29.4.07

ಪ್ರಶ್ನೆ

ಕಳೆದ ರಾತ್ರಿ ದಿಢೀರ್‍
ಹೇಳದೆ ಕೇಳದೆ ನೀನು
ಓಡಿ ಹೋಗಿದ್ದು ಯಾಕೆ?
ನಿನ್ನನ್ನು ಹುಡುಕಿ
ಹುಡುಕಿ, ನಿನ್ನ ದಿಢೀರ್‍ ದುಡುಕಿಗೆ
ಕಾರಣದ ಬೆನ್ನು ಹತ್ತಿ...
ಈಗ ನಾನು ಹಾಗೂ
ಬರಡು ಗುಡ್ಡದ ಮೇಲಿನ
ಬುಡವರೆಗೂ ಸೊರಗಿದ ಹುಲ್ಲು
ಝರಿಯಲ್ಲಿ ಹನಿಹನಿ
ಬಿಸಿನೀರು!
ಬಲು ಏಕಾಂಗಿ ನಾನು

ಹೋಗಬಹುದಿತ್ತು ನಿನಗೆ
ಹಾಗೂ ಹೋಗಲೇಬೇಕೆಂದಿದ್ದರೆ
ಆದರೆ....
ಅಂಗಳ ತುಂಬೆಲ್ಲ
ಗುನುಗುಟ್ಟುತ್ತಿದ್ದ ಗೆಜ್ಜೆಯನಾದ
ಕಿಟಿಕಿಬಳಿಯ ಕುರ್ಚಿಮೆತ್ತೆಯಲ್ಲಿ
ಮಲ್ಲಿಗೆಯ ಪರಿಮಳ
ಹಾಗೂ
ಅರ್ಧ ಬಣ್ಣ ಮೆತ್ತಿದ ಕ್ಯಾನ್ವಾಸನ್ನು
ಹಾಗೇ ಬಿಟ್ಟುಹೋದದ್ದು ಯಾಕಾಗಿ?


ನೀನಿಲ್ಲದ ಶೂನ್ಯಕ್ಕಿಂತಲೂ
ಬಿಟ್ಟುಹೋದ ಕುರುಹುಗಳ
ನೆರಳಿನ ಭಯ ನನಗೆ!

11 comments:

suptadeepti said...

"ನೀನಿಲ್ಲದ ಶೂನ್ಯಕ್ಕಿಂತಲೂ
ಬಿಟ್ಟುಹೋದ ಕುರುಹುಗಳ
ನೆರಳಿನ ಭಯ ನನಗೆ!"

ಸುಂದರ ಮುಕ್ತಾಯದ ಸಾಲುಗಳು. "ಪ್ರಶ್ನೆ" ಎಂಬ ಹಣೆಪಟ್ಟಿಗೆ ಈ ಮುಕ್ತಾಯ ಹೊಂದುತ್ತಿಲ್ಲವೇನೋ ಎಂಬ ಸಂದೇಹವೂ ಇದೆ. ಈ ಸಾಲುಗಳಿಲ್ಲದಿದ್ದರೆ ಈ ಹಣೆಪಟ್ಟಿ ಸರಿಯಾಗಿತ್ತು.

ಮನಸ್ವಿನಿ said...

ನೀನಿಲ್ಲದ ಶೂನ್ಯಕ್ಕಿಂತಲೂ
ಬಿಟ್ಟುಹೋದ ಕುರುಹುಗಳ
ನೆರಳಿನ ಭಯ ನನಗೆ!

ಸುಂದರ ಸಾಲುಗಳು

ಶ್ರೀನಿಧಿ.ಡಿ.ಎಸ್ said...

ಐಲಾ!

ಸೊಗಸಾದ ಕವನ, ಮುಕ್ತಾಯ ultimate!

Mahesh Chevar said...

ತುಂಬಾ ಚೆನ್ನಾಗಿದೆ ಕೊನೆಯ ಸಾಲುಗಳು.

ಸುಶ್ರುತ ದೊಡ್ಡೇರಿ said...

ನಂಗೂ ತುಂಬಾ ಇಷ್ಟವಾದದ್ದು ಕೊನೆಯ ಸಾಲುಗಳು. :-)

ಜಯಂತ್ said...

ಅಧ್ಬುತ...!! ನಾನು flatu..

Shiv said...

ಬರಡು ಗುಡ್ಡದ ಸೊರಗಿದ ಹುಲ್ಲಿನೊಂದಿದೆ ಸಮೀಕರಣ..ಚೆನ್ನಾಗಿದೆ ಕಲ್ಪನೆ..

ಅರ್ಧ ಮೆತ್ತಿದ ಕ್ಯಾನ್ವಸ್ ಮುಗಿಯೋದು ಯಾವಾಗ?

VENU VINOD said...

ಸುಪ್ತದೀಪ್ತಿ,
ಕವನ ಓದಿ ಮೆಚ್ಚುವ ಜೊತೆಗೆ ವಿಮರ್ಶೆಯೂ ಮಾಡಿದ್ದೀರಿ. ವಂದನೆ. ನಂಗೂ ಈಗ ಹಾಗೆ ಅನ್ನಿಸ್ತಾ ಇದೆ. ಸಲಹೆ ಕೊಡ್ತಾ ಇರಿ.
ಮನಸ್ವಿನಿ,ಶ್ರೀನಿಧಿ,ಚೇವಾರ್‍,ಸುಶ್ರುತ... ಥ್ಯಾಂಕ್ಸ್ ಸಾಲುಗಳನ್ನು ಮೆಚ್ಚಿಕೊಂಡದ್ದಕ್ಕೆ.
ಜಯಂತ್, ನೀವು ಫ್ಲಾಟ್ ಆಗಿದ್ದೇಕೆ ತಿಳಿಯಲಿಲ್ಲ :-)
ಶಿವ,
ಹೋದವರು ಮರಳಿ ಬಂದರೆ ಕ್ಯಾನ್ವಾಸ್ ಮುಗಿಯಬಹುದೇನೋ

ಸಿಂಧು Sindhu said...

ಚೆನ್ನಾದ ಕವಿತೆ.

ಬಿಟ್ಟು ಹೋದ ಕುರುಹುಗಳ ಕ್ರೌರ್ಯ ಅನುಭವಿಸಿದವರಿಗೇ ಗೊತ್ತು. ನಿಮ್ಮ ಭಯ ಸಹಜ.
ಆದರೆ ಬಿಟ್ಟು ಹೋಗುವವರೂ ಅದನ್ನು ಹೊರಲಾರದ ಭಯದಿಂದಲೇ ಹೋಗಿರುತ್ತಾರೇನೋ.

ನನ್ನದೊಂದು ಹಳೆಯ ಹಳಹಳಿಕೆ ಹೀಗೇ ಕ್ಯಾನ್ವಾಸಿನೊಂದಿಗೆ ಸಮೀಕರಿಸಿ ಬರೆದಿದ್ದಿದೆ. ಎಂದಾದರೂ ಮನಸ್ಸಾದಾಗ ಬ್ಲಾಗಿಗೆ ಹಾಕುತ್ತೇನೆ.

ಹಳಹಳಿಕೆಯನ್ನೂ ಚಂದವಾಗಿಸುವಂತೆ ಗುಲ್ಚಾರ್ ಒಂದು ಕವಿತೆ ಬರೆದಿದ್ದರು. ಅವರು - ವಿದಾಯದ ನಂತರದ ರಾತ್ರಿಯ ತಂಟೆಗೇ ಹೋಗದೆ, ವಿದಾಯದ ಮುಂಚಿನ ರಾತ್ರಿಯ ಸೊಗಸನ್ನೇ ನೆಚ್ಚಿಕೊಂಡು ಹೀಗೆ ಬರೆದಿದ್ದರು.
Last night
was beautiful;
Last night
I was with you!

ಮುಂದಿನದು ನಮ್ಮ ಕಲ್ಪನೆಗೆ ಬಿಟ್ಟಿದ್ದು.

ಆ ಧೈರ್ಯ,ಅಲಕ್ಷ್ಯ ನಮಗೆ (ಕೊನೆಯ ಪಕ್ಷ ನನಗೆ) ಬರುವುದಕ್ಕೇ ಅಷ್ಟೇ ವಯಸ್ಸಾಗಬೇಕೇನೋ ;)

VENU VINOD said...

ಸಿಂಧು,
ಗುಲ್ಜಾರಜ್ಜನ ಭಾವಾತ್ಮಕ ಸಾಲುಗಳಿಗೆ ಮನಸೋತವನು ನಾನೂ. ಮೇಲಿನ ನಾಲ್ಕು ಸಾಲು ಪರಿಚಯಿಸಿದ್ದಕ್ಕೆ ಮತ್ತು ನನ್ನ ಕೆಲ ಸಾಲುಗಳ ಒಳಹೊಕ್ಕು ನೋಡಿದ್ದಕ್ಕೆ. ಥ್ಯಾಂಕ್ಸ್.

jagadeesh sampalli said...

Beautiful poem. It evokes some kind of inner sense. The last three lines are superb. But I feel, those last lines have more meaning than your title. Shadows of yesterdays are always haunting us like ghosts. They can be the remiders of our failues in the past and become inspiration for the future. One cannot walk without these signs and shadows.

Related Posts Plugin for WordPress, Blogger...