6.12.07

ಮರುಳುಗೊಳಿಸುವ ಮರಳುಗಾಡು(a trek to thar desert)


ಜೈಸಲ್ಮೇರ್‍ ಪಟ್ಟಣಕ್ಕೆ ಅದರದ್ದೇ ಆದ ಗಾಂಭೀರ್ಯ, ಸೊಗಸು ಕೊಡುವ ಗೋಲ್ಡನ್ ಮಾರ್ಬಲ್, ಅಲ್ಲಿನ ಕೋಟೆ, ಪೇಟೆಯ ಮೋಲೆಗಳಲ್ಲಿ ಇರುವ ಅಗಲ ಕಟಾರದ ತುಂಬ ಕುದಿಯುತ್ತಲೇ ಇರುವ ದಪ್ಪನೆ ಹಾಲು..ಸಾಲು ಸಾಲಾಗಿ ನಡೆವ ಒಂಟೆ ಗಡಣ...ಇವೆಲ್ಲ ಈಗ ಮತ್ತೆ ಕಣ್ಣಮುಂದೆ ಸಾಲುಸಾಲು ಮೆರವಣಿಗೆ ನಡೆಸುತ್ತಿವೆ....
ಕಳೆದ ಕೆಲದಿನಗಳ ಹಿಂದೆಯಷ್ಟೇ ಜೈಸಲ್ಮೇರ್‍ನ ಥಾರ್‍ ಮರುಭೂಮಿ ಚಾರಣ ಮಾಡಿಮುಗಿಸಿದ ಬಳಿಕ ಮರುಭೂಮಿಯಲ್ಲೂ ಎಂಥದೋ ಆಕರ್ಷಣೆ ಕಾಡುತ್ತದೆ....


ಸ್ಥಳೀಯ ಚಾರಣಗಳ ಸವಿ ಸಾಕಷ್ಟು ಅನುಭವಿಸಿದ ನನಗೆ ಯಾವುದಾದರೊಂದು ರಾಷ್ಟ್ರೀಯ ಮಟ್ಟದ ಚಾರಣದಲ್ಲಿ ಪಾಲ್ಗೊಳ್ಳಬೇಕು ಎಂಬ ಬಯಕೆ ಅನೇಕ ದಿನಗಳಿಂದ ಕಾಡುತ್ತಿತ್ತು. ಯೂತ್ ಹಾಸ್ಟೆಲ್‌ನವರು ೫ ವರ್ಷದ ನಂತರ desert trek ಸಂಘಟಿಸುತ್ತಿದ್ದಾರೆ, ಸೇರಲು ಪ್ರಯತ್ನ ಮಾಡೋಣ ಎಂದು ಸ್ನೇಹಿತ ಗಣಪತಿ ಹೇಳಿದ ಕೂಡಲೇ ಯೆಸ್ ಎಂದು ಬಿಟ್ಟೆ.

ಮಂಗಳೂರು ಯೂತ್‌ ಹಾಸ್ಟೆಲ್‌ನ ಇತರ ಗೆಳೆಯರಾದ ಪ್ರವೀಣ್, ಸುನಿಲ್ ಮತ್ತು ಸುಧೀರ್‍ ಸೇರಿಸಿಕೊಂಡು ದೂರದ ರಾಜಸ್ತಾನದ ಮರುಭೂಮಿಗೆ ಹೋಗುವುದೇ ಎಂದು ನಿರ್ಧರಿಸಿಬಿಟ್ಟೆವು.


ನವೆಂಬರ್‍ ೧೨ರಂದು ಕೊರೆಯುವ ಚಳಿಯಲ್ಲಿ ಹಲ್ಲು ಕಟಕಟಿಸುತ್ತಾ ಜೈಸಲ್ಮೇರ್‍ ಸ್ಟೇಷನ್‌ನಲ್ಲಿ ಇಳಿದೆವು ರೈಲಿಂದ. ಅಲ್ಲೇ ಚಹಾ ಮುಗಿಸಿ ಟ್ಯಾಕ್ಸಿಯೊಂದನ್ನು ಗೊತ್ತು ಮಾಡಿ ತನೋಟ್ ದೇಗುಲ ನೋಡಲು ಹೊರಟೆವು (ಭಾರತ-ಪಾಕ್ ಗಡಿಯಲ್ಲಿರುವ ಈ ಗುಡಿಯ ಬಗ್ಗೆ ಮುಂದಿನ ಲೇಖನದಲ್ಲಿ ಬರೆಯುತ್ತೇನೆ).

ತನೋಟ್ ಮುಗಿಸಿ ಜೈಸಲ್ಮೇರ್‌ನ ಬಾರ್ಡರ್‍ ಹೋಂ ಗಾರ್ಡ್ ಮೈದಾನ ಸೇರಿದೆವು. ಅದು ನಮ್ಮ ಬೇಸ್ ಕ್ಯಾಂಪ್. ಆಗಲೇ ಬಂದು ಒಂದು ದಿನವಾಗಿದ್ದ ಚಾರಣದ ಮೊದಲ ತಂಡದವರು ಹೊರಡುವ ತಯಾರಿಯಲ್ಲಿದ್ದರು. ನಮ್ಮದು ಎರಡನೇ ತಂಡವಾದ ಕಾರಣ ಮರುದಿನದ ವರೆಗೆ ಸಮಯ ಇತ್ತು ಸುತ್ತಾಟಕ್ಕೆ. ಸುಡು ಬಿಸಿಲಿನಲ್ಲಿ ಬಿಸಿಯೇರಿದ್ದ ಟೆಂಟ್‌ಗಳು ನಮ್ಮನ್ನು ಸ್ವಾಗತಿಸಿದವು. ಆ ದಿನ ಸುತ್ತಾಟದಲ್ಲೆ ಮುಗಿದು ಹೋಯಿತು. ಆ ನಡುವೆ ಮೊದಲ ತಂಡದ ಫ್ಲಾಗ್ ಆಫ್ ಕೂಡಾ ಆಯ್ತು. ಸಂಜೆ ಜೈಸಲ್ಮೇರ್‍ನ ಕೋಟೆಗೊಂದು ಸುತ್ತು ಹಾಕಿದೆವು, ಪೇಟೆಯಲ್ಲಿ ಸಿಗುವ ಕೇಸರಿ, ಬಾದಾಮ್ ಮಿಶ್ರಿತ ಕೆನೆಹಾಲು ರುಚಿ ನೋಡಿದೆವು.ಮರುದಿನ ನಮ್ಮ ತಂಡಕ್ಕೆ ಫ್ಲಾಗ್ ಆಫ್. ಕ್ಯಾಂಪ್ ನಿರ್ದೇಶಕ ರತನ್ ಸಿಂಗ್ ಭಟ್ಟಿ, ಸಂಚಾಲಕ ಓಂ ಭಾರತಿ ಅವರಿಂದ ಮರುಭೂಮಿಯ ಸ್ಥೂಲ ಪರಿಚಯ, ಚಾರಣಿಗರಿಗೆ ಹಲವಾರು ಸೂಚನೆ.
ಕೊನೆಗೂ ಅಲ್ಲಿಂದ ಹೊರಟ ನಾವು ಬಸ್ ಮೂಲಕ ತಲಪಿದ್ದು ಮೊದಲ ಕ್ಯಾಂಪ್ ಆಗಿರುವ ಸ್ಯಾಂ ಸ್ಯಾಂಡ್ ಡ್ಯೂನ್. ರುಚಿಕಟ್ಟಾದ ಕುಡಿಯುವ ನೀರು ಸಿಕ್ಕಿದ್ದು ಈ ಕ್ಯಾಂಪ್‌ನಲ್ಲಿ ಮಾತ್ರ. ಸ್ಯಾಂ ಎಂದರೆ ಪ್ರವಾಸಿಗರ ಸಂತೆ. ನಾವು ಸೂರ್ಯಾಸ್ತ ನೋಡಲು ಕಡಲ ತಡಿಗೆ ಹೋದಂತೆ ಅಲ್ಲಿನವರು ಸೂರ್ಯಾಸ್ತಕ್ಕೆ ಇಲ್ಲಿನ ಮರಳ ದಿಣ್ಣೆಯೇರಿ ಕುಳಿತು ಬಿಡುತ್ತಾರೆ. ಇಲ್ಲಿ ಒಂಟೆ ಸವಾರಿ ಕೂಡಾ ಫೇಮಸ್ಸೇ.

ತೆಳ್ಳನೆ ಉದ್ದುದ್ದ ಇರುವ ಪಠಾಣ ಊಂಟ್‌ವಾಲಾಗಳು ನಿಮ್ಮ ಮುಖ ನೋಡಿಯೇ ನಿಮ್ಮ ಆಸಕ್ತಿಯನ್ನೆಲ್ಲ ಅಳೆದು, ನಿಮ್ಮ ಅಭಿರುಚಿಗೆ ತಕ್ಕಂತಹ ಹೆಸರನ್ನು ಒಂಟೆಗೆ ಇರಿಸಿ ನಿಮ್ಮನ್ನು ಮರುಳುಗೊಳಿಸುತ್ತಾರೆ, ಇಲ್ಲಿಂದ ಅಲ್ಲಿಗೆ ಒಂಟೆ ಮೇಲೆ ಕುಳಿತು ಒಂದು ರೌಂಡ್ ಹೊಡೆದರೆ ೮೦ ರೂ.ನಿಂದ ೧೦೦ ರೂ. ಬಿಚ್ಚಬೇಕು!

ನಮಗೆ ಮರುದಿನ ೧೪ ಕಿ.ಮೀ ಒಂಟೆ ಸವಾರಿ ಇದ್ದ ಕಾರಣ ಯಾರೂ ಅರ್ಜೆಂಟ್ ಮಾಡಲಿಲ್ಲ. ದಿಣ್ಣೆ ಮೇಲೆ ಸೂರ್ಯಾಸ್ತ ಸವಿದು ವಾಪಸಾದೆವು ಕ್ಯಾಂಪ್‌ಗೆ.

ಮರುದಿನ ನಮ್ಮ ವಾಹನ ಒಂಟೆ. ಮೂರು ಹಂತಗಳಲ್ಲಿ ಎದ್ದು ನಿಲ್ಲುವ ಒಂಟೆಯ ಮೇಲೆ ಕೂರಲೂ ಬ್ಯಾಲೆನ್ಸ್‌ ಬೇಕು! ಕುಳಿತ ಬಳಿಕವೂ ಬೀಜ ನೀರಾಗುವಂತಹ ಅನುಭವ ಅದು! ಅಂತೂ ಅಲ್ಲಿಂದ ಹೊರಟು ೩ ಗಂಟೆ ಪ್ರಯಾಣಿಸಿ ದ ಬಳಿಕ ಸುಸ್ತಾಗಿದ್ದ ನಮ್ಮನ್ನು ಊರೊಂದರ ಗಡಿಯಲ್ಲಿ ಇಳಿಸಿದರು ಊಂಟ್‌ವಾಲಾಗಳು. ಅಲ್ಲಿಂದ ನಡು ಮಧ್ಯಾಹ್ನ ನಡೆಯುತ್ತಾ ನೀಮಾ ಎಂಬ ಗ್ರಾಮ ದಾಟಿ ಬೀಡಾ ಎಂಬ ಗ್ರಾಮದ ಶಾಲೆಯೊಂದರಲ್ಲಿ ಮಧ್ಯಾಹ್ನದ ಊಟ ಮುಗಿಸಿದೆವು(ಪ್ಯಾಕ್ ಲಂಚ್).

ಅಲ್ಲಿಂದ ಮತ್ತೆ ಒಂದು ಘಂಟೆ ರಸ್ತೆಯಲ್ಲಿ ಪಯಣ. ಕೊನೆಗೂ ಎರಡನೇ ಕ್ಯಾಂಪ್‌ ಬೀಡಾ ಬಂತು. ಮರಳಿನಲ್ಲಿ ಅರ್ಧ ಹೂತಿಟ್ಟ ಮಣ್ಣಿನ ಕೊಡ ತುಂಬ ಅರೆ ಉಪ್ಪಾದರೂ ತಂಪಾಗಿದ್ದ ನೀರು ಕುಡಿದು ಹೊಟ್ಟೆ ತುಂಬಿಸಿಕೊಂಡೆವು. ಸ್ಯಾಂಗೆ ಹೋಲಿಸಿದರೆ ಬೀಡಾದ ಮರಳು ದಿಣ್ಣೆಗಳು ಹೆಚ್ಚು ಆಕರ್ಷಕ, ಕಸವೇ ಇಲ್ಲದೆ ಶುಭ್ರ.. ಯಾಕೆಂದರೆ ಇಲ್ಲಿಗೆ ಪ್ರವಾಸಿಗರು ಬರುವುದಿಲ್ಲ. ಚಾರಣಿಗರು ಮಾತ್ರ!

ಅಲ್ಲಿಂದ ಮರುದಿನ ಮತ್ತೆ ಮುಂದಿನ ಪಯಣ ಶುರು, ಇಲ್ಲಿಂದ ಮುಂದಕ್ಕೆ ನಮ್ಮ ಗೈಡ್ ಪೂನಂ ಸಿಂಗ್, ಜತೆಗೆ ಆತನ ಒಂಟೆ ಗಾಡಿ. ನಮ್ಮಲ್ಲಿನ ೬೦ ಮಂದಿಯ ತಂಡದಲ್ಲಿದ್ದ ಅನೇಕ ಸೋಮಾರಿಗಳು, ಪೂನಂ ಸಿಂಗ್‌ಗೆ ಲಂಚದ ಆಮಿಷ ಒಡ್ಡಿ, ತಮ್ಮ ಬ್ಯಾಗ್‌ಗಳನ್ನು ಗಾಡಿಗೆ ಹೇರಿ ಮುಂದಿನ ಮೂರೂ ದಿನ ನಿರುಮ್ಮಳರಾಗಿದ್ದರು. ಒಬ್ಬನಂತೂ, ನಡೆಯುವ ಗೋಜಿಗೂ ಹೋಗದೆ ಗಾಡಿಯಲ್ಲೇ ಕುಳಿತು ನಗುತ್ತಿದ್ದ(ಇವರಿಗೆ ಚಾರಣವಾದರೂ ಯಾಕಾಗಿ?).

೧೪ ಕಿ.ಮೀ ಮರುಭೂಮಿ ನಡಿಗೆಯ ಬಳಿಕ ಸೇರಿದ್ದು ಹತ್ತಾರ್‍ ಎಂಬ ಹಳ್ಳಿಯ ಸೆರಗಿನಲ್ಲಿದ್ದ ಕ್ಯಾಂಪ್. ಕುಮಾರ ಪರ್ವತ, ಕುದುರೆಮುಖದಂತಹ ಚಾರಣ ಮಾಡಿದವರಿಗೆ ಮರುಭೂಮಿಯ ಚಾರಣ ತ್ರಾಸ ಕೊಡುವುದಿಲ್ಲ, ಏನಿದ್ದರೂ ಬಿಸಿಲು ತಾಳಿಕೊಳ್ಳುವ ಸಾಮರ್ಥ್ಯ ಇದ್ದರಾಯಿತು ಅಷ್ಟೇ. ಹತ್ತಾರ್‍ ಕ್ಯಾಂಪ್‌ನ ವೆಲ್‌ಕಂ ಡ್ರಿಂಕ್‌ ನಂತರ ಕೆಲವರು ಕ್ರಿಕೆಟ್ ಆಡಲು ಶುರುವಿಟ್ಟರೆ, ನಾವು ಕೆಲವರು ಗೆಳೆಯರು ಕೆಲವೇ ಫರ್ಲಾಂಗ್‌ ದೂರದಲ್ಲಿ ಕಾಣುತ್ತಿದ್ದ ಮರಳಿನ ಗುಡ್ಡದ ಕಡೆಗೆ ಹೆಜ್ಜೆ ಹಾಕಿದೆವು. ಅಲ್ಲಿ ಕುರುಚಲು ಗಿಡಗಳು ಸಾಕಷ್ಟಿದ್ದವು. ಸುನಿಲ್ ಸುಧೀರ್‍ ಕ್ಯಾಮೆರಾ ಹಿಡಿದು ಓಡುತ್ತಿದ್ದರು, ನೋಡಿದರೆ ಕೃಷ್ಣಮೃಗವೊಂದು ಛಂಗನೆ ಜಿಗಿಯುತ್ತಾ ಓಡಿ ಮರೆಯಾಯಿತು. ಮರುಭೂಮಿಯಲ್ಲೂ ಹರಿಣಗಳು, ಮರಳು ನರಿಗಳು, ಮೊಲ, ನವಿಲು...ಹೀಗೆ ವಿವಿಧ ಪ್ರಾಣಿ ಪಕ್ಷಿಗಳಿವೆ. ಅವುಗಳ ರಕ್ಷಣೆಗಾಗಿ ರಾಜಸ್ತಾನ ಸರ್ಕಾರ ಥಾರ್‍ ಮರುಭೂಮಿಯ ಕೆಲಭಾಗಗಳನ್ನು ರಾಷ್ಟ್ರೀಯ ಉದ್ಯಾನವಾಗಿ ಘೋಷಿಸಿದೆ.

ಮುಂದಿನ ಕ್ಯಾಂಪ್‌ನಲ್ಲಿ ಸ್ನಾನ ಮಾಡಲು ಅವಕಾಶ ಇದೆ ಎಂದು ಕ್ಯಾಂಪ್ ಲೀಡರ್‍ ಹೇಳಿದ್ದು ನಮ್ಮ ಉತ್ಸಾಹ ಹೆಚ್ಚಿಸಿತು. ಯಾಕೆಂದರೆ ಕಳೆದ ಮೂರು ದಿನಗಳಿಂದ ಸ್ನಾನಕ್ಕೆ ಅವಕಾಶ ಇರಲಿಲ್ಲ. ಹಾಗಾಗಿ ಮುಂದಿನ ಕ್ಯಾಂಪ್‌ ಧನೇಲಿಗೆ ವೇಗವಾಗಿ ಹೆಜ್ಜೆ ಹಾಕಿದೆವು. ನಾವು ನಡೆದ ಸ್ಥಳಗಳಲ್ಲೇ ಈ ಭಾಗ ಸ್ವಲ್ಪ ಕ್ಲಿಷ್ಟಕರ. ಮೊದಲ ಕ್ಯಾಂಪ್‌ಗಳಿಗೆ ಬರುವಾಗ ದಾರಿಯಲ್ಲಿ ಬೈರಿ, ಖೈರ್‍, ಮುಂತಾದ ವೃಕ್ಷಗಳು ಸಿಗುತ್ತಿದ್ದವು, ಆದರೆ, ಈ ಭಾಗದಲ್ಲಿ ಮರಗಳೆ ಇಲ್ಲ, ಕಳ್ಳಿ ಮಾತ್ರ. ಅಂತೂ ಧನೇಲಿ ತಲಪಿ, ಅಲ್ಲಿನ ಬೋರ್‌ವೆಲ್‌ನ ಉಪ್ಪು ನೀರಿನಲ್ಲಿ ಸ್ನಾನ ಮುಗಿಸಿ ಆದಾಗ, ತಂಡದ ಮಹಿಳೆಯರೂ, ವಯಸ್ಕರೂ ಏದುಸಿರು ಬಿಡುತ್ತಾ ಬರುತ್ತಿದ್ದರು.


ಇನ್ನೊಂದೇ ದಿನ...ಕೊನೆಯ ಕ್ಯಾಂಪ್‌ ಬರ್ಣಾ. ಧನೇಲಿಯ ಹಳ್ಳಯ ಹೈಕಳು, ಅಲ್ಲಿನ ಮಜ್ಜಿಗೆ, ತುಪ್ಪ ತಂದು ಮಾರುತ್ತಿದ್ದರು. ತಂಡದ ಅನೇಕರಿಗೆ ಮನೆಯ ನೆನಪಾಯ್ತೋ ಏನೋ ಮಜ್ಜಿಗೆ ಸರಾಗ ಹೊಟ್ಟೆಗೆ ಇಳಿಸುತ್ತಿದ್ದರು. ಅಲ್ಲಿನ ಹಳ್ಳಿಗಳ ವಿಭಿನ್ನ ರೀತಿಯ ಮಣ್ಣಿನ ಮನೆಗಳು...ದೇಸೀ ಗೋವುಗಳು, ಕುರಿಗಳ ಮಂದೆ ನೋಡುತ್ತಾ ಮುಂದುವರಿದೆವು. ಬರ್ಣಾಕ್ಕೆ ಹೋಗುವ ದಾರಿಯೂ ಸ್ವಲ್ಪ ಕಷ್ಟಕರ. ಮಧ್ಯಾಹ್ನ ೧೨ರ ನಂತರ ಕಠಿಣವಾಗುವ ಬಿಸಿಲೇ ಇಲ್ಲಿ ಶತ್ರು ಅನೇಕರಿಗೆ. ಕೆಲವರಿಗೆ ನೀರು ಕುಡಿದಷ್ಟು ಸಾಲದು. ಅದೂ ಉಪ್ಪುಪ್ಪು ನೀರು....

ಅಂತು ಬಂತು ಬರ್ಣಾ. ಇದೂ ಪ್ರವಾಸಿ ಸ್ಥಳ, ಹಾಗಾಗಿ ಮೇಲ್ಭಾಗದ ಮರಳ ದಿಣ್ಣೆಗಳಲ್ಲಿ ಪ್ರವಾಸಿಗರು ಸಾಕಷ್ಟು ಬರುತ್ತಿರುತ್ತಾರೆ. ಈ ಹಳ್ಳಿಯ ವಿಶೇಷ ಖಾದ್ಯ ದಾಲ್ ಭಾಟಿ ಚೂರ್ಮಾ. ಗೋಧಿ, ತುಪ್ಪ, ಸಕ್ಕರೆ ಬಳಸಿ ಮಾಡುವ ಈ ಖಾದ್ಯ ಜನಪ್ರಿಯ, ನಮ್ಮ ರಾತ್ರಿಯ ಊಟಕ್ಕೂ ಅದೇ.

ಮರುದಿನ ನಮ್ಮನ್ನು ಬೇಸ್ ಕ್ಯಾಂಪ್‌ಗೆ ಕರೆದೊಯ್ಯಲು ಬಸ್ ಸಿದ್ಧವಾಗಿತ್ತು. ಕೊನೆಯ ಕ್ಯಾಂಪ್ ಆದ್ದರಿಂದ ಸಾಕಷ್ಟು ಗ್ರೂಪ್ ಫೋಟೋ ತೆಗೆದೆವು. ಕೈಲಿದ್ದ ಬಾಟಲಿ ತುಂಬ ಅಲ್ಲಿನ ನಯವಾದ ಮರಳು ತುಂಬಿಕೊಂಡು, ಬ್ಯಾಗೇರಿಸಿ, ಬರ್ಣಾದ ಕೆಂಚುಗೂದಲಿನ ಮಕ್ಕಳ ನಗುವನ್ನು ಮನಸ್ಸಲ್ಲಿ ಹಿಡಿದಿರಿಸಿ ಮರಳಿದ್ದು ಬೇಸ್‌ಕ್ಯಾಂಪ್‌ಗೆ.

ರಾತ್ರಿಯಾದರೆ ಮರಗಟ್ಟಿಸುವ ಛಳಿ, ಹಗಲು ಕೆಂಡದಂಥ ಬಿಸಿಲು, ಹೀಗೆ ಇಲ್ಲಿನ ವಿಪರೀತ ಹವಾಗುಣದಲ್ಲಿ ಬದುಕುವ ಜನ ಕಷ್ಟಜೀವಿಗಳು. ಅತಿಥಿಗಳನ್ನು ದೇವರಂತೆ ನೋಡಿಕೊಳ್ಳುವವರು. ಮರಳನ್ನೂ ಪ್ರೇಮಿಸುವವರು...ಅತಿಥಿಗಳನ್ನು ಆಹ್ವಾನಿಸುವ ರಾಜಸ್ತಾನಿ ಪದ್ಯವೊಂದರ ಸಾಲು ಹೀಗೆ ಸಾಗುತ್ತದೆ...

ಕೇಸರಿಯಾ ಪಾಲಮ್‌...ಆವೋಜೀ

ಪಧಾರೋ ಮಾರೇ ದೇಸ್‌ ಮೇ......

ಚಿತ್ರಗಳು:ಸುಧೀರ್‍/ವೇಣುವಿನೋದ್

6 comments:

ಅನಂತ said...

ವಾವ್ಹ್... ಓದಿದ ಮೇಲೆ ಒಂದ್ ಸರ್ತಿ ಹೋಗ್ಬೆಕು ಅನ್ನಿಸ್ತಿದೆ.. ಫೋಟೋಗಳು ಚೆನ್ನಾಗಿವೆ.. ;)

ವಿಕಾಸ್ ಹೆಗಡೆ said...

ನಿಜ, ಓದಿದ ಮೇಲೆ ಹೋಗ್ಲೇಬೇಕು ಅನ್ನಿಸ್ತಿದೆ.
ಥ್ಯಾಂಕ್ಸ್ ವೇಣು .

ಸುಧನ್ವಾ said...

its fine venu.
different journey-experience.
keep it up.

jagadeesh sampalli said...

After reading your experiences, I thought I should go to Thar once, because I have not visited the north so far. Certainly it will give a different experience for those who go from below the Vindhyas.

VENU VINOD said...

ಅನಂತ್, ವಿಕಾಸ್ ಮುಂದೆ ಅವಕಾಶ ಸಿಕ್ಕಾಗ ಖಂಡಿತ ಹೋಗಿ, ಮರುಭೂಮಿ ನಿಜಕ್ಕೂ ಹೊಸ ಅನುಭವ ಕೊಡುತ್ತೆ.

ಸುಧನ್ವ,
ಧನ್ಯವಾದ, ಬರುತ್ತಿರಿ

ಜಗದೀಶ್
ನೀವಂದಿದ್ದು ನಿಜ, ಪಶ್ಚಿಮ ಘಟ್ಟದ ಹಸಿರಿನ ಚೆಲುವು ಸವಿದವರಿಗೆ ಥಾರ್‍ ವಿಭಿನ್ನ ಅನುಭವ ನೀಡುತ್ತೆ

Murali ಮುರಲಿ Chembarpu ಚೆ೦ಬಾರ್ಪು said...

ಅನುಭವ ಕಥನ ಚೆನ್ನಾಗಿತ್ತು ವೇಣು :)

ಇದನ್ನು ಓದಿದ ಮೇಲೆ ಒಮ್ಮೆ ಈ ಚಾರಣ ಮಾಡಬೇಕೆನ್ನಿಸಿದೆ.. ನೀವು ಮ೦ಗಳೂರು ಯುಥ್ ಹಾಸ್ಟೆಲ್ ಮೂಲಕ ಹೋದದ್ದಾ? ಒಟ್ಟು ಎಷ್ಟು ದಿನ ಹಿಡಿಯಿತು? ಸರಾಸರಿ ಒಬ್ಬರಿಗೆ ಎಷ್ಟು ಖರ್ಚು ಬ೦ತು?

Related Posts Plugin for WordPress, Blogger...