ಯಾಕೆಂದರೆ, ಇದುವರೆಗೆ ರಾಜ್ಯದ ಹತ್ತುಹಲವು ಸಣ್ಣಪುಟ್ಟ ಫಾಲ್ಸ್ ನೋಡಿದ್ದರೂ ದೇಶದಲ್ಲೇ ಅತ್ಯಂತ ಸುಂದರ ಜಲಧಾರೆ ಎಂದೆನಿಸಿರುವ ಜೋಗ ನೋಡದ ಪಾಪಿ ನಾನು! ಅದರಲ್ಲೂ ಮುಂಗಾರು ಮಳೆ ನೋಡಿದ ಮೇಲಾದರೂ ಜೋಗ ನೋಡದ ನನ್ನನ್ನು ನನ್ನ ಗೆಳೆಯರ ಬಳಗ ದೂರವಿಡಬಹುದು ಎಂಬ ಭೀತಿಯೂ ಕಾಡಿತ್ತು.
ಜೋಗದ ಮೇಲೆ ಸಿಟ್ಟಾಗಿ ನಾನು ಇದುವರೆಗೆ ನೋಡಿಲ್ಲ ಎಂದಲ್ಲ, ಆದರೆ ನಮ್ಮ ನಡುವೆ ಫೇಮಸ್ ಎಂದುಕೊಂಡ ಅನೇಕ ತಾಣಗಳ ‘ಗತಿ’ ನೋಡಿರುವ ನಾನು, ಜೋಗದಲ್ಲೂ ಅಂತಹ ಮಾಲಿನ್ಯ ನೋಡಿ ಸಂಕಟಪಡದಿರೋಣ ಎಂದು ಮುಂದೂಡಿದ್ದೇ ಇದಕ್ಕೆ ಕಾರಣ.
ಅದೇನೇ ಪ್ರವರಗಳಿರಲಿ, ಈ ಬಾರಿ ಯೂತ್ ಹಾಸ್ಟೆಲ್‌ನ ೪೩ ಮಂದಿಯ ಭರ್ಜರಿ ತಂಡದಲ್ಲಿ ನಾನೂ ಸೇರಿಕೊಂಡೆ. ಮಧ್ಯಾಹ್ನ ಮಂಗಳೂರಿಂದ ಹೊರಟು ರಾತ್ರಿ ೯ರ ಸುಮಾರಿಗೆ ಜೋಗ ಸೇರಿದ ನಾವು ಹೊಟ್ಟೆ ಚುರುಗುಡುತ್ತಿದ್ದ ಕಾರಣ ಮೊದಲು ಹೊಕ್ಕಿದ್ದು ಹೊಟೇಲನ್ನು.
ಆ ಬಳಿಕ ಆ ತಣ್ಣನೆ ರಾತ್ರಿಯಲ್ಲೇ ಹತ್ತು ಹೆಜ್ಜೆ ಹಾಕಿ ಕತ್ತಲಿಗೆ ಕಣ್ಣನ್ನು ಹೊಂದಿಸಿಕೊಂಡು ದೇಶದ ಹೆಮ್ಮೆಯ ಸೊತ್ತನ್ನು ನೋಡಿದೆ, ಅದೇ ದೃಶ್ಯವನ್ನು ಕಣ್ತುಂಬಿಕೊಂಡು, ಜೋಗ ಯೂತ್ ಹಾಸ್ಟೆಲ್ ಕೊಠಡಿಯಲ್ಲಿ ನಿದ್ದೆಗೆ ಶರಣಾದೆ.ಮರುದಿನ ಬೆಳಗ್ಗೆ ಮಿತ್ರ ಅನುಭವೀ ಜಲಪಾತ ಪ್ರೇಮಿ ರಾಜೇಶ್ ನಾಯಕರೊಂದಿಗೆ ಹರಟುತ್ತಾ ಜೋಗ ನೋಡಿದೆ, ಕ್ಯಾಮೆರಾಕ್ಕೆ ಒಂದಷ್ಟು ಕ್ಲಿಕ್ಕಿಸಿದೆ.
ನೀರು ಅಷ್ಟಾಗಿ ಇರಲಿಲ್ಲ. ಲಿಂಗನಮಕ್ಕಿಯಿಂದ ಹೆಚ್ಚು ನೀರು ಬಿಟ್ಟಾಗ ತಾನು ಬೈಕಲ್ಲಿ ಬಂದು ಜೋಗ ನೋಡಿದ ಪ್ರಸಂಗವನ್ನು ನನ್ನಲ್ಲಿ ರಾಜೇಶ್ ಹೇಳಿದರು.
ಜೋಗದ ಬುಡಕ್ಕೆ ಇಳಿಯುವ ಅನುಭವ ತ್ರಾಸದಾಯಕ, ಅಷ್ಟೇ ಆಪ್ತ. ಇಳಿಯುತ್ತಾ ಹೋದಂತೆ ಜಲಪಾತದ ಆಗಾಧತೆ ನಮ್ಮನ್ನು ಆವರಿಸಿಕೊಳ್ಳುತ್ತದೆ. ಎಲ್ಲಾ ದಿಕ್ಕಿಂದಲೂ ಕಡಿದಾದ ಕಣಿವೆ. ಅದಕ್ಕೆ ಧುಮ್ಮಿಕ್ಕುವ ಜೋಗ ನಿಜಕ್ಕು ಸುಂದರ ಎಂದರೆ ಈ ಬಗ್ಗೆ ಸಹಸ್ರಾರು ಬರಹ ಓದಿದ ನಿಮಗೆ ಸಪ್ಪೆ ಎನಿಸಲೇಬೇಕು.
ನನ್ನ ಗಮನ ಸೆಳೆದದ್ದು ಜೋಗದ ಬುಡದಲ್ಲಿ ನೀರಿನ ರಭಸಕ್ಕೆ ಉಂಟಾದ ಸುಂದರ ಶಿಲಾಕೃತಿಗಳು. ಮನಸ್ಸಿನ ಕಲ್ಪನೆಗೆ ಬಿಟ್ಟಂತೆ ಏನೇನೋ ವಿನ್ಯಾಸದ ಶಿಲ್ಪ, ಮಂಜು ಮುಸುಕಿದ ಹಸಿರು ಶರಾವತಿ ಕಣಿವೆ, ಹುಚ್ಚೆಬ್ಬಿಸುವ ಚಳಿ ಇವೆಲ್ಲ ಜೋಗ ಫಾಲ್ಸ್‌ನ ಬೋನಸ್ಸು.
ನಾನು ಭೇಟಿ ಕೊಟ್ಟದ್ದು ಭಾನುವಾರವಾದ ಕಾರಣ ಜನವೋ ಜನ(ಮಾರನೇ ದಿನ ಪತ್ರಿಕೆಯಲ್ಲಿ ನೋಡಿದರೆ ೪೦೦೦ ಜನ ಒಂದೇ ದಿನ ಬಂದಿದ್ದಾರೆ ಎಂದು ಗೊತ್ತಾಯ್ತು). ಹಾಗಾಗಿಯೇ ಜನಪ್ರಿಯತೆಯ ಕುರುಹುಗಳೂ ಜಲಪಾತದ ಸುತ್ತ ಸಾಕಷ್ಟಿದ್ದವು. ಜಲಪಾತದ ಬುಡದಲ್ಲೇ ಚಹಾದಂಗಡಿ ತೆರೆದು ಶರಾವತಿ ಕೊಳ್ಳಕ್ಕೆ ಪ್ಲಾಸ್ಟಿಕ್ ತುಂಬುವ ಅಮೋಘ ಕಾರ್ಯವೂ ನಡೆಯುತ್ತಿತ್ತು.
ಅದೇ ರೀತಿ ಮುಂಗಾರು ಮಳೆ ಶೂಟಿಂಗ್ ನಡೆದ ಬಳಿಕ ಖ್ಯಾತಿ ಪಡೆದ ‘ರಾಜ’ನ ಪಕ್ಕೆಯಲ್ಲೇ ಅಭಿಮಾನಿ ಯಾರೋ ಒಬ್ಬಾತ ತನ್ನ ಉಚ್ಚಿಷ್ಟ ಹಾಕಿ ಧನ್ಯತೆ ಮೆರೆದಿದ್ದ!
ಆದರೂ ಆ ದುರ್ವಾಸನೆ ಸಹಿಸಿಕೊಂಡು , ಎಲ್ಲರೂ ಸರದಿಯಂತೆ ಬಂಡೆಗಲ್ಲ ಮೇಲೆ ಮಲಗಿ ರಾಜನ ಉದ್ದ ಅಳೆಯುವ ಯತ್ನ ಮಾಡುತ್ತಿದ್ದರು. ರಾಜ ಹರಿದು ಬರುವ ಸ್ಥಳದಲ್ಲಿ ಒಬ್ಬ ಆಸಾಮಿ ಈಜುತ್ತಿರುವಾಗ, ನೇರವಾಗಿ ಕಣಿವೆಯ ಒಡಲು ಸೇರುವ ಸಾಧ್ಯತೆ ಇತ್ತು. ಆದರೆ ನಮ್ಮ ತಂಡದ ರಾಕೇಶ ಹೊಳ್ಳ, ತನ್ನ ಜಿರಾಫೆ ದೇಹದ ಕೃಪೆಯಿಂದ ಆಸಾಮಿಯನ್ನು ರಕ್ಷಿಸಿ ಎಲ್ಲರ ಶಹಬ್ಬಾಸ್‌ಗಿರಿಗೆ ಪಾತ್ರನಾದ.
ಅಂತೂ ಜೋಗ ನೋಡಿದ ಕಹಿ-ಸಿಹಿ ಅನುಭವದ ಬಳಿಕ, ರಾಜೇಶ್ ನಾಯಕರ ಈ ಬರಹ ನೋಡಿದ ಮೇಲೆ, ಲಿಂಗನಮಕ್ಕಿ ಗೇಟು ತೆರೆದಾಗ ಇನ್ನೊಮ್ಮೆ ಹೋಗಲೇ ಬೇಕು ಎಂಬ ದೃಢ ನಿಶ್ಚಯ ಹಾಕಿದ್ದೇನೆ.
2 comments:
naanu patrike yalli jogina bagge odide. movie ya prabhavadindaagi hechchu jana adannu noDlikke hogudu asharyavenalla.
howdu, neevu heLodu seri, jalapathada aDiyalli nintu aa manjannu aa tampannu anubhavisuvudhu, aha! bahala maja vaagiruttade.
ಸಾಯೋದ್ರೊಳ್ಗೆ ಒಮ್ಮೆ ನೋಡು ಜೋಗಾದ್ ಗುಂಡಿ ಅನ್ನೋ ಹಾಗೆ ನೀನೂ ಬೇಗ ಜೋಗ ನೋಡಿ ಬಂದೆಯಲ್ಲ. ಲಿಂಗನಮಕ್ಕಿ ಡ್ಯಾಂ ನೀರು ತುಂಬಿ ತುಳುಕಲು ಆರಂಭಿಸಿದ ಮೇಲೆ ಒಮ್ಮೆ ಹೋಗ್ಬೇಕು ಅಂತ ಪ್ಲಾನ್ ಮಾಡ್ತಾ ಇದೀನಿ. ಆಗ್ ನೋಡ್ಬೇಕು ಜೋಗದ ವೈಭವ.
Post a Comment