19.9.07

ಕೇರಳದ ಹಿನ್ನೀರಿನ ಬಿಂಬಗಳು....(backwaters of kerala)

ಸದಾ ಹಸಿರಾದ ತೆಂಗಿನ ಮರಗಳು ಅದ್ದಿಕೊಂಡಂತೆ ಕಾಣುವ ನೀರು....ತಮ್ಮ ಬದುಕಿನ ಅವಿಭಾಜ್ಯ ಗಳಿಗೆಗಳನ್ನು ಈ ನೀರಿನೊಂದಿಗೇ ಕಳೆಯುವ ಜನತೆ... ಚಲಿಸುವ ಬೆತ್ತದ ಮನೆಗಳಂತೆ ಭಾಸವಾಗುವ ದೋಣಿಮನೆಗಳು.....
ಕೇರಳದ ಆಲೆಪ್ಪಿ, ಕೊಟ್ಟಾಯಂ ಜಿಲ್ಲೆಗಳಲ್ಲಿನ ಹಿನ್ನೀರಿಗೊಮ್ಮೆ ಭೇಟಿಕೊಟ್ಟರೆ ಕಂಡುಬರುವ ದೃಶ್ಯಾವಳಿ ಇದು.

ಭಾರತದ ದಕ್ಷಿಣತುದಿಯಲ್ಲಿರುವ ಈ ರಾಜ್ಯ ತನ್ನ ಹಿನ್ನೀರು, ದೋಣಿಮನೆಗಳಿಂದಲೇ ಪ್ರವಾಸೋದ್ಯಮದಲ್ಲಿ ಮೇಲುಗೈ ಸಾಧಿಸಿದೆ. ದೇವರ ವಾಸದ ಮನೆ ಎಂದು ಹಿಂದೊಮ್ಮೆ ಮಾಜಿ ಪ್ರಧಾನಿ ವಾಜಪೇಯಿ ಉದ್ಗರಿಸಿದ್ದು ನೆನಪಿದೆಯೇ? ಇಲ್ಲಿನ ದೃಶ್ಯಾವಳಿಗಳೇ ಹಾಗೆ. ಕಲಾವಿದನೆಲ್ಲಾದರೂ ಇಲ್ಲಿ ಬಂದರೆ ಪುಟಗಟ್ಟಲೆ ಸ್ಕೆಚ್ ಹಾಕದೆ ಮರಳೋದು ಕಷ್ಟ.

ಇಂತಿಪ್ಪ ಹಿನ್ನೀರನ್ನೊಮ್ಮೆ ನೋಡಿಯೇ ಬಿಡೋಣ ಎಂದು ಮಿತ್ರರ ಜತೆ ಸೇರಿ ಮಂಗಳೂರಿನಿಂದ ಸಂಜೆ ತಿರುವನಂತಪುರಂಗೆ ತೆರಳುವ ಮಂಗಳೂರು ಎಕ್ಸ್‌ಪ್ರೆಸ್(ಸಂಜೆ ೬ ಗಂಟೆಗೆ ನಿರ್ಗಮನ) ಏರಿಯೇಬಿಟ್ಟೆ. ರೈಲಿನ ಹಿತವಾದ ಕುಲುಕಾಟಕ್ಕೆ ಗಾಢ ನಿದ್ರೆಯಲ್ಲಿರುವಾಗಲೇ ಕೊಟ್ಟಾಯಂ ಬಂದೇ ಬಿಡ್ತು. ಮುಂಜಾನೆ ೫.೧೫ರ ವೇಳೆಗೆ ಕೊಟ್ಟಾಯಂ ರೈಲು ನಿಲ್ದಾಣದಲ್ಲಿಳಿಯಿತು ನಮ್ಮ ೬ ಮಂದಿಯ ತಂಡ. ಜಿಟಿಜಿಟಿ ಮಳೆ ಬೇರೆ ಚಳಿ ಹಿಡಿಸಿಬಿಟ್ಟಿತ್ತು. ಕೊಟ್ಟಾಯಂ ನಿಲ್ದಾಣದಲ್ಲಿ waiting room ಇದ್ದ ಕಾರಣ, ಸ್ನಾನ, ಶೌಚಕ್ಕೆ ತೊಂದರೆಯಾಗಲಿಲ್ಲ. ಮಂಗಳೂರಿಂದಲೇ ಮಾಲತಿ ಅಕ್ಕನ ಸ್ಪೆಷಲ್ ಮೂಡೆ(moode!), ಸೇಮಿಗೆ ಪ್ಯಾಕ್ ಮಾಡಿ ಕೊಂಡೊಯ್ದ ಕಾರಣ ಹೊಟ್ಟೆಗೂ ಚಿಂತೆ ಇರಲಿಲ್ಲ.


ಎಲ್ಲಾ ಮುಗಿಸಿ ಕೊಟ್ಟಾಯಂ ರೈಲು ನಿಲ್ದಾಣದಿಂದ ಹೊರಬಿದ್ದು ಬಸ್ ನಿಲ್ದಾಣಕ್ಕೆ ತೆರಳಿದೆವು. ಅಲ್ಲಿಂದ ಕುಮಾರಕಂ ಬೋಟ್ ಜೆಟ್ಟಿಗೆ ಬಸ್ಸಲ್ಲಿ ಅರ್ಧ ಗಂಟೆ ಪಯಣ. ಆ ಪಯಣದಲ್ಲೇ ಹಿನ್ನೀರಿನ ಚಿಕ್ಕ ದರ್ಶನವಾಗಿತ್ತು ನಮಗೆ. ಬಸ್ ಖಾಲಿ ಇದ್ದ ಕಾರಣ ನಮ್ಮ ತಂಡದಲ್ಲಿದ್ದ ವಿಡಿಯೋಗ್ರಾಫರ್‍ ಶಕ್ತಿ, ತಮ್ಮ ಶಕ್ತಿ ಮೀರಿ ಹೊರಗಿನ ದೃಶ್ಯ ಸೆರೆಹಿಡಿಯುತ್ತಿದ್ದರು.
ಬಸ್ಸಿಳಿದು ಬೋಟ್ ಜೆಟ್ಟಿಗೆ ತೆರಳಿದರೆ ಮಳೆಯಿಂದಲೋ ಏನೋ ಅಲ್ಯಾರೂ ಪ್ರವಾಸಿಗಳು ಕಾಣಲಿಲ್ಲ. ಬೋಟ್ ಟಿಕೆಟ್ ಕೌಂಟರನಲ್ಲಿದ್ದಾತ ಗಂಟೆಗೆ ೩೦೦ ರು. ಕೊಟ್ಟರೆ ಖಾಸಗಿ ಬೋಟ್, ಇಲ್ಲದಿದ್ದರೆ ಆಲೆಪ್ಪಿಯ ಮುಹಮ್ಮ ಎಂಬಲ್ಲಿಗೆ ಹೋಗುವ ಕೇರಳ ರಾಜ್ಯದ ಫೆರಿ ಇದೆ ಎಂಬ ಮಾಹಿತಿ ಕೊಟ್ಟ. ಕಡಿಮೆಯಲ್ಲಿ ಸಿಗುವ ಸರ್ಕಾರಿ ನೌಕೆಯನ್ನೇ ಆರಿಸಿಕೊಂಡೆವು.

ಅದಾಗಲೇ ಫೆರಿ ಸಿದ್ಧವಾಗಿತ್ತು. ನಿಧಾನವಾಗಿ ಸಪುರ ತೋಡಿನಂತಹ ನೀರಿನಿಂದ ಹೊರಹೋದ ನೌಕೆ ಒಮ್ಮೆಲೇ ಸಮುದ್ರದಂತೆ ಕಾಣುವ ವಿಶಾಲ ಹಿನ್ನೀರಿನ ವೆಂಬನಾಡು ಸರೋವರಕ್ಕೆ ಸೇರಿ ಪ್ರಯಾಣ ಮುಂದುವರಿಸಿತು. ಮೋಡ ಮುಸುಕಿದ್ದರಿಂದ ನಮ್ಮ ಉತ್ಸಾಹವೂ ಅಷ್ಟಿರಲಿಲ್ಲ.ಆದರೂ ಮೊದಲ ಬಾರಿಗೆ ನೋಡುತ್ತಿರುವ ಕಾರಣ, ಬೋಟೂ ಖಾಲಿ ಇದ್ದ ಕಾರಣ ಕುತೂಹಲದಿಂದಲೇ ಹಿನ್ನೀರು ನೋಡಿದೆವು. ಛಾಯಾಗ್ರಾಹಕ ಮಿತ್ರ ಗಣಪತಿ, ವಸಂತ ಅನಿಯಂತ್ರಿತವಾಗಿ ಫೋಟೋ ಕ್ಲಿಕ್ಕಿಸುತ್ತಿದ್ದರು. ನಸು ನೀಲಿ-ಹಸಿರು ನೀರಲ್ಲಿ ಅದೊಂದು ತುಸು ನೀರಸ ಪಯಣವೇ. ಯಾಕೆಂದರೆ ನಾವು ನಿರೀಕ್ಷಿಸಿದ ತೆಂಗಿನ ತೋಟವಾಗಲೀ, ಹಸಿರು ಗದ್ದೆಯಾಗಲೀ ಕಾಣದಂತೆ ಸರೋವರದ ನಡುಮಧ್ಯೆ ನೌಕೆ ಸಾಗುತ್ತಿತ್ತು! ಕೆಲವೊಂದು ಮೀನುಗಾರರ ದೋಣಿ, ಒಂದೆರಡು ದೋಣಿಮನೆಗಳು, ಕೆಲವು ನೀರು ಕಾಗೆ ಬಿಟ್ಟರೆ ಬೇರೇನೂ ಆಸಕ್ತಿ ತರಲಿಲ್ಲ.

ಅಂತೂ ೪೫ ನಿಮಿಷ ನಂತರ ಮುಹಮ್ಮ ಬಂತು. ಅಲ್ಲಿಂದ ಆಲೆಪ್ಪಿಗೆ ಮತ್ತೆ ಅರ್ಧ ಗಂಟೆ(13 k.mts) ಪ್ರಯಾಣ ಬಸ್ಸಿನಲ್ಲಿ. ಆಲೆಪ್ಪಿಯಲ್ಲಿಳಿದು, ಅಲ್ಲಿನ ರಾಜೇಶ್ವರಿ ದೇವಸ್ಥಾನದಲ್ಲಿ ಚಿಕ್ಕ ಪ್ರಾರ್ಥನೆ ಸಲ್ಲಿಸಿ ಆಲೆಪ್ಪಿಯ ಬೋಟ್ ಜೆಟ್ಟಿಗೆ ಬಂದೆವು. ಅಲ್ಲಿನ ಏಜೆಂಟನೊಬ್ಬನನ್ನು ಹಿಡಿದು ಮೋಟಾರ್‍ ಲಾಂಚೊಂದನ್ನು ಗೊತ್ತು ಮಾಡಿದೆವು.

ಅದು ನೋಡಿ ನಿಜವಾದ ಹಿನ್ನೀರು ದರ್ಶನ!

ಕೇರಳದ ಪ್ರಸಿದ್ಧ ನೆಹರೂ ಕಪ್ ದೋಣಿ ರೇಸಿನ ಸ್ಥಳ ಇಲ್ಲೇ ಇದೆ. ಇಬ್ಬರೇ ಹೋಗುವ ಚಿಕ್ಕ ದೋಣಿ, ಫೈಬರ್‍, ಮರ, ಅಲ್ಯುಮಿನಿಯಂ, ಕಬ್ಬಿಣದ ಕಲರ್‍ ಫುಲ್ ದೋಣಿಗಳು, ಕೇರಳ ಶೈಲಿಯ ದೋಣಿಮನೆಗಳು ಜೆಟ್ಟಿಯ ಇಕ್ಕೆಲಗಳಲ್ಲೂ ಇದ್ದರೆ, ಒಂದೆರಡು ಹಳೆಯ ನೌಕೆಗಳು ಕಾಲನ ಬರುವಿಕೆಗೆ ಕಾದಂತೆ ಅರ್ಧಮುಳುಗಿದ ಸ್ತಿತಿಯಲ್ಲಿದ್ದವು.

ಅಷ್ಟು ವಿಶಾಲವಲ್ಲದ, ಇಕ್ಕೆಲಗಳಲ್ಲೂ ತೂಗುವ ತೆಂಗಿನ ಮರಗಳಿರುವ ಅದರ ಅಡಿಯಲ್ಲಿ ಹೆಂಚಿನ ಮನೆಯಿರುವ ಸುಂದರ ಪ್ರದೇಶವದು. ಮಲಯಾಳಂ ಚಿತ್ರಗಳ ಚಿತ್ರೀಕರಣವೂ ನಡೆಯುವ ಕುಟ್ಟನಾಡು ಎಂಬ ಹಳ್ಳಿಯನ್ನೂ ಈ ಪ್ರಯಾಣದಲ್ಲಿ ನೋಡಬಹುದು.

ವಿಶಾಲವಾದ ನಸುಹಸಿರು ಗದ್ದೆಗಳು, ತೆಂಗು, ಬಾಳೆ, ನಮ್ಮಲ್ಲಿ ಬೈಕ್-ಕಾರ್‍ ಇರುವಂತೆ ಮನೆಗೊಂದು ದೋಣಿ ಮನ ಮುದಗೊಳಿಸುತ್ತವೆ. ನಮ್ಮಲ್ಲಿನ ಬಾವಿಕಟ್ಟೆಯಂತೆ ಇವರಿಗೊಂದು ಹಿನ್ನೀರಿನ ಕಟ್ಟೆ. ಪಾತ್ರೆ, ಬಟ್ಟೆ ತೊಳೆಯಲು, ಸ್ನಾನಕ್ಕೆ.
ಒಂದು ಊರಿಂದ ಇನ್ನೊಂದು ಊರಿಗೆ ಹೋಗುವುದಕ್ಕೆ ಜಲಮಾರ್ಗವೇ ಇವರ ಆಯ್ಕೆ.
ಮಳೆಮರೆಯಾಗಿ, ಬಿಸಿಲು ಕಾಣಿಸಿದ್ದು ಉತ್ಸಾಹವನ್ನೂ ಚಿಗುರಿಸಿತು. ದಾರಿಯುದ್ದಕ್ಕೂ ಕಂಡದ್ದು ದೋಣಿಮನೆಗಳು. ಇಲ್ಲಿನ ಪ್ರಮುಖ ಆಕರ್ಷಣೆ. ೬೦೦ರಷ್ಟು ವಿವಿಧ ನಮೂನೆಯ ದೋಣಿಮನೆ ಇಲ್ಲಿವೆಯಂತೆ. ಅಕ್ಟೋಬರ-ಮೇ ಸೀಸನ್ನು. ಆಗ ಬೇಡಿಕೆ ಜಾಸ್ತಿ. ರೇಟೂ ಭಾರಿ. ವಿದೇಶೀಯರು, ವಿಐಪಿಗಳಿಗೇ ಹೆಚ್ಚಾಗಿ ಬಳಕೆ. ಈ ದೋಣಿಮನೆ ನಿರ್ಮಿಸುವ, ದುರಸ್ತಿ ಮಾಡುವ ಕೈಗಾರಿಕೆಯೂ ಇಲ್ಲಿದೆ.

ಹಿನ್ನೀರು ಪ್ರಯಾಣದಲ್ಲೇ ಉಳಿದಿದ್ದ ಮೂಡೆಗೆ ಮೋಕ್ಷ ಕಾಣಿಸಿ, ಎರಡು ಗಂಟೆಗಳ ನಮ್ಮ ಪ್ರಯಾಣಕ್ಕೆ ನೌಕೆ ಚಾಲಕನಿಗೆ ೭೦೦ ರು. ನೀಡಿ ಬೋಟಿಳಿದೆವು.

ಸೀಸನ್ನಿನಲ್ಲಿ ಮೋಟರು ಲಾಂಚಿಗೆ ೧೦೦೦ ರು. ನೀಡಬೇಕಾಗುತ್ತದೆ. ದೋಣಿಮನೆಗೆ ೫ರಿಂದ ೧೦ ಸಾವಿರ ರು.
ಆಲೆಪ್ಪಿಯಲ್ಲಿ ಬೇರೇನಿದೆ ಎಂದು ಕೇಳಲೇ ಬೇಡಿ. ಹೋಗುವುದಾದರೆ ಹೋಗಬೇಕು, ಹಿನ್ನೀರೇ ನೋಡಬೇಕು. ಸಮುದ್ರ ನೋಡದವರಾದರೆ ಆಲೆಪ್ಪಿಯ ಬೀಚು ನೋಡಬಹುದು. ಶುಭಪ್ರಯಾಣ!

3 comments:

KRISHNA said...

innashtu photo haakabahudittu. chikka chokka writeup khushi kodtu. hoda anubhava moodisitu (jiti jiti maleya vhali haage)

jagadeesh sampalli said...

Write-up is good. While reading your experiences, I also remembered my visit to Calicut, Kottayam, Trivendrum and other places three years ago and during my college days. Going trip to backwaters is really amazing experience. In most part of that state, one could just see the beauty of backwaters and boats along the way.
Really its 'God's own country'.

If possible next time I will also join you if you venture again.

Niranjan said...

Sir, hinneera naduve hogi banda anubhava ayitu. sukhakara prayanakkagi dhanyavadagalu

Related Posts Plugin for WordPress, Blogger...