ಘಟನೆ 1: ಮಿತ್ರರೊಬ್ಬರಿಗೆ ಕಾಣಿಕೆ ಕೊಡುವುದಿತ್ತು. ಮಂಗಳೂರಿನ ಹೃದಯ ಭಾಗದ ಮಾಲ್ ವೊಂದಕ್ಕೆ ಹೋದೆ. ಜೀವನ ಶೈಲಿಯ ಸ್ಟೋರ್ ನಲ್ಲಿ ಸುತ್ತಾಡಿದೆ ನನ್ನ ಸಾದಾ ಡ್ರೆಸ್ ಗಮನಿಸಿಯೋ ಏನೋ ಯಾರೂ ನನ್ನಲ್ಲಿ ಏನೂ ಕೇಳಲಿಲ್ಲ. ಬಳಿಕ ಗಿಫ್ಟ್ ಖರೀದಿಸಿದೆ, ತೆರಿಗೆ ಸಹಿತ ಬಂದ ಬಿಲ್ ಪಾವತಿಸಿ ಹೊರಬಂದೆ.
ಘಟನೆ 2: ಮಗುವಿಗೆ ಆಟಿಕೆ ತರುವುದಕ್ಕಾಗಿ ಹಳೆಯ ಆಟಿಕೆ ಅಂಗಡಿಗೆ ನನ್ನ ಪತ್ನಿ ಹೋಗಿದ್ದಳು. ಇನ್ನೂ ಒಂದು ವರ್ಷದ ತುಂಬದ ಮಗನಿಗೆ ಆಟಿಕೆ ಕೇಳಿದಾಗ ಮಾಲೀಕನೇ ಹೇಳಿದನಂತೆ, ಈಗಲೇ ಕಾರಿನಂತಹ ಆಟಿಕೆ ಕೊಂಡು ಹೋಗಿ ಹಾಳು ಮಾಡಬೇಡಿ, ತುಸು ದೊಡ್ಡವನಾಗಲಿ, ಆ ಮೇಲೆ ಬನ್ನಿ....!
ಕಿಸೆಯಲ್ಲಿ ಕಾಸಿದ್ದರೆ ಮರ್ಕಟ ಮನವನ್ನು ಮರುಳು ಮಾಡಬಲ್ಲ ಇಂದಿನ ಮಾಲ್ ಗಳಲ್ಲಿ ನಿಮ್ಮನ್ನು ಯಾರೂ ಗಮನಿಸುವುದಿಲ್ಲ, ಸಿಸಿಟಿವಿ ಕ್ಯಾಮೆರಾ ಹೊರತಾಗಿ. ನಿಮ್ಮ ಬೇಕು ಬೇಡಗಳಿಗೆಲ್ಲ ನೀವೇ ಅಲ್ಲಿ ಅಧಿಪತಿ. ಹಾಗಾಗಿ ನಮ್ಮ ಆಸೆಗಳಿಗೆ ಕಡಿವಾಣವಿಲ್ಲ.
ಯಾವುದೇ ವ್ಯಾಪಾರಿ ನಿಮ್ಮ ಉದ್ಧಾರಕ್ಕಾಗಿ ಅಂಗಡಿ ಹಾಕಿಲ್ಲ ಅನ್ನೋದು ನಿಜ, ಆದರೆ ವ್ಯಾಪಾರದಲ್ಲೂ ಅಲಿಖಿತ ನೈತಿಕ ತಳಹದಿಯೊಂದರಲ್ಲಿ ಕಾರ್ಯನಿರ್ವಹಿಸುವುದಿದ್ದರೆ ಹಳೆ ತಲೆಮಾರಿನ ಅಂಗಡಿಗಳೇ ಹೊರತು ನಮ್ಮಲ್ಲಿ ಬಣ್ಣಬಣ್ಣದ ಕನಸಿನ ಬೀಜ ಬಿತ್ತುವ ಮಾಲ್ ಗಳಲ್ಲ ಎನ್ನುವುದು ನನ್ನ ಅನಿಸಿಕೆ.
ಬೇಕಾದರೆ ನಿಮ್ಮ ಊರಿನ ಹಳೆಯ ಅಂಗಡಿಗಳಿಗೆ ಹೋಗಿ ಕೆಲವು ವ್ಯಾಪಾರಿಗಳು ನಿಮ್ಮ ಮನೆ ವಿಚಾರ, ಮಗನ ವಿದ್ಯಾಭ್ಯಾಸ ಏನಾಯ್ತು, ನಿಮ್ಮ ಉದ್ಯೋಗದ ಬಗ್ಗೆ ವಿಚಾರಿಸುತ್ತಾರೆ, ಯಂತ್ರಮಾನವರಂತೆ ಕೇವಲ ನಿಮ್ಮ ಸರಕಿನ ಬಿಲ್ ಮಾಡಿ ಹಣ ಪಡೆದು ಚಿಲ್ಲರೆ ಕೊಡುವುದಷ್ಟೇ ಅವರ ಕಾಯಕವಲ್ಲ.
ಇಂತಹ ಅಂಗಡಿಯವರಿಗೆ ಇಡೀ ಊರಿನ ಪ್ರಮುಖರ ಕಾರುಭಾರು, ವಹಿವಾಟು, ಊರಿನ ಮೂಲೆಯಲ್ಲಿ ನಡೆದ ಮರಣ, ಹಿಂದಿನ ಓಣಿಯ ಮನೆಯಲ್ಲಿ ನಡೆದ ಕಳವು...ಹೀಗೆ ಎಲ್ಲ ಸಮಾಚಾರಗಳೂ ತಿಳಿದಿರುತ್ತವೆ. ಮಾಹಿತಿಯ ವಿನಿಮಯ ಕೂಡಾ ವ್ಯಾಪಾರದ ಜತೆ ಜತೆಗೇ ನಡೆಯುತ್ತದೆ. ವ್ಯಾಪಾರದೊಂದಿಗೆ ಜೀವಂತಿಕೆ ಇರುತ್ತದೆ.
ಎಸಿ ಮಾಲ್ ಗಳಲ್ಲಿ ತಣ್ಣನೆ ಹೋಗಿ ಕಿಸೆಗೆ ಕತ್ತರಿ ಹಾಕಿಕೊಂಡು ಬಂದರೆ ಎಲ್ಲೋ ಪರದೇಶಕ್ಕೆ ಹೋದಂತಾಗುತ್ತದೆ. ಅಲ್ಲಿರುವವರ ಪರಿಚಯವೂ ಇಲ್ಲ, ನಿಮ್ಮ ಸಂಶಯ ಬಗೆ ಹರಿಸುವುದಕ್ಕೂ ಸರಿಯಾದವರಿಲ್ಲ. ಇಷ್ಟರ ಹೊರತಾಗಿಯೂ ಹೀಗೆ ಮಾಲಿನಲ್ಲಿ ಮಂಗನಂತೆ ತಿರುಗಿದವರಲ್ಲಿ ನಾನೂ ಒಬ್ಬ.....
ಚಿತ್ರ: www.wallpaper777.com
4 comments:
ನೀವು ಹೇಳೋದು ಖರೇ ಅದ. ಹಳೆಯ ಅಂಗಡಿಗಳ ಮಾಲಿಕರು ನಮ್ಮ ಗೆಳೆಯರಂತೇ ವರ್ತಿಸುವದನ್ನು ನಾನು ನೋಡಿದ್ದೇನೆ.
ಈ ಮನುಷ್ಯ ಸಂಬಂಧಗಳಲ್ಲಿ ವ್ಯಾಪಾರವು ಹೆಚ್ಚು ದೃಢ ಸ್ತರದಲ್ಲಿ ಬೆಳೆಯುತ್ತದೆ ಇನ್ನೂ ಮುಖ್ಯವಾಗಿ ಗಿರಾಕಿಯಷ್ಟೇ (ಹಳೇ)ವ್ಯಾಪಾರಿಯೂ ಬೆಳೆಯುತ್ತಾನೆ :-)
definately. bengloornalli aden malls antha hogtharo, i still don't get it. and congrats venu, didn't know you had a kid.
"ಇಷ್ಟರ ಹೊರತಾಗಿಯೂ ಹೀಗೆ ಮಾಲಿನಲ್ಲಿ ಮಂಗನಂತೆ ತಿರುಗಿದವರಲ್ಲಿ ನಾನೂ ಒಬ್ಬ..." Haha... anna... nice...
Post a Comment