13.12.14

ಸೈಕಲ್ ಸವಾರಿಯ ಸಂಕಥನ!

ಪೀಠಿಕೆ
ಸೈಕಲ್! ಈ ಮೂರಕ್ಷದ ವಾಹನ ಸರಳ, ಯಾರಿಗೂ ಕಿರಿಕಿರಿ ಎನಿಸದ, ಹೊಗೆಯುಗುಳದ, ಕಾಲಿನ ಮಾಂಸಪೇಶಿಗಳ, ಸ್ನಾಯುಗಳ ಬಲವನ್ನು ಬಯಸುವ ಸೈಕಲ್ ನನಗೆ ಮಾತ್ರವಲ್ಲ, ಬಹುತೇಕ ಎಲ್ಲರಿಗೂ ಚಿಕ್ಕಂದಿನಲ್ಲಿ ಪರಮಪ್ರಿಯ. ಅದರಲ್ಲೂ ಹುಡುಗರಿಗೆ ಮೊದಲ ಲವ್.
ನಾನು ಚಿಕ್ಕಂದಿನಲ್ಲಿ ನೋಡಿದ ಸೈಕಲ್ ಗಳೆಲ್ಲಾ ಬಹಳ ಸರಳ. ಎರಡು ಟೈರು, ಅದನ್ನು ಜೋಡಿಸುವ ಕಬ್ಬಿಣದ ತ್ರಿಭುಜ ಪಟ್ಟಿ. ಚೈನ್, ಪೆಡಲ್, ಅದನ್ನು ಹಿಡಿದಿರಿಸುವ ಹಲ್ಲಿರುವ ಚಕ್ರ, ಅಂಥದ್ದೇ ಇನ್ನೊಂದು ಹಿಂದಿನ ಚಕ್ರ, ಒಂದು ಮರದ ತುಂಡಿನಂತೆಯೇ ಭಾಸವಾಗುವ ಸೀಟು ಅಷ್ಟೇ.
ಅಂಚೆಯಣ್ಣನಿಂದು ಹಿಡಿದು ಮಾಸ್ಟರರ ವರೆಗೆ, ಪುರೋಹಿತರಿಂದ ಹಿಡಿದು ಮರಕಡಿಯಲು ಬರುವ ಅಬ್ಬುಬ್ಯಾರಿಯ ವರೆಗೂ ಎಲ್ಲರಿಗೂ ಸಮಾನತೆ ಒದಗಿಸಿದ್ದು ಸೈಕಲ್.
ನನಗೂ ಸೈಕಲ್ ಮೇಲೆ ಪ್ರೀತಿ ಹುಟ್ಟಿದ್ದು ನಾನು ಎಂಟನೇ ತರಗತಿಯಲ್ಲಿರುವಾಗ. ಪಿಯರ್ ಅಟ್ರಾಕ್ಷನ್ ಅಥವಾ ಓರಗೆಯ ಮಕ್ಕಳಿಂದ ಸಹಜವಾಗಿ ನನಗೂ ಸೈಕಲ್ ಕಲಿಯುವ ಆಸೆ ಹುಟ್ಟಿತ್ತು. ಆಗ ಶಾಲೆ ಬಳಿಯ ಮಾರ್ಸೆಲ್ ಸೋಜರ ಅಂಗಡಿಯಲ್ಲಿ ಹೊಸದಾಗಿ ಬಂದ ಹೀರೋ ಜೆಟ್ ಸೈಕಲ್ ಗಳು ಇತರ ಸೈಕಲ್ ನಂತೆಯೇ ಇದ್ದರೂ ಹೊಸ ಮಾದರಿಯ ವರ್ಣದಲ್ಲಿ ಕಂಗೊಳಿಸುತ್ತಿದ್ದವು. 2 ರೂಪಾಯಿ ಬಾಡಿಗೆ ಕೊಟ್ಟರೆ ಒಂದು ಗಂಟೆ ಸೈಕಲ್ ತುಳಿಯಬಹುದು. ಅಂಥದ್ದರಲ್ಲೇ ಎದ್ದು ಬಿದ್ದು ಸೈಕಲ್ ಕಲಿತಿದ್ದಾಯ್ತು.
ನನಗೂ ಒಂದು ಸೈಕಲ್ ಬೇಕೆಂಬ ಹಂಬಲ ಸಸಿಯಾಗಿ ಹುಟ್ಟಿಕೊಳ್ಳುವಾಗ ಎಸ್ಸೆಸ್ಸೆಲ್ಸಿಯಲ್ಲಿದ್ದೆ. ಈಗಲಾದರೆ ಮಕ್ಕಳು ನಡೆಯುವ ಮೊದಲೇ ಒಂದು ತ್ರಿಚಕ್ರ ಸೈಕಲ್, ಅದು ಹಳತಾಗುವ ಮೊದಲೇ ಚಿಕ್ಕ ಗಾಲಿ ಸಹಾಯ ಇರುವ ಸೈಕಲ್ ಬಂದಿರುತ್ತಿದ್ದವು. ನಾನು ಚಿಕ್ಕವನಿದ್ದಾಗ ಆಸೆಗಳನ್ನು ಈಡೇರಿಸುವುದು ಮನೆಯವರಿಗೂ ಕಷ್ಟವೇ. ಆದರೂ ನನ್ನೆಲ್ಲ ಆಕಾಂಕ್ಷೆಗಳಿಗೆ ಬೆಳಕಿಂಡಿಯಾಗಿದ್ದ ನನ್ನ ಚಿಕ್ಕಮ್ಮ ಎಸ್ಸೆಸ್ಸೆಲ್ಸಿಯಲ್ಲಿ ಉತ್ಕೃಷ್ಟ ಶ್ರೇಣಿಯಲ್ಲಿ ಗಂಟಲಿನಲ್ಲಿಳಿಯದ ಕಡುಬಾದ ಗಣಿತದಲ್ಲಿ 70ಕ್ಕಿಂತ ಹೆಚ್ಚು ಗಳಿಸಿದರೆ ಸೈಕಲ್ ಕೊಡಿಸುವುದಾಗಿ ಆಶ್ವಾಸನೆಯಿತ್ತರು. ಆದರೆ ಅದರ ಕನಸಿನಲ್ಲಿ ಮುಳುಗಿಯೋ ಏನೋ ನನಗೆ ಪ್ರಥಮ ದರ್ಜೆ ಗಳಿಸಲಷ್ಟೇ ಸಾಧ್ಯವಾಯಿತು. ಗಣಿತದಲ್ಲಂತೂ ಜಸ್ಟ್ ಪಾಸು!
ಹಾಗಾಗಿ ಸೈಕಲ್ ಗಗನ ಕುಸುಮವಾಗಿಯೇ ಉಳಿಯಿತು.
18 ವರ್ಷ ಬಳಿಕ
ಅಲ್ಲಿಂದ ಕಾಲೇಜು ಪ್ರವೇಶ, ಓದಿನ ಅರಮನೆ ಪ್ರವೇಶಿಸಿದ ಬಳಿಕ ಸೈಕಲ್ ನಂತಹ 'ಕ್ಷುಲ್ಲಕ' ವಿಚಾರಗಳಿಗೆಲ್ಲ ಎಡೆಯಿಲ್ಲ!
ಹಾಗಾಗಿ ಅದು ಮರೆತೇ ಹೋಯ್ತು. ಉದ್ಯೋಗ ಸಿಕ್ಕ ಬಳಿಕ ಬೈಕ್ ಕೊಳ್ಳುವ ಹಂಬಲ. ಸ್ಪ್ಲೆಂಡರ್ ಬಂತು, ಅದು ಹೋಗಿ ಸುಝುಕಿ ಹೀಟ್ ಬಂತು, ನಂತರ ಸುಜುಕಿ ಜಿಎಸ್ 150 ಬಂತು.
ಇವೆಲ್ಲ ಬಂದರೂ ದಿಢೀರ್ ಆಗಿ ಹುಟ್ಟಿಕೊಂಡ ಯೋಚನೆ ಸೈಕಲ್ ನದ್ದು. ವಯಸ್ಸಿನೊಂದಿಗೇ ಕಾಣಿಸಿಕೊಳ್ಳುತ್ತಿದ್ದ ನಸುಮಂದಗತಿ, ನನಗೂ ವಯಸ್ಸಾಗುತ್ತಿದೆಯೇ ಎಂದು ಯೋಚಿಸುವಂತೆ ಮಾಡುತ್ತಿದ್ದ ದೇಹ, ಇದೆಲ್ಲದಕ್ಕೂ ನಿಯಂತ್ರಣ ಹೇರುವುದಾದರೆ ಅದು ಸೈಕಲ್ನಿಂದಲೇ ಎಂದು ಸೈಕಲ್ ಕೊಂಡು ಬಿಟ್ಟೆ.
ತೈವಾನ್ ಕಂಪನಿ ಮೆರಿಡಾ ಅದ್ಭುತವೆನಿಸುವ ಗಿಯರು ಸಹಿತ ಸೈಕಲ್ ಗಳನ್ನು ಉತ್ಪಾದಿಸುತ್ತದೆ. ಅದರಲ್ಲಿ ಒಂದು ಮಾದರಿಯನ್ನು ನಾನು ಕೊಂಡುಕೊಂಡೆ, ತೆಗೆದುಕೊಂಡ ಒಂದು ತಿಂಗಳಲ್ಲಿ ಬಹಳ ಮಜವಾದ ಅನುಭವ ಕೊಟ್ಟಿದೆ...ಸೈಕ್ಲಿಂಗ್ ಅನುಭವಗಳನ್ನು ಮುಂದಿನ ಸಂಚಿಕೆಗಳಲ್ಲಿ ಕಟ್ಟಿಕೊಡಲಿದ್ದೇನೆ...
ರಾತ್ರಿ 10.45 ಶುಭರಾತ್ರಿ!4 comments:

sunaath said...

ಮುಂದಿನ ಸಂಚಿಕೆಗಾಗಿ ಕಾಯುತ್ತೇನೆ. ಶುಭರಾತ್ರಿ!

Ashoka Vardhana said...

ಬಳ್ಳಾರಿಯಲ್ಲಿ ಅಪ್ಪನಿಗೆ ಕಾಫಿ ಒಯ್ಯಲು ಬರುತ್ತಿದ್ದ ಮೊಯ್ನುದ್ದೀನ್ ಬಳಿ ನಾನು ಸೈಕಲ್ ಕಲಿತದ್ದು, ಶಾಲೆಗೆ ನಡೆಯುವ ರೈಲ್ವೆ ಹಳಿಯ ಪಕ್ಕದ ಕಾಲ್ದಾರಿಯಲ್ಲಿ ಸೈಕಲ್ ಹೇಗೆ ಒಯ್ಯಬಹುದೆಂದು ಯೋಜನೆ ಹಾಕಿದ್ದೆಲ್ಲಾ ನೆನಪಿಗೆ ಬಂತು.

Badarinath Palavalli said...

ಯವ್ವನದ ಕನಸುಗಳ ಸಾರಥಿ ನಮ್ಮ ಸೈಕಲ್ಲು...
ಮುಂದಿನ ಸಂಚಿಕೆಗಾಗಿ ನಾವೂ ಕಾಯುತ್ತಿದ್ದೇವೆ.

shared at:
https://www.facebook.com/photo.php?fbid=602047969839656&set=gm.483794418371780&type=1&theater

KRISHNA said...

interesting and atmeeeya niroopane, go ahead with your experinces:)

Related Posts Plugin for WordPress, Blogger...