15.7.07

ಅಪ್ಪೆ ಅಜ್ಞಾನ ಮತ್ತು ಶೇಷಮ್ಮ.....


ನನಗೆ ಅಸಲಿ ಅಪ್ಪೆ ಮಾವಿನ ಮಿಡಿ ಎಂದರೆ ಏನೆಂದು ಚಿಕ್ಕವನಿದ್ದಾಗ ಗೊತ್ತೇ ಇರಲಿಲ್ಲ.

ಅಪ್ಪೆಗಳ ಅಸಲಿತನ-ನಕಲಿತನ ಗೊತ್ತಾದದ್ದು ಕೆಲವರ್ಷಗಳ ಹಿಂದೆಯಷ್ಟೇ. ಅದರ ಹಿಂದೆ ಹೀಗೊಂದು ಚಿಕ್ಕ ಸಂದರ್ಭವಿದೆ.

ಕಾಸರಗೋಡಿನ ನನ್ನಜ್ಜನ ಮನೆಯಂಗಳದಲ್ಲಿ ಇದ್ದ ಕಾಟು ಮಾವಿನ ಮರದಲ್ಲಿ ಕೆಂಪಿರುವೆ ಕಡಿಸಿಕೊಂಡೇ ಮಾವ ಬುಟ್ಟಿ ಬುಟ್ಟಿ ಮಾವಿನ ಮಿಡಿ ಇಳಿಸುತ್ತಿದ್ದ. ತಾಯಿ, ಅಜ್ಜಿ, ಚಿಕ್ಕಮ್ಮಂದಿರು ಸೇರಿಕೊಂಡು ಮಿಡಿ ಕ್ಲಾಸಿಫಿಕೇಶನ್ ಮಾಡುತ್ತಿದ್ದರು. ದೊಡ್ಡಮಿಡಿ, ಕೊಯ್ಯುವಾಗ ಬಿದ್ದ ಮಾವು, ಮೀಡಿಯಂ ಸೈಝಿದ್ದು...ಹೀಗೆಲ್ಲ.

ಮಾವಿನ ಮಿಡಿ ಕೊಯ್ದ ಬಳಿಕ ಒಂದಷ್ಟು ದಿನ ನಮಗೆ ಸಿಗುತ್ತಿದ್ದುದು ಗಾಯಗೊಂಡ ಮಾವಿನ ತುಂಡುಗಳ ಉಪ್ಪಿನಕಾಯಿ ಮಾತ್ರ. ಮಿಡಿಮಾವಿನ ಉಪ್ಪಿನಕಾಯಿ ಎತ್ತರದ ಭರಣಿಗಳಿಂದ ಹೊರಗೆ ಬರಲು ಕನಿಷ್ಠ ಒಂದು ವರ್ಷ ಕಾಯಬೇಕಿತ್ತು. ಹಾಂ ಅಪ್ಪೆ ಬಗ್ಗೆ ಹೇಳಲು ಹೊರಟು ಏನೇನೋ ಒದರುತ್ತಿದ್ದಾನೆ ಅನ್ನಬೇಡಿ.

ಮಳೆ ಧೋ ಎಂದು ಸುರಿಯುವಾಗ ರಜೆಯಲ್ಲಿ ಮನೆಯಲ್ಲಿ ಮಧ್ಯಾಹ್ನ ಒಮ್ಮೊಮ್ಮೆ ಬಿಳಿ ಕಡಲೇಕಾಯಿಯಷ್ಟೇ ದೊಡ್ಡದಾದ ಆದರೆ ಕೇವಲ ಸೊನೆಯಿಂದಲೇ ಇದು ಕಡಲೇಕಾಯಿ ಅಲ್ಲ, ಕಾಡಿನ ಮುಳ್ಳುಗಿಡ ಕರಂಡೆ ಕಾಯಿಯೂ ಅಲ್ಲ, ಅಪ್ಪಟ ಮಾವು ಎಂದು ಗೊತ್ತಾಗುವ ಮಾವಿನ ಉಪ್ಪಿನಕಾಯಿ ಪ್ರತ್ಯಕ್ಷವಾಗುತ್ತಿತ್ತು. ಅದನ್ನೇ ಅಪ್ಪೆ ಮಿಡಿ ಎಂದು ಕರೆಯಲಾಗುತ್ತಿತ್ತು! ಮನೆಯಂಗಳದ ಮಾವಿನಲ್ಲೇ ಅತ್ಯಂತ ಚಿಕ್ಕದಾದ ಮಿಡಿಯನ್ನೇ ಅಪ್ಪೆ ಎಂದು ನಂಬಿ ನಾನು ಮೋಸಹೋಗಿದ್ದೆ. ಇದೆಂತಹ ಘೋರ ಅಜ್ಞಾನ ಎನ್ನುವುದು ಗೊತ್ತಾದ್ದು ಉಜಿರೆಯ ಹಾಸ್ಟೆಲ್ ಸೇರಿದ ಮೇಲೆಯೇ. ಅಲ್ಲಿ ಶಿರಸಿ ಯಲ್ಲಾಪುರ ಕಡೆಯಿಂದ ಬರುತ್ತಿದ್ದ ಸ್ನೇಹಿತರು ಏನೇ ಮರೆತರೂ ಅಪ್ಪೇ, ಜೀರಿಗೆ ಮಿಡಿಯ ಬಾಟಲಿಯೊಂದು ಬಿಟ್ಟು ಬರುತ್ತಿರಲಿಲ್ಲ.

ಕಾಸರಗೋಡಿನಲ್ಲಿ ಸಿಕ್ಕ ಚೋಕುಡಿ ಮಾವಿಗೆ ಅಪ್ಪೆ ಎಂದು ತಿಳಿದು ಈ ಘನತೆವೆತ್ತ ಅಪ್ಪೆಮಿಡಿಗೆ ಅನ್ಯಾಯ ಮಾಡಿದ್ದರ ಬಗ್ಗೆ ಹಲುಬುತ್ತಲೇ ಈ ಉ.ಕ ಸ್ನೇಹಿತರು ಕೊಡುವ ಅಪ್ಪೆಯನ್ನು ಸವಿಯುತ್ತಿದ್ದೆ.

ಅದು ಬಿಟ್ಟರೆ ನಾನು ಅಪ್ಪೆ ತಿಂದಿದ್ದು ಕಡಮೆ. ಅದೆಲ್ಲ ಬಿಡಿ. ಎರಡು ವರ್ಷಕ್ಕೆ ಮೊದಲು ನಮ್ಮ ಪಕ್ಕದ ಮನೆಯ ಬಾಲಕೃಷ್ಣ ಎಂಬವರು ಅಪ್ಪೆ ಸಿಗುತ್ತೆ ತರೋಣ ಎಂದರು. ಹೊರಟೇ ಬಿಟ್ಟೆ. ಸಾಗರ ಬಳಿಯ ರಿಪ್ಪನ್ ಪೇಟೆಯಲ್ಲಿಳಿದು ಅಪ್ಪೆಗಾಗಿ ಸರ್ಚ್ ಶುರು. ನಾವು ಹೊರಗಿಂದ ಬಂದ ಕಾರಣ ಎಲ್ಲರೂ ಬಾಯಿಗೆ ಬಂದ ರೇಟು ಹೇಳತೊಡಗಿದರು. ಎಲ್ಲೂ ನಮಗಿಷ್ಟವಾಗಲಿಲ್ಲ. ಸುತ್ತುತ್ತಿರುವಾಗ ಆಟೋ ಚಾಲಕರೊಬ್ಬರು ನಮ್ಮಲ್ಲಿ ಅಪ್ಪೆ ಬೇಕಾದ್ರೆ ಎರಡು ಮೈಲಿ ಮುಂದೆ ಹೋಗಿ ಶೇಷಮ್ಮ ಅಂತ ಇದಾರೆ ಎಂಬ ಸಖತ್ ಮಾಹಿತಿ ಕೊಟ್ರು.

ಹಾಗೆ ಹುಡುಕುತ್ತಾ ಹೋದಾಗ ಕೊನೆಗೂ ಶೇಷಮ್ಮ ಸಿಕ್ರು. ನಡು ಮಧ್ಯಾಹ್ನ ಆಕೆಯ ಮನೆ, ಮನೆಗಿಂತಲೂ ಚಿಕ್ಕ ಷೆಡ್ಡು ಎನ್ನಬಹುದು. ಸುಮಾರು ಎಪ್ಪತ್ತು ವರುಷದ ವಿಧವೆ ಶೇಷಮ್ಮನ ಕಾಯಕ ಮಾವಿನಕಾಯಿ ಉಪ್ಪಿನಕಾಯಿ ಮಾಡೋದೇ. ದೂರದೂರುಗಳಿಂದಲೂ ಶೇಷಮ್ಮನ ಕೈಗುಣಕ್ಕೆ ಮೆಚ್ಚಿ ಜನ ಬಂದು ಉಪ್ಪಿನಕಾಯಿ ಕೊಂಡೊಯ್ಯುತ್ತಾರೆ.

ಮಧ್ಯಾಹ್ನ ತನಗಿಟ್ಟ ಅನ್ನದಿಂದಲೇ ಒಂದಷ್ಟು ಪಾಲು ನಮಗೂ ಸಿಕ್ಕಿತು(ಊಟದಲ್ಲಿ ಶೇಷಮ್ಮನ ಉಪ್ಪಿನಕಾಯಿ ರುಚಿಯೂ ಸಿಕ್ಕಿತು). ಹತ್ತಿರ ಬೇರೆ ಹೋಟ್ಲೂ ಇರಲಿಲ್ಲ. ನಮಗೆ ಉಪ್ಪಿನಕಾಯಿ ಬೇಕಿರಲಿಲ್ಲ. ಉಪ್ಪಿನಲ್ಲಿ ಹಾಕಿದ್ದ ತಲಾ ಐದು ನೂರು ಜೀರಿಗೆ ಮತ್ತು ಅಪ್ಪೆ ಮಿಡಿಯನ್ನು ಸರಿಯಾಗಿ ಎಣಿಸಿ, ಮೇಲಿಂದ ಇಪ್ಪತ್ತು ಹೆಚ್ಚುವರಿ ಮಿಡಿಗಳನ್ನೂ ನಮ್ಮ ಪಾತ್ರೆಗೆ ಹಾಕಿಟ್ಟರು ಶೇಷಮ್ಮ. ಜತೆಗೆ ವಿಧವೆಯಾದ ಮೇಲೆ ತಾನು ಊರಿನಿಂದ ಪ್ರತ್ಯೇಕವಾದ ಕಥೆಯನ್ನೂ ಹೇಳಿದರು. ಶೇಷಮ್ಮನಿಗೆ ಮಕ್ಕಳು ಇಲ್ಲ, ವಿಶೇಷ ಆಸೆಯೂ ಇಲ್ಲ. ಒಂದೇ ಆಸೆ ಇದ್ದದ್ದು ಒಂದೇ. ತನ್ನ ಮನೆ ಪಕ್ಕ ಆಂಜನೇಯನ ಗುಡಿ ನಿರ್ಮಿಸುವುದು. ಹೊರಗೆ ಇಣುಕಿದರೆ ಗಡಿ ಆಗಲೇ ಪೂರ್ಣಗೊಂಡಿತ್ತು. ಉಪ್ಪಿನಕಾಯಿ ದುಡ್ಡು ಸೇರಿಸಿಯೇ ನಿರ್ಮಿಸಿದ್ದಂತೆ. ಆಕೆಯ ಗುಡು ಬೇಗ ನಿರ್ಮಾಣವೇಗಲಿ ಎಂದು ಹಾರೈಸಿ, ಮಾವಿನ ದುಡ್ಡು ಮೇಲೆ ನೂರು ಆಂಜನೇಯನ ಗುಡಿ ನಿರ್ಮಾಣಕ್ಕೆ ಕಿಂಚಿತ್ ಸಹಾಯವಾಗಲಿ ಎಂದು ಕೊಟ್ಟು ಹಿಂದಿರುಗಿದೆವು.

ಸಕತ್ ರುಚಿಯಿದ್ದ ಆ ಮಾವಿನ ಮಿಡಿಯನ್ನು ಸಂಬಂಧಿಗಳೆಲ್ಲ ಸ್ವಲ್ಪ ಸ್ವಲ್ಪವಾಗಿ ಇಲ್ಲವಾಗಿಸಿದರು. ಆದರೆ ಆ ಮಿಡಿಯ ಕಂಪು ಇಂದಿಗೂ ಬಾಯಿಗೆ ನೆನಪಿದೆ. ಮುಂದಿನ ವರ್ಷ ನಾನು ಮಿಡಿ ತರಲು ಹೋಗಲಾಗಲಿಲ್ಲ. ಬಾಲಕೃಷ್ಣ ಹೋಗಿದ್ದರು. ಮಿಡಿ ಕಡಮೆಯಾದ ಕಾರಣ ಭಾರೀ ಬೆಲೆ ಎಂದು ಸ್ವಲ್ಪವೇ ತಂದಿದ್ದರು.

ಕಳೆದ ವರ್ಷ ಮಾತ್ರ ನಾನೂ ಬರುತ್ತೇನೆ. ಶೇಷಮ್ಮನ ಮನೆಗೇ ಹೋಗೋಣ ಎಂದಿದ್ದೆ. ಆದರೆ ಮಿತ್ರರೊಬ್ಬರಿಂದ ಮಾಹಿತಿ ಬಂತು. ಶೇಷಮ್ಮ ನಿಧನರಾಗಿ ಕೆಲವು ತಿಂಗಳಾಗಿವೆ.......


(ಸುಶ್ರುತರ ಗಂಗಮ್ಮನ ಜೀರಿಗೆ ಬಗ್ಗೆ ಓದಿದಾಗ ಶೇಷಮ್ಮ ಫಕ್ಕನೆ ಜ್ಞಾಪಕಕ್ಕೆ ಬಂದರು. ಅದಕ್ಕಾಗಿ ಸುಶ್ರುತರಿಗೆ ಥ್ಯಾಂಕ್ಸ್)


9 comments:

ರಾಜೇಶ್ ನಾಯ್ಕ said...

ಶೇಷಮ್ಮನಲ್ಲಿಗೆ ತೆರಳಲು ನಿಮ್ಮಿಂದ ಮಾಹಿತಿ ಪಡೆಯಬೇಕೆಂದು ನಿರ್ಧರಿಸುತ್ತಿರುವಾಗಲೇ ಕೊನೆಯ ಪ್ಯಾರದಲ್ಲಿ ಬರೆದಿದ್ದನ್ನು ಓದತೊಡಗಿದ್ದೆ. ಆಕೆಯ ಅಂಜನೇಯ ಗುಡಿ ಪೂರ್ತಿಯಾಯಿತೆ? ಉತ್ತಮ ಬರಹ ವೇಣು.

Sushrutha Dodderi said...

ಶೇಷಮ್ಮನನ್ನು ನೆನಪಿಸಿದ್ದಕ್ಕೆ ಥ್ಯಾಂಕ್ಸ್! ಈ ಶೇಷಮ್ಮನ ವಿಶೇಷ ಅಂದ್ರೆ ಆಕೆ 'ಉಪ್ಪಿನಕಾಯಿ ಶೇಷಮ್ಮ' ಅಂತಲೇ ಫೇಮಸ್ಸು ನಮ್ ಕಡೆ! ಅಲ್ಲದೇ ಮಾವಿನಮಿಡಿ ವ್ಯಾಪಾರಕ್ಕೆ ರಿಪ್ಪನ್‍ಪೇಟೆ ಹೆಸರುವಾಸಿ. ಒಂದು ವರ್ಷ ನಮ್ ಕಡೆ ಎಲ್ಲೆಲ್ಲೂ ಮಿಡಿ ಸಿಗ್ಲಿಲ್ಲ ಅಂದ್ರೆ ರಿಪ್ಪನ್‍ಪೇಟೆ ಮಾರ್ಕೆಟ್ಟಿಗೆ ಹೋಗಿ ತರುತ್ತೇವೆ ನಾವು. ಒಮ್ಮೆ ನಮ್ಮನೆಗೂ ಶೇಷಮ್ಮನಿಂದ ಒಂದು ನೂರು ಮಿಡಿ ತಂದದ್ದುಂಟು. ನನ್ನ ಅತ್ತೆ ಮನೆಯವರಿಗೆ ಈ ಶೇಷಮ್ಮ ಬಹಳ ಕ್ಲೋಸು. ಒಂದ್ಸಲ ಅತ್ತೆ ಮನೆಗೆ ಹೋಗಿದ್ದಾಗ ಶೇಷಮ್ಮನನ್ನು ನೋಡಿದ್ದೆ ಸಹ. ಆಕೆ ಮಾತನಾಡುತ್ತಿದ್ದಾಗ ಅದೆಷ್ಟು ಲೋಕಜ್ಞಾನ ಇದೆಯಲ್ಲಾ ಈ ಅಜ್ಜಿಗೆ ಅನ್ನಿಸಿದ್ದು ಸುಳ್ಳಲ್ಲ. ಆಕೆ ಕಟ್ಟಿಸುತ್ತಿದ್ದ ಗುಡಿ ಪೂರ್ಣವಾಯಿತೋ ಇಲ್ಲವೋ ನಂಗೂ ಗೊತ್ತಿಲ್ಲ; ಈ ಸಲ ಊರಿಗೆ ಹೋದಾಗ ವಿಚಾರಿಸಬೇಕು.

ತುಂಬಾ ಚೆನ್ನಾಗಿ ಬರೆದಿದ್ದೀರಿ ವೇಣು.

Satish said...

ಛೇ, ಬಾಯಲ್ಲಿ ನೀರೂರುವಂತೆ ಮಾಡಿ ಸೋಮವಾರದ ಕಾಫೀ ರುಚಿಯನ್ನು ನಾಲಿಗೆಯಿಂದ ಹೋಗುವಂತೆ ಮಾಡಿದ್ದಕ್ಕಾಗಿ ನಿಮಗೊಂದು ಪಾಠ ಕಲಿಸಲು ನಮ್ಮ ಲಾಯರ್ ಹತ್ರ ಮಾತನಾಡುವವನಿದ್ದೇನೆ, ಬರೀ ಲೇಖನ ಬರ್ದು ಆಗೋ ತೊಂದರೆಯಲ್ಲದೇ ಚಿತ್ರವನ್ನು ಬೇರೆ ಹಾಕಿದ್ದೀರಲ್ಲಾ..ಏನ್ ಸ್ವಾಮಿ?! :-)

PRAVINA KUMAR.S said...

ಶೇಷಮ್ಮ ನಮ್ಮ ಪಕ್ಕದ ಊರಿನವರು ಎಂದು ಹೇಳಿಕೊಳ್ಳಲು ಹೆಮ್ಮೆ. ಅವರ ಬಗ್ಗೆ ಸಾಕಷ್ಟು ಲೇಖನಗಳು ಬಂದಿವೆ. ಅವರ ಮಗ ನಮ್ಮ ಮನೆ ಪಕ್ಕದಲ್ಲಿ ಇರುವುದು.
ಶೇಷಮ್ಮನ ನೆನಪಿಸಿದಕ್ಕೆ ವೇಣು ಸಾರ್ ಗೆ ವಂದನೆ.
ರಾಜೇಶ್ ಸಾರ್ ಕೇಳಿದಂತೆ ಆಂಜನೇಯಗುಡಿ ಪೂರ್ತಿಯಾಗಿದೆ.

mouna said...

mavina season mugiyo hantadalli ee post barediddiraa..

VENU VINOD said...

ರಾಜೇಶ್,
ಧನ್ಯವಾದ. ಇಲ್ಲಿ ಪ್ರವೀಣ್ ಹೇಳಿದ್ದಾರಲ್ಲ. ಗುಡಿ ಪೂರ್ತಿಯಾಗಿದೆಯಂತೆ.ಅದು ಸಂತಸದ ವಿಷಯ

ಸುಶ್ರುತ,
ಶೇಷಮ್ಮನ ಬಗ್ಗೆ ನಿಮ್ಮಹತ್ರ ತುಂಬ ಮಾಹಿತಿ ಇದೆ ಅಂತ ಗೊತ್ತಾಯ್ತು. ಆಕೆಯ ಬಗ್ಗೆ ನನಗಿದ್ದ ಗೌರವ ನಿಮ್ಮ ಮಾಹಿತಿಯಿಂದ ಮತ್ತಷ್ಟು ಹೆಚ್ಚಿದೆ. ಥ್ಯಾಂಕ್ಸ್

ಸತೀಶ್,
ಹೀಗೆ ಲಾಯರ್‍, ಗೀಯರ್‍ ಅಂದ್ರೆ ನಿಮ್ಮ ಬಾಯಲ್ಲಿ ನೀರೂರಿಸಿ ಅಪೆಟೈಸರ್‍ ಕೆಲ್ಸ ಮಾಡಿದ್ದಕ್ಕೆ ನಿಮಗೆ ಚಾರ್ಜ್ ಮಾಡಬೇಕಾಗುತ್ತೆ. ಹುಸಾರ್‍:)ಬ್ಲಾಗ್‌ಗೆ ಸ್ವಾಗತ, ಬರುತ್ತಿರಿ

ಪ್ರವೀಣ್,
ಗುಡಿ ಪೂರ್ತಿಯಾಗಿದ್ದು ನಿಜಕ್ಕೂ ಖುಷಿ ವಿಷಯ. ನೀವೇ ಹೇಳಿದ ಹಾಗೆ, ನಿಮ್ಮ ಊರಿನ ಹೆಮ್ಮೆ ಶೇಷಮ್ಮ.

ಮೌನ,
ಮಾವಿನ ಸೀಸನ್ ಮುಗಿದ್ರೂ, ಏಪ್ರಿಲ್‌ನಲ್ಲಿ ತಯಾರಾದ ಮಾವಿನ ಉಪ್ಪಿನಕಾಯಿ ಜಾಡಿಯಿಂದ ಹೊರಗೆ ಬರೋದು ಮಳೆಗಾಲದಲ್ಲಿ. ಹಾಗಾಗಿ ಇರಲಿ ಎಂದು ಈ ಲೇಖನ ಬರೆದೆ :)

ಶ್ರೀನಿಧಿ.ಡಿ.ಎಸ್ said...

ಈ ಸುಶ್ರುತ, ವೇಣು ಇಬ್ರೂ ಸೇರ್ಕೊಂಡು ಅಪ್ಪೆ ಮಿಡಿ ಬಗ್ಗೆ ಲೇಖನ ಬರ್ದು, ತಲೆ ಹಾಳು ಮಾಡಿದ್ದಕ್ಕೆ ಇವತ್ತು ಮನೆಗೆಲ್ಲ ಫೋನ್ ಮಾಡಿ "ಅಪ್ಪೆ ಮಿಡಿ ರೆಡಿ ಮಾಡಿ ಇಡಿ" ಅಂದು ಬಿಟ್ಟೆ. ಎಷ್ಟ್ ದಿನಾ ಅಂತ ಸುಮ್ನೆ ಬಾಯಲ್ ನೀರ್ ಸುರ್ಸ್ಕಂಡ್ ಇರೋದು!

Shree said...

ನಿಮ್ಗೆಲ್ಲ ಬರೀ ಹೊಟ್ಟೆ ಉರ್ಸೋದೇ ಕೆಲಸ... :(

Srik said...

huh! ಬಾಯಲ್ಲಿ ನೀರೂರಿಸಿದ ಲೇಖನ. ಮಿಡಿಗಾಯಿ ಅಂತ ನಮ್ಮ ಬೆಂಗಳೂರಲ್ಲೂ ಸಿಗತ್ತೆ. ಆದರೆ ನಾವು ಶೃಂಗೇರಿಯಿಂದ ತಂದಾಗ ಮಾತ್ರಾ ಅದರ ರುಚಿ ಹತ್ತೋದು. ಅದರಲ್ಲಿ ಇಷ್ಟು ಬಗೆ ಇರೋದು, ಮತ್ತೆ ಕರಾವಳಿಯಲ್ಲಿ ಅದರ ವಿಶೇಷ ಮಹತ್ವ ಎಲ್ಲಾ ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು.

ಶೇಷಮ್ಮನಂತೆ ಎಲೆ ಮೆರೆಯಲ್ಲೇ ಸಾಧನೆ ಮಾಡುವ ಮಂದಿಗೆ ಇಲ್ಲಿಂದಲೇ ಒಂದು ನಮನ.

Related Posts Plugin for WordPress, Blogger...