11.4.07

ಅಜ್ಜಿಯ ಮನೆಗೆ ಹೋಗಿದ್ದೆ......


ಏಪ್ರಿಲ್ ತಿಂಗಳು ಓಡುತ್ತಾ ಇದೆ...ಹಳ್ಳಿಯ ಮಕ್ಕಳು ಶಾಲೆಯ ಆಲೋಚನೆಯನ್ನೇ ಬಿಟ್ಟು ರಜೆಯನ್ನು ಧ್ವಂಸ ಮಾಡುತ್ತಾ ಕಳೆಯುವ ಕಾಲ. ಮಕ್ಕಳಿಗೆ ಸಂಭ್ರಮ ಇರಬಹುದೇನೋ.
ನಗರಗಳಲ್ಲಂತೂ ಬಹುತೇಕ ಮನೆಗಳಲ್ಲಿ ಮಕ್ಕಳು ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿದ್ದಾರೆ! ರಜೆ ಸಿಗುವ ವರೆಗೆ ವ್ಯಾಸಂಗವಾದರೆ, ರಜೆಯಲ್ಲಿ ಬೇಸಿಗೆ ಶಿಬಿರವಂತೆ! ಇನ್ನು ನನ್ನ ಪಕ್ಕದ ಮನೆಯಲ್ಲಿನ ಚೂಟಿ ಹುಡುಗನೊಬ್ಬನದ್ದು ಸಮಸ್ಯೆ ಕ್ಲಿಷ್ಟಕರವಾದ್ದು. ಅವನ ಅಣ್ಣ ಪಿಯುಸಿ ಕೋಚಿಂಗ್ ಕ್ಲಾಸ್‌ಗೆ ಹೋಗ್ತಾ ಇರೋ ಕಾರಣ ಇವನಿಗೆ ಆಟ ಆಡುವುದು, ಟಿವಿ ನೋಡುವುದಕ್ಕೆ ರಜೆಯಲ್ಲಿಯೂ ಕಟ್ಟುನಿಟ್ಟಾದ ನಿಯಂತ್ರಣ. ಆತ ಮನೆಯಲ್ಲಿ ಇರುವುದಕ್ಕೂ ಆಗದೆ, ಶಾಲೆಗೆ ಹೋಗುವುದೇ ಸುಖ ಎಂದು ಮರುಕ ಪಡುತ್ತಾನೆ. ಆದರೆ ಶಾಲೆಗೆ ರಜೆ. ಏನ್ಮಾಡೋದು?!
ನಗರದ ಮಕ್ಕಳ ರಜೆ ಬಗ್ಗೆ ಹೇಳೋಕೆ ಹೋದರೆ ನಂಗೆ ನೆನಪಾಗೋದು ನಾನು ಹಳ್ಳಿಯಲ್ಲಿ ಅಜ್ಜಿಮನೆಯಲ್ಲಿ ಕಳೆದ ಸಮಯ. ಗೇರು ಮರದಲ್ಲಿ ಹೂ ಬಿಟ್ಟಾಗಿನಿಂದಲೇ ರಜೆಯ ಕನಸುಗಳು ನಮ್ಮನ್ನು ಕಾಡುತ್ತಿದ್ದವು. ಆಗ ಏಪ್ರಿಲ್ ತಿಂಗಳು ಬರುವುದಕ್ಕೇ ಎಲ್ಲರೂ ಕಾಯುತ್ತಿದ್ದೆವು. ನಾನು ಅಜ್ಜನ ಮನೆಯಲ್ಲಿಯೇ ಶಾಲೆಗೆ ಹೋಗಿದ್ದು. ಮನೆಯಲ್ಲಿ ಚಿಕ್ಕವನು ನಾನೊಬ್ನೇ.
ಹಾಗಾಗಿ ದೊಡ್ಡ ಮಾವನ ಮಗ, ನನಗಿಂತ ಕಿರಿಯವನಾದ ಭಾವ ನವೀನ ದೂರದ ನಗರದಿಂದ ಅಜ್ಜನ ಮನೆಗೆ ಇದೇ ಸಂದರ್ಭದಲ್ಲಿ ದಾಳಿ ಇಡೋದನ್ನೇ ನಾನೂ ಕಾಯುತ್ತಿದ್ದೆ.
ಕಾಸರಗೋಡಿನ ಮೂಲೆಯಲ್ಲಿರುವ ಹಾಸುಪಾದೆಯನ್ನೇ ಹೊದ್ದುಕೊಂಡ ಮಣಿಯಂಪಾದೆಯೆಂಬ ಊರಿನಲ್ಲಿ ನನ್ನ ಅಜ್ಜನ ಮನೆ. ಉತ್ತಮ ಹಳ್ಳಿಗೆ ಉದಾಹರಣೆ ಕೊಡಬಹುದಾದ ಹಳ್ಳಿಯದು. ಈ ಹಳ್ಳಿಯಲ್ಲಿ ನಮಗೆ ಬೇಸಗೆ ರಜೆಯಲ್ಲಿ ಇದ್ದದ್ದು ಕೆಲವೇ ಆಯ್ಕೆ.
. ಮಾರ್ಸೆಲ್ ಸೋಜರ ಅಂಗಡಿಯಿಂದ ಬಾಡಿಗೆ ಸೈಕಲ್ ತುಳಿಯುವುದು.
. ಮನೆಯಿಂದ ರಸ್ತೆಯುದ್ದ ಭಾವನ ನಗರ ಜೀವನದ ‘ಅನುಭವ’ಗಳನ್ನು ಕೇಳಿ ಖುಷಿ ಪಡುತ್ತಾ ನಡೆಯುತ್ತಾ ಹೋಗುವುದು.
.ಗೇರು ಮರದಲ್ಲಿ ಕುಳಿತು ಮಾವಿನ ಹಣ್ಣು, ಅಮ್ಮ ಮಾಡಿಟ್ಟ ತಿಂಡಿ ಸವಿಯುತ್ತಾ ಬಾಯಿಗೆ ಬಂದಂತೆ ಕಥೆ ಕಟ್ಟಿಕೊಂಡು ಸಮಯ ಕಳೆಯುವುದು.
. ಬೆವರಿ ಇನ್ನೇನು ಮೈಯಲ್ಲಿ ಬೆವರೇ ಬತ್ತಿ ಹೋದೀತು ಎನ್ನುವಷ್ಟು ಕ್ರಿಕೆಟ್ಟಾಡೋದು ಇವಿಷ್ಟೇ ಆಯ್ಕೆ ನಮ್ಮದು.
ಇದರ ಮಧ್ಯೆ ಮನೆಯಲ್ಲಿ ಸಣ್ಣ ಮಾವನೊಂದಿಗೆ ಗೇರು ಬೀಜಗಳಲ್ಲಿ ಚೊಟ್ಟಾಟ ಆಡುತ್ತಿದ್ದುದೂ ಉಂಟು. ಇಂತಹ ನಮ್ಮ ಬಿಡುವಿಲ್ಲದ ದಿನಚರಿಯ ಮಧ್ಯೆ ಅಜ್ಜ ನಮ್ಮನ್ನು ಗೇರು ಬೀಜ ಕೊಯ್ಯುವ ಕೆಲಸಕ್ಕೆ, ಅಮ್ಮ ಹಟ್ಟಿಗೆ ತರಗೆಲೆ ತರುವುದಕ್ಕೆ ನಮ್ಮನ್ನು ಎಳೆದೊಯ್ಯುತ್ತಿದ್ದರು.
ಆ ಬೇಸಗೆಯಲ್ಲೂ ಕಟ್ಟಿ ನೀರು ನಿಲ್ಲಿಸಿದ ಕೆರೆಯಲ್ಲಿ ಸರಾಗವಾಗಿ ಈಜು ಹೊಡೆಯುವ ಸಣ್ಣ ಮಾವನನ್ನು ನೋಡಿ ನಮಗೆ ಈಜು ಕಲಿಯಲೇ ಬೇಕು ಎಂಬ ಆಸೆ ಮೂಡಿತ್ತು. ಹಾಗೆ ಬಟ್ಟೆ ಕಳಚಿ ಕೆರೆಕಟ್ಟೆಯಲ್ಲಿ ನಿಂತು ಹಾರುವುದಕ್ಕೆ ಆಗದೆ, ಕಲಿಯುವ ಆಸೆಯೂ ಬಿಡಲಾಗದೆ ಕಂಗಾಲಾಗಿದ್ದೆ. ಆಗಲೇ ಮಾವ ಹಿಂದಿನಿಂದ ನೀರಿಗೆ ತಳ್ಳಿದ್ದರು. ಅಂತೂ ಬಚಾವಾಗಲು ಕೈಕಾಲು ಹೊಡೆದೆ, ಮುಂದೆ ಹೋದೆ. ಹಾಗೆ ಆ ಬಾರಿ ಈಜು ಕಲಿತ ಹೆಮ್ಮೆ ನನಗೆ(ಆ ಬಳಿಕ ಸಣ್ಣಮಾವ ಕಡಬ ಬಳಿ ಹೊಳೆಯಲ್ಲೇ ಮುಳುಗಿ ಕಾಲವಾದರು ಎನ್ನುವ ಬೇಸರ ಈಗಲೂ ಕಾಡುತ್ತಿರುತ್ತದೆ).
ನಮ್ಮೆಲ್ಲ ಚಟುವಟಿಕೆ ನಡುವೆ ಅಜ್ಜಿಯ ಪ್ರೀತಿಯ ಬೈಗುಳಗಳು, ಕೈಕಾಲು ಗಟ್ಟಿ ಆಯೆಕ್ ಮಾಣಿ ಎಂದು ತೈಲಾಭ್ಯಂಜನ ಮಾಡಿಸುವುದು, ಅಜ್ಜ ತೋಟಕ್ಕೆ ಹೋಗಿ ನಮಗಾಗಿ ಕಬ್ಬು ತಂದು ಕೊಡುವುದು....ಹೀಗೆ ಅಜ್ಜಿಯ ಮನೆಯಲ್ಲಿ ರಜೆಯ ವೈಭವ ಮುಗಿಯದ ಕಥೆ.
ಇಂಥ ಅನುಭವ ನನಗೊಬ್ಬನಿಗಲ್ಲ, ನಿಮ್ಮೆಲ್ಲರಿಗೂ ಇರಬಹುದು, ಅಂತಹ ಸುಂದರ ನೆನಪುಗಳನ್ನಿಲ್ಲಿ ಹೇಳಿಕೊಳ್ಳಬಹುದು.

10 comments:

ರಾಜೇಶ್ ನಾಯ್ಕ said...

ಅಜ್ಜಿ ಎಣ್ಣೆ ತಿಕ್ಕಿಯೇ ನಿಮ್ಮ ಕಾಲು ಗಟ್ಟಿಯಾಗಿರಬೇಕು....ಅದಕ್ಕೆ ಚಾರಣದಲ್ಲಿ ಯಾವಾಗಲೂ ಮುಂದೆ...

Mahesh Chevar said...

ಮಧುರವಾದ ನೆನಪುಗಳ ನಿಜವಾದ ಯಾತನೆಯ ಅನುಭವ ಅಜ್ಜಿ ಮನೆಯಲ್ಲೆ ಅಲ್ಲವೇ? ಅಲ್ಲಿ ಸಿಗುವ ಪ್ರತಿಯೊಂದು ಕ್ಷಣವೂ ಸುಮಧುರ. ಮತ್ತೆ ಬರೆಯಿರಿ.....

Shiv said...

ವೇಣು,
ಆಹಾ ! ಎಲ್ಲಿ ಹೋದವು ಆ ದಿನಗಳು !
ತುಂಬಾ ಸೊಗಸಾಗಿ ಮೂಡಿಬಂದಿದೆ ರಜೆಯ ದಿನಗಳು
ಇಂತದೇ ರಜೆಯ ಮೋಜಿನ ಬಗ್ಗೆ ನಾನು ಬರೆದದ್ದು ಇಲ್ಲಿದೆ
http://chittey.blogspot.com/2006/06/blog-post_04.html

mouna said...

naavu chikkavaragiddaga mandyage hogutiddevu, my aunt used to stay there. aaadare eega, avaru bengaloorige bandaru, naavu busy aadevu.... mandya doordalli uLithu. iddadmele besige rajeyalli, naanu hechchagi kadambari annu oddidu unTu!! day in and out... :) eega adyaavudu illa :(

VENU VINOD said...

ರಾಜೇಶ್,
ನೀವು ಹೇಳಿದ್ದು ನಿಜ ಇರಲೂ ಬಹುದು. ಅದಕ್ಕೇ ಹೇಳೋದು ಎಲ್ಲರಿಗೂ ಒಬ್ಬರು ಅಜ್ಜಿ ಇರಲೇಬೇಕು ಅಂತ :)

ಮಹೇಶ್
ನೀವಂದದ್ದು ನಿಜ. ಬರೆಯೋಕೆ ಪ್ರಯತ್ನಿಸ್ತಿದ್ದೀನಿ. ಸಮಯ ಆದಾಗ!

ಶಿವ,
ವ್ಹಾವ್! ಮಾವಿನ ತೋಪಿನ ತಂಪು, ರೊಟ್ಟಿ ಚಟ್ನಿ, ತಣ್ಣನೆ ನೀರು, ಗಾಳಿ ಇವಿಷ್ಟಿದ್ದರೆ ಸ್ವರ್ಗಕ್ಕೆ ಕಿಚ್ಚು ಹಾಕಿ!

ಮೌನ,
ಮಕ್ಕಳಾಗಿದ್ದಾಗ ಓದಿದ್ದು ಬಂತು.ನಾನೂ ಅಷ್ಟೇ, ಬಹಳಷ್ಟು ಕಥೆ, ಕಾದಂಬರಿ ಓದ್ತಾ ಇದ್ದೆ. ಬರ್‍ತಾ ಬರ್‍ತಾ ರಾಯರ ಕುದುರೆ..... :)

ಸಿಂಧು Sindhu said...

ಚಿತ್ರ ನೋಡಿಯೇ ಖುಷಿಯಾಯ್ತು. ಓದಿ ಖುಷಿ ಖುಷಿ.. ಹಳೆಯ ಚಂದದ ನೆನಪುಗಳ ಸಾಲು ಸಾಲು.
ಹಾ.ಮಾ.ನಾಯಕರು ಬಾಲ್ಯದ ನೆನಪುಗಳ ಬಗ್ಗೆ ಬರೆದ ಸಾಲೊಂದರ ಸಾರ್ಥಕ ಪ್ರತಿಮೆ ಈ ಬರಹ.. ಜಡಿಮಳೆಯ ನಡುವಿನರೆ ಕ್ಷಣದ ಎಳೆಬಿಸಿಲಿನಂತೆ...
ನೀವು ಆ ಎಳೆ ಬಿಸಿಲಿನಲ್ಲಿ ಹೂವು ಅರಳಿಸಿದ್ದೀರಿ..

SHREE said...

ಊರಿನ ರಜೆಯ ಗಮ್ಮತು ನೆನಪಿಸ್ಬೇಡಿ ಮಾರಾಯ್ರೆ, ಮತ್ತೆ ಬೆಂಗ್ಳೂರಲ್ಲಿರ್ಲಿಕ್ಕೆ ಮೂಡೇ ಇರುದಿಲ್ಲ.. ಮತ್ತೆ ಯಾಕದ್ರು ದೊಡ್ಡವ್ರಾದ್ವೊ ಅನಿಸಿಬಿಡ್ತದೆ!!

VENU VINOD said...

ಸಿಂಧು,
ನಾಯಕರ ಮುಂದೆ ಇದೇನೂ ಅಲ್ಲ ಬಿಡಿ. ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ವಂದನೆಗಳು

ಶ್ರೀ,
ಬೆಂಗಳೂರೋ ಮಂಗಳೂರೋ ಎಲ್ಲಿದ್ದರೂ ಇಂತಹ ನೆನಪುಗಳಷ್ಟೇ ನಮ್ಮ ಬಾಳ ಪಯಣಕ್ಕೆ ಇಂಧನ ಏನಂತೀರಾ?

somy said...

hi venu,

nija helala? nimma ee rajaa dinagalanna odi, naanyake nanna ooru, ajji mane ella bittu ishtu doora bandbittidene anta annistide . adra joteli yeno ondu helalaarada khushi, nimma hesranna nodi. yaakandre naanu ooralliddaga aakaashavaanili bart idda venu vinod neeve aagirbahudu anno doubt. nanna doubt sari taane?

SHREE said...

adenO niJa. aadre, yavagle nostalgic aagi badukuvudu onthara bejaaru thandide nange :( enmadodu, ello eno aadre ellido nenpagatte, yavudO kaalakke nenapina gaaDi ODatte!!

Related Posts Plugin for WordPress, Blogger...