ಈಚೆಗೆ ಎಲ್ಲವೂ ಸರಿ ಇಲ್ಲ
ಮನೆಮೂಲೆಯ
ಕುಂಡದ ಗಿಡ ಮಂಕು ಹಿಡಿದು
ಕೂತುಬಿಟ್ಟಿದೆ, ಹೂ ಅರಳುವುದೇ ಇಲ್ಲ
ಮನದ ವೇದಿಕೆಯಲ್ಲಿ
ನಿನ್ನ ಬಿಂಬಗಳು ಈಚೆಗೆ ನರ್ತಿಸುವುದೂ ಇಲ್ಲ
ಒಡಲಾಳದಲ್ಲಿ ಶಬ್ದಗಳು
ಕವಿತೆಯಾಗಲು ಹಿಂಜರಿಯುತ್ತಿವೆ
ಗೋಡೆಗಡಿಯಾರದ ಎಡೆಯಲ್ಲಿ
ಗೂಡುಕಟ್ಟಿದ್ದ ಗುಬ್ಬಿ
ಹಾರಿಹೋಗಿ ತಿಂಗಳುಗಳೆ ಕಳೆದಿವೆ
ಈಗಂತೂ ಆ ಗೂಡಲ್ಲಿ ಜಿರಲೆಗಳ ಹರಿದಾಟ
ಅಬ್ಬರದಲ್ಲಿ ಹರಿವ ತೊರೆಯಲ್ಲಿ
ಚಪ್ಪಲಿ ಕಳೆದು ಹೋದಾಗ
ದಿಗಿಲಿನಿಂದ ನೋಡುವ ಹುಡುಗ ನಾನಾಗಿದ್ದೇನೆ
ಥತ್...ಈಚೆಗೆ ಯಾವುದೂ ಸರಿ ಎನಿಸುವುದಿಲ್ಲ...
ಮೇಲ್ನೋಟಕ್ಕೆ ಮೌನದ
ಮೇಲೊಂದು ಹುಸಿನಗುವಿನ ತೆರೆ ಬಿದ್ದಿದೆ
ಚಿಂತೆಯ ಕಾರ್ಮೋಡ ಕರಗಿಸಲು
ಉತ್ಸಾಹದ ಬಿರುಗಾಳಿ
ವೃಥಾ ಯತ್ನಿಸುತ್ತಿದೆ
ಪ್ರಯತ್ನಗಳು ಕೈಗೂಡುತ್ತಿಲ್ಲ
ನೀನು ಇಲ್ಲವಾದರೂ ಪರವಾಗಿಲ್ಲ
ಕುಂಡದ ಗಿಡ ಹೂಬಿಟ್ಟರೆ,
ಗುಬ್ಬಿ ಗೂಡಿಗೆ ಮರಳಿದರೆ
ಶಬ್ದಗಳು ಮತ್ತೆ ಕವಿತೆಗಳಾದರೆ ಸಾಕು
ನೀನೆ ಬೇಕೆಂದಿಲ್ಲ....
2 comments:
ಗುಬ್ಬಿ ಇಲ್ಲದ ಗೂಡು ಕವನ ತುಂಬಾ ಮೆಚ್ಚುಗೆಯಾಯಿತು.
ಆ ’ನೀನು’ ಇಲ್ಲದೆ, ಕವಿತೆ ಮತ್ತೆ ಹುಟ್ಟಬಹುದೆ? ಊಹೂಂ,ಸಾಧ್ಯವಿಲ್ಲ,ವೇಣು.
Post a Comment