24.4.08

ಅಮ್ಮ ಮಿಸ್ಸಾದ ಫಜೀತಿ

ಹಳ್ಳಿಯಿಂದ ಪಟ್ಟಣಕ್ಕೆ ಬಂದು ಕೆಲವರ್ಷಗಳಾದರೂ ಅಮ್ಮ ಇಂದಿಗೂ ಪೇಟೆಗೆ ಹೊಂದಿಕೊಂಡವಳಲ್ಲ ಎಂದೇ ಹೇಳಬಹುದು....

ಮೊನ್ನೆ ಊರಲ್ಲಿ ಅಜ್ಜಿಯ ತಿಥಿಗೆಂದು ಅಮ್ಮ ಹೊರಟಳು. ಕಚೇರಿ ಕೆಲಸದೊತ್ತಡದ(ಯಾವಾಗಲೂ ಅದೇ ಕಾರಣ) ಜತೆಗೆ ಜ್ವರವೂ ಇದ್ದ ಕಾರಣ ನನಗೆ ಹೋಗಲಾಗುವುದಿಲ್ಲ ಎಂದು ನಾನು ಹೊರಡಲು ನಿರಾಕರಿಸಿದೆ.
ಅಜ್ಜಿಮನೆಯಲ್ಲಿ ಏನಾದರೂ ಕಾರ್ಯಕ್ರಮ ನಡೆದಾಗ ನಾನು ಹೋಗಲಾಗದಿದ್ದರೆ ಮಂಗಳೂರಿಂದ ಸುಮಾರು ೩೫ ಕಿ.ಮೀ ದೂರದ ಕಾಸರಗೋಡು ಜಿಲ್ಲೆಯ ಹೊಸಂಗಡಿಯಲ್ಲಿರುವ ಚಿಕ್ಕಪ್ಪ ಚಿಕ್ಕಮ್ಮನೊಂದಿಗೆ ಅವರ ಆಮ್ನಿಯಲ್ಲಿ ಅಮ್ಮ ಅಜ್ಜಿಯ ಮನೆಗೆ ಹೋಗುವುದು, ಅಲ್ಲಿ ಎರಡು ದಿನ ಕಳೆದು, ಚಿಕ್ಕಮ್ಮನೊಂದಿಗೆ ಮರಳುವುದು, ಅವರು ಅಮ್ಮನನ್ನು ಹೊಸಂಗಡಿಯಿಂದ ಮಂಗಳೂರು ಎಕ್ಸ್‌ಪ್ರೆಸ್ ಬಸ್ಸಿಗೆ ಹತ್ತಿಸುವುದು ಅನೇಕ ಬಾರಿ ನಡೆದ ಪ್ರಸಂಗಗಳು. ಅಲ್ಲಿ ಯಾವ ಬಸ್ಸಿಗೆ ಅಮ್ಮ ಏರಿದ್ದಾರೆ ಎಂಬುದನ್ನು ಚಿಕ್ಕಮ್ಮ ನನಗೆ ಫೋನಲ್ಲಿ ತಿಳಿಸಿದರೆ, ಸಮಯಕ್ಕೆ ಸರಿಯಾಗಿ ನಾನು ಮಂಗಳೂರು ಬಸ್‌ ನಿಲ್ದಾಣಕ್ಕೆ ಹೋಗಿ ಆ ಬಸ್ಸಿಂದ ಅಮ್ಮ ಇಳಿದ ಬಳಿಕ ನಮ್ಮ ಮನೆ ಸುರತ್ಕಲ್‌ನತ್ತ ಹೋಗುವ ಬಸ್‌ಗೆ ಹತ್ತಿಸಿದರಾಯಿತು, ಅವಳು ಸ್ಟಾಪಲ್ಲಿ ಇಳಿಯುತ್ತಾಳೆ.
ಮನೆ ಸ್ಟಾಪಲ್ಲಿ ಇಳಿಯಲು ಅವಳಿಗೆ ಕಷ್ಟವಾಗದು, ಆದರೆ ಮಂಗಳೂರಿನ ಜನಜಂಗುಳಿಯಲ್ಲಿ ಸುರತ್ಕಲ್ ಬಸ್ ಹಿಡಿಯುವ ಕೆಲಸ ನನ್ನಿಂದಾಗದು ಎಂದು ಯಾವಾಗಲೂ ಹೇಳುತ್ತಿರುತ್ತಾಳೆ.
ಹಾಗೆಯೇ ಮೊನ್ನೆಯೂ ಚಿಕ್ಕಪ್ಪ ಫೋನ್‌ ಮಾಡಿ ಸಂಜೆ ೫-೧೫ಕ್ಕೆ ಹೊಸಂಗಡಿಯಿಂದ ವೈಶಾಖ್ ಬಸ್ಸಲ್ಲಿ ಅಮ್ಮ ಹೊರಟಿದ್ದಾರೆ ಎಂದು ಹೇಳಿದರು. ಹೊಸಂಗಡಿಯಿಂದ ಮುಕ್ಕಾಲು ಗಂಟೆ ದಾರಿ ಮಂಗಳೂರಿಗೆ. ಹಾಗೆ ೬ ಗಂಟೆಗೆ ಹೊರಟು ಮಂಗಳೂರು ಸರ್ವಿಸ್ ಬಸ್ ನಿಲ್ದಾಣಕ್ಕೆ ಹೋದೆ, ಆಗಲೇ ಒಂದು ವೈಶಾಖ್ ಬಸ್ ನಿಂತಿತ್ತು, ಕಂಡಕ್ಟರ್‌ಗೆ ಕೇಳಿದರೆ ಅದು ಬಂದು ಆಗಲೇ ೧೦ ನಿಮಿಷ ಕಳೆದಿದೆ. ಅಷ್ಟು ಬೇಗ ಬಂದಿರಲು ಸಾಧ್ಯವಿಲ್ಲ, ಹೊಸಂಗಡಿಯಲ್ಲಿ ೫.೧೫ಕ್ಕೆ ಪಾಸಾಗುವ ಇನ್ನೊಂದು ವೈಶಾಖ್ ಇದೆಯೇ ಕೇಳಿದೆ, ಹೌದು, ಅದು ಇನ್ನೊಂದೈದು ನಿಮಿಷದಲ್ಲಿ ಬರಬಹುದು ಎಂದ.
ಬಸ್‌ಗಳ ಬೋರ್ಡ್ ನೋಡುತ್ತಾ ನಿಂತಿದ್ದೆ, ಎರಡನೇ ವೈಶಾಖ್ ಕೂಡಾ ಬಂತು, ಆದರೆ ಅದರಲ್ಲಿ ಅಮ್ಮ ಇಲ್ಲ!
ಮತ್ತೆ ಚಿಕ್ಕಪ್ಪನಿಗೆ ಫೋನ್ ಮಾಡಿ ಅಮ್ಮ ಬಂದಿಲ್ಲ ಎಂದೆ.
ಈಗ ಗೊಂದಲಕ್ಕೊಳಗಾಗುವುದು ಚಿಕ್ಕಪ್ಪನ ಸರದಿ.. ನಾನು ಹತ್ತಿಸಿದ ಬಸ್‌ ವೈಶಾಖವೋ ವೈಶಾಲಿಯೋ ಎಂದು ಅವರಿಗೂ ಕನ್‌ಫ್ಯೂಶನ್. ನೋಡೋಣ ಎಂದು ಮತ್ತಷ್ಟು ಹೊತ್ತು ಕಾದೆ, ಇನ್ನೋರ್ವ ಬಸ್ ಕಂಡಕ್ಟರ್‌ನಲ್ಲಿ ವೈಶಾಲಿ ಬಸ್ ಬಂತೇ ಕೇಳಿದೆ, ಅದು ಬಂದೂ ಆಗಿದೆ ಮರಳಿ ಕಾಸರಗೋಡಿನತ್ತ ಹೋಗಿಯೂ ಆಗಿದೆ ಎಂದ. ಮತ್ತೆ ವಿಚಾರಿಸಿದೆ, ಇನ್ನೊಂದು ವೈಶಾಲಿ ಮಂಗಳೂರಿನ ಒಳಕ್ಕೆ ಬರುವುದೇ ಇಲ್ಲ, ಹೊರಗಿನ ಕಂಕನಾಡಿ ಬಸ್ಟಾಂಡಿಗೆ ಬರುತ್ತೆ ಎಂಬ ಹೆಚ್ಚು‘ವರಿ’ ಮಾಹಿತಿಯನ್ನೂ ಕೊಟ್ಟ.
ಬೈಕೇರಿ ಕಂಕನಾಡಿಗೆ ಓಡಿಸಿ ಅಲ್ಲೂ ಬಸ್ಟಾಂಡ್‌ಗೆ ಹೋದರೆ ವೈಶಾಲಿಯಿಲ್ಲ, ಅಮ್ಮನೂ ಕಾಣುವುದಿಲ್ಲ...ಆಗಲೇ ಕತ್ತಲೆ ಕವಿದಿತ್ತು ಮೋಡ ಬೇರೆ ಆವರಿಸಿತ್ತು.
ಅಮ್ಮನಿಗೆ ನನ್ನ ಮೊಬೈಲ್ ನಂಬರ್‍ ಅಂತೂ ನೆನಪಿಲ್ಲ, ಏನ್ ಮಾಡೋದು ಎಂದೆಲ್ಲಾ ಚಿಂತಿಸುತ್ತಿದ್ದೆ. ಪಕ್ಕದ ಮನೆಯ ಹುಡುಗ ತೇಜಸ್ವಿಗೆ ಫೋನ್ ಮಾಡಿ ಎಲ್ಲಾದರೂ ಅಮ್ಮ ಸ್ವತ: ಬಸ್ಸೇರಿ ಬಂದರೇ ಎಂದು ವಿಚಾರಿಸಿದರೆ ಬಂದಿಲ್ಲ ಎಂಬ ಉತ್ತರ.
ಈಗ ನಿಜಕ್ಕೂ ನನ್ನ ಬೆವರಿಳಿಯಲು ಶುರುವಾಯ್ತು. ಗೊಂದಲದಲ್ಲಿ ಅಮ್ಮನ ಬೆದರುಕಂಗಳು ನನ್ನ ಕಣ್ಣಮುಂದೆ. ಮತ್ತೆ ಸರ್ವಿಸ್ ಬಸ್ ನಿಲ್ದಾಣಕ್ಕೆ ಬಂದೆ, ಅಲ್ಲೂ ಅಮ್ಮನಿಲ್ಲ.
ಪೊಲೀಸರಿಗೆ ದೂರು ಕೊಡೋದೇ, ಗೆಳೆಯರನ್ನು ಕರೆಯುವುದೇ, ಏನ್‌ ಮಾಡೋದು? ತಲೆ ಗೋಜಲು ಗೋಜಲು.
ದಾರಿ ಕಾಣದವರನ್ನು ಮತ್ತಷ್ಟು ದಾರಿ ತಪ್ಪಿಸಿ ಕೀಳುವವರು ನೆನಪಾದರು...ದಾರಿ ತಪ್ಪಿ ಯಾವ್ಯಾವದೋ ಬಸ್ ಏರಿ ಕಂಗಾಲಾದವರು ಸ್ಮರಣೆಗೆ ಬಂದರು...ಅವರಂತೆಯೇ ಅಮ್ಮನೂ ಹೋದದ್ದಿರಬಹುದೇ?
ಅನ್ಯಮನಸ್ಕನಾಗಿ ಬಸ್‌ ನಿಲ್ದಾಣದ ತುಕ್ಕು ಹಿಡಿದ ಕಂಬಕ್ಕೊರಗಿ ನಿಂತಿದ್ದೆ ಮೊಬೈಲ್ ಕೂಗಿತು. ಪಕ್ಕದ ಮನೆ ತೇಜಸ್ವಿಯ ಸ್ವರ...‘ಅಮ್ಮ ಬಂದಿದ್ದಾರೆ, ಈಗಷ್ಟೇ ಮಾತಾಡಿ ಬಂದೆ’.
ಥ್ಯಾಂಕ್ಸ್ ಹೇಳಿ, ಮನೆಗೆ ಫೋನಾಯಿಸಿದೆ, ಅಮ್ಮ ರಿಸೀವ್ ಮಾಡಿದಳು. ‘ನಾನು ಬಂದು ನಿನ್ನ ಹುಡುಕಿದೆ, ನೀ ಕಾಣ್ಲಿಲ್ಲ...ಸುರತ್ಕಲ್‌ ಬಸ್ ಗೊತ್ತಾತು, ಹಾಗೆ ಬಂದು ಬಿಟ್ಟೆ..’
ಏನು ಉತ್ತರಿಸುವುದು ಗೊತ್ತಾಗಲಿಲ್ಲ...ಹಾಗೇ ಫೋನಿಟ್ಟು ಆಫೀಸಿಗೆ ಗಾಡಿ ಓಡಿಸಿದೆ.

8 comments:

ಬಾನಾಡಿ said...

ನಿನ್ನಮ್ಮನ ಪಜೀತಿಯನ್ನು ಓದಿ ನನ್ನೆದೆಯೂ ಡವ ಡವ ಅನಿಸಿತು ಮಾರಾಯ...
ಕೊನೆಗೆ ಅವರು ಯಾವ ಬಸ್ಸಿಂದ ಬಂದಿದ್ದರು?
ಒಲವಿನಿಂದ
ಬಾನಾಡಿ

sunaath said...

ಹೌದು,ಹುಡುಕುತ್ತ ಹೋದಾಗ,ನಾವೇ ದಾರಿ ತಪ್ಪಿಸಿ ಫಜೀತಿ
ಆಗೋದುಂಟು, ಮಾರಾಯ!

ರಾಜೇಶ್ ನಾಯ್ಕ said...

ಓದುತ್ತಾ ಹೋದಂತೆ ಆತಂಕ ಹೆಚ್ಚಾಗುತ್ತಾ ಹೋಯಿತು. ಅಮ್ಮ ಮನೆ ತಲುಪಿದ ಫೋನ್ ಬಂದ ಸಾಲು ಓದಿದಂತೆ ಅಬ್ಬಾ ಎನಿಸಿತು. ಏನು ಮಾಡುವುದೆಂದು ತೋಚದ ನಿಮ್ಮ ಆ ಪರಿಸ್ಥಿತಿ ನೆನಪು ಮಾಡಿಕೊಂಡರೆ ಏನೋ ಆಗುತ್ತೆ. ಕಂಕನಾಡಿ ಕಡೆ ಯಾವ ಸ್ಪೀಡ್-ನಲ್ಲಿ ಓಡಿಸಿರಬೇಕು ಬೈಕನ್ನು??

VENU VINOD said...

ಬಾನಾಡಿ,
ಸುರತ್ಕಲ್‌ಗೆ ಹೋಗುವ ಬಸ್‌ ನೋಡಿ ಅವರೇ ಕೇಳಿಕೊಂಡು ಹೋಗಿದ್ರು. ಪ್ರತಿಕ್ರಿಯೆಗೆ ವಂದನೆ.

ಸುನಾಥರೇ,
ಫಜೀತಿಯೇನು, ಒಂದು ಗಂಟೆ ನಾನು ಅರ್ಧ ಆಗಿ ಹೋಗಿದ್ದೆ, ಅಮ್ಮ ನೋಡಿದ್ರೆ ಕೂಲ್ :)

ರಾಜೇಶ್,
ಹಹಹ ನಿಮ್ಮ ಊಹೆ ಸರಿಯಾದದ್ದೇ, ನನ್ನ ಅವರೇಜ್ ಸ್ಪೀಡಂತೂ ಅಲ್ಲ....

Harish - ಹರೀಶ said...

ಸ್ವಲ್ಪ ತಡವಾದರೂ ಆಕಾಶ ಕಳಚಿ ಬೀಳುವವರಂತೆ ಆಡುವವರೂ ಇರುತ್ತಾರೆ... ಅಂಥವರಿಗೆನಾದರೂ ಹೀಗಾಗಿದ್ದಿದ್ದರೆ ಬಹುಶಃ ಅವರನ್ನು ಆಸ್ಪತ್ರೆಗೆ ಸೇರಿಸುವುದೇ ಇರುವ ದಾರಿಯಾಗಿರುತ್ತಿತ್ತೇನೋ. ನಿಮಗೆ ಹಾಗೇನೂ ಆಗಲಿಲ್ಲವಲ್ಲ. ಅಷ್ಟೆ ಸಾಕು :) ಇಂಥ ಪರಿಸ್ಥಿತಿಯಲ್ಲಿ ಧೈರ್ಯ, ವಿವೇಕ, ಸಮಯ ಪ್ರಜ್ಞೆ ಇಟ್ಟುಕೊಂಡರೆ ಒಳಿತು :)

ಜೋಮನ್ said...

ಎಷ್ಟು ಭಾವ ತುಂಬಿ ಬರೆದಿದ್ದೀರಿ ವಿನೋದ್. ಕೊನೆಗೂ ಅಮ್ಮ ಸುರಕ್ಷಿತವಾಗಿ ಮನೆ ತಲುಪಿದರಲ್ಲ. ಓದಿ ತುಂಬಾ ಖುಷಿಯಾಯಿತು. ಅಮ್ಮ ಸುಖವಾಗಿರಲಿ.


ಧನ್ಯವಾದಗಳು.

ಜೋಮನ್

ಸುಪ್ತದೀಪ್ತಿ suptadeepti said...

ಇಂಥ ಆತಂಕದ ಕ್ಷಣಗಳಲ್ಲಿ ತಲೆ ಚಿಟ್ಟು ಹಿಡಿದಂತೆ ಆಗುವುದು, ಎದೆ ಹುಚ್ಚಾಬಟ್ಟೆ ಎಗರಾಡುವುದೂ ಸಹಜ. ಅದೆಷ್ಟನೆಯ ಬಾರಿಗೂ ಮಂಗಳೂರಲ್ಲಿ ಇಳಿದ ಅಮ್ಮನಿಗೆ ಕೊನೆಗೂ ಸುರತ್ಕಲ್ಲಿನ ಬಸ್ ಗುರುತು ಹತ್ತಿದೆ. ಮನೆಯ ದಾರಿ ಗೊತ್ತಾಗಿದೆ. ಅವರ "ಕೂಲ್" ಮತ್ತು ನಿನ್ನ ತೊಳಲಾಟ ಎರಡೂ ಅರ್ಥ ಆಗತ್ತೆ. ಬೈಕ್ ಮೇಲೆ ಜೋಪಾನ.

Srik said...

ಅಬ್ಬಾ! ಒಂದು ಕ್ಷಣ ಎದೆಯ ಬಡಿತ ನಿಂತಂತಹ ಅನುಭವ. ನಿಮ್ಮ ಮನದ ಕಳವಳವನ್ನು ಬಹಳ ನೈಜವಾಗಿ ವಿವರಿಸಿದ್ದೀರಿ. ನನಗೂ ಒಮ್ಮೆ ಈ ರೀತಿಯ ಅನುಭವವಾಗಿತ್ತು. ಅದನ್ನು ನೆನೆಪಿಸಿತು ಈ ಲೇಖನ.

Related Posts Plugin for WordPress, Blogger...