2.4.08

ತಿಂದಿರಾ ಪೊಳಲಿ ಕಲ್ಲಂಗಡಿ?(watermelon of polali)

ಮಂಗಳೂರಿಗೆ ಬಂದವರು ಹೋಗಲೇಬೇಕಾದ ಕೆಲ ಸ್ಥಳಗಳು ಅನೇಕ ಇವೆ. ಮಂಗಳೂರಿನಿಂದ ಸುಮಾರು ೧೨ ಕಿ.ಮೀ ದೂರದಲ್ಲಿರುವ ಪೊಳಲಿಯ ಶ್ರೀ ರಾಜರಾಜೇಶ್ವರಿಯ ದೇವಳ ಅಂತಹ ಸ್ಥಳಗಳಲ್ಲೊಂದು. ಈ ದೇವಳದಲ್ಲೊಂದು ವಿಶೇಷ ಇದೆ.
ಏನ್ ಗೊತ್ತಾ ? ಈ ದೇವಸ್ಥಾನದಲ್ಲಿ ‘ಪೊಳಲಿ ಬಚ್ಚಂಗಾಯಿ’ ಪ್ರಸಾದ.
ಪೊಳಲಿಗೆ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಬರುವವರಿಗೆ ಪೊಳಲಿ ಬಚ್ಚಂಗಾಯಿ(ಕಲ್ಲಂಗಡಿ ಹಣ್ಣು) ಇಲ್ಲಿ ಲಭ್ಯ. ಹಾಗೆಂದ ಮಾತ್ರಕ್ಕೆ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಸಿಗುತ್ತದೆ ಎಂದಲ್ಲ. ಪೊಳಲಿ ದೇವಸ್ಥಾನದ ಬೀದಿ ಬದಿ ಅಂಗಡಿಗಳಲ್ಲಿ ಇಲ್ಲೇ ಬೆಳೆಯಲಾದ ತಾಜಾ ಕಲ್ಲಂಗಡಿ ಲಭ್ಯ.
ಪೊಳಲಿಯ ಕಲ್ಲಂಗಡಿ ಖ್ಯಾತಿ ಪಡೆಯಲು ಪೊಳಲಿ ದೇವಿಯ ಮಡಿಲಲ್ಲಿ ಬೆಳೆಯುವ ಹಣ್ಣು ಎಂಬುದೊಂದು ಕಾರಣವಾದರೆ, ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇರೆ ಯಾವ ಮಣ್ಣಿನಲ್ಲೂ ಇದು ಬೆಳೆಯಲಾರದು ಎಂಬುದೂ ಮಗದೊಂದು ಕಾರಣ.
ವರ್ಷದಿಂದ ವರ್ಷಕ್ಕೆ ಕಲ್ಲಂಗಡಿ ಬೆಳೆಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ ಎನ್ನುತ್ತಾರೆ ಇಲ್ಲಿನ ಹಿರಿಯ ವಾಸುದೇವ ಭಟ್ಟರು. ತಮಗೆ ಸ್ವಂತ ಜಾಗ ಇಲ್ಲದಿದ್ದರೂ ಖಾಲಿ ಇರುವ ಸ್ಥಳದ ಮಾಲೀಕರಿಂದ ಜನವರಿ-ಏಪ್ರಿಲ್ ವರೆಗೆ ಒಪ್ಪಂದದ ಮೇರೆಗೆ ಕೆಲವರು ಕೃಷಿಕರು ಪಡೆದುಕೊಂಡು ಕಲ್ಲಂಗಡಿ ಬೆಳೆಸಿ ಮೊದಲ ಹಣ್ಣನ್ನು ಶ್ರೀ ರಾಜರಾಜೇಶ್ವರಿಗೆ ಒಪ್ಪಿಸಿ ಕೃತಾರ್ಥರಾಗಿ ಮಾರಾಟಕ್ಕೆ ಇರಿಸುತ್ತಾರೆ.
ಇಲ್ಲಿಂದ ಹೊರಕ್ಕೆ ಕಲ್ಲಂಗಡಿ ಹೋಗುವುದಿಲ್ಲ. ಬೆಳೆದದ್ದೆಲ್ಲಾ ಖರ್ಚಾಗಿ ಹೋಗುತ್ತದೆ, ಅದೇ ವಿಶೇಷ. ಬರುವ ಭಕ್ತಾದಿಗಳನ್ನು ಕಲ್ಲಂಗಡಿ ಸೆಳೆದೇ ಸೆಳೆಯುತ್ತದೆ ಎನ್ನುತ್ತಾರೆ ಸ್ಥಳೀಯರಾದ ಯಶವಂತ.
ಪೊಳಲಿಯೆಂದರೆ ದೊಡ್ಡ ಊರೇನಲ್ಲ. ಮಂಗಳೂರಿಂದ ಮೂಡುಬಿದಿರೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ರಲ್ಲಿ ಸಾಗಿ ಗಂಜಿಮಠದ ಬಳಿ ಬಲಕ್ಕೆ ಇರುವ ಬೃಹತ್ ದ್ವಾರದಲ್ಲಿ ಒಳಗೆ ಹೋದರೆ ಅಡ್ಡೂರು ಸಿಗುತ್ತದೆ. ಅಲ್ಲೇ ಎಡಕ್ಕೆ ಸಾಗಿದರೆ ಇನ್ನೂ ಹಸಿರು ಹೊದ್ದಿರುವ ಪೊಳಲಿ ಸೇರಬಹುದು.
ಈ ವರುಷ ಮಳೆ ಭಾರಿಯಾಗಿ ಸುರಿದು ಕಲ್ಲಂಗಡಿ ಬೆಳೆಗೆ ನಷ್ಟ ಉಂಟು ಮಾಡಿದೆ. ಶೇ.೪೦ರಷ್ಟು ಬೆಳೆ ಹಾನಿಯಾಗಿದೆ. ಗದ್ದೆಯಲ್ಲಿ ನೀರು ನಿಂತು ಕೊಳೆತು ಹೋಗಿದೆ.
ಆದರೂ ಎಲ್ಲವೂ ದೇವಿಯ ಇಚ್ಛೆ, ಆಕೆಗೆ ಎಷ್ಟು ಬೇಕೋ ಅಷ್ಟನ್ನು ಬೆಳೆಸುತ್ತಾಳೆ ಎನ್ನುತ್ತಾರೆ ೨೫ಕ್ಕೂ ಹೆಚ್ಚು ವರ್ಷದಿಂದ ಇಲ್ಲಿ ಕಲ್ಲಂಗಡಿ ಬೆಳೆಯುತ್ತಿರುವ ಹಿರಿಯರಾದ ನಾರಾಯಣ ಪೂಜಾರಿ. ನೆನಪಿಡಿ ಅವರು ಬೆಳೆಸಿದ ಕಲ್ಲಂಗಡಿ ಪೈಕಿ, ಐದು ಕೆ.ಜಿ ಮೇಲ್ಪಟ್ಟ ನೂರೈವತ್ತಕ್ಕೂ ಹೆಚ್ಚು ಕಲ್ಲಂಗಡಿ ಹಾಳಾಗಿದೆ.

ಬೇಸರ ಎಂದರೆ ಪೊಳಲಿ ತಳಿಯೆಂದೇ ಇದ್ದ ತಳಿಯೊಂದು ಮಾತ್ರ ಕಾಲಾಂತರದಲ್ಲಿ ಕಣ್ಮರೆಯಾಗಿ ಹೋಗಿದೆ, ಈಗ ಹೈಬ್ರಿಡ್ ತಳಿಗಳಾದ ಮಧು, ಭಟ್ನಗರ್‌ನಂತಹ ತಳಿಗಳನ್ನು ಇಲ್ಲಿ ಬೆಳೆಯುತ್ತಾರೆ. ಇಲ್ಲಿನ ಲೋಕಲ್ ತಳಿ ದಶಕಗಳ ಹಿಂದೆಯೇ ಅಳಿದು ಹೋಗಿದೆ, ಅದು ಭಾರೀ ಗಾತ್ರದ್ದಾಗಿತ್ತು ನೋಡಿದ ನೆನಪು ಈಗಲೂ ಇದೆ ಎನ್ನುತ್ತಾರೆ ನಾರಾಯಣ.

ಅದೇನೆ ಇರಲಿ ದೇವಸ್ಥಾನವೊಂದರ ಕಾರಣದಲ್ಲಾದರೂ ದಕ್ಷಿಣ ಕನ್ನಡದಲ್ಲಿ ಕಲ್ಲಂಗಡಿ ಬೇರು ಬಿಟ್ಟಿರುವುದಂತೂ ಅಚ್ಚರಿಯ ಸಂಗತಿ.

5 comments:

ಶ್ರೀನಿಧಿ.ಡಿ.ಎಸ್ said...

nice info!

ಸಾಹಿತ್ಯ ಸಂಜೆ... said...

ವೇಣು.... ಪೊಳಲಿ ಕಲ್ಲಂಗಡಿ ಲೇಖನ ಚೆನ್ನಾಗಿದೆ. ಎಷ್ಟೋ ಮಂದಿಗೆ ನಮ್ಮ ಈ ಊರಲ್ಲೂ ಕಲ್ಲಂಗಡಿ ಬೆಳೀತಿದ್ದಾರೆ ಅಂತ ಗೊತ್ತಿಲ್ಲ... ಏನೇ ಆಗ್ಲಿ ಓದಿ ಖುಷಿಯಾಯ್ತು...
ಗೆಳೆಯ,
ಹರೀಶ್ ಕೆ. ಆದೂರು

Prashanth M said...

ಛೇ! ಇದರ ಬಗ್ಗೆ ಗೊತ್ತೇ ಇರಲಿಲ್ಲ ನನಗೆ. ಹೋದ ತಿಂಗಳು ಪೊಳಲಿಗೆ ಭೇಟಿಯಿತ್ತಾಗಲೂ ಇದರ ವಿಷಯ ತಿಳಿಯಲಿಲ್ಲ :(

Edgar Dantas said...

hey nice blog really enjoyed the post you posted i really appreciate it
with regards
edgar dantas
www.gadgetworld.co.in

ASHRAF said...

ಪೊಳಲಿ ಕಲ್ಲಂಗಡಿ ಲೇಖನ ಸಕತ್ತಾಗಿದೆ

Related Posts Plugin for WordPress, Blogger...