30.12.07

ವರುಷ ಸಾಗುತ್ತಲಿದೆ ಪ್ರತಿ ನಿಮಿಷ



ಅಬ್ಬರದ ತೆರೆಯಂತೆ
ಉರುಳುರುಳಿ
ಹೋಗಿದೆ ಮತ್ತೊಂದು ವರುಷ
ತನ್ನದೇ ಹೊತ್ತು, ಗತ್ತಿನಲ್ಲಿ
ಉರುಳುವ...ಮತ್ತೆ
ಮರಳುವ ತೆರೆಗೆ
ದಡ ಸ್ವಾಗತ ಕೋರುವುದಿಲ್ಲ!


ಸಮುದ್ರ ತಟದಲ್ಲಿ
ಹಾರುವ ಹಕ್ಕಿಗಳು
ಕಳೆದ ಸಂವತ್ಸರದ
ಲೆಕ್ಕ ಹಾಕಿಲ್ಲ
ತಮ್ಮದೇ ಗುರಿ
ತಮ್ಮದೇ ಬದುಕು


ನಭೋಮಂಡಲದ
ಮುಗಿಲುಗಳಂತೆ
ಕರಾವಳಿಯ ಮಾರುತದಂತೆ
ವರುಷ ಬೀಸುಗಾಲಿಕ್ಕಿದೆ
ಸಿಕ್ಕಿ ತತ್ತರಿಸಿದವರೆಷ್ಟೋ
ತೇಲಿಹೋದವರೆಷ್ಟೋ


ಹೆದ್ದಾರಿಯ ವಾಹನಗಳಂತೆ
ಹರಿದುಹೋಗಿದೆ
ವರುಷ ಯಾವ ಸಿಗ್ನಲ್ಲಿಗೂ
ಕಾಯದೆ...
ಓಡುತ್ತಲೇ ಇರುವ
ರೈಲಿನಂತೆ ಯಾವ
ನಿಲ್ದಾಣಗಳಲ್ಲೂ
ನಿಲ್ಲದೆ...



ಮತ್ತೊಂದು ಖಾಲಿಪುಟ
ಮಗುಚಿಕೊಳ್ಳುತ್ತಲಿದೆ
ಹೊಸಪುಟದಲ್ಲಿ ಎಷ್ಟು
ನಲಿವಿನ ಕಲೆ-ನೋವಿನ
ಗೆರೆಗಳಿವೆಯೋ
ಬಲ್ಲವರಾರು?


ಕಾಲಾಂತರದ ಚಕ್ರಕ್ಕೆ
ಓಗೊಟ್ಟು ಮುನ್ನುಗ್ಗುವ
ವರ್ಷದ ವೇಗದಲ್ಲಿ
ಕಳೆದುಕೊಂಡದ್ದು
ಹುಡುಕಲು, ದೂರದಲ್ಲಿ
ಕಂಡದ್ದು ಹಿಡಿಯಲು
ಸಾಮರ್ಥ್ಯ ಬೇಕು

ಗೊತ್ತುಗುರಿಯೇ ಇಲ್ಲದ
ಎಂದೆಂದೂ ಸೇರದ
ಹಳಿಗಳಂತೆ ಸಾಗುತ್ತಲೇ ಇದೆ ವರುಷ
ಪ್ರತಿ ನಿಮಿಷ!

22.12.07

ಮೂರು ಬಿಂದುಗಳು


ಬೆಳಗಾದರೂ ಕತ್ತಲ
ತೆರೆ ಸರಿಯದ ಬೀದಿಗಳಲ್ಲಿ
ಕಸಹೊಡೆಯುತ್ತಿದ್ದಾಳೆ
ಹರಕು ಸೀರೆ ಈರಮ್ಮ...
ಇಲ್ಲಿ
ಮನೆಮೂಲೆಯಲ್ಲಿ
ಬಿದ್ದಿರುವ
ಪೊರಕೆಗೆ
ಜೇಡರಬಲೆ ತುಂಬಿಕೊಂಡಿದೆ


*************


ಬಾವಿ ಇದೆ
ನೀರೂ ಸಾಕಷ್ಟಿದೆ
ಹಗ್ಗ ಜೋತುಬಿದ್ದಿದೆ
ಬಳಲಿಬೆಂಡಾದ
ನಾಯಿ
ನೀರಿಗಾಗಿ ಅಲೆದಾಡುತ್ತಿದೆ!

*************


ಹೊಟ್ಟೆಬಿರಿಯುವಂತೆ ತಿಂದು
ಮಧ್ಯಾಹ್ನ ನಿದ್ದೆಗಿಳಿದರೆ
ಘನಘೋರ ಕನಸುಗಳು
ನನ್ನನ್ನೇ ತಿಂದು
ಮುಗಿಸಲು ಹೊರಟಿವೆ
ಕನಸುಗಳಿಗೆ ರಾತ್ರಿ
ಬರಲು ಹೇಳಿದ್ದೇನೆ
ಆಕೆಯ ಕನಸು
ಕಣ್ಣಲ್ಲಿ ತುಂಬಿಕೊಂಡರೆ
ಕಠೋರ ಕನಸುಗಳು
ರಾತ್ರಿ ಬರಲಾರವೇನೋ!

17.12.07

ಒಂದು ಅರಿಕೆ....



ಗುಲಾಬಿ ಮೊಗ್ಗಿನ ಮೇಲೆ
ಮಂಜುಹನಿ
ತೊಟ್ಟಿಕ್ಕುವಾಗ..

ಅದರ ಸುತ್ತ
ದುಂಬಿಯೊಂದು
ಅರಳಲು ಕಾಯುತ್ತ
ಗುಂಯ್‌ಗುಡುವಾಗ
ನನಗೆ ನೀನು ಬೇಕನಿಸುತ್ತದೆ..


ಹಸಿರುಬೇಲಿ ಪಕ್ಕದ
ದಾರಿಯುದ್ದಕ್ಕೆ
ಹೀಗೇ ಸುತ್ತಾಟಕ್ಕೆ
ಇಳಿವಾಗ ಹಾದಿ
ಬದಿಯ ಗುಡಿಸಲಿಂದ
ಹೊರಬಿದ್ದ ನಸುನೀಲಿ
ಹೊಗೆ, ಹಿಮದೊಂದಿಗೆ ಬೆರೆತು
ಮನವನ್ನೂ ಆವರಿಸಿದಾಗ
ಹೃದಯದ ಭಿತ್ತಿಯಲ್ಲಿ
ಮೂಡುವ ಬಿಂಬ ನೀನು..

ಶುಂಠಿ ಚಹಾ
ಕಪ್ಪಿನಲ್ಲಿ ಆರುತ್ತಿದೆ
ಛಳಿ ಮೈಯೊಳಗೆ ಕೊರೆಯುತ್ತ
ಇಳಿದಿರಲು..
ಬಂದುಬಿಡು ಹೀಗೇ ನನ್ನೊಳಗೆ
ಆವರಿಸಿಬಿಡು
ಮನದ ಮೂಲೆಯ
ನಮ್ಮ ಕನಸಗೂಡೊಳಗೆ....
ಚಿತ್ರ ಇಂಟರ್‌ನೆಟ್‌ ಕೃಪೆ

14.12.07

ಬಸ್, ರೇಡಿಯೋ ಹಾಗೂ ಕನ್ನಡ....

ಮಂಗಳೂರಿನ ಸಿಟಿ ಬಸ್‌ ಒಂದರಲ್ಲಿ ಪ್ರಯಾಣ ಮಾಡುವ ಯೋಗ ಇತ್ತೀಚೆಗೆ ಸಿಕ್ಕಿತು. ಕಚೇರಿಯಿಂದ ರಾತ್ರಿ ಮನೆಗೆ ಬರುತ್ತಿದ್ದೆ.
ಒಳಗೆ ಕಾಲಿಡುತ್ತಿದ್ದರೆ ಸೀಟೆಲ್ಲೂ ಕಾಣಲಿಲ್ಲ...ಆದರೆ ಸಾಕಷ್ಟು ಗಟ್ಟಿಯಾಗೇ ಸ್ಪೀಕರ್‍ನಲ್ಲಿ ಹಾಡು..ಅಣ್ಣಾವ್ರ ದನಿ...ಬೊಂಬೆಯಾಟವಯ್ಯಾ...ಇದು ಬೊಂಬೆಯಾಟವಯ್ಯಾ....

ಅರೆ ಏನಾಯ್ತು ಈ ಸಿಟಿ ಬಸ್‌ನವರಿಗೆ ಎಂದುಕೊಂಡೆ. ಯಾಕೆಂದರೆ ಯಾವಾಗಲೂ ಸಿಡಿ ಸಂಗೀತ ಅದರಲ್ಲೂ ಹೆಚ್ಚಾಗಿ ಹಿಂದಿ ಗೀತೆಗಳು ಅದರಲ್ಲೂ ಅಬ್ಬರದ ಸಂಗೀತವನ್ನೇ ಹಾಕಿಕೊಂಡು ಪ್ರಯಾಣಿಕರಿಗೆ ಶಿಕ್ಷೆ ಕೊಡುವ ಇವರಿಗೆ ಇಂದೇನಾಯಿತು ಅನ್ನೋದೇ ನಂಗೆ ಅಚ್ಚರಿ.

ಹಾಡು ಮುಗೀತು...ನೋಡಿದರೆ ಅದು ಎಫ್ ಎಂ ಮಿರ್ಚಿ ರೇಡಿಯೋ. ಮೂರು ವರ್ಷ ಮೊದಲೇ ಮಂಗಳೂರು ಆಕಾಶವಾಣಿ ಎಫ್ ಎಂ ಆಗಿದ್ದರೂ ಎಫ್‌ಎಂ ಇಲ್ಲಿ ಉಂಟಾ, ಹಾಗಾದ್ರೆ ಹೊಸ ಸಿನಿಮಾ ಗೀತೆ ಯಾಕಿಲ್ಲ ಎಂದು ಪ್ರಶ್ನೆ ಹಾಕುತ್ತಿದ್ದವರೇ ಜಾಸ್ತಿ. ಬಸ್‌ನವರು, ಅಂಗಡಿಯವರು, ರಿಕ್ಷಾ ಚಾಲಕರು, ಹೋಟೆಲ್‌ ಮಾಲಕರು, ಪೆಟ್ರೋಲ್ ಬಂಕ್‌ನವರು ಎಲ್ಲರೂ ಈಗ ಎಫ್ ಎಂ ಹಚ್ಚಿಕೊಂಡಿದ್ದಾರೆ ಬೆಂಗಳೂರಿನವರಂತೆ. ಮೊನ್ನೆ ಮೊನ್ನೆ ಎಂದರೆ ನವಂಬರ್‍ ಕೊನೆಯ ವಾರದಲ್ಲಿ ರೇಡಿಯೋ ಮಿರ್ಚಿ ಕುಡ್ಲದಲ್ಲಿ ಗುನುಗುಟ್ಟಿದರೆ, ಒಂದು ವಾರದಲ್ಲಿ ಬಿಗ್ ಎಫ್‌ಎಂ ಕೂಡಾ ಬಂದಿದೆ. ಇನ್ನೂ ಎರಡು ಸ್ಟೇಷನ್‌ಗಳು ಬರಲಿವೆ ಎಂಬ ಮಾಹಿತಿಯೂ ಇದೆ.

ಅದೇನೆ ಇರಲಿ ಬಸ್‌ನಲ್ಲಿ ಬರುತ್ತಿದ್ದ ನನಗೆ ಬಸ್‌ನವರ ಬದಲಾದ ಧೋರಣೆ ನೋಡಿ ತುಸು ವಿಚಿತ್ರ ಎನಿಸಿತು. ರೇಡಿಯೋದಲ್ಲೊಂದು ಜಿಂಗಲ್ ಬಂತು. ಪಜಿ ಮುಂಚಿ ಖಾರ ಜಾಸ್ತಿ, ರೇಡಿಯೊ ಮಿರ್ಚಿ ಕೇಂಡ ದಾಲ ಬೋಚಿ!(ಹಸಿ ಮೆಣಸು ಖಾರ ಹೆಚ್ಚು, ರೇಡಿಯೊ ಮಿರ್ಚಿ ಕೇಳಿದ್ರೆ ಬೇರೇನೂ ಬೇಡ.). ಬಸ್‌ನ ಚಾಲಕ ಸೇರಿದ ಹಾಗೆ ಮುಂದಿನ ಸೀಟ್ನಲ್ಲಿದ್ದ ನಾಲ್ವರು ಯುವಕರು ಜೋರಾಗಿ ನಕ್ಕರೆ, ಮಧ್ಯೆ ಸೀಟನಲ್ಲಿದ್ದ ಮಧ್ಯವಯಸ್ಕ ಮುಸುಮುಸು ನಕ್ಕ.

ರೇಡಿಯೋ ಮಿರ್ಚಿಯಲ್ಲಿ ಮಿತ್ರ, ಆರ್‌ಜೆ ಅಜೇಯ ಸಿಂಹನ ಗ್ರಾಮೊಫೋನ್‌ ಕಾರ್ಯಕ್ರಮದಲ್ಲಿ ಆತನ ಗಂಭೀರ ಕಂಠದ ನಿರೂಪಣೆ ಇಷ್ಟವಾಗುವಂತಿತ್ತು. ಮತ್ತೆ ಕೇಳಿದ್ದು ಆಪ್ತವಾಗುವ ಸ್ವರ ಎಸ್‌ ಜಾನಕಿಯದ್ದು. ಬಸ್‌ನ ಅನೇಕ ಪ್ರಯಾಣಿಕರು ತಾಳ ಹಾಕುತ್ತಿದ್ದರು.

ನಿಜ. ನಮಗೆ ಹೊಸದೇ ಆಗಬೇಕು ಎಂದೇನಿಲ್ಲ. ಕೇವಲ ಅಬ್ಬರ, ಅತಿ ಉತ್ಸಾಹಗಳೆಲ್ಲಾ ಅನೇಕ ಬಾರಿ ತೋರಿಕೆಯದ್ದೇ ಆಗಿರುತ್ತದೆ. ಇಂಪಾದ,ಎವರ್ ಗ್ರೀನ್ ಹಾಡುಗಳಿಗೆ ಕೇಳುವ ಕಿವಿಗಳು ಎಂದೂ ಇರುತ್ತವೆ. ಕೊಡುವ ವಿಧಾನದಲ್ಲಿ ಒಂದಿಷ್ಟು ಹೊಸತನ, ಇದು ನಮ್ಮದು ಎನ್ನುವ ಆಪ್ತತೆ ಕೊಡಬಲ್ಲದು.

ಆರ್‍ಜೆಗಳ ಹೊಸತನದ ನಿರೂಪಣೆ, ಹೆಚ್ಚು ತಲೆಸಿಡಿಸದೆ, ಕೂಡಲೇ ಹಾಡು ಪ್ರಸ್ತುತ ಪಡಿಸುವ ವಿಧಾನ ಕೇಳುಗರನ್ನು ಹಿಡಿದಿಡಬಲ್ಲದು. ಆಕಾಶವಾಣಿ ಇನ್ನೂ ಸಾಂಪ್ರದಾಯಿಕತೆ ಬಿಡದಿರುವುದು ಅದನ್ನು ಈಗಿನವರ ಹತ್ತಿರ ಕರೆದೊಯ್ಯಲು ಕಷ್ಟವಾಗಬಹುದೇನೋ. ಆದರೂ ಮಾಹಿತಿ, ವಾರ್ತೆ ನೀಡಬಲ್ಲ ಏಕಮೇವತೆ ಆಕಾಶವಾಣಿಗೆ ಬೇಡಿಕೆಯನ್ನು ಇನ್ನೂ ಉಳಿಸಿಕೊಡಬಲ್ಲದು.

ಮಿರ್ಚಿ ತನ್ನ ಲವಲವಿಕೆಯಿಂದ ಮನಸೆಳೆದರೆ, ಬಿಗ್ ಎಫ್‌ ಎಂ ಆಧುನಿಕತೆಗೆ ಒಂದಷ್ಟು ಸಾಂಪ್ರದಾಯಿಕತೆ, ‘ಲವ್‌ ಮಾಡಿನೋಡು’ ಮುಂತಾದ ಭಾವುಕತೆ ಲೇಪ ತುಂಬಿದ ಕಾರ್ಯಕ್ರಮಗಳ ಮೂಲಕ ಹೃದಯಕ್ಕೆ ಹತ್ತಿರವಾಗುತ್ತಿದೆ.

ವಿಶೇಷ ಎಂದರೆ ಈ ಬಾರಿ ಕನ್ನಡ ಹಾಡುಗಳೇ ಎಲ್ಲೆಡೆ ಮಿಂಚುತ್ತಿವೆ. ಮುಂಗಾರು ಮಳೆ ಭೋರ್ಗರೆದ ಬಳಿಕ ಸಾಲು ಸಾಲಾಗಿ ಅರ್ಥಪೂರ್ಣ ಸಾಹಿತ್ಯ, ಇಂಪಾದ ಸಂಗೀತ ಕನ್ನಡಕ್ಕೀಗ ಆಕರ್ಷಣೆ ಕೊಟ್ಟಿದೆ, ಯು ನೋ ಕನ್ನಡ ಸಾಂಗ್ಸ್ ಆರ್‍ ಮೆಲೋಡಿಯಸ್ ಎಂದು ನಮ್ಮ ಆಂಗ್ಲ ಕನ್ನಡಿಗರೂ ಹೇಳತೊಡಗಿದ್ದಾರೆ.

ಈಗ ರೇಡಿಯೋದ ಮೂಲಕ ನಮ್ಮ ಎವರ್‍ ಗ್ರೀನ್ ಗೀತೆಗಳು, ಹೊಸ, ಭರವಸೆಯ ಹಾಡುಗಳೂ ಹರಿದು ಬರಲಿ. ಕನ್ನಡ ಉಳಿಯುವುದು ಮಾತ್ರವಲ್ಲ ಭರವಸೆಯ ಪ್ರಗತಿಸಾಧಿಸಲಿ...ನೀವೇನಂತೀರಿ?

11.12.07

ತನೋಟಿ ದೇವಿಗೆ ಯೋಧನೇ ಅರ್ಚಕ!


ರಾಜಸ್ತಾನದ ಜೈಸಲ್ಮೇರ್‍ನಲ್ಲಿರುವ ತನೋಟ್ ಮಂದಿರ ಅನೇಕ ಕಾರಣಗಳಿಂದ ಪ್ರಸಿದ್ಧಿ ಹೊಂದಿದೆ.
ಭಾರತ-ಪಾಕಿಸ್ತಾನದ ಗಡಿಭಾಗದಲ್ಲಿರುವ ಈ ಮಂದಿರ ಭಾರತೀಯ ಗಡಿಭದ್ರತಾ ಪಡೆಯವರಿಗೆ ಅತ್ಯಂತ ಪೂಜನೀಯ. ಇದೇ ಕಾರಣಕ್ಕಾಗಿ ಈ ಮಂದಿರದ ನಿರ್ವಹಣೆಯನ್ನೂ ಬಿಎಸ್‌ಎಫ್‌ನ ಬೆಟಾಲಿಯನ್ ನೋಡಿಕೊಳ್ಳುತ್ತದೆ. ಬಿಎಸ್‌ಎಫ್‌ ಅಧಿಕಾರಿ, ಜವಾನರ ಒಂದು ಟ್ರಸ್ಟ್ ನಿರ್ಮಿಸಿ ಉಸ್ತುವಾರಿಯನ್ನು ಅದಕ್ಕೆ ವಹಿಸಲಾಗಿದೆ. ಮಂದಿರದ ತೆಕ್ಕೆಯಲ್ಲೇ ಬಿಎಸ್‌ಎಫ್‌ ನೆಲೆ ಕೂಡಾ ಇದೆ.
ಎಲ್ಲಕ್ಕಿಂತ ಅಚ್ಚರಿ ಎಂದರೆ ಈ ಮಂದಿರದ ಪೂಜಾರಿ ಕೂಡಾ ಬಿಎಸ್‌ಎಫ್ ಜವಾನನೇ. ಶಾಂತಿ ಇರುವಾಗ ಇಲ್ಲಿನ ತನೋಟ್‌ ದೇವಿಗೆ ಭಕ್ತಿಯಿಂದ ಆರತಿ ಮಾಡುವ ಈ ಯೋಧ ಯುದ್ಧ ಕಾಲದಲ್ಲಿ ಗನ್ ಹಿಡಿಯಲೂ ಸಿದ್ಧ!



ಈ ಮಂದಿರಕ್ಕೆ ಸಂಬಂಧಿಸಿ ಇಲ್ಲಿನವರ ನಂಬಿಕೆಯೊಂದಿದೆ. ೧೯೬೫ರ ಭಾರತ-ಪಾಕ್ ಯುದ್ಧದಲ್ಲಿ ಈ ಮಂದಿರವನ್ನು ಪಾಕ್‌ ಆರ್ಟಿಲ್ಲರಿ ಸುತ್ತುವರಿದಿತ್ತು. ಆಗ ಭಾರತದ ಸೈನಿಕರ ಸಂಖ್ಯೆಯೂ ಕಡಮೆ ಇತ್ತು. ಆದರೆ ತನೋಟ್ ಮಂದಿರ ಒಡೆಯಲು ಪಾಕ್ ಹಾಕಿದ್ದ ಆರ್ಟಿಲ್ಲರಿ ಶೆಲ್‌ಗಳು ಸ್ಫೋಟಿಸಲಿಲ್ಲ(ಸ್ಫೋಟಿಸದ ಶೆಲ್‌ಗಳನ್ನು ಇಲ್ಲಿ ತೆಗೆದು ಪ್ರದರ್ಶನಕ್ಕೆ ಇರಿಸಲಾಗಿದೆ), ಮತ್ತು ಅಂತಿಮವಾಗಿ ಭಾರತದ ಕೈ ಮೇಲಾಯ್ತು. ಈ ಕಾರಣಕ್ಕಾಗಿಯೇ ಬಿಎಸ್‌ಎಫ್‌ ಮಂದಿಗೆ ಮಾತ್ರವಲ್ಲ ಇಡೀ ಜೈಸಲ್ಮೇರ್‍ಗೆ ತನೋಟಿ ಮಾ ಎಂದರೆ ಜೀವ.



ಜೈಸಲ್ಮೇರ್‌ನಿಂದ ೧೨೫ ಕಿ.ಮೀ ದೂರದಲ್ಲಿರುವ ಈ ಮಂದಿರಕ್ಕೆ ಪ್ರವಾಸಿಗರೂ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಬಾರ್ಡರ್‍ ರೋಡ್ಸ್ ಆರ್ಗನೈಸೇಶನ್ ನಿರ್ಮಿಸಿರುವ ನೇರ ರಸ್ತೆಯಲ್ಲಿ ೧.೫ ಗಂಟೆಯಲ್ಲಿ ಜೀಪ್‌, ಸುಮೋಗಳಲ್ಲಿ ತಲಪಬಹುದು. ಸುಡುವ ಮರಳಿನ ನಡುವೆ ಇರುವ ಈ ಮಂದಿರ ಬಿಎಸ್‌ನವರಿಗೆ ಓಯಸಿಸ್!

6.12.07

ಮರುಳುಗೊಳಿಸುವ ಮರಳುಗಾಡು(a trek to thar desert)


ಜೈಸಲ್ಮೇರ್‍ ಪಟ್ಟಣಕ್ಕೆ ಅದರದ್ದೇ ಆದ ಗಾಂಭೀರ್ಯ, ಸೊಗಸು ಕೊಡುವ ಗೋಲ್ಡನ್ ಮಾರ್ಬಲ್, ಅಲ್ಲಿನ ಕೋಟೆ, ಪೇಟೆಯ ಮೋಲೆಗಳಲ್ಲಿ ಇರುವ ಅಗಲ ಕಟಾರದ ತುಂಬ ಕುದಿಯುತ್ತಲೇ ಇರುವ ದಪ್ಪನೆ ಹಾಲು..ಸಾಲು ಸಾಲಾಗಿ ನಡೆವ ಒಂಟೆ ಗಡಣ...ಇವೆಲ್ಲ ಈಗ ಮತ್ತೆ ಕಣ್ಣಮುಂದೆ ಸಾಲುಸಾಲು ಮೆರವಣಿಗೆ ನಡೆಸುತ್ತಿವೆ....
ಕಳೆದ ಕೆಲದಿನಗಳ ಹಿಂದೆಯಷ್ಟೇ ಜೈಸಲ್ಮೇರ್‍ನ ಥಾರ್‍ ಮರುಭೂಮಿ ಚಾರಣ ಮಾಡಿಮುಗಿಸಿದ ಬಳಿಕ ಮರುಭೂಮಿಯಲ್ಲೂ ಎಂಥದೋ ಆಕರ್ಷಣೆ ಕಾಡುತ್ತದೆ....


ಸ್ಥಳೀಯ ಚಾರಣಗಳ ಸವಿ ಸಾಕಷ್ಟು ಅನುಭವಿಸಿದ ನನಗೆ ಯಾವುದಾದರೊಂದು ರಾಷ್ಟ್ರೀಯ ಮಟ್ಟದ ಚಾರಣದಲ್ಲಿ ಪಾಲ್ಗೊಳ್ಳಬೇಕು ಎಂಬ ಬಯಕೆ ಅನೇಕ ದಿನಗಳಿಂದ ಕಾಡುತ್ತಿತ್ತು. ಯೂತ್ ಹಾಸ್ಟೆಲ್‌ನವರು ೫ ವರ್ಷದ ನಂತರ desert trek ಸಂಘಟಿಸುತ್ತಿದ್ದಾರೆ, ಸೇರಲು ಪ್ರಯತ್ನ ಮಾಡೋಣ ಎಂದು ಸ್ನೇಹಿತ ಗಣಪತಿ ಹೇಳಿದ ಕೂಡಲೇ ಯೆಸ್ ಎಂದು ಬಿಟ್ಟೆ.

ಮಂಗಳೂರು ಯೂತ್‌ ಹಾಸ್ಟೆಲ್‌ನ ಇತರ ಗೆಳೆಯರಾದ ಪ್ರವೀಣ್, ಸುನಿಲ್ ಮತ್ತು ಸುಧೀರ್‍ ಸೇರಿಸಿಕೊಂಡು ದೂರದ ರಾಜಸ್ತಾನದ ಮರುಭೂಮಿಗೆ ಹೋಗುವುದೇ ಎಂದು ನಿರ್ಧರಿಸಿಬಿಟ್ಟೆವು.


ನವೆಂಬರ್‍ ೧೨ರಂದು ಕೊರೆಯುವ ಚಳಿಯಲ್ಲಿ ಹಲ್ಲು ಕಟಕಟಿಸುತ್ತಾ ಜೈಸಲ್ಮೇರ್‍ ಸ್ಟೇಷನ್‌ನಲ್ಲಿ ಇಳಿದೆವು ರೈಲಿಂದ. ಅಲ್ಲೇ ಚಹಾ ಮುಗಿಸಿ ಟ್ಯಾಕ್ಸಿಯೊಂದನ್ನು ಗೊತ್ತು ಮಾಡಿ ತನೋಟ್ ದೇಗುಲ ನೋಡಲು ಹೊರಟೆವು (ಭಾರತ-ಪಾಕ್ ಗಡಿಯಲ್ಲಿರುವ ಈ ಗುಡಿಯ ಬಗ್ಗೆ ಮುಂದಿನ ಲೇಖನದಲ್ಲಿ ಬರೆಯುತ್ತೇನೆ).

ತನೋಟ್ ಮುಗಿಸಿ ಜೈಸಲ್ಮೇರ್‌ನ ಬಾರ್ಡರ್‍ ಹೋಂ ಗಾರ್ಡ್ ಮೈದಾನ ಸೇರಿದೆವು. ಅದು ನಮ್ಮ ಬೇಸ್ ಕ್ಯಾಂಪ್. ಆಗಲೇ ಬಂದು ಒಂದು ದಿನವಾಗಿದ್ದ ಚಾರಣದ ಮೊದಲ ತಂಡದವರು ಹೊರಡುವ ತಯಾರಿಯಲ್ಲಿದ್ದರು. ನಮ್ಮದು ಎರಡನೇ ತಂಡವಾದ ಕಾರಣ ಮರುದಿನದ ವರೆಗೆ ಸಮಯ ಇತ್ತು ಸುತ್ತಾಟಕ್ಕೆ. ಸುಡು ಬಿಸಿಲಿನಲ್ಲಿ ಬಿಸಿಯೇರಿದ್ದ ಟೆಂಟ್‌ಗಳು ನಮ್ಮನ್ನು ಸ್ವಾಗತಿಸಿದವು. ಆ ದಿನ ಸುತ್ತಾಟದಲ್ಲೆ ಮುಗಿದು ಹೋಯಿತು. ಆ ನಡುವೆ ಮೊದಲ ತಂಡದ ಫ್ಲಾಗ್ ಆಫ್ ಕೂಡಾ ಆಯ್ತು. ಸಂಜೆ ಜೈಸಲ್ಮೇರ್‍ನ ಕೋಟೆಗೊಂದು ಸುತ್ತು ಹಾಕಿದೆವು, ಪೇಟೆಯಲ್ಲಿ ಸಿಗುವ ಕೇಸರಿ, ಬಾದಾಮ್ ಮಿಶ್ರಿತ ಕೆನೆಹಾಲು ರುಚಿ ನೋಡಿದೆವು.



ಮರುದಿನ ನಮ್ಮ ತಂಡಕ್ಕೆ ಫ್ಲಾಗ್ ಆಫ್. ಕ್ಯಾಂಪ್ ನಿರ್ದೇಶಕ ರತನ್ ಸಿಂಗ್ ಭಟ್ಟಿ, ಸಂಚಾಲಕ ಓಂ ಭಾರತಿ ಅವರಿಂದ ಮರುಭೂಮಿಯ ಸ್ಥೂಲ ಪರಿಚಯ, ಚಾರಣಿಗರಿಗೆ ಹಲವಾರು ಸೂಚನೆ.
ಕೊನೆಗೂ ಅಲ್ಲಿಂದ ಹೊರಟ ನಾವು ಬಸ್ ಮೂಲಕ ತಲಪಿದ್ದು ಮೊದಲ ಕ್ಯಾಂಪ್ ಆಗಿರುವ ಸ್ಯಾಂ ಸ್ಯಾಂಡ್ ಡ್ಯೂನ್. ರುಚಿಕಟ್ಟಾದ ಕುಡಿಯುವ ನೀರು ಸಿಕ್ಕಿದ್ದು ಈ ಕ್ಯಾಂಪ್‌ನಲ್ಲಿ ಮಾತ್ರ. ಸ್ಯಾಂ ಎಂದರೆ ಪ್ರವಾಸಿಗರ ಸಂತೆ. ನಾವು ಸೂರ್ಯಾಸ್ತ ನೋಡಲು ಕಡಲ ತಡಿಗೆ ಹೋದಂತೆ ಅಲ್ಲಿನವರು ಸೂರ್ಯಾಸ್ತಕ್ಕೆ ಇಲ್ಲಿನ ಮರಳ ದಿಣ್ಣೆಯೇರಿ ಕುಳಿತು ಬಿಡುತ್ತಾರೆ. ಇಲ್ಲಿ ಒಂಟೆ ಸವಾರಿ ಕೂಡಾ ಫೇಮಸ್ಸೇ.

ತೆಳ್ಳನೆ ಉದ್ದುದ್ದ ಇರುವ ಪಠಾಣ ಊಂಟ್‌ವಾಲಾಗಳು ನಿಮ್ಮ ಮುಖ ನೋಡಿಯೇ ನಿಮ್ಮ ಆಸಕ್ತಿಯನ್ನೆಲ್ಲ ಅಳೆದು, ನಿಮ್ಮ ಅಭಿರುಚಿಗೆ ತಕ್ಕಂತಹ ಹೆಸರನ್ನು ಒಂಟೆಗೆ ಇರಿಸಿ ನಿಮ್ಮನ್ನು ಮರುಳುಗೊಳಿಸುತ್ತಾರೆ, ಇಲ್ಲಿಂದ ಅಲ್ಲಿಗೆ ಒಂಟೆ ಮೇಲೆ ಕುಳಿತು ಒಂದು ರೌಂಡ್ ಹೊಡೆದರೆ ೮೦ ರೂ.ನಿಂದ ೧೦೦ ರೂ. ಬಿಚ್ಚಬೇಕು!

ನಮಗೆ ಮರುದಿನ ೧೪ ಕಿ.ಮೀ ಒಂಟೆ ಸವಾರಿ ಇದ್ದ ಕಾರಣ ಯಾರೂ ಅರ್ಜೆಂಟ್ ಮಾಡಲಿಲ್ಲ. ದಿಣ್ಣೆ ಮೇಲೆ ಸೂರ್ಯಾಸ್ತ ಸವಿದು ವಾಪಸಾದೆವು ಕ್ಯಾಂಪ್‌ಗೆ.

ಮರುದಿನ ನಮ್ಮ ವಾಹನ ಒಂಟೆ. ಮೂರು ಹಂತಗಳಲ್ಲಿ ಎದ್ದು ನಿಲ್ಲುವ ಒಂಟೆಯ ಮೇಲೆ ಕೂರಲೂ ಬ್ಯಾಲೆನ್ಸ್‌ ಬೇಕು! ಕುಳಿತ ಬಳಿಕವೂ ಬೀಜ ನೀರಾಗುವಂತಹ ಅನುಭವ ಅದು! ಅಂತೂ ಅಲ್ಲಿಂದ ಹೊರಟು ೩ ಗಂಟೆ ಪ್ರಯಾಣಿಸಿ ದ ಬಳಿಕ ಸುಸ್ತಾಗಿದ್ದ ನಮ್ಮನ್ನು ಊರೊಂದರ ಗಡಿಯಲ್ಲಿ ಇಳಿಸಿದರು ಊಂಟ್‌ವಾಲಾಗಳು. ಅಲ್ಲಿಂದ ನಡು ಮಧ್ಯಾಹ್ನ ನಡೆಯುತ್ತಾ ನೀಮಾ ಎಂಬ ಗ್ರಾಮ ದಾಟಿ ಬೀಡಾ ಎಂಬ ಗ್ರಾಮದ ಶಾಲೆಯೊಂದರಲ್ಲಿ ಮಧ್ಯಾಹ್ನದ ಊಟ ಮುಗಿಸಿದೆವು(ಪ್ಯಾಕ್ ಲಂಚ್).

ಅಲ್ಲಿಂದ ಮತ್ತೆ ಒಂದು ಘಂಟೆ ರಸ್ತೆಯಲ್ಲಿ ಪಯಣ. ಕೊನೆಗೂ ಎರಡನೇ ಕ್ಯಾಂಪ್‌ ಬೀಡಾ ಬಂತು. ಮರಳಿನಲ್ಲಿ ಅರ್ಧ ಹೂತಿಟ್ಟ ಮಣ್ಣಿನ ಕೊಡ ತುಂಬ ಅರೆ ಉಪ್ಪಾದರೂ ತಂಪಾಗಿದ್ದ ನೀರು ಕುಡಿದು ಹೊಟ್ಟೆ ತುಂಬಿಸಿಕೊಂಡೆವು. ಸ್ಯಾಂಗೆ ಹೋಲಿಸಿದರೆ ಬೀಡಾದ ಮರಳು ದಿಣ್ಣೆಗಳು ಹೆಚ್ಚು ಆಕರ್ಷಕ, ಕಸವೇ ಇಲ್ಲದೆ ಶುಭ್ರ.. ಯಾಕೆಂದರೆ ಇಲ್ಲಿಗೆ ಪ್ರವಾಸಿಗರು ಬರುವುದಿಲ್ಲ. ಚಾರಣಿಗರು ಮಾತ್ರ!

ಅಲ್ಲಿಂದ ಮರುದಿನ ಮತ್ತೆ ಮುಂದಿನ ಪಯಣ ಶುರು, ಇಲ್ಲಿಂದ ಮುಂದಕ್ಕೆ ನಮ್ಮ ಗೈಡ್ ಪೂನಂ ಸಿಂಗ್, ಜತೆಗೆ ಆತನ ಒಂಟೆ ಗಾಡಿ. ನಮ್ಮಲ್ಲಿನ ೬೦ ಮಂದಿಯ ತಂಡದಲ್ಲಿದ್ದ ಅನೇಕ ಸೋಮಾರಿಗಳು, ಪೂನಂ ಸಿಂಗ್‌ಗೆ ಲಂಚದ ಆಮಿಷ ಒಡ್ಡಿ, ತಮ್ಮ ಬ್ಯಾಗ್‌ಗಳನ್ನು ಗಾಡಿಗೆ ಹೇರಿ ಮುಂದಿನ ಮೂರೂ ದಿನ ನಿರುಮ್ಮಳರಾಗಿದ್ದರು. ಒಬ್ಬನಂತೂ, ನಡೆಯುವ ಗೋಜಿಗೂ ಹೋಗದೆ ಗಾಡಿಯಲ್ಲೇ ಕುಳಿತು ನಗುತ್ತಿದ್ದ(ಇವರಿಗೆ ಚಾರಣವಾದರೂ ಯಾಕಾಗಿ?).

೧೪ ಕಿ.ಮೀ ಮರುಭೂಮಿ ನಡಿಗೆಯ ಬಳಿಕ ಸೇರಿದ್ದು ಹತ್ತಾರ್‍ ಎಂಬ ಹಳ್ಳಿಯ ಸೆರಗಿನಲ್ಲಿದ್ದ ಕ್ಯಾಂಪ್. ಕುಮಾರ ಪರ್ವತ, ಕುದುರೆಮುಖದಂತಹ ಚಾರಣ ಮಾಡಿದವರಿಗೆ ಮರುಭೂಮಿಯ ಚಾರಣ ತ್ರಾಸ ಕೊಡುವುದಿಲ್ಲ, ಏನಿದ್ದರೂ ಬಿಸಿಲು ತಾಳಿಕೊಳ್ಳುವ ಸಾಮರ್ಥ್ಯ ಇದ್ದರಾಯಿತು ಅಷ್ಟೇ. ಹತ್ತಾರ್‍ ಕ್ಯಾಂಪ್‌ನ ವೆಲ್‌ಕಂ ಡ್ರಿಂಕ್‌ ನಂತರ ಕೆಲವರು ಕ್ರಿಕೆಟ್ ಆಡಲು ಶುರುವಿಟ್ಟರೆ, ನಾವು ಕೆಲವರು ಗೆಳೆಯರು ಕೆಲವೇ ಫರ್ಲಾಂಗ್‌ ದೂರದಲ್ಲಿ ಕಾಣುತ್ತಿದ್ದ ಮರಳಿನ ಗುಡ್ಡದ ಕಡೆಗೆ ಹೆಜ್ಜೆ ಹಾಕಿದೆವು. ಅಲ್ಲಿ ಕುರುಚಲು ಗಿಡಗಳು ಸಾಕಷ್ಟಿದ್ದವು. ಸುನಿಲ್ ಸುಧೀರ್‍ ಕ್ಯಾಮೆರಾ ಹಿಡಿದು ಓಡುತ್ತಿದ್ದರು, ನೋಡಿದರೆ ಕೃಷ್ಣಮೃಗವೊಂದು ಛಂಗನೆ ಜಿಗಿಯುತ್ತಾ ಓಡಿ ಮರೆಯಾಯಿತು. ಮರುಭೂಮಿಯಲ್ಲೂ ಹರಿಣಗಳು, ಮರಳು ನರಿಗಳು, ಮೊಲ, ನವಿಲು...ಹೀಗೆ ವಿವಿಧ ಪ್ರಾಣಿ ಪಕ್ಷಿಗಳಿವೆ. ಅವುಗಳ ರಕ್ಷಣೆಗಾಗಿ ರಾಜಸ್ತಾನ ಸರ್ಕಾರ ಥಾರ್‍ ಮರುಭೂಮಿಯ ಕೆಲಭಾಗಗಳನ್ನು ರಾಷ್ಟ್ರೀಯ ಉದ್ಯಾನವಾಗಿ ಘೋಷಿಸಿದೆ.

ಮುಂದಿನ ಕ್ಯಾಂಪ್‌ನಲ್ಲಿ ಸ್ನಾನ ಮಾಡಲು ಅವಕಾಶ ಇದೆ ಎಂದು ಕ್ಯಾಂಪ್ ಲೀಡರ್‍ ಹೇಳಿದ್ದು ನಮ್ಮ ಉತ್ಸಾಹ ಹೆಚ್ಚಿಸಿತು. ಯಾಕೆಂದರೆ ಕಳೆದ ಮೂರು ದಿನಗಳಿಂದ ಸ್ನಾನಕ್ಕೆ ಅವಕಾಶ ಇರಲಿಲ್ಲ. ಹಾಗಾಗಿ ಮುಂದಿನ ಕ್ಯಾಂಪ್‌ ಧನೇಲಿಗೆ ವೇಗವಾಗಿ ಹೆಜ್ಜೆ ಹಾಕಿದೆವು. ನಾವು ನಡೆದ ಸ್ಥಳಗಳಲ್ಲೇ ಈ ಭಾಗ ಸ್ವಲ್ಪ ಕ್ಲಿಷ್ಟಕರ. ಮೊದಲ ಕ್ಯಾಂಪ್‌ಗಳಿಗೆ ಬರುವಾಗ ದಾರಿಯಲ್ಲಿ ಬೈರಿ, ಖೈರ್‍, ಮುಂತಾದ ವೃಕ್ಷಗಳು ಸಿಗುತ್ತಿದ್ದವು, ಆದರೆ, ಈ ಭಾಗದಲ್ಲಿ ಮರಗಳೆ ಇಲ್ಲ, ಕಳ್ಳಿ ಮಾತ್ರ. ಅಂತೂ ಧನೇಲಿ ತಲಪಿ, ಅಲ್ಲಿನ ಬೋರ್‌ವೆಲ್‌ನ ಉಪ್ಪು ನೀರಿನಲ್ಲಿ ಸ್ನಾನ ಮುಗಿಸಿ ಆದಾಗ, ತಂಡದ ಮಹಿಳೆಯರೂ, ವಯಸ್ಕರೂ ಏದುಸಿರು ಬಿಡುತ್ತಾ ಬರುತ್ತಿದ್ದರು.


ಇನ್ನೊಂದೇ ದಿನ...ಕೊನೆಯ ಕ್ಯಾಂಪ್‌ ಬರ್ಣಾ. ಧನೇಲಿಯ ಹಳ್ಳಯ ಹೈಕಳು, ಅಲ್ಲಿನ ಮಜ್ಜಿಗೆ, ತುಪ್ಪ ತಂದು ಮಾರುತ್ತಿದ್ದರು. ತಂಡದ ಅನೇಕರಿಗೆ ಮನೆಯ ನೆನಪಾಯ್ತೋ ಏನೋ ಮಜ್ಜಿಗೆ ಸರಾಗ ಹೊಟ್ಟೆಗೆ ಇಳಿಸುತ್ತಿದ್ದರು. ಅಲ್ಲಿನ ಹಳ್ಳಿಗಳ ವಿಭಿನ್ನ ರೀತಿಯ ಮಣ್ಣಿನ ಮನೆಗಳು...ದೇಸೀ ಗೋವುಗಳು, ಕುರಿಗಳ ಮಂದೆ ನೋಡುತ್ತಾ ಮುಂದುವರಿದೆವು. ಬರ್ಣಾಕ್ಕೆ ಹೋಗುವ ದಾರಿಯೂ ಸ್ವಲ್ಪ ಕಷ್ಟಕರ. ಮಧ್ಯಾಹ್ನ ೧೨ರ ನಂತರ ಕಠಿಣವಾಗುವ ಬಿಸಿಲೇ ಇಲ್ಲಿ ಶತ್ರು ಅನೇಕರಿಗೆ. ಕೆಲವರಿಗೆ ನೀರು ಕುಡಿದಷ್ಟು ಸಾಲದು. ಅದೂ ಉಪ್ಪುಪ್ಪು ನೀರು....

ಅಂತು ಬಂತು ಬರ್ಣಾ. ಇದೂ ಪ್ರವಾಸಿ ಸ್ಥಳ, ಹಾಗಾಗಿ ಮೇಲ್ಭಾಗದ ಮರಳ ದಿಣ್ಣೆಗಳಲ್ಲಿ ಪ್ರವಾಸಿಗರು ಸಾಕಷ್ಟು ಬರುತ್ತಿರುತ್ತಾರೆ. ಈ ಹಳ್ಳಿಯ ವಿಶೇಷ ಖಾದ್ಯ ದಾಲ್ ಭಾಟಿ ಚೂರ್ಮಾ. ಗೋಧಿ, ತುಪ್ಪ, ಸಕ್ಕರೆ ಬಳಸಿ ಮಾಡುವ ಈ ಖಾದ್ಯ ಜನಪ್ರಿಯ, ನಮ್ಮ ರಾತ್ರಿಯ ಊಟಕ್ಕೂ ಅದೇ.

ಮರುದಿನ ನಮ್ಮನ್ನು ಬೇಸ್ ಕ್ಯಾಂಪ್‌ಗೆ ಕರೆದೊಯ್ಯಲು ಬಸ್ ಸಿದ್ಧವಾಗಿತ್ತು. ಕೊನೆಯ ಕ್ಯಾಂಪ್ ಆದ್ದರಿಂದ ಸಾಕಷ್ಟು ಗ್ರೂಪ್ ಫೋಟೋ ತೆಗೆದೆವು. ಕೈಲಿದ್ದ ಬಾಟಲಿ ತುಂಬ ಅಲ್ಲಿನ ನಯವಾದ ಮರಳು ತುಂಬಿಕೊಂಡು, ಬ್ಯಾಗೇರಿಸಿ, ಬರ್ಣಾದ ಕೆಂಚುಗೂದಲಿನ ಮಕ್ಕಳ ನಗುವನ್ನು ಮನಸ್ಸಲ್ಲಿ ಹಿಡಿದಿರಿಸಿ ಮರಳಿದ್ದು ಬೇಸ್‌ಕ್ಯಾಂಪ್‌ಗೆ.

ರಾತ್ರಿಯಾದರೆ ಮರಗಟ್ಟಿಸುವ ಛಳಿ, ಹಗಲು ಕೆಂಡದಂಥ ಬಿಸಿಲು, ಹೀಗೆ ಇಲ್ಲಿನ ವಿಪರೀತ ಹವಾಗುಣದಲ್ಲಿ ಬದುಕುವ ಜನ ಕಷ್ಟಜೀವಿಗಳು. ಅತಿಥಿಗಳನ್ನು ದೇವರಂತೆ ನೋಡಿಕೊಳ್ಳುವವರು. ಮರಳನ್ನೂ ಪ್ರೇಮಿಸುವವರು...ಅತಿಥಿಗಳನ್ನು ಆಹ್ವಾನಿಸುವ ರಾಜಸ್ತಾನಿ ಪದ್ಯವೊಂದರ ಸಾಲು ಹೀಗೆ ಸಾಗುತ್ತದೆ...

ಕೇಸರಿಯಾ ಪಾಲಮ್‌...ಆವೋಜೀ

ಪಧಾರೋ ಮಾರೇ ದೇಸ್‌ ಮೇ......

ಚಿತ್ರಗಳು:ಸುಧೀರ್‍/ವೇಣುವಿನೋದ್

1.11.07

ಸೂಚಿಪ್ಪಾರ ಫಾಲ್ಸ್ ಮಡಿಲಲ್ಲಿ(SOOCHIPPARA FALLS)

ರಾಜ್ಯದ ಪಶ್ಚಿಮಘಟ್ಟಗಳಲ್ಲಿ ಕಾಣಿಸಿಕೊಂಡ ನಕ್ಸಲರು, ಅವರನ್ನು ಬೆನ್ನು ಹಿಡಿಯುವ ನೆಪದಲ್ಲಿ ಚಾರಣಿಗರನ್ನು ಹಿಂಡುವ ಪೊಲೀಸ್, ಅರಣ್ಯ ಇಲಾಖೆ ಇವೆಲ್ಲದರಿಂದ ಕಳೆದ ವರ್ಷ ನಾವು ಕಂಗೆಟ್ಟಿದ್ದೆವು. ಹಾಗಾಗಿ ದಕ್ಷಿಣತುದಿಯ ನಾಡು ಕೇರಳಕ್ಕೊಮ್ಮೆ ಹೋದರೇನು ಎಂಬ ವಿಚಾರ ಹೊಳೆಯಿತು.
ಕರ್ನಾಟಕಕ್ಕೆ ಹೋಲಿಸಿದರೆ ಜೋಗ, ಕೂಸಳ್ಳಿ, ಅರಶಿನಗುಂಡಿಯತಹ ಜಲಧಾರೆಗಳಿಲ್ಲದಿದ್ದರೂ ಕೇರಳದಲ್ಲಿ ನೈಸರ್ಗಿಕ ರಮಣೀಯ ಜಾಗಗಳಿಗೇನೂ ಕೊರತೆಯಿಲ್ಲ. ಸೈಲೆಂಟ್ ವ್ಯಾಲಿ, ಮನೋಹರ ಹಿನ್ನೀರುಗಳು ಇವೆಲ್ಲದರಿಂದ ಕೇರಳ ಸಮೃದ್ಧ. ಹಾಗಾಗಿ ನೋಡೇ ಬಿಡೋಣ ಎಂದು ಕೇರಳವನ್ನೇ ಆರಿಸಿಕೊಂಡೆವು ನಮ್ಮ ಸುತ್ತಾಟಕ್ಕೆ. ಕೇರಳ ಎಂದಾಗ ಗೆಳೆಯರು ಏನು ಹೇಳ್ತಾರೋ ಎನ್ನುವ ಆತಂಕ ಇತ್ತು. ಆದರೆ, ಗಣಪತಿ, ವಸಂತ, ಕೃಷ್ಣಮೋಹನ ಎಲ್ಲರೂ ಹೋಗೋಣ ಎಂದು ಒಪ್ಪಿಗೆ ಸೂಚಿಸಿಬಿಟ್ಟರು.
ನಮ್ಮ ತಂಡದ ಬಾಲಕೃಷ್ಣ ಹೇಳಿದಂತೆ ಕೇರಳದ ಗುಡ್ಡಗಳ ಜಿಲ್ಲೆ ವಯನಾಡಿನಲ್ಲಿರುವ ಜಲಪಾತ ಸೂಚಿಪಾರ ಫಾಲ್ಸ್ ನಮ್ಮ ಗಮ್ಯ ತಾಣ.
ನಾವು ಹೊರಟಿದ್ದು ಮೇ ತಿಂಗಳ ಸುಡು ಸುಡು ಬಿಸಿಲಲ್ಲಿ. ಮಂಗಳೂರಿಂದ ರಾತ್ರಿ ರೇಲಿನಲ್ಲಿ ಹೊರಟು ಮುಂಜಾನೆ ಕೋಝಿಕೋಡ್ ನಿಲ್ದಾಣದಲ್ಲಿಳಿದೆವು. ನಿಲ್ದಾಣದಲ್ಲಿ ಇಳಿದು ಅಲ್ಲೇ ಇದ್ದ ಕ್ಯಾಂಟೀನಲ್ಲಿ ದಪ್ಪ ದಪ್ಪ ‘ದೋಷಂ’ ತಿಂದು ಕೋಝಿಕೋಡ್ ಬಸ್ ನಿಲ್ದಾಣದಲ್ಲಿ ವಿಚಾರಿಸಿ ವಯನಾಡಿನ ಕೇಂದ್ರ ಸ್ಥಾನವಾದ ಕಲ್ಪೆಟ್ಟಕ್ಕೆ ಹೋಗುವ ಬಸ್ಸೇರಿ ಕುಳಿತೆವು. ಕೋಝಿಕೋಡ್‌ನಿಂದ ಬರೋಬ್ಬರಿ ಮೂರು ಗಂಟೆ ಪ್ರಯಾಣದ ಬಳಿಕ ಕಲ್ಪೆಟ್ಟ ತಲಪಿದೆವು. ಒಂದು ರೀತಿಯಲ್ಲಿ ಹಿಲ್ ಸ್ಟೇಷನ್ ರೀತಿಯೇ ಇದೆ ಕಲ್ಪೆಟ್ಟ. ಊಟಿಗೆ ಹೋಗುವ ರೀತಿಯೇ ಘಾಟ್ ರಸ್ತೆ ಏರುತ್ತಾ ಹೋಗಬೇಕು. ಆದರೆ ಕಲ್ಪೆಟ್ಟದಲ್ಲಿ ನೈಸರ್ಗಿಕ ಸೌಂದರ್ಯವನ್ನು ಆದಷ್ಟು ಕೆಡಿಸಿದ್ದಾರೆ. ಕಾಡು ಕಡಿದು ರಬ್ಬರ್‍ ಹಾಕಲಾಗಿದೆ. ಅತ್ತ ಕೃಷಿಯೂ ಅಲ್ಲದೆ, ಕಾಡೂ ಇಲ್ಲದೆ ಗುಡ್ಡಗಳು ಬೋಳು...ಜಾಳು.
ಅಂತೂ ಕಲ್ಪೆಟ್ಟ ತಲುಪಿದ್ದಾಯಿತು. ಕಲ್ಪೆಟ್ಟದಲ್ಲಿ ನಮ್ಮ ತಂಡದ ಬಾಲಕೃಷ್ಣರ ದೂರದ ಸಂಬಂಧಿಯೊಬ್ಬರು ಕಲ್ಪೆಟ್ಟದಲ್ಲಿ ವಾಸಿಸುತ್ತಿದ್ದಾರೆ. ನಮ್ಮ ಚಾರಣಕ್ಕೆ ಅವರ ನೆರವನ್ನೂ ಕೋರಿದ್ದೆವು. ಅವರ ಮನೆ ಸೇರಿದಾಗ ಮಧ್ಯಾಹ್ನ ೧೨ ಗಂಟೆ. ಮಧ್ಯಾಹ್ನದ ಊಟ ಅಲ್ಲೆ ಮುಗಿಸಿ, ಅವರನ್ನೂ ಸೇರಿಸಿಕೊಂಡು ಜೀಪೊಂದರಲ್ಲಿ ಸೂಚಿಪ್ಪಾರ ಜಲಪಾತಕ್ಕೆ ಹೊರಟೆವು. ವಿಶಾಲ ಟೀ ಎಸ್ಟೇಟುಗಳ ಮಧ್ಯೆ ಸಾಗುತ್ತದೆ ಈ ಹಾದಿ. ಬೇಸಿಗೆಯಾದ್ದರಿಂದ ರಸ್ತೆ ಬರಡಾಗಿತ್ತು. ಜೀಪಿನೊಳಗೆ ಸೆಖೆ ಏಳುತ್ತಿತ್ತು.
ಜಲಪಾತಕ್ಕೆ ಇನ್ನೇನು ೨ ಕಿ.ಮೀ ಇದೆ ಎನ್ನುವಾಗ ಡಾಮರು ರಸ್ತೆ ಕೊನೆಯಾಗುತ್ತದೆ. ಮುಂದಕ್ಕೆ ನಡೆದೇ ಹೋಗಲು ನಿರ್ಧರಿಸಿದೆವು.
ಯಾವುದೇ ಕಷ್ಟವಿಲ್ಲದೆ ನಡೆದು ಹೋಗಬಹುದು ಜಲಪಾತಕ್ಕೆ. ಇಂಟರ್ನೆಟ್‌ನಲ್ಲಿ ಸರ್ಚ್ ಕೊಟ್ಟಾಗ ಕಾಣುವ ಸೂಚಿಪ್ಪಾರ ಫಾಲ್ಸ್ ನೋಡಿದರೆ ಅಷ್ಟೇನೂ ವಿಶೇಷ ಕಾಣುವುದಿಲ್ಲ. ಆದರೆ ಅಲ್ಲಿಗೆ ತೆರಳಿ ಅಡ್ಡಾಡಿದಾಗ ಸೂಚಿಪ್ಪಾರ ಫಾಲ್ಸ್ ಹರವು ತೆರೆದುಕೊಳ್ಳುತ್ತದೆ. ವಿಶಾಲವಾದ ಕಣಿವೆಯಲ್ಲಿ ನೀರು ಹರಿಯುತ್ತಾ ಸಾಗುವುದನ್ನು ನೋಡುವುದೇ ಆಹ್ಲಾದಕರ. ಮಳೆಗಾಲದಲ್ಲಿ ಹೋದರೆ ಇನ್ನಷ್ಟು ಸೂಕ್ತ ಎಂದರು ನಮ್ಮ ಮಾರ್ಗದರ್ಶಿ.


ಸೂಚಿಪ್ಪಾರ ಅಂದರೆ....

ಸೂಚಿಪ್ಪಾರ ಎಂದರೆ ಸೂಜಿಮೊನೆಯಂತಹ ಕಲ್ಲು ಎಂದು ಮಲಯಾಳಂ ಅರ್ಥ. ಈ ಜಲಪಾತ ಹರಿದು ಸಾಗುವ ಕಣಿವೆ ಮೇಲೊಂದು ಸೂಜಿಯಂತಹ ಉದ್ದ ಕಲ್ಲು ಇದ್ದ ಕಾರಣ ಈ ಹೆಸರು ಜಲಪಾತಕ್ಕೆ ಬಂದಿರಬಹುದು ಎನ್ನುತ್ತಾರೆ ಸ್ಥಳೀಯರು. ಆದರೆ ಈಗ ಆ ಕಲ್ಲು ಯಾವುದೋ ಕಾರಣದಿಂದ ಅರ್ಧತುಂಡಾಗಿದೆ.
ಕಣಿವೆಯ ನೋಟದ ಬಳಿಕ ಸೂಚಿಪ್ಪಾರದ ಪ್ರಮುಖ ಜಲಧಾರೆಯ ಬಳಿ ತೆರಳಿ ಮನಸೋ ಇಚ್ಛೆ ಈಜಾಡಿದೆವು. ಬೇಸಿಗೆಯ ತುದಿಯಾಗಿದ್ದರೂ ನೀರಿಗೆ ಕೊರತೆ ಇರಲಿಲ್ಲ.

ನಮಗೆ ಅಂದೇ ಮರಳಬೇಕಾದ ಒತ್ತಡ ಇತ್ತು, ಹಾಗಾಗಿ ವಯನಾಡಿನ ಇನ್ನೊಂದು ಸುಂದರ ಜಲಪಾತ ಮೀನ್ ಮಟ್ಟಿ ಫಾಲ್ಸ್ ನೋಡಬೇಕಿತ್ತು. ಜೀಪ್‌ನಲ್ಲಿ ಹಿಂತಿರುತ್ತಿದ್ದಾಗ ಇನ್ನಷ್ಟು ಗುಡ್ಡಬೆಟ್ಟಗಳೂ ದೂರದಿಂದಲೇ ನಮಗೆ ಆಹ್ವಾನ ನೀಡುತ್ತಿದ್ದವು. ಅವೆಲ್ಲವನ್ನೂ ಇನ್ನೊಂದು ದಿನ ನೋಡುವ ಹಂಬಲದೊಂದಿಗೇ ಹಿಂತಿರುಗಿದೆವು.


ನೆನಪಿರಲಿ...ಕೇರಳದ ತಾಣಗಳಿಗೆ ಹೋಗಬೇಕಾದರೆ ಕನಿಷ್ಠ ಒಂದು ದಿನ ರೈಲು ಪ್ರಯಾಣ ಮಾಡಲೇ ಬೇಕು. ಹಾಗಾಗಿ ಸಾಕಷ್ಟು ರಜೆ ಹಾಕಿ ತೆರಳುವುದೇ ಸೂಕ್ತ. ಇಲ್ಲವಾದರೆ ಪ್ರಯಾಣಕ್ಕೆ ತಕ್ಕಷ್ಟು ಸ್ಥಳ ನೋಡಿದ ತೃಪ್ತಿ ಇರುವುದಿಲ್ಲ. ಅದರಲ್ಲೂ ವಯನಾಡ್ ನೋಡುವುದಾದರೆ ಕೋಝಿಕೋಡ್‌ನಿಂದ ವಾಹನವೊಂದನ್ನು ಗೊತ್ತು ಮಾಡಿಕೊಂಡರೆ ಇಲ್ಲಿರುವ ಸೂಚಿಪ್ಪಾರ, ಮೀನ್ ಮಟ್ಟಿ ಫಾಲ್ಸ್, ಚೆಂಬರ ಹಿಲ್ಸ್, ಎಡಕ್ಕಲ್ ಗುಹೆ ಇತ್ಯಾದಿ ನೋಡಿ ಖುಷಿ ಪಡಬಹುದು.
ಚಿತ್ರಗಳು: ಗಣಪತಿ ಸುರತ್ಕಲ್

28.10.07

ನಾವ್ಯಾಕೆ ಹಿಂಗೆ?

ಎಲ್ಲಿಂದಲೋ ಬಂದವರು ನಮ್ಮ ಮನಸೊಳಗೆ ಜಾಗ ಪಡೆದುಬಿಡುತ್ತಾರೆ, ಇನ್ನು ಕೆಲವರು ನಮ್ಮ ನಡುವೆಯೇ ಇದ್ದೋರೂ ಅಪರಿಚಿತರಾಗುತ್ತಾರೆ! ಅದೂ ಭಾಷೆಯ ಕಾರಣದಿಂದ.
ಅಲ್ಲಿಲ್ಲಿ ನೋಡಿದಾಗ, ಕೇಳಿದಾಗ ನಂಗೆ ಕಂಡುಬಂದದ್ದಿದು.
ಯು೨ ಚಾನೆಲ್ಲಿನ ನಿರೂಪಕರು ಕನ್ನಡ ಬಾರದೆ, ಕಷ್ಟಪಟ್ಟು ಆಂಗ್ಲಮಿಶ್ರಿತ ಕನ್ನಡದಲ್ಲಿ ಮಾತನಾಡುವುದೇ ತಮಗೆ ಹೆಮ್ಮೆ ಎಂದುಕೊಳ್ಳುತ್ತಾರೆ. ಆದ್ರೆ ಭಾನುವಾರ ರಾತ್ರಿ ‘ಎದೆತುಂಬಿ ಹಾಡಿದೆನು’ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ತೆಲುಗುಮೂಲದ ಆದರೆ ಕನ್ನಡದ ಹೆಮ್ಮೆಯ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಕನ್ನಡ ಓದಲು ಬರದಿದ್ದರೂ ಅದೆಷ್ಟು ಚೆನ್ನಾಗಿ ಆದಷ್ಟು ಶುದ್ಧವಾಗಿ ಕನ್ನಡ ಮಾತನಾಡಲು ಯತ್ನಿಸುತ್ತಾರೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಅಲ್ಲಿ ವೇದಿಕೆಗೆ ಬರುವ ಮಕ್ಕಳಲ್ಲಿ ಉಚ್ಛಾರ, ವ್ಯಾಕರಣ ಸರಿಪಡಿಸಲು ಯತ್ನ ಮಾಡುತ್ತಾರೆ!
ನಮ್ಮವರೇ ಅಂದುಕೊಳ್ಳುವ ಕನ್ನಡದ ನಟೀಮಣಿಯರಾದ ರಮ್ಯ, ರೇಖಾ ಮುಂತಾದವರೆಲ್ಲ ಲವ್ಲಿ ಲಂಡನ್ನಿಂದ ಬಂದ ಹಾಗೆ ಮಾಡಿದ್ರೆ ದೂರದ ಪಂಜಾಬಿನಿಂದ ಬಂದು ಮುಂಗಾರು ಮಳೆಯಲ್ಲಿ ಮಿಂದ ಬಳಿಕ ಕನ್ನಡಿಗರಿಗೆ ಆಪ್ತವಾದ ಸಂಜನಾ ಗಾಂಧಿ ಮಾತ್ರ ಕನ್ನಡ ಕಲಿತೇ ಬಿಟ್ಟಿದ್ದಾರೆ. ವರದಿಗಾರರಲ್ಲಿ ‘ಕನ್ನಡದಲ್ಲಿ ಪ್ರಶ್ನೆ ಕೇಳಿ ಪರವಾಗಿಲ್ಲ’ ಎಂದು ಸರಳತೆ ಮೆರೆಯುತ್ತಾರೆ.
ನಾವು ನಾವಾಗಲು
ಮರೆತುಬಿಟ್ಟಿದ್ದೇವೆ
ಬೇರೆ ಯಾರೋ
ಆಗಲು ಹೋಗಿ
ನಮ್ಮವರಿಂದ
ದೂರವಾಗುತ್ತಿದ್ದೇವೆ...
ನಮ್ಮತನವನ್ನೂ ಕಳೆಯುತ್ತೇವೆ
ಬಲುಹೆಮ್ಮೆಯಿಂದ!

19.10.07

ಅಮ್ಮನ ಕೈತೋಟ(mothers' garden)



ಅಮ್ಮನ ಪ್ರೀತಿಯ
ಕೈತೋಟದಲ್ಲಿ
ಅರಳಿವೆ ಖುಷಿಯ
ಹೂವುಗಳು
ವಸಂತಕ್ಕೆ ವಸಂತವೇ
ಮೈಮರೆತು ಕುಳಿತಂತೆ....

ಕೆಂಗುಲಾಬಿಯ ಒನಪು
ಮಂದಾರಪುಷ್ಪದ ನಲಿವು
ಕೆಂಪು-ಹಳದಿ
ದಾಸವಾಳಗಳು ಎಲ್ಲೆಲ್ಲು
ಅರೆಬಿರಿದ ಜಾಜಿಮಲ್ಲಿಗೆ
ಸೇವಂತಿಗೆ ತೋಟತುಂಬ
ನಗುವೇ ನಗು
ಲಾವಣ್ಯದ ಪ್ರಭೆಯಲ್ಲಿ
ತೊಯ್ದಾಡಿವೆ ಹೂಗಳು

ಅಮ್ಮನ ಬೆತ್ತದ
ಬುಟ್ಟಿಗೆ ಸೇರಿದ
ಹೂಗಳಿಗೆ ದೇವರ
ಪಾದಸ್ಪರ್ಶದ ಭಾಗ್ಯ
ಇನ್ನೊಂದಿಷ್ಟು ಕುಸುಮಗಳಿಗೆ
ನೆರೆಮನೆ ಪೋರಿಯ
ಕೂದಲ ಮೇಲೆ ಮೆರೆಯುವ
ಅದೃಷ್ಟ.

ಅಮ್ಮನ ಕೈತೋಟದ
ಹೂಗಳು ಯಾವಾಗಲೂ
ನಗುತ್ತವೆ,
ಅಮ್ಮನನ್ನೂ ನಗಿಸುತ್ತವೆ!

14.10.07


ಹೊಟ್ಟೆ ಹಸೀತಿದೆ ಎಂದು ಈ ಥರಾ ಪಾರ್ಕ್ ಮಾಡೋದೇ?!
ಮಂಗಳೂರಿನ ನಮ್ಮ ಕಚೇರಿ ಬಳಿಯೇ ಕಂಡುಬಂದ ದೃಶ್ಯ ಇದು. ವಿಶಾಲ ಪಾರ್ಕಿಂಗ್ ಇರುವ ಕಾರಣ ನಮ್ಮ ಕಚೇರಿ ಬಳಿಯ ಹೊಟೇಲ್‌ಗೆ ತಮ್ಮ ವಾಹನದಲ್ಲಿ ಧಾವಿಸಿ ಬರುವವರ ಸಂಖ್ಯೆ ಅಧಿಕ. ಕೆಲವರಂತೂ ಅತಿ ವೇಗದಲ್ಲಿ ಜೀವ ತೆಗೆಯುವ ರೀತಿ ಬರುತ್ತಾರೆ. ಅಂತಹವನೇ ಒಬ್ಬ ವೇಗ ನಿಯಂತ್ರಿಸಲಾಗದೆ ಮುಗ್ಗರಿಸಿದ್ದು ಹೀಗೆ....
(ಮೊಬೈಲ್ ಕ್ಯಾಮೆರಾದಲ್ಲಿ ತೆಗೆದ ಚಿತ್ರ, ಕಳಪೆ ಗುಣಮಟ್ಟಕ್ಕೆ ಕ್ಷಮೆ ಇರಲಿ)

7.10.07

ಕನವರಿಕೆಗಳು

ಮಂಜಲ್ಲಿ ತೊಯ್ದ
ಗಿಡಗಳು
ತೆಕ್ಕೆಯಲ್ಲಿ ಹಾಯಾಗಿ
ಮಲಗಿದ್ದರೂ,
ಪ್ರೀತಿ ತೋರಿಸದೆ
ತಣ್ಣನೆ ಭಾವನಾರಹಿತವಾಗಿ
ಉರುಳಿಹೋಗುತ್ತವೆ
ಈ ರಾತ್ರಿಗಳಿಗೇನು ಧಾಡಿ?
ವಿರಹಿಗಳ ನೋವು
ನರಳಿಕೆಯ ಕಾವು
ನವವಿವಾಹಿತರ


ಬಿಸುಪು, ಪ್ರೇಮಿಗಳ
ಕನವರಿಕೆ
ಎಲ್ಲವನ್ನೂ ನೀವಾಳಿಸಿ
ಎಸೆಯುವಂತೆ
ಬಣ್ಣಗೆಟ್ಟ ರಾತ್ರಿಗಳು
ಮುಗಿದುಬಿಡುತ್ತಿವೆ!

ಕನಿಷ್ಠ ಚಂದಿರನಾದರೂ
ಅಂಧಕಾರದ ರಾತ್ರಿಗಳಿಗೆ
ಬಣ್ಣಕೊಡುತ್ತಿದ್ದರೆ
ಚೆನ್ನಾಗಿರುತ್ತಿತ್ತು
ಭಾವರಹಿತರಾತ್ರಿಗಳಿಗೆ
ಒಂದಷ್ಟು ಅರ್ಥಸಿಗುತ್ತಿತ್ತು

ಚಂದಿರನನ್ನೂ
ಹದಿನೈದು ದಿನಕ್ಕೇ
ಓಡಿಸುವ ರಾತ್ರಿಗಳಿಗೆ
ಅದೆಷ್ಟು ಅಹಂಕಾರ?

1.10.07

ಕಲ್ಪನೆ

ಕಲ್ಪನೆಯೆಂಬ ಪೆಡಂಭೂತಕ್ಕೆ
ತಲೆ, ಕೈಕಾಲು
ಕಣ್ಣು, ಮೂಗು ಯಾವುದೂ ಇಲ್ಲ
ಆದರೂ, ಕಲ್ಪನೆ
ಹೆದರಿಸಿಬಿಡುತ್ತದೆ
ಬ್ರಹ್ಮರಕ್ಕಸನಿಗಾದರೂ
ವಿಕರಾಳ ಮುಖ,
ಉದ್ದುದ್ದ ಉಗುರು
ಕೋರೆ ಹಲ್ಲು ಇರುತ್ತದಂತೆ
ಅದಕ್ಕಾದರೂ ಬೆದರದೇ ಇರಬಹುದು
ಆದರೆ
ಕಲ್ಪನೆ ಎದೆ ನಡುಗಿಸಿಬಿಡುತ್ತದೆ
ಕಲ್ಪನೆಗೆ ಆದಿ ಅಂತ್ಯ ಇಲ್ಲ
ಹುಡುಗಿಯ ಸುಂದರ
ಜಡೆ ಕಾಳಸರ್ಪವಾಗುತ್ತದೆ
ನಳನಳಿಸುವ ಹೂಗಳೆಲ್ಲ
ಭಗ್ಗನೆ ಉರಿದು ಕೆನ್ನಾಲಿಗೆ
ನಲಿಯಬಹುದು!
ತಣ್ಣನೆ ಮಲಗಿದ ಸರೋವರ-
-ದ ಗರ್ಭದಿಂದ ಸುನಾಮಿ
ಎದ್ದು ಬರಬಹುದು.
ಅದಕ್ಕೇ ಕಲ್ಪನೆಗೆ
ಹೆದರುತ್ತೇನೆ ನಾನು

19.9.07

ಕೇರಳದ ಹಿನ್ನೀರಿನ ಬಿಂಬಗಳು....(backwaters of kerala)

ಸದಾ ಹಸಿರಾದ ತೆಂಗಿನ ಮರಗಳು ಅದ್ದಿಕೊಂಡಂತೆ ಕಾಣುವ ನೀರು....ತಮ್ಮ ಬದುಕಿನ ಅವಿಭಾಜ್ಯ ಗಳಿಗೆಗಳನ್ನು ಈ ನೀರಿನೊಂದಿಗೇ ಕಳೆಯುವ ಜನತೆ... ಚಲಿಸುವ ಬೆತ್ತದ ಮನೆಗಳಂತೆ ಭಾಸವಾಗುವ ದೋಣಿಮನೆಗಳು.....
ಕೇರಳದ ಆಲೆಪ್ಪಿ, ಕೊಟ್ಟಾಯಂ ಜಿಲ್ಲೆಗಳಲ್ಲಿನ ಹಿನ್ನೀರಿಗೊಮ್ಮೆ ಭೇಟಿಕೊಟ್ಟರೆ ಕಂಡುಬರುವ ದೃಶ್ಯಾವಳಿ ಇದು.

ಭಾರತದ ದಕ್ಷಿಣತುದಿಯಲ್ಲಿರುವ ಈ ರಾಜ್ಯ ತನ್ನ ಹಿನ್ನೀರು, ದೋಣಿಮನೆಗಳಿಂದಲೇ ಪ್ರವಾಸೋದ್ಯಮದಲ್ಲಿ ಮೇಲುಗೈ ಸಾಧಿಸಿದೆ. ದೇವರ ವಾಸದ ಮನೆ ಎಂದು ಹಿಂದೊಮ್ಮೆ ಮಾಜಿ ಪ್ರಧಾನಿ ವಾಜಪೇಯಿ ಉದ್ಗರಿಸಿದ್ದು ನೆನಪಿದೆಯೇ? ಇಲ್ಲಿನ ದೃಶ್ಯಾವಳಿಗಳೇ ಹಾಗೆ. ಕಲಾವಿದನೆಲ್ಲಾದರೂ ಇಲ್ಲಿ ಬಂದರೆ ಪುಟಗಟ್ಟಲೆ ಸ್ಕೆಚ್ ಹಾಕದೆ ಮರಳೋದು ಕಷ್ಟ.

ಇಂತಿಪ್ಪ ಹಿನ್ನೀರನ್ನೊಮ್ಮೆ ನೋಡಿಯೇ ಬಿಡೋಣ ಎಂದು ಮಿತ್ರರ ಜತೆ ಸೇರಿ ಮಂಗಳೂರಿನಿಂದ ಸಂಜೆ ತಿರುವನಂತಪುರಂಗೆ ತೆರಳುವ ಮಂಗಳೂರು ಎಕ್ಸ್‌ಪ್ರೆಸ್(ಸಂಜೆ ೬ ಗಂಟೆಗೆ ನಿರ್ಗಮನ) ಏರಿಯೇಬಿಟ್ಟೆ. ರೈಲಿನ ಹಿತವಾದ ಕುಲುಕಾಟಕ್ಕೆ ಗಾಢ ನಿದ್ರೆಯಲ್ಲಿರುವಾಗಲೇ ಕೊಟ್ಟಾಯಂ ಬಂದೇ ಬಿಡ್ತು. ಮುಂಜಾನೆ ೫.೧೫ರ ವೇಳೆಗೆ ಕೊಟ್ಟಾಯಂ ರೈಲು ನಿಲ್ದಾಣದಲ್ಲಿಳಿಯಿತು ನಮ್ಮ ೬ ಮಂದಿಯ ತಂಡ. ಜಿಟಿಜಿಟಿ ಮಳೆ ಬೇರೆ ಚಳಿ ಹಿಡಿಸಿಬಿಟ್ಟಿತ್ತು. ಕೊಟ್ಟಾಯಂ ನಿಲ್ದಾಣದಲ್ಲಿ waiting room ಇದ್ದ ಕಾರಣ, ಸ್ನಾನ, ಶೌಚಕ್ಕೆ ತೊಂದರೆಯಾಗಲಿಲ್ಲ. ಮಂಗಳೂರಿಂದಲೇ ಮಾಲತಿ ಅಕ್ಕನ ಸ್ಪೆಷಲ್ ಮೂಡೆ(moode!), ಸೇಮಿಗೆ ಪ್ಯಾಕ್ ಮಾಡಿ ಕೊಂಡೊಯ್ದ ಕಾರಣ ಹೊಟ್ಟೆಗೂ ಚಿಂತೆ ಇರಲಿಲ್ಲ.


ಎಲ್ಲಾ ಮುಗಿಸಿ ಕೊಟ್ಟಾಯಂ ರೈಲು ನಿಲ್ದಾಣದಿಂದ ಹೊರಬಿದ್ದು ಬಸ್ ನಿಲ್ದಾಣಕ್ಕೆ ತೆರಳಿದೆವು. ಅಲ್ಲಿಂದ ಕುಮಾರಕಂ ಬೋಟ್ ಜೆಟ್ಟಿಗೆ ಬಸ್ಸಲ್ಲಿ ಅರ್ಧ ಗಂಟೆ ಪಯಣ. ಆ ಪಯಣದಲ್ಲೇ ಹಿನ್ನೀರಿನ ಚಿಕ್ಕ ದರ್ಶನವಾಗಿತ್ತು ನಮಗೆ. ಬಸ್ ಖಾಲಿ ಇದ್ದ ಕಾರಣ ನಮ್ಮ ತಂಡದಲ್ಲಿದ್ದ ವಿಡಿಯೋಗ್ರಾಫರ್‍ ಶಕ್ತಿ, ತಮ್ಮ ಶಕ್ತಿ ಮೀರಿ ಹೊರಗಿನ ದೃಶ್ಯ ಸೆರೆಹಿಡಿಯುತ್ತಿದ್ದರು.




ಬಸ್ಸಿಳಿದು ಬೋಟ್ ಜೆಟ್ಟಿಗೆ ತೆರಳಿದರೆ ಮಳೆಯಿಂದಲೋ ಏನೋ ಅಲ್ಯಾರೂ ಪ್ರವಾಸಿಗಳು ಕಾಣಲಿಲ್ಲ. ಬೋಟ್ ಟಿಕೆಟ್ ಕೌಂಟರನಲ್ಲಿದ್ದಾತ ಗಂಟೆಗೆ ೩೦೦ ರು. ಕೊಟ್ಟರೆ ಖಾಸಗಿ ಬೋಟ್, ಇಲ್ಲದಿದ್ದರೆ ಆಲೆಪ್ಪಿಯ ಮುಹಮ್ಮ ಎಂಬಲ್ಲಿಗೆ ಹೋಗುವ ಕೇರಳ ರಾಜ್ಯದ ಫೆರಿ ಇದೆ ಎಂಬ ಮಾಹಿತಿ ಕೊಟ್ಟ. ಕಡಿಮೆಯಲ್ಲಿ ಸಿಗುವ ಸರ್ಕಾರಿ ನೌಕೆಯನ್ನೇ ಆರಿಸಿಕೊಂಡೆವು.

ಅದಾಗಲೇ ಫೆರಿ ಸಿದ್ಧವಾಗಿತ್ತು. ನಿಧಾನವಾಗಿ ಸಪುರ ತೋಡಿನಂತಹ ನೀರಿನಿಂದ ಹೊರಹೋದ ನೌಕೆ ಒಮ್ಮೆಲೇ ಸಮುದ್ರದಂತೆ ಕಾಣುವ ವಿಶಾಲ ಹಿನ್ನೀರಿನ ವೆಂಬನಾಡು ಸರೋವರಕ್ಕೆ ಸೇರಿ ಪ್ರಯಾಣ ಮುಂದುವರಿಸಿತು. ಮೋಡ ಮುಸುಕಿದ್ದರಿಂದ ನಮ್ಮ ಉತ್ಸಾಹವೂ ಅಷ್ಟಿರಲಿಲ್ಲ.



ಆದರೂ ಮೊದಲ ಬಾರಿಗೆ ನೋಡುತ್ತಿರುವ ಕಾರಣ, ಬೋಟೂ ಖಾಲಿ ಇದ್ದ ಕಾರಣ ಕುತೂಹಲದಿಂದಲೇ ಹಿನ್ನೀರು ನೋಡಿದೆವು. ಛಾಯಾಗ್ರಾಹಕ ಮಿತ್ರ ಗಣಪತಿ, ವಸಂತ ಅನಿಯಂತ್ರಿತವಾಗಿ ಫೋಟೋ ಕ್ಲಿಕ್ಕಿಸುತ್ತಿದ್ದರು. ನಸು ನೀಲಿ-ಹಸಿರು ನೀರಲ್ಲಿ ಅದೊಂದು ತುಸು ನೀರಸ ಪಯಣವೇ. ಯಾಕೆಂದರೆ ನಾವು ನಿರೀಕ್ಷಿಸಿದ ತೆಂಗಿನ ತೋಟವಾಗಲೀ, ಹಸಿರು ಗದ್ದೆಯಾಗಲೀ ಕಾಣದಂತೆ ಸರೋವರದ ನಡುಮಧ್ಯೆ ನೌಕೆ ಸಾಗುತ್ತಿತ್ತು! ಕೆಲವೊಂದು ಮೀನುಗಾರರ ದೋಣಿ, ಒಂದೆರಡು ದೋಣಿಮನೆಗಳು, ಕೆಲವು ನೀರು ಕಾಗೆ ಬಿಟ್ಟರೆ ಬೇರೇನೂ ಆಸಕ್ತಿ ತರಲಿಲ್ಲ.

ಅಂತೂ ೪೫ ನಿಮಿಷ ನಂತರ ಮುಹಮ್ಮ ಬಂತು. ಅಲ್ಲಿಂದ ಆಲೆಪ್ಪಿಗೆ ಮತ್ತೆ ಅರ್ಧ ಗಂಟೆ(13 k.mts) ಪ್ರಯಾಣ ಬಸ್ಸಿನಲ್ಲಿ. ಆಲೆಪ್ಪಿಯಲ್ಲಿಳಿದು, ಅಲ್ಲಿನ ರಾಜೇಶ್ವರಿ ದೇವಸ್ಥಾನದಲ್ಲಿ ಚಿಕ್ಕ ಪ್ರಾರ್ಥನೆ ಸಲ್ಲಿಸಿ ಆಲೆಪ್ಪಿಯ ಬೋಟ್ ಜೆಟ್ಟಿಗೆ ಬಂದೆವು. ಅಲ್ಲಿನ ಏಜೆಂಟನೊಬ್ಬನನ್ನು ಹಿಡಿದು ಮೋಟಾರ್‍ ಲಾಂಚೊಂದನ್ನು ಗೊತ್ತು ಮಾಡಿದೆವು.

ಅದು ನೋಡಿ ನಿಜವಾದ ಹಿನ್ನೀರು ದರ್ಶನ!

ಕೇರಳದ ಪ್ರಸಿದ್ಧ ನೆಹರೂ ಕಪ್ ದೋಣಿ ರೇಸಿನ ಸ್ಥಳ ಇಲ್ಲೇ ಇದೆ. ಇಬ್ಬರೇ ಹೋಗುವ ಚಿಕ್ಕ ದೋಣಿ, ಫೈಬರ್‍, ಮರ, ಅಲ್ಯುಮಿನಿಯಂ, ಕಬ್ಬಿಣದ ಕಲರ್‍ ಫುಲ್ ದೋಣಿಗಳು, ಕೇರಳ ಶೈಲಿಯ ದೋಣಿಮನೆಗಳು ಜೆಟ್ಟಿಯ ಇಕ್ಕೆಲಗಳಲ್ಲೂ ಇದ್ದರೆ, ಒಂದೆರಡು ಹಳೆಯ ನೌಕೆಗಳು ಕಾಲನ ಬರುವಿಕೆಗೆ ಕಾದಂತೆ ಅರ್ಧಮುಳುಗಿದ ಸ್ತಿತಿಯಲ್ಲಿದ್ದವು.

ಅಷ್ಟು ವಿಶಾಲವಲ್ಲದ, ಇಕ್ಕೆಲಗಳಲ್ಲೂ ತೂಗುವ ತೆಂಗಿನ ಮರಗಳಿರುವ ಅದರ ಅಡಿಯಲ್ಲಿ ಹೆಂಚಿನ ಮನೆಯಿರುವ ಸುಂದರ ಪ್ರದೇಶವದು. ಮಲಯಾಳಂ ಚಿತ್ರಗಳ ಚಿತ್ರೀಕರಣವೂ ನಡೆಯುವ ಕುಟ್ಟನಾಡು ಎಂಬ ಹಳ್ಳಿಯನ್ನೂ ಈ ಪ್ರಯಾಣದಲ್ಲಿ ನೋಡಬಹುದು.

ವಿಶಾಲವಾದ ನಸುಹಸಿರು ಗದ್ದೆಗಳು, ತೆಂಗು, ಬಾಳೆ, ನಮ್ಮಲ್ಲಿ ಬೈಕ್-ಕಾರ್‍ ಇರುವಂತೆ ಮನೆಗೊಂದು ದೋಣಿ ಮನ ಮುದಗೊಳಿಸುತ್ತವೆ. ನಮ್ಮಲ್ಲಿನ ಬಾವಿಕಟ್ಟೆಯಂತೆ ಇವರಿಗೊಂದು ಹಿನ್ನೀರಿನ ಕಟ್ಟೆ. ಪಾತ್ರೆ, ಬಟ್ಟೆ ತೊಳೆಯಲು, ಸ್ನಾನಕ್ಕೆ.
ಒಂದು ಊರಿಂದ ಇನ್ನೊಂದು ಊರಿಗೆ ಹೋಗುವುದಕ್ಕೆ ಜಲಮಾರ್ಗವೇ ಇವರ ಆಯ್ಕೆ.
ಮಳೆಮರೆಯಾಗಿ, ಬಿಸಿಲು ಕಾಣಿಸಿದ್ದು ಉತ್ಸಾಹವನ್ನೂ ಚಿಗುರಿಸಿತು. ದಾರಿಯುದ್ದಕ್ಕೂ ಕಂಡದ್ದು ದೋಣಿಮನೆಗಳು. ಇಲ್ಲಿನ ಪ್ರಮುಖ ಆಕರ್ಷಣೆ. ೬೦೦ರಷ್ಟು ವಿವಿಧ ನಮೂನೆಯ ದೋಣಿಮನೆ ಇಲ್ಲಿವೆಯಂತೆ. ಅಕ್ಟೋಬರ-ಮೇ ಸೀಸನ್ನು. ಆಗ ಬೇಡಿಕೆ ಜಾಸ್ತಿ. ರೇಟೂ ಭಾರಿ. ವಿದೇಶೀಯರು, ವಿಐಪಿಗಳಿಗೇ ಹೆಚ್ಚಾಗಿ ಬಳಕೆ. ಈ ದೋಣಿಮನೆ ನಿರ್ಮಿಸುವ, ದುರಸ್ತಿ ಮಾಡುವ ಕೈಗಾರಿಕೆಯೂ ಇಲ್ಲಿದೆ.

ಹಿನ್ನೀರು ಪ್ರಯಾಣದಲ್ಲೇ ಉಳಿದಿದ್ದ ಮೂಡೆಗೆ ಮೋಕ್ಷ ಕಾಣಿಸಿ, ಎರಡು ಗಂಟೆಗಳ ನಮ್ಮ ಪ್ರಯಾಣಕ್ಕೆ ನೌಕೆ ಚಾಲಕನಿಗೆ ೭೦೦ ರು. ನೀಡಿ ಬೋಟಿಳಿದೆವು.

ಸೀಸನ್ನಿನಲ್ಲಿ ಮೋಟರು ಲಾಂಚಿಗೆ ೧೦೦೦ ರು. ನೀಡಬೇಕಾಗುತ್ತದೆ. ದೋಣಿಮನೆಗೆ ೫ರಿಂದ ೧೦ ಸಾವಿರ ರು.
ಆಲೆಪ್ಪಿಯಲ್ಲಿ ಬೇರೇನಿದೆ ಎಂದು ಕೇಳಲೇ ಬೇಡಿ. ಹೋಗುವುದಾದರೆ ಹೋಗಬೇಕು, ಹಿನ್ನೀರೇ ನೋಡಬೇಕು. ಸಮುದ್ರ ನೋಡದವರಾದರೆ ಆಲೆಪ್ಪಿಯ ಬೀಚು ನೋಡಬಹುದು. ಶುಭಪ್ರಯಾಣ!





10.9.07

ಒಂದು ಬೀದಿ ಕಥೆ


ಮೊನ್ನೆ ಬಿದ್ದ ಮಳೆಗೆ
ಕೊಚ್ಚೆರಾಡಿಯಾಗಿದ್ದ
ಬೀದಿಯಲ್ಲಿ ಈಗ ಬಿಸಿಲಹಬ್ಬ
ನೆರೆಯ ನೆರಳ
ಮರಗಳಿಂದ ಬಿದ್ದ
ಕಂದು ಹಳದಿ ಎಲೆಯ ದಿಬ್ಬ


ಹಾಸಿಗೆಗಂಟಿಸುವ
ಮಳೆಯಿಲ್ಲ ಹಾಗಾಗಿ
ಬೀದಿಗೊಂಥರಾ ಸಂಭ್ರಮ
ಮುಂಜಾನೆಯ ಪೇಪರ್‍
ಹುಡುಗನ ಸೈಕಲ್ಲು
ಹಾಲಿನವನ ಮೋಪೆಡ್ಡು
ಶಾಲೆ ಹುಡುಗರ
ಉತ್ಸಾಹವೇ ತೋರಣ


ಮೀನ ಬುಟ್ಟಿಯಿಂದ
ಸೋರಿದ ಮತ್ಸ್ಯಗಂಧ
ಬಿರಿದ ಸಂಪಿಗೆಯ ಮಕರಂದ
ಪಯಣಿಗರಿಗೆ ಈಗ
ಬೀದಿ ಪರಮಾಪ್ತ

ರಾತ್ರಿ ಮತ್ತೆ ಬೀದಿಗೆ ಜ್ವರ
ರಸ್ತೆಯಗಲ ಮಾಡುವಾಗ
ಕಳೆದುಹೋದ ಆಲದಮರ,
ಕಟ್ಟೆಯಲ್ಲಿ ಮಲಗೆದ್ದು
ಓಡುವಾಗ ಬಸ್ಸಡಿಗೆ ಸಿಕ್ಕ
ನಾಯಿಮರಿ
ಇಲ್ಲದೆ ಬಿಕ್ಕುತ್ತಿದೆ ಬೀದಿ
ಬಿದಿಗೆ ಚಂದಿರನ
ಮಂಕುಬೆಳಕಲ್ಲಿ ಅಂತ್ಯವಿಲ್ಲದೆ
ಬಿದ್ದುಕೊಂಡಿದೆ ಹಾದಿ

29.8.07

ಮುನಿದು ಕೂತ ಮುದ್ದು ತಂಗಿಗೆ...ತಡವಾಗಿ....!

ಕಡಲಂಚಿನ ಚಿಪ್ಪುಗಳಲ್ಲಿ
ಕನಸಿನಂತಹ
ಮುತ್ತುಗಳನ್ನು
ಆಯ್ದಿದ್ದೇನೆ...
ಹಿಡಿತುಂಬಾ ಇರುವ
ಮುತ್ತುಗಳನ್ನು
ನಿನ್ನ ಕಂಪಾಸುಪೆಟ್ಟಿಗೆ ತುಂಬಲು
ಜೋಪಾನವಾಗಿ ತೆಗೆದಿರಿಸಿದ್ದೇನೆ....
ಕಾಡುಮೇಡುಗಳಲ್ಲೇ
ಅಡ್ಡಾಡುವ
ಸುಂದರ ತಣ್ಪನ್ನು
ಎದೆಯಲ್ಲಿ ತುಂಬಿಕೊಂಡು
ಮರಳಿದ್ದೇನೆ..
ನೀ ಹೃದಯದಾಸರೆ
ಪಡೆವಾಗ ತಂಗಿ
ಒಂದಿಷ್ಟು ತಂಪು ಹಂಚಿಕೊಳ್ಳಬಹುದು...

ಅಕ್ಷರಲೋಕದ ಉದ್ದಗಲ
ಓಡಾಡಿ ನಮ್ಮ
ಬಾಂಧವ್ಯದ
ಹರವು ವಿವರಿಸಲಾಗದೆ
ಸೋತಿದ್ದೇನೆ
ನನ್ನನ್ನು ಕ್ಷಮಿಸಿ
ಈ ಸೋದರನಿಗೊಂದು
ಪಪ್ಪಿ ಕೊಡುವೆಯಾ ಪುಟ್ಟಿ!

(ರಕ್ಷಾ ಬಂಧನ ದಿನ ಲೇಟಾಗಿ ಹೋಗಿದ್ದಕ್ಕೆ ಮುಖವೂದಿಸಿ ಕುಳಿತಿದ್ದ ತಂಗಿಗೆ......)

21.8.07

ಅರಸಿನಗುಂಡಿ ಫಾಲ್ಸ್ ಬೆನ್ನುಹತ್ತಿ(a trek to arasinagundi falls)

ಅರಸಿನಗುಂಡಿಯ ದೂರದ ನೋಟ. ಕ್ಯಾಮೆರಾ ಸರಿ ಫೋಕಸ್ ಆಗಿಲ್ಲ ಕ್ಷಮಿಸಿ

ಅಬ್ಬಬ್ಬಾ ಎಂಥ ಜಲಪಾತ! ಅನೇಕಾನೇಕ ಜಲಪಾತಗಳನ್ನೆಲ್ಲ ನೋಡಿ ಆನಂದಿಸಿದ ನಮ್ಮಲ್ಲಿ ಅನೇಕ ಚಾರಣೋತ್ಸಾಹಿಗಳು ಅರಸಿನಗುಂಡಿ ಜಲಪಾತಕ್ಕೆ ಭರ್ಜರಿ ಮಳೆಯಲ್ಲಿ ನಡೆದು ನೋಡಿದಾಗ ಅಬ್ಬಬ್ಬಾ ಎನ್ನಲೇ ಬೇಕಾಯ್ತು.
ಮಂಗಳೂರಿಂದ ಬಿಡುವಿಲ್ಲದೆ ಸುರಿಯುತ್ತಿದ್ದ ಮಳೆ ನಡುವೆ ನಾವು ೯ ಮಂದಿ ಅರಸಿನಗುಂಡಿಗೆ ಹೊರಟಿದ್ದೆವು. ಈ ಹಿಂದೆ ಅರಸಿನಗುಂಡಿಯನ್ನು ಒಂದು ಬಾರಿ ನೋಡಿದ್ದ ರಾಕೇಶ ಹೊಳ್ಳ ನಮ್ಮ ಮಾರ್ಗದರ್ಶಿ. ಹೊರಡುವ ಮಾಹಿತಿ ಸಿಕ್ಕಿದ್ದ ಅನೇಕ ಅನುಭವಿಗಳು ಈ ಮಳೆಗಾಲದಲ್ಲಿ ಅಲ್ಲಿಗೆ ಹೋಗಬೇಡಿರಪ್ಪೋ, ಮಳೆ, ಜಿಗಣೆ ತಡೆಯೋಕಾಗಲ್ಲ ಎಂದು ನಮ್ಮ ಉತ್ಸಾಹ ಕುಂದಿಸುವ ವ್ಯರ್ಥ ಪ್ರಯತ್ನ ಮಾಡಿದ್ದರೂ ಅಚ್ಚರಿಯೋ ಎಂಬಂತೆ ಕುಸಿಯಲಿಲ್ಲ.
ಕೊಲ್ಲೂರಿನ ಮಲಯಾಳಿಯೊಬ್ಬರ ಹೊಟೇಲಲ್ಲಿ ‘ಸಿಂಬಳ್’ ಆಗಿ ಪರೋಟ ಪ್ಯಾಕ್ ಮಾಡಿಸಿಕೊಂಡು ಗೂಡಂಗಡಿಯಲ್ಲಿ ಜಿಗಣೆಗಳಿಗೆಂದು ಪ್ರೀತಿಯಿಂದ ‘ಗೋವಿಂದ’ ಬ್ರಾಂಡ್‌ನ ನಶ್ಯ ಹಿಡಿದುಕೊಂಡು ಮತ್ತೆ ಮುಂದುವರಿದೆವು. ಕೊಲ್ಲೂರಿಂದ ಕೊಡಚಾದ್ರಿ ಹೋಗುವ ರಸ್ತೆಯನ್ನು ಕತ್ತರಿಸಿದಂತೆ ಆಗಿತ್ತು. ಯಾಕೆಂದರೆ ಹೊಸ ಸೇತುವೆ ಕಾಮಗಾರಿ ಆಗುತ್ತಿದ್ದ ಕಾರಣ ಮುಂದೆ ವಾಹನ ಹೋಗುತ್ತಿರಲಿಲ್ಲ. ಅಲ್ಲೇ ಸ್ವಲ್ಪ ಹಿಂದೆ ಮನೆಯೊಂದರ ಅಂಗಳದಲ್ಲಿ ಬೈಕ್‌ಗಳನ್ನು ಇರಿಸಿ ನಮ್ಮ ಚಾರಣ ಆರಂಭಿಸಿದೆವು.
ಸೇತುವೆ ಪಕ್ಕದಲ್ಲೆ ಬಲಕ್ಕೆ ಇರುವ ಸಸ್ಯಕ್ಷೇತ್ರ ಕಮಾನಿನ ಮೂಲಕ ಒಳಪ್ರವೇಶಿಸಿ ಮುನ್ನಡೆದೆವು. ಅಲ್ಲೂ ಒಂದು ಮನೆಯಿಂದ ಹೊರಬಂದ ಇಬ್ಬರು ಹೋಯ್ ಈಗ ಅರಸಿನಗುಂಡಿ ಹೋಗ್ತೀರಾ, ಜಿಗಣೆ ರಾಶಿ ಇವೆ ಮಾರಾಯ್ರೇ, ತಂಬಾಕಿಗೂ ಕೇರೇ ಮಾಡಲ್ಲ ಎಂದು ನಮ್ಮಲ್ಲಿ ಮತ್ತೆ ಭೀತಿಯ ಬೀಜ ಬಿತ್ತಿದರು.
ನಮ್ಮ ಗೆಳೆತನ ಬಿಡದೆ ಮಳೆ ಸುರಿಯುತ್ತಲೇ ಇತ್ತು. ದಟ್ಟ ಕಾಡಿನಲ್ಲಿ ಅಡಿ ಇಡುತ್ತಿದ್ದಂತೇ ವಿವಿಧ ರೀತಿಯ ಆಸನಗಳು ತಂಡದವರಿಂದ! ಒಂದು ಕಾಲಲ್ಲಿ ನಿಂತು ಜಿಗಣೆ ತೆಗೆಯುವುದು, ತೆಗೆದದ್ದಕ್ಕಿಂತ ದುಪ್ಪಟ್ಟು ಜಿಗಣೆ ಹತ್ತಿಕೊಂಡು ಹೊಸಬರ ಪಾಡಂತೂ ಚಿಂತಾಜನಕ!
ಎಂಆರ್‍ಪಿಎಲ್‌ನ ಸುನಿಲ್ ಚಪ್ಪಲಿಯ ಒಳಭಾಗದಲ್ಲಿ ಕಾಲಿಗೆ ತಾಗುವಂತೆ ಹೊಗೆಸಪ್ಪು ಸುತ್ತಿಕೊಂಡು ಹೊಸಪ್ರಯೋಗ ಶುರುವಿಟ್ಟರು. ನಾನು ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಬಾಟಲಿ ಡೆಟಾಲ್ ಕೂಡಾ ಹಿಡಿದುಕೊಂಡಿದ್ದೆ. ಈ ಪ್ರಯೋಗವೇನೋ ಫಲಕೊಟ್ಟಿತಾದರೂ ಸುರಿವ ಮಳೆಗೆ ಡೆಟಾಲ್ ಬೇಗನೆ ತನ್ನ ಶಕ್ತಿ ಕಳೆದುಕೊಳ್ಳುತ್ತಿತ್ತು.
ಭಾರಿ ಮಳೆಯಾದ ಕಾರಣ ದಾರಿಗಡ್ಡವಾಗಿ ಅಲ್ಲಲ್ಲಿ ತೋಡುಗಳು ಹರಿಯುತ್ತಿದ್ದವು. ನಮ್ಮೊಂದಿಗೆ ಬಂದಿದ್ದ ಮಿತ್ರ ಛಾಯಾಗ್ರಾಹಕ ರಾಮಕೃಷ್ಣ ಭಟ್ಟರಿಗೆ ಮೊದಲ ಚಾರಣ, ಹಾಗಾಗಿ ಅವರ ಜಿಗಣೆ ಹೋರಾಟ ನಡೆಯುತ್ತಲೇ ಇತ್ತು. ಅವರೂ ಸೇರಿದಂತೆ ಕ್ಯಾಮೆರಾ ತಂದಿದ್ದವರಿಗೆ ಹೊರಗೆ ತೆಗೆಯಲೂ ಆಗದಂತೆ ಮಳೆ ಸುರಿಯುತ್ತಿತ್ತು ನಿಂತರೂ ಕಾಲಿಗೆ ಜಿಗಣೆ ಕಚ್ಚಿ ಕಸಿವಿಸಿ ಗೊಳಿಸುತ್ತಿತ್ತು. ದಾರಿ ನೇರವಾಗಿದ್ದುದರಿಂದ ಹೋಗುತ್ತಲೇ ಇದ್ದೆವು. ಸುಮಾರು ಒಂದೂವರೆ ಗಂಟೆ ನಡೆದ ಬಳಿಕ ಬಲಕ್ಕೆ ಕಣಿವೆಯೊಳಕ್ಕೆ ಒಂದು ದಾರಿ ಕವಲೊಡೆದ ಸ್ಥಳ ಬಂತು. ನೇರವಾಗಿ ಹೋದರೆ ಕೊಡಚಾದ್ರಿಗೆ ಹೋಗಬಹುದು ಎಂಬ ಮಾಹಿತಿ ನೀಡಿದ ರಾಕೇಶ ಹೊಳ್ಳ. ಕೆಳಭಾಗದಲ್ಲಂತೂ ಬಹಳ ಜಾರುವಂತಹ ಮಣ್ಣು, ಅದರೊಂದಿಗೆ ದೊಡ್ಡಗಾತ್ರದ ಜಿಗಣೆಗಳೂ ನಮ್ಮ ಆಯಾಸ ಹೆಚ್ಚಿಸುತ್ತಿದ್ದವು. ಏನೇ ಇರಲಿ ಈಗ ಜಲಪಾತ ಸಿಗುತ್ತೆ, ಹಾಯಾಗಿ ಪರೋಟ ತಿಂದಾಗ ಆಯಾಸ ಪರಿಹಾರ ಆದೀತು ಎಂದು ಒಬ್ಬರಿಗೊಬ್ಬರು ಸಾಂತ್ವನ ಹೇಳುತ್ತಾ ಮುನ್ನಡೆದೆವು. ಅಂತೂ ಜಲಪಾತ ದರ್ಶನ ಆಯ್ತು. ಬ್ಯಾಗ್ ಜಾರಿಸಲು ನೋಡುವಾಗ ಹೊಳ್ಳ ಹೇಳುತ್ತಾನೆ, ಹೋಯ್ ಇದಲ್ಲ ಮಾರಾಯ ಇನ್ನೂ ಇದೆ!.
ಅಂತೂ ಮತ್ತೊಂದು ಜಲಪಾತ ಬಂತು. ಹೊಳ್ಳ ಯಾವುದೋ ಮೋಡಿಗೆ ಒಳಗಾದವನಂತೆ ಛಲ ಬಿಡದ ತ್ರಿವಿಕ್ರಮನಂತೆ ಮುನ್ನಡೆಯುತ್ತಲೇ ಇದ್ದ. ನಾವು ಒಂದಷ್ಟು ಹೊತ್ತು ಹನಿ ಮಳೆಯಲ್ಲಿಯೇ ಫೋಟೋ ತೆಗೆದೆವು. ಮತ್ತೆ ಜಾರುಕಣಿವೆಯಲ್ಲಿ ಜಾರುತ್ತಾ ಏಳುತ್ತಾ ಬೀಳುತ್ತಾ ಮಧ್ಯಾಹ್ನ ೨.೩೦ರ ವೇಳೆಗೆ ಅರಸಿನಗುಂಡಿ ಜಲಪಾತ ಸಿಕ್ಕೇಬಿಡ್ತು.
ಹತ್ತಿರದಲ್ಲಿ ಅರಸಿನಗುಂಡಿ ಚಿತ್ರ ಸಿಕ್ಕಿದ್ದಿಷ್ಟೇ. ನೀರೇ ನೀರು...

ಅದೇನು ರುದ್ರಭೀಕರ! ಭಾರೀ ಪ್ರಮಾಣದಲ್ಲಿ ನೀರು ಬಂದು ಕೊರಕಲಿಗೆ ಬೀಳುತ್ತಿತ್ತು. ಅಲ್ಲೇ ಪಕ್ಕದಲ್ಲಿದ್ದ ಅತ್ಯಂತ ಜಾರುತ್ತಿದ್ದ ಬಂಡೆಯ ಮೇಲೆ ನಿಂತು ಜಲಪಾತ ನೋಡುವ ಪ್ರಯತ್ನ ಮಾಡಿದೆವು. ಆದರೆ ನೀರು ಬಿದ್ದ ರಭಸಕ್ಕೆ ಏಳುತ್ತಿದ್ದ ಮಂಜಿನ ಹನಿಗಳು ಕಣ್ಣಿಗೆ ತುಂಬಿಕೊಳ್ಳುತ್ತಿದ್ದವು. ಗಾಳಿಯ ಅಬ್ಬರ ಬೇರೆ. ಅಲ್ಲೆಲ್ಲೂ ಕುಳಿತುಕೊಳ್ಳುವುದಕ್ಕೇ ಅವಕಾಶವಿರಲಿಲ್ಲ. ನಿಂತೇ ತಿನ್ನೋಣ ಎಂದರೆ ಮಳೆ ಬೇರೆ. ಹೋಗಲಿ ಫೋಟೋ ತೆಗೆಯೋಣ ಎಂದರೆ ಕ್ಯಾಮೆರಾ ಕೆಟ್ಟೇಹೋಗುವಷ್ಟು ಮಂಜು.
ಹೀಗೆ ಏನೋ ಒಂಥರಾ ಖುಷಿ, ಒಂಥರಾ ಬೇಸರದ ಮಿಶ್ರಣದಲ್ಲಿ ಮತ್ತೆ ಹಿಂದಕ್ಕೆ ತಿರುಗಿದೆವು.
ಒಂದೆಡೆ ಹಸಿವೆಯಲ್ಲಿ ಹೊಟ್ಟೆಹುಳ ಕೂಡಾ ಸತ್ತಿರಬಹುದೇನೋ ಎಂಬ ಅನುಮಾನ. ಇದಲ್ಲದೆ ನಮ್ಮ ಫೊಟೋಗ್ರಾಫರ್‍ ಭಟ್ರು ಎರಡು ಬಾರಿ ಜಾರಿ ಬಿದ್ದು ಪೆಟ್ಟೂ ಮಾಡಿಕೊಂಡರು. ಎಲ್ಲದರ ನಡುವೆ ಅಂತೂ ರಸ್ತೆಗೆ ಬಂದು ನಿಟ್ಟುಸಿರು ಬಿಟ್ಟೆವು. ತಿರುಗಿದರೆ ಭಟ್ಟರಿಲ್ಲ! ಹಿಂದೆ ಹುಡುಕುತ್ತಾ ಹೋದರೆ ದಾರಿ ತಪ್ಪಿ ಎಲ್ಲೋ ಹೋಗಿ, ಅಲ್ಲಿ ನಾಗರ ಹಾವೊಂದರ ದರ್ಶನ ಮಾಡಿ, ಮತ್ತೆ ಸರಿದಾರಿ ಹಿಡಿದ ಭಟ್ಟರು ಹೇಗೋ ಬರುತ್ತಿದ್ದರು. ಕೊನೆಯ ವರೆಗೂ ಅವರ ಮೇಲೆ ನಿಗಾ ಇರಿಸಿದ್ದ ನಾನು ಮತ್ತು ಬಂಟ್ವಾಳದ ಶಕ್ತಿಪ್ರಸಾದ್ ಕೊನೆ ಹಂತದಲ್ಲಿ ಸ್ವಲ್ಪ ವೇಗವಾಗಿ ಹೆಜ್ಜೆ ಹಾಕಿದ್ದು ಈ ಅವಾಂತರಕ್ಕೆ ಕಾರಣವಾಯ್ತು.
ಅಂತೂ ಬೈಕ್ ನಿಲ್ಲಿಸಿದ್ದ ಮನೆಗೆ ಬಂದಾಗ ಸಂಜೆ ನಾಲ್ಕು ಗಂಟೆ. ಪರೋಟ ಪೊಟ್ಟಣ ಬಿಚ್ಚಿ ನೋಡಿದರೆ ಗಸಿ ಆಗಲೇ ಪರಲೋಕ ವಾಸಿಯಾಗಿತ್ತು. ಕೆಲವರು ಹಸಿವೆ ತಾಳಲಾರದೆ ಹಾಗೆಯೇ ಹೊಟ್ಟೆಗಿಳಿಸಿದರು. ಕೆಲವರು ಖಾಲಿ ಪರೋಟವನ್ನೇ ಮುಕ್ಕಿದರು. ಅಂತೂ ಕುಂದಾಪುರದ ಹೊಟೇಲಲ್ಲಿ ದೋಸೆ ಹೊಡೆದಾಗ ಮಾತ್ರ ನಮ್ಮ ಪರಮಾತ್ಮ ತೃಪ್ತನಾದದ್ದು.
ಮತ್ತೆ ಭಗವಂತನಿಂದಲೂ ಸರಿಪಡಿಸಲಾಗದ ಉಡುಪಿ ಮಂಗಳೂರು ಹೈವೇಯಲ್ಲಿ ಸುರಿವ ಮಳೆಯಲ್ಲಿ ರಸ್ತೆ ಗುಂಡಿಗೆ ಬಿದ್ದು ಮುರಿದ ಬೈಕ್ ಇಂಡಿಕೇಟರ್‍ನಂತಹ ಪರಿಸ್ಥಿತಿ ನಮ್ಮದಾಯ್ತು. ಹೇಗೋ ಮನೆ ಸೇರಿದೆವು. ತಲೆಗೆ ಗಾಯ ಮಾಡಿಕೊಂಡು ಇನ್ನು ನಿಮ್ಮ ಜತೆ ಬರಲ್ಲ ಎಂದು ಪ್ರತಿಜ್ಞೆ ಮಾಡಿರುವ ಭಟ್ಟರು ನಾಲ್ಕು ದಿನ ರಜೆ ಮಾಡಬೇಕಾಯ್ತು.
ಅಂತೂ ‘ಘೋರ ಚಾರಣ’ ಎಂಬ ಪಟ್ಟಿಗೆ ಇದು ಸೇರಿದರೂ ಮಳೆ ಕಡಿಮೆಯಾದ ಬಳಿಕ ಮತ್ತೆ ಅರಸಿನಗುಂಡಿ ನೋಡಬೇಕು ಎಂಬ ಆಸೆ ಈಗ ಮನಸ್ಸಲ್ಲಿ ಗೂಡುಕಟ್ಟುತ್ತಿದೆ.

16.8.07

ಸ್ವಾತಂತ್ರ್ಯ ಮತ್ತು ಬೆಳ್ಳಿಪರದೆ

ನಿನ್ನೆ ಸ್ವಾತಂತ್ರೋತ್ಸವ...ಎಲ್ಲಾ ಭಾರತೀಯ ಚಾನೆಲ್‌ಗಳಲ್ಲಿ ದೇಶಪ್ರೇಮದ ಗುರುತಾದ ಚಿತ್ರಗಳು.
ಆಧುನಿಕ ಕಾಲಘಟ್ಟದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಯುವಮನಸ್ಸಿನಲ್ಲಿ ದೇಶಪ್ರೇಮ ಮೂಡಿಸುವಲ್ಲಿ ಚಿತ್ರಗಳ ಕೊಡುಗೆ ಸಾಕಷ್ಟಿದೆ.
ಹೀಗೆ ಚಿತ್ರಗಳನ್ನು ವಿಶ್ಲೇಷಿಸಹೊರಟರೆ ಅದಕ್ಕೆ ಒಂದು ದೊಡ್ಡ ವಾದವೇ ಏರ್ಪಡಬಹುದೋ ಏನೋ. ಭಾರತೀಯತೆ ಸಾರುವ ಅನೇಕ ಯುದ್ಧ ಚಿತ್ರಗಳು ನಿರ್ಮಾಣಗೊಂಡಿವೆ. ಹಕೀಕತ್‌ನಂತ ಎವರ್‍ಗ್ರೀನ್ ಚಿತ್ರದ ಮೈನವಿರೇಳಿಸುವ ಹಾಡು ಕರ್‍ ಚಲೇ ಹಮ್ ಫಿದಾ ಜಾನೊ ತನ್ ಸಾಥಿಯೊ ಅಬ್ ತುಮ್ಹಾರೇ ಹವಾಲೇ ವತನ್ ಸಾಥಿಯೊ ಇಂದಿಗೂ ನಮ್ಮ ಮನದಲ್ಲಿ ಸ್ಥಾನ ಪಡೆದಿದ್ದರೆ, ಅದಕ್ಕೆ ಹಾಡು ನಮ್ಮಲ್ಲಿ ಮೂಡಿಸುವ ಭಾರತೀಯತೆ ಕಾರಣ.
ಹಾಗೆ ನೋಡಿದರೆ, ಆಕ್ರಮಣ್, ದೀವಾರ್‍, ಬಾರ್ಡರ್‍, ರೆಫ್ಯೂಜಿ, ಎಲ್‌ಒಸಿ ಕಾರ್ಗಿಲ್, ಟ್ಯಾಂಗೊ ಚಾರ್ಲಿ, ೧೯೭೧ ಮುಂತಾದ ಬೆರಳೆಣಿಕೆ ಯುದ್ಧ ಸಿನಿಮಾಗಳಷ್ಟೇ ಬಾಲಿವುಡ್‌ನಲ್ಲಿ ಬಂದಿವೆ. ಕನ್ನಡದಲ್ಲಿ ನೋಡಿದರೆ ಮುತ್ತಿನ ಹಾರ, ಸೈನಿಕ ಉತ್ತಮ ಪ್ರಯತ್ನಗಳು.
ನಾನು ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗ ತೆರೆ ಕಂಡಿದ್ದ ಬಾರ್ಡರ್‍ ಚಿತ್ರ
ಎಷ್ಟು ಪರಿಣಾಮ ಬೀರಿತ್ತೆಂದರೆ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೂ ತಾವೇ ಟಿಕೆಟ್ ಕೊಡಿಸಿ ವಿದ್ಯಾರ್ಥಿಗಳಿಗಾಗಿ ಬೆಳ್ತಂಗಡಿಯ ಟಾಕೀಸಲ್ಲಿ ಬಾರ್ಡರ್‍ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿಸಿದ್ದರು. ಅದನ್ನು ನೋಡಿದ ಬಳಿಕ ಮತ್ತೆ ನಾಲ್ಕು ಬಾರಿ ನೋಡಿದ್ದೆ. ಇದೇ ಚಿತ್ರದಿಂದ ಸ್ಫೂರ್ತಿ ಪಡೆದು ನಾವು ಐದಾರು ಮಿತ್ರರು ಸೇನೆಗೆ ಸೇರುವ, ಅದಕ್ಕೆ ಮೊದಲು ಎನ್‌ಸಿಸಿ ಸೇರುವ ಮನಸ್ಸು ಮಾಡಿದ್ದೆವು. ಎನ್‌ಸಿಸಿಯಲ್ಲಿ ಸಾಧನೆ ಗಮನಾರ್ಹವಿತ್ತಾದರೂ ಸೇನೆಗೆ ಸೇರುವ ಕನಸು ಹಾಗೆಯೇ ಉಳಿಯಿತಾದರೂ ಬಾರ್ಡರ್‍ ಮನಸ್ಸಲ್ಲಿ ಬಿತ್ತಿದ ಭಾರತೀಯತೆಯ ಅಚ್ಚು ಅಳಿಸಿಹೋಗಿಲ್ಲ. ಸಂದೇಸೆ ಆತೇಂ ಹೈ ಕೂಡಾ ಹಚ್ಚಹಸಿರು. ಹಾಗೆಂದು ಈ ಚಿತ್ರಗಳಲ್ಲಿ ನಾಟಕೀಯತೆ, ಹೆಚ್ಚೇ ಎನಿಸುವ ಹೀರೋಯಿಸಮ್ ಇವೆಲ್ಲ ನೆಗೆಟಿವ್ ಅಂಶ ಪಟ್ಟಿ ಮಾಡಬಹುದು.
ಕೆಲ ತಿಂಗಳ ಹಿಂದೆ ತೆರೆ ಕಂಡ ೧೯೭೧ ಕೂಡಾ ಒಳ್ಳೆಯ ಪ್ರಯತ್ನ. ಪಾಕಿಸ್ತಾನದಲ್ಲಿ ಬಂದಿಗಳಾಗಿ, ಹೊರಜಗತ್ತಿಗೆ ಇಲ್ಲವಾದರೂ ಅಲ್ಲಿನ ಜೇಲುಗಳಲ್ಲಿ ಕೊಳೆಯುತ್ತಿರುವ ಕಥಾ ಹಂದರ ಮನಮಿಡಿಯುವಂಥದ್ದು, ಕೆಲ ಭಾರತೀಯ ಯುದ್ಧಕೈದಿಗಳು ಅಲ್ಲಿಂದ ತಪ್ಪಿಸಿಕೊಳ್ಳಲು ಮಾಡುವ ಯತ್ನವನ್ನು ನಿರೂಪಿಸಲಾಗಿದೆ. ಇದೇ ರೀತಿಯ ಇನ್ನೊಂದು ಚಿತ್ರ ದೀವಾರ್‍. ಹಾಲಿವುಡ್‌ನಲ್ಲಿ ಸ್ಟಲಗ್ ೧೭ ಎಂಬ ಸಿನಿಮಾ ಕೂಡಾ ಬಂದಿದೆ.
ಯುದ್ಧ ಚಿತ್ರಗಳೇ ಭಾರತೀಯತೆ ಬೆಳೆಸಬೇಕು ಎಂದೇನೂ ಇಲ್ಲ. ಸ್ವಾತಂತ್ರ ಹೋರಾಟದ ಕಥೆ ಹೇಳುವಂತಹ ಲೀಜೆಂಡ್ ಆಫ್ ಭಗತ್ ಸಿಂಗ್, ಇತ್ತೀಚೆಗೆ ಯುವಮನಸ್ಸನ್ನು ಕೆದಕಿ ಕ್ರಾಂತಿಯ ಸ್ಪೂರ್ತಿ ಮೂಡಿಸಿದ ರಂಗ್ ದೇ ಬಸಂತಿ ಕೂಡಾ ತಮ್ಮ ಅನೇಕ ಮಿತಿಗಳ ನಡುವೆ ಉತ್ತಮ ಪ್ರಯತ್ನಗಳು. ಇಂದಿಗೂ ಗಾಂಧೀಜಿಗೆ, ಅವರ ಸಿದ್ಧಾಂತಗಳಿಗೆ ಬೆಲೆ ಇದೆ ಎಂದು ಸಾರಿದ ಲಗೇ ರಹೊ ಮುನ್ನಭಾಯಿ ಭಾರತೀಯರ ಹೃದಯ ಗೆದ್ದಿತು.
ಸ್ವಾತಂತ್ರದ ಅಂತರ್ಜಲ ನಮ್ಮಲ್ಲಿ ಜೀವಂತ ಇರುವಲ್ಲಿ ಅನೇಕ ಅಂಶಗಳು ಅದರಲ್ಲಿ ಸಿನಿಮಾ, ರಂಗಭೂಮಿಯದ್ದೂ ಒಂದು ಮಹತ್ವದ ಪಾಲಿದೆ ಅನ್ನುವುದಷ್ಟೇ ಇಲ್ಲಿ ಬರುವ ಯೋಚನೆ. ಇಂತಹ ಪ್ರಯತ್ನಗಳು ಆಗುತ್ತಲೇ ಇರಬೇಕಾಗಿವೆ.

3.8.07

ರಾತ್ರಿ ಮುಗಿಯದ ಹುಡುಗ

ಇಡೀ ಪ್ರಪಂಚವೇ ಕತ್ತಲೆಯಲ್ಲಿ ಕೊಚ್ಚಿದೆಯೋ ಎಂಬಂಥ ಕತ್ತಲೆಯಲ್ಲಿ ಕ್ಷೀಣವಾಗಿ ಉರಿಯುತ್ತಿರುವ ಬುಡ್ಡಿದೀಪ. ಅದನ್ನೇ ಒಮ್ಮೆ ನೋಡುತ್ತಾ ತಲೆಗೆ ಸುತರಾಂ ಹತ್ತದ ಗಣಿತದ ಸಮಸ್ಯೆ ಶಪಿಸುತ್ತಾ, ಕಣ್ಣಿನ ತೂಕಡಿಕೆಯಲ್ಲಿ ದೀಪವನ್ನು ತುಂಬಿಕೊಳ್ಳುತ್ತಿದ್ದಾನೆ ಆ ಹುಡುಗ.
ಮರದ ತುಂಡುಗಳನ್ನು ತ್ರಿಕೋನಾಕಾರದಲ್ಲಿ ಕಟ್ಟಿ ನಾಲ್ಕು ಹರಿದ ಟಾರ್ಪಾಲಿನ್‌ಗಳನ್ನು ಸೇರಿಸಿ ಮಾಡಿದ ಮನೆಯೆಂಬೋ ಮನೆಯದು. ನಗರದ ಯುಜಿಡಿ ಚರಂಡಿ ನೀರನ್ನು ೧೯೫೦ರ ಕಾಲದ ಟ್ರೀಟ್‌ಮೆಂಟ್ ಪ್ಲಾಂಟೊಂದು ಅರ್ಧವಷ್ಟೇ ಸಂಸ್ಕರಿಸಿ ಚೆಲ್ಲಿ ಬಿಡುವ ತ್ಯಾಜ್ಯ ಸಾಗಿಸುವ ತೋಡಿನ ಪಕ್ಕದಲ್ಲಿ ಇದೆ ಹುಡುಗನ ಅರಮನೆ.
ನಗರದಲ್ಲಿ ನೋಡುವ ದೊಡ್ಡ ಮನೆಗಳನ್ನು ನೋಡುವಾಗ ತನಗೂ ಒಂದು ಚಿಕ್ಕದಾದರೂ ಸುಂದರ ಮನೆ ಬೇಕೆಂದು ಹುಡುಗನಿಗೆ ಮನವರಿಕೆಯಾಗಿದೆ. ಹೇಗಾದರೂ ಎಸ್ಸೆಸ್ಸೆಲ್ಸಿ ಪಾಸಾದರೆ ನಗರದಲ್ಲಿ ಏನಾದರೂ ಕೆಲಸ ಮಾಡಿ ಮನೆ ಕಟ್ಟಬಹುದು ಎಂದು ಶಾಲೆಯಲ್ಲಿ ಅವನಿಗೆ ಟೀಚರ್ ಹೇಳಿದ್ದು ಚೆನ್ನಾಗಿ ನೆನಪಿದೆ. ಅದಕ್ಕಾಗಿ ಹುಡುಗ ಜೀವ ಬಿಟ್ಟು ಓದುತ್ತಾನೆ. ಆದರೆ ಈ ಗಣಿತ ಮಾತ್ರ ಆತನಿಂದಾಗದು...ಟೀಚರ್ ಎಷ್ಟೇ ಹೇಳಿದರೂ ಆತನ ಮೆದುಳಿಗೇ ಹೋಗುವುದಿಲ್ಲ.
ರಾತ್ರಿ ಅದೆಷ್ಟೋ ಹೊತ್ತು ಪುಸ್ತಕದೆದುರು ಧ್ಯಾನ ಮಗ್ನನಂತೆ ಕುಕ್ಕರಗೂತಿರುತ್ತಾನೆ ಹುಡುಗ. ಪಕ್ಕದ ನ್ಯಾಷನಲ್ ಹೈವೇಯಲ್ಲಿ ತಡರಾತ್ರಿಯಲ್ಲಿ ಅಬ್ಬರಿಸುತ್ತಾ ಆನೆಯಂತೆ ಘೀಳಿಡುತ್ತಾ ಹೋಗುವ ಟ್ರಕ್‌ಗಳಿಗೆ ಇವನ ಏಕಾಂತ ಭಂಗ ಪಡಿಸುವುದು ಸಾಧ್ಯವಿಲ್ಲ. ಆದರೆ ಮಳೆ ನೀರು ತೊಟ್ಟಿಕ್ಕುವಲ್ಲಿ ಒಂದು ಪಾತ್ರೆ ಇರಿಸಿ ಪಕ್ಕದಲ್ಲಿ ಗೋಣಿ, ಅದರ ಮೇಲೆ ಕಂಬಳಿ ಸುತ್ತಿ ಮಲಗಿರುವ ಉಬ್ಬಸ ಪೀಡಿತ ಮುದಿ ತಾಯಿ ತಾಳ ಲಯ ಇಲ್ಲದ ಚರ್ಮವಾದ್ಯದಂತೆ ಕೆಮ್ಮುವಾಗ ಹುಡುಗನ ಕರುಳು ಕಿವಿಚಿದಂತಾಗುತ್ತದೆ.

ಹಗಲೆಲ್ಲಾ ಶಾಲೆಯಲ್ಲಿ ಫಾಸ್ಟ್ ಫಾರ್ವರ್ಡ್ ಮಾಡಿದಂತೆ ಓಡುವ ಹುಡುಗನ ದಿನಚರಿ ರಾತ್ರಿ ಮಾತ್ರ ಘಾಟಿರಸ್ತೆ ಏರುವ ಟ್ಯಾಂಕರ್‍.
ಹಗಲಲ್ಲಿ ತಿರುಗಾಡುವ ಹುಡುಗನನ್ನು ಬಹುವಾಗಿ ಆಕರ್ಷಿಸುವುದು ಹೆದ್ದಾರಿ ಪಕ್ಕದ ಜಾಹೀರಾತು ಹೋರ್ಡಿಂಗ್‌ಗಳು. ಹಾಗೆ ನೋಡಿದರೆ ಹುಡುಗನ ಕನಸುಗಳಿಗೆ ವಸ್ತುವಾಗುವುದು ಈ ಹೋರ್ಡಿಂಗ್‌ಗಳೇ.
ಬೆಟ್ಟದ ಅಂಚಿನಲ್ಲಿ ನಿಂತ ದಪ್ಪ ಟಯರಿನ ಬೈಸಿಕಲ್ಲು, ನುಣ್ಣನೆ ಕೆನ್ನೆಯೊಂದಿಗೆ ಸೋಪ್ ತೋರಿಸುತ್ತಾ ನಿಂತ ನಟಿ, ನೀಲಿ ಬಣ್ಣದ ಆಕಾಶದೆದುರು ದೃಢವಾಗಿ ನಿಂತ ಕಾರು ಹೀಗೆ ಇಂತಹ ಅನೇಕ ಜಾಹೀರಾತುಗಳನ್ನು ನೋಡುತ್ತಿರುತ್ತಾನೆ ಹುಡುಗ. ಹಗಲು ನೋಡಿದ ಜಾಹೀರಾತುಗಳಿಂದ ರಾತ್ರಿ ಕನಸಿಗೆ ಬಣ್ಣ ಹಚ್ಚಿಕೊಳ್ಳುತ್ತಾನೆ.
ಈಚೆಗೆ ಹುಡುಗನ ಜೋಪಡಿಯ ಹತ್ತಿರ ದೊಡ್ಡ ಅಗಲವಾದ ಜಾಹೀರಾತು ಫಲಕ ಎದ್ದುನಿಂತಿದೆ. ಆದರೆ ಇನ್ನೂ ಯಾವ ಜಾಹೀರಾತು ಅದರಲ್ಲಿಲ್ಲ. ಯಾವುದೋ ಫೋನ್ ನಂಬರು ಮಾತ್ರ ಬರೆದಿದ್ದಾರೆ. ಅದರಲ್ಲಿ ತನ್ನ ಚಿತ್ರ ಬಂದಂತೆ ಹುಡುಗ ಕೆಲವೊಮ್ಮೆ ಕಲ್ಪಿಸಿ ಖುಷಿ ಪಡುವುದಿದೆ.
ತಂದೆ, ಬಾಂಧವರಿಲ್ಲದ ಹುಡುಗನಿಗೆ ತಾಯಿ ಮಾತ್ರ ಸರ್ವಸ್ವ. ಉಬ್ಬಸನ ಮಧ್ಯೆಯೂ ತಾಯಿಗೆ ಹುಡುಗ ಸಾಗುವ ದಾರಿ ಬಗ್ಗೆ ಖುಷಿಯಿದೆ.
ಹೀಗಿರುವಾಗ ಮೊನ್ನೆ ಹುಡುಗನಿಗೆ ಉತ್ಸಾಹ ಬಂದಿದೆ. ಜಾಹೀರಾತು ಬೋರ್ಡ್‌ನ ಸುತ್ತ ನಾಲ್ಕು ಜಗಮಗಿಸುವ ಫ್ಲಾಶ್ ಲೈಟುಗಳನ್ನು ಹಾಕಿದ್ದಾರೆ. ಯಾವುದೋ ಬ್ರಾಂಡ್‌ನ ಒಳವಸ್ತ್ರದ ಜಾಹೀರಾತೂ ಬೋರ್ಡ್ ಮೇಲೆ ಬಿದ್ದಿದೆ. ಜಾಹೀರಾತಿನ ಬೆಡಗಿ ಹುಡುಗನ ಕನಸುಗಳಿಗೆ ಮತ್ತಷ್ಟು ಬಣ್ಣ ತುಂಬಿದ್ದಾಳೆ.
ಹುಡುಗನ ರಜೆಉ ದಿನ, ಬೆಳಗ್ಗೆ ಕನಸು ಮುರಿದು ನೇಸರ ಬಂದಿದ್ದಾನೆ. ಯಾರೋ ಅಧಿಕಾರಿಗಳು ಮಾತನಾಡುತ್ತಿದ್ದಾರೆ ಜೋಪಡಿಯ ಹೊರಗೆ. ತಾಯಿ ತಲೆ ಮೇಲೆ ಕೈಹೊತ್ತು ಕುಳಿತಿದ್ದಾಳೆ. ಜೋಪಡಿ ಕಾನೂನು ಬಾಹಿರ, ಅದನ್ನು ಎಬ್ಬಿಸುವುದಾಗಿ, ಅಧಿಕಾರಿಗಳು ಹೇಳುತ್ತಾರೆ. ಹೆದ್ದಾರಿ ಅಗಲವಾಗಲಿದೆಯಂತೆ, ಕಾಂಕ್ರೀಟ್ ಹಾಕುತ್ತಾರಂತೆ.
ಬುಲ್‌ಡೋಜರ್‍ಗಳು ಬಂದಿವೆ, ಟಿಪ್ಪರ್‍ ಲಾರಿಗಳು ಓಡಾಡುತ್ತಿವೆ, ಅವು ಎಬ್ಬಿಸಿದ ಧೂಳಿನ ತೆರೆಯ ನಡುವೆ ತಾಯಿ ಮಗ ಹೊರಟಿದ್ದಾರೆ, ಗುರಿಯೇ ಇಲ್ಲದ ವಿಶಾಲ ಪ್ರಪಂಚಕ್ಕೆ ಲಗ್ಗೆ ಇಡುವವರಂತೆ.
ಅವರ ಬೆನ್ನಿಗೇ ಜಾಹೀರಾತು ಬೋರ್ಡ್‌ನ ಒಳವಸ್ತ್ರದ ಸುಂದರಿ ಕಿಲಕಿಲನೆ ನಗುತ್ತಿದ್ದಾಳೆ....

28.7.07

ಬಣ್ಣಗೆಟ್ಟ ಕ್ಯಾನ್ವಾಸ್


ಕಲಾವಿದನ ಕುಂಚದಲ್ಲಿ
ಅರಳಿದ್ದ ಆ ಸುಂದರ
ಭೂದೃಶ್ಯವೆಲ್ಲ ಎಲ್ಲಿ
ತೊಳೆದು ಹೋಯಿತು?
ಗಾಢವಾಗಿದ್ದ ಆ
ಹಸಿರುಮರಗಳ ಸಾಲು
ನಸುನೀಲ ಬಣ್ಣದ
ಬೆಟ್ಟದ ತೆಕ್ಕೆಯಲ್ಲಿದ್ದ
ಗುಡಿಸಲು
ಎಲ್ಲಿ ಗುಡಿಸಿ ಹೋಯಿತು?
ಕಲಾವಿದನಿಗೇ ಅಚ್ಚರಿ
ಈಗೀಗ ಕುಂಚದಲ್ಲಿ
ಕೆಲವು ವರ್ಣಗಳು ಅರಳುವುದಿಲ್ಲ
ಎಲ್ಲೇ ನೋಡಿದರೂ ಬರಿಯ ಕೆಂಪು,
ಕ್ಯಾನ್ವಾಸಿನಿಂದ ರಕ್ತ ಚೆಲ್ಲಿ
ನದಿಯುದ್ದಕ್ಕೂ ಹರಡಿಕೊಂಡ ಹಾಗೆ
ಜೀವಂತಿಕೆಯ ಬಣ್ಣಗಳನ್ನೆಲ್ಲಾ
ನುಂಗಿದ ಹಾಗೆ
ಅದಕ್ಕಾಗಿ ಕಲಾವಿದ
ಕುಂಚ ಕೆಳಗಿಟ್ಟಿದ್ದಾನೆ
ಬಣ್ಣಗಳು ಬಣ್ಣಕಳೆದುಕೊಂಡಿವೆ

23.7.07

ಶರಾವತಿ ಕೊಳ್ಳಕ್ಕೆ ಇಣುಕಿದಾಗ!

ಕೆಲದಿನಗಳ ಹಿಂದೆ ಮಂಗಳೂರಿನ ಯೂತ್ ಹಾಸ್ಟಲ್ ತಂಡ ಜೋಗಕ್ಕೆ ಹೋಗುವುದಾಗಿ ಹೇಳಿತ್ತು. ದೂಸ್ರಾ ಮಾತಿಲ್ಲದೆ ನನ್ನ ಹೆಸರನ್ನೂ ಪಟ್ಟಿಗೆ ಹಾಕಿಬಿಟ್ಟೆ.
ಯಾಕೆಂದರೆ, ಇದುವರೆಗೆ ರಾಜ್ಯದ ಹತ್ತುಹಲವು ಸಣ್ಣಪುಟ್ಟ ಫಾಲ್ಸ್ ನೋಡಿದ್ದರೂ ದೇಶದಲ್ಲೇ ಅತ್ಯಂತ ಸುಂದರ ಜಲಧಾರೆ ಎಂದೆನಿಸಿರುವ ಜೋಗ ನೋಡದ ಪಾಪಿ ನಾನು! ಅದರಲ್ಲೂ ಮುಂಗಾರು ಮಳೆ ನೋಡಿದ ಮೇಲಾದರೂ ಜೋಗ ನೋಡದ ನನ್ನನ್ನು ನನ್ನ ಗೆಳೆಯರ ಬಳಗ ದೂರವಿಡಬಹುದು ಎಂಬ ಭೀತಿಯೂ ಕಾಡಿತ್ತು.


ಜೋಗದ ಮೇಲೆ ಸಿಟ್ಟಾಗಿ ನಾನು ಇದುವರೆಗೆ ನೋಡಿಲ್ಲ ಎಂದಲ್ಲ, ಆದರೆ ನಮ್ಮ ನಡುವೆ ಫೇಮಸ್ ಎಂದುಕೊಂಡ ಅನೇಕ ತಾಣಗಳ ‘ಗತಿ’ ನೋಡಿರುವ ನಾನು, ಜೋಗದಲ್ಲೂ ಅಂತಹ ಮಾಲಿನ್ಯ ನೋಡಿ ಸಂಕಟಪಡದಿರೋಣ ಎಂದು ಮುಂದೂಡಿದ್ದೇ ಇದಕ್ಕೆ ಕಾರಣ.
ಅದೇನೇ ಪ್ರವರಗಳಿರಲಿ, ಈ ಬಾರಿ ಯೂತ್ ಹಾಸ್ಟೆಲ್‌ನ ೪೩ ಮಂದಿಯ ಭರ್ಜರಿ ತಂಡದಲ್ಲಿ ನಾನೂ ಸೇರಿಕೊಂಡೆ. ಮಧ್ಯಾಹ್ನ ಮಂಗಳೂರಿಂದ ಹೊರಟು ರಾತ್ರಿ ೯ರ ಸುಮಾರಿಗೆ ಜೋಗ ಸೇರಿದ ನಾವು ಹೊಟ್ಟೆ ಚುರುಗುಡುತ್ತಿದ್ದ ಕಾರಣ ಮೊದಲು ಹೊಕ್ಕಿದ್ದು ಹೊಟೇಲನ್ನು.
ಆ ಬಳಿಕ ಆ ತಣ್ಣನೆ ರಾತ್ರಿಯಲ್ಲೇ ಹತ್ತು ಹೆಜ್ಜೆ ಹಾಕಿ ಕತ್ತಲಿಗೆ ಕಣ್ಣನ್ನು ಹೊಂದಿಸಿಕೊಂಡು ದೇಶದ ಹೆಮ್ಮೆಯ ಸೊತ್ತನ್ನು ನೋಡಿದೆ, ಅದೇ ದೃಶ್ಯವನ್ನು ಕಣ್ತುಂಬಿಕೊಂಡು, ಜೋಗ ಯೂತ್ ಹಾಸ್ಟೆಲ್ ಕೊಠಡಿಯಲ್ಲಿ ನಿದ್ದೆಗೆ ಶರಣಾದೆ.
ಮರುದಿನ ಬೆಳಗ್ಗೆ ಮಿತ್ರ ಅನುಭವೀ ಜಲಪಾತ ಪ್ರೇಮಿ ರಾಜೇಶ್ ನಾಯಕರೊಂದಿಗೆ ಹರಟುತ್ತಾ ಜೋಗ ನೋಡಿದೆ, ಕ್ಯಾಮೆರಾಕ್ಕೆ ಒಂದಷ್ಟು ಕ್ಲಿಕ್ಕಿಸಿದೆ.
ನೀರು ಅಷ್ಟಾಗಿ ಇರಲಿಲ್ಲ. ಲಿಂಗನಮಕ್ಕಿಯಿಂದ ಹೆಚ್ಚು ನೀರು ಬಿಟ್ಟಾಗ ತಾನು ಬೈಕಲ್ಲಿ ಬಂದು ಜೋಗ ನೋಡಿದ ಪ್ರಸಂಗವನ್ನು ನನ್ನಲ್ಲಿ ರಾಜೇಶ್ ಹೇಳಿದರು.
ಜೋಗದ ಬುಡಕ್ಕೆ ಇಳಿಯುವ ಅನುಭವ ತ್ರಾಸದಾಯಕ, ಅಷ್ಟೇ ಆಪ್ತ. ಇಳಿಯುತ್ತಾ ಹೋದಂತೆ ಜಲಪಾತದ ಆಗಾಧತೆ ನಮ್ಮನ್ನು ಆವರಿಸಿಕೊಳ್ಳುತ್ತದೆ. ಎಲ್ಲಾ ದಿಕ್ಕಿಂದಲೂ ಕಡಿದಾದ ಕಣಿವೆ. ಅದಕ್ಕೆ ಧುಮ್ಮಿಕ್ಕುವ ಜೋಗ ನಿಜಕ್ಕು ಸುಂದರ ಎಂದರೆ ಈ ಬಗ್ಗೆ ಸಹಸ್ರಾರು ಬರಹ ಓದಿದ ನಿಮಗೆ ಸಪ್ಪೆ ಎನಿಸಲೇಬೇಕು.
ನನ್ನ ಗಮನ ಸೆಳೆದದ್ದು ಜೋಗದ ಬುಡದಲ್ಲಿ ನೀರಿನ ರಭಸಕ್ಕೆ ಉಂಟಾದ ಸುಂದರ ಶಿಲಾಕೃತಿಗಳು. ಮನಸ್ಸಿನ ಕಲ್ಪನೆಗೆ ಬಿಟ್ಟಂತೆ ಏನೇನೋ ವಿನ್ಯಾಸದ ಶಿಲ್ಪ, ಮಂಜು ಮುಸುಕಿದ ಹಸಿರು ಶರಾವತಿ ಕಣಿವೆ, ಹುಚ್ಚೆಬ್ಬಿಸುವ ಚಳಿ ಇವೆಲ್ಲ ಜೋಗ ಫಾಲ್ಸ್‌ನ ಬೋನಸ್ಸು.
ನಾನು ಭೇಟಿ ಕೊಟ್ಟದ್ದು ಭಾನುವಾರವಾದ ಕಾರಣ ಜನವೋ ಜನ(ಮಾರನೇ ದಿನ ಪತ್ರಿಕೆಯಲ್ಲಿ ನೋಡಿದರೆ ೪೦೦೦ ಜನ ಒಂದೇ ದಿನ ಬಂದಿದ್ದಾರೆ ಎಂದು ಗೊತ್ತಾಯ್ತು). ಹಾಗಾಗಿಯೇ ಜನಪ್ರಿಯತೆಯ ಕುರುಹುಗಳೂ ಜಲಪಾತದ ಸುತ್ತ ಸಾಕಷ್ಟಿದ್ದವು. ಜಲಪಾತದ ಬುಡದಲ್ಲೇ ಚಹಾದಂಗಡಿ ತೆರೆದು ಶರಾವತಿ ಕೊಳ್ಳಕ್ಕೆ ಪ್ಲಾಸ್ಟಿಕ್ ತುಂಬುವ ಅಮೋಘ ಕಾರ್ಯವೂ ನಡೆಯುತ್ತಿತ್ತು.
ಅದೇ ರೀತಿ ಮುಂಗಾರು ಮಳೆ ಶೂಟಿಂಗ್ ನಡೆದ ಬಳಿಕ ಖ್ಯಾತಿ ಪಡೆದ ‘ರಾಜ’ನ ಪಕ್ಕೆಯಲ್ಲೇ ಅಭಿಮಾನಿ ಯಾರೋ ಒಬ್ಬಾತ ತನ್ನ ಉಚ್ಚಿಷ್ಟ ಹಾಕಿ ಧನ್ಯತೆ ಮೆರೆದಿದ್ದ!
ಆದರೂ ಆ ದುರ್ವಾಸನೆ ಸಹಿಸಿಕೊಂಡು , ಎಲ್ಲರೂ ಸರದಿಯಂತೆ ಬಂಡೆಗಲ್ಲ ಮೇಲೆ ಮಲಗಿ ರಾಜನ ಉದ್ದ ಅಳೆಯುವ ಯತ್ನ ಮಾಡುತ್ತಿದ್ದರು. ರಾಜ ಹರಿದು ಬರುವ ಸ್ಥಳದಲ್ಲಿ ಒಬ್ಬ ಆಸಾಮಿ ಈಜುತ್ತಿರುವಾಗ, ನೇರವಾಗಿ ಕಣಿವೆಯ ಒಡಲು ಸೇರುವ ಸಾಧ್ಯತೆ ಇತ್ತು. ಆದರೆ ನಮ್ಮ ತಂಡದ ರಾಕೇಶ ಹೊಳ್ಳ, ತನ್ನ ಜಿರಾಫೆ ದೇಹದ ಕೃಪೆಯಿಂದ ಆಸಾಮಿಯನ್ನು ರಕ್ಷಿಸಿ ಎಲ್ಲರ ಶಹಬ್ಬಾಸ್‌ಗಿರಿಗೆ ಪಾತ್ರನಾದ.
ಅಂತೂ ಜೋಗ ನೋಡಿದ ಕಹಿ-ಸಿಹಿ ಅನುಭವದ ಬಳಿಕ, ರಾಜೇಶ್ ನಾಯಕರ ಈ ಬರಹ ನೋಡಿದ ಮೇಲೆ, ಲಿಂಗನಮಕ್ಕಿ ಗೇಟು ತೆರೆದಾಗ ಇನ್ನೊಮ್ಮೆ ಹೋಗಲೇ ಬೇಕು ಎಂಬ ದೃಢ ನಿಶ್ಚಯ ಹಾಕಿದ್ದೇನೆ.

15.7.07

ಅಪ್ಪೆ ಅಜ್ಞಾನ ಮತ್ತು ಶೇಷಮ್ಮ.....


ನನಗೆ ಅಸಲಿ ಅಪ್ಪೆ ಮಾವಿನ ಮಿಡಿ ಎಂದರೆ ಏನೆಂದು ಚಿಕ್ಕವನಿದ್ದಾಗ ಗೊತ್ತೇ ಇರಲಿಲ್ಲ.

ಅಪ್ಪೆಗಳ ಅಸಲಿತನ-ನಕಲಿತನ ಗೊತ್ತಾದದ್ದು ಕೆಲವರ್ಷಗಳ ಹಿಂದೆಯಷ್ಟೇ. ಅದರ ಹಿಂದೆ ಹೀಗೊಂದು ಚಿಕ್ಕ ಸಂದರ್ಭವಿದೆ.

ಕಾಸರಗೋಡಿನ ನನ್ನಜ್ಜನ ಮನೆಯಂಗಳದಲ್ಲಿ ಇದ್ದ ಕಾಟು ಮಾವಿನ ಮರದಲ್ಲಿ ಕೆಂಪಿರುವೆ ಕಡಿಸಿಕೊಂಡೇ ಮಾವ ಬುಟ್ಟಿ ಬುಟ್ಟಿ ಮಾವಿನ ಮಿಡಿ ಇಳಿಸುತ್ತಿದ್ದ. ತಾಯಿ, ಅಜ್ಜಿ, ಚಿಕ್ಕಮ್ಮಂದಿರು ಸೇರಿಕೊಂಡು ಮಿಡಿ ಕ್ಲಾಸಿಫಿಕೇಶನ್ ಮಾಡುತ್ತಿದ್ದರು. ದೊಡ್ಡಮಿಡಿ, ಕೊಯ್ಯುವಾಗ ಬಿದ್ದ ಮಾವು, ಮೀಡಿಯಂ ಸೈಝಿದ್ದು...ಹೀಗೆಲ್ಲ.

ಮಾವಿನ ಮಿಡಿ ಕೊಯ್ದ ಬಳಿಕ ಒಂದಷ್ಟು ದಿನ ನಮಗೆ ಸಿಗುತ್ತಿದ್ದುದು ಗಾಯಗೊಂಡ ಮಾವಿನ ತುಂಡುಗಳ ಉಪ್ಪಿನಕಾಯಿ ಮಾತ್ರ. ಮಿಡಿಮಾವಿನ ಉಪ್ಪಿನಕಾಯಿ ಎತ್ತರದ ಭರಣಿಗಳಿಂದ ಹೊರಗೆ ಬರಲು ಕನಿಷ್ಠ ಒಂದು ವರ್ಷ ಕಾಯಬೇಕಿತ್ತು. ಹಾಂ ಅಪ್ಪೆ ಬಗ್ಗೆ ಹೇಳಲು ಹೊರಟು ಏನೇನೋ ಒದರುತ್ತಿದ್ದಾನೆ ಅನ್ನಬೇಡಿ.

ಮಳೆ ಧೋ ಎಂದು ಸುರಿಯುವಾಗ ರಜೆಯಲ್ಲಿ ಮನೆಯಲ್ಲಿ ಮಧ್ಯಾಹ್ನ ಒಮ್ಮೊಮ್ಮೆ ಬಿಳಿ ಕಡಲೇಕಾಯಿಯಷ್ಟೇ ದೊಡ್ಡದಾದ ಆದರೆ ಕೇವಲ ಸೊನೆಯಿಂದಲೇ ಇದು ಕಡಲೇಕಾಯಿ ಅಲ್ಲ, ಕಾಡಿನ ಮುಳ್ಳುಗಿಡ ಕರಂಡೆ ಕಾಯಿಯೂ ಅಲ್ಲ, ಅಪ್ಪಟ ಮಾವು ಎಂದು ಗೊತ್ತಾಗುವ ಮಾವಿನ ಉಪ್ಪಿನಕಾಯಿ ಪ್ರತ್ಯಕ್ಷವಾಗುತ್ತಿತ್ತು. ಅದನ್ನೇ ಅಪ್ಪೆ ಮಿಡಿ ಎಂದು ಕರೆಯಲಾಗುತ್ತಿತ್ತು! ಮನೆಯಂಗಳದ ಮಾವಿನಲ್ಲೇ ಅತ್ಯಂತ ಚಿಕ್ಕದಾದ ಮಿಡಿಯನ್ನೇ ಅಪ್ಪೆ ಎಂದು ನಂಬಿ ನಾನು ಮೋಸಹೋಗಿದ್ದೆ. ಇದೆಂತಹ ಘೋರ ಅಜ್ಞಾನ ಎನ್ನುವುದು ಗೊತ್ತಾದ್ದು ಉಜಿರೆಯ ಹಾಸ್ಟೆಲ್ ಸೇರಿದ ಮೇಲೆಯೇ. ಅಲ್ಲಿ ಶಿರಸಿ ಯಲ್ಲಾಪುರ ಕಡೆಯಿಂದ ಬರುತ್ತಿದ್ದ ಸ್ನೇಹಿತರು ಏನೇ ಮರೆತರೂ ಅಪ್ಪೇ, ಜೀರಿಗೆ ಮಿಡಿಯ ಬಾಟಲಿಯೊಂದು ಬಿಟ್ಟು ಬರುತ್ತಿರಲಿಲ್ಲ.

ಕಾಸರಗೋಡಿನಲ್ಲಿ ಸಿಕ್ಕ ಚೋಕುಡಿ ಮಾವಿಗೆ ಅಪ್ಪೆ ಎಂದು ತಿಳಿದು ಈ ಘನತೆವೆತ್ತ ಅಪ್ಪೆಮಿಡಿಗೆ ಅನ್ಯಾಯ ಮಾಡಿದ್ದರ ಬಗ್ಗೆ ಹಲುಬುತ್ತಲೇ ಈ ಉ.ಕ ಸ್ನೇಹಿತರು ಕೊಡುವ ಅಪ್ಪೆಯನ್ನು ಸವಿಯುತ್ತಿದ್ದೆ.

ಅದು ಬಿಟ್ಟರೆ ನಾನು ಅಪ್ಪೆ ತಿಂದಿದ್ದು ಕಡಮೆ. ಅದೆಲ್ಲ ಬಿಡಿ. ಎರಡು ವರ್ಷಕ್ಕೆ ಮೊದಲು ನಮ್ಮ ಪಕ್ಕದ ಮನೆಯ ಬಾಲಕೃಷ್ಣ ಎಂಬವರು ಅಪ್ಪೆ ಸಿಗುತ್ತೆ ತರೋಣ ಎಂದರು. ಹೊರಟೇ ಬಿಟ್ಟೆ. ಸಾಗರ ಬಳಿಯ ರಿಪ್ಪನ್ ಪೇಟೆಯಲ್ಲಿಳಿದು ಅಪ್ಪೆಗಾಗಿ ಸರ್ಚ್ ಶುರು. ನಾವು ಹೊರಗಿಂದ ಬಂದ ಕಾರಣ ಎಲ್ಲರೂ ಬಾಯಿಗೆ ಬಂದ ರೇಟು ಹೇಳತೊಡಗಿದರು. ಎಲ್ಲೂ ನಮಗಿಷ್ಟವಾಗಲಿಲ್ಲ. ಸುತ್ತುತ್ತಿರುವಾಗ ಆಟೋ ಚಾಲಕರೊಬ್ಬರು ನಮ್ಮಲ್ಲಿ ಅಪ್ಪೆ ಬೇಕಾದ್ರೆ ಎರಡು ಮೈಲಿ ಮುಂದೆ ಹೋಗಿ ಶೇಷಮ್ಮ ಅಂತ ಇದಾರೆ ಎಂಬ ಸಖತ್ ಮಾಹಿತಿ ಕೊಟ್ರು.

ಹಾಗೆ ಹುಡುಕುತ್ತಾ ಹೋದಾಗ ಕೊನೆಗೂ ಶೇಷಮ್ಮ ಸಿಕ್ರು. ನಡು ಮಧ್ಯಾಹ್ನ ಆಕೆಯ ಮನೆ, ಮನೆಗಿಂತಲೂ ಚಿಕ್ಕ ಷೆಡ್ಡು ಎನ್ನಬಹುದು. ಸುಮಾರು ಎಪ್ಪತ್ತು ವರುಷದ ವಿಧವೆ ಶೇಷಮ್ಮನ ಕಾಯಕ ಮಾವಿನಕಾಯಿ ಉಪ್ಪಿನಕಾಯಿ ಮಾಡೋದೇ. ದೂರದೂರುಗಳಿಂದಲೂ ಶೇಷಮ್ಮನ ಕೈಗುಣಕ್ಕೆ ಮೆಚ್ಚಿ ಜನ ಬಂದು ಉಪ್ಪಿನಕಾಯಿ ಕೊಂಡೊಯ್ಯುತ್ತಾರೆ.

ಮಧ್ಯಾಹ್ನ ತನಗಿಟ್ಟ ಅನ್ನದಿಂದಲೇ ಒಂದಷ್ಟು ಪಾಲು ನಮಗೂ ಸಿಕ್ಕಿತು(ಊಟದಲ್ಲಿ ಶೇಷಮ್ಮನ ಉಪ್ಪಿನಕಾಯಿ ರುಚಿಯೂ ಸಿಕ್ಕಿತು). ಹತ್ತಿರ ಬೇರೆ ಹೋಟ್ಲೂ ಇರಲಿಲ್ಲ. ನಮಗೆ ಉಪ್ಪಿನಕಾಯಿ ಬೇಕಿರಲಿಲ್ಲ. ಉಪ್ಪಿನಲ್ಲಿ ಹಾಕಿದ್ದ ತಲಾ ಐದು ನೂರು ಜೀರಿಗೆ ಮತ್ತು ಅಪ್ಪೆ ಮಿಡಿಯನ್ನು ಸರಿಯಾಗಿ ಎಣಿಸಿ, ಮೇಲಿಂದ ಇಪ್ಪತ್ತು ಹೆಚ್ಚುವರಿ ಮಿಡಿಗಳನ್ನೂ ನಮ್ಮ ಪಾತ್ರೆಗೆ ಹಾಕಿಟ್ಟರು ಶೇಷಮ್ಮ. ಜತೆಗೆ ವಿಧವೆಯಾದ ಮೇಲೆ ತಾನು ಊರಿನಿಂದ ಪ್ರತ್ಯೇಕವಾದ ಕಥೆಯನ್ನೂ ಹೇಳಿದರು. ಶೇಷಮ್ಮನಿಗೆ ಮಕ್ಕಳು ಇಲ್ಲ, ವಿಶೇಷ ಆಸೆಯೂ ಇಲ್ಲ. ಒಂದೇ ಆಸೆ ಇದ್ದದ್ದು ಒಂದೇ. ತನ್ನ ಮನೆ ಪಕ್ಕ ಆಂಜನೇಯನ ಗುಡಿ ನಿರ್ಮಿಸುವುದು. ಹೊರಗೆ ಇಣುಕಿದರೆ ಗಡಿ ಆಗಲೇ ಪೂರ್ಣಗೊಂಡಿತ್ತು. ಉಪ್ಪಿನಕಾಯಿ ದುಡ್ಡು ಸೇರಿಸಿಯೇ ನಿರ್ಮಿಸಿದ್ದಂತೆ. ಆಕೆಯ ಗುಡು ಬೇಗ ನಿರ್ಮಾಣವೇಗಲಿ ಎಂದು ಹಾರೈಸಿ, ಮಾವಿನ ದುಡ್ಡು ಮೇಲೆ ನೂರು ಆಂಜನೇಯನ ಗುಡಿ ನಿರ್ಮಾಣಕ್ಕೆ ಕಿಂಚಿತ್ ಸಹಾಯವಾಗಲಿ ಎಂದು ಕೊಟ್ಟು ಹಿಂದಿರುಗಿದೆವು.

ಸಕತ್ ರುಚಿಯಿದ್ದ ಆ ಮಾವಿನ ಮಿಡಿಯನ್ನು ಸಂಬಂಧಿಗಳೆಲ್ಲ ಸ್ವಲ್ಪ ಸ್ವಲ್ಪವಾಗಿ ಇಲ್ಲವಾಗಿಸಿದರು. ಆದರೆ ಆ ಮಿಡಿಯ ಕಂಪು ಇಂದಿಗೂ ಬಾಯಿಗೆ ನೆನಪಿದೆ. ಮುಂದಿನ ವರ್ಷ ನಾನು ಮಿಡಿ ತರಲು ಹೋಗಲಾಗಲಿಲ್ಲ. ಬಾಲಕೃಷ್ಣ ಹೋಗಿದ್ದರು. ಮಿಡಿ ಕಡಮೆಯಾದ ಕಾರಣ ಭಾರೀ ಬೆಲೆ ಎಂದು ಸ್ವಲ್ಪವೇ ತಂದಿದ್ದರು.

ಕಳೆದ ವರ್ಷ ಮಾತ್ರ ನಾನೂ ಬರುತ್ತೇನೆ. ಶೇಷಮ್ಮನ ಮನೆಗೇ ಹೋಗೋಣ ಎಂದಿದ್ದೆ. ಆದರೆ ಮಿತ್ರರೊಬ್ಬರಿಂದ ಮಾಹಿತಿ ಬಂತು. ಶೇಷಮ್ಮ ನಿಧನರಾಗಿ ಕೆಲವು ತಿಂಗಳಾಗಿವೆ.......


(ಸುಶ್ರುತರ ಗಂಗಮ್ಮನ ಜೀರಿಗೆ ಬಗ್ಗೆ ಓದಿದಾಗ ಶೇಷಮ್ಮ ಫಕ್ಕನೆ ಜ್ಞಾಪಕಕ್ಕೆ ಬಂದರು. ಅದಕ್ಕಾಗಿ ಸುಶ್ರುತರಿಗೆ ಥ್ಯಾಂಕ್ಸ್)


8.7.07

ಎರಡು ಪಲುಕುಗಳು

ಜಾಹೀರಾತು

ಅವಳ
ರಾತ್ರಿಗಳಿಗೆ
ಬಣ್ಣ ಮೆತ್ತುವ
ಕನಸುಗಳನ್ನು
ಕಾವಲು
ಕಾಯುವುದಕ್ಕೊಬ್ಬ
ಕಾವಲುಗಾರ
ಬೇಕಾಗಿದ್ದಾನೆ!



ಸವಾಲು

ಆ ಹುಡುಗಿಯ
ಕೂದಲ ಮೇಲೆ
ಮಿರಿಮಿರಿ
ಮಿರುಗುವ
ನೀರಹನಿಯಲ್ಲಿ
ಯಾರ್ಯಾರದ್ದೋ
ಪ್ರತಿಬಿಂಬಗಳು
ಅದರಲ್ಲಿ
ನನ್ನನ್ನು
ಹುಡುಕಿಕೊಡುವವರು
ಬೇಕಾಗಿದ್ದಾರೆ!

4.7.07

ನೆನಪಾದ ಮಿತ್ರರಿಬ್ಬರ ಬಗ್ಗೆ....

ಹಲವು ಮಿತ್ರರಿದ್ದಾರೆ ನಂಗೆ. ೧ನೇ ತರಗತಿಯಿಂದ ಎಂ.ಎ ವರೆಗೆ ಸಹಪಾಠಿಗಳಾಗಿದ್ದವರು...ಅದರ ಮಧ್ಯೆ ಒಂದಲ್ಲ ಒಂದು ಕಾರಣದಿಂದ ಪರಿಚಯವಾಗಿ ಸ್ನೇಹಿತರಾದವರು...ಉದ್ಯೋಗಕ್ಕೆ ಸೇರಿದ ಬಳಿಕ ಮಿತ್ರರಾದವರು...ಹೀಗೆ ಅನೇಕ ರೀತಿಯವರು.
ಆದರೆ ನಾನಿಲ್ಲಿ ಹೇಳಬೇಕಾದವರು ಇಬ್ಬರ ಬಗ್ಗೆ.
ಒಬ್ಬಾತ ಜಯ, ಇನ್ನೊಬ್ಬ ನಟರಾಜ.
ಅವರಿಬ್ಬರಿಗೂ ಅನೇಕ ವಿಷಯಗಳಲ್ಲಿ ಹೋಲಿಕೆಯಿತ್ತು. ಆದರೆ ಅವರಿಬ್ಬರಿಗೂ ಪರಿಚಯ ಮಾತ್ರ ಇರಲಿಲ್ಲ.
ಜಯ ೧ನೇ ತರಗತಿಯಲ್ಲಿ ನನ್ನ ಗೆಳೆಯನಾದವನು. ಕ್ಲಾಸಲ್ಲಿ ಆತನಿಗೆ ಕಲಿಕೆಯಲ್ಲಿ ಸವಾಲೊಡ್ಡುತ್ತಿದ್ದುದು ನಾನು ಮಾತ್ರ. ಆದರೆ ಆ ಆಸಾಮಿ ವರ್ಷ ಕಳೆದಂತೇ ಕೇವಲ ಕಲಿಕೆಯಷ್ಟೇ ಅಲ್ಲ, ನಾಟಕ, ಪ್ರಬಂಧ, ಆಟೋಟಗಳಲ್ಲೂ ಮಿಂಚುತ್ತಿದ್ದ. ಸೊಗಸಾಗಿ ಚಿತ್ರ ಬಿಡಿಸುತ್ತಿದ್ದ, ನಂಗೂ ಆ ಹುಚ್ಚು ಕಲಿಸಿಕೊಟ್ಟ. ಚೆಸ್ ಆಡೋದು ಹೇಳಿಕೊಟ್ಟ.
ನಮ್ಮದು ಒಂದು ಆದರ್ಶ ಗೆಳೆತನ. ಕ್ಲಾಸಲ್ಲಿ ಮಾತ್ರವಲ್ಲ ಆತ ನನ್ನ ಮನೆಗೆ ಬರ್‍ತಾ ಇದ್ದ, ಕೈಕಾಲು ಸೋಲುವಷ್ಟು ಕ್ರಿಕೆಟ್ ಆಡುತ್ತಿದ್ದೆವು, ತಿಂಡಿ ತಿಂದು ಹೋಗ್ತಾ ಇದ್ದ, ನಾನು ಅವನ ಮನೆಗೆ ಹೋಗಿ ಚೆಸ್ ಆಡಿ ಬರುತ್ತಿದ್ದೆ. ಜಯ ೮ನೇ ತರಗತಿಯಲ್ಲಿ ಬಾಡಿಗೆ ಸೈಕಲ್ ತುಳಿಯುವ ಹೊಸ ಅಭ್ಯಾಸ ರೂಢಿಸಿಕೊಂಡ. ಆತನ ತಾಯಿ ಶಿಕ್ಷಕಿಯಾದ್ದರಿಂದ ಹಣಕ್ಕೆ ಕೊರತೆ ಇರಲಿಲ್ಲ. ನನಗೆ ಅದೊಂದು ಅಡ್ಡಿ ಇದ್ದ ಕಾರಣ. ಅದಕ್ಕೆ ನಾನು ಹೋಗುತ್ತಿರಲಿಲ್ಲ. ಒಮ್ಮೆ ಮನೆಯಲ್ಲಿ ತಂದೆ ಏನೋ ಹೇಳಿದರೆಂದು ಚಿಲ್ಲರೆ ಹಣ ಎತ್ತಿಕೊಂಡ ಜಯ ಬಾಡಿಗೆ ಸೈಕಲೊಂದರಲ್ಲಿ ನಾಪತ್ತೆಯಾದ! ತಾಯಿ ಕಣ್ಣೀರಿಟ್ಟರು. ಎರಡು ದಿನ ಬಿಟ್ಟು ಸುಸ್ತಾದ ಮುಖದೊಂದಿಗೆ ಹುಡುಗ ಮನೆಗೆ ಮರಳಿದ. ಓಡಿಹೋದ ಕಾರಣ ಯಾರಿಗೂ ಹೇಳಲಿಲ್ಲ.

ಒಂದು ವರ್ಷ ಸರಿಯಾಗಿದ್ದ. ೯ನೇ ತರಗತಿಗೆ ಬಂದಾ‌ಗ ಮತ್ತೆ ನಾಪತ್ತೆಯಾದ. ಹೋದವನು ಬರ್‍ತಾನೆ ಎಂದು ಹೆತ್ತವರು ತಿಳಿದಿದ್ದರು. ತಿಂಗಳಾಯಿತು...ವರ್ಷವೇ ಆಯಿತು ಜಯರಾಮನಿಲ್ಲ.
ಕೊನೆಗೂ ಜಯ ಬಂದ. ಆಗ ನಾವು ಸಿನಿಮಾದಲ್ಲಷ್ಟೇ ನೋಡುತ್ತಿದ್ದ ruf n tuf ಜೀನ್ಸು, ಬಿಳಿಯ ಸ್ಟೋನ್ ವಾಷ್ ಅಂಗಿ ಧರಿಸಿ ಥೇಟ್ ಹೀರೋ ಥರಾನೇ ಆಗಿದ್ದ. ಬೆಂಗಳೂರಿನ ಯಾವುದೋ ಹೊಟೇಲಲ್ಲಿ ಕೆಲ್ಸ ಮಾಡಿದ್ದನಂತೆ. ಸಾಕಷ್ಟು ಸಂಪಾದನೆ ಮಾಡಿದಂತೆ ಕಾಣುತ್ತಿದ್ದ.
ಏನೇ ಆಗಲಿ ಶಾಲೆ ಮುಂದುವರಿಸಿದ. ದುಡ್ಡಿನ ರುಚಿ ಹತ್ತಿದ್ದರೂ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ. ಹತ್ತಿರದ ಪೇಟೆಯೊಂದರಲ್ಲಿ ಪಿಯುಸಿ ಕಲಿಯುತ್ತಿದ್ದ. ಥಟ್ಟನೆ ಏನಾಯ್ತೋ ಗೊತ್ತಿಲ್ಲ. ಮತ್ತೊಮ್ಮೆ ಬೆಂಗಳೂರಿಗೆ ಹೋದಾತ ಮರಳಲಿಲ್ಲ. ಯಾವುದೋ ರೈಲು ಹಳಿಯಲ್ಲಿ ಜಯರಾಮನನ್ನೆ ಹೋಲುವ ಶವ ಪತ್ತೆಯಾಗಿತ್ತು. ಊರಿನಲ್ಲಿ ಏನೇನೋ ಸುದ್ದಿಗಳು. ಜಯ ಏನೋ ಸ್ಮಗಲಿಂಗ್ ಗ್ಯಾಂಗ್ ಸೇರಿರಬಹುದು ಎಂದು...ಕೆಟ್ಟದ್ದೇನೋ ಮಾಡಲು ಹೋಗಿ ಹುಡುಗ ಹಾಳಾದ ಎಂದೆಲ್ಲಾ ಊರು ಆಡಿಕೊಂಡು ಸುಮ್ಮನಾಯಿತು. ಈಗಲೂ ಹಳೆಯ ನೆನಪುಗಳು ಕಾಡಿದಾಗ ಜಯನ ಚಿತ್ರ ಮೊದಲು ಬರುತ್ತದೆ. ಕಣ್ಣಂಚು ತೇವಗೊಳ್ಳುತ್ತದೆ.

ಇನ್ನೊಬ್ಬ ನಟರಾಜ. ಜಯ ಒಂದು ವರ್ಷ ನಾಪತ್ತೆಯಾಗಿದ್ದಾಗ ನನ್ನ ಕ್ಲಾಸಿಗೆ ದಢಿರನೇ ಎಲ್ಲಿಂದಲೋ ಬಂದು ಸೇರಿದ್ದ. ನಡೆ ನುಡಿ ಜಯನಂತೇ. ಕಲಿಕೆಯಲ್ಲೂ ಮುಂದು. ಆದರೆ ಒಂಥರಾ ರೌಡಿಯಂತೆ. ಆ ಹಳ್ಳಿಶಾಲೆಯಲ್ಲಿ ಚಿಕ್ಕ ತಪ್ಪುಗಳೂ ಅಪರಾಧವಾಗುವಾಗ ಈ ಪಾರ್ಟಿ ಪ್ಯಾಕೆಟುಗಟ್ಟಲೆ ಪಾನ್ ಪರಾಗು, ಮಧು ಹಾಕುತ್ತಿದ್ದ. ನನ್ನೊಂದಿಗೆ ಹರಟುತ್ತಾ ಆತ್ಮೀಯನಾಗಿದ್ದ.

ಮನೆಯಲ್ಲಿ ತಂದೆ, ತಾಯಿ, ಅಣ್ಣಂದಿರಲ್ಲಿ ಜಗಳ ಮಾಡಿ ಮನೆ ಬಿಟ್ಟಿದ್ದ. ಶಾಲೆ ಹತ್ತಿರವೇ ಇದ್ದ ಶೆಡ್ಡ್ ಹೊಟೇಲಲ್ಲೆ ರೂಮ್ ಮಾಡಿದ್ದ. ಕ್ಲಾಸಿನ ಬ್ರಿಲಿಯಂಟ್ ಹುಡುಗಿಯೊಬ್ಬಳಿಗೆ ಲೈನ್ ಕೊಡಲೂ ಶುರುಮಾಡಿದ್ದ. ಹೆದರಿಕೆಯೇ ಇಲ್ಲದೆ ರಾತ್ರಿ ನಾವೆಲ್ಲಾ ಭೂತ ಇದೆ ಎಂದು ಬೆವರುತ್ತಿದ್ದ ಕ್ಲಾಸಿಗೆ ಓದಲು ಹೋಗುತ್ತಿದ್ದ. ಎಸ್ಸೆಸ್ಸೆಲ್ಸಿ ಮುಗಿದು ನಾನು ಊರಿಂದ ಬೇರೆ ಕಡೆಗೆ ಪಿಯುಸಿಗೆ ಹೋದರೆ, ಈತ ಊರಲ್ಲೇ ಏನೇನೋ ಮಾಡುತ್ತಾ ಕಳೆದ. ತಲೆಯಿದ್ದರೂ ಓದಲು ಹೋಗಲಿಲ್ಲ. ಆ ಬಳಿಕ ನನಗೆ, ಅವನಿಗೆ ನಿಧಾನವಾಗಿ ಸಂಪರ್ಕ ಕಡಿದೇ ಹೋಗಿತ್ತು.
ಕಳೆದ ವರ್ಷ ಮಂಗಳೂರಿನಲ್ಲಿ ಪರಿಚಯದವರ ಗೃಹಪ್ರವೇಶಕ್ಕೆ ಹೋದರೆ ಆಸಾಮಿ ಅಡುಗೆ ಗುಂಪಲ್ಲಿದೆ! ಕೇಳಿದರೆ ಎರಡು ವರ್ಷದಿಂದ ಇದೇ ಕೆಲಸವಂತೆ. ಮದುವೆಯಾಗಿದೆ, ಮಗು ಇದೆ, ಮನೆ ಮಾಡಿದ್ದೇನೆ. ಒಮ್ಮೆ ಟೈಂ ಮಾಡಿ ಬಾ ಎಂದಿದ್ದ. ಮೊಬೈಲು ನಂಬರೂ ಕೊಟ್ಟ. ಆ ಮೇಲೆ ಕೆಲ ದಿನಗಳ ಕಾಲ ಫೋನೂ ಮಾಡಿದ್ದ. ಈಗ ಆ ಮೊಬೈಲ್ ಅಸ್ತಿತ್ವದಲ್ಲಿಲ್ಲ, ನನಗೆ ಫೋನ್ ಕರೆಯೂ ಇಲ್ಲ.
ಇಂತಹ ಅನೇಕ ವಿಚಿತ್ರ ಎನಿಸುವ ಫ್ರೆಂಡ್‌ಗಳು ನಿಮಗೂ ಇರಬಹುದು..ಅವರ ನೆನಪುಗಳು ಬಿಡದೆ ಕಾಡಬಹುದು....
ಅಕ್ಸರ್‍ ಇಸ್ ದುನಿಯಾ ಮೇ ಅಂಜಾನೇ ಮಿಲ್ತೇ ಹೈಂ
ಅಂಜಾನೇ ರಾಹೋ ಮೇ ಮಿಲ್ಕೇ ಖೋ ಜಾತೇ ಹೈಂ
ಲೇಕಿನ್ ಹಮೇಶಾ ವೋ ಯಾದ್ ಆತೇ ಹೈಂ....

26.6.07

ವಾಂಟೆಡ್

ಅರೆ!
ನನ್ನೊಳಗೆ ನಾನೇ ಹೊಕ್ಕು
ನೋಡಿದರೆ
ಒಳಗಿಂದೊಳಗೇ ಕಳೆದುಹೋಗಿದ್ದೇನೆ
ನಗರದ ಗಗನಚುಂಬಿಗಳು,
ನಿಯಾನ್ ಸೈನ್‌ಗಳ
ರಂಗಲ್ಲಿ ಮಂಕಾಗಿದ್ದೇನೆ
ಭೂಮಿಯನ್ನೇ ನುಂಗಿ ನೀರು
ಕುಡಿಯುವಂತ ಮಳೆಯ ಅಬ್ಬರಕ್ಕೆ
ಸ್ತಬ್ದನಾಗಿದ್ದೇನೆ
ವಿಶೇಷ ಆರ್ಥಿಕ ವಲಯಗಳ
ಹಿಂದಿನ ಬಾಡಿದ ಗದ್ದೆ
ಪೈರುಗಳಲ್ಲಿ
ನಿಶ್ಯಕ್ತ ಬೀಜವಾಗಿದ್ದೇನೆ....
ಥತ್...
ಇನ್ನೂ ಏನೇನೋ ಆಗಿಬಿಡುತ್ತೇನೆ
ಪೊಲೀಸ್ ಠಾಣೆಯಲ್ಲಿ
ನನ್ನ ಪೋಸ್ಟರ್‍ ಬಿದ್ದಿದೆ
ನಾನು ಕಳೆದುಹೋಗಿದ್ದೇನೆ
ಹಾಗಾಗಿ...
ನಾನು ಬೇಕಾಗಿದ್ದೇನೆ

21.6.07

ಎರಡೂವರೆಗಂಟೆಯ ದುನಿಯಾ ಹಾಗೂ ಒಂದು ಆಕ್ಸಿಡೆಂಟ್


ವಿಲಕ್ಷಣ ಸಮಾಜದಲ್ಲಿ ಅದೊಂದು ವಿಲಕ್ಷಣ ಸಿನಿಮಾ....
ನಮ್ಮ ಸುತ್ತಲೂ ಜಗಮಗಿಸುವ ದೀಪಗಳ ನೆರಳಿನ ಕತ್ತಲೆಯಲ್ಲಿ ನಮಗರಿವಿಲ್ಲದ ಆಗುಹೋಗುಗಳತ್ತ ಶಾರ್ಪ್ ಸಿನಿಮಾ ನಿರ್ದೇಶಕನೊಬ್ಬ ಕಣ್ಣು ಹಾಯಿಸಿದಾಗ ದುನಿಯಾದಂತಹ ಸಿನಿಮಾಗಳು ಹುಟ್ಟಿಕೊಳ್ಳುತ್ತವೆ.
ಈ ಸಿನಿಮಾ ಮಂಗಳೂರಿನಂತಹ ನಗರದಲ್ಲೂ ಶತದಿನ ಆಚರಿಸಿದ್ದಕ್ಕೆ ನಾನು ಕಾರಣಗಳನ್ನು ಊಹಿಸುವುದಕ್ಕೆ ಹೋಗಲಾರೆ. ಆದರೆ ಥಳುಕುಬಳುಕಿನ ಬದುಕಿನ ಸುತ್ತಲೇ ಗಿರಕಿ ಹೊಡೆಯುವ ಇಂದಿನ ದಿನಗಳಲ್ಲೂ ಕಲ್ಲು ಒಡೆಯುವ ಯುವಕನೊಬ್ಬನ ಕಥೆಯನ್ನೇ ಆಧಾರವಾಗಿರಿಸಿ, ಆ ಪಾತ್ರಕ್ಕೂ ಹೊಸಮುಖ(ವಿಜಯ್)ವನ್ನೇ ಹುಡುಕಿದ ನವನಿರ್ದೇಶಕ ಸೂರಿ ಪ್ರಯತ್ನಕ್ಕೆ ಮಾತ್ರ ಸೆಲ್ಯೂಟ್!
ಬಹುಷಃ ಈ ಸಿನಿಮಾ ಅನೇಕರು ನೋಡಿ ಆಗಿರಬಹುದು, ಆದರೂ ನನಗನ್ನಿಸಿದ ಕೆಲವು ಯೋಚನೆಗಳನ್ನು ಇಲ್ಲಿ ಹಂಚಿಕೊಳ್ತಾ ಇದ್ದೇನೆ. ತನ್ನದೇ ದುನಿಯಾದಲ್ಲಿ ಕಲ್ಲು ಬಂಡೆ ಒಡೆಯುತ್ತಾ ಜೀವನ ಸಾಗಿಸುತ್ತಿದ್ದ ಕಲ್ಲಿನಂಥ ದೇಹದ ಆದರೆ ಹೂವಿನ ಮನಸ್ಸಿನ ಯುವಕ ಶಿವಲಿಂಗು. ಬದುಕಿನ ಕೊನೆಕ್ಷಣದಲ್ಲಿರುವ ತಾಯಿಯನ್ನು ‘ದೊಡ್ಡಾಸ್ಪತ್ರೆ ’ಗೆ ಸೇರಿಸಲು ದುಡ್ಡು ಸಾಲದೆ ಮತ್ತೆ ಆಸ್ಪತ್ರೆಗೆ ಮರಳುವಾಗ ತಾಯಿ ಕಣ್ಮುಚ್ಚಿರುತ್ತಾರೆ. ತನ್ನವರೆಂದಿದ್ದ ಮುದಿ ಜೀವವೂ ಇಲ್ಲದಾದಾಗ ಕಂಗಾಲಾಗುವ ಶವಲಿಂಗುವಿಗೆ ತಾಯಿಯ ಶವದಹನಕ್ಕೂ ಹಣವಿರುವುದಿಲ್ಲ. ಅರ್ಧಹೂತಾದ ಗೋರಿಯನ್ನು ಬಗೆದು ಮೃತಶರೀರದ ಕೈನಿಂದ ಉಂಗುರವನ್ನೇ ತೆಗೆದು ಕೊಡುವಾಗ ನಾಯಕನ ಅಭಿನಯದ ಆಳ ಕಾಣುತ್ತದೆ.


ಊರಿಗೆ ಹೋಗುವುದಕ್ಕೆಂದು ನಾಯಕ ಏರುವ ಲಾರಿಯಲ್ಲೆ ತರಕಾರಿ ಜತೆ ಪ್ಯಾಕ್ ಆಗಿರುವ ಆಶ್ರಮದ ಹುಡುಗಿ ಪೂರ್ಣಿಮ. ಆಕೆಯನ್ನು ಕಾಪಾಡೋದು, ಅಲ್ಲಿಂದ ಮತ್ತೆ ಬೆಂಗಳೂರಿಗೆ ಮರಳುವ ದಾರಿಯಲ್ಲಿ ಕ್ವಾಲಿಸ್‌ನಲ್ಲಿ ಪಿಕಪ್ ಕೇಳುವುದು. ಅದೊಂದು ರೌಡಿಯ ವಾಹನ ಅನ್ನೋದು ಶಿವಲಿಂಗುವಿಗೆ ತಡವಾಗಿ ಅರ್ಥ ಆಗುತ್ತದೆ. ಅಷ್ಟು ಹೊತ್ತಿಗೆ ಎನ್‌ ಕೌಂಟರ್‍ ಸ್ಪೆಷಲಿಸ್ಟ್ ಎಸಿಪಿಯ ಗುಂಡಿಗೆ ರೌಡಿ ಬಲಿಯಾಗಿರುತ್ತಾನೆ. ಎಸಿಪಿಯ ಕಣ್ಣು ಶಿವಲಿಂಗು ಮೇಲೂ ಬಿದ್ದಿರುತ್ತದೆ.
ಅಲ್ಲಿಂದ ಬೇಡ ಬೇಡ ಎಂದರೂ ಶಿವನನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತದೆ ಕತ್ತಲಿನ ದುನಿಯಾ, ಕಲ್ಲಿನಂತಹ ಶಿವುಗೆ ಮಾರಾಮಾರಿ ದೃಶ್ಯಗಳು ನೀರು ಕುಡಿದಷ್ಟೇ ಸಲೀಸು. ಹೊಡೆಯುವ, ಹೊಡೆಸಿಕೊಳ್ಳುವುದೇ ಆತನ ಕೆಲಸ. ಈ ಕೆಲಸಕ್ಕೆ ಹಚ್ಚುವ ದಲ್ಲಾಳಿ ಸತ್ಯ(ರಂಗಾಯಣ ರಘು) ದುನಿಯಾದ ಹೈಲೈಟ್.
ಶಿವುಗೆ ಎರಡೇ ಗುರಿ. ತಾಯಿಗೊಂದು ಗೋರಿ ಕಟ್ಟೋದು,ಆಶ್ರಮದಿಂದ ಹೊರಹಾಕಲ್ಪಟ್ಟು ತನ್ನನ್ನೇ ನಂಬಿರುವ ಪೂರ್ಣಿಯನ್ನು ಓದಿಸುವುದು. ಆದರೆ ದುನಿಯಾದ ಒಳಹೊಕ್ಕಮೇಲೆ ಇಂಥ ಒಳ್ಳೆಯ ಗುರಿ ಈಡೇರುವುದಾದರೂ ಹೇಗೆ. ತನ್ನದಲ್ಲದ ತಪ್ಪಿಗೆ ಎರಡು ಕೊಲೆ ಆರೋಪ ಶಿವಲಿಂಗು ಮೇಲೆ. ಎಸಿಪಿಯಂತೂ ಶಿವಲಿಂಗು ಮೇಲೂ ಬುಲೆಟ್ ಮಸೆಯುತ್ತಿರುತ್ತಾನೆ. ಈ ವಿಷಚಕ್ರದಿಂದ ಹೊರಬೀಳುವುದಕ್ಕೆ ಸಾಧ್ಯವೇ ಇಲ್ಲ ಅನ್ನೋದು ನಾಯಕನಿಗಿಂತ ಮೊದಲೇ ಅರಿವಾಗುವುದು ನಾಯಕಿಗೆ. ಮುಂದೇನಾಗುತ್ತದೆ ಅನ್ನೋದು ನಮಗೆಲ್ಲ ತಿಳಿದದ್ದೇ.
ಚಿತ್ರದಲ್ಲಿ ನಮ್ಮನ್ನು ಕಾಡುವ ಕೆಲ ದೃಶ್ಯಗಳಿವೆ. ಮೊದಲೇ ಹೇಳಿರುವ ಸ್ಮಶಾನದ ದೃಶ್ಯ, ಹೆಣಕೊಯ್ಯುವ ಸತ್ಯ ತನ್ನ ಕಥೆಯನ್ನು ಹೇಳಿಕೊಳ್ಳುವುದು, ಕೊನೆಯಲ್ಲಿ ಗೋರಿ ಕಟ್ಟಿಸುವ ಸತ್ಯ...
ವಿಜಯ್ ನಟನೆಯಲ್ಲಿ ಫಸ್ಟ್ ಕ್ಲಾಸ್, ಫೈಟಿಂಗ್‌ನಲ್ಲೂ ಸೂಪರ್‍. ರಶ್ಮಿಯದ್ದು ತಾಜಾ ಅಭಿನಯ. ರಂಗಾಯಣ ರಘು ಇಡೀ ಚಿತ್ರವನ್ನು ಬ್ಯಾಲೆನ್ಸ್ ಮಾಡುವ ಸೂತ್ರಧಾರ. ಸೀಮಿತ ಪಾತ್ರಗಳಾದ ಎನ್‌ಕೌಂಟರ್‍ ಎಸಿಪಿ, ಮಾದ ಮತ್ತಿತರ ಹೊಸಮುಖಗಳಿಂದ ಒಳ್ಳೆ ಅಭಿನಯ ಮೂಡಿಬಂದಿದೆ.
ಸತ್ಯ ಹೆಗಡೆ ಸಿನಿಮಾಟೋಗ್ರಫಿಯಲ್ಲಿ ದುನಿಯಾದ ಕತ್ತಲೆ, ಕ್ಲೋಸಪ್‌ಗಳು ಅರಳಿವೆ. ಸೂರಿಯ ಕಲಾ ಕುಸುರಿ ಸುಂದರ.
ಚಿತ್ರಕ್ಕೊಂದು ಅರ್ಥಪೂರ್ಣ ಟ್ಯಾಗ್ ಲೈನಿದೆ: ಯಾರ ಗೋರಿ ಮೇಲೂ ಯಾಕ್ ಸತ್ರು ಅಂತ ಬರಿಯಲ್ಲ. ಚಿತ್ರಕ್ಕೊಂದು ಚೌಕಟ್ಟು ಕೊಟ್ಟಿರುವುದೇ ಗೋರಿ ಅನ್ನೋದು ಮತ್ತೊಂದು ವಿಶೇಷ.
ಇಂತಹ ಚಿತ್ರಗಳು ಕನ್ನಡದಲ್ಲಿ ಬರುತ್ತಿರುವುದು ಚಿತ್ರರಂಗಕ್ಕೆ ಶುಭಸೂಚನೆ. ಸೂರಿಗೆ ಶುಭವಾಗಲಿ.
ಒಂದು ಆಕ್ಸಿಡೆಂಟ್:
ರಾತ್ರಿ ಶೋದಲ್ಲಿ ದುನಿಯಾ ಚಿತ್ರ ನೋಡಿ ಬೈಕಲ್ಲಿ ಸ್ನೇಹಿತನ ಜೊತೆ ಮನೆಗೆ ಧಾವಿಸ್ತಿದ್ದೆ. ಮುಂದೆ ಥಟ್ಟನೆ ಪಾಸಾದ ಕಾರಿಗೆ ನನ್ನೆದುರೇ ಇದ್ದ ಬೈಕ್ ಒರೆಸಿ ಬೈಕಲ್ಲಿದ್ದ ವ್ಯಕ್ತಿ ಮೂರು ಪಲ್ಟಿ. ಕಾರಿನ ಹಿಂದಿನ ಟೈರಿನ ಬಳಿಯೇ ಆತನ ತಲೆ. ನಾವು ಬೈಕ್ ನಿಲ್ಲಿಸಿ ನೋಡಿದರೆ ಬೈಕ್ ಯುವಕ ಬಚಾವಾಗಿದ್ದ. ಮೇಲ್ನೋಟಕ್ಕೆ ತರಚು ಗಾಯ ಆಗಿತ್ತು. ಏನಾಗಿದೆ ಎಂದು ಹೇಳಲಾಗದೆ ಹೆದರಿಯೇ ನಡುಗುತ್ತಿದ್ದ. ನೋಡಿದರೆ ಕಾರಿನಲ್ಲಿದ್ದ ವ್ಯಕ್ತಿ ನನಗೆ ತುಸು ಪರಿಚಯವೇ. ಒಳ್ಳೆಯ ಬರಹಗಾರ, ಉಪನ್ಯಾಸಕ. ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಎಂದೆವು ನಾನು ಮತ್ತು ನನ್ನ ಫ್ರೆಂಡ್. ನನ್ನ ಪರಿಚಯದ ಲಾಭ ಪಡೆದು ಮೆಲ್ಲನೆ ಜಾರಿಕೊಳ್ಳುವ ಪ್ರಯತ್ನ ಮಾಡಿದರು. ‘ನೀವು ಕರೆದುಕೊಂಡು ಹೋಗಿ. ಏನಾದ್ರೂ ಇದ್ದರೆ ನನಗೆ ಫೋನ್ ಮಾಡಿ!’. ಕೊನೆಗೆ ಗಾಯಾಳು ಯುವಕ ಬರಹಗಾರರ ಫೋನ್ ನಂಬರ್‍ ಪಡೆದುಕೊಂಡ. ಬೈಕ್ ಸ್ಟಾರ್ಟ್ ಮಾಡಿದ. ಆಸ್ಪತ್ರೆಗೆ ಬರಬೇಕೇ ಎಂಬ ನಮ್ಮ ಕೇಳಿಕೆಗೆ ತಿರಸ್ಕರಿಸಿ ಹೊರಟು ಹೋದ. ಉಪನ್ಯಾಸಕರೂ ‘ಕಾರಿ’ಗೆ ಬುದ್ಧಿ ಹೇಳಿದರು. ಸಿನಿಮಾದಿಂದ ಹೊರಗೆ ಬಂದ ನಮಗೆ ಹೀಗೊಂದು ದುನಿಯಾ ದರ್ಶನ!
ಚಿತ್ರಗಳು: www.nowrunning.com

3.6.07

ಎರಡು ಅಸಂಬದ್ಧ ಪ್ರಲಾಪಗಳು



ಪ್ರಲಾಪ ೧

ಬಾವಿಯೊಂದಿಗೆ
ಹಗ್ಗಕ್ಕೆ ಗಾಢ ಸ್ನೇಹ...
ಅದಕ್ಕೆ ಇರಬಹುದು
ಬಾವಿಗೆ ಹಾರುವವರನ್ನು
ಹಗ್ಗ
ಕುಣಿಕೆಗೆ ಕೊರಳೊಡ್ಡುವವರನ್ನು
ಬಾವಿ ತಡೆಯುವುದಿಲ್ಲ?!









ಪ್ರಲಾಪ ೨
ಸಂಜೆಯಾಗುತ್ತಲೇ
ಈ ಬೀಚಿನಲ್ಲಿ ನಡೆಯುವ
ವ್ಯವಹಾರ-ಅವ್ಯವಹಾರ
ನೋಡಲು ನಾಚಿಕೆಯಾಗಿ
ದಿಗಂತದಂಚಿಗೆ
ಸರಿಯುವ
ಈ ಸೂರ್ಯ
ಮತ್ತೆ
ಬೆಳಗ್ಗೆ ತಿರುಗಾ
ಬರುವುದೇತಕ್ಕೆ?

29.5.07

ಆಸರೆ

ಮುಂಗಾರು ಮಳೆಗೆ
ಗುಡುಗು ಬೊಬ್ಬಿರಿದಾಗ
ಸಿಡಿಲು ಕೋರೈಸಿದಾಗ
ಭೂಗರ್ಭದಲ್ಲೊಂದು
ಸಂಚಲನ...
ಒಣಗಿ ಬಿದ್ದಿದ್ದ
ಬೀಜಕ್ಕೆ ಜೀವಾಂಕುರ...
ಒಡೆದ ಕವಚ, ಮೆಲ್ಲನೆ
ಹೊರಕ್ಕಿಣುಕಿದ
ಪುಟ್ಟ ಎರಡೆಲೆ
ಇಡೀ ಪ್ರಪಂಚದ
ಅಚ್ಚರಿಯಷ್ಟನ್ನೂ
ಕಣ್ಣಲ್ಲಿ ತುಂಬಿಕೊಂಡಂತೆ


ಗಿಡಕ್ಕೆ ಗೊತ್ತಿಲ್ಲ
ತಾನು ಮರದ
ಅಡಿಯಲ್ಲಿರುವೆ ಎಂದು
ಅಲ್ಲಿ ಸಾಕಷ್ಟು ನೆರಳಿದೆ
ಆದರೂ ಗಿಡಕ್ಕೆ
ಉಸಿರುಗಟ್ಟಬಹುದು
ಹಸಿರೆಲೆಗಳ
ರುಚಿನೋಡಬಯಸುವ
ದವಡೆಗಳಿಂದ
ರಕ್ಷಿಸಿಕೊಂಡು ಬೆಳೆಯಬೇಕಿದೆ

ತನಗೆ ಆಸರೆ ನೀಡಿರುವ
ಮರ ಒಣಗಿದಾಗಲೇ
ಗಿಡಕ್ಕೆ ಸರಿಯಾಗಿ
ದೇಶ ನೋಡುವ ಭಾಗ್ಯ!

17.5.07

ಮಂಗಳೂರಿನ ಸೆಖೆ, ಬೆವರು ಮತ್ತು ಮದುವೆ!

ಅಬ್ಬಬ್ಬ ಎಂಥ ಸೆಕೆ....
ಮಂಗಳೂರಿನಲ್ಲಿ ಹಿಂದೆಂದೂ ಇರಲಿಲ್ಲ ಇಷ್ಟು ಬಿಸಿ.... ಮೈ ಎಲ್ಲ ಬೆವರಿ ಒದ್ದೆ.....
ಹೀಗೆ ಈಗ ಥರಾವರಿ ಮಾತುಗಳು ಈಗ ಕುಡ್ಲದೆಲ್ಲೆಡೆ. ಇದು ಮಂಗಳೂರಿಗಷ್ಟೇ ಅಲ್ಲ. ಕೂಲ್ ಸಿಟಿ, ಉದ್ಯಾನನಗರಿ ಎನಿಸಿರುವ ಬೆಂಗಳೂರಿನಲ್ಲಿ ಝಂಡಾ ಹೂಡಿರುವ ಸ್ನೇಹಿತರಿಗೆ ಕೇಳಿದರೆ ಅಲ್ಲೂ ಸೆಖೆಯಂತೆ. ಬಿಡಿ ಬೆಂಗಳೂರೇ ಬಿಸಿಯಾದರೆ ಇನ್ನು ಮಂಗಳೂರು ಬಿಸಿಯಾಗಿದೆ ಎಂದು ಬೊಂಬ್ಡಾ ಹೊಡೆದರೂ ಪ್ರಯೋಜನವಾಗದು. ಎಲ್ಲಾದರೂ ನಗರಗಳಿಗೆ ತಂಪು ಗಾಳಿ ಬೀಸುವ ಯೋಜನೆಯನ್ನು ನಮ್ಮ ವಿಜ್ಞಾನಿಗಳು ಕಂಡುಹಿಡಿದರೆ ಮಂತ್ರಿಗಳು ಅದನ್ನು ಬೆಂಗಳೂರಿನಲ್ಲೇ ಮೊದಲು ಅನುಷ್ಠಾನ ಮಾಡುತ್ತಾರೆ!
ಇದೆಲ್ಲಾ ತಲೆಹರಟೆಗಳೇನೇ ಇರಲಿ, ಮಂಗಳೂರಿನ ಬಿಸಿಲು ಇಲ್ಲಿನ ಜನರಿಗೆ ಒಂಥರಾ ಆಪ್ಯಾಯಮಾನ. ಇಲ್ಲಿ ಬೆಂಗಳೂರಿನಂತಲ್ಲ. ಹತ್ತು ಹೆಜ್ಜೆ ನಡೆದರೆ ಮೈತುಂಬಾ ಬೆವರಿನೊರತೆ ಧಾರಾಕಾರ(ಆದ್ರೆ ಬೆಂಗಳೂರಲ್ಲಿ ಬೆವರೋದೇ ಇಲ್ಲ, ಯಾಕೆ ಎನ್ನುವುದನ್ನು ಅಲ್ಲಿರುವ ಸಹೃದಯರು ವಿವರಿಸಿದರೆ ಒಳಿತು). ಮರಗಳೇ ಇಲ್ಲದ ಸುಡು ರಸ್ತೆಗಳಲ್ಲಿ ನಡೆಯುತ್ತಾ, ಪಕ್ಕದ ಪೆಟ್ಟಿ ಅಂಗಡಿಯಲ್ಲಿ ಸಿಗುವ ಕೆಂಬಣ್ಣದ ಪುನರ್ಪುಳಿ ಜ್ಯೂಸೋ, ಮರಗಳಿರುವ ಏಕೈಕ ರಸ್ತೆಯಾದ ಮಣ್ಣಗುಡ್ಡೆಯ ನೆಹರೂ ಅವೆನ್ಯೂದಲ್ಲಿ ಕಬ್ಬಿನ ರಸ ಹೀರೋದು ಬೇಸಿಗೆಯಲ್ಲಿ ತಾನೆ ಸಾಧ್ಯ.

ಮಂಗಳೂರಿನ ಸೆಖೆ ಎಷ್ಟೇ ಇರಲಿ, ಇಲ್ಲಿಗೆ ಅತ್ಯಧಿಕ ಪ್ರವಾಸಿಗರು ಬರೋದು ಬೇಸಿಗೆಯಲ್ಲೇ. ಪಣಂಬೂರು, ಸೋಮೇಶ್ವರ, ಸುರತ್ಕಲ್, ತಣ್ಣೀರುಬಾವಿ ಬೀಚುಗಳಲ್ಲಿ ಜನ ಗಿಚಿಗುಟ್ಟುವುದು ಇದೇ ಕಾರಣಕ್ಕೆ.
ಹೆಚ್ಚಿದ ಸಮಾರಂಭ, ಹೆಚ್ಚೆಚ್ಚು ಜನರ ಓಡಾಟ, ಇದರಿಂದಾಗಿ ವಹಿವಾಟೂ ಏರಿಕೆ ಕಾಣುತ್ತದೆ. ರೈಲು, ವಿಮಾನ ನಿಲ್ದಾಣಗಳಿಗೆ ಹೋದರೆ ಉದ್ದುದ್ದ ಕ್ಯೂ.
ಮಂಗಳೂರಿನ ಬೇಸಿಗೆಯ ಸುಖವನ್ನೊಮ್ಮೆ ಸವಿಯಬೇಕಾದರೆ ಮದುವೆಗಳು, ಗೃಹಪ್ರವೇಶಗಳಿಗೆ ಹೋಗಲೇಬೇಕು. ಅದ್ಯಾಕೋ ಗೊತ್ತಿಲ್ಲ, ಮದುವೆ ಮುಂಜಿ ಮತ್ತಿತರ ಡಜನ್‌ ಕಾರ್ಯಕ್ರಮಗಳಿಗೆ ಈ ಬೇಸಿಗೆಯಲ್ಲಿ ಮಾತ್ರ ಮುಹೂರ್ತ ಇರೋದಂತೆ. ಈ ಮುಹೂರ್ತಗಳ ದೆಸೆಯಿಂದ ಜನಕ್ಕಂತೂ ಬಹಳ ಫಜೀತಿ. ಮೊನ್ನೆ ಗೆಳೆಯರಾದ ರಾಮಕೃಷ್ಣ ಒಂದು ಗೃಹಪ್ರವೇಶಕ್ಕೆ ಬಹಳ ತಡವಾಗಿ ಬಂದರು. ಯಾಕೆ ತಡ ಕೇಳಿದೆ. ಅಂದು ಅವರಿಗೆ ಎರಡು ಮದುವೆಗಳಿಗೆ ಹೋಗುವುದಿತ್ತು. ಅವೆರಡನ್ನು ಮುಗಿಸಿ ಬಂದಿದ್ದರಂತೆ!

ಇರಲಿ, ಇಂತಿಪ್ಪ ಈ ಬೇಸಿಗೆ ಸಮಾರಂಭಗಳಿಗೆ ಕರೆಕ್ಟಾಗಿ ಗಂಟೆ ಢಣ್ ಎಂದು ೧೨ ಬಾರಿಸಿದಕೂಡಲೇ ಎಲ್ಲೆಲ್ಲಿಂದಲೋ ಜನ ಆಗಮಿಸತೊಡಗುತ್ತಾರೆ. ಮದುವೆ ಹಾಲ್‌ಗಳು ಒಮ್ಮೆಲೇ ಹೌಸ್‌ಫುಲ್. ಬರುತ್ತಿದವರಿಗೆ ತಂಪಾಗಿ ಕಲ್ಲಂಗಡಿ ಜ್ಯೂಸ್ ಅಥವಾ ಹುಳಿ ದ್ರಾಕ್ಷಿ ಜ್ಯೂಸ್ ರೆಡಿಯಾಗಿರುತ್ತದೆ. ಹೊಚ್ಚಹೊಸ ಸೀರೆ ಉಟ್ಟು ಪೇಪರ್‌ನ್ನು ಬೀಸುತ್ತಾ ದಣಿವಾರಿಸಿಕೊಳ್ಳುವ ಮಹಿಳೆಯರೂ, ಬಿಳೀ ಬಣ್ಣದ ಅಂಗಿ, ಪಂಚೆ ತೊಟ್ಟು ಸುರಿವ ಬೆವರನ್ನು ಆಗಾಗ್ಗೆ ಒರೆಸುತ್ತಿರುವ ಮಧ್ಯವಯಸ್ಕರು, ಒದ್ದೆಯಾಗಿ ಮೈಗಂಟಿಕೊಂಡ ಶೇರ್ವಾನಿ ತೊಟ್ಟು ಹಾಲ್ ತುಂಬೆಲ್ಲಾ ಮೊಬೈಲ್‌ನಲ್ಲಿ ಫೋಟೋ ತೆಗೆಯುತ್ತಾ ಓಡಾಡುವ ಯುವಕರು....ಇದೆಲ್ಲಾ ಬೇಸಿಗೆ ಮದುವೆಯ ದೃಶ್ಯಗಳು.
ಮದುವೆ ಎಂದರೆ ಊಟ. ಹಾಗೆಂದು ಊಟಕ್ಕೆ ಬಂದೆವೋ ಗತಿ. ಕೆಲವು ಸಭಾಂಗಣದಲ್ಲಿ ಸರಿಯಾಗಿ ಗಾಳಿಯಾಡಲು ವ್ಯವಸ್ಥೆ ಇರೋದಿಲ್ಲ. ಅಂಥ ಕಡೆ ಊಟ ಅರ್ಧ ಆಗೋವಾಗಲೆ ಮೈಯಲ್ಲಿ ಜಲಲ..ಜಲಲ ಜಲಧಾರೆ. ಊಟ ಮುಗಿಸೋದು ದೊಡ್ಡ ಸಾಹಸವೇ.
ಇದೆಲ್ಲಾ ನೋಡಿರುವ ನಾನಂತೂ ನಿರ್ಧಾರ ಮಾಡಿದ್ದೇನೆ. ಮದುವೆ ಏನಿದ್ದರೂ ಮಳೆಗಾಲ ಯಾ ಚಳಿಗಾಲದಲ್ಲೇ ಆಗ್ಬೇಕು ಅಂತ!

13.5.07

ಅಮ್ಮನೆಂಬ ವಿಸ್ಮಯ

ಮನತುಂಬ ಮ್ಲಾನತೆ
ತಲೆತುಂಬಿ ಒಡೆದು
ಹೋಗುವಷ್ಟು ಬರಸಿಡಿಲು

ಆದರೂ..
ತಂದೀತು ಒಂದಿಷ್ಷು
ಸಮಾಧಾನ ಅಮ್ಮನ ಮಡಿಲು

ಬದುಕಿನ ಉದ್ದಕ್ಕೂ
ಓಡುತ್ತಲೇ ಇರುವಾಗ
ಎಲ್ಲೋ ಎಡವಿ ಕೈಕಾಲು
ತರಚಿಕೊಂಡರೂ
ಥಟ್ಟನೇ ನುಗ್ಗಿ
'ಏನ್ ಮಾಡ್ಕೊಂಡ್ಯೋ'
ಎಂಬ ಪ್ರೀತಿ-ಸಿಟ್ಟಿನ
ಮುಲಾಮು ಹಚ್ಚುವುದು
ಆಕೆಗೆ ಹವ್ಯಾಸ!

ನೋವಲ್ಲಿ ಮಾತಾಗಿ
ಖುಷಿಯಲ್ಲಿ ಮೌನವಾಗಿ
ಬದುಕಿಡೀ ಒಗಟಾಗಿ
ಒಮ್ಮೊಮ್ಮೆ ಒಗರಾಗಿ
ಮಕ್ಕಳ ನಗುವಿಗೇ ಖುಷಿಯಾಗಿ
ಇರುವಾಕೆ....
ಯಾಕೆ ಹೀಗೆ? ಈಕೆ
ಎನ್ನುವುದೇ ಪ್ರಶ್ನೆ.

ಮಕ್ಕಳಿಗಾಗಿ ಏನನ್ನಾದರೂ
ಮಾಡುವೆ ಎಂಬ ಛಲ
ಅದಮ್ಯ ಚೇತನದ ಖಣಿ
ಆ ಅಪೂರ್ವ ಸಾಮರ್ಥ್ಯ
ಬಂತು ಎಲ್ಲಿಂದ!

(ಮಕ್ಕಳಿಗಾಗಿ ಸರ್ವಸ್ವವನ್ನೂ ಧಾರೆಯೆರೆವ ‘ವಿಶ್ವದ ವಿಸ್ಮಯ’ ಎನಿಸಿದ ಅಮ್ಮನಿಗಾಗಿ ಈ ಸಾಲುಗಳು)

Related Posts Plugin for WordPress, Blogger...