ಆದರೆ ನಾನಿಲ್ಲಿ ಹೇಳಬೇಕಾದವರು ಇಬ್ಬರ ಬಗ್ಗೆ.
ಒಬ್ಬಾತ ಜಯ, ಇನ್ನೊಬ್ಬ ನಟರಾಜ.
ಅವರಿಬ್ಬರಿಗೂ ಅನೇಕ ವಿಷಯಗಳಲ್ಲಿ ಹೋಲಿಕೆಯಿತ್ತು. ಆದರೆ ಅವರಿಬ್ಬರಿಗೂ ಪರಿಚಯ ಮಾತ್ರ ಇರಲಿಲ್ಲ.
ಜಯ ೧ನೇ ತರಗತಿಯಲ್ಲಿ ನನ್ನ ಗೆಳೆಯನಾದವನು. ಕ್ಲಾಸಲ್ಲಿ ಆತನಿಗೆ ಕಲಿಕೆಯಲ್ಲಿ ಸವಾಲೊಡ್ಡುತ್ತಿದ್ದುದು ನಾನು ಮಾತ್ರ. ಆದರೆ ಆ ಆಸಾಮಿ ವರ್ಷ ಕಳೆದಂತೇ ಕೇವಲ ಕಲಿಕೆಯಷ್ಟೇ ಅಲ್ಲ, ನಾಟಕ, ಪ್ರಬಂಧ, ಆಟೋಟಗಳಲ್ಲೂ ಮಿಂಚುತ್ತಿದ್ದ. ಸೊಗಸಾಗಿ ಚಿತ್ರ ಬಿಡಿಸುತ್ತಿದ್ದ, ನಂಗೂ ಆ ಹುಚ್ಚು ಕಲಿಸಿಕೊಟ್ಟ. ಚೆಸ್ ಆಡೋದು ಹೇಳಿಕೊಟ್ಟ.
ನಮ್ಮದು ಒಂದು ಆದರ್ಶ ಗೆಳೆತನ. ಕ್ಲಾಸಲ್ಲಿ ಮಾತ್ರವಲ್ಲ ಆತ ನನ್ನ ಮನೆಗೆ ಬರ್‍ತಾ ಇದ್ದ, ಕೈಕಾಲು ಸೋಲುವಷ್ಟು ಕ್ರಿಕೆಟ್ ಆಡುತ್ತಿದ್ದೆವು, ತಿಂಡಿ ತಿಂದು ಹೋಗ್ತಾ ಇದ್ದ, ನಾನು ಅವನ ಮನೆಗೆ ಹೋಗಿ ಚೆಸ್ ಆಡಿ ಬರುತ್ತಿದ್ದೆ. ಜಯ ೮ನೇ ತರಗತಿಯಲ್ಲಿ ಬಾಡಿಗೆ ಸೈಕಲ್ ತುಳಿಯುವ ಹೊಸ ಅಭ್ಯಾಸ ರೂಢಿಸಿಕೊಂಡ. ಆತನ ತಾಯಿ ಶಿಕ್ಷಕಿಯಾದ್ದರಿಂದ ಹಣಕ್ಕೆ ಕೊರತೆ ಇರಲಿಲ್ಲ. ನನಗೆ ಅದೊಂದು ಅಡ್ಡಿ ಇದ್ದ ಕಾರಣ. ಅದಕ್ಕೆ ನಾನು ಹೋಗುತ್ತಿರಲಿಲ್ಲ. ಒಮ್ಮೆ ಮನೆಯಲ್ಲಿ ತಂದೆ ಏನೋ ಹೇಳಿದರೆಂದು ಚಿಲ್ಲರೆ ಹಣ ಎತ್ತಿಕೊಂಡ ಜಯ ಬಾಡಿಗೆ ಸೈಕಲೊಂದರಲ್ಲಿ ನಾಪತ್ತೆಯಾದ! ತಾಯಿ ಕಣ್ಣೀರಿಟ್ಟರು. ಎರಡು ದಿನ ಬಿಟ್ಟು ಸುಸ್ತಾದ ಮುಖದೊಂದಿಗೆ ಹುಡುಗ ಮನೆಗೆ ಮರಳಿದ. ಓಡಿಹೋದ ಕಾರಣ ಯಾರಿಗೂ ಹೇಳಲಿಲ್ಲ.
ಒಂದು ವರ್ಷ ಸರಿಯಾಗಿದ್ದ. ೯ನೇ ತರಗತಿಗೆ ಬಂದಾಗ ಮತ್ತೆ ನಾಪತ್ತೆಯಾದ. ಹೋದವನು ಬರ್‍ತಾನೆ ಎಂದು ಹೆತ್ತವರು ತಿಳಿದಿದ್ದರು. ತಿಂಗಳಾಯಿತು...ವರ್ಷವೇ ಆಯಿತು ಜಯರಾಮನಿಲ್ಲ.
ಕೊನೆಗೂ ಜಯ ಬಂದ. ಆಗ ನಾವು ಸಿನಿಮಾದಲ್ಲಷ್ಟೇ ನೋಡುತ್ತಿದ್ದ ruf n tuf ಜೀನ್ಸು, ಬಿಳಿಯ ಸ್ಟೋನ್ ವಾಷ್ ಅಂಗಿ ಧರಿಸಿ ಥೇಟ್ ಹೀರೋ ಥರಾನೇ ಆಗಿದ್ದ. ಬೆಂಗಳೂರಿನ ಯಾವುದೋ ಹೊಟೇಲಲ್ಲಿ ಕೆಲ್ಸ ಮಾಡಿದ್ದನಂತೆ. ಸಾಕಷ್ಟು ಸಂಪಾದನೆ ಮಾಡಿದಂತೆ ಕಾಣುತ್ತಿದ್ದ.
ಏನೇ ಆಗಲಿ ಶಾಲೆ ಮುಂದುವರಿಸಿದ. ದುಡ್ಡಿನ ರುಚಿ ಹತ್ತಿದ್ದರೂ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ. ಹತ್ತಿರದ ಪೇಟೆಯೊಂದರಲ್ಲಿ ಪಿಯುಸಿ ಕಲಿಯುತ್ತಿದ್ದ. ಥಟ್ಟನೆ ಏನಾಯ್ತೋ ಗೊತ್ತಿಲ್ಲ. ಮತ್ತೊಮ್ಮೆ ಬೆಂಗಳೂರಿಗೆ ಹೋದಾತ ಮರಳಲಿಲ್ಲ. ಯಾವುದೋ ರೈಲು ಹಳಿಯಲ್ಲಿ ಜಯರಾಮನನ್ನೆ ಹೋಲುವ ಶವ ಪತ್ತೆಯಾಗಿತ್ತು. ಊರಿನಲ್ಲಿ ಏನೇನೋ ಸುದ್ದಿಗಳು. ಜಯ ಏನೋ ಸ್ಮಗಲಿಂಗ್ ಗ್ಯಾಂಗ್ ಸೇರಿರಬಹುದು ಎಂದು...ಕೆಟ್ಟದ್ದೇನೋ ಮಾಡಲು ಹೋಗಿ ಹುಡುಗ ಹಾಳಾದ ಎಂದೆಲ್ಲಾ ಊರು ಆಡಿಕೊಂಡು ಸುಮ್ಮನಾಯಿತು. ಈಗಲೂ ಹಳೆಯ ನೆನಪುಗಳು ಕಾಡಿದಾಗ ಜಯನ ಚಿತ್ರ ಮೊದಲು ಬರುತ್ತದೆ. ಕಣ್ಣಂಚು ತೇವಗೊಳ್ಳುತ್ತದೆ.
ಇನ್ನೊಬ್ಬ ನಟರಾಜ. ಜಯ ಒಂದು ವರ್ಷ ನಾಪತ್ತೆಯಾಗಿದ್ದಾಗ ನನ್ನ ಕ್ಲಾಸಿಗೆ ದಢಿರನೇ ಎಲ್ಲಿಂದಲೋ ಬಂದು ಸೇರಿದ್ದ. ನಡೆ ನುಡಿ ಜಯನಂತೇ. ಕಲಿಕೆಯಲ್ಲೂ ಮುಂದು. ಆದರೆ ಒಂಥರಾ ರೌಡಿಯಂತೆ. ಆ ಹಳ್ಳಿಶಾಲೆಯಲ್ಲಿ ಚಿಕ್ಕ ತಪ್ಪುಗಳೂ ಅಪರಾಧವಾಗುವಾಗ ಈ ಪಾರ್ಟಿ ಪ್ಯಾಕೆಟುಗಟ್ಟಲೆ ಪಾನ್ ಪರಾಗು, ಮಧು ಹಾಕುತ್ತಿದ್ದ. ನನ್ನೊಂದಿಗೆ ಹರಟುತ್ತಾ ಆತ್ಮೀಯನಾಗಿದ್ದ.
ಮನೆಯಲ್ಲಿ ತಂದೆ, ತಾಯಿ, ಅಣ್ಣಂದಿರಲ್ಲಿ ಜಗಳ ಮಾಡಿ ಮನೆ ಬಿಟ್ಟಿದ್ದ. ಶಾಲೆ ಹತ್ತಿರವೇ ಇದ್ದ ಶೆಡ್ಡ್ ಹೊಟೇಲಲ್ಲೆ ರೂಮ್ ಮಾಡಿದ್ದ. ಕ್ಲಾಸಿನ ಬ್ರಿಲಿಯಂಟ್ ಹುಡುಗಿಯೊಬ್ಬಳಿಗೆ ಲೈನ್ ಕೊಡಲೂ ಶುರುಮಾಡಿದ್ದ. ಹೆದರಿಕೆಯೇ ಇಲ್ಲದೆ ರಾತ್ರಿ ನಾವೆಲ್ಲಾ ಭೂತ ಇದೆ ಎಂದು ಬೆವರುತ್ತಿದ್ದ ಕ್ಲಾಸಿಗೆ ಓದಲು ಹೋಗುತ್ತಿದ್ದ. ಎಸ್ಸೆಸ್ಸೆಲ್ಸಿ ಮುಗಿದು ನಾನು ಊರಿಂದ ಬೇರೆ ಕಡೆಗೆ ಪಿಯುಸಿಗೆ ಹೋದರೆ, ಈತ ಊರಲ್ಲೇ ಏನೇನೋ ಮಾಡುತ್ತಾ ಕಳೆದ. ತಲೆಯಿದ್ದರೂ ಓದಲು ಹೋಗಲಿಲ್ಲ. ಆ ಬಳಿಕ ನನಗೆ, ಅವನಿಗೆ ನಿಧಾನವಾಗಿ ಸಂಪರ್ಕ ಕಡಿದೇ ಹೋಗಿತ್ತು.
ಕಳೆದ ವರ್ಷ ಮಂಗಳೂರಿನಲ್ಲಿ ಪರಿಚಯದವರ ಗೃಹಪ್ರವೇಶಕ್ಕೆ ಹೋದರೆ ಆಸಾಮಿ ಅಡುಗೆ ಗುಂಪಲ್ಲಿದೆ! ಕೇಳಿದರೆ ಎರಡು ವರ್ಷದಿಂದ ಇದೇ ಕೆಲಸವಂತೆ. ಮದುವೆಯಾಗಿದೆ, ಮಗು ಇದೆ, ಮನೆ ಮಾಡಿದ್ದೇನೆ. ಒಮ್ಮೆ ಟೈಂ ಮಾಡಿ ಬಾ ಎಂದಿದ್ದ. ಮೊಬೈಲು ನಂಬರೂ ಕೊಟ್ಟ. ಆ ಮೇಲೆ ಕೆಲ ದಿನಗಳ ಕಾಲ ಫೋನೂ ಮಾಡಿದ್ದ. ಈಗ ಆ ಮೊಬೈಲ್ ಅಸ್ತಿತ್ವದಲ್ಲಿಲ್ಲ, ನನಗೆ ಫೋನ್ ಕರೆಯೂ ಇಲ್ಲ.
ಇಂತಹ ಅನೇಕ ವಿಚಿತ್ರ ಎನಿಸುವ ಫ್ರೆಂಡ್‌ಗಳು ನಿಮಗೂ ಇರಬಹುದು..ಅವರ ನೆನಪುಗಳು ಬಿಡದೆ ಕಾಡಬಹುದು....
ಅಕ್ಸರ್ ಇಸ್ ದುನಿಯಾ ಮೇ ಅಂಜಾನೇ ಮಿಲ್ತೇ ಹೈಂ
ಅಂಜಾನೇ ರಾಹೋ ಮೇ ಮಿಲ್ಕೇ ಖೋ ಜಾತೇ ಹೈಂ
ಲೇಕಿನ್ ಹಮೇಶಾ ವೋ ಯಾದ್ ಆತೇ ಹೈಂ....
3 comments:
ನಿಮ್ಮ ಬ್ಲಾಗೂ ತುಂಬ ಚೆನ್ನಾಗಿದೆ. ಹೀಗೇ ಮುಂದುವರೆಯಲಿ. enguru.blogspot.com ಗೆ ಬರ್ತಾ ಇರಿ. ನಮಸ್ಕಾರ.
ಈ ಜೀವನಾನೆ ಹೀಗೆ ಅಲ್ಲವಾ... ಜೀವನದ ತಿರುವುಗಳಲ್ಲಿ ಎಷ್ಟೋ ಜನ ಬರ್ತಾರೆ ಹೋಗ್ತಾರೆ, ಮತ್ತೆ ಬರ್ತಾರೆ...
ನಿಮ್ಮ ಬರವಣಿಗೆ ಶೈಲಿ ಇಷ್ಟವಾಯ್ತು...
yes u r right
ಅಕ್ಸರ್ ಇಸ್ ದುನಿಯಾ ಮೇ ಅಂಜಾನೇ ಮಿಲ್ತೇ ಹೈಂ
ಅಂಜಾನೇ ರಾಹೋ ಮೇ ಮಿಲ್ಕೇ ಖೋ ಜಾತೇ ಹೈಂ
ಲೇಕಿನ್ ಹಮೇಶಾ ವೋ ಯಾದ್ ಆತೇ ಹೈಂ....
Post a Comment