27.2.08

ಕಪಾಟಿನಲ್ಲಿ ಇಣುಕಿತೊಂದು ಹಳೆಯಂಗಿ!

ನಿಮ್ಮ ಖಾಸಗೀ ರೂಮಿನಲ್ಲಿ ಜಾಗ ತಿನ್ನುವಂಥ ಕಪಾಟಿನಲ್ಲಿ ಏನೇನಿರಬಹುದು?
ನಿಮ್ಮ ಜೇಬಿನ ಸಾಮರ್ಥ್ಯಕ್ಕನುಗುಣವಾಗಿ ಒಂದಷ್ಟು ಜ್ಯುವೆಲ್ಲರಿ, ಅರ್ಧ ಡಜನ್ನು ಷೇರು ಸರ್ಟಿಫಿಕೇಟ್, ಶಾಲೆಯಿಂದ ತೊಡಗಿ ಮದುವೆ ಆನಿವರ್ಸರಿ, ಮಗುವಿನ ಮೊದಲ ಬರ್ತ್‌ಡೇ ವರೆಗೆ ತೆಗೆದ ಫೋಟೋ ಆಲ್ಬಂ... ಹ್ಯಾಂಗರ್‍ಗಳಲ್ಲಿ ನೇತಾಡುವ, ತುಂಬಿ ತುಳುಕುವ ಬಟ್ಟೆಬರೆ....
ಇವೆಲ್ಲದರ ನಡುವೆ ಒಂದಾದರೂ ಹಳೆಯ ಅಂಗಿ ಇಣುಕಿ ನೋಡೀತೇ? ನೆನಪನ್ನು ಹತ್ತಾರು ವರ್ಷ ಹಿಂದೆ ಕೊಂಡೊಯ್ಯುವ ಹಳೆಯ ಅಂಗಿ ಇದ್ದರೂ ಇರಬಹುದೇನೋ!
ಹಳೆಯ ಅಂಗಿ ತರುವ ನೆನಪು ಆಪ್ಯಾಯಮಾನವಾದ್ದು. ಹೊಸ ಅಂಗಿ ಗರಿಗರಿಯಾಗಿ ಹಾಕುವುದು ಒಂದು ರೀತಿಯ ಹೆಮ್ಮೆ, ಉಳಿದವರ ನಡುವೆ ನ್ಯೂ ಪಿಂಚ್ ಎಂದು ಚಿವುಟಿಸಿಕೊಳ್ಳುವ ಅವಕಾಶ ಮಾಡಿಕೊಡಬಹುದು. ಆದರೆ ಹಳೆಯ ಅಂಗಿ ಹಾಗಲ್ಲ, ನಮ್ಮನ್ನು ಉಳಿದವರ ಜತೆ ಹೋಲಿಸದೆ ನಮ್ಮನ್ನು ನಮ್ಮಷ್ಟಕ್ಕೇ ಅಪ್ಪಿ ಹಿಡಿದುಕೊಳ್ಳುತ್ತದೆ ಹಳೆ ದೋಸ್ತನಂತೆ. ಕಾಲಚಕ್ರದಲ್ಲಿ ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳನ್ನೂ ಗೆಳೆಯನಂತೇ ಮೌನವಾಗಿ ಹೇಳಿಬಿಡುತ್ತದೆ! ಇಲ್ಲಿ ಗರಿಗರಿ ಕಾಣಿಸುವ ಹಂಬಲ ಇಲ್ಲ, ಕೂಲ್ ಆಗಿ ಹಳೆಯಂಗಿ ಧರಿಸಿ ನಮ್ಮಷ್ಟಕ್ಕೇ ನಾವಿರಬಹುದು.
ಅಂದಿನ ಕಾಲಕ್ಕೆ ಫ್ಯಾಶನೆಬಲ್ ಎಂದು ನಾವು ಪ್ರೀತಿಯಿಂದ ಕೊಂಡುಕೊಂಡ ಅಂಗಿ, ಮೊದಲ ಸ್ಯಾಲರಿಯಲ್ಲಿ ಖರೀದಿಸಿದ ಅಂಗಿ ಹೀಗೆ ಏನೆಲ್ಲಾ ಕಾರಣಗಳೊಂದಿಗೆ ನಿಮ್ಮ ಪತ್ನಿಯ ಹಾಗೆಯೇ ನಿಮ್ಮನ್ನು ಬಿಟ್ಟಿರಲಾರದ ಅಂಗಿ ಈ‌ಗ ಕಾಲರ್‍ ಹರಿದುಕೊಂಡೋ, ಚಹಾದ ಕಲೆ ಹಿಡಿದೋ ಗೋದ್ರೆಜಿನ ಮೂಲೆಯಲ್ಲಿ ಮುದುಡಿಕೊಂಡಿರಬಹುದು.
ಈಗಲೂ ನೆನಪಾದಾಗ ಒಮ್ಮೊಮ್ಮೆ ಹಳೆಯ ಅಂಗಿಯನ್ನು ಧರಿಸಿ ಹೋಗಿ ಬಿಡೋಣ ಎಂದು ಧರಿಸಿದರೆ, ಈ ಅಂಗಿಗಳು ನಿಮ್ಮ ದೇಹಕ್ಕೆ ಅಪ್ಪಿ ಹಿಡಿಯಲು ಸೆಕೆಂಡುಗಳು ಸಾಕು. ಯಾಕೆಂದರೆ ನೀವು ಅಂಗಿಗೆ ಸದಾ ಪರಿಚಿತ, ಅಷ್ಟೇ ಸಲುಗೆ! ಹೊಸ ಅಂಗಿಯಂತೆ ದೇಹಕ್ಕೆ ಒಗ್ಗಿಕೊಳ್ಳಲು ತಿಂಗಳು ಬೇಕಿಲ್ಲ.
ಏನೇ ಇರಲಿ ಈಗ ಹಳೆಯದಾದರೂ ನಮ್ಮ ಆ ಅಂಗಿ ಹತ್ತಾರು ವರ್ಷಗಳ ಹಿಂದೆ ಬೆಲೆ ಬಾಳುವಂಥದ್ದೇ. ನಿಮ್ಮ ಗೆಳತಿ ನಿಮ್ಮ ಬರ್ತ್‌ಡೇಗೆ ಕೊಟ್ಟದ್ದಿರಬಹುದು, ಹಾಸ್ಟೆಲ್ ಬದುಕಲ್ಲಿ ಏಕಾಂಗಿತನದಲ್ಲಿ ಇರುವಾಗ ತಾಯಿ ಕಳುಹಿಸಿಕೊಟ್ಟದ್ದಿರಬಹುದು. ಯಾವುದೋ ದೂರದ ಊರಿಗೆ ಪ್ರವಾಸ ಹೋದಾಗ ಆ ನೆನಪಿಗೆಂದು ಕೊಂಡುಕೊಂಡದ್ದಿರಬಹುದು...ಗೆಳತಿ ಆದರ, ತಾಯಿಯ ಪ್ರೀತಿ, ನಮ್ಮ ನೆನಪಿನ ಹಂಗು ಇವೆಲ್ಲದರ ನಡುವೆ ಅಂಗಿ ಹಳೆಯದಾದಷ್ಟೂ ಅದರ ಮೌಲ್ಯ ಬೆಲೆ ಕಟ್ಟದಷ್ಟು ಬೆಳೆದು ಬಿಡುತ್ತದೆ! ಕಾಲಾಂತರದಲ್ಲಿ ಈ ಅಂಗಿಯೂ ನಮ್ಮ ಹಾಗೆಯೇ, ಒಂದಲ್ಲ ಒಂದು ದಿನ ಹರಿದು ಚಿಂದಿಯಾಗಿ ಹೋಗುವಂಥದ್ದೇ. ಆದರೂ ಬಹಳಷ್ಟು ದಿನ ಈ ಅಂಗಿಯ ಹಿಂದಿನ ಭಾವನೆ ಗುರುತಿಸುವವರನ್ನು ಹಳೆಯಂಗಿ ಕಾಡದೆ ಬಿಡದು.

6 comments:

Sushrutha Dodderi said...

'ಹಳೆಯ ಉಡುಪೆಂಬ ಮಧುರ ಸಖ್ಯ' ಅಂತಾನೇನೋ ಜಯಂತ ಕಾಯ್ಕಿಣಿ ಬರ್ದಿದ್ರು ಒಮ್ಮೆ.. ನೆನ್ಪಾಯ್ತು ಅದು..

Srikanth - ಶ್ರೀಕಾಂತ said...

ಲೇಖನ, ಲೇಖನದ ವಿಷಯ ತುಂಬ ಚೆನ್ನಾಗಿದೆ... ಹಳೆಯ ಅಂಗಿ ಹರಿದುಹೋಗದೇ ಹೊಸ ಅಂಗಿಯಂತಿದ್ದರೂ ಅದನ್ನು ಧರಿಸಲು ಇನ್ನಷ್ಟು ಖುಷಿ!

ಸುಪ್ತದೀಪ್ತಿ suptadeepti said...

ಹಳೆಯ ಅಂಗಿಯೊಂದರಷ್ಟೇ ಆತ್ಮೀಯವಾಗಿತ್ತು ಕಣೋ.

ಮನಸ್ವಿನಿ said...

ಜಯಂತ್ ಕಾಯ್ಕಿಣಿಯವರ ’ಹಳೇ ಉಡುಪೆಂಬ ನಿತ್ಯ ಸಖ್ಯ’ ನೆನಪಾಯಿತು. ಚೆನ್ನಾಗಿದೆ ಬರಹ

VENU VINOD said...

ಸುಶ್ರುತ, ನಾನು ಕಾಯ್ಕಿಣಿಯವರ ಆ ಲೇಖನ ಓದಿಲ್ಲ, ಎಲ್ಲಿ ಸಿಗುತ್ತೋ ನೋಡೋಣ.
ಶ್ರೀಕಾಂತ,ನನ್ನ ಬ್ಲಾಗ್‌ಗೆ ಸ್ವಾಗತ.ಲೇಖನ ಮೆಚ್ಚಿಕೊಂಡದ್ದಕ್ಕೆ ಥ್ಯಾಂಕ್ಸ್
ಸುಪ್ತದೀಪ್ತಿ, ಮನಸ್ವಿನಿಯವರಿಗೆ ವಂದನೆ :)

ಚಿತ್ರಾ ಸಂತೋಷ್ said...

ಹಳೆ ಅಂಗಿಯಾದ್ರೂ ಎಷ್ಟು ಅಪ್ಯಾಯಮಾನವಾಗಿಬಿಡುತ್ತೆ ಅಲ್ವಾ?ಚೆನ್ನಾಗಿ ಬರೆದಿದ್ರಿ

Related Posts Plugin for WordPress, Blogger...