4.3.08

ಒಂದು ವಿಚಿತ್ರ ಸ್ವಗತ

ಹ್ಮ್ ನಾನೂ ಪ್ರವಾಸ ಹೊರಟಿದ್ದೇನೆ..

ಸ್ವರ್ಗದಂತಹ ಊರಿಗೆ ಕಾತರದಿಂದ ಹೊರಟಿದ್ದೇನೆ..

ಊರಿನ ನಗು ಅಳುಗಳನ್ನೆಲ್ಲೇ ಅಲ್ಲೇ ಕಟ್ಟಿಟ್ಟು

ಹೊಸ ನಗುವನ್ನಷ್ಟೇ ಸ್ವರ್ಗದಂತಹ ಊರಿನಲ್ಲಿ ಪಡೆಯೋಣ ಎಂಬ ಹಂಬಲದಲ್ಲಿ ಪ್ರವಾಸ ಹೊರಟಿದ್ದೇನೆ..

ಮನೆಯವಳು, ಮಕ್ಕಳು ಬಂದರೆ, ಅದು ತೆಗೆಯೋಣ, ಇದು ತೆಗೆಯೋಣ ಎಂದು ಪ್ರವಾಸದ ಕುಲಗೆಡಿಸುವುದು ಬೇಡ ಎಂದು ಮನೆಯಲ್ಲೇ ಬಿಟ್ಟಿದ್ದೇನೆ...

ಬಹಳ ದೂರದ ಪ್ರಯಾಣವದು ಹೊಸ ಊರು ಸ್ವರ್ಗದಂತಹ ಊರು ಹೇಗಿದೆಯೋ ಏನೋ ದೇವರೇ ಬಲ್ಲ...

ಆದರೂ ಪತ್ರಿಕೆಯಲ್ಲಿ ಸ್ವರ್ಗದಂತಹ ಊರು ಎಂದು ಬರೆದಿದ್ದಾರೆ ಖಂಡಿತಾ ಒಳ್ಳೆಯದಿರಬಹುದು..

ನಾನು ಹೋಗುವ ರೈಲು ವಿಶೇಷ ರೈಲು...

ಸ್ವರ್ಗದ ಊರಿಗೆ ಹೋಗುವ ರೈಲಾದ್ದರಿಂದ ಇಲ್ಲಿ ಎಲ್ಲ ಕೊಳಕು, ಕಷ್ಟಗಳಿಗೆ

ಮತ್ತು ಪ್ರಯಾಣಿಕರ ನಡುವೆ ಒಂದು ಪರಿಮಳ ಸೂಸುವ ಕರ್ಟನ್ ಇದೆ!

ಕಷ್ಟದಲ್ಲಿದ್ದು ಬೇಗುದಿಗಳಲ್ಲಿರುವವರು, ಕಷ್ಟಗಳನ್ನು ಹಣವೊಂದರಿಂದಲೇ

ಪರಿಹರಿಸಬಲ್ಲ ಮಾಂತ್ರಿಕರು ಈ ವಿಶೇಷ ರೈಲಲ್ಲಿದ್ದಾರೆ

ಈ ಕರ್ಟನ್ ಸರಿಸಿ ನೋಡುವುದಕ್ಕೆ ಬಿಡದಂತೆ ಭಟನೊಬ್ಬ ರೈಲಿನ ಪ್ರತೀ

ಕಂಪಾರ್ಟಮೆಂಟಲ್ಲೂ ನೆಟ್ಟ ಭಂಗಿಯಲ್ಲಿ ಕುಳಿತಿರುತ್ತಾನೆ

ರಾತ್ರಿಯಾಗಿದೆ, ಥತ್‌ ಏನು ಸೊಳ್ಳೆ ಕಚ್ಚುತ್ತಿವೆ ದರಿದ್ರದ್ದು...

ಮಕ್ಕಳು ಚೀರಿ ಅಳುತ್ತಿರುವಂತೆ ಕೇಳುತ್ತಿದೆ ಕೂಡಾ..

ಎಲ್ಲಿದ್ದೇವೆ ನಾವೀಗ ಎಂದು ಸಹಪ್ರಯಾಣಿಕ ಕಿರಿಚಿದ್ದಾನೆ..

‘ಸ್ವರ್ಗದ ಊರಿನ ಹತ್ತಿರವೇ ಇದ್ದೇವೆ, ಇನ್ನೇನು ಅರ್ಧಗಂಟೆಯ ಹಾದಿ,

ಅದರ ಕೆಳಗೇ ಇರುವ ಸ್ಲಂ ನಡುವೆ ರೈಲು

ಹಾದು ಹೋಗುತ್ತಿದೆ, ವ್ಯಥೆ ಪಡದಿರಿ, ಸ್ವರ್ಗದ ಊರು ಹೀಗಿಲ್ಲ’-ಕಾವಲು ಭಟ ಹೀಗೇನೋ ಒದರಿದ ನೆನಪು

ಸ್ವರ್ಗದೂರಿನ ಬಳಿಯೂ ಸ್ಲಮ್ಮೇ ಎಂದು ಪಕ್ಕದ

ಪ್ರಯಾಣಿಕ ಪಕಪಕನೆ ನಗುತ್ತಿದ್ದಾನೆ ಪಕ್ಕಾ ಹುಚ್ಚನಂತೆ

ನಾನೂ ಈಗ ಹುಚ್ಚನಾಗುವಂತೆ ಕಾಣುತ್ತಿದೆ,

ಇಲ್ಲವಾದರೆ ಸ್ವರ್ಗವೆಂದು ನಂಬಿ ಮತ್ತೆ ಸ್ಲಮ್ಮಿರುವ ಊರಿಗೆ

ಯಾಕೆ ಬರಬೇಕಿತ್ತು?

ಹುಹ್! ಒಮ್ಮೆ ಆ ಸ್ವರ್ಗವೋ ನರಕವೋ ತಲಪಲಿ

ಹಿಂದಿರುಗುವ ರೈಲಿಗೇರಿ ಮರಳಿ ಬಿಡೋಣ....

7 comments:

ರಾಜೇಶ್ ನಾಯ್ಕ said...

????!!!!
ಶೀರ್ಷಿಕೆ ಸರಿಯಾಗಿದೆ ಬಿಡಿ.
????!!!!

ಶಾಂತಲಾ ಭಂಡಿ (ಸನ್ನಿಧಿ) said...

ಸ್ವಗತ ಚೆನ್ನಾಗಿದೆ.
ಬರೆಯುತ್ತಿರಿ, ಓದುತ್ತಿರುತ್ತೇವೆ.

ಸುಪ್ತದೀಪ್ತಿ suptadeepti said...

ಸ್ವರ್ಗವೆ? ಸ್ವರ್ಗದಂಥ ಊರೆ? ಅಂತೂ ಕ್ಷೇಮವಾಗಿ ತಲುಪಿ, ಮತ್ತೆ ಕ್ಷೇಮವಾಗಿ ಹಿಂತಿರುಗಿದ್ದೀರಿ ತಾನೆ?

Smadurk Infotech said...

Nieevu bareva reethi tumba tumba muddaagide..padagala jodane adbhutavaagide…

Nanna putaani blog

www.navilagari.wordpress.com

idakke nimma blaag rolnalli swalpa jaaga kodi:)

Nimma somu

ಮಹೇಶ್ ಪಿ said...

'ವಿಚಿತ್ರ ಸ್ವಗತ' ನಿಜಕ್ಕೂ ಅದ್ಭುತ, ಇದರಲ್ಲಿ ವಿಡಂಬನಾತ್ಮಕ ಶೈಲಿಯಿದೆ, ಇತ್ತೀಚೆಗೆ ಹಳ್ಳಿಯ ಯುವಜನತೆ ಬೆಂಗಳೂರಿನಂತಹ ನಗರಗಳನ್ನು ಸ್ವರ್ಗ ಎಂದು ತಪ್ಪು ತಿಳಿದಿದ್ದಾರೆ. ಆದರೆ ಅಲ್ಲಿನ ವಾಸ್ತವತೆಯನ್ನು ಕಾವ್ಯ ರೂಪದಲ್ಲಿ ಚಿತ್ರಿಸಿದ್ದೀರಿ. ಧನ್ಯವಾದಗಳು.

Sushrutha Dodderi said...

ವೇಣು,

ನಮಸ್ಕಾರ. ಹೇಗಿದ್ದೀರಿ?

ನಿಮ್ಗೂ ಗೊತ್ತಿರೋ ಹಾಗೆ, ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು


ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

sunaath said...

ಸ್ವಗತ ಚೆನ್ನಾಗಿದೆ.

Related Posts Plugin for WordPress, Blogger...