6.6.08

ಜೂನ್ ಮಳೆ


ಇಂದು ಮುಗಿಲಪ್ಯಾಟೆಯಲ್ಲಿ ಸಂಜೆ ಎಂದಿನಂತಿಲ್ಲ.
ಪಶ್ಚಿಮದಲ್ಲಿ ಅದೇಕೋ ಸೂರ್ಯನನ್ನೇ ಮುಚ್ಚಿ ಹಾಕುವಂತಹ ತಳಮಳ....
ಇದ್ದಕ್ಕಿದ್ದಂತೆಯೇ ರಾತ್ರಿಯಾಯಿತೇನೋ ಎಂಬಂತೆ ಬೆಳಕು ಇನ್ನಿಲ್ಲದಂತೆ ಮಾಯ....
ಅಂಗಡಿಯಲ್ಲಿ ಗೋಳಿಬಜೆ ಹಿಟ್ಟು ಕಲಸುತ್ತಿದ್ದವನಿಗೆ, ಮರದಡಿ ಮೀನು ಮಾರುವವರಿಗೆ, ಮುಂದಿನ ಗದ್ದೆಯಲ್ಲಿ ಕಸ ಒಟ್ಟು ಮಾಡಿ ಬೆಂಕಿ ಹಾಕುತ್ತಿದ್ದ ರೈತರಿಗೆ, ಗಂಭೀರವಾಗಿ ಕ್ರಾಪ್ ಬಿಡಿಸುತ್ತಿದ್ದ ಕ್ಷೌರಿಕನಿಗೆ, ಸುಮ್ಮನೇ ಕ್ಯಾಸೆಟ್ ಹಾಡು ಕೇಳುತ್ತಿದ್ದ ರಿಕ್ಷಾವಾಲನಿಗೆ, ಪಕ್ಕದ ಹೊಳೆಯಲ್ಲಿ ಗಾಳ ಇಳಿಸಿ ಧ್ಯಾನ ಮಗ್ನರಾಗಿ ಕುಂತವರಿಗೆಲ್ಲಾ ಇಂದು ಮಳೆ ಬರೋದಂತೂ ಗ್ಯಾರಂಟಿ ಅನ್ನಿಸಿತು.

ಇನ್ನೇನು ಶಾಲೆ ಬಿಡೋದಕ್ಕೂ ಆಯ್ತು. ಶಾಲೆ ಗಂಟೆ ಬಾರಿಸುವುದಕ್ಕೂ ಪಶ್ಚಿಮದಲ್ಲೆಲ್ಲೋ ತಿರುಗುತ್ತಿದ್ದ ಮೋಡಗಳೆಲ್ಲ ಥೇಟ್ ಯುದ್ಧವಿಮಾನಗಳ ರೀತಿ ಪೇಟೆಯತ್ತಲೇ ಧಾವಿಸಿಬಂದವು. ಶಾಲೆ ಅಂಗಳದಲ್ಲಿ ಚಿಣ್ಣರು ಓಡುತ್ತಿರುವಂತೆಯೇ ಸಣ್ಣಗೆ ಸುರಿಯತೊಡಗಿತು ಮಳೆ. ಮಳೆಗಾಗಿ ಅದೆಷ್ಟು ದಿನಗಳ ಕಾಯುವಿಕೆ ಇಂದು ಸಾರ್ಥಕ.

ಅಲ್ಲಿವರೆಗೆ ಮುಗಿಲಪ್ಯಾಟೆಯ ಇಡೀ ಧರೆ ಶುಷ್ಕವಾಗಿತ್ತು. ಗದ್ದೆಗಳೆಲ್ಲ ಒಡೆದಿದ್ದವು. ಇಡೀ ಹಳ್ಳಿಗೆ ಅದೇನೋ ದುಗುಡ ಆವರಿಸಿತ್ತು. ರೈತರು ತಲೆಗೆ ಕೈಹೊತ್ತು ಕುಳಿತಿದ್ದರು. ಮೋಡ ಬಂದರೂ ಮಳೆಯಾಗುತ್ತಿರಲಿಲ್ಲ. ತುರ್ತು ಕೆಲಸಕ್ಕೆಂಬಂತೆ ಮುಗಿಲ ಪ್ಯಾಟೆಯ ಸೂರಿನ ಮೇಲಿಂದಲೇ ಹಾದು ಹೋಗುತ್ತಿತ್ತು.
ಈಗ ಮಳೆ ಬಂದಿದೆ...ಮಳೆ ಬಂದೇ ಬಿಟ್ಟಿದೆ
ಖುಷಿಯಲ್ಲಿ ಚಿಣ್ಣರು ಮಳೆಯಲ್ಲಿಯೇ ಕುಣಿಯುತ್ತಾ ಓಡತೊಡಗಿದರು. ಶಾಲೆಯ ಗೋಡೆಗಂಟಿ ನಿಂತಿದ್ದ ಪುಟ್ಟಿಯೊಬ್ಬಳನ್ನು ಪೋರನೊಬ್ಬ ಮಳೆಗೆ ಎಳೆದ ಕಿಲ ಕಿಲ ನಕ್ಕ, ನೋಡಿದ ಮಕ್ಕಳೆಲ್ಲ ನಗತೊಡಗಿದರು...
ಅದನ್ನು ನೋಡಿದ ಮೇಷ್ಟರೂ ನಕ್ಕರು...ಬಜ್ಜಿ ಹಿಟ್ಟು ಕಲಸಿದವನು, ಗಾಳ ಹಾಕುತ್ತಿದ್ದಾತ, ಮೀನು ಮಾರುವವರು, ರೈತ, ಆಟೋವಾಲ ಎಲ್ಲರ ಬಾಯಿಗೂ ಈಗ ನಗು ಅಂಟಿಕೊಂಡಿತು...ಎಲ್ಲರೂ ನಗತೊಡಗಿದರು...ಬಹಳ ದಿನಗಳ ಬಳಿಕ...

ಮುಗಿಲಪ್ಯಾಟೆಯಲ್ಲಿ ಈಗ ಇಡೀ ಮಳೆಗೇ ಹೆದರಿಕೆ ಹುಟ್ಟುವಂತೆ ನಗುವಿನ ಮಳೆ!

6 comments:

ಶಾಂತಲಾ ಭಂಡಿ (ಸನ್ನಿಧಿ) said...

ವೇಣು...
ಮುಗಿಲ ಪ್ಯಾಟೆಯಲ್ಲಿ ಮಳೆ ಬಂತಲ್ಲ ಅಂತೂ ಇಂತೂ...
ನಗುವಿನ ಮಳೆ...
ಓದುತ್ತ ಮನದಪ್ಯಾಟೆಯಲ್ಲೂ ಖುಷಿಯ ಸುರಿಮಳೆ.
ಮಕ್ಕಳನಗು ಮಳೆಯೊಳಗೆ...
ಮಳೆಸುರಿಸಿದ ನಗು ಎಲ್ಲ ಮನದೊಳಗೆ....
ಓದುತ್ತೋದುತ್ತ ಮಳೆಯಲ್ಲಿ ಆಟವಾಡಿ ಮಕ್ಕಳೊಡನೆ ಕೈ ಕೈ ಹಿಡಿದು ಕುಣಿದ ಖುಷಿ.

ಅಮರ said...

ಮುಗಿಲಪ್ಯಾಟೆ ಅಂದೊಡನೆ ತಟ್ಟನೆ ನೆನಪಾದದ್ದು "ಗಾಳಿಪಟ"ದ ಮುಗಿಲಪ್ಯಾಟೆ..... ಅಂತು ಮುಂಗಾರು ಮಳೆ ಎಲ್ಲರ ಬುದುಕುಗಳಿಗೆ ತಂಪನೆರೆಯಲು ಬಂದೆ ಬಿಟ್ಟಿದೆ!!!! ಈ ಬಾರಿ ಒಳ್ಳೆ ಫಸಲು ಕೈತುಂಬಾ ಕೆಲಸ ಮನದ ತುಂಬ ಸಂತಸವ ತರಲಿ... :)

ವೇಣು ಒಂದು ಅನುಮಾನ "ಮುಗಿಲು ಪೇಟೆ" ಕಾಲ್ಪನಿಕ ಊರೊ ಅಥವಾ ಈ ಊರು ಇದೆಯ???

ವಿನಾಯಕ ಭಟ್ಟ said...

ಲೇಖನ ಸೂಪರ್. ಮಳೆಗಾಲ ಅಂದರೆ ಕರಾವಳಿ, ಮತ್ತು ಮಲೆನಾಡಿನದ್ದು. ಊರೆಲ್ಲ ಬಚ್ಚಲುಮನೆಯಂತೆ...!

ರಾಧಿಕಾ ವಿಟ್ಲ said...

ಲೇಖನ ಸಿಂಪ್ಲಿ ಸೂಪರ್ಬ್‌. ಆಗೊಮ್ಮೆ ಈಗೊಮ್ಮೆ ನಿಮ್ಮ ಬ್ಲಾಗ್‌ ಪ್ರದಕ್ಷಿಣೆ ಹಾಕುತ್ತಿರುತ್ತೇನೆ. ಈ ಬಾರಿ ಸುಮ್ಮನೆ ಒಂದಿಷ್ಟು ಸಾಲು. ಇಷ್ಟೆಲ್ಲ ಬರೆದು ಈಗ ಮನೆ ಮಾತ್ರ ನೆನಪಿಸಿಬಿಟ್ರಲ್ಲಾ ವೇಣುವಿನೋದ್‌..

VENU VINOD said...

ಶಾಂತಲಾ,
ಮಳೆ ಎಂದರೆ ಹಾಗೇ ತಾನೇ, ಎಲ್ಲರಿಗೂ ಸಂಭ್ರಮ

ಅಮರ,
ಗಾಳಿಪಟದಲ್ಲೂ ಮುಗಿಲಪೇಟೆ ಇದೆ ಎಂದು ಕೇಳಿದ್ದೆ, ಸಿನಿಮಾ ನೋಡಿಲ್ಲ, ಆದರೆ ಇಲ್ಲಿ ನನ್ನ ಕಥೆಗೆ ಅನ್ವರ್ಥನಾಮವಾದ್ದರಿಂದ ಬಳಸಿದೆ. ಇಂಥದ್ದೊಂದು ಊರಿದೆಯೇ ಎಂಬ ಬಗ್ಗೆ ಮಾಹಿತಿಯಿಲ್ಲ...ಬಹುಷಃ ಕಲ್ಪನೆಯ ಊರಿರಬಹುದೇನೋ

ವಿನಾಯಕ,
ನೀವು ಹೇಳಿದ್ದು ನಾನೂ ಒಪ್ಪುವೆ :)

ರಾಧಿಕ,
ನನ್ನ ಬ್ಲಾಗ್‌ಗೆ ಸ್ವಾಗತ. ಬ್ಲಾಗ್‌ಗೆ ಪ್ರದಕ್ಷಿಣೆ ಹಾಕುವ ಜತೆ ಒಂದೆರಡು ಅಭಿಪ್ರಾಯವನ್ನು ಹಾಕಿದರೆ ಚೆನ್ನು :)

ಶಶೀ ಬೆಳ್ಳಾಯರು said...

ಕರಾವಳಿಯ ಮಳೆಗಿಂತಲೂ ಪಶ್ಚಿಮಘಟ್ಟದ ತಪ್ಪಲು ಪ್ರದೇಶದಲ್ಲಿ ಮಳೆಯ ಅಬ್ಬರ ಇನ್ನೂ ಸೂಪರ್... ಕೆಲಕ್ಷಣಗಳ ವಿರಾಮವನ್ನೂ ನೀಡದೆ ಒಂದೇ ವೇಗದಲ್ಲಿ ಮಳೆ ಸುರಿಯುತ್ತಿದ್ದರೆ, ಮಂಜಿನ ಮುಸುಕು ಬೇರೆ... ಅದನ್ನು ಅನುಭವಿಸಿಯೇ ತೀರಬೇಕು,,.
ವೇಣು ಸರ್, ನಿಮ್ಮ ಲೇಖನ ಸುಂದರ... ನಾನೂ ಮಳೆಯ ಪ್ರೇಮಿ... ಬಿಡದೇ ಸುರಿದು ಮೈ-ಮನಗಳ ತಂಪಾಗಿಸಿ ಥಂಡಿ ಹಿಡಿಸೋ ಮಳೆಯ ರೀತಿ ಇಷ್ಟವಾಯ್ತು...!!

Related Posts Plugin for WordPress, Blogger...