26.9.06

ಕರಾಳ ರಾತ್ರಿಯಲ್ಲಿ!

ನಡುರಾತ್ರಿ ಪೇಟೆಗೆ ಪೇಟೆಯೇ
ಥರಗುಟ್ಟುತ್ತಿದೆ ಛಳಿಗೆ
ಒಂದೆರಡು
ಬರಡು ಮರಗಳೂ
ತೊಯ್ದು ಹೋಗಿವೆ
ಸುರಿವ ಮಂಜಿಗೆ

ಅದೋ ಅಲ್ಲಿ...
ಆ ಸೋಮಾರಿಗಳ ಕಟ್ಟೆಯಲ್ಲಿ
ನಾಯಿಮರಿಯೊಂದು
ಕುಕ್ಕರಕುಳಿತಿದೆ
ಕುಂಯ್ಗುಡುತ್ತಿದೆ..
ಪಾಪ,
ಛಳಿಯೋ, ಹಸಿವಾಗಿದೆಯೋ
ಅಥವಾ
ಮೊನ್ನೆ ಅಂಗಡಿಯಾತ
ಬಾರುಕೋಲಿನಿಂದ
ಬಾರಿಸಿದ ಗಾಯದ
ವ್ರಣವೋ..
ಕೇಳುವವರ್ಯಾರಿಲ್ಲ
ಅಲ್ಲಿ..

ಅಂಥ ಕರಾಳ ಛಳಿ, ಗಾಢ ರಾತ್ರಿಯದು

ಮನೆಯೊಳಗೆ ತೊಟ್ಟಿಲಲ್ಲಿ
ದಿವ್ಯನಗುತೊಟ್ಟು
ಮಲಗಿದೆ ಮಗು
ಅದರ ತಾಯಿ ಅಲ್ಲೆ ಕೆಳಗೆ
ಮಲಗಿ ಭವಿಷ್ಯದ ಕನಸುಕಾಣುತ್ತಿದ್ದಾಳೆ
ಯಜಮಾನನೂ ಚಾಪೆಯಲ್ಲಿ
ಹೊರಳುತ್ತಿದ್ದಾನೆ, ಬಹುಷ:
ಪತ್ನಿಯ ಆಪರೇಶನ್ನಿಗೆ ಮಾಡಿದ
ಸಾಲ ಬಾಕಿ ನೆನಪಾಗಿರಬೇಕು

ಈಗ ನಾಯಿಮರಿಯ ಕೂಗು
ತಾರಕಕ್ಕೆ ಏರಿದೆ.
ನರಕವೇ ಧರೆಗೆ ಬಿದ್ದಂತೆ
ಕಿರಿಚುತ್ತಿದೆ..
ಯಜಮಾನ ಎದ್ದಿದ್ದಾನೆ,
ಏನೋ ಗೊಣಗುತ್ತಾನೆ, ಈಗ
ನಿದ್ದೆ ಹಾಳಾಗಿದ್ದಕ್ಕೆ
ಥತ್‌!
ನಿದ್ರಿಸಲೂ ಬಿಡುವುದಿಲ್ಲ
ಕೆಟ್ಟಪ್ರಾಣಿ.
ಬಾಗಿಲು ತೆರೆದು ಹೊರಗೆ
ಬಕೆಟ್ಟಿನಲ್ಲಿರುವ
ಬರ್ಫದಂಥ ಕೊರೆಯುವ
ನೀರನ್ನು ನಾಯಿಮರಿಯ
ಮೇಲೆ ಸುರಿಯುತ್ತಾನೆ.
ನಾಯಿ ಮುಲುಗುತ್ತಾ
ಓಡತೊಡಗಿದೆ ಈಗ..
ಎಲ್ಲಗೋ ಗೊತ್ತಿಲ್ಲ..

ಇನ್ನೂ ಪೇಟೆಯಲ್ಲಿ
ಛಳಿಯ ತೆರೆ ಸರಿದಿಲ್ಲ...

21.9.06

ನೀನು ದೂರವಾಗಿಲ್ಲ!

ನನ್ನಿಂದ ನೀನು
ದೂರವಾಗಿಲ್ಲ..
ದೂರವಾಗಿದ್ದೇನೆ
ಎಂದು ನೀ ಹೇಳಿದರೂ
ನಾನು ನಂಬುವುದಿಲ್ಲ,
ಯಾಕೆಂದರೆ
ನನ್ನ ಕಂಬನಿಗಳಿನ್ನೂ
ನಿಂತಿಲ್ಲ!

9.9.06

ಕಡಲ ಕಿನಾರೆಯ ಲಹರಿ

ಕಣ್ಣು ಹಾಯಿಸಿದಷ್ಟೂ ದೂರಕ್ಕೆ
ಎಳೆದೊಯ್ಯುವ ದಿಗಂತ
ಸಾಗರ ಗರ್ಭದಿಂದ ಎದ್ದೆದ್ದು
ಹೊರಟಂತೆ
ಸಾಲಾಗಿ ತೀರಕ್ಕೆ ಮರಳುವ
ಧಾವಂತದ ದೋಣಿಗಳು

ನೋಡುತ್ತಿದ್ದರೆ
ನೋಡುತ್ತಲೇ ಇರಬೇಕೆನ್ನುವ
ಆಕರ್ಷಣೆ..
ತಾಯಿಯಂತಹ ಆಪ್ತತೆ

ಕಡಲ ತೀರದ ತೆಕ್ಕೆಯಲ್ಲಿ
ಅಸಂಖ್ಯ ಜನ
ಜನ..ಪ್ರತಿದಿನ
ಪ್ರೇಮಿಗಳು...ನೊಂದವರು..
ಮುದುಕರು..ನಾಯಿ ಆಡಿಸುವವರು
ಜೀವನದ ಜಾತ್ರೆ ಮುಗಿದಂತೆ
ತೆಪ್ಪಗೆ ಕೂತವರು

ಇವ್ಯಾವುದೂ ನನಗೆ
ಬೇಕಾಗಿಲ್ಲ
ಅಥವಾ
ನಿಮ್ಮಿಂದ ಏನಾದರೆ
ನಮಗೇನು? ಎಂಬಂತೆ
ದಿನಾ ತಮ್ಮ ಪಾಡಿಗೆ
ತಾವು ತೀರಕ್ಕೆ ತೆವಳಿ
ಬರುವ ಬಾಡಿಗೆ
ಬಂಟರಂಥ ತೆರೆಗಳು...
ಸಂಜೆಯಾಗುತ್ತಲೆ
ತೆರೆಯ ಮೇಲಿಂದ
ತೇಲಿ ಬರುವ ತುಪುತುಪು
ಹಾರುವ ಅರೆಜೀವದ
ಮೀನ ಹೊತ್ತ ಹಾಯಿದೋಣಿಗಳು.

ಅರೆ, ಹೊರಡೋಣ ಹೊತ್ತಾಯ್ತು
ಸಮುದ್ರದ ಗುಟ್ಟು ತಿಳಿದಾಯ್ತು
ಎಂದು ತಿರುಗಿದಾಗಲೇ
ಇನ್ನೂ ಇದೆ, ಮುಗಿದಿಲ್ಲ
ಎಂದು ಗಹಗಹಿಸಿ, ಅಬ್ಬರಿಸಿ
ಬಂಡೆಗೆ ಅಪ್ಪಳಿಸುತ್ತಲೇ
ಇರುತ್ತವೆ ಹೆದ್ದೆರೆಗಳು!

3.9.06

ಪ್ರತಿಭೆ ಮತ್ತು ಚಟ - ಒಂದು ಸಂಬಂಧಾನ್ವೇಷಣೆ !


ಟಗಳಿಗೆ ಮತ್ತು ಪ್ರತಿಭೆಗೆ ಅದೇನೋ ಸಂಬಂಧ ಇರುವ ಹಾಗೆ ಅನೇಕ ಬಾರಿ ಕಾಣಿಸೋದಿದೆ. ಅಥವಾ ಪ್ರತಿಭಾನ್ವಿತರನ್ನು ಕಂಡರೆ ಚಟಗಳಿಗೆ ಅದೇನು ಆಕರ್ಷಣೆಯೋ !ನನ್ನ ಹಿರಿಯ ಸಹೋದ್ಯೋಗಿ ಪತ್ರಕರ್ತರೊಬ್ಬರು ಯಾವುದೋ ಪ್ರಮುಖ ಸುದ್ದಿ ಬರೆಯಬೇಕಾಗಿ ಬಂದಾಗಲೆಲ್ಲ ಸೀದಾ ಕಚೇರಿಯಿಚಿದ ಹೊರ ನಡೆಯುತ್ತಾರೆ. ನೀವೂ ಕುತೂಹಲದಿಂದ ಅವರನ್ನು ಹಿಂಬಾಲಿಸಿದರೆ ಆ ಮನುಷ್ಯ ಬಾಲ್ಕನಿಯಲ್ಲಿ ನಿಂತು ನಿರಾಳವಾಗಿ ಸಿಗರೇಟು ಸುಡುತ್ತಿರುತ್ತಾರೆ. ಮತ್ತೆ ಬಂದು ಸುದ್ದಿ ಅಥವಾ ಲೇಖನ ಬರೆಯಲು ಕೂತರೆ ಆಚೀಚೆ ನೋಡದೆ ಏಕೋಧ್ಯಾನದಲ್ಲಿರುವಂತೆ ಕಂಪ್ಯೂಟರ್ ಟಕಟಕಾಯಿಸುತ್ತಿರುತ್ತಾರೆ!ಹಾಗೆ ಅಚ್ಚುಕಟ್ಟಾದ ಒಂದು ಲೇಖನ ಬೇಗನೆ ಸಿದ್ಧವಾಗಿರುತ್ತದೆ.ಅವರೇ ಹೇಳುವ ಹಾಗೆ ಬೆಂಗಳೂರಿನಲ್ಲೊಬ್ಬ ಅಗ್ರಮಾನ್ಯ ಪತ್ರಕರ್ತರೊಬ್ಬರು(ಮುಖ್ಯವಾಗಿ ರಾಜಕೀಯ, ಅಪರಾಧ ವಿಷಯಗಳಲ್ಲಿ ಎತ್ತಿದ ಕೈಯಂತೆ) ಸುದ್ದಿ ಬರೆಯಲು ಮೊದಲು ಗಂಟಲಿಗೆ `ತೀರ್ಥ' ಬೀಳಲೇ ಬೇಕಂತೆ. ಅವರಿಗಿದ್ದ ಸಂಪರ್ಕ, ಬರೆಯುವ ಶೈಲಿ, ಓದಿಸಿಕೊಂಡು ಹೋಗುವ ವಸ್ತು ನಾವೀನ್ಯತೆ ಬಹಳ ಪ್ರಸಿದ್ಧವಂತೆ.ಖ್ಯಾತ ಪತ್ರಕರ್ತ, `ಪನ್'ಡಿತರಾಗಿದ್ದ ವೈಎನ್ಕೆಯವರ ಶ್ರೀಮಾನ್ `ಘಾ'(ಇದು ಗುಂಡುಹಾಕಿದವ ಎನ್ನುವುದರ ಅಪಭ್ರಂಶ ಎನ್ನುವ ರಹಸ್ಯವನ್ನು ಅವರ ಹತ್ತಿರದಿಂದ ಬಲ್ಲ ಕೆಲವೇ ಮಂದಿ ತಿಳಿದುಕೊಂಡಿದ್ದಾರೆ) ಹುಟ್ಟಿಕೊಂಡಿದ್ದೂ ಇದೇ ಹಿನ್ನೆಲೆಯಲ್ಲಂತೆ. ಚಟಗಳೆಲ್ಲ ಪತ್ರಕರ್ತರಿಗಷ್ಟೇ ಸೀಮಿತವಲ್ಲ, ಖ್ಯಾತ ವಿದ್ವಾಂಸರೊಬ್ಬರು ಮೈಸೂರಿನ ಗಲ್ಲಿಯೊಂದರಲ್ಲಿ ಕೊಚ್ಚೆ ಕೆಸರು ಮೆಟ್ಟಿಕೊಂಡು ಕಂಟ್ರಿ ಸಾರಾಯಿಗಾಗಿ ಅಲೆದದ್ದನ್ನು ಅವರೊಂದಿಗಿದ್ದ ನನ್ನ ಬಂಧುವೊಬ್ಬರು ಒಮ್ಮೆ ಹೇಳಿದ್ದರು. ಈಗಲೂ ಮಂಗಳೂರಿನ ಹಲವು ಕವಿ ಪುಂಗವರು, ಪ್ರಾಧ್ಯಾಪಕರು ಒಟ್ಟು ಸೇರಿ ನಶೆಯೇರಿಸಿಕೊಳ್ಳುವುದು ಇದೆ.ಹಳ್ಳಿಯಲ್ಲಿ ಮುಂಜಾನೆಯಿಂದ ಸೂರ್ಯ ಮುಳುಗುವ ವರೆಗೆ ಮೈಮುರಿಯುವಂತೆ ದುಡಿದು, ಸಾಲದ ನೋವು ಮರೆಯುವುದಕ್ಕೆಂದೋ, ಮನರಂಜನೆಯೆಂದೋ ಕಂಟ್ರಿ ಏರಿಸಿದ್ದನ್ನು ಕಟುವಾಗಿ ಸಭೆಗಳಲ್ಲಿ ಹೀಯಾಳಿಸುವವರು, ತಮಾಷೆ ಮಾಡುವವರು, ತಮಗೆ ಅರಿವಿಲ್ಲದಂತೆ ಇನ್ಯಾವುದೋ ಚಟಕ್ಕೆ ಹೊಂದಿಕೊಂಡಿರುತ್ತಾನೆ.ಕುಡಿತ, ವೀಳ್ಯ ಹಾಕೋದು, ಲಾಟರಿ, ವೇಶ್ಯಾ ಸಹವಾಸ ಮುಂತಾದ ಸಾಂಪ್ರದಾಯಿಕ ಚಟಗಳಿಗೆ ಈಗ ಲೇಟೆಸ್ಟ್ ವರ್ಷನ್ಗಳಾದ ಲೈವ್ ಬ್ಯಾಂಡ್ ಮತ್ತು ನನ್ನ ಮಾಹಿತಿಗೆ ಬರದಿರುವ ಇನ್ನೂ ಕೆಲವು !) ಸೇರಿಕೊಂಡಿವೆ.ಆತೀವ ಬುದ್ಧಿವಂತರೂ, ಕುಶಾಗ್ರಮತಿಗಳೆನಿಸಿಕೊಂಡವರೂ, ಜನಪ್ರತಿನಿಧಿಗಳೂ ಗುಟ್ಟಾಗಿ, ಮಾನಿನಿಯರ ಝಲಕ್ ನೋಡುತ್ತ ಕಬಾಬ್ ಕಡಿಯುತ್ತಾರೆ, ಪೆಗ್ ಇಳಿಸುತ್ತಾರೆ. ಇತರರ ಖಾಸಗಿತನದ ಸಂಗತಿಗಳನ್ನು ಬಯಲುಮಾಡುವುದಾಗಿ ಬೆದರಿಸುತ್ತಾ, ಮೊತ್ತ ಕೀಳುವ ಖ್ಯಾತರು ಹಾಗೂ ವೀರರೆನಿಸಿಕೊಂಡ ಪತ್ರಕರ್ತರೂ ಇದರಲ್ಲಿ ಕಡಿಮೆಯೇನಿಲ್ಲ. ಅದೇನೇ ಇರಲಿ, ಮನುಷ್ಯನಾದವನೊಬ್ಬನಿಗೆ ಒಂದಾದರೂ ಚಟ, ಅಭ್ಯಾಸ, ಹವ್ಯಾಸ ಇದ್ದರೆ ಬದುಕು ರಸಮಯ ಎನ್ನುವುದು ಮಾತ್ರ ನಿಜ, ಆದರೆ ಇವುಗಳ ಎಲ್ಲೆಗಳನ್ನು ಅರಿತುಕೊಳ್ಳಬೇಕಾದ್ದೂ ಅಷ್ಟೇಸತ್ಯ
Related Posts Plugin for WordPress, Blogger...