ಸಹಸ್ರಾರು ವರ್ಷದ
ಇತಿಹಾಸದ ಕಥೆ
ಸಾರುವ ಕಲ್ಲು ಚೆಲ್ಲಾಪಿಲ್ಲಿ
ಹಿಂದೆ ದೃಢವಾಗಿ ನಿಂತಿದೆ ಆ ದೇಗುಲ
ಇಡೀ ಊರಿನ ಸಮಸ್ತರ
ಆತ್ಮಶಕ್ತಿಯಂತೆ, ನಾನಿದ್ದೇನೆ
ಎನ್ನುವ ಯಜಮಾನನಂತೆ
ಹೆಚ್ಚಾಗಿ ಖಾಲಿಖಾಲಿ
ದೇಗುಲದ ಗರ್ಭಗುಡಿಯಲ್ಲಿ
ಸುತ್ತ ಹಾರುತ್ತಾವೆ
ಹತ್ತಾರು ಬಾವಲಿ
ಮಿಣಿರು ದೀಪದ ಬೆಳಕಲ್ಲಿ
ಕುಳಿತಿದ್ದಾನೆ ದೇವ
ಊರಿನ ಸಮಸ್ತರ ಜೀವ!
ಪೂಜೆ ಸಮಯಕ್ಕೆ
ಗೋಪುರ ತುಂಬಾ ಜನ
ತೂಗುತ್ತಿರುವ ಗಂಟೆಗಳಿಗೂ
ಕೈಗಳು ಅಂಟಿಕೊಳ್ಳುತ್ತವೆ
ಗರ್ಭಗುಡಿಯಲ್ಲಿ ಪ್ರತಿಧ್ವನಿಸುತ್ತದೆ
ಢಣಢಣಢಣ
ಸಮಸ್ತರ ನೋವಿಗೆ ನಲಿವಿಗೆ
ಸಾಕ್ಷಿ ಈ ದೇಗುಲ
ಹೊಸಹುಟ್ಟಿನ ನಗುವಿಗೆ
ಸಾವಿನ ಅಳುವಿಗೆ
ಗುರುತು ದೇಗುಲ
ಸಹಸ್ರಾರು ನಂಬಿಕೆಗಳಿಗೆ
ನೂರಾರು ಆಕಾಂಕ್ಷೆಗಳಿಗೆ
ಮೂಲಸ್ಥಾನ ಈ ದೇವಸ್ಥಾನ!
(ಇತ್ತೀಚೆಗೆ ಶಿಶಿಲಕ್ಕೆ ಹೋಗಿದ್ದಾಗ ಅಲ್ಲಿನ ಹಳೆಯ ದೇವಸ್ಥಾನ ನೋಡಿ ಪ್ರೇರಿತನಾದಾಗ ಹುಟ್ಟಿದ ಕವನ ಇದು)
No comments:
Post a Comment