12.9.08

ಹೆದ್ದಾರಿ ಕಥಾನಕಗಳು

ಅಬ್ಬಾ ಇದು ಹೆದ್ದಾರಿಯೇ ಎಂಬ ಅನುಮಾನ ಬರುವಂತಹ ಕೆಟ್ಟ ರಸ್ತೆ ಅದು.
ಸಾಮಾನ್ಯವಾಗಿ ಇಡೀ ದಿನ ಬ್ಯುಸಿಯಾದ ರಸ್ತೆಗೆ ನಿದ್ರಿಸಲೂ ಬಿಡದಂತೆ ಅನಿಲ, ಅದಿರು ಟ್ಯಾಂಕರ್‍ಗಳು ಓಡುತ್ತವೆ.
ಆದರೆ ಇಂದು ಎಂದಿನಂತಿಲ್ಲ...
ಬಹಳ ದಿನದ ಬಳಿಕ ಮಳೆಯಾಗಿ ರಸ್ತೆಯೇ ತೊಯ್ದು ಹೋಗಿದೆ. ಅದಕ್ಕೋ ಏನೋ ರಾತ್ರಿ ಓಡಾಟದ ಲಾರಿ ಚಾಲಕರು ರಸ್ತೆ ಬದಿಯೇ ಲಾರಿ ನಿಲ್ಲಿಸಿ ನಿದ್ರೆಗೆ ಶರಣಾಗಿದ್ದಾರೆ.
ಆದರೆ ಆ ಜಂಕ್ಷನ್‌ನಲ್ಲಿ ಇನ್ನೂ ಮನುಷ್ಯ ಜೀವವೊಂದು ಕಾಣುತ್ತಿದೆ.
ಸರಿಯಾಗಿ ಉರಿಯದೆ ಮಿಣಕ್ ಮಿಣಕ್ ಅನ್ನುವ ಸೋಡಿಯಂ ವೇಪರ್‍ ಲೈಟಿನಡಿಯೇ ಸಣ್ಣ ಗೂಡಂಗಡಿಯಲ್ಲಿ ನೀರು ದೋಸೆ ಮಾರುವವನಾತ.
ಯಾವಾಗಲೂ ಸಾಲುಗಟ್ಟಿ ನಿಂದು ನೀರು ದೋಸೆ ತಿಂದು ಟೀ ಕುಡಿದು ಹೋಗುವವರು ಇಂದೇಕೋ ಕಾಣುತ್ತಿಲ್ಲ. ಹಾಗಾಗಿ ಆತನ ಮುಖದಲ್ಲೂ ನಿರಾಸೆ.
ದೋಸೆಯಾತ ನಿದ್ದೆಗೆ ಜಾರುವಷ್ಟರಲ್ಲಿ ಬೈಕ್ ಹಾರ್ನ್. ನೋಡಿದರೆ ಬೈಕ್ ಮೇಲೆ ಥೇಟ್ ರಸ್ತೆಯಂತೇ ತೊಯ್ದು ಹೋದ ಯುವಕ.
ನೋಡಿದರೆ ಕಾಲ್ ಸೆಂಟರಿನವನೋ, ರಾತ್ರಿ ಬೀಟ್ ಮುಗಿಸಿ ಬರುವ ಪತ್ರಕರ್ತನೋ ಇರಬಹುದು.
೨೦ ಪ್ಲೇಟ್ ಪಾರ್ಸೆಲ್ ಮಾಡು ರೂಂಮೇಟ್‌ಗಳೂ ಹಸಿದಿರಬಹುದು...ಎಂದ ಬೈಕ್ ಸವಾರ.
ಖುಷಿಯಾಯ್ತು ದೋಸೆಯಾತನಿಗೆ.
ಸ್ಯಾಂಪಲ್ ಒಂದು ಕೊಡು, ಎಂದು ಒಂದು ಪ್ಲೇಟ್ ನೀರು ದೋಸೆ ತಿಂದ ಬೈಕ್‌ನವನು.
ಗಿರಾಕಿಯಿಲ್ಲದೆ ಎರೆದ ದೋಸೆ, ಉಳಿದ ಹಿಟ್ಟು ಹಾಳಾಗಿ ಹೋಗುತ್ತಿತ್ತು, ಈ ಮಹಾಮನುಷ್ಯ ಬಂದು ೨೦ ಪ್ಯಾಕ್ ಮಾಡು ಎಂದದ್ದು ದೋಸೆಯಾತನಿಗೆ ಹೊಸ ಉತ್ಸಾಹ ಮೂಡಿಸಿತು.
೨೦ ಪ್ಲೇಟ್ ಪಾರ್ಸೆಲ್ ಕೊಟ್ಟ.
ಬೈಕ್‌ನಾತ ನೋಟೊಂದನ್ನು ಚಾಚಿದ.
ದೋಸೆ ನಿಜಕ್ಕೂ ಚೆನ್ನಾಗಿದೆ...ಹಾಗಾಗಿ ಚಿಲ್ಲರೆ ಬೇಡ ಎಂದ...
ಹಾಗಾದರೆ ಇನ್ನೆರಡು ಬಿಸಿ ದೋಸೆ ಇಕೋ ಎಂದು ಪ್ಯಾಕ್ ಮಾಡಿಕೊಟ್ಟ ದೋಸೆಯಾತ...
ಇಬ್ಬರೂ ನಕ್ಕರು...
ಯಾವುದೋ ಜನ್ಮದ ಬಂಧುಗಳಂತೆ...
ಮಿಣಗುಡುತ್ತಿದ್ದ ಸೋಡಿಯಂ ವೇಪರ್‍ ಈಗ ಪ್ರಕಾಶಮಾನವಾಗಿ ಉರಿಯಿತು.
ಬೈಕ್ ಮುಂದಕ್ಕೋಡಿತು...ಮಳೆ ಸುರಿಯುತ್ತಲೇ ಇತ್ತು....


***************

ಅದು ಎಕ್ಸ್‌ಪ್ರೆಸ್ ಹೈವೇ...
ರಾಷ್ಟ್ರವನ್ನು ವಿಶ್ವದಲ್ಲೇ ಪ್ರಖ್ಯಾತಗೊಳಿಸಲು ಪಣತೊಟ್ಟವರಿಗೆ ತೊಂದರೆಯಾಗಬಾರದು, ಅವರು ಬೇಗಬೇಗನೆ ತಮ್ಮ ಗಮ್ಯ ಸೇರಬೇಕು ಎಂದು ನಿರ್ಮಿಸಿದ ಆರು ಪಥಗಳ ಹೆದ್ದಾರಿ.
ಮಿಂಚಿನಂತೆ ಕಣ್ಣು ಕೋರೈಸುವ ಹೆಡ್‌ಲೈಟ್‌ಗಳೊಂದಿಗೆ ವಾಹನಗಳು ಹರಿದಾಡುತ್ತಿವೆ. ರಸ್ತೆಗೆ ಅಡ್ಡ ಬರುವ ನಾಯಿಗಳಿಗೆ ಯಾವ ವಾಹನವೂ ಅಲ್ಲಿ ಬ್ರೇಕ್ ಹಾಕದು, ಅಪರೂಪಕ್ಕೊಮ್ಮೆ ಓಡುವ ಟೂ ವೀಲರ್‍ ಹೊರತು ಪಡಿಸಿ. ಹಾಗಾಗಿ ಆ ರಸ್ತೆಯನ್ನು ನಾಯಿಗಳು ಆತ್ಮಹತ್ಯಾ ತಾಣವಾಗಿ ಗುರುತಿಸಿಕೊಂಡಿದ್ದವು.
ಲೇಟ್‌ನೈಟ್ ಪಾರ್ಟಿ ಮುಗಿಸಿದ ತಂಡವೊಂದು ಯಾವುದೋ ಪಬ್ಬೊಂದರಿಂದ ಹೊರಬಿದ್ದಿದೆ, ಅವರ ಕಾರಿನ ನಾಗಾಲೋಟಕ್ಕೆ ಬೈಕೊಂದು ಸಿಕ್ಕಿ ಅದರಲ್ಲಿದ್ದ ಇಬ್ಬರು ವಿಲವಿಲನೆ ಒದ್ದಾಡುತ್ತಿದ್ದಾರೆ.
ಕಾರ್‌ನಿಂದ ಹೋ ಎಂಬ ಕೇಕೆ ಬಿಟ್ಟರೆ ಬೇರೇನೂ ಕೇಳಲಿಲ್ಲ. ಹಿಂದಿನಿಂದ ಬಂದ ಮರ್ಸಿಡೀಸ್‌ ಹಾಗೇ ಬ್ರೇಕ್ ಹಾಕಿತು. ಕಿಟಿಕಿ ಕೆಳಗೆ ಸರಿದು ಮುಖವೊಂದು ಇಣುಕಿದು. ರಸ್ತೆ ಮೇಲೆ ನರಳುತ್ತಿದ್ದ ವ್ಯಕ್ತಿ ದೈನ್ಯನಾಗಿ ನೋಡಿದ.
ಕಿಟಿಕಿ ಮತ್ತೆ ಮುಚ್ಚಿತು. ಮರ್ಸಿಡಿಸ್ ಮುಂದಕ್ಕೋಡಿತು.
ನರಳುತ್ತಿದ್ದವರಿಬ್ಬರು ನಿಧಾನವಾಗಿ ನಿಶ್ಚಲರಾಗುತ್ತಿದ್ದುದನ್ನು ರಸ್ತೆ ಮೀಡಿಯನ್‌ನಲ್ಲಿ ಮಲಗಿದ್ದ ನಾಯಿಯೊಂದು ಅಸಹಾಯಕತೆಯಿಂದ ನೋಡಿ ಬಾಲ ಅಲ್ಲಾಡಿಸಿತು.

10.9.08

ದಪ್ಪ ಬೊಟ್ಟಿನ ಅಜ್ಜನಿಗೆ ಕೊನೆ ನಮನ

ಅವರು ಥೇಟ್ ಅಜ್ಜಿಯಂತೇ ಕಾಣುತ್ತಾರೆ. ನೊಸಲ ಮೇಲೆ ದಪ್ಪ ವಿಭೂತಿಯ ಬರೆ, ಅದಕ್ಕೆ ತಾಗುವಂತೆ ಹಣೆ ಮೇಲೆ ಕುಂಕುಮದ ದೊಡ್ಡ ಬೊಟ್ಟು.
ಪುನೀತಭಾವದಲ್ಲಿ ಕೈಯಲ್ಲಿ ಪಿಟೀಲು ಹಿಡಿದು ಕುಂತರೆ ಗಂಟೆಗಟ್ಟಲೆ ಕಾಲ ಸಂಗೀತ ವೈಭವ...ಕೇಳುಗ ನೋಡುಗರಿಗೆ ಬೇಜಾರಾಗದಂತೆ ರಾಗ ಮಿಡಿಯುವವರು.
ಎರಡು ವರ್ಷ ಹಿಂದೆ ಮೂಡುಬಿದ್ರೆಯ ಆಳ್ವಾಸ್ ವಿರಾಸತ್‌ಗೆ ಬಂದಿದ್ದ ಕುನ್ನಕುಡಿ ಒಂದೂವರೆ ಗಂಟೆ ಕಾಲ ಮೋಡಿ ಮಾಡಿದ್ದರು. ಈ ಅಜ್ಜನಿಗೆ ಇತರ ಅನೇಕ ಸಂಗೀತಗಾರರಂತೆ ಸಿಟ್ಟು ಬರದು. ಸಂಗೀತ ನುಡಿಸುತ್ತಲೇ ಮುಖಭಾವಗಳಲ್ಲು ನವರಸ ಸೂಸುತ್ತಾ ನೋಡುಗರಲ್ಲಿ ನಗು ಎಬ್ಬಿಸಬಲ್ಲವರು. ಮೂಡುಬಿದಿರೆಯ ಕಛೇರಿಯಲ್ಲಿ ಆರಂಭದಿಂದ ಅಂತ್ಯದ ವರೆಗೂ ಎಲ್ಲೂ ಗುಣುಗುಟ್ಟುವಿಕೆ ಇರಲಿಲ್ಲ, ಕೇಳಿದ್ದು ಚಪ್ಪಾಳೆ ಮಾತ್ರ.

ಕೇಳುಗರನ್ನು ಗಂಟೆಗಟ್ಟಲೆ ಕಾಲ ಪರವಶಗೊಳಿಸುವ ಅಂತಹ ಕಲೆ ಬೆರಳೆಣಿಕೆಯ ಸಂಗೀತಗಾರರಿಗಷ್ಟೇ ಸಿದ್ಧಿಸಿದೆ.
ಅವರ ಪಿಟೀಲಿನ ಮೊರೆತ ಅನೇಕರ ಮೊಬೈಲಿಗೆ ರಿಂಗ್‌ಟೋನ್ ಆಗಿದೆ. ಮನಸಿಗೆ ಬೇಸರವೆನಿಸಿದಾಗ ಪಿಟೀಲಿನ ದನಿ ಸುಶ್ರಾವ್ಯವಾಗಿ ಮನಮುಟ್ಟುತ್ತದೆ.
ಅದರಲ್ಲು ಕರ್ನಾಟಕ ಸಂಗೀತ ಶೈಲಿಯಲ್ಲಿ ಅವರ ದಾಸರ ಪದಗಳನ್ನು ಕೇಳಿದರೆ ಎಂಥವರೂ ತಲೆದೂಗಲೇ ಬೇಕು. ಯುವವೃಂದಕ್ಕೂ ಕೇಳಲು ಖುಷಿಕೊಡುವ ಅವರ ಡ್ರೀಂ ಡಾನ್ಸ್‌ನಂತಹ ಆಲ್ಬಂಗಳು ಮನಮೋಹಕ.
೧೨ರ ಹರೆಯದಲ್ಲೇ ಪಿಟೀಲಿನತ್ತ ಆಕರ್ಷಿತರಾದರು ಕುನ್ನಕುಡಿ. ಅದುವರೆಗೆ ಕೇವಲ ಪಕ್ಕವಾದ್ಯವಾಗಿಯಷ್ಟೇ ಬಳಕೆಯಲ್ಲಿದ್ದ ಪಿಟೀಲಿಗೂ ಅದರದ್ದೇ ಆದ ಘನತೆಯನ್ನು ತಂದುಕೊಟ್ಟು ಸೋಲೋ ಆಗಿ ಪ್ರದರ್ಶನಕೊಟ್ಟವರವರು. ಪಿಟೀಲು ನುಡಿಸುತ್ತೇನೆ ಎಂಬ ಕಾರಣಕ್ಕೆ ಜನ ಅಸಡ್ಡೆ ತೋರಿದರು. ಅದನ್ನೇ ಸವಾಲಾಗಿ ಸ್ವೀಕರಿಸಿದೆ, ನನ್ನದೇ ಆದ ಶೈಲಿ ರೂಪಿಸಿಕೊಂಡೆ, ಇದನ್ನು ಜನ ಒಪ್ಪಿಕೊಂಡರು ಎಂದು ಒಂದೆಡೆ ಸಂದರ್ಶನದಲ್ಲಿ ಕುನ್ನಕುಡಿ ಹೇಳಿಕೊಂಡಿದ್ದಾರೆ.
ಪಿಟೀಲಿನಲ್ಲಿಯೂ ಬೆರಳುಗಳ ಸೂಕ್ಷ್ಮ ಚಲನೆ ಮೂಲಕ ವಿಸ್ಮಯ ಸೃಷ್ಟಿ ಅವರ ವಿಶೇಷ. ಕೇವಲ ಶಾಸ್ತ್ರೀಯ ಶೈಲಿಯನ್ನೇ ನೆಚ್ಚಿಕೊಂಡಿರಲಿಲ್ಲ. ನಮ್ಮನ್ನು ಬೆಳೆಸಿದ್ದು ಪ್ರೇಕ್ಷಕರು, ಅವರಿಗಾಗಿ ಆಗಾಗ ಲಘುಸಂಗೀತ ನುಡಿಸಿದರೆ ತಪ್ಪಿಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ನಮ್ಮ ವೀಟ್ಟು ದೈವಂ, ಕನ್ನಕಾಚಿ, ಮೆಲ್ ನಟ್ಟ ಮರುಮಗಲ್ ಎಂಬ ಚಿತ್ರಗಳಿಗೆ ಅವರು ಸಂಗೀತವನ್ನೂ ನೀಡಿದ್ದಾರೆ.

೭೫ರ ಹರೆಯದಲ್ಲಿ ಕುನ್ನಕುಡಿ ಪಿಟೀಲು ಸ್ತಬ್ದವಾಗಿದೆ, ಅವರ ಸುಮಧುರ ರಚನೆಗಳಷ್ಟೇ ನಮ್ಮ ಮನದಲ್ಲಿ ಅನಂತವಾಗಿರುತ್ತದೆ.
ಅವರ ಸುಂದರ ಕಲಾಕೃತಿಯೊಂದು ಇಲ್ಲಿದೆ. ಕೇಳಿ, ದೊಡ್ಡ ಬೊಟ್ಟಿನ ಅಜ್ಜನಿಗೆ ನಿಮ್ಮ ಮನತುಂಬಿದ ಶ್ರದ್ಧಾಂಜಲಿ ಇರಲಿ......
Related Posts Plugin for WordPress, Blogger...