ಹೆದ್ದಾರಿಯ ಆ ತಿರುವಿನಲ್ಲಿ ಕೆಂಬಣ್ಣದ, ಒಂದು ಕಡ್ಡಿಯಿಂದ ಜಾರಿಕೊಂಡ ಬಟ್ಟೆಯ ಕೊಡೆ ಹಿಡಿದು ನಿಂತಿರುತ್ತಾಳೆ ಪುಟ್ಟ ಹುಡುಗಿ..
ಕೈಯಲ್ಲಿ ಅಟ್ಟೆ ಮಲ್ಲಿಗೆ.
ತಿರುವಿನಲ್ಲಿ ಧಾವಿಸಿ ಬರುವ ವೇಗದೂತ ಕಾರುಗಳ ಕಿಟಿಕಿಯತ್ತ ಆಕೆಯ ದೃಷ್ಟಿ ನಟ್ಟಿರುತ್ತದೆ. ನಿನ್ನೆ ಸಂಜೆವರೆಗೆ ಇದೇ ಜಾಗದಲ್ಲಿ ಜಡಿಮಳೆಯಲ್ಲಿ ನಿಂತರೂ ಯಾರೂ ಆಕೆಯನ್ನು ನೋಡಿ, ಹೂಗಳನ್ನು ನೋಡಿ ನಿಲ್ಲಿಸಲಿಲ್ಲ. ಹಾಗಾಗಿ ತಾಯಿಯ ಕೈನಿಂದ ಸಾಕಷ್ಟು ಬೈಗುಳ ಕೇಳಿಸಬೇಕಾಗಿತ್ತು.
ಅದನ್ನು ನೆನಪಿಸಿಕೊಂಡರೇ ಹುಡುಗಿಗೆ ದುಃಖವಾಗುತ್ತದೆ. ಇಂದಿನ ದಿನವೂ ಹಾಗಾದರೆ ಮಾಡುವುದೇನು ? ಮನೆಯಲ್ಲಿ ತಾಯಿ, ಜತೆಗೆ ಪುಟ್ಟ ತಮ್ಮ. ತಾಯಿಗೆ ಪೇಟೆಯಲ್ಲಿ ಕುಳಿತು ಮಲ್ಲಿಗೆ ಮಾರುವ ಶಕ್ತಿಯಿಲ್ಲ, ವ್ಯವಹಾರ ಜ್ಞಾನವಿಲ್ಲ. ಹಾಗಾಗಿ ತಂದೆ ಇಲ್ಲವಾದ ಬಳಿಕ ಕಳೆದ ಎರಡು ವರುಷಗಳಲ್ಲಿ ಹೆದ್ದಾರಿಯೇ ಆಕೆಯ ಮಾರುಕಟ್ಟೆ. ಬಿಸಿಲು ಮಳೆಯೆನ್ನದೆ ಆಕೆ ಅಲ್ಲಿ ಮಲ್ಲಿಗೆ ಮಾರಿದ್ದಾಳೆ.
ತಾಯಿಯ ಬೈಗುಳಕ್ಕಿಂತಲೂ ಆಕೆಯನ್ನು ನೋಯಿಸುವುದು ಮಲ್ಲಿಗೆ ಮಾರುವ ಇತರೇ ಹುಡುಗರು, ಕೆಲ ದೊಡ್ಡವರು. ಮಲ್ಲಿಗೆ ಕೈಯಲ್ಲೇ ಉಳಿದರೆ ಅದನ್ನೆ ಅಣಕಿಸುತ್ತಾರೆ, ಹಂಗಿಸುತ್ತಾರೆ. ತಮ್ಮ ನಾಲಿಗೆಯ ಬಲದಿಂದ, ಮಾರಾಟದ ಚಾಕಚಕ್ಯತೆಯಿಂದ ಕಾರಿನವರನ್ನು ಅಡ್ಡಗಟ್ಟಿ ಮಲ್ಲಿಗೆ ಮಾರುವವರೇ ಅವರೆಲ್ಲಾ. ಅವರಂತೆ ಈ ಹುಡುಗಿ ಮಾರಲಾರಳು. ಹಾಗಾಗಿ ಇಂದು ಊಟಕ್ಕೂ ಹೋಗದೆ ಹಟಕ್ಕೆ ಬಿದ್ದವಳಂತೆ ರಸ್ತೆ ಪಕ್ಕ ತಪೋಮಗ್ನ ಯೋಗಿನಿಯಂತೆ ನಿಂತಿದ್ದಾಳೆ.
ಸಂಜೆಯಾಗಿ ಹೊತ್ತುಮುಳುಗಿದೆ. ಅರೆ ಒಬ್ಬರೂ ಮಲ್ಲಿಗೆಯತ್ತ ನೋಡದೇ ಹೋಗುತ್ತಿದ್ದಾರಲ್ಲ. ಮಳೆ ಕಾರಣವೋ ಏನೋ ಚಿಂತಿಸುತ್ತಿದ್ದಾಳೆ. ಕಾರೊಂದು ಮುಂದೆ ಹೋದದ್ದು ಧುತ್ತನೆ ನಿಂತಿದೆ. ಮತ್ತೆ ಅದೇ ವೇಗದಲ್ಲಿ ಹಿಂದೆ ಬರುತ್ತದೆ.
ಹುಡುಗಿ ಉತ್ಸಾಹಗೊಂಡು ಮಲ್ಲಿಗೆ ಎತ್ತಿ ಹಿಡಿದರೆ ಕಾರಿನ ಪವರ್ ವಿಂಡೋ ಜರ‍್ರನೆ ಕೆಳ ಸರಿಯುತ್ತದೆ. ಕಾರಿನ ಒಳಗಿನಿಂದ ಹುಡುಗರಿಬ್ಬರು ನಗುತ್ತಾ ಮಲ್ಲಿಗೆ ರೇಟು ಕೇಳುತ್ತಾರೆ. ಅಟ್ಟೆಗೆ ಇನ್ನೂರೈವತ್ತು ತಗೊಳ್ಳಣ್ಣಾ ಎಂದು ಮತ್ತೆ ಕಿಟಿಕಿಯತ್ತ ಹಿಡಿಯುತ್ತಾಳೆ. ಹುಡುಗನೊಬ್ಬ ಅಟ್ಟಹಾಸಕೊಡುತ್ತಾ ಕೈಯನ್ನೇ ಹಿಡಿಯಬೇಕೇ...ಕೊಸರಿಕೊಳ್ಳುವಾಗ ಮಲ್ಲಿಗೆ ಕಟ್ಟು ನೆಲದ ಪಾಲು...ಹೇಗೋ ತಪ್ಪಿಸಿಕೊಂಡು ಅಲ್ಲಿಂದ ರಸ್ತೆ ದಾಟುವಾಗ ಬಸ್ಸೊಂದು ಬಂದಿದ್ದಷ್ಟೇ ಆಕೆಗೆ ಗೊತ್ತು...
ಬಿಳಿ ಮಲ್ಲಿಗೆ ಕೆಂಪಾಗಿವೆ...
4 comments:
chennagide
chennagide
ಹೆದ್ದಾರಿ ಕತೆಗಳೂ ಸಹ ಇಷ್ಟು ಭಾವಪೂರ್ಣವಾಗಿತ್ತೆ ಅಂತಾ ಗೊತ್ತಿರಲಿಲ್ಲ !.
I dont know if u have seen it or not, Udyaavarada hump na hatra nilluva mallige maaruvavara chitrana katti kotri kannige....
Post a Comment