15.12.13

ಒಂದು ಬೆಳಗಿನ ಕನವರಿಕೆ

ಚೆಂಗುಲಾಬಿಯ
ಮುಂಜಾನೆಯ ಕನಸುಗಳು
ಮಂಜಿನಲ್ಲಿ ತೊಯ್ದು
ತೊಪ್ಪೆಯಾದವು
ಹುಲ್ಲಿನ ತುದಿಯ ಹನಿ
ಸೂರ್ಯನ ಬೆಳಕಲ್ಲಿ
ಮಿನುಗಿ ಬೆರಗಾಯಿತು!

******

ಒಂದು ಧನ್ಯತೆಯ
ಮುಂಜಾನೆಯೆಂದರೆ
ಅಂದಿನ ರಾತ್ರಿಯ ವರೆಗೆ
ಇರುವ ಕರಾರುವಾಕ್
ಯೋಜನೆಯ ಯೋಚನೆ

*******

ಒಂದು ಮುಂಜಾನೆ
ಬಸ್ ನಿಲ್ದಾಣದಲ್ಲಿ
ತನ್ನ ಕರಗಿದ
ಬಯಕೆಗಳನ್ನೆಲ್ಲಾ ಸಿಂಬಿಸುತ್ತಿ
ಚಳಿಯಲ್ಲಿ ಮಲಗಿದ್ದ
ತಿರುಕನ ಮಗ್ಗುಲಲ್ಲಿ
ಸೇರಿಕೊಂಡ ಬೆಕ್ಕು
ಕನಸು ಅರಿಯಲು ಯತ್ನಿಸಿತು!









24.11.13

ಮಾಲ್ ಮಹಲಿಗಿಂತ ಮಾಸಲು ಅಂಗಡಿ ಮೇಲು!

ಘಟನೆ 1: ಮಿತ್ರರೊಬ್ಬರಿಗೆ ಕಾಣಿಕೆ ಕೊಡುವುದಿತ್ತು. ಮಂಗಳೂರಿನ ಹೃದಯ ಭಾಗದ ಮಾಲ್ ವೊಂದಕ್ಕೆ ಹೋದೆ. ಜೀವನ ಶೈಲಿಯ ಸ್ಟೋರ್ ನಲ್ಲಿ ಸುತ್ತಾಡಿದೆ ನನ್ನ ಸಾದಾ ಡ್ರೆಸ್ ಗಮನಿಸಿಯೋ ಏನೋ ಯಾರೂ ನನ್ನಲ್ಲಿ ಏನೂ ಕೇಳಲಿಲ್ಲ. ಬಳಿಕ ಗಿಫ್ಟ್ ಖರೀದಿಸಿದೆ, ತೆರಿಗೆ ಸಹಿತ ಬಂದ ಬಿಲ್ ಪಾವತಿಸಿ ಹೊರಬಂದೆ.

ಘಟನೆ 2: ಮಗುವಿಗೆ ಆಟಿಕೆ ತರುವುದಕ್ಕಾಗಿ ಹಳೆಯ ಆಟಿಕೆ ಅಂಗಡಿಗೆ ನನ್ನ ಪತ್ನಿ ಹೋಗಿದ್ದಳು. ಇನ್ನೂ ಒಂದು ವರ್ಷದ ತುಂಬದ ಮಗನಿಗೆ ಆಟಿಕೆ ಕೇಳಿದಾಗ ಮಾಲೀಕನೇ ಹೇಳಿದನಂತೆ, ಈಗಲೇ ಕಾರಿನಂತಹ ಆಟಿಕೆ ಕೊಂಡು ಹೋಗಿ ಹಾಳು ಮಾಡಬೇಡಿ, ತುಸು ದೊಡ್ಡವನಾಗಲಿ, ಆ ಮೇಲೆ ಬನ್ನಿ....!

ಕಿಸೆಯಲ್ಲಿ ಕಾಸಿದ್ದರೆ ಮರ್ಕಟ ಮನವನ್ನು ಮರುಳು ಮಾಡಬಲ್ಲ ಇಂದಿನ ಮಾಲ್ ಗಳಲ್ಲಿ ನಿಮ್ಮನ್ನು ಯಾರೂ ಗಮನಿಸುವುದಿಲ್ಲ, ಸಿಸಿಟಿವಿ ಕ್ಯಾಮೆರಾ ಹೊರತಾಗಿ. ನಿಮ್ಮ ಬೇಕು ಬೇಡಗಳಿಗೆಲ್ಲ ನೀವೇ ಅಲ್ಲಿ ಅಧಿಪತಿ. ಹಾಗಾಗಿ ನಮ್ಮ ಆಸೆಗಳಿಗೆ ಕಡಿವಾಣವಿಲ್ಲ.
ಯಾವುದೇ ವ್ಯಾಪಾರಿ ನಿಮ್ಮ ಉದ್ಧಾರಕ್ಕಾಗಿ ಅಂಗಡಿ ಹಾಕಿಲ್ಲ ಅನ್ನೋದು ನಿಜ, ಆದರೆ ವ್ಯಾಪಾರದಲ್ಲೂ ಅಲಿಖಿತ ನೈತಿಕ ತಳಹದಿಯೊಂದರಲ್ಲಿ ಕಾರ್ಯನಿರ್ವಹಿಸುವುದಿದ್ದರೆ ಹಳೆ ತಲೆಮಾರಿನ ಅಂಗಡಿಗಳೇ ಹೊರತು ನಮ್ಮಲ್ಲಿ ಬಣ್ಣಬಣ್ಣದ ಕನಸಿನ ಬೀಜ ಬಿತ್ತುವ ಮಾಲ್ ಗಳಲ್ಲ ಎನ್ನುವುದು ನನ್ನ ಅನಿಸಿಕೆ.
ಬೇಕಾದರೆ ನಿಮ್ಮ ಊರಿನ ಹಳೆಯ ಅಂಗಡಿಗಳಿಗೆ ಹೋಗಿ ಕೆಲವು ವ್ಯಾಪಾರಿಗಳು ನಿಮ್ಮ ಮನೆ ವಿಚಾರ, ಮಗನ ವಿದ್ಯಾಭ್ಯಾಸ ಏನಾಯ್ತು, ನಿಮ್ಮ ಉದ್ಯೋಗದ ಬಗ್ಗೆ ವಿಚಾರಿಸುತ್ತಾರೆ, ಯಂತ್ರಮಾನವರಂತೆ ಕೇವಲ ನಿಮ್ಮ ಸರಕಿನ ಬಿಲ್ ಮಾಡಿ ಹಣ ಪಡೆದು ಚಿಲ್ಲರೆ ಕೊಡುವುದಷ್ಟೇ ಅವರ ಕಾಯಕವಲ್ಲ.
ಇಂತಹ ಅಂಗಡಿಯವರಿಗೆ ಇಡೀ ಊರಿನ ಪ್ರಮುಖರ ಕಾರುಭಾರು, ವಹಿವಾಟು, ಊರಿನ ಮೂಲೆಯಲ್ಲಿ ನಡೆದ ಮರಣ, ಹಿಂದಿನ ಓಣಿಯ ಮನೆಯಲ್ಲಿ ನಡೆದ ಕಳವು...ಹೀಗೆ ಎಲ್ಲ ಸಮಾಚಾರಗಳೂ ತಿಳಿದಿರುತ್ತವೆ. ಮಾಹಿತಿಯ ವಿನಿಮಯ ಕೂಡಾ ವ್ಯಾಪಾರದ ಜತೆ ಜತೆಗೇ ನಡೆಯುತ್ತದೆ. ವ್ಯಾಪಾರದೊಂದಿಗೆ ಜೀವಂತಿಕೆ ಇರುತ್ತದೆ.
ಎಸಿ ಮಾಲ್ ಗಳಲ್ಲಿ ತಣ್ಣನೆ ಹೋಗಿ ಕಿಸೆಗೆ ಕತ್ತರಿ ಹಾಕಿಕೊಂಡು ಬಂದರೆ ಎಲ್ಲೋ ಪರದೇಶಕ್ಕೆ ಹೋದಂತಾಗುತ್ತದೆ. ಅಲ್ಲಿರುವವರ ಪರಿಚಯವೂ ಇಲ್ಲ, ನಿಮ್ಮ ಸಂಶಯ ಬಗೆ ಹರಿಸುವುದಕ್ಕೂ ಸರಿಯಾದವರಿಲ್ಲ. ಇಷ್ಟರ ಹೊರತಾಗಿಯೂ ಹೀಗೆ ಮಾಲಿನಲ್ಲಿ ಮಂಗನಂತೆ ತಿರುಗಿದವರಲ್ಲಿ ನಾನೂ ಒಬ್ಬ.....

ಚಿತ್ರ: www.wallpaper777.com

29.9.13

ಪ್ರಾರ್ಥನೆ

ಓ ದೇವರೇ
ನೀನು ದೇವರಾಗಿರಬೇಕಿಲ್ಲ
ಗೆಳೆಯನಾಗಿದ್ದುಬಿಡು!

ಅದುಮಿದಷ್ಟು ಕುಗ್ಗಿ
ಒಮ್ಮೆ ಬಿಟ್ಟಾಗ ಮತ್ತೆ 
ಜಿಗಿವ ಮನಸುಕೊಡು

ಆಕ್ರೋಶದ ಧಗೆ
ಮನದೊಳಗೆ ಭುಗಿ
-ಲೆದ್ದರೂ ಹಗೆ ತೀರಿಸದ
ಮನೋನಿಗ್ರಹ ನೀಡು

ಲಾಲಿತ್ಯದ ಮಧುರಾಲಾಪಕ್ಕೆ
ಮನಸೋತರೂ ನಾನು 
ನಾನಾಗಿರುವಂತೆ ಮಾಡು

ಬದುಕ ಯಾತ್ರೆಯಲ್ಲಿ
ಬರಿದಾದ ಪಾತ್ರೆಯಲ್ಲಿ
ತಲೆಭಾರವಾದಾಗ
ಹೆಗಲುಕೊಡು!

24.4.13

ನಿಶ್ಯಕ್ತ ಸಾಲುಗಳು

ಪುರುಷಾರ್ಥವಿಲ್ಲದೆ 
ವ್ಯರ್ಥ ಪ್ರಲಾಪಿಸುವ
ಈ ನನ್ನ ಕವನಗಳು
ಭರವಸೆಯಿಲ್ಲದ
ಜನನಾಯಕರ
ಭಾಷಣಗಳಂತೆ
ಆ ಕಿವಿಯಲ್ಲಿ ಕೇಳಿ
ಈ ಕಿವಿಯಲ್ಲಿ ಹಾರಿ ಹೋಗುತ್ತವೆ!

ಒಣಕಲು ಮರದಿಂದ
ಜಾರಿ ಬಿದ್ದು ಮಧ್ಯಾಹ್ನದ
ಗಾಳಿಗೆ ವಿಲವಿಲನೆ
ತೆವಳುವ ಹಣ್ಣೆಲೆಯಂತೆ
ನಿಶ್ಯಕ್ತ ಪದಗಳು
ಸವಕಲಾಗಿವೆ.

ರಂಜಿಸಲು 
ಯತ್ನಿಸಿ ಪೇಚಾಡುತ್ತವೆ
ಒಂದೊಂದೂ ಸಾಲು
ಓದುಗ ರಸಿಕರ
ಮನದಂಗಳದಲ್ಲಿ 
ಪಡಿಯಚ್ಚು ಮೂಡಿಸಲು
ಸೋಲುತ್ತಿವೆ.

ನಾನೋ ಧನುರ್ದಾರಿಯಾಗಿ
ನಿಂತು,
ಅತ್ತ ಶಸ್ತ್ರಸನ್ಯಾಸ ಮಾಡಲಾರದೆ
ಇತ್ತ ಯುದ್ಧ ಮುಂದುವರಿಸಲಾಗದೆ
ಗೀತೋಪದೇಶಕ್ಕೆ ಕಾಯುತ್ತಿದ್ದೇನೆ!

8.4.13

ಕೈಬರಹದಲ್ಲಿ ಇರೋ ಸುಖ....

ಬರೆಯುವುದನ್ನು ಮರೆತು ಬಿಟ್ಟಿದೇನಾ...ಎಂದು ನಾನು ನನ್ನಷ್ಟಕ್ಕೇ ಅಂದುಕೊಳ್ಳುತ್ತಿದ್ದೆ...
ನನ್ನ ಅಕ್ಷರಗಳನ್ನು ನೋಡಿ, ಛೇ ನನ್ನ ಬರವಣಿಗೆ ಕಲೆಯೇ ಹೋಗಿ ಬಿಟ್ಟಿತೇನೋ ಎಂಬ ವೈರಾಗ್ಯ ಬರತೊಡಗಿತ್ತು.
ಈಗ ತಿಂಗಳ ಹಿಂದೆ ಮಂಗಳೂರಿನ ವಿಜಯ ಪೆನ್ ಮಾರ್ಟಿಗೆ ಹೋಗಿದ್ದಾಗ ಒಳ್ಳೆಯ ಪೆನ್ನು ತೋರಿಸಿ ಎಂದೆ. 150 ರೂ.ನ ಒಂದು ಪೆನ್ ತೋರಿಸಿದರು. ಬಾಯರ್ ಕಂಪನಿಯದ್ದು. ಒಮ್ಮೆ ಅದರಲ್ಲಿ ಗೀಚಿ ನೋಡಿದರೆ ಚೆನ್ನಾಗಿದ್ದಂತೆ ತೋರಿತು.
ಅದು ತಂದ ಬಳಿಕ ಮತ್ತೆ ನನ್ನ ಕೈಬರಹ ಸುಧಾರಿಸುತ್ತಿದೆ.

ಬರೆಯುವುದಕ್ಕೂ ಪೆನ್ನಿಗೂ ಆತ್ಮೀಯ ಸಂಬಂಧವೇ ಇದೆ. ಒಂದು ಒಳ್ಳೆಯ ಪೆನ್ನಿದ್ದರೆ ಬರೆಯುವುದಕ್ಕೆ ಎಷ್ಟು ಖುಷಿಯಾಗುತ್ತೆ ಗೊತ್ತಾ?  ನಾನು ಕನ್ನಡಪ್ರಭಕ್ಕೆ 2002ರಲ್ಲಿ ವರದಿಗಾರನಾಗಿ ಸೇರುವ ವೇಳೆಗೆ ಅದಾಗಲೇ ಕಂಪ್ಯೂಟರ್ ಬಂದಾಗಿತ್ತು. ಕಾರ್ಯಕ್ರಮಗಳಿಗೆ ಹೋಗಿ ಬಂದು ಕಾಗದ ಪೆನ್ ಹಿಡಿದು ಬರೆಯಲು ಕುಳಿತರೆ ನಮ್ಮ ಹಿರಿಯ ವರದಿಗಾರರು, ಬರೆಯಲು ಹೋಗಬೇಡಿ, ನೇರವಾಗಿ ಕಂಪ್ಯೂಟರ್ ನಲ್ಲಿ ವರದಿ ಟೈಪಿಸಿ ಎಂದೇ ಆದೇಶಿಸಿ ಬಿಟ್ಟರು.

ಹಾಗೆ ಕಂಪ್ಯೂಟರಿನಲ್ಲಿ ವರದಿ ಟೈಪ್ ಮಾಡುವುದು ಹೆಚ್ಚು ಅಭ್ಯಾಸವಾಗಿ ಬಿಟ್ಟಿತು. ಪಿಯುಸಿ, ಬಿಎ ಪದವಿಯಲ್ಲಿ ನೋಟ್ಸ್ ಬರೆಯುವುದು ಬಹಳ ಆಪ್ತ ವಿಚಾರವಾಗಿತ್ತು. ಹೀರೋ ಶಾಯಿ ಪೆನ್ನಿನನಲ್ಲಿ ಬರೆಯಲು ಕುಳಿತರೆ ಆಹ್ ಅದೆಂತಹಾ ಅನುಭವ!
ಶಾಯಿ ಪೆನ್ನು ಬಿಳಿಯ ಹಾಳೆಯ ಮೇಲೆ ಜಾರುತ್ತಾ ಹೋಗುವಾಗ ಸುಂದರ ಅಕ್ಷರಗಳು ಮೈದಳೆಯುತ್ತಾ ಹೋಗುತ್ತಿದ್ದವು, ಅಂತಹ ನೋಟ್ಸನ್ನು ಓದುವ ಖುಷಿ ಇನ್ನಿಲ್ಲದ್ದು.

ನಾನು ವರದಿಗಾರನಾದ ಬಳಿಕ ಬರೆಯುತ್ತಿದ್ದುದು ಎಂದರೆ ಪುಟ್ಟ ಪಾಕೆಟ್ ನೋಟ್ ಪುಸ್ತಕದಲ್ಲಿ. 10 ರೂ., 20 ರೂ.ಗೆ ಸಿಗುವ ಅದ್ಯಾವುದೋ ಜೆಲ್ ಪೆನ್ನುಗಳು, ಬಳಸಿ ಎಸೆಯುವ ಪೆನ್ನುಗಳಲ್ಲಿ. ಅವುಗಳಲ್ಲಿ ಬರೆಯುವುದರಲ್ಲಿ ಅಷ್ಟೇನು ಮಜಾ ಇಲ್ಲ. ಇನ್ನು ಪುಟ್ಟ ಪುಸ್ತಕಗಳಲ್ಲಿ ನೋಟ್ಸ್ ಮಾಡಿಕೊಳ್ಳುವ ತುರ್ತಿನಲ್ಲಿ ನನ್ನ ಅಕ್ಷರಗಳೋ ಡಾಕ್ಟರುಗಳ ಬರವಣಿಗೆಯಂತಾಗಿತ್ತು.
ಒಮ್ಮೊಮ್ಮೆ ನಾನು ಬರೆದದ್ದು ಏನೆಂಬುದೇ ನನಗೆ ಗೊತ್ತಾಗುತ್ತಿರಲಿಲ್ಲ. 

ನಮ್ಮ ಸಹಪಾಠಿ ಹುಡುಗಿಯರಂತೂ ಮುದ್ದಾದ ಉರುಟುರುಟು ಅಕ್ಷರಗಳಲ್ಲಿ ಬರೆಯುತ್ತಿದ್ದರು, ಅದನ್ನು ಮೀರಿಸಲು ನಾವು ಹುಡುಗರಿಗೆ ಸಾಧ್ಯವೇ ಇರಲಿಲ್ಲ, ಆದರೂ ಹುಡುಗಿಯರ ಅಕ್ಷರ ಶೈಲಿ ಬೇರೆ, ಹುಡುಗರ ಅಕ್ಷರ ಶೈಲಿಯ ಗೆಟಪ್ಪೇ ಬೇರೆ. 
ಈಗಿನ ವಿದ್ಯಾರ್ಥಿಗಳಿಗೆ ಇದು ಸಿಗುವ ಸಾಧ್ಯತೆ ಕಡಿಮೆ ಯಾಕೆಂದರೆ ರೆಡಿಮೇಡ್ ಪ್ರಿಂಟ್ ಔಟುಗಳು ಬಂದಿವೆಯಲ್ಲ. ಗೂಗಲ್ ಮಾಡಿ ಅದರಲ್ಲಿ ಸಿಕ್ಕದ್ದನ್ನು ಪ್ರಿಂಟು ತೆಗೆದರಾಯ್ತು. ಅಥವಾ ಪಠ್ಯ ಪುಸ್ತಕ ಫೋಟೊ ಕಾಪಿ ಮಾಡಿಕೊಂಡರಾಯ್ತು.

ಪೆನ್ನಿನಲ್ಲೂ ಕೆಲವು ಪೆನ್ನು ಕೆಲವರಿಗೆ ಇಷ್ಟ. ನನ್ನ ಹಿರಿಯ ಮಿತ್ರ, ಹೊಸದಿಗಂತದ ಗುರುವಪ್ಪ ಬಾಳೆಪುಣಿಯವರದ್ದು ಸುಂದರ ಅಕ್ಷರ. ಎಷ್ಟೇ ವೇಗವಾಗಿ ನೋಟ್ಸ್ ಮಾಡಬೇಕಿದ್ದರೂ ಅವರ ಅಕ್ಷರ ಆಕಾರ ಕಳೆದುಕೊಳ್ಳುವುದಿಲ್ಲ. ಅದೇ ರೀತಿ ಇಂಗ್ಲಿಷ್ ನಲ್ಲಿ ಟೈಮ್ಸಾಫ್ ಇಂಡಿಯಾದ ಜಯದೀಪ್ ಶೆಣೈಯವರದ್ದು ಕೂಡಾ ಸುಂದರ ಅಕ್ಷರ . ಇವರಿಬ್ಬರಿಗೂ ಜೆಲ್ ಪೆನ್ ಎಂದರೆ ಖುಷಿಯಂತೆ. ನನಗೆ ಜೆಲ್ ಪೆನ್ ನಲ್ಲಿ ಬರೆಯಲಾಗದು, ಶಾಯಿಯ ಪೆನ್ನು ಇಷ್ಟ. ಹೀರೋ ಪೆನ್ನು ಫೇವರಿಟ್ ಆಗಿತ್ತು. ಆದರೆ ಎರಡು ತಿಂಗಳ ಹಿಂದೆ ಕೊಂಡು ಕೊಂಡ ಹೀರೊ ಪೆನ್ ಸರಿಯಾಗಿ ಬರೆಯುತ್ತಿಲ್ಲ, ಹಾಗಾಗಿ ವಿಜಯಾ ಪೆನ್ನು ಮಾರ್ಟಿಂದ ಕೊಂಡುಕೊಂಡಿರುವ ಬಾಯರ್ ಪೆನ್ ಈಗ ನನ್ನ ಆಪ್ತ ಮಿತ್ರ.

ನೀವು ಬರೆಯುವವರಾಗಿದ್ದರೆ ಒಳ್ಳೆಯ ಪೆನ್ನು ಖರೀದಿಸಿ, ನಿಮ್ಮಮಿತ್ರರು ಬಂಧುಗಳು ಬರೆಯುವ ಹವ್ಯಾಸದವರಿಗೆ ಒಳ್ಳೆಯ ಪೆನ್ನು ಉಡುಗೊರೆ ನೀಡಿ, ಖುಷಿ ಪಡದಿದ್ದರೆ ಮತ್ತೆ ಕೇಳಿ!

7.4.13

ವೈಶಾಖದ ನಿಟ್ಟುಸಿರು

ಬಯಲುಬೆಟ್ಟದ ಹಾದಿಯಲ್ಲಿ
ಬೀಸುವ ಗಾಳಿಯೂ
ಬಿಸಿಯಾಗಿದೆ, ಬಹುಷಃ
ನಾನಿಲ್ಲದೆ ನಿನ್ನ ನೋವು
ಇನ್ನೂ ಹಸಿಯಾಗಿದೆ
.......

ನಗರದ ರಾತ್ರಿಗಳು
ಜಗಮಗಿಸುತ್ತವೆ ದೀಪಗಳು
ಕೋರೈಸುತ್ತವೆ ನಾಳೆಯೇ
ಇಲ್ಲವೇನೋ ಎಂಬಂತೆ!
ಚಂದಿರನಿಗೂ ತನ್ನ ಮೇಲೆ
ಕೀಳರಿಮೆ ಬರುವಂತೆ!
.......

ಒಣಗಿ ಹೋದ ನದಿ
ದಂಡೆಯಲ್ಲಿ ಕುಳಿತ
ಒಂಟಿ ಕಪ್ಪೆ ಉದಾಸೀನದಲ್ಲಿ
ಮಳೆಗಾಲದ ಪ್ರವಾಹ ನೆನೆದು
ವಟಗುಟ್ಟುತ್ತಿದ್ದರೆ
ಮಣ್ಣಿನ ಅಡಿಯಲ್ಲಿರುವ
ನೀರಿನ ಪಸೆ ಅಸಹಾಯಕವಾಗಿ
ಅಳುತ್ತಿದೆ!
..........

ಒಂದು ಭಯಂಕರ
ಬೇಸಿಗೆ ರಾತ್ರಿ
ಕನಸಿನಲ್ಲೂ ನೀನು
ನನ್ನ ಹತ್ತಿರ ಬರಲು
ಬೆದರಿಬಿಟ್ಟೆ..


(ಒಂದು ಉದಾಸೀನದ ಭಾನುವಾರ ತಲೆಯಲ್ಲಿ ಹುಟ್ಟಿಕೊಂಡ ಪಲುಕುಗಳು)
ಚಿತ್ರ: ಅಂತರ್ಜಾಲದಿಂದ

12.2.13

ಕಿಟಿಕಿಯಲ್ಲಿನ ಮುಖಗಳು

ಮನೆಯ ಕೊಠಡಿಯ
ಪುಟ್ಟ ಕಿಟಿಕಿಯ ಮುಂದೆ ಕುಳಿತು
ತೆರೆ ಸರಿಸಿದರೆ
ಅರಳಿಕೊಳ್ಳುತ್ತವೆ ಮುಖಗಳು
ಗೊತ್ತಿರುವವರು,
ಗೊತ್ತಿದ್ದು ಗೊತ್ತಾಗದಂತೆ
ಉಳಿದವರು ಹಲವರು
ಮಿತ್ರರು, ಸಂಗಾತಿಗಳು
ಕಿಟಿಕಿ ಸಂದಿನಲ್ಲಿ
ಮಿಂಚಿ ಮರೆಯಾಗುತ್ತವೆ
ಅಪರಿಚಿತರ ಸಾವಿರಾರು
ಇಣುಕು ನೋಟಗಳು

ದಿನವಿಡೀ ತಮ್ಮದೇ
ಕಿಟಿಕಿಯ ಮುಂದೆ ಕುಳಿತಿರುವವರು
ಪ್ರಪಂಚವೆಂದರೆ ಕಿಟಿಕಿ
ಎಂದೇ ತಿಳಿದುಕೊಂಡವರು
ಹಲ್ಲುಜ್ಜಿದ್ದರಿಂದ ತೊಡಗಿ
ಕಂಡ ಕನಸಿನ ಬಗ್ಗೆ ಹೇಳಿಕೊಳ್ಳುವವರು
ಭಾವನೆಗಳಿಗೆ ಮಾರುಕಟ್ಟೆ
ಕಾಣಹೊರಟವರು

ವೇದನೆಯಿದ್ದೂ ಪ್ರೀತಿ ಹಂಚುವವರು,
ಹಿಡಿಯಷ್ಟು ಅಕ್ಕರೆಗೆ ಕಾದವರು,
ಬಡಾಯಿಕೊಚ್ಚಿಕೊಳ್ಳುವವರು
ಮಾಡಿದ ಎಡವಟ್ಟನ್ನೂ
ಮೆಚ್ಚಿಕೊಳುವ ಹೊಗಳುಭಟರು
ಮುಖ ಇರುವವರು,
ತಮ್ಮ ಮುಖಕ್ಕೆ ಬೇರೆ
ಮುಖವಾಡ ಧರಿಸಿಕೊಂಡವರು


ಕಿಟಿಕಿ ಇವರಿಗೆಲ್ಲ
ಒಂದು ನಾಟಕದ ಪರದೆ ಇದ್ದಂತೆ!
ದಿನವೂ ರಂಜಿಸುತ್ತಾರೆ,
ಲೋಕದ ದುಃಖಕ್ಕೆ ಕಣ್ಣೀರು
-ಗರೆಯುತ್ತಾರೆ
ನೂರೆಂಟು ಕಾರಣಕ್ಕೆ ಕೈಗೂಡಿಸಲು
ಕರೆಯುತ್ತಾರೆ


ಎಲ್ಲರಿಗೂ ಗೊತ್ತಿದೆ ಅವರ ಮನೆಗಳಲ್ಲಿ
ಕಿಟಿಕಿಯಷ್ಟೇ ಅಲ್ಲ ವಿಶಾಲವಾದ
ಬಾಗಿಲುಗಳೂ ಇರುತ್ತವೆ!

9.2.13

ಅಕ್ಕಿ ಇದ್ದರೆ ಕೊಡಿ!

ಬ್ರೆಡ್ ಜಾಮ್ ತಿಂದೂ..
ತಿಂದು
ಸಾಕೆನಿಸಿದೆ,
ಪಿಜ್ಜಾ, ಹಾಟ್ ಡಾಗ್
ಅರಗಿಸಿಕೊಳ್ಳುತ್ತಿಲ್ಲ
ಇದ್ದರೆ ಕೊಡಿ
ಅಕ್ಕಿ
ಒಂದು ಹಿಡಿ

ಬದಲಿಗೆ ನಿಮಗೇನು ಬೇಕು?
ಕಂತೆ ನೋಟು ಕೊಟ್ಟೇವು,
ಕಂಪ್ಯೂಟರ್ ಬೇಕಾದರೆ ಹೇಳಿ,
ಸಾಫ್ಟ್ ವೇರ್ ಹಾರ್ಡ್ ವೇರ್ ಇದೆ ನಮ್ಮಲ್ಲಿ
ರಂಜನೆಯ ಬ್ರೇಕಿಂಗ್ ನ್ಯೂಸಿದೆ
ನಮಗೆ ಅಕ್ಕಿ ಮಾತ್ರ ಬೇಕೇಬೇಕು!

ನಮ್ಮೂರಲ್ಲಿ ಗದ್ದೆ ಇಲ್ಲ,
ಇದ್ದರೆ ಬೆಳೆಯುತ್ತಿದ್ದೆವು
ಖಾಲಿ ಜಾಗ ಹುಡುಕಾಡಿ
ಬಂದಿದ್ದೇವೆ, ಅರಣ್ಯಗಳಿಲ್ಲದೆ
ಬರೀ ಜನಾರಣ್ಯಗಳೇ ಇಲ್ಲಿ.
ಹತ್ತಿರವೇಕೆ ದೂರದೂರಕ್ಕೂ
ನಾವು ಅಭಿವೃದ್ಧಿ ಹೊಂದಿದ್ದಾಗಿದೆ
ನಮ್ಮ ದೇಶವೀಗ ಅಗ್ರಪಂಕ್ತಿಗೇರಿದೆ
ನಮ್ಮಲ್ಲಿರುವ ಯುದ್ಧವಿಮಾನಗಳು
ನೆರೆಯಲ್ಲೆಲ್ಲೂ ಇಲ್ಲ.
ತಿನ್ನುವುದಕ್ಕೆ ಅಕ್ಕಿ ಮಾತ್ರ ಇಲ್ಲ

ಗದ್ದೆ ಇರುವ ಊರು ಹುಡುಕುತ್ತಾ
ಇಲ್ಲಿಗೆ ಬಂದಿದ್ದೇವೆ.
ಇದ್ದರೆ ಅಕ್ಕಿ ಕೊಡಿ.


(ಅಭಿವೃದ್ಧಿಯ ಭ್ರಮೆಯಲ್ಲಿರುವ ನಮಗೆ ಇಂತಹ ಪರಿಸ್ಥಿತಿ ಬಾರದಿರಲಿ)

29.1.13

ಒಂಟಿ ಮಹಿಳೆಯ ಕಯಾಕ್ ಯಾನ!


ಕಯಾಕ್ ಎಂಬ ಚಿಕ್ಕದೋಣಿಯಲ್ಲಿ ಜಗತ್ತು ಸುತ್ತಲು ಹೊರಟವಳು ಈ ಮಹಿಳೆ!
ಜರ್ಮನಿಯಿಂದ ಹೊರಟು ತನ್ನ ತಾಯ್ನಾಡು ಆಸ್ಟ್ರೇಲಿಯಾ ತಲಪುವುದು ಈಕೆಯ ಗುರಿ.
ಹಾಗೆ ಹೊರಟವಳು ಈಗ ಸುತ್ತಾಡುತ್ತಾ ಮಂಗಳೂರು ವರೆಗೆ ಬಂದಿದ್ದಾಗಿದೆ, ಬಂದವಳು ಇಲ್ಲಿನ ಮಾಧ್ಯಮದವರೊಂದಿಗೆ ತನ್ನ ಚಟುವಟಿಕೆ ಬಗ್ಗೆ ಮುಕ್ತವಾಗಿ ಹರಟಿದಳು.
ಈಕೆ ಸ್ಯಾಂಡಿ ರಾಬ್ಸನ್, ಆಸ್ಟ್ರೇಲಿಯಾದ ಪರ್ತ್ ಮಹಿಳೆ. ಕಯಾಕಿಂಗ್ ತರಬೇತಿ ನೀಡುವುದು ಈಕೆಯ ಉದ್ಯೋಗ. 45 ವರ್ಷ ವಯಸ್ಸಿನ ಈಕೆಯ ಮುಖ್ಯ ಗುರಿ ಜರ್ಮನಿಯ ಆಸ್ಕರ್ ಸ್ಪೆಕ್ ಎಂಬಾತ 78 ವರ್ಷ  ಮೊದಲು ಜರ್ಮನಿಯಿಂದ ಆಸ್ಟ್ರೇಲಿಯಾ ವರೆಗೆ ಬಂದ ದಾರಿಯಲ್ಲೇ ಸಾಗಿ ಬರುವುದು. ಆಗ ಆತನಿಗೆ ಈ ಪ್ರಯತ್ನಕ್ಕೆ ತಗಲಿದ್ದು 7 ವರ್ಷ. ಈಕೆ ಅದನ್ನು ಐದು ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದ್ದಾಳೆ.
ತನ್ನ ಕಯಾಕ್ ನಲ್ಲಿ ಸ್ಯಾಂಡಿ ಜಲಯಾನ
2011ರ ಮೇ ತಿಂಗಳಲ್ಲಿ ಸ್ಯಾಂಡಿಯ ಕಯಾಕ್ ಯಾನ ಆರಂಭವಾಗಿದೆ. ನಾನೇನು ದಾಖಲೆ ಬರೆಯುವ ಹುಮ್ಮಸ್ಸಿನಲ್ಲಿ ಕಯಾಕ್ ಮಾಡುತ್ತಿಲ್ಲ, ಬದಲು ಅದರಿಂದ ನನಗೆ ತೃಪ್ತಿ ಸಿಗುತ್ತದೆ, ಆದರೆ ಭಾರತದ ಕರಾವಳಿಯಲ್ಲೇ ಈ ಪ್ರಯಾಣ ಮಾಡಿದರೂ, ಹಾಗೆ ಮಾಡಿರುವ ಮೊದಲ ಮಹಿಳೆ ಎಂಬ ಗರಿಮೆ ನನ್ನದಾಗಬಹುದೇನೋ ಎನ್ನುತ್ತಾಳೆ ಸ್ಯಾಂಡಿ.
ಹಾಗೆಂದು ಏಕಕಾಲಕ್ಕೆ ಈ ಪ್ರಯತ್ನವಲ್ಲ. ವರ್ಷದಲ್ಲಿ 6 ತಿಂಗಳು ದುಡಿಯುತ್ತಾಳೆ, ಮತ್ತೆ ಆರು ತಿಂಗಳು ಈ ಕಯಾಕಿಂಗ್ ಮಾಡುತ್ತಾಳೆ. ಹೀಗೆ ಅನೇಕ ದೇಶಗಳ ಕರಾವಳಿಯ ಮೂಲಕ ಸಾಗಿ ಬಂದ ಸ್ಯಾಂಡಿ ರಾಬ್ಸನ್ ಈಗ ಮಂಗಳೂರಿಗೆ ಬಂದಿದ್ದಾಳೆ.
ತನ್ನ ಪ್ರಯತ್ನದ ಬಗ್ಗೆ ವೆಬ್ ಸೈಟ್ ಹಾಗೂ ಬ್ಲಾಗ್ ನಲ್ಲಿ ಕೆಲ ವಿಚಾರಗಳನ್ನು ಸ್ಯಾಂಡಿ ಹೇಳಿಕೊಂಡಿದ್ದಾಳೆ, ಅಲ್ಲದೆ ದಾನಿಗಳಿಂದ ನೆರವನ್ನೂ ಯಾಚಿಸುತ್ತಾಳೆ.
ಸರಾಸರಿ ದಿನಕ್ಕೆ 40 ಕಿ.ಮೀ ಪ್ರಯಾಣ ಮಾಡುತ್ತೇನೆ, ಭಾರತದಲ್ಲಿ ನವೆಂಬರ್ 24ಕ್ಕೆ ಕೊಚ್ಚಿಯಿಂದ ಪ್ರಯಾಣ ಆರಂಭಿಸಿದ್ದೇನೆ. ಈ ಮಾರ್ಚ್ ವೇಳೆಗ ಪಶ್ಚಿಮ ಕರಾವಳಿ ಮುಗಿಸಿ ಮತ್ತೆ ತಾಯ್ನಾಡಿಗೆ ಮರಳುತ್ತೇನೆ, ಮತ್ತೆ ಬಂದು ಡಿಸೆಂಬರ್ ಒಳಗೆ ಭಾರತದ ಕರಾವಳಿ ಪೂರ್ತಿಯಾಗಿ ಪ್ರಯಾಣಿಸುವೆ ಎಂದು ಸ್ಯಾಂಡಿ ಹೇಳಿದ್ದಾಳೆ.
ಜರ್ಮನಿಯ ದಾನುಬೆ ನದಿ, ಗ್ರೀಸ್, ಟರ್ಕಿ, ಸೈಪ್ರಸ್ ಮೂಲಕ ಭಾರತಕ್ಕೆ ಬಂದವಳೀಕೆ. ಮಹಾರಾಷ್ಟ್ರ, ಕಾರವಾರ, ಗುಜರಾತ್ ಕರಾವಳಿಯಲ್ಲಿ ಪ್ರಯಾಣ ಮಾಡಿದ್ದಾಗಿದೆ.
ನಮ್ಮಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯವೇನೇ ಇರಲಿ, ಭಾರತದ ಕಡಲತೀರದ ವಾಸಿಗಳ ಬಗ್ಗೆ ಸ್ಯಾಂಡಿಗೆ ಗೌರವವಿದೆ. ಭಾರತ ಸುಂದರ ದೇಶ, ಆದರೆ ಕೆಲವು ನಗರಗಳಲ್ಲಿ ಮಾತ್ರ ಸ್ವಚ್ಛತೆ ಕಾಪಾಡಿಕೊಂಡಿಲ್ಲ ಎನ್ನುತ್ತಾಳೆ.



ಕಯಾಕ್ ಎಂದರೆ ಚಿಕ್ಕದಾದ ಒಬ್ಬರೇ ಕುಳಿತುಕೊಳ್ಳುವ ದೋಣಿ, ಇದು ಮಗುಚುವುದು ಅಪರೂಪ. ರೇಸಿಂಗ್ ಸ್ಪರ್ಧೆಗೆ ಬಳಸುವುದಕ್ಕೆ, ಸುದೀರ್ಘ ಪ್ರಯಾಣಕ್ಕೆ ಪ್ರತ್ಯೇಕವಾದ ಕಯಾಕ್ ಗಳು ಸಿಗುತ್ತವೆ. ಕಯಾಕ್ ದೋಣಿಗಳಿಗೆ ಕನೋ ಎಂದೂ ಕರೆಯುವುದಿದೆ.ಸ್ಯಾಂಡಿ ಬಳಸುವ ಕಯಾಕ್ ಮಡಚಿ ಬ್ಯಾಗ್ ರೀತಿಯಲ್ಲಿ ಹೆಗಲಿಗೇರಿಸಿಕೊಂಡು ಹೋಗಬಹುದು. ನೀರಿನಲ್ಲಿ ಪ್ರಯಾಣಿಸುವಾಗ, ಅದರೊಳಗೆ ಟೆಂಟ್, ಸ್ಲೀಪಿಂಗ್ ಬ್ಯಾಗ್, ಅಗತ್ಯವಿರುವ ಬಟ್ಟೆಬರೆ, ಆಹಾರ ಇರಿಸಿಕೊಳ್ಳುತ್ತಾಳೆ. ಪ್ರಶಾಂತವಾದ ಕಡಲತೀರದಲ್ಲಿ ಟೆಂಟ್ ಹಾಕಿ ವಿಶ್ರಾಂತಿ ಪಡೆಯುತ್ತಾಳೆ. ಅನೇಕ ಕಡೆಗಳಲ್ಲಿ ಏಕಾಂಗಿ ಮಹಿಳೆ ಎಂದು ಜನ ಕರುಣೆ ತೋರಿ, ತಮ್ಮ ಮನೆಗಳಲ್ಲಿ ವಿಶ್ರಾಂತಿ ಪಡೆಯಲು ಅನುವು ಮಾಡಿಕೊಡುತ್ತಾರೆ. ಅದು ಭಾರತದ ವಿಶೇಷತೆ ಎನ್ನುತ್ತಾಳೆ ಸ್ಯಾಂಡಿ. 

ಸ್ಯಾಂಡಿ ತನ್ನ ಪ್ರಯಾಣದ ಮಧ್ಯೆಯೇ ಪ್ರತಿದಿನದ ಬೆಳವಣಿಗೆ ವಿಶೇಷತೆಗಳನ್ನು ತನ್ನ ವೆಬ್ ಬ್ಲಾಗ್ ನಲ್ಲಿ ದಿನಚರಿ ಮಾದರಿಯಲ್ಲಿ ದಾಖಲಿಸುತ್ತಾಳೆ. ಜರ್ಮನಿ ಬಳಿ ತನ್ನೊಂದಿಗೆ ಬಂದು, ದೋಣಿಯಲ್ಲಿ ಪ್ರಯಾಣಿಸಿದ ನಾಯಿ ಬಗ್ಗೆ, ಗುಜರಾತದಲ್ಲಿ ಆಕೆಯ ವಸ್ತುಗಳನ್ನೇ ಕದ್ದ ಕಹಿ ಅನುಭವದ ಬಗ್ಗೆ ಎಲ್ಲವನ್ನೂ ಹೇಳಿಕೊಂಡಿದ್ದಾಳೆ. ತನಗೆ ನೆರವಾದವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾಳೆ.


 ಸ್ಯಾಂಡಿ ವೆಬ್ ಸೈಟ್ ನೋಡಲು ಇಲ್ಲಿ ಕ್ಲಿಕ್ಕಿಸಿ. 

27.1.13

ಧೂಳಿನ ತತ್ವ!

ಪಟ್ಟಣದ ಬೆಡಗು ಬಿನ್ನಾಣ
ಕಣ್ಣು ತುಂಬಿಕೊಳ್ಳಲು
ಹೊರಟಾಗ ಅದೇಕೋ
ಕಣ್ಣಲ್ಲಿ ಉಳಿದುಬಿಡುತ್ತದೆ
ಧೂಳಿನ ಕಣ

ಅಬ್ಬಾ ಅದೇನು ಕಣ್ಣು ಉರಿ
ಕಣ್ಣ ಸ್ಪಲ್ಪ ಕೆಳಗೆ ನವೆ
ಸ್ವಲ್ಪವೇ ಇಳಿಯುತ್ತವೆ
ಕಣ್ಣಹನಿ

ನೂರಾರೂರುಗಳನ್ನೇ
ತನ್ನ ತೆಕ್ಕೆಗೆ ತೆಗೆದುಕೊಂಡು
ತಿಂದು ತೇಗಿದ
ನಗರಕ್ಕೆತೋಟ ಹೊಲಗದ್ದೆಗಳ ಶಾಪ
ತಟ್ಟಿದೆಯೇನೋ ಎಂಬಂತೆ
ಹರಡಿದೆ ಧೂಳಿನ ತೆರೆ

ಬುಲ್ ಡೋಜರುಗಳ
ಕಬಂಧಬಾಹುಗಳೆಡೆಯಿಂದ
ಅಡ್ಡಲಾಗಿ ಬಿದ್ದ ಮರಗಳ
ಆಕ್ರಂದನದ ಕೊರಳಿಂದ
ಧಾವಿಸಿ ಬಂದು
ವ್ಯಾಪಿಸಿಕೊಳ್ಳುತ್ತದೆ ಧೂಳು

ಮಾಲ್ ಗಳ ಫಳಫಳ
ಗಾಜಿನಲ್ಲಿ, ಭಾರಿದುಬಾರಿ ಕಾರುಗಳ
ಬಾನೆಟ್ಟಿನಲ್ಲಿ,
ಕೆಎಫ್ ಸಿ ಚಿಕನ್ನಿನಂಗಡಿಯ
ಕೆಂಪು ಮಾಡಿನಲ್ಲಿ ಸೇರಿ
ಕುಳಿತಿದೆ ಧೂಳು
ನೀರು ಸುರಿದಷ್ಟೂ ಕೆದರಿ
ಹಾರುತ್ತದೆ!

ಕಾಲಾತೀತವಾಗಿ ಹಾರುತ್ತಾ
ಬಾನಾಡಿಗಳ ಸ್ಪರ್ಶಿಸುತ್ತಾ
ಇಳಿದು ಬಂದು ತಬ್ಬಿಕೊಳ್ಳುವ
ಧೂಳಿನ ಕಣ
ನಮ್ಮ ನೆಲವನ್ನು ನೆನಪಿಸುತ್ತದೆ!
Related Posts Plugin for WordPress, Blogger...