
ಅಬ್ಬರದ ತೆರೆಯಂತೆ
ಉರುಳುರುಳಿ
ಹೋಗಿದೆ ಮತ್ತೊಂದು ವರುಷ
ತನ್ನದೇ ಹೊತ್ತು, ಗತ್ತಿನಲ್ಲಿ
ಉರುಳುವ...ಮತ್ತೆ
ಮರಳುವ ತೆರೆಗೆ
ದಡ ಸ್ವಾಗತ ಕೋರುವುದಿಲ್ಲ!
ಸಮುದ್ರ ತಟದಲ್ಲಿ
ಹಾರುವ ಹಕ್ಕಿಗಳು
ಕಳೆದ ಸಂವತ್ಸರದ
ಲೆಕ್ಕ ಹಾಕಿಲ್ಲ
ತಮ್ಮದೇ ಗುರಿ
ತಮ್ಮದೇ ಬದುಕು
ನಭೋಮಂಡಲದ
ಮುಗಿಲುಗಳಂತೆ
ಕರಾವಳಿಯ ಮಾರುತದಂತೆ
ವರುಷ ಬೀಸುಗಾಲಿಕ್ಕಿದೆ
ಸಿಕ್ಕಿ ತತ್ತರಿಸಿದವರೆಷ್ಟೋ
ತೇಲಿಹೋದವರೆಷ್ಟೋ
ಹೆದ್ದಾರಿಯ ವಾಹನಗಳಂತೆ
ಹರಿದುಹೋಗಿದೆ
ವರುಷ ಯಾವ ಸಿಗ್ನಲ್ಲಿಗೂ
ಕಾಯದೆ...
ಓಡುತ್ತಲೇ ಇರುವ
ರೈಲಿನಂತೆ ಯಾವ
ನಿಲ್ದಾಣಗಳಲ್ಲೂ
ನಿಲ್ಲದೆ...
ಮತ್ತೊಂದು ಖಾಲಿಪುಟ
ಮಗುಚಿಕೊಳ್ಳುತ್ತಲಿದೆ
ಹೊಸಪುಟದಲ್ಲಿ ಎಷ್ಟು
ನಲಿವಿನ ಕಲೆ-ನೋವಿನ
ಗೆರೆಗಳಿವೆಯೋ
ಬಲ್ಲವರಾರು?
ಕಾಲಾಂತರದ ಚಕ್ರಕ್ಕೆ
ಓಗೊಟ್ಟು ಮುನ್ನುಗ್ಗುವ
ವರ್ಷದ ವೇಗದಲ್ಲಿ
ಕಳೆದುಕೊಂಡದ್ದು
ಹುಡುಕಲು, ದೂರದಲ್ಲಿ
ಕಂಡದ್ದು ಹಿಡಿಯಲು
ಸಾಮರ್ಥ್ಯ ಬೇಕು
ಗೊತ್ತುಗುರಿಯೇ ಇಲ್ಲದ
ಎಂದೆಂದೂ ಸೇರದ
ಹಳಿಗಳಂತೆ ಸಾಗುತ್ತಲೇ ಇದೆ ವರುಷ
ಪ್ರತಿ ನಿಮಿಷ!
4 comments:
ನಿಮಿಷಗಳು ವರುಷಗಳಾಗುವ ಓಟದಲ್ಲಿ ನೆನಪಿನಲ್ಲುಳಿಯಲಿ ಕೆಲವಾದರೂ ಕ್ಷಣಗಳು...
ಹೊಸ ವರುಷ ಹರುಷದಾಯಕವಾಗಿರಲಿ.
ಸುಖ, ಸಂತಸ, ಶಾಂತಿ ತರಲಿ,
ನಗು ಹಬ್ಬಲಿ, ಬಿಗು ತಗ್ಗಲಿ,
ಸಮೃದ್ಧಿಯ ಆಪ್ತ ತೋಳು ಎಲ್ಲರನು ತಬ್ಬಲಿ.
ಹೆಸರಿಗೆ ಮಾತ್ರ ಹೊಸ ವರುಷ. ವಿಶೇಷ ಬದಲಾವಣೆ ಏನೂ ಇಲ್ಲ.
ವೇಣು,
ಹೊಸ ವರ್ಷಕ್ಕೆ ಸ್ವಾಗತ ಕೋರಿದ ಕವನ ಚೆನ್ನಾಗಿದೆ.
ಉರುಳುವ...ಮತ್ತೆ
ಮರಳುವ ತೆರೆಗೆ
ದಡ ಸ್ವಾಗತ ಕೋರುವುದಿಲ್ಲ!
ಚೆನ್ನಾಗಿ ಬರೀತೀಯಾ ಮಾರಾಯಾ.
ಈ ಸಾಲು ಚೆನ್ನಾಗಿವೆ. ಆದರೆ ಸ್ವಾಗತಕ್ಕೆ ವಿಷಾದದ ಛಾಯೆ ಬೇಡ. ಬಾಳಿಗೆ ಗೊತ್ತು-ಗುರಿ ಇರದು, ರಸ್ತೆ ಹರಿದು ಹೋಗುವ ಹಾಗೆ. ಅದಕ್ಕೊಂದು "ಡೆಡ್ ಎಂಡ್" ಕೊಡುವುದು ನಾವೇ ಎನ್ನುವುದು ನನ್ನ ಅನಿಸಿಕೆ.
ಹೊಸ ವರ್ಷದ ಶುಭ ಕಾಮನೆಗಳು.
ನಾವಡ
ಸುಪ್ತದೀಪ್ತಿ,
ನಿಮಗೂ ಅಷ್ಟೇ ಆತ್ಮೀಯ ಶುಭಾಶಯ :)
ಮಹೇಶ,
ಯಾಕೆ ? ಏನಾಯ್ತು?
ನಾವಡರೇ,
ಪ್ರತಿಕ್ರಿಯೆಗೆ, ಮೆಚ್ಚಿಕೊಂಡದ್ದಕ್ಕೆ ವಂದನೆ, ವಿಷಾದಛಾಯೆ, ಆನಂದದ ತೆರೆ ಎಲ್ಲವೂ ಒಂದೇ ನಾಣ್ಯದ ಮುಖ ಎಂದು ಅನಿಸಿಕೆ, ಅದಕ್ಕೆ ಇಲ್ಲೂ ಸೇರಿಸಿದೆ :)
Post a Comment