28.1.08

ಅರಶಿನಗುಂಡಿ ಫಾಲ್ಸಿಂದ ಕೊಡಚಾದ್ರಿಯ ಶಿಖರಕ್ಕೆ(trek to arasinagundi falls and kodachadri)


ಕಳೆದ ವರ್ಷ ಭೋರಿಡುವ ಮಳೆಯಲ್ಲಿ ಅರಶಿನಗುಂಡಿ ಜಲಪಾತ ನೋಡಲು ಹೋಗಿ, ನೋಡಿಯೂ ನೋಡಲಾಗದೆ ಮರಳಿದ್ದ ನನ್ನನ್ನು ಅರಶಿನಗುಂಡಿ ಕಾಡುತ್ತಲೇ ಇತ್ತು.

ಹಾಗಾಗಿ ಮೊನ್ನೆ ಮೊನ್ನೆ ಎಂಸಿಎಫ್ ಮಿತ್ರರು ಹೋಗೋಣ ಎಂದಾಗ ಮರುಮಾತಿಲ್ಲದೆ ಯೆಸ್ ಅಂದ್ಬಿಟ್ಟೆ. ಅರಶಿನಗುಂಡಿ ಮಾತ್ರ ಅಲ್ಲ ಹಲವು ವರ್ಷಗಳಿಂದ ಹೋಗ್ಬೇಕ್ ಅಂದ್ಕೊಂಡಿದ್ದ ಕೊಡಚಾದ್ರಿಗೂ ಅರಶಿನಗುಂಡಿ ಜತೆಯೇ ಸ್ಕೆಚ್ ಹಾಕಿದ್ದರು ಎಂಸಿಎಫ್‌ನ ಬಾಲಕೃಷ್ಣ.

ನಮ್ಮ ೧೧ ಮಂದಿಯ ಪಟಲಾಮು ಬೆಳಗ್ಗೆ ೫.೩೦ಕ್ಕೆ ಮಂಗಳೂರಿಂದ ಹೊರಟು ಕೊಲ್ಲೂರಿಗೆ ತಲಪಿತು ೮.೩೦ಕ್ಕೆ. ಅಲ್ಲಿ ಉಪಹಾರ ಮುಗಿಸಿ ಮಧ್ಯಾಹ್ನಕ್ಕೂ ಅದೇ ಇಡ್ಲಿ ಕಟ್ಟಿಸಿಕೊಂಡು ಹೊರಟೆವು.


ಮಂಗಳೂರಿಂದ ತಂದಿದ್ದ ೧೨ ಕೆಜಿ ಮೂಸಂಬಿಯ ಹೊರೆ ಹೊರಲಾಗದೆ ಅನೂಷ್ ಕಷ್ಟಪಡುತ್ತಿದ್ದುದು ನೋಡಲಾರದೆ, ಎಲ್ಲರ ಬ್ಯಾಗ್‌ಗೂ ೩-೪ ಮೂಸಂಬಿ ಹಂಚಲಾಯ್ತು. ಕೊಲ್ಲೂರು-ನಗರ-ಶಿವಮೊಗ್ಗ ರಸ್ತೆಯಲ್ಲಿ ಸ್ವಲ್ಪದೂರ ನಡೆದರೆ ಸೇತುವೆಯೊಂದರ ಬಲಕ್ಕೆ, ಕಮಾನೊಂದು ದಾಟಿ ಸಾಗಿದರೆ ಅದು ಅರಶಿನಗುಂಡಿಗೆ ಕರೆದೊಯ್ಯುತ್ತದೆ.

ಹಿಂದಿನಬಾರಿ ಮಳೆಗಾಲದಲ್ಲಿ ಚೆನ್ನಾಗಿ ಜಿಗಣೆ ಕಡಿಸಿಕೊಂಡು ಹೋಗಿದ್ದರೆ, ಈ ಬಾರಿ ಬಿಸಲು ಮತ್ತು ಸೆಖೆ ಕಾಡಿದವು. ಜಿಗಣೆ ಇದ್ದರೆ ಅಟ್‌ಲೀಸ್ಟ್ ವೇಗವಾಗಿ ನಡೆಯಬಹುದು, ಅದರ ಹೆದರಿಕೆಗೆ! ಆದರೆ ಬಿಸಿಲಿನ ಝಳಕ್ಕೆ ಮಾತ್ರ ಏನೂ ಮಾಡುವುದಾಗದು.

ಅರ್ಧ ದಾರಿ ನಡೆದಾಗಲೇ ಮರಾಠೆ ತಮ್ಮ ಅರ್ಧ ಅಂಗಿ ಬಿಚ್ಚಿದ್ದರು. ಇನ್ನೇನು ಜಲಪಾತ ಬಂತು ಎನ್ನುವಾಗಲೇ ಪೂರ್ತಿ ಅಂಗಿ ಬಿಚ್ಚಿ ಸಲ್ಮಾನ್ ಖಾನ್ ಪೋಸ್ ಕೊಟ್ಟರು.

ಅಂತೂ ಜಲಪಾತ ಸೇರಿದೆವು ೧೨.೩೦ರ ಹೊತ್ತಿಗೆ. ಅಲ್ಲಿ ನೋಡಿದರೆ ಸ್ಪೇನ್‌ನ ಇಬ್ಬರು ಚಾರಣಾಸಕ್ತರು ಹಿಂದಕ್ಕೆ ಬರುತ್ತಿದ್ದರು, ಜಲಪಾತ ಕೆಳಗಿಂದ ನೋಡಿ, ಮೇಲೆ ನೋಡುವುದಕ್ಕಾಗಿ ಹೊರಟಿದ್ದರು. ಕೊಲ್ಲೂರಿಗೆ ಬಂದವರು ಈ ಫಾಲ್ಸ್ ಹೆಸರು ಕೇಳಿ ಅದನ್ನು ಹುಡುಕಿಕೊಂಡು ಬಂದ ಅವರ ಮುಂದೆ ನಾವೇನಲ್ಲ ಎಂಬ ತಾಪು ಭಾವನೆ ನಮ್ಮನ್ನಾವರಿಸಿದಾಗಲೇ ಕಂಡರು ಸ್ಪೇನ್‌ನ ಒಂದು ಜೋಡಿ. ಕಲ್ಲೊಂದರ ಮೇಲೆ ಒರಗಿ, ಕೇವಲ ಪ್ರಕೃತಿಯ ಸದ್ದೊಂದನ್ನೇ ಆಸ್ವಾದಿಸುತ್ತಿದ್ದರು.ಅರಸಿನಗುಂಡಿಯಲ್ಲಿ ಈ ಬಾರಿ ಮಳೆಗಾಲದ ಅಬ್ಬರ ಕಂಡು ಬರಲಿಲ್ಲ. ನೋಡಲು ಸಾಮಾನ್ಯ ಕೂಡ್ಲು ತೀರ್ಥದಂತೆಯೇ ಕಾಣುತ್ತದೆ ಅರಶಿನಗುಂಡಿ. ಕಾಡು, ಫಾಲ್ಸ್‌ ಬೀಳುವ ಜಾಗದ ಸುತ್ತಲೂ ಕಲ್ಲಿನ ಬೃಹತ್‌ ಗೋಡೆ ಎಲ್ಲವೂ ಹಾಗೆಯೇ. ಆದರೆ ಎತ್ತರ ಮಾತ್ರ ಇನ್ನೂ ಜಾಸ್ತಿ.

ಸುಂದರ, ಆಳವಾದ ಶೀತಲ ನೀರಿನ ಕೆರೆಯೊಂದನ್ನು ಫಾಲ್ಸ್ ಸೃಷ್ಟಿಸಿದೆ. ಈಜೋಣ ಎಂದು ನೀರಿಗೆ ಇಳಿದರೆ ಮೈಮರಗಟ್ಟುವಷ್ಟು ಚಳಿ. ಆಗ ಸಮಯ ೧.೧೫ !


ಅಂತೂ ಈಜಾಟ ಮುಗಿಸಿ, ಮೇಲೆದ್ದು ತಂದಿದ್ದ ಇಡ್ಲಿ ಹೊಟ್ಟೆಗಿಳಿಸಿದೆವು. ಈಗ ರುಚಿ ಹೆಚ್ಚಾದಂತೆ ಅನ್ನಿಸಿತು. ಬೇಸಗೆಯಲ್ಲಿ ಸುಲಭವಾಗಿ ನಡೆದು ನೋಡಬಹುದಾದ ಜಾಗ ಅರಶಿನಗುಂಡಿ. ಬೇಸಗೆಯಲ್ಲೂ ನೀರಿನ ಧಾರೆ ಇರುವುದು ಇಲ್ಲಿನ ವಿಶೇಷತೆ.


ಅರಶಿನಗುಂಡಿಯಿಂದ ತುಸು ಹಿಂದೆ ಬಂದರೆ ಮೇಲಕ್ಕೆ ಸಾಗುವ ದಾರಿ ಸಿಗುತ್ತದೆ. ಕಡಿದಾದ ಈ ದಾರಿಯಲ್ಲಿ ಬಂದಾಗ ಅರಣ್ಯದ ಕಚ್ಚಾ ರಸ್ತೆ. ಅದರಲ್ಲಿ ಸಾಗಿದೆವು. ಅಷ್ಟೇನೂ ಕಷ್ಟವಾಗದ ಚಾರಣವದು. ಅಲ್ಲಿಂದ ಮುಂದೆ ರಸ್ತೆ ಬಿಟ್ಟು, ಹೊಳೆಯ ಜಾಡಿನಲ್ಲೇ ಸಾಗುವಂತೆ ಕೊಲ್ಲೂರು ವಲಯದ ಅರಣ್ಯ ಇಲಾಖೆ ಸಿಬ್ಬಂದಿ ಸೂಚಿಸಿದ್ದರು. ಅದನ್ನು ಪಾಲಿಸಿ ರಸ್ತೆಯನ್ನು ಅದರ ಪಾಡಿಗೆ ಬಿಟ್ಟು ನಾವು ಸಪುರ ದಾರಿಯಲ್ಲೇ ಮುನ್ನಡೆದೆವು. ಮುಂದಿನದ್ದು ಕಾಡು-ಗುಡ್ಡಗಳ ಹಾದಿ. ಏರು ಹಾದಿಯಲ್ಲಿ ಬೆವರಿಳಿದರೆ ಒಂದಷ್ಟು ಸಮತಟ್ಟು ಜಾಗ ಸಿಕ್ಕಾಗ ಹಾಯೆನಿಸುತ್ತದೆ.

ನಡೆಯುತ್ತಲೇ ಹೋದಾಗ, ನಾವೀಗ ಕೊಡಚಾದ್ರಿಯ ತುದಿಗೇ ಹೋಗಿ ತಲಪುತ್ತಿದ್ದೇವೆ ಎಂಬ ಖುಷಿಯೂ ಆಗತೊಡಗಿತು. ನನ್ನ ಸ್ನೇಹಿತ ಹಿಂದೆ ಅರಸಿನಗುಂಡಿಯಿಂದ ಕೊಡಚಾದ್ರಿಗೆ ರಾತ್ರಿ ವರೆಗೂ ನಡೆದ ಕಥೆ ಹೇಳಿದ್ದ, ಹಾಗಾಗಿ ನನಗೆ ಮಾತ್ರ ಅಷ್ಟು ಬೇಗ ಕೊಡಚಾದ್ರಿ ಬರಲಾರದು ಎಂಬ ಭಾವನೆ ಇತ್ತು. ಸುಮಾರು ನಾಲ್ಕು ಗಂಟೆ ಆದಾಗ ನಾವೆಲ್ಲ ಕಾಡು ಹಿಂದೆ ಬಿಟ್ಟು ಬೋಳು ಗುಡ್ಡದ ತುದಿಗೆ ಬಂದೆವು. ಮುಂದೆ ಸರಸರ ಹೋಗುತ್ತಿದ್ದವರು ಹಿಂದಿನವರನ್ನು ಕರೆಯಲು ಹಿಂದೆ ತಿರುಗಿದವರೇ ಮುಸಿಮುಸಿ ನಗತೊಡಗಿದರು!

ಯಾಕೆಂದರೆ ಕೊಡಚಾದ್ರಿ ಏರಿದ್ದೇವೆ ಎಂದು ಕೊಂಡಿದ್ದ ನಮ್ಮನ್ನು ಅಣಕಿಸುವಂತೆ ಹಿಂದೆ ಎತ್ತರದಲ್ಲಿ ಕೊಡಚಾದ್ರಿ ಶಿಖರ ನಮ್ಮನ್ನು ನೋಡಿ ನಗುತ್ತಿತ್ತು, ಅಲ್ಲಿವರೆಗೆ ಆದುಸಿರು ಬಿಟ್ಟ ಕೆಲವರಿಗಂತೂ ಅಯ್ಯೋ ಇನ್ನೂ ಅಷ್ಟು ನಡೆಯಬೇಕೇ ಅನ್ನಿಸಿತು.
ಮುಂದಕ್ಕೆ ಕಾಲೆಳೆಯುತ್ತಾ ಸಾಗಿದಾಗ ಹಳ್ಳಿಯೊಂದರಿಂದ ಬರುವ ರಸ್ತೆ. ಅದರಲ್ಲಿ ನಡೆಯುತ್ತಾ ಸಾಗಿದರೆ ಮುಂದೆ ಕೇರಳಿಗರ ಅಸ್ತಿತ್ವವನ್ನು ಸಾರಿ ಹೇಳುವಂತೆ ತಂಗಪ್ಪನ್‌ ಎಂಬವರ ಹೊಟೇಲು(ಅವರ ಭಾಷೆಯಲ್ಲಿ ಪೋಟಲ್ ಸಂತೋಷ್ ಎಂದು ಬರೆದಿತ್ತು!) ಅಲ್ಲೇ ಸಿಕ್ಕಿತು. ಗಾಜಿನ ಲೋಟ ತುಂಬಾ ಚಹಾ ಸಿಕ್ಕಿತು.

ಅದನ್ನು ಕುಡಿದು ಮತ್ತೆ ಚಾರಣ ಆರಂಭ. ಒಮ್ಮೆ ನಮ್ಮ ಗಮ್ಯ ಇಷ್ಟು ಹೊತ್ತಿಗೆ ಬರಬಹುದು ಎಂದು ಮನಸ್ಸು ಮಾಡಿ, ಆ ಹೊತ್ತಿಗೆ ಗುರಿ ಮುಟ್ಟಲಿಲ್ಲ ಎನ್ನುವ ಚಾರಣಿಗರ ಪರಿಸ್ಥಿತಿ ಬಹಳ ಫಜೀತಿಯದ್ದು. ಅಲ್ಲಿಂದ ಒಂದೊಂದು ಹೆಜ್ಜೆ ಇಡುವುದೂ ಸಂಕಟವಾಗುತ್ತದೆ. ನಮ್ಮಲ್ಲೂ ಅನೇಕರಿಗೆ ಈ ಅನುಭವ ಆಯಿತು.

ನಿಜವಾದ ಚಾರಣದ ಅನುಭವ ಇರುವುದೇ ತಂಗಪ್ಪನ ಹೊಟೇಲಿಂದ ಮೇಲೆ. ಕಡಿದಾದ ದಾರಿಯದು. ಒಂದೊಂದು ಹೆಜ್ಜೆಗೂ ದೊಡ್ಡ ಉಸಿರು ಖರ್ಚಾಗುತ್ತಿತ್ತು. ಅಂತೂ ಕೊಡಚಾದ್ರಿ ಸೇರುವಾಗ ಪಶ್ಚಿಮದಲ್ಲಿ ಸೂರ್ಯ ಪರದೆ ಎಳೆದಾಗಿತ್ತು.


ಇಷ್ಟೇನಾ ಕೊಡಚಾದ್ರಿ?!

ಕೊಡಚಾದ್ರಿ ದಾರಿಯುದ್ದಕ್ಕೂ ಪ್ರಕೃತಿಯ ದೃಶ್ಯಾವಳಿ ಸವಿಯುತ್ತಾ ಬಂದ ನಮಗೆ ಕೊಡಚಾದ್ರಿಯ ತುದಿ ತಲಪಿದರೆ ನಿರಾಸೆ. ನಮ್ಮ ಲೌಕಿಕ ನೆನಪೆಲ್ಲ ಬಿಟ್ಟು ನಿಸರ್ಗದ ಮಡಿಲಲ್ಲಿ ಹಾಯಾಗಿ ಮಲಗಿ ಬಿಡೋಣ ಎಂದು ಹೊರಟ ನಮಗೆ ಅದೊಂದು ಪಕ್ಕಾ ವಾಣಿಜ್ಯ ಪ್ರದೇಶವಾಗಿ ಕಂಡು ಬಂತು.
ಕೊಡಚಾದ್ರಿ ಈಗ ಆಸಕ್ತ ಚಾರಣಿಗರ, ಧ್ಯಾನಸ್ಥರ ಸ್ಥಳವಾಗಿ ಉಳಿದಿಲ್ಲ. ಇಲ್ಲಿ ಮೂರು ದೇವಸ್ಥಾನಗಳಿವೆ. ಕೊಲ್ಲೂರಿಗೆಂದು ಬರುವ ಪ್ರವಾಸಿಗರು ಜೀಪೇರಿ ಕೊಡಚಾದ್ರಿಗೆ ಬಂದೇ ಬರುತ್ತಾರೆ. ಪ್ರವಾಸಿಗರನ್ನು ‘ನೋಡಿಕೊಳ್ಳುವ’ ಎರಡು ಮಹಾನುಭಾವರ ಕುಟುಂಬಗಳು ಇಲ್ಲಿವೆ.

೬೧ ಜೀಪ್‌ಗಳು ಕೊಡಚಾದ್ರಿ ಸರ್ವಿಸ್ ನಡೆಸುತ್ತವೆ. ಸರ್ಕಾರಿ ಪ್ರವಾಸಿ ಬಂಗ್ಲೆ ಇದೆ. ಹಿಂದೆ ಧ್ಯಾನಸ್ಥ ಆಸ್ತಿಕರ, ಪ್ರಕೃತಿಪ್ರೇಮೀ ಚಾರಣಿಗರ ತಾಣವಾಗಿದ್ದ ಕೊಡಚಾದ್ರಿ ಇಂದು ಮೋಜಿಗೆಂದು ಬರುವವರ ಸ್ಥಳವಾಗಿ ಪರಿವರ್ತನೆಗೊಳ್ಳುತ್ತಿದೆ.

ನಾವು ರಾತ್ರಿ ತಲಪಿದ ಕಾರಣ ಛಳಿಯಲ್ಲಿ ಕಳೆಯಲು ಕ್ಯಾಂಪ್‌ ಫೈರ್‌ಗೆ ಒಣಕಟ್ಟಿಗೆ ಸಂಗ್ರಹಿಸಲಾಗಲಿಲ್ಲ. ಅಲ್ಲಿನ ‘ದೊಣ್ಣೆನಾಯಕ’ರ ಗೋಗರೆದು ನಾಲ್ಕು ತುಂಡು ಕಟ್ಟಿಗೆ ಬೇಡಿ, ನಾವೇ ಒಲೆ ಹಾಕಿ, ಚಹಾ ಮತ್ತು ಗಂಜಿ ಮಾಡಿಕೊಂಡೆವು. ಅವರ ಮನೆಯ ಮೂಲೆಯೊಂದರಲ್ಲಿ ಬಿದ್ದುಕೊಂಡೆವು.
ಮರುದಿನ ಎದ್ದು ಸರ್ವಜ್ಞಪೀಠ ವೀಕ್ಷಿಸಿದೆವು, ಅಲ್ಲಿಂದ ಮುಕ್ಕಾಲು ಗಂಟೆ ವ್ಯಯಿಸಿ, ಪಶ್ಷಿಮ ದಿಕ್ಕಿಗೆ ಇಳಿಯುತ್ತಾ ಹೋಗಿ ಚಿತ್ರಮೂಲ ಗುಹೆಯನ್ನೂ ನೋಡಿ ಹಿಂದಿರುಗಿದೆವು.


ಕೊಡಚಾದ್ರಿಯಲ್ಲಿ ಗಮನ ಸೆಳೆಯುವುದು ಅಲ್ಲಿನ ಛಳಿ, ಮುಂಜಾನೆ ಶಿಖರಾಗ್ರದಲ್ಲಿ ನಡೆಯುವಾಗ ಸುತ್ತಲೂ ಕನಸಿನ ಲೋಕದ ಭ್ರಾಂತಿ ಹುಟ್ಟಿಸುವ ಮೋಡದ ರಾಶಿ.
ಮತ್ತೆ ಇಲ್ಲಿನ ದೊಣ್ಣೆನಾಯಕರ ಮನೆ ನೋಡುವಾಗ ಖುಷಿ ಮಾಯವಾಗುತ್ತದೆ, ದೋಚಲು ಸಿದ್ಧರಾಗಿ ನಿಂತ ಜೀಪ್‌ನವರು, ಫ್ರೂಟಿ ಹೀರಿ, ಪ್ಲಾಸ್ಟಿಕ್ ಎಸೆಯುವುದೇ ಸಾಹಸ ಎಂಬ ಹುಂಬರನ್ನು ನೋಡುವಾಗ ಸಿಟ್ಟೇರುತ್ತದೆ, ಇವೆಲ್ಲವನ್ನೂ ಅನುಭವಿಸಬೇಕಿದ್ದರೆ, ನೀವೂ ಕೊಡಚಾದ್ರಿಗೆ ಹೆಜ್ಜೆ ಹಾಕಿ.

7 comments:

jomon varghese said...

ನಮಸ್ತೆ,

ಏನ್ರೀ ವಿನೋದ್,ಎಲ್ಲೆಲ್ಲಿಗೋ ಹೋಗ್ತೀರಾ, ನಮ್ಮನ್ನೂ ಕರ್‌ಕೊಂಡು ಹೋಗ್ರೀ. ನಾವು ಬರ್ತೀವಿ. ಹೀಗೆ ಟ್ರಿಪ್ ಇಟ್ಟಾಗ ನಮ್ಮಂತ ಬ್ಲಾಗಿಗರಿಗೂ ಒಂದು ಮಾತು ಹೇಳಬಾರದ?

ಚೆಂದದ ಬರಹ. ಕೊಡಚಾದ್ರಿಯ ಹಸಿರಿನಂತಹ ಫೋಟೋ.

ಧನ್ಯವಾದಗಳು.
ಜೋಮನ್.

VENU VINOD said...

ಜೋಮನ್,
ಬೇಸತ್ತಾಗ ಬಸವ ಎದ್ದಿತು ಬಾಲ ಬೀಸಿತು ಅನ್ನೋ ಹಂಗೆ ನಾವೂ:)
ಮುಂದಿನ ಸಲ ಚಾರಣ ಬಗ್ಗೆ ಖಂಡಿತ ಹೇಳ್ತೀನಿ.

VENU VINOD said...
This comment has been removed by the author.
ಶ್ರೀನಿಧಿ.ಡಿ.ಎಸ್ said...

koDachadri!! hmmm:)

ರಾಜೇಶ್ ನಾಯ್ಕ said...

ಅರಶಿನಗುಂಡಿ ಸೊಗಸಾಗಿ ಕಾಣುತ್ತಿದೆ ಚಿತ್ರಗಳಲ್ಲಿ. ಸ್ಪೇನ್ ಜೋಡಿಯ ಧೈರ್ಯವನ್ನು ಮೆಚ್ಚಬೇಕು. ಕೊಡಚಾದ್ರಿಯಂತೂ 'ಮಾರ್ಕೆಟ್' ಆಗಿಬಿಟ್ಟಿದೆ.

ಮಿಥುನ ಕೊಡೆತ್ತೂರು said...

ಕೊಡಚಾದ್ರಿ ಚಾರಣವನ್ನು ಬರೆಹದ ರೂಪದಲ್ಲಿ ಕಟ್ಟಿಕೊಟ್ಟ ಶೈಲಿ ತುಂಬ ಚೆನ್ನಾಗಿದೆ.

ಮಿಥುನ ಕೊಡೆತ್ತೂರು said...

ಕೊಡಚಾದ್ರಿ ಚಾರಣವನ್ನು ಬರೆಹದ ರೂಪದಲ್ಲಿ ಕಟ್ಟಿಕೊಟ್ಟ ಶೈಲಿ ತುಂಬ ಚೆನ್ನಾಗಿದೆ.

Related Posts Plugin for WordPress, Blogger...