11.12.07

ತನೋಟಿ ದೇವಿಗೆ ಯೋಧನೇ ಅರ್ಚಕ!


ರಾಜಸ್ತಾನದ ಜೈಸಲ್ಮೇರ್‍ನಲ್ಲಿರುವ ತನೋಟ್ ಮಂದಿರ ಅನೇಕ ಕಾರಣಗಳಿಂದ ಪ್ರಸಿದ್ಧಿ ಹೊಂದಿದೆ.
ಭಾರತ-ಪಾಕಿಸ್ತಾನದ ಗಡಿಭಾಗದಲ್ಲಿರುವ ಈ ಮಂದಿರ ಭಾರತೀಯ ಗಡಿಭದ್ರತಾ ಪಡೆಯವರಿಗೆ ಅತ್ಯಂತ ಪೂಜನೀಯ. ಇದೇ ಕಾರಣಕ್ಕಾಗಿ ಈ ಮಂದಿರದ ನಿರ್ವಹಣೆಯನ್ನೂ ಬಿಎಸ್‌ಎಫ್‌ನ ಬೆಟಾಲಿಯನ್ ನೋಡಿಕೊಳ್ಳುತ್ತದೆ. ಬಿಎಸ್‌ಎಫ್‌ ಅಧಿಕಾರಿ, ಜವಾನರ ಒಂದು ಟ್ರಸ್ಟ್ ನಿರ್ಮಿಸಿ ಉಸ್ತುವಾರಿಯನ್ನು ಅದಕ್ಕೆ ವಹಿಸಲಾಗಿದೆ. ಮಂದಿರದ ತೆಕ್ಕೆಯಲ್ಲೇ ಬಿಎಸ್‌ಎಫ್‌ ನೆಲೆ ಕೂಡಾ ಇದೆ.
ಎಲ್ಲಕ್ಕಿಂತ ಅಚ್ಚರಿ ಎಂದರೆ ಈ ಮಂದಿರದ ಪೂಜಾರಿ ಕೂಡಾ ಬಿಎಸ್‌ಎಫ್ ಜವಾನನೇ. ಶಾಂತಿ ಇರುವಾಗ ಇಲ್ಲಿನ ತನೋಟ್‌ ದೇವಿಗೆ ಭಕ್ತಿಯಿಂದ ಆರತಿ ಮಾಡುವ ಈ ಯೋಧ ಯುದ್ಧ ಕಾಲದಲ್ಲಿ ಗನ್ ಹಿಡಿಯಲೂ ಸಿದ್ಧ!



ಈ ಮಂದಿರಕ್ಕೆ ಸಂಬಂಧಿಸಿ ಇಲ್ಲಿನವರ ನಂಬಿಕೆಯೊಂದಿದೆ. ೧೯೬೫ರ ಭಾರತ-ಪಾಕ್ ಯುದ್ಧದಲ್ಲಿ ಈ ಮಂದಿರವನ್ನು ಪಾಕ್‌ ಆರ್ಟಿಲ್ಲರಿ ಸುತ್ತುವರಿದಿತ್ತು. ಆಗ ಭಾರತದ ಸೈನಿಕರ ಸಂಖ್ಯೆಯೂ ಕಡಮೆ ಇತ್ತು. ಆದರೆ ತನೋಟ್ ಮಂದಿರ ಒಡೆಯಲು ಪಾಕ್ ಹಾಕಿದ್ದ ಆರ್ಟಿಲ್ಲರಿ ಶೆಲ್‌ಗಳು ಸ್ಫೋಟಿಸಲಿಲ್ಲ(ಸ್ಫೋಟಿಸದ ಶೆಲ್‌ಗಳನ್ನು ಇಲ್ಲಿ ತೆಗೆದು ಪ್ರದರ್ಶನಕ್ಕೆ ಇರಿಸಲಾಗಿದೆ), ಮತ್ತು ಅಂತಿಮವಾಗಿ ಭಾರತದ ಕೈ ಮೇಲಾಯ್ತು. ಈ ಕಾರಣಕ್ಕಾಗಿಯೇ ಬಿಎಸ್‌ಎಫ್‌ ಮಂದಿಗೆ ಮಾತ್ರವಲ್ಲ ಇಡೀ ಜೈಸಲ್ಮೇರ್‍ಗೆ ತನೋಟಿ ಮಾ ಎಂದರೆ ಜೀವ.



ಜೈಸಲ್ಮೇರ್‌ನಿಂದ ೧೨೫ ಕಿ.ಮೀ ದೂರದಲ್ಲಿರುವ ಈ ಮಂದಿರಕ್ಕೆ ಪ್ರವಾಸಿಗರೂ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಬಾರ್ಡರ್‍ ರೋಡ್ಸ್ ಆರ್ಗನೈಸೇಶನ್ ನಿರ್ಮಿಸಿರುವ ನೇರ ರಸ್ತೆಯಲ್ಲಿ ೧.೫ ಗಂಟೆಯಲ್ಲಿ ಜೀಪ್‌, ಸುಮೋಗಳಲ್ಲಿ ತಲಪಬಹುದು. ಸುಡುವ ಮರಳಿನ ನಡುವೆ ಇರುವ ಈ ಮಂದಿರ ಬಿಎಸ್‌ನವರಿಗೆ ಓಯಸಿಸ್!

2 comments:

jomon varghese said...

ಈ ಮಂದಿರದ ಪೂಜಾರಿ ಕೂಡಾ ಬಿಎಸ್‌ಎಫ್ ಜವಾನನೇ ಎನ್ನುವ ಕುತೂಹಲ ಒಂದೆಡೆಯಾದರೆ, ನಮ್ಮ ಸೈನಿಕರ ಬಗ್ಗೆ ನೆನೆಯುವುದೇ ಒಂದು ವಿಶಿಷ್ಠ ಅನುಭೂತಿ.. (ಮಂದಿರದ ಹಿನ್ನೆಲೆಯ ಬಗ್ಗೆ ನೀವು ಇನ್ನೂ ಸ್ಪಲ್ಪ ಮಾಹಿತಿ ಕೊಡಬಹುದಾಗಿತ್ತು.) ಲೇಖನ ಓದಿಸಿಕೊಂಡು ಹೋಯಿತು.

ಧನ್ಯವಾದಗಳು,
ಜೋಮನ್

Srik said...

Wow! Thanks for an interesting information. Hope to visit there some day!

Related Posts Plugin for WordPress, Blogger...