Showing posts with label ಹೆದ್ದಾರಿ ಕಥೆಗಳು. Show all posts
Showing posts with label ಹೆದ್ದಾರಿ ಕಥೆಗಳು. Show all posts

9.8.16

ಆಗುಂಬೆಗೊಂದು ಸೈಕಲ್ ಸವಾರಿ

ಮುಂಗಾರು ಮಳೆ ಶುರುವಾದ ಬಳಿಕ ಸೈಕಲ್ ತೆಪ್ಪಗೆ ಬದಿಯಲ್ಲಿ ಮಲಗಿತ್ತು...ಹಾಗೇ ನಾನೂ....

ಕಳೆದ ಎರಡ್ಮೂರು ತಿಂಗಳಿಂದ ಭೋರಿಡುವ ಮಳೆಯಲ್ಲಿ ತೋಯುತ್ತಾ ಸೈಕಲ್ ಮಾಡುವ ಆಸೆಯಿದ್ದರೂ ವಿವಿಧ ಕಾರಣಗಳಿಂದ ಎಲ್ಲೂ ದೂರ ಹೋಗಲಾಗಿರಲಿಲ್ಲ. ಕಳೆದ ಬೇಸಿಗೆಯಲ್ಲೇ ಚಿನ್ಮಯ ದೇಲಂಪಾಡಿ ಮಾನ್ಸೂನ್ ಸವಾರಿ ಹೋಗಲೇಬೇಕು ಎಂದು ಹಕ್ಕೊತ್ತಾಯ ಮಾಡಿದ್ದೂ ಆಗಿತ್ತು..

ನಮ್ಮ ಯಾವತ್ತಿನ ಸೈಕಲ್ ಗುರು ಅಶೋಕವರ್ಧನರು ಕೌಟುಂಬಿಕ `ನಿರೀಕ್ಷಣಾ' ಕಾರಣಕ್ಕಾಗಿ ಈ ಬಾರಿ ನಾನಿಲ್ಲ, ನೀವು ಹೋಗಿಬನ್ನಿ ಎಂದು ಬಿಟ್ಟರು, ನಾನು ಬರುವೆ ಎಂದು ಮೊದಲು ಹೇಳಿದ್ದ ಅಭಿ ಭಟ್ ಕೂಡಾ ಕಾರ್ಯದೊತ್ತಡಕ್ಕೆ ಮಣಿದು ಸರಿಯಾಗಿ ಅಭ್ಯಾಸ ಮಾಡಲಾಗದೆ ಕೈಚೆಲ್ಲಿದ.

ಉಳಿದದ್ದು ಚಿನ್ಮಯ ಹಾಗೂ ನಾನು ಮಾತ್ರ. ಸೋಮೇಶ್ವರದಿಂದ ಎತ್ತರಕ್ಕೇರಿ ಆಗುಂಬೆ ತಲಪುವುದು ಎಂದರೆ ಸಮುದ್ರಮಟ್ಟದಿಂದ 11 ಕಿ.ಮೀ ಭಾಗವನ್ನು ಏರಲು ಸುಮಾರು 800 ಮೀಟರ್ ಔನ್ನತ್ಯ ಸಾಧಿಸಬೇಕು. ಈ ಮೊದಲು ಕುದುರೆಮುಖ ಹಾಗೂ ಚಾರ್ಮಾಡಿ ಘಾಟಿಯಲ್ಲಿ ಇದಕ್ಕಿಂತ ಹೆಚ್ಚಿನ ಎತ್ತರವೇರಿದ ಅನುಭವ ಕಾಲುಗಳಿಗಿತ್ತಾದರೂ ಇತ್ತೀಚೆಗೆ ಎರಡು ತಿಂಗಳಿಂದ ಸ್ನಾಯುಗಳು ವಿಶ್ರಾಂತಿಯಲ್ಲಿದ್ದ ಭೀತಿ ಮಾತ್ರ ಇದ್ದೇ ಇತ್ತು. ಬೈಕಲ್ಲೋ ಕಾರಲ್ಲೋ ಆದರೆ ಪೆಟ್ರೋಲ್ ತುಂಬಿ ಗಿಯರು ಹಾಕಿ ಆಕ್ಸಿಲೇಟರ್ ಒತ್ತಿದರೆ ಬೇಕಾದಲ್ಲಿ ತಲಪುತ್ತದೆ. ಸೈಕಲ್ ನಲ್ಲಿ ಮಾತ್ರ ಹಾಗಲ್ಲ, ದೂರ ಸವಾರಿಗೆ ನಮ್ಮ ದೇಹ ಸಿದ್ಧವಿಲ್ಲವಾದರೆ ಸ್ನಾಯು ಸೆಳೆತವೋ, ವಿಪರೀತ ಆಯಾಸವೋ ಆಗಿ ಅರ್ಧಕ್ಕೇ ಪ್ರಯಾಣ ಕೈಬಿಡಬೇಕಾಗಿ ಬರುವುದುಂಟು.
ಅದೋ ಅಲ್ಲಿ ಆಗುಂಬೆ
ಒಂದೆರಡು ಬಾರಿ ಮನೆ ಹತ್ತಿರದಲ್ಲೇ ರೈಡ್ ಮಾಡಿ ಬಂದದ್ದಷ್ಟೇ ನನ್ನ ಈ ಬಾರಿಯ ತಯಾರಿ. ಚಿನ್ಮಯನೂ ಹೆಚ್ಚೇನೂ ತಯಾರಿ ಮಾಡಿರಲಿಲ್ಲ. ಸಮಯದ ಅಭಾವ ಇದ್ದಕಾರಣ ಮಣಿಪಾಲ ವರೆಗೆ ಸೈಕಲ್ಗಳನ್ನು ಕಾರಿನಲ್ಲೇರಿಸಿಕೊಂಡು ಹೋಗಿ ಶನಿವಾರ ರಾತ್ರಿ ಅಲ್ಲಿದ್ದು ಭಾನುವಾರ ಮುಂಜಾನೆ ಸೈಕಲ್ಲೇರುವುದು ನಮ್ಮ ಯೋಜನೆ. ಅದರಂತೆಯೇ ಭಾನುವಾರ ನಸುಕು ಹರಿಯುವ ವೇಳೆಗೆ ನಮ್ಮಿಬ್ಬರ ಸವಾರಿ ಮಣಿಪಾಲ ಬಿಟ್ಟಿತು. ಹದವಾದ ಮಳೆಯಿಂದ ಇಳೆ ತಂಪಾಗಿತ್ತು. ಖಾಲಿ ಹೊಟ್ಟೆಯಲ್ಲಿ ಸೈಕಲ್ ತುಳಿಯಬಾರದು, ಹಾಗಾಗಿ ಹೊಟೇಲೊಂದರಲ್ಲಿ ಹಗುರ ತಿಂಡಿ, ಚಹಾ ಸೇವಿಸಿ ಮುಂದುವರಿದೆವು.

ಅರಣ್ಯಭಂಗ
ಪೆರ್ಡೂರು ಭಾಗವಾಗಿ ಹೋಗುವಾಗ ಇಕ್ಕೆಲಗಳಲ್ಲು ತಂಪು ನೀಡುತ್ತಿದ್ದ ಮರಗಳೆಲ್ಲಾ ಧರಾಶಾಯಿಯಾಗಿ ಬಿದ್ದಿರುವುದು ಕಂಡುಬಂತು! ಕೆಲದಿನಗಳ ಹಿಂದೆ ಬಂದ ಭಾರೀ ಸುಂಟರಗಾಳಿಯ ಪ್ರಭಾವದಿಂದ ಈ ಗತಿ. ಅತೀವ ಬೇಸರ ತರುವ ದೃಶ್ಯವನ್ನು ನೋಡುತ್ತಾ ಮುಂದುವರಿದೆವು. ಕೆಲಹೊತ್ತಿನಲ್ಲೇ ಹೆಬ್ರಿ ತಲಪಿದೆವು. ಸೋಮೇಶ್ವರದಲ್ಲಿ ನಮ್ಮ ಉದರ ತುಂಬುವ ಯೋಜನೆ ಮೊದಲಿದ್ದರೂ, ಬಳಿಕ ಘಾಟಿಯೇರುವಾಗ ತೊಂದರೆ ಬೇಡವೆಂದು ಹೆಬ್ರಿಯಲ್ಲೇ ಸೇಮಿಗೆ, ನೀರುದೋಸೆ ತಿಂದು ಮುಂದುವರಿದೆವು. ಚೆನ್ನಾಗಿ ಸೈಕಲ್ ಹಾಗೂ ನಮ್ಮ ಕಾಲುಗಳ ಹೊಂದಾಣಿಕೆಯಾಗಿ ಮೈಬಿಸಿಯೇರಿದ್ದರಿಂದ ಸೋಮೇಶ್ವರದಲ್ಲಿ ಹೆಚ್ಚು ಸಮಯ ವ್ಯರ್ಥಗೊಳಿಸದೆ ನೇರವಾಗಿ ಮಿಶನ್ ಆಗುಂಬೆ ಶುರುವಿಟ್ಟೆವು.
ಪೆರ್ಡೂರು ಸಮೀಪ ಧರಾಶಾಯಿಯಾದ ಮರಗಳು

ಮೊದಲ ಚರಣದಲ್ಲಿ ಸುಂದರ ರಸ್ತೆ ನಮ್ಮ ನೆರವಿಗೆ ಬಂತು. ಏರು ದಾರಿಯಾದ್ದರಿಂದ ಸುಲಭ ಗಿಯರ್ ಹಾಕಿ ಪೆಡಲುತ್ತಾ ಸಾಗುತ್ತಿದ್ದರೆ ಫೋರ್ ವೀಲ್ ಡ್ರೈವಿನ ಎಸ್ ಯೂ ವಿ ವಾಲಾಗಳು ನಮ್ಮನ್ನು ಅನುಕಂಪದಿಂದಲೋ ಹೀಯಾಳಿಕೆಯಿಂದಲೂ ನೋಡುತ್ತಾ ಸಾಗುತ್ತಿದ್ದರು. ಬದಿಯಲ್ಲೊಂದು ಮಳೆಗಾಲದ ವಿಶೇಷ ಕಿರು ಜಲಧಾರೆ ಕಣ್ತುಂಬಿಕೊಳ್ಳುವುದಕ್ಕೆಂದು ನಿಲ್ಲಿಸಿ ಎರಡು ಫೊಟೊ ತೆಗೆದಾಗಿತ್ತು. ಅಷ್ಟೊತ್ತಿಗೆ ಮಳೆ ಜೋರು.ಉದ್ದೇಶದಂತೆಯೇ ಮಳೆಯಲ್ಲೇ ನೆನೆಯುತ್ತಾ ಒಂದೊಂದೇ ಹಿಮ್ಮುರಿ ತಿರುವುಗಳಲ್ಲಿ ಉಸ್ಸಪ್ಪಾ ಮಾಡುತ್ತಾ ಏರಿದೆವು. ಕುದುರೆಮುಖ ಏರಿನಲ್ಲಾದರೆ ನೇರವಾಗಿ ಏರುತ್ತಾ ಸಣ್ಣ ತಿರುವುಗಳಲ್ಲಿ ಸಾಗಬೇಕು, ಆದರೆ ಆಗುಂಬೆಯಲ್ಲಿ ಸೈಕ್ಲಿಸ್ಟ್ ಗಳಿಗೆ ಸವಾಲು ದೊಡ್ಡ ಹಿಮ್ಮುರಿ ತಿರುವುಗಳು.
ಹಿಮ್ಮುರಿ ತಿರುವೊಂದರಲ್ಲಿ

ಮಳೆಗಾಲದಲ್ಲಿ ಆಗುಂಬೆಯಲ್ಲಿ ಇಂತಹ ದೃಶ್ಯ ಸಾಮಾನ್ಯ

ಮಂಜಿನಲ್ಲಿ ಘಾಟಿಯೇರುವ ಮಜಾ

ಸೈಕಲ್ ತುಳಿಯುತ್ತಾ ಏರುದಾರಿಗೆ ಕಾಲುಗಳು ಹೊಂದಾಣಿಕೆ ಮಾಡಿಕೊಂಡವು ಎನ್ನುವಷ್ಟರಲ್ಲೇ ಸಿಗುವ ಹಿಮ್ಮುರಿ ತಿರುವು ಒಮ್ಮೆಗೇ ಬ್ರೇಕ್ ಹಾಕುತ್ತದೆ. ಮತ್ತೆ ಕಾಲುಗಳಿಗೆ ಒತ್ತಡ ಹೆಚ್ಚು. ಇದರಲ್ಲೇ ನಮ್ಮ ಲಯವನ್ನು ಕಾಯ್ದುಕೊಂಡು ಹೋಗುವುದು ಸೈಕಲ್ ಸವಾರನ ಚಾಕಚಕ್ಯತೆಯ ನಿಜ ಪರೀಕ್ಷೆ.
ಮೊದಲ ಮೂರ್ನಾಲ್ಕು ತಿರುವು ಕಳೆದ ಬಳಿಕ ಆಗುಂಬೆಯ ಹಳೆಯ ರಸ್ತೆಯೇ ಗತಿ! ಒಡಕಲು ಕಾಂಕ್ರೀಟ್ ರಸ್ತೆಯಲ್ಲಿ ಗಡ ಗಡ ಸವಾರಿ. ಮೇಲೇರುತ್ತಿದ್ದಂತೆಯೇ ಆಗುಂಬೆಯ ಮಂಜು ದರ್ಶನ. ಸೈಕಲ್ ಮುಂದೆ `ತಲೆದೀಪ' ಹಾಗೂ ಹಿಂದೆ `ಬಾಲದೀಪ' ಮಿನುಗಿಸುತ್ತಿದ್ದೆವು, ಇಲ್ಲವಾದರೆ ಮಂಜಿನ ನಡುವೆ ವೇಗವಾಗಿ ಬರುವ ವಾಹನಗಳಿಗೆ ನಾವು ಸುಲಭ ತುತ್ತು. ಆಗುಂಬೆಯ ಸೂ ರ್ಯಯಾಸ್ತ ಸವಿಯಲು ಕಟ್ಟಿಸಿರುವ ವೀಕ್ಷಣಾ ತಾಣ ಪೂರ್ತಿ ಮಂಜುಮಯ. ನಮ್ಮ ಆಗಮನ ಸಾಕ್ಷೀಕರಿಸಲು ಅಲ್ಲೊಂದು ಫೊಟೊ ಕ್ಲಿಕ್ಕಿಸಿ ಮುಂದುವರಿದೆವು.

ಅಲ್ಲೊಂದಿಷ್ಟ್ ಜನಾ...
ಜಿಲ್ಲಾ ಗಡಿಯಲ್ಲಿರುವ ತಪಾಸಣಾ ಠಾಣೆ ದಾಟಿ ಮುಂದುವರಿದಾಗ ಅರರೆ....ದೂರದಲ್ಲಿ ಬದಿಯಲ್ಲಿ ಕೆಂಪು ಬಿಳಿ ಪುಟ್ಟ ದೀಪಗಳು ಮಿನುಗುತ್ತಿವೆ...ನೋಡಿದರೆ ನಮ್ಮ ಹಾಗೆಯೇ ಮೂವರು ಸೈಕಲ್ ಸವಾರರು. ಹೋಗಿ ಮಾತನಾಡಿದಾಗ ಅವರು ಬೆಂಗಳೂರಿನವರೆಂದೂ, ಹೊರನಾಡಿಗೆ ಬಸ್ಸಲ್ಲಿ ಸೈಕಲ್ ತುಂಬಿಕೊಂಡು ಬಂದು, ಅಲ್ಲಿಂದ ಆಗುಂಬೆಗೆ ಬಂದವರೆಂದೂ ತಿಳಿಯಿತು. ಅರೆಕನ್ನಡದಲ್ಲಿ ಮಾತನಾಡಿದ ಅಖಿಲೇಶ್, ಅಜಯ್ ಹಾಗೂ ಶ್ರೀವಿಜಯರಿಗೆ ವಿದಾಯ ಹೇಳಿ ನಾವು ಮುಂದುವರಿದೆವು.
ಬೆಂಗಳೂರಿನ ಸೈಕಲ್ಲಿಗರೊಂದಿಗೆ ಆಗುಂಬೆಯಲ್ಲಿ
ಸೋಮೇಶ್ವರ ವ್ಯಾಪ್ತಿ ಮುಗಿದು ಔéಷಧವನ ದಾಟಿ ಮುಂದೆ ಹೋದಾಗ ಬಲಬದಿಯಲ್ಲಿ ಮಣ್ಣು ರಸ್ತೆಯೊಂದು ಹೋಗುತ್ತಿದ್ದುದು ಕಂಡಿತು ಒಳಗೆ ಸುಂದರ ಹುಲ್ಲುಗಾವಲು ಕಾಣಿಸಿತು, ಇರಲಿ ಹಿಂದೆ ಬರುವಾಗ ಪೊಟೊ ತೆಗೆದರಾಯ್ತು ಎಂದು ಮುಂದುವರಿದೆವು. ಅಂತೂ ಆಗುಂಬೆ ಬಂತು. ಹೊಟ್ಟೆ ತಾಳ ಹಾಗುತ್ತಿತ್ತು, ಹಾಗಾಗಿ ಮಯೂರ ಹೊಟೇಲಲ್ಲಿ ಉದರ ಪೋಷಣೆ ಮಾಡಿದೆವು. ಹೊರಗೆ ಸೋನೆಮಳೆ ಸುರಿಯುತ್ತಲೇ ಇತ್ತು. ಮತ್ತೆ ಆಗುಂಬೆಯಲ್ಲೇ ಒಂದು ರೌಂಡ್ ಹೊಡೆದು ಊರು ದರ್ಶನ ಮಾಡಿಕೊಂಡು ಮೊದಲೇ ನೋಡಿದ್ದ ಹುಲ್ಲುಗಾವಲಲ್ಲಿ ಫೊಟೋಶೂಟ್ ಮಾಡುವ ಎಂದು ಹೊರಟಾಗ ಮಳೆ ಜೋರಾಯಿತು.
ಆಗುಂಬೆ ದೃಶ್ಯಾವಳಿ - 1

ಆಗುಂಬೆ ದೃಶ್ಯಾವಳಿ - 2
 ಆಗುಂಬೆಯ ಸಾಂಪ್ರದಾಯಿಕ ಹಳೆಯ ಹೆಂಚಿನ ಮನೆಗಳು ಮಂಜು ಸುರಿಯುವಾಗ ಕಟ್ಟಿಕೊಡುವ ದೃಶ್ಯಾವಳಿ ಕಲಾವಿದರು, ಆ ಮನಸ್ಸಿನವರೆಲ್ಲರಿಗೂ ಸ್ಫೂರ್ತಿ. ಅದನ್ನು ಪದಗಳಿಂದ ಕಟ್ಟಿಡಲೂ ಆಗದು. ಅಂತಹ ಒಂದು ಮನೆಯ ಮುಂಗಟ್ಟಿನ ಅಡಿಯಲ್ಲಿ ತಾತ್ಕಾಲಿಕ ಆಸರೆ ಪಡೆದು ಮಳೆ ತುಸು ಹಗುರವಾದಂತೆಯೇ ಮುಂದ್ಹೋದೆವು.
ಎರಡು ಮೆರಿಡಾಗಳು

ನೋಡಿದೆನು ನಾ... ನೋಡಿದೆನು ನಾ ...
ಅದೇ ಹುಲ್ಲುಗಾವಲು ಅಂದೆನಲ್ಲಾ, ಅದೇ ದಾರಿಯತ್ತ ಸಾಗಿದೆವು.
ನಾವಂದುಕೊಂಡಂತೆಯೇ ಪಚ್ಚೆಹಸಿರಿನ ಹುಲ್ಲುಹಾಸು ಸ್ವಾಗತಿಸಿತು...ಮುಂದೆ...ನೋ.ಡಿ.ದ.ರೆ.....
ಆಗುಂಬೆಯ ಕಸಕಡ್ಡಿ ತ್ಯಾಜ್ಯವೆಲ್ಲಾ ಅಲ್ಲೇ ಅಡರಿಕೊಂಡಿದೆ!
ಇದಕ್ಕೆ ವಿವರಣೆ ಬೇಡ!
ಇಡೀ ಆಗುಂಬೆಯಿಂದ ಉತ್ಪಾದನೆಯಾಗುವ ತ್ಯಾಜ್ಯವನ್ನೆಲ್ಲಾ ತಂದು ಎಸೆಯುವ ಜಾಗವಾಗಿ ಅದು ಮಾರ್ಪಟ್ಟಿತ್ತು! ಅದುವರೆಗೆ ನೋಡದ ಆಗುಂಬೆಯ ದರ್ಶನವೂ ಆಯಿತು. ಕಸಕಡ್ಡಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವಿಧಾನಗಳೆಲ್ಲಾ ನಮ್ಮಲ್ಲಿ ಇವೆ. ಎಷ್ಟೋ ಗ್ರಾಮಗಳಲ್ಲಿ ಚಾಲ್ತಿಯಲ್ಲಿದೆ ಕೂಡಾ. ಅದನ್ನು ಅಳವಡಿಸುವುದು ಬಿಟ್ಟು ಆಗುಂಬೆಯನ್ನು ಕಸದ ತಾಣವಾಗಿ ಮಾಡಿದ್ದು ನೋಡಿ ಆದ ನೋವನ್ನು ಹಂಚಿಕೊಳ್ಳುತ್ತಾ ಇಳಿಯುವಾಗ ಚಿನ್ಮಯನ ಸೈಕಲ್ನ ಪ್ರಮುಖ ಭಾಗ ಫ್ರೀವೀಲ್ನಲ್ಲೇನೋ ದೋಷ ಕಂಡುಬಂತು. ಪೆಡಲ್ ಮಾಡಿದರೂ ಸೈಕಲ್ ಮುಂದೋಡುತ್ತಿರಲಿಲ್ಲ. ಅಲ್ಲಿಂದ ಇಳಿಜಾರಾದ ಕಾರಣ ಜಾಗರೂಕತೆಯಿಂದ ಸೋಮೇಶ್ವರ ವರೆಗೂ ತಲಪಿದೆವು. ಅಲ್ಲಿಂದ ಬಸ್ನಲ್ಲೋ ಟೆಂಪೋದಲ್ಲಾದರೋ ಸೈಕಲ್ ಹಾಕಿಕೊಂಡು ಹೋಗೋಣ ಎಂದು ಅಂದುಕೊಂಡೆವು. ಆದರೆ ಆಗುಂಬೆದಾರಿಯಲ್ಲಿರುವುದು ಹೆಚ್ಚಿನವೂ ಮಿನಿಬಸ್ಗಳು, ಅದರಲ್ಲಿ ಜಾಗದ ಕೊರತೆ. ಮಧ್ಯಾಹ್ನವಾದ್ದರಿಂದ ಹೆಚ್ಚು ವಾಹನಗಳಿರಲಿಲ್ಲ. ಹಾಗಾಗಿ ಏರುದಾರಿಯಲ್ಲಿ ಇಳಿದು ತಳ್ಳುತ್ತಾ ಇಳಿಜಾರಲ್ಲಿ ಸೈಕಲ್ಲೇರುತ್ತಾ ಚಿನ್ಮಯ ಹಿಂಬಾಲಿಸಿದರೆ ನಾನು ನಿಧಾನವಾಗಿ ಮುಂದುವರಿದೆ. ಹಿರಿಯ ಮಿತ್ರ ಪ್ರಕಾಶ್ ಭಟ್ ಮಣಿಪಾಲದಲ್ಲಿರುವುದು ನೆನಪಿಗೆ ಬಂತು. ಅವರೂ ಸೈಕ್ಲಿಸ್ಟ್ ಅಲ್ಲದೆ ಎಸ್ಯುವಿ ವಾಹನ ಮತ್ತು ಸೈಕಲ್ ಕಟ್ಟುವ rack ಕೂಡಾ ಇದೆ. ಹಾಗೆ ಅವರಿಗೆ ಫೋನಾಯಿಸಿದಾಗ ನೀವು ಬರುತ್ತಾ ಇರಿ, ನಾನು ಊಟ ಮುಗಿಸಿ ಬರುವೆ ಎಂಬ ಆಶ್ವಾಸನೆ ಸಿಕ್ಕಿತು. ಅದರಂತೆ ಹೆಬ್ರಿ ವರೆಗೂ ಬಂದು, ಬಡ್ಕಿಲ್ಲಾಯರ ಹೊಟೇಲಲ್ಲಿ ಊಟಕ್ಕೆಂದು ಸೇರಿಕೊಂಡೆವು. ಊಟ ಆಗಲೇ ಖಾಲಿ. ಅವಲಕ್ಕಿ ಮೊಸರು ಮುಕ್ಕಿ ತೃಪ್ತಿ ಪಟ್ಟಾಗ ನಮ್ಮ ವಾಹನ ಆಗಮನ. ಸೈಕಲ್ ಹಾಕಿಕೊಂಡು ಸಂಜೆ ವೇಳೆಗೆ ಮಣಿಪಾಲ ತಲಪಿದೆವು.
ಹೆಚ್ಚೇನೂ ತಯಾರಿಯಿಲ್ಲದೆ ಆಗುಂಬೆಯೇರಿದ್ದು, ಅಲ್ಲಿನ ಮಂಜಿನಲ್ಲಿ ಮಿಂದೆದ್ದು ಬಂದದ್ದು ಮನತಣಿಸಿದರೆ ಆಗುಂಬೆಯ ಕಸ ಎಸೆ ತಾಣ ನೋಡಿ ಮನಕಲಕಿತು, ಮಂಜಿನ ನೆರಳಿನಲ್ಲಿ ಅಲ್ಲಿಯ ನಿಸರ್ಗದ ಮೇಲೆ ಇನ್ನೆಷ್ಟು ಅತ್ಯಾಚಾರ ನಡೆದಿದೆಯೋ ಯಾರು ಬಲ್ಲರು ???

18.11.11

ಹೀಗೊಂದು ಅಪಘಾತದ ಕಥೆ

ಅದು ಹಿಂಗಾರು ಮಳೆಯ ರಾತ್ರಿ...
ಪಿರಿಪಿರಿ ಮಳೆಯಲ್ಲಿ ಕಪ್ಪು ಹೆದ್ದಾರಿ ಮಿರಿಮಿರಿ ಹೊಳೆಯುತ್ತದೆ.
ಆಗೊಮ್ಮೆ ಈಗೊಮ್ಮೆ ರಾಜಾರೋಷವಾಗಿ ಟ್ರಕ್‌ಗಳು, ಬಸ್‌ಗಳು ಹರಿದಾಡುತ್ತವೆ.
ಅಲ್ಲೊಂದು ಚಿಕ್ಕ ದೃಶ್ಯ. ವ್ಯಕ್ತಿಯೊಬ್ಬನ ದೇಹ ಮಕಾಡೆ ಬಿದ್ದಿದೆ, ರಕ್ತ ಕೋಡಿ ಹರಿಯುತ್ತಿದೆ. ಒಂದೆರಡು ವಾಹನಗಳು ರಸ್ತೆ ಪಕ್ಕ ನಿಂತಿವೆ ಹತ್ತಾರು ಮಂದಿ ದೇಹದ ಸುತ್ತ ಸೇರಿದ್ದಾರೆ.
ಯಾರೋ ಪೊಲೀಸರಿಗೆ ಸುದ್ದಿ ಮುಟ್ಟಿಸಿರಬಹುದು. ಪೊಲೀಸ್ ಜೀಪ್‌ ಕೂಡಾ ಅದೋ ಬಂದಿದೆ.
‘ಅದು ಹೋಗಿದೆ, ಅಲ್ಲಾಡ್ತಾ ಇಲ್ಲ..’
‘ಯಾರೋ ಏನೋ ಪಾಪ, ಲಾರಿ ಹೊಡ್ಕೊಂಡ್ ಹೋಗಿರ‍್ಬೇಕು’
ಹೀಗೆ ಸೇರಿದವರಲ್ಲೇ ಮಾತು-ಕತೆ.
ಪೊಲೀಸರು ವ್ಯಕ್ತಿಯ ಜೇಬು ತಡಕಾಡುತ್ತಾರೆ, ಗುರುತು ಹಿಡಿಯಲು ಯತ್ನಿಸಿ ಸೋತಿದ್ದಾರೆ, ಅವನ ಕಿಸೆಯಲ್ಲಿ ಸಿಕ್ಕಿದ ಮೊಬೈಲಲ್ಲೇ ಕೊನೆಯ ಕರೆ ಬಂದ ವ್ಯಕ್ತಿಗೂ ಕರೆ ಮಾಡಿದ್ದಾರೆ, ಆ ಮೊಬೈಲ್ ಈಗ ವ್ಯಾಪ್ತಿ ಪ್ರದೇಶದ ಹೊರಗೆಲ್ಲೋ ಇದೆ.
ನಿಶ್ಚಲನಾಗಿ ಬಿದ್ದ ವ್ಯಕ್ತಿಯ ಕೈನಲ್ಲಿ ವಾಚ್ ಸಹಜ ವೇಗದಲ್ಲಿ ಓಡುತ್ತಲೇ ಇದೆ, ಆದರೆ ಎದೆಬಡಿತವಲ್ಲ....
ಕೊನೆಗೂ ವ್ಯಕ್ತಿಯನ್ನು ಜೀಪೊಂದಕ್ಕೆ ಹಾಕಿ ಆಸ್ಪತ್ರೆಗೆ ಕಳುಹಿಸಿದ್ದಾರೆ
ಏನಾಗಿರಬಹುದು? ನಾಳೆ ಪತ್ರಿಕೆ ಓದಬೇಕು!
pic courtesy devendra

1.8.11

ಹೆದ್ದಾರಿಕಥೆಗಳು-4, ಪ್ರತಿಮೆಗೆ ಜೀವ ಬಂದಾಗ!

ಹೆದ್ದಾರಿ ಬದಿಯ ಉದ್ಯಾನದಲ್ಲಿ ದಶಕಗಳ ಕಾಲ ಧೂಳು ತಿನ್ನುತ್ತಾ ನಿಂತಿದ್ದ ಸ್ವಾತಂತ್ರ‍್ಯ ಹೋರಾಟಗಾರರ ಆ ಪ್ರತಿಮೆಗೆ ಅದೊಂದು ದುರದೃಷ್ಟಕರ ರಾತ್ರಿಯಲ್ಲಿ ಜೀವ ಬಂತು. ಸ್ವಾತಂತ್ರ‍್ಯ ಸಿಕ್ಕಿ ಒಂದೆರಡು ತಿಂಗಳಲ್ಲಿ ಪ್ರಾಣಬಿಟ್ಟ ಮಹಾತ್ಮರ ಪ್ರತಿಮೆಯಾಗಿತ್ತದು.
ಜೀವ ಬಂದ ಕೂಡಲೇ ಪ್ರತಿಮೆ ತನ್ನ ಎತ್ತರದ ಚೌಕಿಯಿಂದ ಕೆಳಕ್ಕೆ ಧುಮುಕಿತು, ಅದಕ್ಕೆ ತನ್ನ ಕಾಲದ ಸ್ವಾತಂತ್ರ‍್ಯ ಹೋರಾಟದ ಕೆಚ್ಚು ನೆನಪಿಗೆ ಬಂತು.
ಇಷ್ಟು ದಿನ ಪ್ರತಿಮೆಯಾಗಿತ್ತಲ್ಲವೇ ಈಗಿನ ಪರಿಸ್ಥಿತಿಯ ಸಂದಿಗ್ಧತೆ ತಿಳಿದಿರಲಿಲ್ಲ. ರಾಜಾಜೋಷವಾಗಿ ಓಡುತ್ತಿದ್ದ ಕಾರುಗಳನ್ನು ನೋಡಿ ಪ್ರತಿಮೆಗೆ ಖುಷಿಯಾಯಿತು. ಜನರಲ್ಲಿ ಶ್ರೀಮಂತಿಕೆ ಬಂದಿದೆ, ಇಷ್ಟು ಸಪಾಟಾದ ರಸ್ತೆಗಳಾಗಿವೆ, ಐಷಾರಾಮಿ ಕಾರುಗಳಿವೆ, ನಾನು ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ್ದು ಸಾರ್ಥಕ ಎನಿಸಿತು.
ಹಾಗೇ ಹೆದ್ದಾರಿ ಪಕ್ಕದಲ್ಲಿ ನಗರದ ಕಡೆಗೊಂದು ಸರ್ಕೀಟು ಹೊರಟಿತು ಪ್ರತಿಮೆ. ನಡೆದು ಸುಸ್ತಾದಾಗ ದಾರಿಯಲ್ಲಿದ್ದ ಬಸ್ ಬೇಯಲ್ಲಿ ಕುಳಿತು ದಣಿವಾರಿಸಲು ಹೊರಟರೆ ಅಲ್ಲಿ ಮುಲುಗುತ್ತಾ ಕುಳಿತಿದೆ ಒಂದು ಜೀವ. ಹರಕು ಕಂಬಳಿ ಹೊದೆದು ಕುಳಿತಿದ್ದ ಭಿಕ್ಷುಕನವನು.
ಚಳಕ ಹೊಡೆದಂತಾಯ್ತು ಪ್ರತಿಮೆಯ ಹೃದಯದಲ್ಲಿ..ನಾನು ಬಡವರು-ಶ್ರೀಮಂತರ ನಡುವೆ ಅಂತರವಿರಬಾರದು ಎಂದು ಪ್ರತಿಪಾದಿಸಿದ್ದೆ..ಆದರೆ ಇಷ್ಟು ಕಡುಬಡವನಿರುವುದು ಹೇಗೆ? ಸ್ವಾತಂತ್ರ‍್ಯ ಬಂದು 64 ವರ್ಷಗಳೇ ಆಗಿಹೋದರೂ ಇನ್ನೂ ಭಿಕ್ಷುಕರಿದ್ದಾರೆಯೇ ಇಲ್ಲಿ ಎಂದು ಪ್ರತಿಮೆ ಭಿಕ್ಷುಕನಲ್ಲಿ ಪ್ರಶ್ನಿಸಿತು.
ಹೆಹ್ಹೆಹ್ಹೆ...ಒಳ್ಳೇ ಪ್ರಶ್ನೆ ಕಣಯ್ಯಾ...
‘ಎಲ್ಲಿಂದ ಬಂದೆ ನೀನು? ಅಲ್ಲಾ ಹಾಕಿದ ಗುಂಡು ಇಳಿದಿಲ್ವಾ?’ ಭಿಕ್ಷುಕ ಕೇಳಿದ.
ಪ್ರತಿಮೆಗೆ ಒಂದೂ ತಿಳಿಯಲಿಲ್ಲ..ಸುಮ್ಮನೆ ಮುಖ ಮುಖ ನೋಡಿತು. 
‘ನಾನೊಂದು ಪ್ರತಿಮೆ, ಅನೇಕ ವರ್ಷಗಳಿಂದ ಅದೋ ಅಲ್ಲಿ ನಿಂತಿದ್ದೆ ಈಗ ಜೀವ ಬಂತು...ಸುಮ್ಮನೆ ಇಲ್ಲೇನಾಗುತ್ತಿದೆ ನೋಡಬೇಕಿದೆ’
ಓ ಹಂಗಾ. ಕೇಳು..ನೋಡು ನಮ್ಮ ದೇಶದಲ್ಲಿ ಇರೋದೇ ಹೀಗೆ..ದೇಶ ಬಹಳ ಅಭಿವೃದ್ಧಿಯಾಗಿದೆ ಈಗ. ಎಲ್ಲೇ ನೋಡಿ ಬಿಲ್ಡಿಂಗ್, ಕೈಗಾರಿಕೆ, ಮಾಲ್, ಬಿಎಂಡಬ್ಲ್ಯು ಕಾರು ಬಂದಿದೆ, ಆದರೂ ನಾವು ಕೆಲವರು ಹೀಗೇ ಇದ್ದೇವೆ, ನಮಗೆ ಕೆಲಸ ಮಾಡಲು ಉದಾಸೀನ ಎಂದು ಸಮಾಜದ ಆಢ್ಯರು ಹೇಳ್ತಾರೆ...ನನ್ನಲ್ಲಿದ್ದ ಜಮೀನು ಕೈಗಾರಿಕೆಗೆ ಕೊಂಡೊಯ್ದರು. ನನಗೆ ಕೈಗೊಂದಿಷ್ಟು ಕಾಸು ಕೊಟ್ಟರು, ಕಾಸು ನೋಡಿ ಬುದ್ಧಿ ಕೆಟ್ಟಿತು, ಈಗ ಇಲ್ಲಿದ್ದೇನೆ ನೋಡು.
ಎಲ್ಲಾ ಹಾಳಾಗಲು ನೋಡು ನಮಗೆ ಸ್ವಾತಂತ್ರ‍್ಯ ಸಿಕ್ಕಿದ್ದೇ ಕಾರಣ.ಆ ಸ್ವಾತಂತ್ರ‍್ಯ ಹೋರಾಟಗಾರರೇನಾದರೂ ಸಿಕ್ಕಲಿ...ಬಿಡೋದಿಲ್ಲ..ಭಿಕ್ಷುಕ ಅಬ್ಬರಿಸತೊಡಗಿದ.
ನಾನು ಸ್ವಾತಂತ್ರ‍್ಯ ಹೋರಾಟಗಾರನೇ, ಸತ್ಯವಂತ, ಅಹಿಂಸಾಪರ ಹೋರಾಟಗಾರ...ಎಂದಿತು ಪ್ರತಿಮೆ.
ಹೌದಾ...ಈಗ ರಾತ್ರಿ. ಯಾರೂ ನೋಡುವುದಿಲ್ಲ. ನಿನಗೂ ಏನೂ ಕಾಣುವುದಿಲ್ಲ..ಇನ್ನು ನಿಂತು ಜನರ ಕಣ್ಣಿಗೆ ಸಿಗಬೇಡ, ನೀನೂ ನೋಡಲು ಹೋಗಬೇಡ..ನೋಡಿದರೆ ನೀನು ಸಹಿಸಲಾರೆ.
ನೋಡು ಇದೇ ರಸ್ತೆ ಮೂಲಕ ದೊಡ್ಡ ಟ್ರಕ್‌ಗಳಲ್ಲಿ ನಮ್ಮ ಮಣ್ಣನ್ನೇ ಸಾಗಿಸಿ ಅದೋ ಆ ಬಂದರಿನ ಮೂಲಕ ಕಳುಹಿಸುತ್ತಾರೆ, ಮಣ್ಣೂ ಈಗ ಚಿನ್ನವಾಗಿದೆ.
ಇಲ್ಲಿ ಕೊಲೆಗಾರರು, ದೋಚುವವರು, ಲೂಟಿಕೋರರೂ ಎದೆಯುಬ್ಬಿಸಿ ನಡೆಯುತ್ತಾರೆ, ನಿನ್ನಂತೆ ಸತ್ಯ ಸತ್ಯ ಎಂದವರು ಸತ್ತಂತೆಯೇ, ಹಾಗಾಗಿ ಎಲ್ಲಾದರೂ ಓಡಿ ಬದುಕಿಕೋ ಯಾರ ಕೈಗೂ ಸಿಗಬೇಡ ಎಂದ ಭಿಕ್ಷುಕ.
ಪ್ರತಿಮೆಗೆ ಗಾಬರಿಯಾಗಿ ಹೊರ ಬಂದು ಆಕಾಶ ನೋಡಿತು. ರಸ್ತೆ ಪಕ್ಕ ನಡೆಯತೊಡಗಿತು. 
ಅಷ್ಟರಲ್ಲಿ ಕಾರೊಂದು ದೂರ ನಿಂತಿತು...ಏನನ್ನೋ ಎಸೆದು ಹಾಗೇ ಸರಿದು ಹೋಯಿತು..ಪ್ರತಿಮೆ ಅಲ್ಲಿ ಹೋಗಿ ನೋಡಿದರೆ ಅದೊಂದು ದೇಹವಾಗಿತ್ತು. ಯುವತಿಯ ದೇಹ...ಪ್ರಾಣವಿಲ್ಲದ ದೇಹ..ದೇಹ ತುಂಬ ಗೀರುಗಳು..
ಅಷ್ಟರಲ್ಲಿ ಪೊಲೀಸ್ ಜೀಪೊಂದು ಬಂತು...ಪ್ರತಿಮೆಯನ್ನು ನೋಡಿ ಪೊಲೀಸರಿಗೆ ಯಾರೋ ಕಳ್ಳನೋ, ಕೊಲೆಗಾರನಂತೆಯೋ ಕಂಡಿತು...ನಿಲ್ಲು ನಿಲ್ಲು ಎನ್ನುತ್ತಾ ಪಿಸ್ತೂಲು ತೋರಿಸಿ ಅಧಿಕಾರಿ ಬೊಬ್ಬಿರಿದ. 
ಪ್ರತಿಮೆಗೆ ಭಿಕ್ಷುಕ ಹೇಳಿದ್ದು ನೆನಪಾಯ್ತು..
ನನಗಿದು ಕಾಲವಲ್ಲ ಎಂದಿದ್ದೇ ಪ್ರತಿಮೆ ಓಟಕ್ಕಿತ್ತಿತು..ಪೊಲೀಸರು ಬರುವ ಮೊದಲೇ ಪರಾರಿಯಾಯಿತು.
ಮರುದಿನ ಅಲ್ಲೆಲ್ಲೂ ಪ್ರತಿಮೆ ಕಂಡುಬರಲಿಲ್ಲ.
ಅಂದು ಸಂಜೆ ಪತ್ರಿಕೆಯಲ್ಲಿ ಸ್ವಾತಂತ್ರ‍್ಯ ಹೋರಾಟಗಾರರ ಪ್ರತಿಮೆ ನಾಪತ್ತೆ ಎಂಬ ಒಂದು ಸುದ್ದಿಯೂ ಪ್ರತಿಮೆಯಿಲ್ಲದೆ ಅನಾಥವಾಗಿ ಕಾಣುವ ಅದರ ಪೀಠದ ಚಿತ್ರವೂ ಪ್ರಕಟವಾಗಿತ್ತು.
ಅದೇ ದಿನ ಮುಖ್ಯಮಂತ್ರಿಗಳು ಅದೇ ಸ್ಥಳದಲ್ಲಿ ಚಿನ್ನದ ಪ್ರತಿಮೆಯನ್ನೇ ಅಲ್ಲಿ ನಿರ್ಮಿಸಲಾಗುವುದು ಎಂಬ ಹೇಳಿಕೆಯನ್ನೂ ನೀಡಿದರು.

23.7.11

ಹೆದ್ದಾರಿಕಥೆಗಳು-೩

ಹೆದ್ದಾರಿಯ ಆ ತಿರುವಿನಲ್ಲಿ ಕೆಂಬಣ್ಣದ, ಒಂದು ಕಡ್ಡಿಯಿಂದ ಜಾರಿಕೊಂಡ ಬಟ್ಟೆಯ ಕೊಡೆ ಹಿಡಿದು ನಿಂತಿರುತ್ತಾಳೆ ಪುಟ್ಟ ಹುಡುಗಿ..
ಕೈಯಲ್ಲಿ ಅಟ್ಟೆ ಮಲ್ಲಿಗೆ.
ತಿರುವಿನಲ್ಲಿ ಧಾವಿಸಿ ಬರುವ ವೇಗದೂತ ಕಾರುಗಳ ಕಿಟಿಕಿಯತ್ತ ಆಕೆಯ ದೃಷ್ಟಿ ನಟ್ಟಿರುತ್ತದೆ. ನಿ‌ನ್ನೆ ಸಂಜೆವರೆಗೆ ಇದೇ ಜಾಗದಲ್ಲಿ ಜಡಿಮಳೆಯಲ್ಲಿ ನಿಂತರೂ ಯಾರೂ ಆಕೆಯನ್ನು ನೋಡಿ, ಹೂಗಳನ್ನು ನೋಡಿ ನಿಲ್ಲಿಸಲಿಲ್ಲ. ಹಾಗಾಗಿ ತಾಯಿಯ ಕೈನಿಂದ ಸಾಕಷ್ಟು ಬೈಗುಳ ಕೇಳಿಸಬೇಕಾಗಿತ್ತು.
ಅದನ್ನು ನೆನಪಿಸಿಕೊಂಡರೇ ಹುಡುಗಿಗೆ ದುಃಖವಾಗುತ್ತದೆ. ಇಂದಿನ ದಿನವೂ ಹಾಗಾದರೆ ಮಾಡುವುದೇನು ? ಮನೆಯಲ್ಲಿ ತಾಯಿ, ಜತೆಗೆ ಪುಟ್ಟ ತಮ್ಮ. ತಾಯಿಗೆ ಪೇಟೆಯಲ್ಲಿ ಕುಳಿತು ಮಲ್ಲಿಗೆ ಮಾರುವ ಶಕ್ತಿಯಿಲ್ಲ, ವ್ಯವಹಾರ ಜ್ಞಾನವಿಲ್ಲ. ಹಾಗಾಗಿ ತಂದೆ ಇಲ್ಲವಾದ ಬಳಿಕ ಕಳೆದ ಎರಡು ವರುಷಗಳಲ್ಲಿ ಹೆದ್ದಾರಿಯೇ ಆಕೆಯ ಮಾರುಕಟ್ಟೆ. ಬಿಸಿಲು ಮಳೆಯೆನ್ನದೆ ಆಕೆ ಅಲ್ಲಿ ಮಲ್ಲಿಗೆ ಮಾರಿದ್ದಾಳೆ.
ತಾಯಿಯ ಬೈಗುಳಕ್ಕಿಂತಲೂ ಆಕೆಯನ್ನು ನೋಯಿಸುವುದು ಮಲ್ಲಿಗೆ ಮಾರುವ ಇತರೇ ಹುಡುಗರು, ಕೆಲ ದೊಡ್ಡವರು. ಮಲ್ಲಿಗೆ ಕೈಯಲ್ಲೇ ಉಳಿದರೆ ಅದನ್ನೆ ಅಣಕಿಸುತ್ತಾರೆ, ಹಂಗಿಸುತ್ತಾರೆ. ತಮ್ಮ ನಾಲಿಗೆಯ ಬಲದಿಂದ, ಮಾರಾಟದ ಚಾಕಚಕ್ಯತೆಯಿಂದ ಕಾರಿನವರನ್ನು ಅಡ್ಡಗಟ್ಟಿ ಮಲ್ಲಿಗೆ ಮಾರುವವರೇ ಅವರೆಲ್ಲಾ. ಅವರಂತೆ ಈ ಹುಡುಗಿ ಮಾರಲಾರಳು. ಹಾಗಾಗಿ ಇಂದು ಊಟಕ್ಕೂ ಹೋಗದೆ ಹಟಕ್ಕೆ ಬಿದ್ದವಳಂತೆ ರಸ್ತೆ ಪಕ್ಕ ತಪೋಮಗ್ನ ಯೋಗಿನಿಯಂತೆ ನಿಂತಿದ್ದಾಳೆ.
ಸಂಜೆಯಾಗಿ ಹೊತ್ತುಮುಳುಗಿದೆ. ಅರೆ ಒಬ್ಬರೂ ಮಲ್ಲಿಗೆಯತ್ತ ನೋಡದೇ ಹೋಗುತ್ತಿದ್ದಾರಲ್ಲ. ಮಳೆ ಕಾರಣವೋ ಏನೋ ಚಿಂತಿಸುತ್ತಿದ್ದಾಳೆ. ಕಾರೊಂದು ಮುಂದೆ ಹೋದದ್ದು ಧುತ್ತನೆ ನಿಂತಿದೆ. ಮತ್ತೆ ಅದೇ ವೇಗದಲ್ಲಿ ಹಿಂದೆ ಬರುತ್ತದೆ.
ಹುಡುಗಿ ಉತ್ಸಾಹಗೊಂಡು ಮಲ್ಲಿಗೆ ಎತ್ತಿ ಹಿಡಿದರೆ ಕಾರಿನ ಪವರ್‌ ವಿಂಡೋ ಜರ‍್ರನೆ ಕೆಳ ಸರಿಯುತ್ತದೆ. ಕಾರಿನ ಒಳಗಿನಿಂದ ಹುಡುಗರಿಬ್ಬರು ನಗುತ್ತಾ ಮಲ್ಲಿಗೆ ರೇಟು ಕೇಳುತ್ತಾರೆ. ಅಟ್ಟೆಗೆ ಇನ್ನೂರೈವತ್ತು ತಗೊಳ್ಳಣ್ಣಾ ಎಂದು ಮತ್ತೆ ಕಿಟಿಕಿಯತ್ತ ಹಿಡಿಯುತ್ತಾಳೆ. ಹುಡುಗನೊಬ್ಬ ಅಟ್ಟಹಾಸಕೊಡುತ್ತಾ ಕೈಯನ್ನೇ ಹಿಡಿಯಬೇಕೇ...ಕೊಸರಿಕೊಳ್ಳುವಾಗ ಮಲ್ಲಿಗೆ ಕಟ್ಟು ನೆಲದ ಪಾಲು...ಹೇಗೋ ತಪ್ಪಿಸಿಕೊಂಡು ಅಲ್ಲಿಂದ ರಸ್ತೆ ದಾಟುವಾಗ ಬಸ್ಸೊಂದು ಬಂದಿದ್ದಷ್ಟೇ ಆಕೆಗೆ ಗೊತ್ತು...
ಬಿಳಿ ಮಲ್ಲಿಗೆ ಕೆಂಪಾಗಿವೆ...

19.9.10

ಹೆದ್ದಾರಿ ಕಥೆಗಳು-೨

 ಅದೊಂದು ಛಳಿಗಾಲದ ಇಳಿಹೊತ್ತು..
ಹಗಲಿಡೀ ವಾಹನಗಳ ಭರಾಟೆಯಿಂದ ಹೈರಾಣಾಗಿ ಹೆದ್ದಾರಿ ವಿಶ್ರಾಂತಿಗೆ ಇಳಿದಂತಿತ್ತು. ಅರಣ್ಯದ ನಡುವೆ ಹಾದು ಹೋಗುವ ಘಾಟಿ  ದಾರಿಯದು, ರಾತ್ರಿಯಾದರೆ ವಾಹನಗಳ ಸಂಖ್ಯೆ ಕಡಿಮೆ. ಆಗಲೇ ಸೋಡಿಯಂ ವೇಪರ‍್ ಲೈಟುಗಳಿ ಮಿನುಗಲು ತೊಡಗಿದ್ದವು.
ಗಂಟೆಗಳುರುಳಿದವು. ಜೀಪೊಂದು ಕೇಕೆ ಹಾಕುತ್ತಾ ತೂರಾಡುತ್ತಾ ಬಂತು.
ಒಳಗಿರುವವರ ಪರಿಸ್ಥಿತಿ ಹೀಗಎಯೇ ಇರಬಹುದೆಂದು ಊಹಿಸಿ ಹೆದ್ದಾರಿಗೆ ನಗೆಯುಕ್ಕಿತು. ಯಾರೋ ನಕ್ಕಂತಾಗಿ ಡ್ರೈವಿಂಗ್‌ ಸೀಟಿನಲ್ಲಿದ್ದವನಿಗೆ ಸಿಟ್ಟು ಬಂತು. ಹಿಂದಿನ ಸೀಟಲ್ಲಿದ್ದವರಿಗೆ  ತೊಡರು ನಾಲಗೆಯಲ್ಲೇ ಬೈದ..ಸು..ಮ್ನೆ ಕುಂತ್ಕ..ಳ್ಳಿ..ಇಂಥವರನ್ನ ದಿನಾ ನೋಡುತ್ತಿದ್ದ ಹೆದ್ದಾರಿಗೆ ಮತ್ತೂ ನಗುಬಂತು, ಡ್ರೈವರನ್ನು ಇನ್ನಷ್ಟು  ಪೇಚಿಗೆ ಸಿಲುಕಿಸಲು ಮತ್ತೊಮ್ಮೆ ಗಟ್ಟಿಯಾಗಿ ನಕ್ಕಿತು. ಈ ಬಾರಿ ಅಮಲಿನಲ್ಲೂ ಎಲ್ಲರಿಗೂ ನಗು ಕೇಳಿತು. ನಗು ಮತ್ತೆ ಮತ್ತೆ ಬಿಚ್ಚಿಕೊಳ್ಳುತ್ತಾ ಹೋದಾಗ ಆ ನಗು ತಮ್ಮದ್ದಲ್ಲ ಎಂದು ಸ್ಪಷ್ಟವಾಯಿತು. ಡ್ರೈವರನಿಗೆ ಚಿಕ್ಕವನಿದ್ದಾಗ ಕೇಳಿದ ಭೂತ ಪಿಶಾಚಿ ಕಥೆಗಳು ನೆನಪಾದವು, ಕೈ ಮರಗಟ್ಟಿತು. ಒಂದೊಂದು ಮರಗಳೂ ಒಂದೊಂದು ಆಕಾರ ಪಡೆದು ನರ್ತಿಸತೊಡಗಿದವು. ರಸ್ತೆಯೇ ದಢೀರ್‌ ಎದ್ದು ನಿಂತಂತಾಯಿತು. ಆ ಕೊರಕಲಿನ ತಿರುವಿನಲ್ಲಿ ಸ್ಟೀರಿಂಗ್‌ ತಿರುಗಲೇ ಇಲ್ಲ.....
ಆ ತಿರುವಿನಲ್ಲೊಂದು ಫಲಕವಿತ್ತು.
ಎಚ್ಚರಿಕೆ ! ಅಪಘಾತ ವಲಯ!

12.9.08

ಹೆದ್ದಾರಿ ಕಥಾನಕಗಳು

ಅಬ್ಬಾ ಇದು ಹೆದ್ದಾರಿಯೇ ಎಂಬ ಅನುಮಾನ ಬರುವಂತಹ ಕೆಟ್ಟ ರಸ್ತೆ ಅದು.
ಸಾಮಾನ್ಯವಾಗಿ ಇಡೀ ದಿನ ಬ್ಯುಸಿಯಾದ ರಸ್ತೆಗೆ ನಿದ್ರಿಸಲೂ ಬಿಡದಂತೆ ಅನಿಲ, ಅದಿರು ಟ್ಯಾಂಕರ್‍ಗಳು ಓಡುತ್ತವೆ.
ಆದರೆ ಇಂದು ಎಂದಿನಂತಿಲ್ಲ...
ಬಹಳ ದಿನದ ಬಳಿಕ ಮಳೆಯಾಗಿ ರಸ್ತೆಯೇ ತೊಯ್ದು ಹೋಗಿದೆ. ಅದಕ್ಕೋ ಏನೋ ರಾತ್ರಿ ಓಡಾಟದ ಲಾರಿ ಚಾಲಕರು ರಸ್ತೆ ಬದಿಯೇ ಲಾರಿ ನಿಲ್ಲಿಸಿ ನಿದ್ರೆಗೆ ಶರಣಾಗಿದ್ದಾರೆ.
ಆದರೆ ಆ ಜಂಕ್ಷನ್‌ನಲ್ಲಿ ಇನ್ನೂ ಮನುಷ್ಯ ಜೀವವೊಂದು ಕಾಣುತ್ತಿದೆ.
ಸರಿಯಾಗಿ ಉರಿಯದೆ ಮಿಣಕ್ ಮಿಣಕ್ ಅನ್ನುವ ಸೋಡಿಯಂ ವೇಪರ್‍ ಲೈಟಿನಡಿಯೇ ಸಣ್ಣ ಗೂಡಂಗಡಿಯಲ್ಲಿ ನೀರು ದೋಸೆ ಮಾರುವವನಾತ.
ಯಾವಾಗಲೂ ಸಾಲುಗಟ್ಟಿ ನಿಂದು ನೀರು ದೋಸೆ ತಿಂದು ಟೀ ಕುಡಿದು ಹೋಗುವವರು ಇಂದೇಕೋ ಕಾಣುತ್ತಿಲ್ಲ. ಹಾಗಾಗಿ ಆತನ ಮುಖದಲ್ಲೂ ನಿರಾಸೆ.
ದೋಸೆಯಾತ ನಿದ್ದೆಗೆ ಜಾರುವಷ್ಟರಲ್ಲಿ ಬೈಕ್ ಹಾರ್ನ್. ನೋಡಿದರೆ ಬೈಕ್ ಮೇಲೆ ಥೇಟ್ ರಸ್ತೆಯಂತೇ ತೊಯ್ದು ಹೋದ ಯುವಕ.
ನೋಡಿದರೆ ಕಾಲ್ ಸೆಂಟರಿನವನೋ, ರಾತ್ರಿ ಬೀಟ್ ಮುಗಿಸಿ ಬರುವ ಪತ್ರಕರ್ತನೋ ಇರಬಹುದು.
೨೦ ಪ್ಲೇಟ್ ಪಾರ್ಸೆಲ್ ಮಾಡು ರೂಂಮೇಟ್‌ಗಳೂ ಹಸಿದಿರಬಹುದು...ಎಂದ ಬೈಕ್ ಸವಾರ.
ಖುಷಿಯಾಯ್ತು ದೋಸೆಯಾತನಿಗೆ.
ಸ್ಯಾಂಪಲ್ ಒಂದು ಕೊಡು, ಎಂದು ಒಂದು ಪ್ಲೇಟ್ ನೀರು ದೋಸೆ ತಿಂದ ಬೈಕ್‌ನವನು.
ಗಿರಾಕಿಯಿಲ್ಲದೆ ಎರೆದ ದೋಸೆ, ಉಳಿದ ಹಿಟ್ಟು ಹಾಳಾಗಿ ಹೋಗುತ್ತಿತ್ತು, ಈ ಮಹಾಮನುಷ್ಯ ಬಂದು ೨೦ ಪ್ಯಾಕ್ ಮಾಡು ಎಂದದ್ದು ದೋಸೆಯಾತನಿಗೆ ಹೊಸ ಉತ್ಸಾಹ ಮೂಡಿಸಿತು.
೨೦ ಪ್ಲೇಟ್ ಪಾರ್ಸೆಲ್ ಕೊಟ್ಟ.
ಬೈಕ್‌ನಾತ ನೋಟೊಂದನ್ನು ಚಾಚಿದ.
ದೋಸೆ ನಿಜಕ್ಕೂ ಚೆನ್ನಾಗಿದೆ...ಹಾಗಾಗಿ ಚಿಲ್ಲರೆ ಬೇಡ ಎಂದ...
ಹಾಗಾದರೆ ಇನ್ನೆರಡು ಬಿಸಿ ದೋಸೆ ಇಕೋ ಎಂದು ಪ್ಯಾಕ್ ಮಾಡಿಕೊಟ್ಟ ದೋಸೆಯಾತ...
ಇಬ್ಬರೂ ನಕ್ಕರು...
ಯಾವುದೋ ಜನ್ಮದ ಬಂಧುಗಳಂತೆ...
ಮಿಣಗುಡುತ್ತಿದ್ದ ಸೋಡಿಯಂ ವೇಪರ್‍ ಈಗ ಪ್ರಕಾಶಮಾನವಾಗಿ ಉರಿಯಿತು.
ಬೈಕ್ ಮುಂದಕ್ಕೋಡಿತು...ಮಳೆ ಸುರಿಯುತ್ತಲೇ ಇತ್ತು....


***************

ಅದು ಎಕ್ಸ್‌ಪ್ರೆಸ್ ಹೈವೇ...
ರಾಷ್ಟ್ರವನ್ನು ವಿಶ್ವದಲ್ಲೇ ಪ್ರಖ್ಯಾತಗೊಳಿಸಲು ಪಣತೊಟ್ಟವರಿಗೆ ತೊಂದರೆಯಾಗಬಾರದು, ಅವರು ಬೇಗಬೇಗನೆ ತಮ್ಮ ಗಮ್ಯ ಸೇರಬೇಕು ಎಂದು ನಿರ್ಮಿಸಿದ ಆರು ಪಥಗಳ ಹೆದ್ದಾರಿ.
ಮಿಂಚಿನಂತೆ ಕಣ್ಣು ಕೋರೈಸುವ ಹೆಡ್‌ಲೈಟ್‌ಗಳೊಂದಿಗೆ ವಾಹನಗಳು ಹರಿದಾಡುತ್ತಿವೆ. ರಸ್ತೆಗೆ ಅಡ್ಡ ಬರುವ ನಾಯಿಗಳಿಗೆ ಯಾವ ವಾಹನವೂ ಅಲ್ಲಿ ಬ್ರೇಕ್ ಹಾಕದು, ಅಪರೂಪಕ್ಕೊಮ್ಮೆ ಓಡುವ ಟೂ ವೀಲರ್‍ ಹೊರತು ಪಡಿಸಿ. ಹಾಗಾಗಿ ಆ ರಸ್ತೆಯನ್ನು ನಾಯಿಗಳು ಆತ್ಮಹತ್ಯಾ ತಾಣವಾಗಿ ಗುರುತಿಸಿಕೊಂಡಿದ್ದವು.
ಲೇಟ್‌ನೈಟ್ ಪಾರ್ಟಿ ಮುಗಿಸಿದ ತಂಡವೊಂದು ಯಾವುದೋ ಪಬ್ಬೊಂದರಿಂದ ಹೊರಬಿದ್ದಿದೆ, ಅವರ ಕಾರಿನ ನಾಗಾಲೋಟಕ್ಕೆ ಬೈಕೊಂದು ಸಿಕ್ಕಿ ಅದರಲ್ಲಿದ್ದ ಇಬ್ಬರು ವಿಲವಿಲನೆ ಒದ್ದಾಡುತ್ತಿದ್ದಾರೆ.
ಕಾರ್‌ನಿಂದ ಹೋ ಎಂಬ ಕೇಕೆ ಬಿಟ್ಟರೆ ಬೇರೇನೂ ಕೇಳಲಿಲ್ಲ. ಹಿಂದಿನಿಂದ ಬಂದ ಮರ್ಸಿಡೀಸ್‌ ಹಾಗೇ ಬ್ರೇಕ್ ಹಾಕಿತು. ಕಿಟಿಕಿ ಕೆಳಗೆ ಸರಿದು ಮುಖವೊಂದು ಇಣುಕಿದು. ರಸ್ತೆ ಮೇಲೆ ನರಳುತ್ತಿದ್ದ ವ್ಯಕ್ತಿ ದೈನ್ಯನಾಗಿ ನೋಡಿದ.
ಕಿಟಿಕಿ ಮತ್ತೆ ಮುಚ್ಚಿತು. ಮರ್ಸಿಡಿಸ್ ಮುಂದಕ್ಕೋಡಿತು.
ನರಳುತ್ತಿದ್ದವರಿಬ್ಬರು ನಿಧಾನವಾಗಿ ನಿಶ್ಚಲರಾಗುತ್ತಿದ್ದುದನ್ನು ರಸ್ತೆ ಮೀಡಿಯನ್‌ನಲ್ಲಿ ಮಲಗಿದ್ದ ನಾಯಿಯೊಂದು ಅಸಹಾಯಕತೆಯಿಂದ ನೋಡಿ ಬಾಲ ಅಲ್ಲಾಡಿಸಿತು.
Related Posts Plugin for WordPress, Blogger...