ಅಶ್ವತ್ಥರ ಬಗ್ಗೆ ತಿಳಿಯುವುದಕ್ಕೆ ಮೊದಲು ನಾನು ಮೆಚ್ಚಿದ್ದು ಅವರ ಸ್ವರಸಂಯೋಜನೆಯ, ಅವರದ್ದೇ ಗಾನವೈಶಿಷ್ಟ್ಯದ ಸಂತ ಶಿಶುನಾಳ ಶರೀಫರ ರಚನೆಗಳನ್ನು...
ನಾನು ಬಹುಷಃ ೫-೬ನೇ ತರಗತಿಯಲ್ಲಿದ್ದಿರಬಹುದು, ಆಗಲೇ ನನ್ನ ದೊಡ್ಡಪ್ಪ, ಚಿಕ್ಕಪ್ಪಂದಿರ ಮನೆಯ ಪ್ಯಾನಾಸಾನಿಕ್ ಟೇಪ್ ರೆಕಾರ್ಡರ‍್ಗಳಲ್ಲಿ ಸೋರುತಿಹುದು ಮನೆಯ ಮಾಳಿಗಿ, ತೇರನೆಳೆಯುತಾರೆ ತಂಗಿ, ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೊ, ಬರಿದೆ ಬಾರಿಸದಿರು ತಂಬೂರಿ, ಅಳಬೇಡ ತಂಗಿ ಅಳಬೇಡ, ಚೋಳ ಕಡಿತ ನನಗೊಂದು ಚೋಳ ಕಡಿತ ಪದ್ಯಗಳು ಕೇಳಿಬರುತ್ತಿದ್ದವು..ರೇಡಿಯೋ ಕೇಳಿ ಮಾತ್ರವೇ ಗೊತ್ತಿದ್ದ ನನಗೆ ಆ ಟೇಪ್ ರೆಕಾರ್ಡರ್‌ನಷ್ಟೇ ಕೌತುಕ ಹುಟ್ಟಿಸಿದ್ದು ಆ ಒತ್ತೊತ್ತಿ ಹೇಳುವ ಗಾಯನ ಶೈಲಿ..ಅದು ಅಶ್ವತ್ಥರೆಂದು ಬುದ್ಧಿ ಬೆಳೆದ ಬಳಿಕ ಗೊತ್ತಾಯ್ತು. ಆಗ ಅವರ ಬಗ್ಗೆ ಹುಟ್ಟಿದ ಗೌರವ ಇಂದಿಗೂ ಇದೆ. ಎಂದೆಂದಿಗೂ....
ಮಂಗಳೂರಿನಲ್ಲಿ ೨೦೦೬ರ ಮೇ ೧ರಂದು ಸಂಜೆ ತಮ್ಮ ಧ್ವನಿ ತಂಡದೊಂದಿಗೆ ಅಶ್ವತ್ಥರ ಮೋಹಪರವಶಗೊಳಿಸುವ ರಸಮಂಜರಿಯನ್ನು ಹತ್ತಿರದಿಂದಲೇ ನೋಡುವ ಅವಕಾಶವೂ ನನ್ನ ಅವಕಾಶ. ಅಶ್ವತ್ಥರ ಹಾಡಿನಲ್ಲಿ ಇರುವ ಮೋಡಿ ನೋಡಿದ್ದ ನನಗೆ, ಅವರಿಗೆ ಬರುವ ಸಿಟ್ಟಿನ ಪರಿಚಯವೂ ಆಗಿದ್ದಿಲ್ಲೇ.
ಆಗ ಮೈಕ್‌ಸೆಟ್‌ನಲ್ಲಿ ಏನೋ ತೊಂದರೆ ಉಂಟಾಗಿತ್ತು...ಪದೇ ಪದೇ ಹೇಳಿದರೂ ಕೇಳದಾಗ ಸಿಟ್ಟಿಗೆದ್ದ ಅಶ್ವತ್ಥ ಮೈಕ್‌ನವರ ಜನ್ಮಜಾಲಾಡಿಸಿ ಬಿಟ್ಟಿದ್ದರು...ಬಳಿಕ ಒಂದೆರಡು ಹಾಡು ಹಾಡುವಾಗ ಮಗುಮ್ಮಾಗೇ ಇದ್ದರೂ ಕೊನೆಯಲ್ಲಿ ಮನಸಾರೆ ಆನಂದಿಸುತ್ತಾ ಹಾಡಿದ್ದರು...ನನಗೆ ಪ್ರಿಯವಾಗಿದ್ದ ಹಾಡುಗಳನ್ನು ಲೈವ್ ಆಗೇ ಕೇಳಿ ಖುಷಿ ಪಟ್ಟಿದ್ದೆ....ಈಗ ಕಂಪ್ಯೂಟರ‍್ನಲ್ಲಿ ಎಂಪಿ೩ ರೂಪದಲ್ಲಿ ಕೂತಿರುವ ಅಶ್ವತ್ಥರನ್ನಷ್ಟೇ ಕೇಳಬೇಕಿದೆ...
ಇನ್ನು ವಿಷ್ಣುವರ್ಧನರ ಬಗ್ಗೆ ಕೆಲವೇ ವಾಕ್ಯ...
ನನಗೆ ಚಿಕ್ಕಂದಿನಿಂದಲೇ ವಿಷ್ಣುವರ್ಧನ, ಪ್ರಭಾಕರ‍್ ಇಬ್ಬರೂ ಇಷ್ಟ..ಅವರ ಹೆಸರಿನ ಹಿಂದಿರುವ ಸಾಹಸಸಿಂಹ, ಟೈಗರ‍್ ಎಂಬ ಪೂರ್ವನಾಮೆಗಳು ಒಂದು ಕಾರಣವಾದರೆ ಸೊಗಸಾಗಿ ಫೈಟ್ ಮಾಡುವ ಅವರ ಶೈಲಿ ಕೂಡಾ ಅಷ್ಟೇ ಇಷ್ಟ.
ಸಿನಿಮಾಗಳನ್ನು ನೋಡುವ ಅವಕಾಶ ನಾನಿದ್ದ ಹಳ್ಳಿಯಲ್ಲಿ ಕಡಮೆ...ಹಾಗಾಗಿ ನಾನು ಚಿಕ್ಕಂದಿನಲ್ಲಿ ನೋಡುತ್ತಿದ್ದುದು ಶುಕ್ರವಾರದ ಉದಯವಾಣಿಯನ್ನು. ಅದರಲ್ಲಿ ನನ್ನ ಮೆಚ್ಚಿನ ನಟರು ನಟಿಸಿದ ಲೇಟೆಸ್ಟ್ ಚಿತ್ರಗಳು, ಅದರಲ್ಲಿ ಅವರ ಸಾಹಸದ ಫೊಟೊಗಳಿರುತ್ತಿದ್ದವು. ಇನ್ನೂ ಖುಷಿಕೊಡುತ್ತಿದ್ದುದು ಎಂದರೆ, ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದ ದೇವಣ್ಣ ಎಂಬವನು ವಿಷ್ಣು ಕಟ್ಟಾ ಅಭಿಮಾನಿ..ಹಾಗಾಗಿ ಆತ ಕೆಲಸ ಮಾಡುವಾಗ ನಾನೂ ಹೋಗಿ ನಿಂತು ವಿಷ್ಣು ವರ್ಧನ್ ಚಿತ್ರ ನೋಡಿದ್ಯಾ ದೇವಣ್ಣ ಎಂದು ಕೇಳುತ್ತಿದ್ದೆ...ಆತ ಹೂಂ ಎಂದರೆ ನನಗೆ ಹಬ್ಬ...
ಯಾಕೆಂದರೆ ಆತ ಆ ಚಿತ್ರದ ಕಥೆ ನನಗೆ ಹೇಳುತ್ತಿದ್ದ...ನನಗೆ ಕೇಳುವಷ್ಟೇ ಇಷ್ಟ ಅವನಿಗೆ ಹೇಳಲೂ ಇತ್ತು!
ದೊಡ್ಡವನಾದ ಬಳಿಕ ಅನೇಕ ಸಿನಿಮಾ ನೋಡಿದ್ದೇನೆ, ಬಂಧನ, ಡಿಸೆಂಬರ‍್ ೩೧, ಆಸೆಯಬಲೆ, ಸಾಹಸಸಿಂಹ, ನಿಷ್ಕರ್ಷ..ಹೀಗೆ ಪಟ್ಟಿ ಬೆಳೆಯುತ್ತದೆ..
ಗಾನಗಂಧರ್ವ ಅಶ್ವತ್ಥರಿಗೆ, ಅವರ ಆ ಮಟ್ಟದ ಸ್ವರಕ್ಕೆ, ವಿಷ್ಣುವಿಗೆ ನನ್ನ ಮತ್ತು ದೇವಣ್ಣುವಿನ ಪರವಾಗಿ ಒಂದು ಪ್ರಣಾಮ.....