24.4.08

ಅಮ್ಮ ಮಿಸ್ಸಾದ ಫಜೀತಿ

ಹಳ್ಳಿಯಿಂದ ಪಟ್ಟಣಕ್ಕೆ ಬಂದು ಕೆಲವರ್ಷಗಳಾದರೂ ಅಮ್ಮ ಇಂದಿಗೂ ಪೇಟೆಗೆ ಹೊಂದಿಕೊಂಡವಳಲ್ಲ ಎಂದೇ ಹೇಳಬಹುದು....

ಮೊನ್ನೆ ಊರಲ್ಲಿ ಅಜ್ಜಿಯ ತಿಥಿಗೆಂದು ಅಮ್ಮ ಹೊರಟಳು. ಕಚೇರಿ ಕೆಲಸದೊತ್ತಡದ(ಯಾವಾಗಲೂ ಅದೇ ಕಾರಣ) ಜತೆಗೆ ಜ್ವರವೂ ಇದ್ದ ಕಾರಣ ನನಗೆ ಹೋಗಲಾಗುವುದಿಲ್ಲ ಎಂದು ನಾನು ಹೊರಡಲು ನಿರಾಕರಿಸಿದೆ.
ಅಜ್ಜಿಮನೆಯಲ್ಲಿ ಏನಾದರೂ ಕಾರ್ಯಕ್ರಮ ನಡೆದಾಗ ನಾನು ಹೋಗಲಾಗದಿದ್ದರೆ ಮಂಗಳೂರಿಂದ ಸುಮಾರು ೩೫ ಕಿ.ಮೀ ದೂರದ ಕಾಸರಗೋಡು ಜಿಲ್ಲೆಯ ಹೊಸಂಗಡಿಯಲ್ಲಿರುವ ಚಿಕ್ಕಪ್ಪ ಚಿಕ್ಕಮ್ಮನೊಂದಿಗೆ ಅವರ ಆಮ್ನಿಯಲ್ಲಿ ಅಮ್ಮ ಅಜ್ಜಿಯ ಮನೆಗೆ ಹೋಗುವುದು, ಅಲ್ಲಿ ಎರಡು ದಿನ ಕಳೆದು, ಚಿಕ್ಕಮ್ಮನೊಂದಿಗೆ ಮರಳುವುದು, ಅವರು ಅಮ್ಮನನ್ನು ಹೊಸಂಗಡಿಯಿಂದ ಮಂಗಳೂರು ಎಕ್ಸ್‌ಪ್ರೆಸ್ ಬಸ್ಸಿಗೆ ಹತ್ತಿಸುವುದು ಅನೇಕ ಬಾರಿ ನಡೆದ ಪ್ರಸಂಗಗಳು. ಅಲ್ಲಿ ಯಾವ ಬಸ್ಸಿಗೆ ಅಮ್ಮ ಏರಿದ್ದಾರೆ ಎಂಬುದನ್ನು ಚಿಕ್ಕಮ್ಮ ನನಗೆ ಫೋನಲ್ಲಿ ತಿಳಿಸಿದರೆ, ಸಮಯಕ್ಕೆ ಸರಿಯಾಗಿ ನಾನು ಮಂಗಳೂರು ಬಸ್‌ ನಿಲ್ದಾಣಕ್ಕೆ ಹೋಗಿ ಆ ಬಸ್ಸಿಂದ ಅಮ್ಮ ಇಳಿದ ಬಳಿಕ ನಮ್ಮ ಮನೆ ಸುರತ್ಕಲ್‌ನತ್ತ ಹೋಗುವ ಬಸ್‌ಗೆ ಹತ್ತಿಸಿದರಾಯಿತು, ಅವಳು ಸ್ಟಾಪಲ್ಲಿ ಇಳಿಯುತ್ತಾಳೆ.
ಮನೆ ಸ್ಟಾಪಲ್ಲಿ ಇಳಿಯಲು ಅವಳಿಗೆ ಕಷ್ಟವಾಗದು, ಆದರೆ ಮಂಗಳೂರಿನ ಜನಜಂಗುಳಿಯಲ್ಲಿ ಸುರತ್ಕಲ್ ಬಸ್ ಹಿಡಿಯುವ ಕೆಲಸ ನನ್ನಿಂದಾಗದು ಎಂದು ಯಾವಾಗಲೂ ಹೇಳುತ್ತಿರುತ್ತಾಳೆ.
ಹಾಗೆಯೇ ಮೊನ್ನೆಯೂ ಚಿಕ್ಕಪ್ಪ ಫೋನ್‌ ಮಾಡಿ ಸಂಜೆ ೫-೧೫ಕ್ಕೆ ಹೊಸಂಗಡಿಯಿಂದ ವೈಶಾಖ್ ಬಸ್ಸಲ್ಲಿ ಅಮ್ಮ ಹೊರಟಿದ್ದಾರೆ ಎಂದು ಹೇಳಿದರು. ಹೊಸಂಗಡಿಯಿಂದ ಮುಕ್ಕಾಲು ಗಂಟೆ ದಾರಿ ಮಂಗಳೂರಿಗೆ. ಹಾಗೆ ೬ ಗಂಟೆಗೆ ಹೊರಟು ಮಂಗಳೂರು ಸರ್ವಿಸ್ ಬಸ್ ನಿಲ್ದಾಣಕ್ಕೆ ಹೋದೆ, ಆಗಲೇ ಒಂದು ವೈಶಾಖ್ ಬಸ್ ನಿಂತಿತ್ತು, ಕಂಡಕ್ಟರ್‌ಗೆ ಕೇಳಿದರೆ ಅದು ಬಂದು ಆಗಲೇ ೧೦ ನಿಮಿಷ ಕಳೆದಿದೆ. ಅಷ್ಟು ಬೇಗ ಬಂದಿರಲು ಸಾಧ್ಯವಿಲ್ಲ, ಹೊಸಂಗಡಿಯಲ್ಲಿ ೫.೧೫ಕ್ಕೆ ಪಾಸಾಗುವ ಇನ್ನೊಂದು ವೈಶಾಖ್ ಇದೆಯೇ ಕೇಳಿದೆ, ಹೌದು, ಅದು ಇನ್ನೊಂದೈದು ನಿಮಿಷದಲ್ಲಿ ಬರಬಹುದು ಎಂದ.
ಬಸ್‌ಗಳ ಬೋರ್ಡ್ ನೋಡುತ್ತಾ ನಿಂತಿದ್ದೆ, ಎರಡನೇ ವೈಶಾಖ್ ಕೂಡಾ ಬಂತು, ಆದರೆ ಅದರಲ್ಲಿ ಅಮ್ಮ ಇಲ್ಲ!
ಮತ್ತೆ ಚಿಕ್ಕಪ್ಪನಿಗೆ ಫೋನ್ ಮಾಡಿ ಅಮ್ಮ ಬಂದಿಲ್ಲ ಎಂದೆ.
ಈಗ ಗೊಂದಲಕ್ಕೊಳಗಾಗುವುದು ಚಿಕ್ಕಪ್ಪನ ಸರದಿ.. ನಾನು ಹತ್ತಿಸಿದ ಬಸ್‌ ವೈಶಾಖವೋ ವೈಶಾಲಿಯೋ ಎಂದು ಅವರಿಗೂ ಕನ್‌ಫ್ಯೂಶನ್. ನೋಡೋಣ ಎಂದು ಮತ್ತಷ್ಟು ಹೊತ್ತು ಕಾದೆ, ಇನ್ನೋರ್ವ ಬಸ್ ಕಂಡಕ್ಟರ್‌ನಲ್ಲಿ ವೈಶಾಲಿ ಬಸ್ ಬಂತೇ ಕೇಳಿದೆ, ಅದು ಬಂದೂ ಆಗಿದೆ ಮರಳಿ ಕಾಸರಗೋಡಿನತ್ತ ಹೋಗಿಯೂ ಆಗಿದೆ ಎಂದ. ಮತ್ತೆ ವಿಚಾರಿಸಿದೆ, ಇನ್ನೊಂದು ವೈಶಾಲಿ ಮಂಗಳೂರಿನ ಒಳಕ್ಕೆ ಬರುವುದೇ ಇಲ್ಲ, ಹೊರಗಿನ ಕಂಕನಾಡಿ ಬಸ್ಟಾಂಡಿಗೆ ಬರುತ್ತೆ ಎಂಬ ಹೆಚ್ಚು‘ವರಿ’ ಮಾಹಿತಿಯನ್ನೂ ಕೊಟ್ಟ.
ಬೈಕೇರಿ ಕಂಕನಾಡಿಗೆ ಓಡಿಸಿ ಅಲ್ಲೂ ಬಸ್ಟಾಂಡ್‌ಗೆ ಹೋದರೆ ವೈಶಾಲಿಯಿಲ್ಲ, ಅಮ್ಮನೂ ಕಾಣುವುದಿಲ್ಲ...ಆಗಲೇ ಕತ್ತಲೆ ಕವಿದಿತ್ತು ಮೋಡ ಬೇರೆ ಆವರಿಸಿತ್ತು.
ಅಮ್ಮನಿಗೆ ನನ್ನ ಮೊಬೈಲ್ ನಂಬರ್‍ ಅಂತೂ ನೆನಪಿಲ್ಲ, ಏನ್ ಮಾಡೋದು ಎಂದೆಲ್ಲಾ ಚಿಂತಿಸುತ್ತಿದ್ದೆ. ಪಕ್ಕದ ಮನೆಯ ಹುಡುಗ ತೇಜಸ್ವಿಗೆ ಫೋನ್ ಮಾಡಿ ಎಲ್ಲಾದರೂ ಅಮ್ಮ ಸ್ವತ: ಬಸ್ಸೇರಿ ಬಂದರೇ ಎಂದು ವಿಚಾರಿಸಿದರೆ ಬಂದಿಲ್ಲ ಎಂಬ ಉತ್ತರ.
ಈಗ ನಿಜಕ್ಕೂ ನನ್ನ ಬೆವರಿಳಿಯಲು ಶುರುವಾಯ್ತು. ಗೊಂದಲದಲ್ಲಿ ಅಮ್ಮನ ಬೆದರುಕಂಗಳು ನನ್ನ ಕಣ್ಣಮುಂದೆ. ಮತ್ತೆ ಸರ್ವಿಸ್ ಬಸ್ ನಿಲ್ದಾಣಕ್ಕೆ ಬಂದೆ, ಅಲ್ಲೂ ಅಮ್ಮನಿಲ್ಲ.
ಪೊಲೀಸರಿಗೆ ದೂರು ಕೊಡೋದೇ, ಗೆಳೆಯರನ್ನು ಕರೆಯುವುದೇ, ಏನ್‌ ಮಾಡೋದು? ತಲೆ ಗೋಜಲು ಗೋಜಲು.
ದಾರಿ ಕಾಣದವರನ್ನು ಮತ್ತಷ್ಟು ದಾರಿ ತಪ್ಪಿಸಿ ಕೀಳುವವರು ನೆನಪಾದರು...ದಾರಿ ತಪ್ಪಿ ಯಾವ್ಯಾವದೋ ಬಸ್ ಏರಿ ಕಂಗಾಲಾದವರು ಸ್ಮರಣೆಗೆ ಬಂದರು...ಅವರಂತೆಯೇ ಅಮ್ಮನೂ ಹೋದದ್ದಿರಬಹುದೇ?
ಅನ್ಯಮನಸ್ಕನಾಗಿ ಬಸ್‌ ನಿಲ್ದಾಣದ ತುಕ್ಕು ಹಿಡಿದ ಕಂಬಕ್ಕೊರಗಿ ನಿಂತಿದ್ದೆ ಮೊಬೈಲ್ ಕೂಗಿತು. ಪಕ್ಕದ ಮನೆ ತೇಜಸ್ವಿಯ ಸ್ವರ...‘ಅಮ್ಮ ಬಂದಿದ್ದಾರೆ, ಈಗಷ್ಟೇ ಮಾತಾಡಿ ಬಂದೆ’.
ಥ್ಯಾಂಕ್ಸ್ ಹೇಳಿ, ಮನೆಗೆ ಫೋನಾಯಿಸಿದೆ, ಅಮ್ಮ ರಿಸೀವ್ ಮಾಡಿದಳು. ‘ನಾನು ಬಂದು ನಿನ್ನ ಹುಡುಕಿದೆ, ನೀ ಕಾಣ್ಲಿಲ್ಲ...ಸುರತ್ಕಲ್‌ ಬಸ್ ಗೊತ್ತಾತು, ಹಾಗೆ ಬಂದು ಬಿಟ್ಟೆ..’
ಏನು ಉತ್ತರಿಸುವುದು ಗೊತ್ತಾಗಲಿಲ್ಲ...ಹಾಗೇ ಫೋನಿಟ್ಟು ಆಫೀಸಿಗೆ ಗಾಡಿ ಓಡಿಸಿದೆ.

18.4.08

ಗುಬ್ಬಿ ಇಲ್ಲದ ಗೂಡು

ಈಚೆಗೆ ಎಲ್ಲವೂ ಸರಿ ಇಲ್ಲ
ಮನೆಮೂಲೆಯ
ಕುಂಡದ ಗಿಡ ಮಂಕು ಹಿಡಿದು
ಕೂತುಬಿಟ್ಟಿದೆ, ಹೂ ಅರಳುವುದೇ ಇಲ್ಲ
ಮನದ ವೇದಿಕೆಯಲ್ಲಿ
ನಿನ್ನ ಬಿಂಬಗಳು ಈಚೆಗೆ ನರ್ತಿಸುವುದೂ ಇಲ್ಲ

ಒಡಲಾಳದಲ್ಲಿ ಶಬ್ದಗಳು
ಕವಿತೆಯಾಗಲು ಹಿಂಜರಿಯುತ್ತಿವೆ
ಗೋಡೆಗಡಿಯಾರದ ಎಡೆಯಲ್ಲಿ
ಗೂಡುಕಟ್ಟಿದ್ದ ಗುಬ್ಬಿ
ಹಾರಿಹೋಗಿ ತಿಂಗಳುಗಳೆ ಕಳೆದಿವೆ
ಈಗಂತೂ ಆ ಗೂಡಲ್ಲಿ ಜಿರಲೆಗಳ ಹರಿದಾಟ

ಅಬ್ಬರದಲ್ಲಿ ಹರಿವ ತೊರೆಯಲ್ಲಿ
ಚಪ್ಪಲಿ ಕಳೆದು ಹೋದಾ‌ಗ
ದಿಗಿಲಿನಿಂದ ನೋಡುವ ಹುಡುಗ ನಾನಾಗಿದ್ದೇನೆ
ಥತ್...ಈಚೆಗೆ ಯಾವುದೂ ಸರಿ ಎನಿಸುವುದಿಲ್ಲ...

ಮೇಲ್ನೋಟಕ್ಕೆ ಮೌನದ
ಮೇಲೊಂದು ಹುಸಿನಗುವಿನ ತೆರೆ ಬಿದ್ದಿದೆ
ಚಿಂತೆಯ ಕಾರ್ಮೋಡ ಕರಗಿಸಲು
ಉತ್ಸಾಹದ ಬಿರುಗಾಳಿ
ವೃಥಾ ಯತ್ನಿಸುತ್ತಿದೆ
ಪ್ರಯತ್ನಗಳು ಕೈಗೂಡುತ್ತಿಲ್ಲ

ನೀನು ಇಲ್ಲವಾದರೂ ಪರವಾಗಿಲ್ಲ
ಕುಂಡದ ಗಿಡ ಹೂಬಿಟ್ಟರೆ,
ಗುಬ್ಬಿ ಗೂಡಿಗೆ ಮರಳಿದರೆ
ಶಬ್ದಗಳು ಮತ್ತೆ ಕವಿತೆಗಳಾದರೆ ಸಾಕು
ನೀನೆ ಬೇಕೆಂದಿಲ್ಲ....

10.4.08

ಉಗ್ರಗಾಮಿಗಳು

ತಿದಿಯೊತ್ತುವಾಗ ಭಗ್ಗನೇ
ಉರಿದೇಳುವ ಬೆಂಕಿಚೆಂಡು
ಗುರಿ ಉಡಾಯಿಸಲು
ನುಗ್ಗುವ ಕ್ಷಿಪಣಿಯಂತೆ
ಬೆದರಿಸುತ್ತಾರೆ ಭಯೋತ್ಪಾದಕರು
ಸದಾ ಸಿಡಿಗುಂಡು
ಮುಂದಿರುವುದೇನು?
ಯಾಕೆ ಈ ಪಾಪ?
ಪಾಪ, ಮಗುವಲ್ಲವೇ ಬಿಟ್ಟುಬಿಡೋಣ..
ಊಹೂಂ....
ಯಾವುದೇ ಪರಿವೆ ಇಲ್ಲ
ಎಕೆ ೪೭ರ ಕುದುರೆ ಮೀಟಿ
ಆರ್ಭಟಿಸುವುದೇ ಹವ್ಯಾಸ
ಆಜ್ಞಾಧಾರಕ ರೋಬೋಟ್‌ಗಳಂತೆ
ಜೀನುಕಟ್ಟಿದ ಕುದುರೆಗಳಂತೆ
ಸ್ವರ್ಗ ಕೆಡವಿ ಸದಾ ರೌರವ ನರಕ
ಸೃಷ್ಟಿಯೇ ಗುರಿ
ಅರಳಿದ ಸುಂದರ ಹೂಗಳ ಸಂಹಾರ
ಕಾರ್ಯಕ್ಕೆ ಇವರದೇ ಪೌರೋಹಿತ್ಯ

2.4.08

ತಿಂದಿರಾ ಪೊಳಲಿ ಕಲ್ಲಂಗಡಿ?(watermelon of polali)

ಮಂಗಳೂರಿಗೆ ಬಂದವರು ಹೋಗಲೇಬೇಕಾದ ಕೆಲ ಸ್ಥಳಗಳು ಅನೇಕ ಇವೆ. ಮಂಗಳೂರಿನಿಂದ ಸುಮಾರು ೧೨ ಕಿ.ಮೀ ದೂರದಲ್ಲಿರುವ ಪೊಳಲಿಯ ಶ್ರೀ ರಾಜರಾಜೇಶ್ವರಿಯ ದೇವಳ ಅಂತಹ ಸ್ಥಳಗಳಲ್ಲೊಂದು. ಈ ದೇವಳದಲ್ಲೊಂದು ವಿಶೇಷ ಇದೆ.
ಏನ್ ಗೊತ್ತಾ ? ಈ ದೇವಸ್ಥಾನದಲ್ಲಿ ‘ಪೊಳಲಿ ಬಚ್ಚಂಗಾಯಿ’ ಪ್ರಸಾದ.
ಪೊಳಲಿಗೆ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಬರುವವರಿಗೆ ಪೊಳಲಿ ಬಚ್ಚಂಗಾಯಿ(ಕಲ್ಲಂಗಡಿ ಹಣ್ಣು) ಇಲ್ಲಿ ಲಭ್ಯ. ಹಾಗೆಂದ ಮಾತ್ರಕ್ಕೆ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಸಿಗುತ್ತದೆ ಎಂದಲ್ಲ. ಪೊಳಲಿ ದೇವಸ್ಥಾನದ ಬೀದಿ ಬದಿ ಅಂಗಡಿಗಳಲ್ಲಿ ಇಲ್ಲೇ ಬೆಳೆಯಲಾದ ತಾಜಾ ಕಲ್ಲಂಗಡಿ ಲಭ್ಯ.
ಪೊಳಲಿಯ ಕಲ್ಲಂಗಡಿ ಖ್ಯಾತಿ ಪಡೆಯಲು ಪೊಳಲಿ ದೇವಿಯ ಮಡಿಲಲ್ಲಿ ಬೆಳೆಯುವ ಹಣ್ಣು ಎಂಬುದೊಂದು ಕಾರಣವಾದರೆ, ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇರೆ ಯಾವ ಮಣ್ಣಿನಲ್ಲೂ ಇದು ಬೆಳೆಯಲಾರದು ಎಂಬುದೂ ಮಗದೊಂದು ಕಾರಣ.
ವರ್ಷದಿಂದ ವರ್ಷಕ್ಕೆ ಕಲ್ಲಂಗಡಿ ಬೆಳೆಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ ಎನ್ನುತ್ತಾರೆ ಇಲ್ಲಿನ ಹಿರಿಯ ವಾಸುದೇವ ಭಟ್ಟರು. ತಮಗೆ ಸ್ವಂತ ಜಾಗ ಇಲ್ಲದಿದ್ದರೂ ಖಾಲಿ ಇರುವ ಸ್ಥಳದ ಮಾಲೀಕರಿಂದ ಜನವರಿ-ಏಪ್ರಿಲ್ ವರೆಗೆ ಒಪ್ಪಂದದ ಮೇರೆಗೆ ಕೆಲವರು ಕೃಷಿಕರು ಪಡೆದುಕೊಂಡು ಕಲ್ಲಂಗಡಿ ಬೆಳೆಸಿ ಮೊದಲ ಹಣ್ಣನ್ನು ಶ್ರೀ ರಾಜರಾಜೇಶ್ವರಿಗೆ ಒಪ್ಪಿಸಿ ಕೃತಾರ್ಥರಾಗಿ ಮಾರಾಟಕ್ಕೆ ಇರಿಸುತ್ತಾರೆ.
ಇಲ್ಲಿಂದ ಹೊರಕ್ಕೆ ಕಲ್ಲಂಗಡಿ ಹೋಗುವುದಿಲ್ಲ. ಬೆಳೆದದ್ದೆಲ್ಲಾ ಖರ್ಚಾಗಿ ಹೋಗುತ್ತದೆ, ಅದೇ ವಿಶೇಷ. ಬರುವ ಭಕ್ತಾದಿಗಳನ್ನು ಕಲ್ಲಂಗಡಿ ಸೆಳೆದೇ ಸೆಳೆಯುತ್ತದೆ ಎನ್ನುತ್ತಾರೆ ಸ್ಥಳೀಯರಾದ ಯಶವಂತ.
ಪೊಳಲಿಯೆಂದರೆ ದೊಡ್ಡ ಊರೇನಲ್ಲ. ಮಂಗಳೂರಿಂದ ಮೂಡುಬಿದಿರೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ರಲ್ಲಿ ಸಾಗಿ ಗಂಜಿಮಠದ ಬಳಿ ಬಲಕ್ಕೆ ಇರುವ ಬೃಹತ್ ದ್ವಾರದಲ್ಲಿ ಒಳಗೆ ಹೋದರೆ ಅಡ್ಡೂರು ಸಿಗುತ್ತದೆ. ಅಲ್ಲೇ ಎಡಕ್ಕೆ ಸಾಗಿದರೆ ಇನ್ನೂ ಹಸಿರು ಹೊದ್ದಿರುವ ಪೊಳಲಿ ಸೇರಬಹುದು.
ಈ ವರುಷ ಮಳೆ ಭಾರಿಯಾಗಿ ಸುರಿದು ಕಲ್ಲಂಗಡಿ ಬೆಳೆಗೆ ನಷ್ಟ ಉಂಟು ಮಾಡಿದೆ. ಶೇ.೪೦ರಷ್ಟು ಬೆಳೆ ಹಾನಿಯಾಗಿದೆ. ಗದ್ದೆಯಲ್ಲಿ ನೀರು ನಿಂತು ಕೊಳೆತು ಹೋಗಿದೆ.
ಆದರೂ ಎಲ್ಲವೂ ದೇವಿಯ ಇಚ್ಛೆ, ಆಕೆಗೆ ಎಷ್ಟು ಬೇಕೋ ಅಷ್ಟನ್ನು ಬೆಳೆಸುತ್ತಾಳೆ ಎನ್ನುತ್ತಾರೆ ೨೫ಕ್ಕೂ ಹೆಚ್ಚು ವರ್ಷದಿಂದ ಇಲ್ಲಿ ಕಲ್ಲಂಗಡಿ ಬೆಳೆಯುತ್ತಿರುವ ಹಿರಿಯರಾದ ನಾರಾಯಣ ಪೂಜಾರಿ. ನೆನಪಿಡಿ ಅವರು ಬೆಳೆಸಿದ ಕಲ್ಲಂಗಡಿ ಪೈಕಿ, ಐದು ಕೆ.ಜಿ ಮೇಲ್ಪಟ್ಟ ನೂರೈವತ್ತಕ್ಕೂ ಹೆಚ್ಚು ಕಲ್ಲಂಗಡಿ ಹಾಳಾಗಿದೆ.

ಬೇಸರ ಎಂದರೆ ಪೊಳಲಿ ತಳಿಯೆಂದೇ ಇದ್ದ ತಳಿಯೊಂದು ಮಾತ್ರ ಕಾಲಾಂತರದಲ್ಲಿ ಕಣ್ಮರೆಯಾಗಿ ಹೋಗಿದೆ, ಈಗ ಹೈಬ್ರಿಡ್ ತಳಿಗಳಾದ ಮಧು, ಭಟ್ನಗರ್‌ನಂತಹ ತಳಿಗಳನ್ನು ಇಲ್ಲಿ ಬೆಳೆಯುತ್ತಾರೆ. ಇಲ್ಲಿನ ಲೋಕಲ್ ತಳಿ ದಶಕಗಳ ಹಿಂದೆಯೇ ಅಳಿದು ಹೋಗಿದೆ, ಅದು ಭಾರೀ ಗಾತ್ರದ್ದಾಗಿತ್ತು ನೋಡಿದ ನೆನಪು ಈಗಲೂ ಇದೆ ಎನ್ನುತ್ತಾರೆ ನಾರಾಯಣ.

ಅದೇನೆ ಇರಲಿ ದೇವಸ್ಥಾನವೊಂದರ ಕಾರಣದಲ್ಲಾದರೂ ದಕ್ಷಿಣ ಕನ್ನಡದಲ್ಲಿ ಕಲ್ಲಂಗಡಿ ಬೇರು ಬಿಟ್ಟಿರುವುದಂತೂ ಅಚ್ಚರಿಯ ಸಂಗತಿ.
Related Posts Plugin for WordPress, Blogger...