26.12.14

ನಮ್ಮ ದೇಹಕ್ಕೆ ನಾವೇ ಜವಾಬ್ದಾರರು ಎಂದು ಎಚ್ಚರಿಸುವ ಸೈಕಲ್!


ನನ್ನದೇ ಮಾರುತಿ ಆಲ್ಟೊ ಕೆ 10ನಿಂದ ತೊಡಗಿ ಕಾರ್ ಉತ್ಪಾದನೆಯಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಆಡಿ ಕಂಪನಿಯ ಆಡಿ ಕ್ಯು 7 ಎಸ್ ಯು ವಿ ವರೆಗೆ ಬೇರೆ ಬೇರೆ ವಾಹನ ಚಾಲನೆ ಮಾಡುವ ಅವಕಾಶ ಸಿಕ್ಕಿದೆ.

ಈ ಎಲ್ಲಾ ವಾಹನಗಳೂ ತಂತ್ರಜ್ಞಾನದಲ್ಲಿ ಮುಂದುವರಿದವು ಎನ್ನುವುದು ಪ್ರಶ್ನಾತೀತ. ಇದರ ಹಿಂದಿರುವ ಇಂಜಿನಿಯರುಗಳ ಸಾಧನೆಗೆ ಶರಣು.
ತಣ್ಣನೆ ಎಸಿಯಲ್ಲಿ ಕುಳಿತು ಅಟೋಗೇರ್ ಹಾಕಿದರೆ ಆಡಿ ಎ6ನಂತಹ ಸೆಡಾನ್ ಕಾರುಗಳು ಗಂಟೆಗೆ 120 ಕಿ.ಮೀಗೂ ಹೆಚ್ಚು ವೇಗದಲ್ಲಿ ಮುನ್ನುಗ್ಗಿದರೆ ನಮಗೆ ಗೊತ್ತೇ ಆಗದು. ಇಲ್ಲೆಲ್ಲೂ ನಮ್ಮ ಶ್ರಮವಿಲ್ಲ. ಚಾಲನೆ.ಮಾಡುವ ಕೌಶಲ್ಯ ಹಾಗು ಏಕಾಗ್ರತೆ ಇದ್ದರೆ ಸಾಕು.

ಹೀಗೆ ಬೈಕ್, ಕಾರ್ ಇದೆಲ್ಲದರ ಬಳಿಕ ನಾನು ಸೈಕಲ್ ಖರೀದಿಸಿದ್ದು. ವಾಹನಗಳೆಲ್ಲ ನಮ್ಮನ್ನು ಹೊತ್ತೊಯ್ಯುತ್ತವಾದರೆ ಸೈಕಲ್ ಮುಂದೆ ಹೋಗಲು ನಮ್ಮ ಶ್ರಮವೇ ಬೇಕು! ನಮ್ಮ ಹೆಚ್ಚುತ್ತಿರುವ ತೂಕವನ್ನು ಈ ವಾಹನಗಳು ಹೇಳಿವುದೇ ಇಲ್ಲ.
near bajpe airport
ಸೈಕಲ್ ಮೇಲೆ ಕುಳಿತಾಗ ನಮ್ಮ ಕಾಲಿನ ಕಸುವು ಎಷ್ಟೆಂದು ಗೊತ್ತಾಗುತ್ತದೆ. ಹೊಟ್ಟೆಯ ಬೊಜ್ಜಿನ ಮೇಲೆ ಒತ್ತಡ ಬೀಳುತ್ತದೆ. ನಮ್ಮ ಪುಪ್ಪುಸದ ಸಾಮರ್ಥ್ಯ ಎಷ್ಟೆನ್ನುವುದರ ಅರಿವಾಗುತ್ತದೆ. ಹಾಗಾಗಿಯೇ ಸೈಕಲ್ ನನಗಿಷ್ಟವಾಯ್ತು.(ಚಾರಣ ಹೋಗುವಾಗಲೂ ನಮ್ಮ ದೈಹಿಕ ಫಿಟ್ ನೆಸ್ ಮಟ್ಟ ನಮಗೆ ಬೇಗ ಸ್ಪಷ್ಟವಾಗುತ್ತದೆ, ವಾಹನದ ದೃಷ್ಟಿಯಲ್ಲಿ ನೋಡಿದರೆ ಸೈಕಲ್ ಎಂಬುದನ್ನು ನಾನಿಲ್ಲಿ ಹೇಳಿದ್ದು ಅಷ್ಟೆ.)
ಸೈಕಲ್ ಸವಾರಿ ಮಧ್ಯೆ ಹೀಗೆ ಕುಳಿತು ನೀರು ಕುಡಿಯೋದ್ರಲ್ಲೂ ಮಜಾ ಇದೆ!
ಸೈಕಲ್ ಮಹತ್ವವನ್ನು ಭಾರತೀಯರಿಗಿಂತ ಚೆನ್ನಾಗಿ ವಿದೇಶೀಯರು, ಅದರಲ್ಲೂ ಜರ್ಮನ್, ಫ್ರಾನ್ಸ್, ಅಮೆರಿಕಾ, ಬ್ರಿಟನ್ನವರು ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ. ಹಾಗಾಗಿ ಆ ಭಾಗದಿಂದ GIANT, SCOTT, BIANCHI, FUJI, SCHWINN, SPECIALISED ಮುಂತಾದ ಕಂಪನಿಯ ಸರಳ ಸುಂದರ ಸೈಕಲ್ ಗಳನ್ನು ಭಾರತಕ್ಕೂ ಕಳುಹಿಸಿ ಪ್ರಚುರ ಪಡಿಸಿದ್ದಾರೆ. ಭಾರತದ ಕಂಪನಿಗಳಾದ ಹೀರೋ, ಬಿಎಸ್ಎ, ಹರ್ಕ್ಯುಲಸ್ ಈ ನಿಟ್ಟಿನಲ್ಲಿ ಸೋತಿವೆ ಎಂದೇ ಹೇಳಬೇಕು. ಇಲ್ಲಿ ಹಳ್ಳಿಗೆ ಬೇಕಾದಂತಹ ರಫ್ ಎಂಡ್ ಟಫ್ ಸೈಕಲ್ಗಳನ್ನು ಅಭಿವೃದ್ಧಿ ಪಡಿಸಿದರೂ ದೊಡ್ಡವರಿಗೆ ಬೇಕಾದ ಫ್ರೇಮ್ ಸೈಜಿನ ಹಗುರವಾದ, ವಿವಿಧ ಆಯ್ಕೆಗಳನ್ನು ಹೊಂದಿದ ಬೈಸಿಕಲ್ಲುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಹಿಂಜರಿಯುತ್ತಿವೆ. ಹಾಗಾಗಿ ಸೈಕಲ್ ಪೇಟೆಯವರ ಮನ ಗೆಲ್ಲುತ್ತಿಲ್ಲ.

ಇನ್ನೂ ಗ್ರಾಮಾಂತರದ ಭಾಗಗಳ ಅನೇಕ ಬಡಜನರ, ಕೆಳಮಧ್ಯಮ ವರ್ಗದವರ ಆಯ್ಕೆ ಇದೇ ಹರ್ಕ್ಯುಲಸ್, ಹೀರೋ ಬೈಸಿಕಲ್ಲುಗಳು ಎನ್ನುವುದನ್ನು ನಾನು ಖಂಡಿತಾ ಮರೆಯಲಾರೆ. ಅಷ್ಟರ ಮಟ್ಟಿಗೆ ಆ ಕಂಪನಿಗಳಿಗೆ ಸಲಾಂ. 3500 ರೂ.ಗೆ ಸೈಕಲ್ ಕೊಟ್ಟು ಬಹಳ ನೆರವಾಗಿವೆ.
ಒಂದು ಸೋಪು, ಶಾಂಪೂ, ಹಾಲು ತರುವುದಕ್ಕೆ 1 ಕಿ.ಮೀ ಹೋಗಬೇಕಾದರೂ ಜುಯ್ಯಂನೆ ಕಾರೇರಿ ಹೋಗುವ ಭೂಪರಿಗೆ ಸೈಕಲ್ ಏರುವುದಕ್ಕೆ ಒಂದಷ್ಟು ಪ್ಯಾಶನ್, ಫ್ಯಾಶನ್ ನೆಪ ಬೇಕು. ಅದನ್ನು ಭಾರತೀಯ ಕಂಪನಿಗಳು ಮಾಡುವಲ್ಲಿ ಸೋತಿವೆ ಎನ್ನುವುದು ನನ್ನ ದೂರು. 
ಅಂತಹವರಲ್ಲೊಬ್ಬನಾದ ನಾನು ಅಂತೂ ಸೈಕಲ್ ಖರೀದಿಸಲು ನಿರ್ಧರಿಸಿಯೇಬಿಟ್ಟೆ. ಇದಕ್ಕೆ ಕಾರಣ ಅತ್ರಿಬುಕ್ ಸೆಂಟರ್ ಅಶೋಕವರ್ಧನರ ಸೈಕಲ್ ಚಳವಳಿ. ಅವರು ಜಂಟಿ ಸೈಕಲ್ನಲ್ಲಿ ಪತ್ನಿ ದೇವಕಿಯಮ್ಮನವರ ಜತೆ ನಗರ ಸಂಚಾರ ಮಾಡುವುದನ್ನು ನೋಡಿದೆ. ಅಲ್ಲಿಂದ ಬಾಲ್ಯಕಾಲದ ನನ್ನ ಸೈಕಲ್ ಸವಾರಿಯ ಆಸೆ ಮತ್ತೆ ಪುಟಿದೆದ್ದಿತು. ಹಾಗೆ ಅವರ ಬ್ಲಾಗ್ನಲ್ಲಿ ಬರುವ ರೋಚಕ ಸೈಕಲ್ ಕಥಾನಕಗಳನ್ನು ಓದುತ್ತಿದ್ದೆ. ಅಂತೂ ತಿಂಗಳುರುಳಿದವು. ಅಶೋಕವರ್ಧನರ ಗೇರ್ ಇಲ್ಲದ ಜಂಟಿ ಸೈಕಲಿನ ಕಷ್ಟಗಳನ್ನೂ ಅವರು ಹೇಳಿಕೊಂಡಿದ್ದರು.
ಮತ್ತೆ ಇನ್ಫೋಸಿಸ್ ನ ಚಾರಣಿಗ ಗೆಳೆಯ ಸಂದೀಪ್ ಕೂಡಾ ತಮ್ಮ ಸೈಕಲ್ ಸಾಹಸ ನನ್ನೊಂದಿಗೆ ಒಮ್ಮೆ ಹೇಳಿಕೊಂಡರು. ಮಂಗಳೂರಿನಂತಹ ಏರು ತಗ್ಗು ಹೆಚ್ಚಿರುವ ಕಡೆಗೆ ಗೇರ್ ಸೈಕಲ್ ಹೇಗೆ ಅನಿವಾರ್ಯ ಎನ್ನುವುದನ್ನು ವಿವರಿಸಿದ್ದರು.
ಆ ಬಳಿಕ ಅಶೋಕವರ್ಧನರು ಬೆಂಗಳೂರಿಗೆ ಹೋಗಿ ಮೆರಿಡಾ ಕಂಪನಿಯ ಮ್ಯಾಟ್ಸ್ ಎನ್ನುವ ಎಂಟಿಬಿ(ಮೌಂಟನ್ ಟೆರೇನ್ ಬೈಕ್) ಖರೀದಿಸಿ, ಸವಾರಿ ಮಾಡಿಕೊಂಡೇ ಬಂದುಬಿಟ್ಟರು. ಅದು ನನಗೆ ಮತ್ತಷ್ಟು ಉತ್ಸಾಹ ಕೊಟ್ಟಿತ್ತು. ಸರಿ ಮನಸ್ಸಿನಲ್ಲಿ ಸೈಕಲ್ ಖರೀದಿಸುವುದನ್ನು ಫೈನಲ್ ಮಾಡಿಯೇ ಬಿಟ್ಟೆ. 
ಸೈಕಲ್ ಖರೀದಿಗೆ ಎಂದು ನಾನು ಮೊದಲು ಇರಿಸಿದ್ದು 15 ಸಾವಿರ ರೂ. ಬೆಂಗಳೂರಿನಲ್ಲಿರುವ ದೀಪಕ್, ಸೈಕಲ್ನಲ್ಲಿ ಭಾರತ ಸುತ್ತುವ ಗೆಳೆಯ ಮಿಥುನ್ ಇವರಿಗೆಲ್ಲಾ ಮಾತನಾಡಿದಾಗ ನನ್ನ ಬಜೆಟ್ ಒಂದಷ್ಟು ವಿಸ್ತರಿಸಿದರೆ ಸ್ವಲ್ವ ಹೆಚ್ಚು ಬಾಳಿಕೆ ಬರುವ ಹಗುರವಾದ, ಸವಾರಿ ಖುಷಿ ಹೆಚ್ಚಿಸುವ ಸೈಕಲ್ ಸಿಗಬಹುದು ಎಂದರು. ಇಂಟರ್ನೆಟ್ನಲ್ಲೂ ಒಂದಷ್ಟು ಪುಟ ತಿರುವಿ ಹಾಕಿದೆ. ನನ್ನ ಆಯ್ಕೆಗೆ ಎಂಟಿಬಿಗಿಂತಲೂ ಹೈಬ್ರಿಡ್ ಒಳ್ಳೆಯದು ಎನ್ನಿಸಿಬಿಟ್ಟಿತು. ಹಾಗೆ ಮೆರಿಡಾ ಎಂಬ ಕಂಪನಿಯ ಕ್ರಾಸ್ ವೇ ಮಾಡೆಲ್ನ ಹೈಬ್ರಿಡ್ ಸೈಕಲ್ ಖರೀದಿಸಿಯೇ ಬಿಟ್ಟೆ.
ಈ ಎಂಟಿಬಿ, ಹೈಬ್ರಿಡ್ ಎಂಬಿತ್ಯಾದಿ ವಿವರಗಳು, ಸೈಕಲ್ ಖರೀದಿ ಬಳಿಕ ಗೆಳೆಯರ ವಿವಿಧ ರೀತಿಯ ಸ್ಪಂದನೆಗಳನ್ನು ಮುಂದಿನ ಸಂಚಿಕೆಯಲ್ಲಿ ಕಟ್ಟಿಕೊಡುವೆ..... 

6 comments:

ashoka vardhana gn said...

ಚಾರಣದಿಂದ (ಸೈಕಲ್) ಏರಣಕ್ಕೆ ಬರುವಾಗ ವೇಗ ಹೆಚ್ಚಾದಂತೆ ಭೌತಿಕ ದರ್ಶನದ ವ್ಯಾಪ್ತಿ ಹೆಚ್ಚುತ್ತದೆ. ಈ ಅರಿವಿನೊಡನೆ ಬರಿಯ ವ್ಯಾಯಾಮವಲ್ಲ ಎಂದು ಸ್ಪಷ್ಟಪಡಿಸಿಕೊಳ್ಳುತ್ತ ದಿನಕ್ಕೊಂದು ದಿಕ್ಕು, ದಾರಿ ಅನುಸರಿಸುತ್ತ ಹೋಗುವುದು ಬೌದ್ಧಿಕ ದಿಗಂತ ವಿಸ್ತರಣೆಗೂ ಅದ್ಭುತ ಕೊಡುಗೆಯಾಗುತ್ತದೆ.ಮುಂದುವರಿಸಿ.
ಅಶೋಕವರ್ಧನ

holla said...

ವೇಣು ಇದೀಗ ನಾನು ಸೈಕಲ್ ಖರೀದಿ ಮಾಡಿದೆ. ನನ್ನ ಪತ್ನಿಗೂ ಸೈಕಲ್ ಆಸಕ್ತಿ ಇರುವ ಕಾರಣ ಇಬ್ಬರಿಗೂ ಇರಲಿ ಎಂಬ ಕಾರಣಕ್ಕೆ ಎಂಟಿಬಿ ಮಾದರಿಯ ಸೈಕಲ್ ಖರೀದಿ ಮಾಡಿದ್ದೇನೆ. ವಾರಕ್ಕೆ ಎರಡು ದಿನ ಸೈಕಲ್‌ನಲ್ಲೇ ಕಚೇರಿಗೆ ಹೋಗುತ್ತಿದ್ದೇನೆ. ಬೈಕ್‌ನಲ್ಲಿ ಕಚೇರಿಗೆ ತೆರಳುವ ವೇಳೆ ಯಾರೂ ನಮ್ಮನ್ನು ನೋಡುವುದಿಲ್ಲ. ಆದರೆ ಇದೀಗ ಎಲ್ಲರೂ ನಮ್ಮತ್ತ ಕಣ್ ಹಾಯಿಸುತ್ತಾರೆ. ಪರಿಚರ ಇದ್ದವರು ಹಾಯ್ ಸೈಕಲ್.... ಸೂಪರ್ ಗುರು ಎಂದು ಹೇಳುತ್ತಾರೆ. ಇದರಿಂದ ಒಂದು ರೀತಿಯಲ್ಲಿ ಸೈಕಲ್ ಸವಾರಿ ಎಂದರೆ ನನಗೆ ಹೆಮ್ಮೆ ಎನಿಸುತ್ತಿದೆ. ಪತ್ನಿಯೂ ಸೈಕಲ್ ಅಭ್ಯಾಸ ಮಾಡುತ್ತಿದ್ದಾರೆ. ಪತ್ನಿಯೂ ಅಂಗಡಿಗೆ ಸೈಕಲ್‌ನಲ್ಲಿ ತೆರಳಿ ಮನೆ ಖರೀದಿ ಮಾಡುತ್ತಾಳೆ. ಇದರಿಂದ ಆಕೆಗೂ ತೃಪ್ತಿ ಇದೆ. ಇದರ ಅನುಭವ ಅಪಾರ. ಮೊದಲ ದಿನ ಕಚೇರಿಗೆ ತೆರಳುವ ವೇಳೆ ಸುಸ್ತಾಯಿತು. ಆದರೆ ಅಭ್ಯಾಸ ಆದ ಬಳಿಕ ಇದೀಗ ಸುಸ್ತು ಇಲ್ಲ.

Badarinath Palavalli said...

ಸೈಕಲ್ ಸವಾರಿಯ ಬಗ್ಗೆ ನಮಗೂ ಹುಚ್ಚು ಮೂಡಿಸುವ ಅಪರೂಪದ ಮಾಲಿಕೆ.

www.varadigara.com said...

ಸೈಕಲ್ ಸವಾರಿ ಖುಷಿ ಕೊಡುತ್ತದೆ... ನಿಮ್ಮ ಸೈಕಲ್ ಯಾನದ ಆರಂಭ ಸ್ವಾರಸ್ಯಕರವಾಗಿದೆ. ಅನುಭವ ವಿವರಣೆ ಮುಂದುವರಿಸಿ...

Unknown said...

superb sir

i am also a big fan of cycle

ವಿ.ರಾ.ಹೆ. said...

ಇತ್ತೀಚಿನ ದಿನಗಳಲ್ಲಿ ಸೈಕಲ್ ಜಾಗೃತಿ ಮೂಡುತ್ತಿರುವುದು ಸಂತೋಷದ ವಿಷಯ.

Related Posts Plugin for WordPress, Blogger...