ಅರಸಿನಗುಂಡಿಯ ದೂರದ ನೋಟ. ಕ್ಯಾಮೆರಾ ಸರಿ ಫೋಕಸ್ ಆಗಿಲ್ಲ ಕ್ಷಮಿಸಿ
ಅಬ್ಬಬ್ಬಾ ಎಂಥ ಜಲಪಾತ! ಅನೇಕಾನೇಕ ಜಲಪಾತಗಳನ್ನೆಲ್ಲ ನೋಡಿ ಆನಂದಿಸಿದ ನಮ್ಮಲ್ಲಿ ಅನೇಕ ಚಾರಣೋತ್ಸಾಹಿಗಳು ಅರಸಿನಗುಂಡಿ ಜಲಪಾತಕ್ಕೆ ಭರ್ಜರಿ ಮಳೆಯಲ್ಲಿ ನಡೆದು ನೋಡಿದಾಗ ಅಬ್ಬಬ್ಬಾ ಎನ್ನಲೇ ಬೇಕಾಯ್ತು.
ಮಂಗಳೂರಿಂದ ಬಿಡುವಿಲ್ಲದೆ ಸುರಿಯುತ್ತಿದ್ದ ಮಳೆ ನಡುವೆ ನಾವು ೯ ಮಂದಿ ಅರಸಿನಗುಂಡಿಗೆ ಹೊರಟಿದ್ದೆವು. ಈ ಹಿಂದೆ ಅರಸಿನಗುಂಡಿಯನ್ನು ಒಂದು ಬಾರಿ ನೋಡಿದ್ದ ರಾಕೇಶ ಹೊಳ್ಳ ನಮ್ಮ ಮಾರ್ಗದರ್ಶಿ. ಹೊರಡುವ ಮಾಹಿತಿ ಸಿಕ್ಕಿದ್ದ ಅನೇಕ ಅನುಭವಿಗಳು ಈ ಮಳೆಗಾಲದಲ್ಲಿ ಅಲ್ಲಿಗೆ ಹೋಗಬೇಡಿರಪ್ಪೋ, ಮಳೆ, ಜಿಗಣೆ ತಡೆಯೋಕಾಗಲ್ಲ ಎಂದು ನಮ್ಮ ಉತ್ಸಾಹ ಕುಂದಿಸುವ ವ್ಯರ್ಥ ಪ್ರಯತ್ನ ಮಾಡಿದ್ದರೂ ಅಚ್ಚರಿಯೋ ಎಂಬಂತೆ ಕುಸಿಯಲಿಲ್ಲ.
ಕೊಲ್ಲೂರಿನ ಮಲಯಾಳಿಯೊಬ್ಬರ ಹೊಟೇಲಲ್ಲಿ ‘ಸಿಂಬಳ್’ ಆಗಿ ಪರೋಟ ಪ್ಯಾಕ್ ಮಾಡಿಸಿಕೊಂಡು ಗೂಡಂಗಡಿಯಲ್ಲಿ ಜಿಗಣೆಗಳಿಗೆಂದು ಪ್ರೀತಿಯಿಂದ ‘ಗೋವಿಂದ’ ಬ್ರಾಂಡ್ನ ನಶ್ಯ ಹಿಡಿದುಕೊಂಡು ಮತ್ತೆ ಮುಂದುವರಿದೆವು. ಕೊಲ್ಲೂರಿಂದ ಕೊಡಚಾದ್ರಿ ಹೋಗುವ ರಸ್ತೆಯನ್ನು ಕತ್ತರಿಸಿದಂತೆ ಆಗಿತ್ತು. ಯಾಕೆಂದರೆ ಹೊಸ ಸೇತುವೆ ಕಾಮಗಾರಿ ಆಗುತ್ತಿದ್ದ ಕಾರಣ ಮುಂದೆ ವಾಹನ ಹೋಗುತ್ತಿರಲಿಲ್ಲ. ಅಲ್ಲೇ ಸ್ವಲ್ಪ ಹಿಂದೆ ಮನೆಯೊಂದರ ಅಂಗಳದಲ್ಲಿ ಬೈಕ್ಗಳನ್ನು ಇರಿಸಿ ನಮ್ಮ ಚಾರಣ ಆರಂಭಿಸಿದೆವು.
ಸೇತುವೆ ಪಕ್ಕದಲ್ಲೆ ಬಲಕ್ಕೆ ಇರುವ ಸಸ್ಯಕ್ಷೇತ್ರ ಕಮಾನಿನ ಮೂಲಕ ಒಳಪ್ರವೇಶಿಸಿ ಮುನ್ನಡೆದೆವು. ಅಲ್ಲೂ ಒಂದು ಮನೆಯಿಂದ ಹೊರಬಂದ ಇಬ್ಬರು ಹೋಯ್ ಈಗ ಅರಸಿನಗುಂಡಿ ಹೋಗ್ತೀರಾ, ಜಿಗಣೆ ರಾಶಿ ಇವೆ ಮಾರಾಯ್ರೇ, ತಂಬಾಕಿಗೂ ಕೇರೇ ಮಾಡಲ್ಲ ಎಂದು ನಮ್ಮಲ್ಲಿ ಮತ್ತೆ ಭೀತಿಯ ಬೀಜ ಬಿತ್ತಿದರು.
ನಮ್ಮ ಗೆಳೆತನ ಬಿಡದೆ ಮಳೆ ಸುರಿಯುತ್ತಲೇ ಇತ್ತು. ದಟ್ಟ ಕಾಡಿನಲ್ಲಿ ಅಡಿ ಇಡುತ್ತಿದ್ದಂತೇ ವಿವಿಧ ರೀತಿಯ ಆಸನಗಳು ತಂಡದವರಿಂದ! ಒಂದು ಕಾಲಲ್ಲಿ ನಿಂತು ಜಿಗಣೆ ತೆಗೆಯುವುದು, ತೆಗೆದದ್ದಕ್ಕಿಂತ ದುಪ್ಪಟ್ಟು ಜಿಗಣೆ ಹತ್ತಿಕೊಂಡು ಹೊಸಬರ ಪಾಡಂತೂ ಚಿಂತಾಜನಕ!
ಎಂಆರ್ಪಿಎಲ್ನ ಸುನಿಲ್ ಚಪ್ಪಲಿಯ ಒಳಭಾಗದಲ್ಲಿ ಕಾಲಿಗೆ ತಾಗುವಂತೆ ಹೊಗೆಸಪ್ಪು ಸುತ್ತಿಕೊಂಡು ಹೊಸಪ್ರಯೋಗ ಶುರುವಿಟ್ಟರು. ನಾನು ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಬಾಟಲಿ ಡೆಟಾಲ್ ಕೂಡಾ ಹಿಡಿದುಕೊಂಡಿದ್ದೆ. ಈ ಪ್ರಯೋಗವೇನೋ ಫಲಕೊಟ್ಟಿತಾದರೂ ಸುರಿವ ಮಳೆಗೆ ಡೆಟಾಲ್ ಬೇಗನೆ ತನ್ನ ಶಕ್ತಿ ಕಳೆದುಕೊಳ್ಳುತ್ತಿತ್ತು.
ಭಾರಿ ಮಳೆಯಾದ ಕಾರಣ ದಾರಿಗಡ್ಡವಾಗಿ ಅಲ್ಲಲ್ಲಿ ತೋಡುಗಳು ಹರಿಯುತ್ತಿದ್ದವು. ನಮ್ಮೊಂದಿಗೆ ಬಂದಿದ್ದ ಮಿತ್ರ ಛಾಯಾಗ್ರಾಹಕ ರಾಮಕೃಷ್ಣ ಭಟ್ಟರಿಗೆ ಮೊದಲ ಚಾರಣ, ಹಾಗಾಗಿ ಅವರ ಜಿಗಣೆ ಹೋರಾಟ ನಡೆಯುತ್ತಲೇ ಇತ್ತು. ಅವರೂ ಸೇರಿದಂತೆ ಕ್ಯಾಮೆರಾ ತಂದಿದ್ದವರಿಗೆ ಹೊರಗೆ ತೆಗೆಯಲೂ ಆಗದಂತೆ ಮಳೆ ಸುರಿಯುತ್ತಿತ್ತು ನಿಂತರೂ ಕಾಲಿಗೆ ಜಿಗಣೆ ಕಚ್ಚಿ ಕಸಿವಿಸಿ ಗೊಳಿಸುತ್ತಿತ್ತು. ದಾರಿ ನೇರವಾಗಿದ್ದುದರಿಂದ ಹೋಗುತ್ತಲೇ ಇದ್ದೆವು. ಸುಮಾರು ಒಂದೂವರೆ ಗಂಟೆ ನಡೆದ ಬಳಿಕ ಬಲಕ್ಕೆ ಕಣಿವೆಯೊಳಕ್ಕೆ ಒಂದು ದಾರಿ ಕವಲೊಡೆದ ಸ್ಥಳ ಬಂತು. ನೇರವಾಗಿ ಹೋದರೆ ಕೊಡಚಾದ್ರಿಗೆ ಹೋಗಬಹುದು ಎಂಬ ಮಾಹಿತಿ ನೀಡಿದ ರಾಕೇಶ ಹೊಳ್ಳ. ಕೆಳಭಾಗದಲ್ಲಂತೂ ಬಹಳ ಜಾರುವಂತಹ ಮಣ್ಣು, ಅದರೊಂದಿಗೆ ದೊಡ್ಡಗಾತ್ರದ ಜಿಗಣೆಗಳೂ ನಮ್ಮ ಆಯಾಸ ಹೆಚ್ಚಿಸುತ್ತಿದ್ದವು. ಏನೇ ಇರಲಿ ಈಗ ಜಲಪಾತ ಸಿಗುತ್ತೆ, ಹಾಯಾಗಿ ಪರೋಟ ತಿಂದಾಗ ಆಯಾಸ ಪರಿಹಾರ ಆದೀತು ಎಂದು ಒಬ್ಬರಿಗೊಬ್ಬರು ಸಾಂತ್ವನ ಹೇಳುತ್ತಾ ಮುನ್ನಡೆದೆವು. ಅಂತೂ ಜಲಪಾತ ದರ್ಶನ ಆಯ್ತು. ಬ್ಯಾಗ್ ಜಾರಿಸಲು ನೋಡುವಾಗ ಹೊಳ್ಳ ಹೇಳುತ್ತಾನೆ, ಹೋಯ್ ಇದಲ್ಲ ಮಾರಾಯ ಇನ್ನೂ ಇದೆ!.
ಅಂತೂ ಮತ್ತೊಂದು ಜಲಪಾತ ಬಂತು. ಹೊಳ್ಳ ಯಾವುದೋ ಮೋಡಿಗೆ ಒಳಗಾದವನಂತೆ ಛಲ ಬಿಡದ ತ್ರಿವಿಕ್ರಮನಂತೆ ಮುನ್ನಡೆಯುತ್ತಲೇ ಇದ್ದ. ನಾವು ಒಂದಷ್ಟು ಹೊತ್ತು ಹನಿ ಮಳೆಯಲ್ಲಿಯೇ ಫೋಟೋ ತೆಗೆದೆವು. ಮತ್ತೆ ಜಾರುಕಣಿವೆಯಲ್ಲಿ ಜಾರುತ್ತಾ ಏಳುತ್ತಾ ಬೀಳುತ್ತಾ ಮಧ್ಯಾಹ್ನ ೨.೩೦ರ ವೇಳೆಗೆ ಅರಸಿನಗುಂಡಿ ಜಲಪಾತ ಸಿಕ್ಕೇಬಿಡ್ತು.
ಹತ್ತಿರದಲ್ಲಿ ಅರಸಿನಗುಂಡಿ ಚಿತ್ರ ಸಿಕ್ಕಿದ್ದಿಷ್ಟೇ. ನೀರೇ ನೀರು...ಅದೇನು ರುದ್ರಭೀಕರ! ಭಾರೀ ಪ್ರಮಾಣದಲ್ಲಿ ನೀರು ಬಂದು ಕೊರಕಲಿಗೆ ಬೀಳುತ್ತಿತ್ತು. ಅಲ್ಲೇ ಪಕ್ಕದಲ್ಲಿದ್ದ ಅತ್ಯಂತ ಜಾರುತ್ತಿದ್ದ ಬಂಡೆಯ ಮೇಲೆ ನಿಂತು ಜಲಪಾತ ನೋಡುವ ಪ್ರಯತ್ನ ಮಾಡಿದೆವು. ಆದರೆ ನೀರು ಬಿದ್ದ ರಭಸಕ್ಕೆ ಏಳುತ್ತಿದ್ದ ಮಂಜಿನ ಹನಿಗಳು ಕಣ್ಣಿಗೆ ತುಂಬಿಕೊಳ್ಳುತ್ತಿದ್ದವು. ಗಾಳಿಯ ಅಬ್ಬರ ಬೇರೆ. ಅಲ್ಲೆಲ್ಲೂ ಕುಳಿತುಕೊಳ್ಳುವುದಕ್ಕೇ ಅವಕಾಶವಿರಲಿಲ್ಲ. ನಿಂತೇ ತಿನ್ನೋಣ ಎಂದರೆ ಮಳೆ ಬೇರೆ. ಹೋಗಲಿ ಫೋಟೋ ತೆಗೆಯೋಣ ಎಂದರೆ ಕ್ಯಾಮೆರಾ ಕೆಟ್ಟೇಹೋಗುವಷ್ಟು ಮಂಜು.
ಹೀಗೆ ಏನೋ ಒಂಥರಾ ಖುಷಿ, ಒಂಥರಾ ಬೇಸರದ ಮಿಶ್ರಣದಲ್ಲಿ ಮತ್ತೆ ಹಿಂದಕ್ಕೆ ತಿರುಗಿದೆವು.
ಒಂದೆಡೆ ಹಸಿವೆಯಲ್ಲಿ ಹೊಟ್ಟೆಹುಳ ಕೂಡಾ ಸತ್ತಿರಬಹುದೇನೋ ಎಂಬ ಅನುಮಾನ. ಇದಲ್ಲದೆ ನಮ್ಮ ಫೊಟೋಗ್ರಾಫರ್ ಭಟ್ರು ಎರಡು ಬಾರಿ ಜಾರಿ ಬಿದ್ದು ಪೆಟ್ಟೂ ಮಾಡಿಕೊಂಡರು. ಎಲ್ಲದರ ನಡುವೆ ಅಂತೂ ರಸ್ತೆಗೆ ಬಂದು ನಿಟ್ಟುಸಿರು ಬಿಟ್ಟೆವು. ತಿರುಗಿದರೆ ಭಟ್ಟರಿಲ್ಲ! ಹಿಂದೆ ಹುಡುಕುತ್ತಾ ಹೋದರೆ ದಾರಿ ತಪ್ಪಿ ಎಲ್ಲೋ ಹೋಗಿ, ಅಲ್ಲಿ ನಾಗರ ಹಾವೊಂದರ ದರ್ಶನ ಮಾಡಿ, ಮತ್ತೆ ಸರಿದಾರಿ ಹಿಡಿದ ಭಟ್ಟರು ಹೇಗೋ ಬರುತ್ತಿದ್ದರು. ಕೊನೆಯ ವರೆಗೂ ಅವರ ಮೇಲೆ ನಿಗಾ ಇರಿಸಿದ್ದ ನಾನು ಮತ್ತು ಬಂಟ್ವಾಳದ ಶಕ್ತಿಪ್ರಸಾದ್ ಕೊನೆ ಹಂತದಲ್ಲಿ ಸ್ವಲ್ಪ ವೇಗವಾಗಿ ಹೆಜ್ಜೆ ಹಾಕಿದ್ದು ಈ ಅವಾಂತರಕ್ಕೆ ಕಾರಣವಾಯ್ತು.
ಅಂತೂ ಬೈಕ್ ನಿಲ್ಲಿಸಿದ್ದ ಮನೆಗೆ ಬಂದಾಗ ಸಂಜೆ ನಾಲ್ಕು ಗಂಟೆ. ಪರೋಟ ಪೊಟ್ಟಣ ಬಿಚ್ಚಿ ನೋಡಿದರೆ ಗಸಿ ಆಗಲೇ ಪರಲೋಕ ವಾಸಿಯಾಗಿತ್ತು. ಕೆಲವರು ಹಸಿವೆ ತಾಳಲಾರದೆ ಹಾಗೆಯೇ ಹೊಟ್ಟೆಗಿಳಿಸಿದರು. ಕೆಲವರು ಖಾಲಿ ಪರೋಟವನ್ನೇ ಮುಕ್ಕಿದರು. ಅಂತೂ ಕುಂದಾಪುರದ ಹೊಟೇಲಲ್ಲಿ ದೋಸೆ ಹೊಡೆದಾಗ ಮಾತ್ರ ನಮ್ಮ ಪರಮಾತ್ಮ ತೃಪ್ತನಾದದ್ದು.
ಮತ್ತೆ ಭಗವಂತನಿಂದಲೂ ಸರಿಪಡಿಸಲಾಗದ ಉಡುಪಿ ಮಂಗಳೂರು ಹೈವೇಯಲ್ಲಿ ಸುರಿವ ಮಳೆಯಲ್ಲಿ ರಸ್ತೆ ಗುಂಡಿಗೆ ಬಿದ್ದು ಮುರಿದ ಬೈಕ್ ಇಂಡಿಕೇಟರ್ನಂತಹ ಪರಿಸ್ಥಿತಿ ನಮ್ಮದಾಯ್ತು. ಹೇಗೋ ಮನೆ ಸೇರಿದೆವು. ತಲೆಗೆ ಗಾಯ ಮಾಡಿಕೊಂಡು ಇನ್ನು ನಿಮ್ಮ ಜತೆ ಬರಲ್ಲ ಎಂದು ಪ್ರತಿಜ್ಞೆ ಮಾಡಿರುವ ಭಟ್ಟರು ನಾಲ್ಕು ದಿನ ರಜೆ ಮಾಡಬೇಕಾಯ್ತು.
ಅಂತೂ ‘ಘೋರ ಚಾರಣ’ ಎಂಬ ಪಟ್ಟಿಗೆ ಇದು ಸೇರಿದರೂ ಮಳೆ ಕಡಿಮೆಯಾದ ಬಳಿಕ ಮತ್ತೆ ಅರಸಿನಗುಂಡಿ ನೋಡಬೇಕು ಎಂಬ ಆಸೆ ಈಗ ಮನಸ್ಸಲ್ಲಿ ಗೂಡುಕಟ್ಟುತ್ತಿದೆ.
7 comments:
ವೇಣು,
'ಘೋರ' ಚಾರಣದ ವಿವರ ಓದಿ ರೋಮಾಂಚನವಾಯಿತು.
೨೦೦೩ರ ಅಗಸ್ಟ್ ತಿಂಗಳಲ್ಲಿ ನಾನೂ ಹೋಗಿದ್ದೆ. ಈ ಪರಿ ಮಳೆ ಇರಲಿಲ್ಲ ಅದರೆ ಜಿಗಣೆ ಮಾತ್ರ ರಾಶಿ ರಾಶಿ. ನಾನು ಮತ್ತು ಸಹೋದ್ಯೋಗಿ ಪ್ರಶಾಂತ್ ಇಬ್ಬರೇ ಹೋಗಿದ್ದೆವು. ಜಿಗಣೆ ದಾಳಿಗೆ ಸಾಕ್ಸ್ ಬಿಡಿ, ಪ್ಯಾಂಟ್ ರಕ್ತಸಿಕ್ತವಾಗಿತ್ತು. ಆ 'ಜಿರಾಫೆ' ಹೊಳ್ಳನ ಬೆನ್ನತ್ತುವುದು ಸಾಧಾರಣದ ಮಾತಲ್ಲ. ಅದನ್ನು ಮಾಡಿದ ನೀವೆಲ್ಲಾ ಗ್ರೇಟ್.
ಉತ್ತಮ ಬರಹ. ಓದುತ್ತ ನಾನೇ ಮತ್ತೊಂದು ಸಲ ಅರಶಿನಗುಂಡಿಯ ರೌದ್ರಾವತಾರವನ್ನು ಕಣ್ಣಾರೆ ನೋಡಿದಂತಾಯಿತು. ಥ್ಯಾಂಕ್ಸ್.
ನಾವು ಹೋಗ್ಬೇಕು ಅಂತ ಇದ್ವಿ.ಅಲ್ಲಿ ನಡಿಬೇಕು, ಜಿಗಣೆ ಕಾಟ ಅಂತನೇ ಹೋಗಿರಲಿಲ್ಲ. ಜೋಗಿಗುಂಡಿ ಫಾಲ್ಸ್ ಅಲ್ಲೂ ಇದೆ ಕಾಟ.
ವೇಣು,
ರಾಜೇಶ್ ಬರೆದ ಹಾಗೆ ಘೋರ ಚಾರಣವೇ ಅನ್ಸುತ್ತೆ... :)
ಅರಿಶಿನಗುಂಡಿಯ ಕವಲಿನವರೆಗೆ ಹೋಗಿದ್ವಿ ನಾವೊಂದ್ಸಲ ಕೊಡಚಾದ್ರಿಗೆ ಹೋದಾಗ. ಬೆಳಿಗ್ಗೆ ಬೇಗ ಕೊಡಚಾದ್ರಿಯಿಂದ ಇಳಿದ ನಾವು, ಅಲ್ಲೇ ಒಳಗೆ ಒಂದು ದಾರೀಲಿ ಹೋದ್ರೆ ಅರಶಿನಗುಂಡಿ ನೋಡ್ಬೋದು ಅಂತ ಸ್ಥಳೀಯ ಸಲಹೆಯ ಮೇರೆಗೆ ಇದ್ದಕ್ಕಿದ್ದಂಗೆ ಡೀವಿಯೇಶನ್ ತಗೊಂಡ್ವಿ.. ಆಮೇಲೆ ಅಷ್ಟೇ.. ಹೋಗೀ ಹೋಗೀ ಹೋಗೀ..... ಕೊನೇಗೆ ಎಲ್ಲ ಸುಸ್ತಾಗಿ ಊಟವೂ ಇಲ್ಲದೆ ಬರುವಾಗ ದಾರಿಯಲ್ಲಿ ಅರಿಶಿನಗುಂಡಿಗೆ ದಾರಿ ಅಂತ ಬರೆದಿದ್ದನ್ನಷ್ಟೆ ನೋಡಿಕೊಂಡು ಕೊಲ್ಲೂರು ದಾರಿ ಹಿಡಿದ್ವಿ ಸಂಜೆಗೆ. ನಾವು ಯಾರೂ ಕೊಲ್ಲೂರು ಅಭಯಾರಣ್ಯದಲ್ಲಿ ಹೋಗುವ ಆ ದಾರಿಯನ್ನ ನೋಡಿರಲಿಲ್ಲ..ರಸ್ತೆಯಲ್ಲಿ ಹೋಗದೆ ಒಳಹಾದಿಯಲ್ಲಿ ಹೋದರೆ ನಾಕಾರು ಕಿ.ಮೀ ಕಡಿಮೆ ಆಗುತ್ತೆ ಅಂತ ಹೋಗಿ..ಈ ಕತೆ ಆತು. ಇನ್ನೊಮ್ಮೆ ಹೋಗಲೇಬೇಕಂತ ಆಶೆಯಿದೆ. ಯಾವಾಗಲೋ ಗೊತ್ತಿಲ್ಲ.
ನಿಮ್ಮ ಚಾರಣ ಬರಹ ಆ ಆಶೆಯನ್ನು ತಿವಿದು ಎಬ್ಬಿಸಿದೆ.
ಸುರಿಯುತ್ತಿರುವ ಮಳೆಯಲ್ಲಿ ಜಿಗಣೆಗಳೊಂದಿಗೆ ಅರಿಶಿನಗುಂಡಿಗೆ ಹೋಗುವ ಮಜವೇ ಬೇರೆ!! :-)
ರಾಜೇಶ್,
ಜಿಗಣೆಯೊಂದಿಲ್ಲದಿದ್ದರೆ ಮಳೆಗಾಲಕ್ಕೆ ಅರಸಿನಗುಂಡಿ ಸೂಪರ್ ಜಾಗ. ಆದ್ರೆ ಹಾಗೆ ಜಿಗಣೆ ಕಚ್ಚಿಸಿಕೊಂಡ್ರೇ ಮಜ!
ಪ್ರವೀಣ್,
ಮಳೆಗಾಲದಲ್ಲಿ ಜಲಪಾತಗಳ ಅಬ್ಬರ ನೋಡಬೇಕಾದ್ರೆ ಜಿಗಣೆ ಕಚ್ಚಿಸಿಕೊಳ್ಳಲೇ ಬೇಕು:)
ಸಿಂಧು,
ನೀವ್ ಅರಸಿನಗುಂಡಿ ನಿಜಕ್ಕೂ ಮಿಸ್ ಮಾಡ್ಕಂಡ್ರಿ, ಮುಂದಿನ ಸಲ ಅದನ್ನು ನೋಡೋದಕ್ಕೇ ಒಂದು ಪ್ರವಾಸ ಹಾಕಿ:)
ಪರಿಸರಪ್ರೇಮಿ,
ನಿಮ್ಮ ಅಭಿಪ್ರಾಯವೇ ನಂದೂ ಕೂಡ:) ಬರುತ್ತಿರಿ
neevu nijavagilu lucky. intha oLLe jalapathagaLLannu noDi, adu joru maLeyalli hogi, bandu post maaDtiri. i am jealous!
ವೇಣುರವರೆ ಕೊಡಚಾದ್ರಿಗೆ ಎರಡು ಬಾರಿ ಚಾರಣ ಮಾಡಿದರೂ ಅರಿಸಿನಗುಂಡಿಜಲಪಾತಕ್ಕೆ ಹೋಗಲು ಸಾದ್ಯವಾಗಿಲ್ಲ ಈ ಮಳೆಗಾಲ ಮುಗಿದ ತಕ್ಷಣ ಅರಿಸಿನಗುಂಡಿ ಜಲಪಾತ-ಕೊಡಚಾದ್ರಿಗೆ ಹೋಗಲು ಪ್ಲಾನ್ ಮಾಡಿದ್ದೇನೆ, ಅಲ್ಲಿಗೆ ಹೋಗಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕಾ!ಮತ್ತೆ ಹೋಗುವ ಮಾರ್ಗದ ಬಗ್ಗೆ ಸ್ವಲ್ಪ್ಪ ಮಾಹಿತಿ ತಿಳಿಸಿ ನನ್ನ ಇ-ಮೇಲ್ mohangowda111@gmail.com ದನ್ಯವಾದಗಳು.
Post a Comment