ ಪಡುವ ನಮ್ಮಲ್ಲಿಲ್ಲ! ಹಾಗಾದರೆ ಜ್ನಾನೆ ಎಂದರೇನು?! ಹಳಬರನ್ನು ಖಂಡಿಸುವ-ಅಲ್ಲಗಳೆಯುವ ಪ್ರವೃತ್ತಿ ಎಲ್ಲ ಕಾಲಘಟ್ಟದಲ್ಲೂ ಆಗುತ್ತಿರುತ್ತದೆ. ನಮ್ಮ ಹಿಂದಿನವರನ್ನು ನಾವು ಅಲ್ಲಗಳೆದೆವು. ನಮ್ಮನ್ನು ನಮ್ಮ ಮುಂದಣ ತಲೆಮಾರು ಅಲ್ಲಗಳೆಯುತ್ತದೆ, ಅವರನ್ನು ಡಿಜಿಟಲ್ ತಂತ್ರಜ್ನಾನದವರು ಅಲ್ಲಗಳೆದಾರು! 'ನಿಮಗೇನೂ ತಿಳಿಯದು' ಎಂದು ಹೀಗಳೆದಾರು.
ವೇಣುವಿನೋದ್ ಅವರ ಪೆನ್ ನ ಮಹಿಮೆ ಇಷ್ಟೆಲ್ಲ ಮಾತಾಡಿಸಿತು. ಇಷ್ಟು ಬರೆದರೂ ನಾನಿನ್ನೂ ಪೆನ್ ನಲ್ಲೇ ಬರೆಯುತ್ತಿದ್ದೇನೆ!
ಕೈ ಬರಹದಿಂದ ಮನಸ್ಸು ತೆರೆಯುತ್ತದೆ ಮತ್ತು ಮನಸ್ಸಿನ ಭಾವೆಯು ಕೈಬರದ ರೂಪವನ್ನು ನಿರ್ದರಿಸುತ್ತದೆ ಎಂದು ನಮ್ಮ ಮೇಸ್ಟ್ರೋಬ್ಬರು ಪದೇ ಪದೇ ಹೇಳುತ್ತಿದ್ದರು.
ಈಗ ಎಸ್.ಎಂ.ಎಸ್ ಮತ್ತು ಕೀಲೀಮಣೆಯಳ ದೆಸೆಯಿಂದ ಕೈಬರಹವು ಬರೀ ಹಸ್ತಾಕ್ಷರದ ಮಟ್ಟಿಗೆ ಇಳಿದುಬಿಟ್ಟಿದೆ. ಒಳ್ಳೆಯ ಪ್ರೇರಕ ಲೇಖನ.
ನಾನು ಕಂಡ ಅತ್ಯುತ್ತಮ ಕೈಬರಗ ಚಲನಚಿತ್ರ ನಿರ್ದೇಶಕ ರವಿ ಶ್ರೀವತ್ಸ ಅವರದು.
http://www.badari-poems.blogspot.in/
ಖಂಡಿತ.. ಹುಡುಗರ ಬರವಣಿಗೆಯ ಖದರೇ ಬೇರೆ. ನಾವು ಎಷ್ಟೇ ಪ್ರಯತ್ನಪಟ್ಟರೂ ಹುಡುಗಿಯರಂತೆ neat & fair ಆಗಿ ಬೆರೆಯುವುದು ತುಸು ಕಷ್ಟ. ತುಂಬಾ ಇಷ್ಟವಾಯಿತು ನಿಮ್ಮ ಈ ಲೇಖನ.. :)
ಥ್ಯಾಂಕ್ಯು ಶರತ್ ನಿಜ ಪೆನ್ನಿನ ಖುಷಿ ಕಂಪ್ಯೂಟರ್ ತರದು..
ಸುನಾಥ್, ಧನ್ಯವಾದಗಳು
ಡಾ.ಪೆರ್ಲ, ಕಂಪ್ಯೂಟರ್ ತಿಳಿದಿದ್ದರೂ ಪೆನ್ನಿನ ಮಹಿಮೆ ಅಲ್ಲಗಳೆಯಲಾಗದು ಎನ್ನುವುದಷ್ಟೇ ನನ್ನ ಲೇಖನದ ಸಾರ :)
ಬದರೀನಾಥರಿಗೆ ವಂದನೆ...ಕೈ ಬರಹದ ವಿಶ್ಲೇಷಕರನ್ನು ಕೇಳಿದರೆ ನಾನಾ ಅರ್ಥ ಹೇಳುತ್ತಾರೆ.
ರಾಘವೇಂದ್ರ ಹೆಗಡೆ, ನೀವಂದಿದ್ದು ನಿಜ :)
ಲೇಖನ ತುಂಬಾ ಇಷ್ಟವಾಯಿತು. ದಿನ ಕಳೆದಂತೆ ಕೈಯಲ್ಲಿ ಬರೆಯೋದು ಮರ್ತೇ ಹೋಗತ್ತೆ. ಒಂದೆರಡು ಪುಟ ಬರೆಯೋದೆ ಎಷ್ಟ್ ದಿನವಾಯಿತು.... ನಿಮ್ಮ ಲೇಖನ ಮತ್ತೆ ಕೈಯಲ್ಲಿ ಬರಿಯೋಕೆ ಪ್ರೇರೇಪಿಸುತ್ತಿದೆ.
ಯಜ್ಞೇಶ್,
ಬರೆಯಿರಿ ಮತ್ತೆ...ಬರವಣಿಗೆಯಲ್ಲಿ ಖುಷಿ ಖಂಡಿತಾ ಇದೆ...
Post a Comment