ಯಾವುದೇ ಗೌಜಿ ಗದ್ದಲಗಳಿಲ್ಲ, ಗೆದ್ದ ಹುರುಪಿನ ಅತಿಯಾದ ಪ್ರದರ್ಶನವಾಗಲೀ ಸಹೋದ್ಯೋಗಿಯನ್ನು ಕಳೆದುಕೊಂಡ ದುಃಖದಲ್ಲಿ ಕಳೆದುಹೋಗುವುದಾಗಲೀ ಇಲ್ಲ..ಕೆಲಸ ಮುಗಿದಾಕ್ಷಣ ಮರುಮಾತಿಲ್ಲದೆ ತಮ್ಮ ನೆಲೆಗೆ ಮರಳಿಬಿಡುತ್ತಾರೆ....
ಅವರು ಭಾರತೀಯ ಕಮ್ಯಾಂಡೋಗಳು....
.jpg)
ಮುಂಬೈಗೆ ಬಡಿದ ಭಯೋತ್ಪಾದನೆ ಕರಿನೆರಳು ತೊಲಗಿಸಲು ಬಂದಿಳಿದ ಈ ಕಪ್ಪುಸಮವಸ್ತ್ರಧಾರಿಗಳನ್ನು ಭಾರತೀಯರು ಎಂದಿಗೂ ಮರೆಯಲಾರರು. ಮುಖ ಯಾವಾಗಲೂ ಮುಚ್ಚಿಕೊಂಡು ತಮ್ಮ ಪತ್ನಿಯರಿಗೂ ತಾವು ಕಮ್ಯಾಂಡೊ ಎಂಬ ಗುಟ್ಟು ಬಿಡದ ಭಾರತೀಯ ನೌಕಾಸೇನೆಯ ಮೆರೈನ್ ಕಮ್ಯಾಂಡೊ(ಮಾರ್ಕೊಸ್) ಮತ್ತು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ಸ್(ಎನ್‌ಎಸ್‌ಜಿ) ಈ ಎರಡು ಪ್ರತ್ಯೇಕ ಕಮ್ಯಾಂಡೊ ಘಟಕಗಳು ಮುಂಬೈನಲ್ಲಿ ಉಗ್ರರ ಸದೆಬಡಿದಿದ್ದವು.
೯ ಮಂದಿ ಮಂದಿ ಉಗ್ರರನ್ನು ಕೊಲ್ಲಲು, ಒಬ್ಬನನ್ನು ಸೆರೆಹಿಡಿಯಲು ಕಮ್ಯಾಂಡೊಗಳಿಗೂ ೩೬ ಗಂಟೆ ಬೇಕಾಯ್ತೇ, ಅವರ ಕಾರ್ಯಾಚರಣೆ ಸರಿಇಲ್ಲ ಎಂದೆಲ್ಲ ಈಗ ಅಪಸ್ವರಗಳು ಕೇಳಿಬರುತ್ತಿವೆ. ಆದರೆ ಎಂದಿಗೂ ತಮ್ಮ ಜೀವ ನೆಚ್ಚಿಕೊಂಡು ಕುಳಿತುಕೊಳ್ಳದೆ ವಿಶ್ರಾಂತಿಯಿಲ್ಲದೆ ಅವಿರತ ನಿರಂತರ ಕಾರ್ಯಾಚರಣೆ ನಡೆಸಿದ್ದನ್ನು ನಾವು ಮರೆಯುವುದು ಹೇಗೆ?
.jpg)
ಹಾಗೆ ನೋಡಿದರೆ ಭಾರತೀಯ ಕಮ್ಯಾಂಡೊಗಳಿಗೆ ವಿಶ್ವದಲ್ಲೇ ನಾಲ್ಕನೇ ಸ್ಥಾನ. ನೆನಪಿಡಿ ನಮಗಿಂತ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ರಾಷ್ಟ್ರಗಳು ಈ ವಿಚಾರದಲ್ಲಿ ಹಿಂದಿವೆ. ಬೆಲ್ಜಿಯಂ, ಅಮೆರಿಕಾ, ಇಸ್ರೇಲ್ ನಮಗಿಂತ ಮೇಲಿನ ಸ್ಥಾನಗಳಲ್ಲಿವೆ.
ಮೊನ್ನೆ ಉಗ್ರರ ಹುಟ್ಟಡಗಿಸಿ ಬಂದು ತಣ್ಣಗೆ ಮುಗುಳ್ನಗೆ ಬೀರುತ್ತಾ ತಮ್ಮ ಬಸ್ಸೇರಿ ಕುಳಿತಿದ್ದ ಎನ್‌ಎಸ್‌ಜಿ ಕಮ್ಯಾಂಡೊ ಒಬ್ಬರನ್ನು ಟೈಂಸ್ ನೌ ಚಾನೆಲ್ ಪ್ರತಿನಿಧಿ ಸಂದರ್ಶಿಸಿದ..ಇಂತಹ ಕಠಿಣ ಪರಿಸ್ಥಿತಿಯಲ್ಲು ಅದು ಹೇಗೆ ಈ ರೀತಿ ನಗುತ್ತೀರಿ?
ಯೋಧನ ಉತ್ತರವೂ ಸರಳವಾಗಿತ್ತು..ಸದಾ ನಗುತ್ತಲೇ ಇರಬೇಕು, ನಗುವೇ ನಮ್ಮ ಬಲ!
ಇನ್ನೊಬ್ಬ ಕಮ್ಯಾಂಡೊ ಹೇಳಿದ್ದು-ನಾವೆಲ್ಲ ಸಾವಿಗೆ ಸದಾ ಸಿದ್ಧರಾದವರು, ನಿಮ್ಮೆಲ್ಲರ ರಕ್ಷಣೆಗಾಗಿಯೇ ನಾವಿರೋದು, ಹೆದರಬೇಡಿ!
ಈ ತ್ಯಾಗ, ಬಲಿದಾನದ ಮನೋಭಾವದಿಂದಲೇ ತಾನೇ ಭಾರತೀಯ ಸೇನಾಪಡೆ ಯಶಸ್ವಿಯಾಗಿರುವುದು. ಅಂತಹ ಸೇನಾಪಡೆಯಲ್ಲಿನ ಮುತ್ತು ರತ್ನ ವಪ್ರ ವೈಢೂರ್ಯಗಳನ್ನೇ ಆರಿಸಿ ಕಠಿಣ ಪರಿಸ್ಥಿತಿಯಲ್ಲಿ ತರಬೇತಿ ನೀಡಿದಾಗ ಹೊರಹೊಮ್ಮುವವರೇ ಎನ್ಎಸ್‌ಜಿ ಕಮ್ಯಾಂಡೊಗಳು. ಇವರಿಗೆ ಇಸ್ರೇಲ್ ದೇಶದಲ್ಲೂ ತರಬೇತಿ ನೀಡಲಾಗುತ್ತದೆ.
೧೯೮೮ರಲ್ಲಿ ಅಮೃತಸರದ ಆಪರೇಶನ್ ಬ್ಲಾಕ್ ಥಂಡರ್-೨, ೧೯೮೮ರಲ್ಲಿ ಜಮ್ಮುಕಾಶ್ಮೀರದಲ್ಲಿ ಉಗ್ರರನ್ನು ಬಗ್ಗುಬಡಿಯುವಲ್ಲಿ, ಅಪಹೃತ ಬೋಯಿಂಗ್೭೩೭ ವಿಮಾನ ಬಿಡುಗಡೆ ಹೀಗೆ ಇವರ ಸಾಧನೆಗಳ ಪಟ್ಟಿ ಬೆಳೆದಿದೆ.
ಇನ್ನು ನೌಕಾಪಡೆಯ ಮಾರ್ಕೊಸ್‌ಗಳ ಸಾಧನೆಯೂ ಅಪರೂಪದ್ದು. ಎಲ್‌ಟಿಟಿಇಗಳ ಜತೆ ಕದನದಲ್ಲಿ ೧೯೮೭ರಲ್ಲಿ ಕೇವಲ ೧೮ ಮಂದಿ ಕಮ್ಯಾಂಡೊಗಳು ಎಲ್‌ಟಿಟಿಇಗಳ ಕೈನಿಂದ ಟ್ರಂಕೋಮಲಿ, ಜಾಫ್ನ ಬಂದರು ಬಿಡುಗಡೆ ಮಾಡುವಲ್ಲಿ ಶ್ರೀಲಂಕಕ್ಕೆ ನೆರವಾದರು.
ವಿಶೇಷ ಸಂದರ್ಭಗಳಲ್ಲಿ ಎನ್‌ಎಸ್‌ಜಿ, ಮಾರ್ಕೊಸ್ ಮತ್ತು ಜಮ್ಮು-ಕಾಶ್ಮೀರ ಉಗ್ರರ ವಿರುದ್ಧ ಸೆಣಸುವ ರಾಷ್ಟ್ರೀಯ ರೈಫಲ್ಸ್‌ನ ಆಯ್ದ ಕಮ್ಯಾಂಡೊಗಳನ್ನು ಸೇರಿಸಿ ಪ್ಯಾರಾಕಮ್ಯಾಂಡೊ ತಂಡವನ್ನೂ ನಿಯೋಜಿಸಲಾಗುತ್ತದೆ.
ಭಾರತವಾಸಿಗಳ ಪ್ರಾಣ, ಮಾನ, ಭಾರತದ ಮಣ್ಣಿನ ರಕ್ಷಣೆಗೆ ಸದಾ ಕಂಕಣ ಬದ್ಧರಾದ ಈ ಹೆಸರಿಲ್ಲದ ಕಪ್ಪುವಸ್ತ್ರಧಾರಿಗಳ ಹೆಸರು ತಿಳಿಯುವುದು ವೀರಮರಣವನ್ನಪ್ಪಿದಾಗಲೇ!
ನಮ್ಮೆಲ್ಲರ ಸಲ್ಯೂಟ್ ಜತೆಗೆ ಆತ್ಮೀಯ ಶುಭಹಾರೈಕೆ ಎಂದಿಗೂ ಅವರ ಜತೆ ಇರಲಿ...

ಕೊನೆಮಾತು: ಇಸ್ರೇಲ್ ಮಾದರಿಯಲ್ಲಿ ಶಾಲೆಯಿಂದಲೇ ಎಲ್ಲರಿಗೂ ಪ್ರಾಥಮಿಕ ಸೈನಿಕ ತರಬೇತಿ ನೀಡಿದರೆ ನಮ್ಮೆಲ್ಲರಲ್ಲೂ ಸೈನಿಕಗುಣ ಸ್ವಲ್ಪವಾದರೂ ಇರಲಾರದೇ? ಅಂತಹ ಸಂದರ್ಭಗಳಲ್ಲಿ ಮೊನ್ನೆ ಮುಂಬೈನಲ್ಲಿ ನುಗ್ಗಿದಂತೆ ಹೊರದೇಶದ ಕ್ರಿಮಿಗಳಾಗಲೀ ನಮ್ಮೊಳಗೇ ಇರುವ ಹೆಗ್ಗಣಳಾಗಲೀ ನಮ್ಮನ್ನು ಕಾಡುವುದು ಸ್ವಲ್ಪವಾದರೂ ಕಷ್ಟವಾಗದೇ?
ಎಟಿಎಸ್‌ನ ಹೇಮಂತ್ ಕರ್ಕರೆ, ವಿಜಯ್ ಸಾಲಸ್ಕರ್, ಅಶೋಕ್ ಕಾಮ್ಟೆ, ಮತ್ತು ಮೇಜರ್ ಸಂದೀಪ್ ಉಣ್ಣಿಕೃಷ್ಣನ್‌ಗೆ ಶ್ರದ್ಧಾಂಜಲಿ
ಜೈಹಿಂದ್