30.12.06

ಹೊಸ ವರ್ಷದ ಹಾರೈಕೆ


ಪರಭಾಷೆಗಳ ತೀವ್ರ ಮೇಲುಗೈ ನಡುವೆ
ಕನ್ನಡಿಗರ ದಿವ್ಯ ಉದಾಸೀನದ ನಡುವೆ ಕೂಡಾ
ಕನ್ನಡ ಮನಸ್ಸುಗಳು ಹಸಿರಾಗಿರುತ್ತವೆ
ಬ್ಲಾಗುಗಳ ಮುಖಾಂತರ

ತಾಂತ್ರಿಕ ಔನ್ನತ್ಯದ ನಡುವೆ
ದೇಶೀಯ, ಭಾಷಾ ಪಂಡಿತರ ಮೂದಲಿಕೆ-
ಗಳಿದ್ದರು ಕೂಡಾ
ಕನ್ನಡಕ್ಕೆ ಬಾರದು ಗಂಡಾಂತರ

ಕನ್ನಡ ನಿತ್ಯನೂತನ
ವಿಶಾಲ...ಚಿರಂತನ
ನಿತ್ಯನಿರಂತರ

ಇತರ ಭಾಷೆಗಳ, ಸಂಸ್ಕೃತಿಗಳ ಸಾರ ಸತ್ವ ಸವಿಯುತ್ತಲೇ ಎಂದೆಂದಿಗೂ ಕನ್ನಡಿಗರಾಗಿರೋಣ
ಎಲ್ಲರಿಗೂ ಹೊಸ ಕ್ಯಾಲೆಂಡರ್‍ ವರ್ಷದ ಶುಭಹಾರೈಕೆಗಳು

3.12.06

ನೆರಳಿನಾಟ




ಆ ಬಿಸಿಗಾಳಿಯ ಹಬೆಗೆ
ಮುಸುಗುಡುತ್ತಾ
ನಿದ್ರಿಸಿದ್ದೆ ಅದೊಂದು ರಾತ್ರಿ
ಆದರೂ ನಿದ್ರಿಸಿಲ್ಲ ನನ್ನ ನೆರಳು
ಛಂಗನೆದ್ದು ಸುತ್ತಾಡ
ಹೊರಟಿದೆ ಆ ಇರುಳು!

ಅತೃಪ್ತ ಆತ್ಮದಂತೆ
ನಿದ್ದೆ ಸುಳಿಯದ ವಿರಹಿಯಂತೆ
ವಿಕ್ಷಿಪ್ತ ಮನೋರೋಗಿಯಂತೆ
ಸುತ್ತಾಡುತ್ತಿದೆ ನೆರಳು

ಎಲ್ಲಿಗೆ ಹೋಗಬಯಸಿದೆಯೋ
ಏನೋ ತಿಳಿಯದು
ನಾನಂತೂ ನನ್ನಷ್ಟಕ್ಕೇ
ಗೊರಕೆ ಹೊಡೆಯುತ್ತಿದ್ದೇನೆ
ಆದರೆ ನೆರಳಿಗೆ ಯಾಕಿಂತಹ
ಹುಚ್ಚಾಟ?!

ಎಂದಿಗೂ ನನ್ನನ್ನು ಬಿಟ್ಟಿರದ ನೆರಳದು
ಆದರೆ ಇಂದು ಮಾತ್ರ ಯಾಕೆ ಹೀಗೆ?

ನೆರಳು ಎಲ್ಲೆಲ್ಲೋ ಹೋಗುತ್ತಿದೆ
ಊರ ನಡುವಿನ ಕಟ್ಟೆಗೆ
ಅಲ್ಲೇ ಪಕ್ಕದ ಶಾಲೆಗೆ

ಸಂತೆ ಮೈದಾನದಲ್ಲಿ
ಭಗ್ನಪ್ರೇಮಿಯಂತೆ ಗಿರಕಿ
ಹಾಕುತ್ತಿದೆ
ಆಲದಮರದ ಬಿಳಲು
ಹಿಡಿದು ಜೋಲಾಡುತ್ತಿದೆ
ಬಾಲ್ಯದ ನೆನಪು ಹತ್ತಿದಂತೆ

ಈಗ ನಿದ್ದೆ ಲಘುವಾಗಿದೆ
ಹಠಾತ್ ಎದ್ದು ನೋಡುತ್ತೇನೆ
ನೆರಳು ಪಕ್ಕದಲ್ಲೇ ಇದೆ!

8.11.06

ಬದುಕಿಗೊಂದು ಹಿಡಿಯಷ್ಟು ಭಾವುಕತೆ


ವಾರದ ಹಿಂದೆ ರಾತ್ರಿಯೆಲ್ಲಾ ಕುಳಿತು 'ಅಮೃತಧಾರೆ' ನೋಡಿದೆ. ಓ ಈಗ ನೋಡೋದಾ! ಅಂತ ಮೂದಲಿಸಬೇಡಿ. ನೋಡ್ಬೇಕು ಅಂತ ಅಂದ್ಕೊಂಡಿದ್ರೂ ಆಗಿರಲಿಲ್ಲ.

ಹಾಗೇ ಸಿಡಿ ಲೈಬ್ರೆರಿಯಲ್ಲಿ ಸುಮ್ನೇ ಕಣ್ಣಾಡಿಸ್ತಿದ್ದೆ, ಅಮೃತಧಾರೆ ಸಿಕ್ಕೇಬಿಟ್ಲು. ಮೊದಲ ಅರ್ಧ ಭಾಗ ನೋಡಿ ಸಾಕಷ್ಟು ನಕ್ಕೆ. ತಡರಾತ್ರಿ ಸುಮಾರು ೧.೩೦ರ ಹೊತ್ತಿಗೆ ಸಿನಿಮಾ ಮುಗಿಯುವಾಗ ಕಣ್ಣಂಚಿನಲ್ಲಿ ನೀರು ಆಯಾಚಿತವಾಗಿ ಜಾರಿ ಬಂತು. ಬದುಕಿಗೆ ಹತ್ತಿರವಾದ ಕಥೆ ಓದಿದಾಗ, ಸಿನಿಮಾ, ನಾಟಕ ನೋಡಿದಾಗ ನನ್ನ ಹಾಗೆ ನಿಮ್ಮಲ್ಲೂ ಅನೇಕರು ಆ ಕಥೆಯೊಳಗೆ ಕಳೆದುಹೋಗಿರಬಹುದು. ಹಿಂದೊಮ್ಮೆ 'ಅಮೃತವರ್ಷಿಣಿ' ನೋಡಿದಾಗಲೂ ನನಗೆ ಇದೇ ಅನುಭವ ಆಗಿತ್ತು. ಅಮೃತಧಾರೆ, ಅಮೃತ ವರ್ಷಿಣಿ ಎರಡೂ ಸಿನಿಮಾಗಳಲ್ಲೂ 'ಅಮೃತ' ಸಮಾನ ಹೆಣ್ಣು. ಎರಡರಲ್ಲೂ ಹೆಣ್ಣಿಗೇ ಮಹತ್ವದ ಪಾತ್ರ. ವರ್ಷಿಣಿಯಲ್ಲಿ ಸುಹಾಸಿನಿ, ಧಾರೆಯಲ್ಲಿ ರಮ್ಯ ಇಬ್ಬರೂ ರಭಸದಿಂದಲೇ ಹರಿಯುತ್ತಾರೆ!

ಅನೇಕ ಬಾರಿ ಸಿನಿಮಾ ನೋಡುವಾಗ, ಕಾದಂಬರಿ ಓದುವಾಗ ಟೈಂವೇಸ್ಟ್ ಅಂತ ಕೆಲವರು ತಿಳಿದುಕೊಳ್ತಾರೆ. ಆದ್ರೆ ಯಾಂತ್ರಿಕವಾಗಿ ಉರುಳುತ್ತಾ ಸಾಗುವ ಬದುಕೆಂಬ ಬಂಡಿಗೆ ಗ್ರೀಸ್‌, ಆಯಿಲ್‌ ಎಂದರೆ ಭಾವನೆಗಳು. ಈ ಭಾವನೆಗಳಿಗೆ ಒಂದು ರೂಪ ಕೊಡೋದಿಕ್ಕೆ ಸಿನಿಮಾ, ಪುಸ್ತಕ, ಬರವಣಿಗೆ, ಚಿತ್ರ ಬರೆಯೋದು ಇವೆಲ್ಲಾ ಬೇಕೇ ಬೇಕು. ಮನಃಶಾಸ್ತ್ರಜ್ಙರೂ ಇದನ್ನೇ ಹೇಳೋದು. ಎಷ್ಟೋ ಕವಿಗಳು, ಸಾಹಿತಿಗಳೂ ಇದನ್ನು ಒಪ್ಪುತ್ತಾರೆ.

ಸಿನಿಮಾ ನೋಡಿ ಭಾವುಕನಾಗೋದ್ರಲ್ಲೂ ಒಂಥರಾ ಆಪ್ತತೆ ನಂಗಂತೂ ಸಿಗುತ್ತೆ. ಸಿನಿಮಾ ಕಾಲ್ಪನಿಕ ಇರಬಹುದು, ಆದ್ರೂ ಸಮಾಜದ ಪ್ರತಿಬಿಂಬ ಅದು ಆಗಿರುತ್ತದೆ.


13.10.06

ಹುಡುಕಾಟ

ಕವಿತೆಗಾಗಿ ಹುಡುಕಾಡಿದೆ
ಕತ್ತಲ ಮರೆಯಲ್ಲಿ
ಬೆಂಕಿಯ ಮುಂದೆ ಧಗಧಗ
ಕೆಂಡಗಳ ಕೆದಕಿ
ಕವಿತೆ ಸಿಗಲಿಲ್ಲ!

ಕೊಳದಲ್ಲಿ ಮುಳುಗೆದ್ದೆ
ಬದಿಯ ಹುಲ್ಲಲ್ಲಿ
ಮನಸೋ‌ಇಚ್ಛೆ
ಉರುಳಾಡಿದೆ
ಕವಿತೆ ಕಂಡುಬರಲಿಲ್ಲ

ರಾತ್ರಿಪೂರಾ ಕುಳಿತು
ಪದ ಪೋಣಿಸುತ್ತಲಿದ್ದೆ
ನನ್ನಷ್ಟಕ್ಕೇ ಗುನುಗುಟ್ಟಿದೆ
ಆದರೂ ಕವಿತೆ ಎನಿಸಲಿಲ್ಲ

ಕಾಡಿನಮಧ್ಯೆ
ಜಲಪಾತದ
ಮುಂದೆ ಕುಳಿತು
ನಿದ್ದೆ ಬಂತೇ ಹೊರತು
ಕವಿತೆ ನನ್ನತ್ತ ಸುಳಿಯಲಿಲ್ಲ

ತುಂಬು ಮಬ್ಬಿನ
ಪಬ್ಬುಗಳಲ್ಲಿ
ತೂರಾಡಿದರೂ ಕವಿತೆ
ಕಣ್ಣೆತ್ತಿ ನೋಡಲಿಲ್ಲ

ಆಸ್ಪತ್ರೆ ವಾರ್ಡ್‌ಗಳಲ್ಲಿ
ನೋವೇ ತುಂಬಿದ
ಕೋಣೆಗಳಲ್ಲಿ,
ವೃದ್ಧರ ಕಣ್ಣಾಲಿಗಳಲ್ಲಿ
ಹೊಕ್ಕುಹೊರಬಂದೆ

ನಡೆಯುತ್ತಾ ಹೋದೆ
ಹಿಂದೆಯೇ ಕವಿತೆ
ಹರಿದು ಬಂದಳು ಕೊನೆಗೆ

26.9.06

ಕರಾಳ ರಾತ್ರಿಯಲ್ಲಿ!

ನಡುರಾತ್ರಿ ಪೇಟೆಗೆ ಪೇಟೆಯೇ
ಥರಗುಟ್ಟುತ್ತಿದೆ ಛಳಿಗೆ
ಒಂದೆರಡು
ಬರಡು ಮರಗಳೂ
ತೊಯ್ದು ಹೋಗಿವೆ
ಸುರಿವ ಮಂಜಿಗೆ

ಅದೋ ಅಲ್ಲಿ...
ಆ ಸೋಮಾರಿಗಳ ಕಟ್ಟೆಯಲ್ಲಿ
ನಾಯಿಮರಿಯೊಂದು
ಕುಕ್ಕರಕುಳಿತಿದೆ
ಕುಂಯ್ಗುಡುತ್ತಿದೆ..
ಪಾಪ,
ಛಳಿಯೋ, ಹಸಿವಾಗಿದೆಯೋ
ಅಥವಾ
ಮೊನ್ನೆ ಅಂಗಡಿಯಾತ
ಬಾರುಕೋಲಿನಿಂದ
ಬಾರಿಸಿದ ಗಾಯದ
ವ್ರಣವೋ..
ಕೇಳುವವರ್ಯಾರಿಲ್ಲ
ಅಲ್ಲಿ..

ಅಂಥ ಕರಾಳ ಛಳಿ, ಗಾಢ ರಾತ್ರಿಯದು

ಮನೆಯೊಳಗೆ ತೊಟ್ಟಿಲಲ್ಲಿ
ದಿವ್ಯನಗುತೊಟ್ಟು
ಮಲಗಿದೆ ಮಗು
ಅದರ ತಾಯಿ ಅಲ್ಲೆ ಕೆಳಗೆ
ಮಲಗಿ ಭವಿಷ್ಯದ ಕನಸುಕಾಣುತ್ತಿದ್ದಾಳೆ
ಯಜಮಾನನೂ ಚಾಪೆಯಲ್ಲಿ
ಹೊರಳುತ್ತಿದ್ದಾನೆ, ಬಹುಷ:
ಪತ್ನಿಯ ಆಪರೇಶನ್ನಿಗೆ ಮಾಡಿದ
ಸಾಲ ಬಾಕಿ ನೆನಪಾಗಿರಬೇಕು

ಈಗ ನಾಯಿಮರಿಯ ಕೂಗು
ತಾರಕಕ್ಕೆ ಏರಿದೆ.
ನರಕವೇ ಧರೆಗೆ ಬಿದ್ದಂತೆ
ಕಿರಿಚುತ್ತಿದೆ..
ಯಜಮಾನ ಎದ್ದಿದ್ದಾನೆ,
ಏನೋ ಗೊಣಗುತ್ತಾನೆ, ಈಗ
ನಿದ್ದೆ ಹಾಳಾಗಿದ್ದಕ್ಕೆ
ಥತ್‌!
ನಿದ್ರಿಸಲೂ ಬಿಡುವುದಿಲ್ಲ
ಕೆಟ್ಟಪ್ರಾಣಿ.
ಬಾಗಿಲು ತೆರೆದು ಹೊರಗೆ
ಬಕೆಟ್ಟಿನಲ್ಲಿರುವ
ಬರ್ಫದಂಥ ಕೊರೆಯುವ
ನೀರನ್ನು ನಾಯಿಮರಿಯ
ಮೇಲೆ ಸುರಿಯುತ್ತಾನೆ.
ನಾಯಿ ಮುಲುಗುತ್ತಾ
ಓಡತೊಡಗಿದೆ ಈಗ..
ಎಲ್ಲಗೋ ಗೊತ್ತಿಲ್ಲ..

ಇನ್ನೂ ಪೇಟೆಯಲ್ಲಿ
ಛಳಿಯ ತೆರೆ ಸರಿದಿಲ್ಲ...

21.9.06

ನೀನು ದೂರವಾಗಿಲ್ಲ!

ನನ್ನಿಂದ ನೀನು
ದೂರವಾಗಿಲ್ಲ..
ದೂರವಾಗಿದ್ದೇನೆ
ಎಂದು ನೀ ಹೇಳಿದರೂ
ನಾನು ನಂಬುವುದಿಲ್ಲ,
ಯಾಕೆಂದರೆ
ನನ್ನ ಕಂಬನಿಗಳಿನ್ನೂ
ನಿಂತಿಲ್ಲ!

9.9.06

ಕಡಲ ಕಿನಾರೆಯ ಲಹರಿ

ಕಣ್ಣು ಹಾಯಿಸಿದಷ್ಟೂ ದೂರಕ್ಕೆ
ಎಳೆದೊಯ್ಯುವ ದಿಗಂತ
ಸಾಗರ ಗರ್ಭದಿಂದ ಎದ್ದೆದ್ದು
ಹೊರಟಂತೆ
ಸಾಲಾಗಿ ತೀರಕ್ಕೆ ಮರಳುವ
ಧಾವಂತದ ದೋಣಿಗಳು

ನೋಡುತ್ತಿದ್ದರೆ
ನೋಡುತ್ತಲೇ ಇರಬೇಕೆನ್ನುವ
ಆಕರ್ಷಣೆ..
ತಾಯಿಯಂತಹ ಆಪ್ತತೆ

ಕಡಲ ತೀರದ ತೆಕ್ಕೆಯಲ್ಲಿ
ಅಸಂಖ್ಯ ಜನ
ಜನ..ಪ್ರತಿದಿನ
ಪ್ರೇಮಿಗಳು...ನೊಂದವರು..
ಮುದುಕರು..ನಾಯಿ ಆಡಿಸುವವರು
ಜೀವನದ ಜಾತ್ರೆ ಮುಗಿದಂತೆ
ತೆಪ್ಪಗೆ ಕೂತವರು

ಇವ್ಯಾವುದೂ ನನಗೆ
ಬೇಕಾಗಿಲ್ಲ
ಅಥವಾ
ನಿಮ್ಮಿಂದ ಏನಾದರೆ
ನಮಗೇನು? ಎಂಬಂತೆ
ದಿನಾ ತಮ್ಮ ಪಾಡಿಗೆ
ತಾವು ತೀರಕ್ಕೆ ತೆವಳಿ
ಬರುವ ಬಾಡಿಗೆ
ಬಂಟರಂಥ ತೆರೆಗಳು...
ಸಂಜೆಯಾಗುತ್ತಲೆ
ತೆರೆಯ ಮೇಲಿಂದ
ತೇಲಿ ಬರುವ ತುಪುತುಪು
ಹಾರುವ ಅರೆಜೀವದ
ಮೀನ ಹೊತ್ತ ಹಾಯಿದೋಣಿಗಳು.

ಅರೆ, ಹೊರಡೋಣ ಹೊತ್ತಾಯ್ತು
ಸಮುದ್ರದ ಗುಟ್ಟು ತಿಳಿದಾಯ್ತು
ಎಂದು ತಿರುಗಿದಾಗಲೇ
ಇನ್ನೂ ಇದೆ, ಮುಗಿದಿಲ್ಲ
ಎಂದು ಗಹಗಹಿಸಿ, ಅಬ್ಬರಿಸಿ
ಬಂಡೆಗೆ ಅಪ್ಪಳಿಸುತ್ತಲೇ
ಇರುತ್ತವೆ ಹೆದ್ದೆರೆಗಳು!

3.9.06

ಪ್ರತಿಭೆ ಮತ್ತು ಚಟ - ಒಂದು ಸಂಬಂಧಾನ್ವೇಷಣೆ !


ಟಗಳಿಗೆ ಮತ್ತು ಪ್ರತಿಭೆಗೆ ಅದೇನೋ ಸಂಬಂಧ ಇರುವ ಹಾಗೆ ಅನೇಕ ಬಾರಿ ಕಾಣಿಸೋದಿದೆ. ಅಥವಾ ಪ್ರತಿಭಾನ್ವಿತರನ್ನು ಕಂಡರೆ ಚಟಗಳಿಗೆ ಅದೇನು ಆಕರ್ಷಣೆಯೋ !ನನ್ನ ಹಿರಿಯ ಸಹೋದ್ಯೋಗಿ ಪತ್ರಕರ್ತರೊಬ್ಬರು ಯಾವುದೋ ಪ್ರಮುಖ ಸುದ್ದಿ ಬರೆಯಬೇಕಾಗಿ ಬಂದಾಗಲೆಲ್ಲ ಸೀದಾ ಕಚೇರಿಯಿಚಿದ ಹೊರ ನಡೆಯುತ್ತಾರೆ. ನೀವೂ ಕುತೂಹಲದಿಂದ ಅವರನ್ನು ಹಿಂಬಾಲಿಸಿದರೆ ಆ ಮನುಷ್ಯ ಬಾಲ್ಕನಿಯಲ್ಲಿ ನಿಂತು ನಿರಾಳವಾಗಿ ಸಿಗರೇಟು ಸುಡುತ್ತಿರುತ್ತಾರೆ. ಮತ್ತೆ ಬಂದು ಸುದ್ದಿ ಅಥವಾ ಲೇಖನ ಬರೆಯಲು ಕೂತರೆ ಆಚೀಚೆ ನೋಡದೆ ಏಕೋಧ್ಯಾನದಲ್ಲಿರುವಂತೆ ಕಂಪ್ಯೂಟರ್ ಟಕಟಕಾಯಿಸುತ್ತಿರುತ್ತಾರೆ!ಹಾಗೆ ಅಚ್ಚುಕಟ್ಟಾದ ಒಂದು ಲೇಖನ ಬೇಗನೆ ಸಿದ್ಧವಾಗಿರುತ್ತದೆ.ಅವರೇ ಹೇಳುವ ಹಾಗೆ ಬೆಂಗಳೂರಿನಲ್ಲೊಬ್ಬ ಅಗ್ರಮಾನ್ಯ ಪತ್ರಕರ್ತರೊಬ್ಬರು(ಮುಖ್ಯವಾಗಿ ರಾಜಕೀಯ, ಅಪರಾಧ ವಿಷಯಗಳಲ್ಲಿ ಎತ್ತಿದ ಕೈಯಂತೆ) ಸುದ್ದಿ ಬರೆಯಲು ಮೊದಲು ಗಂಟಲಿಗೆ `ತೀರ್ಥ' ಬೀಳಲೇ ಬೇಕಂತೆ. ಅವರಿಗಿದ್ದ ಸಂಪರ್ಕ, ಬರೆಯುವ ಶೈಲಿ, ಓದಿಸಿಕೊಂಡು ಹೋಗುವ ವಸ್ತು ನಾವೀನ್ಯತೆ ಬಹಳ ಪ್ರಸಿದ್ಧವಂತೆ.ಖ್ಯಾತ ಪತ್ರಕರ್ತ, `ಪನ್'ಡಿತರಾಗಿದ್ದ ವೈಎನ್ಕೆಯವರ ಶ್ರೀಮಾನ್ `ಘಾ'(ಇದು ಗುಂಡುಹಾಕಿದವ ಎನ್ನುವುದರ ಅಪಭ್ರಂಶ ಎನ್ನುವ ರಹಸ್ಯವನ್ನು ಅವರ ಹತ್ತಿರದಿಂದ ಬಲ್ಲ ಕೆಲವೇ ಮಂದಿ ತಿಳಿದುಕೊಂಡಿದ್ದಾರೆ) ಹುಟ್ಟಿಕೊಂಡಿದ್ದೂ ಇದೇ ಹಿನ್ನೆಲೆಯಲ್ಲಂತೆ. ಚಟಗಳೆಲ್ಲ ಪತ್ರಕರ್ತರಿಗಷ್ಟೇ ಸೀಮಿತವಲ್ಲ, ಖ್ಯಾತ ವಿದ್ವಾಂಸರೊಬ್ಬರು ಮೈಸೂರಿನ ಗಲ್ಲಿಯೊಂದರಲ್ಲಿ ಕೊಚ್ಚೆ ಕೆಸರು ಮೆಟ್ಟಿಕೊಂಡು ಕಂಟ್ರಿ ಸಾರಾಯಿಗಾಗಿ ಅಲೆದದ್ದನ್ನು ಅವರೊಂದಿಗಿದ್ದ ನನ್ನ ಬಂಧುವೊಬ್ಬರು ಒಮ್ಮೆ ಹೇಳಿದ್ದರು. ಈಗಲೂ ಮಂಗಳೂರಿನ ಹಲವು ಕವಿ ಪುಂಗವರು, ಪ್ರಾಧ್ಯಾಪಕರು ಒಟ್ಟು ಸೇರಿ ನಶೆಯೇರಿಸಿಕೊಳ್ಳುವುದು ಇದೆ.ಹಳ್ಳಿಯಲ್ಲಿ ಮುಂಜಾನೆಯಿಂದ ಸೂರ್ಯ ಮುಳುಗುವ ವರೆಗೆ ಮೈಮುರಿಯುವಂತೆ ದುಡಿದು, ಸಾಲದ ನೋವು ಮರೆಯುವುದಕ್ಕೆಂದೋ, ಮನರಂಜನೆಯೆಂದೋ ಕಂಟ್ರಿ ಏರಿಸಿದ್ದನ್ನು ಕಟುವಾಗಿ ಸಭೆಗಳಲ್ಲಿ ಹೀಯಾಳಿಸುವವರು, ತಮಾಷೆ ಮಾಡುವವರು, ತಮಗೆ ಅರಿವಿಲ್ಲದಂತೆ ಇನ್ಯಾವುದೋ ಚಟಕ್ಕೆ ಹೊಂದಿಕೊಂಡಿರುತ್ತಾನೆ.ಕುಡಿತ, ವೀಳ್ಯ ಹಾಕೋದು, ಲಾಟರಿ, ವೇಶ್ಯಾ ಸಹವಾಸ ಮುಂತಾದ ಸಾಂಪ್ರದಾಯಿಕ ಚಟಗಳಿಗೆ ಈಗ ಲೇಟೆಸ್ಟ್ ವರ್ಷನ್ಗಳಾದ ಲೈವ್ ಬ್ಯಾಂಡ್ ಮತ್ತು ನನ್ನ ಮಾಹಿತಿಗೆ ಬರದಿರುವ ಇನ್ನೂ ಕೆಲವು !) ಸೇರಿಕೊಂಡಿವೆ.ಆತೀವ ಬುದ್ಧಿವಂತರೂ, ಕುಶಾಗ್ರಮತಿಗಳೆನಿಸಿಕೊಂಡವರೂ, ಜನಪ್ರತಿನಿಧಿಗಳೂ ಗುಟ್ಟಾಗಿ, ಮಾನಿನಿಯರ ಝಲಕ್ ನೋಡುತ್ತ ಕಬಾಬ್ ಕಡಿಯುತ್ತಾರೆ, ಪೆಗ್ ಇಳಿಸುತ್ತಾರೆ. ಇತರರ ಖಾಸಗಿತನದ ಸಂಗತಿಗಳನ್ನು ಬಯಲುಮಾಡುವುದಾಗಿ ಬೆದರಿಸುತ್ತಾ, ಮೊತ್ತ ಕೀಳುವ ಖ್ಯಾತರು ಹಾಗೂ ವೀರರೆನಿಸಿಕೊಂಡ ಪತ್ರಕರ್ತರೂ ಇದರಲ್ಲಿ ಕಡಿಮೆಯೇನಿಲ್ಲ. ಅದೇನೇ ಇರಲಿ, ಮನುಷ್ಯನಾದವನೊಬ್ಬನಿಗೆ ಒಂದಾದರೂ ಚಟ, ಅಭ್ಯಾಸ, ಹವ್ಯಾಸ ಇದ್ದರೆ ಬದುಕು ರಸಮಯ ಎನ್ನುವುದು ಮಾತ್ರ ನಿಜ, ಆದರೆ ಇವುಗಳ ಎಲ್ಲೆಗಳನ್ನು ಅರಿತುಕೊಳ್ಳಬೇಕಾದ್ದೂ ಅಷ್ಟೇಸತ್ಯ

31.8.06

ಮಂಜು ಕವಿದಾಗ...


ಆ ಚುಮು ಚುಮು ಚಳಿ ತರುವ ಹಿತಕರ ಭಾವನೆ ಹೇಳಿಕೆಗೆ ನಿಲುಕದು....ಅಂತಹ ಆಪ್ತ ಸಂಗತಿಗಳೇ ಇಲ್ಲಿ ಬರುವಂತಾಗಲು ಪ್ರಯತ್ನಿಸುತ್ತೇನೆ.
Related Posts Plugin for WordPress, Blogger...