31.12.08

ಹೊಸವರ್ಷ ಎಂಬ ಒಗಟು!

ಗೋಡೆಗೆ ಹೊಸ ಕ್ಯಾಲೆಂಡರ್‍
ಸ್ವಾಗತಿಸುವ ಹುರುಪು
ಪೆನ್ನಿಗೆ ಹೊಸ ದಿನಚರಿ ಪುಸ್ತಕದಲ್ಲಿ
ಬರೆಯುವ ಆತುರ...
ಎಲ್ಲೆಡೆ ಹೊಸತನದ ಚಿಹ್ನೆಗಳು
ಕಾಣಿಸುತ್ತಿವೆ
ಮನಸು ಮಾತ್ರ ಯಾಕೆ
ನಿನ್ನ ಹಿಂದೆ ಹಿಂದೆ???

**********
ಟೇಬಲಲ್ಲಿ ಅಡ್ಡಾದ ಬಾಟಲಿ
ಕಣ್ಣತುಂಬ ಝಗಮಗ ಲೈಟು
ನಶೆಯೇರಿಸುವ ನರ್ತಕಿ ಕೈಗೆ
ಗರಿಗರಿ ನೋಟು
ತಳ್ಳಿ
ಅಪರಾತ್ರಿಯಲ್ಲಿ ಕಾರಿಂದ
ಇಳಿದು ತೂರಾಡುತ್ತಾ
ಮೋಡದ ಮರೆಯಲ್ಲಿ
ಅವಿತ ಕಳ್ಳ ಚಂದಿರನಿಗೆ
ಹೇಳುತ್ತೇನೆ
ಹ್ಯಾಪಿ ನ್ಯೂ ಇಯರ್‍!!!

***********
ಮನದ ಭಿತ್ತಿಗಳಲ್ಲಿ
ಅಸಂಖ್ಯ ನೆನಪಿನ ಬಲೆ
ಕಟ್ಟಿಕೊಂಡಿವೆ...
ಅಧ್ಯಾಯಗಳು ಹಲವಿದ್ದರೂ
ಡೈರಿಯ ಪುಟಗಳು
ಖಾಲಿ ಉಳಿದಿವೆ
ವರ್ಷದುದ್ದಕ್ಕೂ
ನಿನ್ನೊಂದಿಗಿದ್ದರೂ
ನಿನ್ನ ಹೆಗಲಿಗೆ
ತಲೆಯಾನಿಸಿ ಕಿವಿಯಲ್ಲಿ
ಉಸುರಬೇಕಾದ
ಯೋಚನೆಗಳೆಲ್ಲ
ಕಳೆದ ವರ್ಷದ ಹೆದ್ದೆರೆಯೊಂದಿಗೆ
ಕೊಚ್ಚಿಕೊಂಡು ಹೋಗುತ್ತಿವೆ

*********

ಹೊಸವರ್ಷ ಎಂದರೆ
ಎವರೆಸ್ಟಿನಂತೆ ಎತ್ತರವಾಗುವ
ಅನೂಹ್ಯತೆಯೇ?
ಸಮುದ್ರದ ಆಚೆ ಅಲ್ಲೇನಿದೆ
ಎಂಬಂತಹ ಕುತೂಹಲವೇ?
ಓದಿದರೂ ಅರ್ಥವಾಗದೆ
ಕಾಡುವ ಒಗಟೇ?

20.12.08

ಒಲವ ಹೂಬಾಣ

ಹೃದಯಕೆ ನಾಟಿದೆ
ಒಲವಿನ ಹೂಬಾಣ
ಮನದ ಕೋಣೆಯಲ್ಲಿ
ಅದೇನೋ ತಲ್ಲಣ

ಭಾವನೆಗಳ ಪೂರಕೆ
ಎದೆಯಿಡೀ ತತ್ತರ
ಕಂಗಳಲಿ ಇಣುಕೋ ಪ್ರಶ್ನೆಗೆ
ಬೇಕು ನಿನ್ನ ಉತ್ತರ
ಅದೇನೋ ಹೇಳಲಾರದ
ಅವ್ಯಕ್ತ ವೇದನೆ
ಹೇಳಲೇ ಬೇಕಿಲ್ಲ ಇರಲಿ
ಹಾಗೆ ಸುಮ್ಮನೆ !

ಪ್ರತಿ ಮಾತಿಗೂ ಹುಟ್ಟುತಾವ
ಅರ್ಥ ನೂರಾರು
ಮನದ ಪುಟಪುಟಗಳಲ್ಲು
ಕವನಗಳ ಬೇರು

ಬಿಸಿಲೆ ಸವಿಯು, ಮಳೆಯ ಖುಷಿಯು
ಮಾಗಿ ಚಳಿಯು ಚುಂಬಕ
ಮಾವಿನೆಲೆಯು ಹುಲ್ಲಗರಿಯು
ತಾನೆ ಅದೆಷ್ಟು ಮೋಹಕ

ಪ್ರೀತಿ ಹುಟ್ಟಿ, ಸ್ನೇಹ ಬೆಳೆಯಲ್
ಎನಿತು ಸೊಗಸು ಜೀವನ
ಮುನಿಸಿ ರಮಿಸೋ
ಆಟದಲ್ಲಿ ಪುಟಿಯುತಿದೆ ಹೃನ್ಮನ!

9.12.08

ಹಾಗೇ ಬಿಕ್ಕಿದ್ದು....

ಒಮ್ಮೆ ಮಾತನಾಡಿಬಿಡು
ದಿನಾ ಮೊಬೈಲ್
ಫೋನ್ ಸ್ಪೀಕರಿಗೇ
ಕಣ್ಣೀರಿನ ಅಭಿಷೇಕದಿಂದ
ಕಲೆಯಾಗಿದೆ
ಕಿವಿಯನ್ನೇ ಮೊಗವಾಗಿಸಿ
ಅತ್ತುಕರೆದಾಗಿದೆ
ಹಾಗೇ ಎದ್ದು ಬಂದು ಬಿಡು
ಬೆಳದಿಂಗಳ ರಾತ್ರಿಯಲ್ಲಿ
ಕಣ್ಣಿಗೆ ಕಣ್ಣು ನೆಡು...

ಕಕ್ಕುಲತೆ, ಒಲವು
ಕಣ್ಣಲ್ಲಿ ಅದೆಂತಹ ಕಾವು
ಹೇಳುವ ಮಾತಿಗೆ
ಇಷ್ಟೇ ಜಾಡು
ಅಳತೆಯಿಲ್ಲದಷ್ಟು ಎದೆಯಲ್ಲಿರಿಸಿ
ಭ್ರಮಣ ಸಾಕುಮಾಡಿನ್ನು
ನಿಜಪಯಣ
ಬಂದುಬಿಡು ಹಾಗೇ ಕಣ್ಣಲ್ಲೊಮ್ಮೆ ಹೀರಿಬಿಡು!

2.12.08

ಹೆಸರಿಲ್ಲದೆ ಸರಿದು ಹೋಗುವ ಅಣ್ಣಂದಿರಿಗೆ....

ಅವರು ಕೃಷ್ಣ ಪರಮಾತ್ಮನ ಕೈಲಿರುವ ಸುದರ್ಶನ ಚಕ್ರದಂತೆ!
ಯಾವುದೇ ಗೌಜಿ ಗದ್ದಲಗಳಿಲ್ಲ, ಗೆದ್ದ ಹುರುಪಿನ ಅತಿಯಾದ ಪ್ರದರ್ಶನವಾಗಲೀ ಸಹೋದ್ಯೋಗಿಯನ್ನು ಕಳೆದುಕೊಂಡ ದುಃಖದಲ್ಲಿ ಕಳೆದುಹೋಗುವುದಾಗಲೀ ಇಲ್ಲ..ಕೆಲಸ ಮುಗಿದಾಕ್ಷಣ ಮರುಮಾತಿಲ್ಲದೆ ತಮ್ಮ ನೆಲೆಗೆ ಮರಳಿಬಿಡುತ್ತಾರೆ....
ಅವರು ಭಾರತೀಯ ಕಮ್ಯಾಂಡೋಗಳು....


ಮುಂಬೈಗೆ ಬಡಿದ ಭಯೋತ್ಪಾದನೆ ಕರಿನೆರಳು ತೊಲಗಿಸಲು ಬಂದಿಳಿದ ಈ ಕಪ್ಪುಸಮವಸ್ತ್ರಧಾರಿಗಳನ್ನು ಭಾರತೀಯರು ಎಂದಿಗೂ ಮರೆಯಲಾರರು. ಮುಖ ಯಾವಾಗಲೂ ಮುಚ್ಚಿಕೊಂಡು ತಮ್ಮ ಪತ್ನಿಯರಿಗೂ ತಾವು ಕಮ್ಯಾಂಡೊ ಎಂಬ ಗುಟ್ಟು ಬಿಡದ ಭಾರತೀಯ ನೌಕಾಸೇನೆಯ ಮೆರೈನ್ ಕಮ್ಯಾಂಡೊ(ಮಾರ್ಕೊಸ್) ಮತ್ತು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ಸ್(ಎನ್‌ಎಸ್‌ಜಿ) ಈ ಎರಡು ಪ್ರತ್ಯೇಕ ಕಮ್ಯಾಂಡೊ ಘಟಕಗಳು ಮುಂಬೈನಲ್ಲಿ ಉಗ್ರರ ಸದೆಬಡಿದಿದ್ದವು.

೯ ಮಂದಿ ಮಂದಿ ಉಗ್ರರನ್ನು ಕೊಲ್ಲಲು, ಒಬ್ಬನನ್ನು ಸೆರೆಹಿಡಿಯಲು ಕಮ್ಯಾಂಡೊಗಳಿಗೂ ೩೬ ಗಂಟೆ ಬೇಕಾಯ್ತೇ, ಅವರ ಕಾರ್ಯಾಚರಣೆ ಸರಿಇಲ್ಲ ಎಂದೆಲ್ಲ ಈಗ ಅಪಸ್ವರಗಳು ಕೇಳಿಬರುತ್ತಿವೆ. ಆದರೆ ಎಂದಿಗೂ ತಮ್ಮ ಜೀವ ನೆಚ್ಚಿಕೊಂಡು ಕುಳಿತುಕೊಳ್ಳದೆ ವಿಶ್ರಾಂತಿಯಿಲ್ಲದೆ ಅವಿರತ ನಿರಂತರ ಕಾರ್ಯಾಚರಣೆ ನಡೆಸಿದ್ದನ್ನು ನಾವು ಮರೆಯುವುದು ಹೇಗೆ?


ಹಾಗೆ ನೋಡಿದರೆ ಭಾರತೀಯ ಕಮ್ಯಾಂಡೊಗಳಿಗೆ ವಿಶ್ವದಲ್ಲೇ ನಾಲ್ಕನೇ ಸ್ಥಾನ. ನೆನಪಿಡಿ ನಮಗಿಂತ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ರಾಷ್ಟ್ರಗಳು ಈ ವಿಚಾರದಲ್ಲಿ ಹಿಂದಿವೆ. ಬೆಲ್ಜಿಯಂ, ಅಮೆರಿಕಾ, ಇಸ್ರೇಲ್ ನಮಗಿಂತ ಮೇಲಿನ ಸ್ಥಾನಗಳಲ್ಲಿವೆ.
ಮೊನ್ನೆ ಉಗ್ರರ ಹುಟ್ಟಡಗಿಸಿ ಬಂದು ತಣ್ಣಗೆ ಮುಗುಳ್ನಗೆ ಬೀರುತ್ತಾ ತಮ್ಮ ಬಸ್ಸೇರಿ ಕುಳಿತಿದ್ದ ಎನ್‌ಎಸ್‌ಜಿ ಕಮ್ಯಾಂಡೊ ಒಬ್ಬರನ್ನು ಟೈಂಸ್ ನೌ ಚಾನೆಲ್ ಪ್ರತಿನಿಧಿ ಸಂದರ್ಶಿಸಿದ..ಇಂತಹ ಕಠಿಣ ಪರಿಸ್ಥಿತಿಯಲ್ಲು ಅದು ಹೇಗೆ ಈ ರೀತಿ ನಗುತ್ತೀರಿ?
ಯೋಧನ ಉತ್ತರವೂ ಸರಳವಾಗಿತ್ತು..ಸದಾ ನಗುತ್ತಲೇ ಇರಬೇಕು, ನಗುವೇ ನಮ್ಮ ಬಲ!
ಇನ್ನೊಬ್ಬ ಕಮ್ಯಾಂಡೊ ಹೇಳಿದ್ದು-ನಾವೆಲ್ಲ ಸಾವಿಗೆ ಸದಾ ಸಿದ್ಧರಾದವರು, ನಿಮ್ಮೆಲ್ಲರ ರಕ್ಷಣೆಗಾಗಿಯೇ ನಾವಿರೋದು, ಹೆದರಬೇಡಿ!
ಈ ತ್ಯಾಗ, ಬಲಿದಾನದ ಮನೋಭಾವದಿಂದಲೇ ತಾನೇ ಭಾರತೀಯ ಸೇನಾಪಡೆ ಯಶಸ್ವಿಯಾಗಿರುವುದು. ಅಂತಹ ಸೇನಾಪಡೆಯಲ್ಲಿನ ಮುತ್ತು ರತ್ನ ವಪ್ರ ವೈಢೂರ್ಯಗಳನ್ನೇ ಆರಿಸಿ ಕಠಿಣ ಪರಿಸ್ಥಿತಿಯಲ್ಲಿ ತರಬೇತಿ ನೀಡಿದಾಗ ಹೊರಹೊಮ್ಮುವವರೇ ಎನ್ಎಸ್‌ಜಿ ಕಮ್ಯಾಂಡೊಗಳು. ಇವರಿಗೆ ಇಸ್ರೇಲ್‌ ದೇಶದಲ್ಲೂ ತರಬೇತಿ ನೀಡಲಾಗುತ್ತದೆ.
೧೯೮೮ರಲ್ಲಿ ಅಮೃತಸರದ ಆಪರೇಶನ್ ಬ್ಲಾಕ್ ಥಂಡರ್‍-೨, ೧೯೮೮ರಲ್ಲಿ ಜಮ್ಮುಕಾಶ್ಮೀರದಲ್ಲಿ ಉಗ್ರರನ್ನು ಬಗ್ಗುಬಡಿಯುವಲ್ಲಿ, ಅಪಹೃತ ಬೋಯಿಂಗ್೭೩೭ ವಿಮಾನ ಬಿಡುಗಡೆ ಹೀಗೆ ಇವರ ಸಾಧನೆಗಳ ಪಟ್ಟಿ ಬೆಳೆದಿದೆ.
ಇನ್ನು ನೌಕಾಪಡೆಯ ಮಾರ್ಕೊಸ್‌ಗಳ ಸಾಧನೆಯೂ ಅಪರೂಪದ್ದು. ಎಲ್‌ಟಿಟಿಇಗಳ ಜತೆ ಕದನದಲ್ಲಿ ೧೯೮೭ರಲ್ಲಿ ಕೇವಲ ೧೮ ಮಂದಿ ಕಮ್ಯಾಂಡೊಗಳು ಎಲ್‌ಟಿಟಿಇಗಳ ಕೈನಿಂದ ಟ್ರಂಕೋಮಲಿ, ಜಾಫ್ನ ಬಂದರು ಬಿಡುಗಡೆ ಮಾಡುವಲ್ಲಿ ಶ್ರೀಲಂಕಕ್ಕೆ ನೆರವಾದರು.
ವಿಶೇಷ ಸಂದರ್ಭಗಳಲ್ಲಿ ಎನ್‌ಎಸ್‌ಜಿ, ಮಾರ್ಕೊಸ್ ಮತ್ತು ಜಮ್ಮು-ಕಾಶ್ಮೀರ ಉಗ್ರರ ವಿರುದ್ಧ ಸೆಣಸುವ ರಾಷ್ಟ್ರೀಯ ರೈಫಲ್ಸ್‌ನ ಆಯ್ದ ಕಮ್ಯಾಂಡೊಗಳನ್ನು ಸೇರಿಸಿ ಪ್ಯಾರಾಕಮ್ಯಾಂಡೊ ತಂಡವನ್ನೂ ನಿಯೋಜಿಸಲಾಗುತ್ತದೆ.
ಭಾರತವಾಸಿಗಳ ಪ್ರಾಣ, ಮಾನ, ಭಾರತದ ಮಣ್ಣಿನ ರಕ್ಷಣೆಗೆ ಸದಾ ಕಂಕಣ ಬದ್ಧರಾದ ಈ ಹೆಸರಿಲ್ಲದ ಕಪ್ಪುವಸ್ತ್ರಧಾರಿಗಳ ಹೆಸರು ತಿಳಿಯುವುದು ವೀರಮರಣವನ್ನಪ್ಪಿದಾಗಲೇ!
ನಮ್ಮೆಲ್ಲರ ಸಲ್ಯೂಟ್ ಜತೆಗೆ ಆತ್ಮೀಯ ಶುಭಹಾರೈಕೆ ಎಂದಿಗೂ ಅವರ ಜತೆ ಇರಲಿ...

ಕೊನೆಮಾತು: ಇಸ್ರೇಲ್ ಮಾದರಿಯಲ್ಲಿ ಶಾಲೆಯಿಂದಲೇ ಎಲ್ಲರಿಗೂ ಪ್ರಾಥಮಿಕ ಸೈನಿಕ ತರಬೇತಿ ನೀಡಿದರೆ ನಮ್ಮೆಲ್ಲರಲ್ಲೂ ಸೈನಿಕಗುಣ ಸ್ವಲ್ಪವಾದರೂ ಇರಲಾರದೇ? ಅಂತಹ ಸಂದರ್ಭಗಳಲ್ಲಿ ಮೊನ್ನೆ ಮುಂಬೈನಲ್ಲಿ ನುಗ್ಗಿದಂತೆ ಹೊರದೇಶದ ಕ್ರಿಮಿಗಳಾಗಲೀ ನಮ್ಮೊಳಗೇ ಇರುವ ಹೆಗ್ಗಣಳಾಗಲೀ ನಮ್ಮನ್ನು ಕಾಡುವುದು ಸ್ವಲ್ಪವಾದರೂ ಕಷ್ಟವಾಗದೇ?
ಎಟಿಎಸ್‌ನ ಹೇಮಂತ್ ಕರ್ಕರೆ, ವಿಜಯ್ ಸಾಲಸ್ಕರ್‍, ಅಶೋಕ್ ಕಾಮ್ಟೆ, ಮತ್ತು ಮೇಜರ್‍ ಸಂದೀಪ್ ಉಣ್ಣಿಕೃಷ್ಣನ್‌ಗೆ ಶ್ರದ್ಧಾಂಜಲಿ
ಜೈಹಿಂದ್

18.11.08

ಅರಳಿ ನಿಂತ ತಾವರೆಗೆ.....

ಕೆಂದಾವರೆಗೆ
ಕೆಸರುಕೆರೆಯ
ಸಹವಾಸವೇಕೆ?
ಪ್ರೇಮವೇ
ಪ್ರೀತಿಯೇ
ಗೆಳೆತನವೇ?
ಅಥವಾ...
ಹೆಣ್ಣು
ತವರಿನಲ್ಲಿ ಬಾಲ್ಯ,
ತಾರುಣ್ಯ ಕಳೆದು
ಗಂಡನ ಮನೆಗೆ ಹೋಗುವ
ಹಾಗೆ
ದೇವರ ಪಾದಕ್ಕೋ
ಚೆಂದದ ಯುವತಿಯರ
ಮುಡಿಗೋ ಹೋಗುವ ಈ
ತಾವರೆಗೆ
ಕೆರೆಯೊಂದು
ತಾಯಿಮನೆಯೇ?!
ಸುವಾಸನೆಬೀರುವ
ಕಮಲಕ್ಕೆ ಕೆಸರಕೆರೆಯಲ್ಲಿರಲು
ತುಸುವೂ ಮುಜುಗರವಿಲ್ಲ
ಮನುಜರೊಳಗೆ
ಮಾತ್ರ ಈ ಭೇದವೇಕೆ
ಸಂಬಂಧಗಳಿಗೊಂದು
ಹೆಸರು ಯಾಕೆ?

ಕಮಲದಳ-೧

ನನ್ನೆದೆಯ ಕೊಳದಲ್ಲಿ
ಇದುವರೆಗೆ ಬೀಜವಾಗಿಯೇ
ಉಳಿದಿದ್ದ ತಾವರೆಯ
ಗಿಡವೊಂದು ಅರಳಿ
ನಿಂತು ನಗತೊಡಗಿದೆ
ಕಮಲದಳ-೨

ಮುಂಜಾನೆಯ ಮಂಜಿಗೆ
ಪರಿಮಳವೆಲ್ಲ
ತೊಳೆದುಹೋಗಿ
ಮುಖ ಕೆಂಪಾಗಿಸಿ
ಕುಳಿತಿದ್ದ ಕೆಂದಾವರೆಯ
ನೋಡಿದ
ಕೊಳದ ಕಪ್ಪೆ ನಸುನಕ್ಕಿತು!

16.11.08

ಮರಳುವುದೆಲ್ಲಿಗೆ?

ಇಂಥದೇ ಅದೊಂದು ದಿನ ಪಿರಿಪಿರಿ ಮಳೆಗೇ ಈ ಊರು ಸಾಕು ಎಂದು ನಿರ್ಧರಿಸಿದ್ದ ಗೋಪಾಲ ಬೆಳಗ್ಗೆ ಮೊದಲ ಬಸ್ಸೇರಿ ಹೊರಟು ಬಿಟ್ಟದ್ದು.....

ಈ ಊರಿನಲ್ಲಿ ಏನೇ ಮಾಡಿದರೂ ಪ್ರಯೋಜನವಿಲ್ಲ. ಭತ್ತಕ್ಕೆ ರೇಟಿಲ್ಲ, ಅಡಕೆಗೆ ರೇಟು ಏರುವುದಕ್ಕಿಂತ ಬೀಳೋದೇ ಹೆಚ್ಚು, ಒಳ್ಳೆ ಮೆಣಸು ಉದ್ಧಾರವಾಗಲು ರೋಗ ಬಿಡುವುದಿಲ್ಲ, ಬೇಸಗೆ ಬಂದ ನಂತರ ನೀರಿಗೂ ತತ್ವಾರ...ಹೀಗೆ ಎಲ್ಲ ಕೃಷಿಕರಂತೆ ಗೋಪಾಲನೂ ತತ್ತರಿಸಿದವನೇ. ಅದೇ ಕಾರಣಕ್ಕೆ ಊರು ಬಿಟ್ಟ ಸರಿಯಾಗಿ ಹತ್ತುವರ್ಷದ ನಂತರ ಮತ್ತೆ ಊರಿಗೆ ಅದೇ ಪಿರಿಪಿರಿ ಮಳೆಗೆ ಬಂದಿಳಿದಿದ್ದಾನೆ.

ಅಂದು.....

ಕೃಷಿವಿಜ್ಞಾನದಲ್ಲಿ ಎಂಎಸ್ಸಿ ಮಾಡಿ ರೈತನೇ ನನ್ನ ಆದರ್ಶ ಎಂದುಕೊಂಡು ವಿಶ್ವವಿದ್ಯಾಲಯದಿಂದ ಮತ್ತೆ ಮನೆಗೆ ಮರಳಿದ ಬೆರಳೆಣಿಕೆ ವೀರಾಧಿವೀರ ಯುವಕರಲ್ಲಿ ಗೋಪಾಲನೂ ಒಬ್ಬ. ಆತನ ಬ್ಯಾಚ್‌ನ ಉಳಿದವರೆಲ್ಲ ಉನ್ನತ ವ್ಯಾಸಂಗಕ್ಕೆಂದು ಫಾರಿನ್ನಿಗೋ, ಬೆಂಗಳೂರಿಗೋ ಹೀಗೆಲ್ಲೋ ಹೋದರೆ ಗೋಪಾಲ ಮಾತ್ರ ಮನೆಗೆ ಮರಳಿದ.
ಮನೆಯಲ್ಲಿ ತಂದೆ ಆರೋಗ್ಯ ಸರಿಯಿಲ್ಲದೆ ಮನೆ ಮೂಲೆಯಲ್ಲಿರಿಸಿದ್ದ ಹಾರೆ ಪಿಕಾಸಿ ಹೊರಬಂದವು. ಮನೆಯ ಕೊಟ್ಟಿಗೆಯಲ್ಲಿ ಊರಿನ ಗಿಡ್ಡ ತಳಿಯ ದನಗಳೊಂದಿಗೆ ಒಂದೆರಡು ಜೆರ್ಸಿಗಳು, ಕ್ರಾಸ್‌ಗಳೂ ಕಾಣಿಸಿಕೊಂಡು ಗೋಪಾಲನ ಊರಿನ ಕ್ಷೀರಕ್ರಾಂತಿಗೆ ತಮ್ಮದೂ ಕೊಡುಗೆ ಸಲ್ಲಿಸಿದವು. ಎಸ್ಸೆಸ್ಸೆಲ್ಸಿಯಲ್ಲಿ ಫೇಲಾಗಿ ಮನೆಯಲ್ಲಿ ಒಂಟಿಯಾಗಿದ್ದ ತಮ್ಮ ಮುಕುಂದನಿಗೂ ಅಣ್ಣನ ಹುರುಪು ನೋಡಿ ಚಿವುಟಿದಂತಾಯ್ತು.
ಅಣ್ಣ ತಮ್ಮ ಸೇರಿ ಗೇಯ್ದದ್ದೇ....ಮೊದಲ ಮೂರು ವರ್ಷದಲ್ಲಂತೂ ಯಶಸ್ಸೇ ಬಂತು...ಆದರೆ ಯಾವಾಗ ಭಾರತ ಗ್ಯಾಟಿಗೆ ಸಹಿ ಹಾಕಿತೋ ಇತ್ತ ಗೋಪಾಲನಿಗೂ ನಡುಕ ಶುರುವಾಯ್ತು. ಭತ್ತ ಅಡಕೆ, ಮೆಣಸು, ಬಾಳೆ ಎಲ್ಲದಕ್ಕೂ ದರ ಕುಸಿತ ಶುರುವಾಯ್ತು. ಸೊಸೈಟಿಗೆ ಅಡಕೆ ತೆಗೆದುಕೊಂಡು ಹೋಗಿ ಇಟ್ಟು ಬರುವುದೂ, ದಿನಗಟ್ಟಲೆ ರೇಟು ಏರಲು ಕಾಯುವುದೂ ಶುರುವಾಯ್ತು. ಎಷ್ಟಾದರೂ ಕೃಷಿವಿಜ್ಞಾನಿಯಲ್ಲವೇ ಗೋಪಾಲ, ಛಲ ಬಿಡಲಿಲ್ಲ. ಈ ಅಡಕೆ ಭತ್ತ ವಿಷಯ ಸಾಕು, ಫ್ಲೋರಿಕಲ್ಚರ್‍ ಮಾಡೋಣ ಎಂದು ತಮ್ಮನಿಗೆ ಹುರಿದುಂಬಿಸಿದ.

ಬ್ಯಾಂಕಿಂದ ಲೋನ್ ಮಾಡಿ ತೋಟದಾಚೆಗಿನ ಕೆರೆಯ ಮೇಲಿರುವ ಗುಡ್ಡ ಬುಲ್‌ಡೋಜರಲ್ಲಿ ಸಪಾಟಾಗಿಸಲಾಯ್ತು. ಅಲ್ಲೊಂದು ಗ್ರೀನ್‌ಹೌಸ್ ನಿರ್ಮಾಣವೂ ಆಯ್ತು. ಈ ಎಲ್ಲ ಹೊಸ ಬೆಳವಣಿಗೆಗಳನ್ನೂ ಗೋಪಾಲನ ಊರು ಅಚ್ಚರಿ, ಸಂಶಯ ಹಾಗೂ ವ್ಯಂಗ್ಯದಿಂದ ನೋಡಿತು.
ಇದೆಲ್ಲಾ ಮಾಡಿ ಈ ಪ್ರಾಣಿ ಉದ್ಧಾರವಾಗದು ಎಂದು ಊರಿನ ಹಿರಿಯರು ಆಡಿಕೊಂಡರು. ಹಾಗೆ ಊರಿನ ರಾಮಕೃಷ್ಣನ ಚಾ ಹೊಟೇಲಿನಲ್ಲಿ ಸಂಜೆ ಸಭೆ ಸೇರುವ ಊರ ಗಣ್ಯ ಮಧ್ಯವಯಸ್ಕರು ಗೋಪಾಲನ ಫ್ಲೋರಿಕಲ್ಚರಿನ ಸತ್ಯಾಸತ್ಯತೆಯನ್ನು ವಿಶ್ಲೇಷಿಸಿದರು. ಫ್ಲೋರಿಕಲ್ಚರು ಈ ಊರಿನ ಹವಾಗುಣಕ್ಕೆ ಒಗ್ಗದೆಂದೂ, ಇಲ್ಲಿನ ಗಿಡಗಲ್ಲಿ ಹೂವು ಅರಳುವುದು ಕಷ್ಟವೆಂದೂ, ಇದು ಕೇವಲ ಆರಂಭಶೂರತ್ವವಷ್ಟೇ ಎಂದೂ ತಮ್ಮ ಅನುಭವದ ಸಾರವನ್ನು ಹಂಚಿಕೊಂಡರು.
ಸಂಜೆ ದೂಮಣ್ಣನ ಗಡಂಗಿನಲ್ಲಿ ಗಂಗಸರ ಕುಡಿಯಲು ಬರುವವರಿಗೆ ಮಾತ್ರ ‘ಅವೆಂಚಿನವೋ ಕಲ್ಚರ್‌ಗೆ(ಅದೇನೋ ಕಲ್ಚರಂತೆ)’ ಎಂದು ಹೂವಿನ ಕೃಷಿಯೆನ್ನುವುದು ಒಂದು ದಿಗಿಲು ಮೂಡಿಸುವ ಬೆಳವಣಿಗೆಯಾಗಿತ್ತು.
ಹೀಗೆ ಊರಿನವರ ಪ್ರಲಾಪಗಳ ನಡುವೆಯೇ ಗೋಪಾಲನ ಹೂವಿನ ತೋಟದಲ್ಲಿ ಆರ್ಕಿಡ್‌ಗಳು, ಅಂತೂರಿಯಂ, ಗ್ಲಾಡಿಯೋಲಸ್‌ನಂತಹ ಗಿಡಗಳು ಸೊಂಪಾಗಿ ಬೆಳೆದವು. ಇನ್ನೇನು ಹೂ ಬಿಡಬೇಕು ಎಂಬಷ್ಟರಲ್ಲಿ ಭಾರೀ ಮಳೆ ಶುರುವಾಯ್ತು. ಅಕಾಲಿಕ ಮಳೆ, ಹವಾಮಾನ ವೈಪರೀತ್ಯವಾದ್ದರಿಂದಲೋ ಏನೋ ಗಿಡಗಳು ಹೂ ಬಿಡುವ ಮೊದಲೇ ಕೊಳೆಯಲು ಆರಂಭಿಸಿದವು.
'ಯಾನ್ ದುಂಬೇ ಪಣ್ತಿಜ್ಯ, ಇಂದು ಪೂರ ಯಾಪ ನಮ ಊರುಡು ನಡಪ್ಪೆರ'(ನಾನು ಮೊದಲೇ ಹೇಳಿದ್ದೆ ಇದೆಲ್ಲ ಯಾವಾಗ ನಡೆಯುವುದು) ಎನ್ನುವುದು ಊರವರೆಲ್ಲರ ಬಾಯಲ್ಲಿ ಕಾಮನ್ ಡಯಲಾಗ್ ಆಗಿ ಹೋಯ್ತು.

ಗೋಪಾಲನಿಗಂತೂ ಮನೆಯಲ್ಲಿ ತಂದೆಯ ಕೈನಲ್ಲೂ ಏನೇನೋ ಕೇಳಿಸಿಕೊಳ್ಳುವಂತಾಯ್ತು, ನಿನ್ನನ್ನು ಅಷ್ಟೆಲ್ಲಾ ಓದಿಸಿದ್ದು ಹೀಗೆ ಬರ್ಬಾದಾಗೋದಕ್ಕಲ್ಲ, ಇಲ್ಲಿ ಮತ್ಯಾಕೆ ಬಂದು ಹಾಳಾದೆ ಎಂದೆಲ್ಲ ತಂದೆ ತಾಯಿ ಇಬ್ಬರೂ ಸೇರಿ ಹಲುಬಿದಾಗ ಗೋಪಾಲನಿಗೆ ಕೆಡುಕೆನಿಸಿತು. ಏನಾದ್ರೂ ಮಾಡಿ ಸಾಲ ತೀರಿಸು, ನಾನೂ ಆದರೆ ಸಹಾಯ ಮಾಡುವೆ ಎಂದು ತಮ್ಮನಿಗೆ ಮಲಗುವಾಗ ರಾತ್ರಿ ಹೇಳಿದ್ದ, ಮನದಲ್ಲಿ ನಿರ್ಧಾರ ರೆಕ್ಕೆಗಟ್ಟಿತ್ತು.
ತಮ್ಮನಿಗೆ ಡೌಟು ಬಂದಂತೆಯೇ ಆಯಿತು. ಬೆಳಗ್ಗೆ ನೋಡುವಾಗ ಗೋಪಾಲ ಊರು ಬಿಟ್ಟಿದ್ದ. ಮೊದಲ ಬಸ್‌ನಲ್ಲಿ ಬ್ಯಾಗ್‌ ಹಿಡಿದು ಹೋಗಿದ್ದಾನೆ ಎಂಬುದನ್ನು ಕಂಡಕ್ಟರ್‍ ಊರಲ್ಲಿ ಟಾಂ ಟಾಂ ಮಾಡಿದ. ಸಾಲ ತೀರಿಸಲಾಗದೆ ಹೇಡಿಯಂತೆ ಓಡಿ ಹೋಗಿದ್ದಾನೆ ಎಂದೂ ಊರಿನವರೆಲ್ಲ ಪ್ರಚಾರ ಮಾಡಿದರು.

*******

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಸಂಶೋಧಕನಾಗಿ ಸೇರಿಕೊಂಡ ಗೋಪಾಲ. ಏಳು ವರ್ಷಗಳಲ್ಲಿ ಪಿಎಚ್‌ಡಿ ಪದವಿ ಗಳಿಸಿದ. ಮಣ್ಣಿನ ಫಲವತ್ತತೆ ಬಗ್ಗೆ ವಿಶೇಷ ಆಸಕ್ತಿಯಿತ್ತು ಆತನಿಗೆ. ಬೆಂಗಳೂರಿನ ಹೊರವಲಯದ ರೈತನೊಬ್ಬನ ಫಲವತ್ತಾದ ಗದ್ದೆಯನ್ನು ಪ್ರಾಯೋಗಿಕ ಅಧ್ಯಯನಕ್ಕೆ ಬಳಸುತ್ತಿದ್ದ. ಆತ ಹೋದಲ್ಲೆಲ್ಲ ಹಣೆಬರಹವೇ ಹೀಗೆ ಎಂಬಂತಾಗಿ ವಿಶೇಷ ಐಟಿ ವಲಯಕ್ಕಾಗಿ ಆತನ ಪ್ರಯೋಗದ ಗದ್ದೆಯೂ ಸೇರಿದಂತೆ ಸುತ್ತಲಿನ ನೂರಾರು ಹೆಕ್ಟೇರ್‍ ಭೂಮಿ ಸರ್ಕಾರದ ವಶವಾಯಿತು.
ಗೋಪಾಲ, ಇನ್ನು ನಮ್ಮ ಸಂಶೋಧನೆಯಿಂದ ಏನೂ ಆಗದು, ದಿನವೂ ಅಲ್ಲಲ್ಲಿ ಭೂಮಿ ಸ್ವಾಧೀನಗೊಳ್ಳುತ್ತಿದೆ ನೋಡು, ರೈತರೇ ಮಣ್ಣಾದರೆ ಇನ್ನು ನಮ್ಮ ರೀಸರ್ಚ್ ಯಾರಿಗಾಗಿ ? ಹೀಗೊಂದು ಮೂಲಭೂತ ಪ್ರಶ್ನೆಯನ್ನೇ ಹಾಕಿದರು ವಿಶ್ವವಿದ್ಯಾಲಯದ ಕುಲಪತಿಗಳು.
ಊರಿನ ವಿಚಾರಗಳು ಇನ್ನೂ ಗೋಪಾಲನ ಕಿವಿಗೆ ಬೀಳುತ್ತಲೇ ಇದ್ದವು, ಕಾರಣ ಚಡ್ಡಿ ದೋಸ್ತಿ ರಾಘವನಿಂದ. ತಾನು ಎಲ್ಲಿದ್ದೇನೆ ಎನ್ನುವುದನ್ನು ರಾಘವನಿಗೆ ಮಾತ್ರ ತಿಳಿಸಿದ್ದ ಗೋಪಾಲ. ಇದನ್ನು ರಹಸ್ಯವಾಗಿಯೇ ಇಡುವಂತೆ ಹೇಳಿದ್ದ. ಇಲ್ಲವಾದರೆ ತಾನು ಬೆಂಗಳೂರಿನಲ್ಲಿರುವ ವಿಷಯಕ್ಕೂ ಮಸಾಲೆ ಅರೆಯುತ್ತಾರೆ ಎನ್ನುವುದು ಆತನಿಗೆ ಗೊತ್ತು.
ಅದೊಂದು ದಿನ ಬೆಳಗ್ಗೆ ಕಾಫಿ ಕುಡಿಯುವಾಗಲೇ ರಾಘವನ ಫೋನ್. ಊರಿನಲ್ಲಿ ವಿಶೇಷ ಕೈಗಾರಿಕಾ ವಲಯಕ್ಕೆ ನೊಟೀಸ್ ಕೊಡುತ್ತಿದ್ದಾರೆ. ಈಗಾಗಲೇ ಭೂಮಿಗೆ ಹೆಚ್ಚು ಬೆಲೆ ಸಿಗಬೇಕು ಎಂದು ಹೋರಾಟ ಮಾಡಲು ಒಂದು ಸಂಘಟನೆ, ಸ್ವಾಧೀನ ಮಾಡಲೇ ಬಾರದು ಎಂಬ ಹೋರಾಟಕ್ಕೆ ಇನ್ನೊಂದು ಸಂಘಟನೆ ಹುಟ್ಟಿಕೊಂಡಿವೆ ಎನ್ನುವುದು ಆತನ ಫೋನ್‌ನ ಸಾರ.

********

ಫೋನ್‌ ಕರೆ ಬಂದ ಮರುದಿನ ರಿಜಿಸ್ಟ್ರಾರ್‌ಗೆ ತನ್ನ ರಾಜಿನಾಮೆ ಪತ್ರ ಕೊಟ್ಟು, ಕುಲಪತಿಗಳವರಿಗೊಂದು ಪ್ರಣಾಮ ಮಾಡಿ, ಇನ್ನು ಈ ದೇಶಕ್ಕೆ, ನನ್ನಂತಹ ಕೃಷಿ ವಿಜ್ಞಾನಿಯ ಅವಶ್ಯಕತೆ ಬರುವುದಿಲ್ಲ, ಖಜಾನೆಗೆ ಸಖತ್ ಉಳಿತಾಯ ಎಂದು ದೇಶಾವರಿ ನಗೆಯೊಂದು ಬೀರಿ ಹೊರಟುಬಂದ.
ಕ್ಯಾಂಪಸ್‌ನ ಪ್ರಯೋಗದ ಗದ್ದೆಗಳಲ್ಲಿನ ಹೊಸ ಹೊಸ ತಳಿಯ ಭತ್ತಗಳು, ಧಾನ್ಯಗಳ ಪೈರು ಪೇಲವವಾಗಿ ತೊನೆಯುತ್ತಿದ್ದವು

*********

ಹಾಗೆ ಹೊರಟು ಬಂದ ಗೋಪಾಲನೀಗ ಊರಿನ ಸೇತುವೆಯಲ್ಲಿ ನಿಂತಿದ್ದಾನೆ. ಕೆಳಗೆ ಹೊಳೆಯಲ್ಲಿ ಹರಿಯುವ ಕೆನ್ನೀರು ಭೋರ್ಗರೆಯುತ್ತಿದೆ. ಮನದಲ್ಲಿ ನೂರೆಂಟು ಭಾವ. ಮತ್ತೆ ಕೃಷಿಯಲ್ಲಿ ತೊಡಗುವುದೋ, ವಿಶೇಷ ಕೈಗಾರಿಕಾ ವಲಯಕ್ಕೆ ಕೃಷಿಭೂಮಿ ಸ್ವಾಧೀನಕ್ಕೆ ವಿರುದ್ಧದ ಸಮಿತಿಯಲ್ಲಿ ಹೋರಾಟಗಾರನಾಗುವುದೋ...ಮತ್ತೆ ಮಂಗಳೂರಿನಲ್ಲಿ ಏನಾದರೂ ಕೆಲಸ ಹಿಡಿಯುವುದೋ, ಈ ಊರಿನಲ್ಲಿ ನಿಂತರೇನು ಮಾಡಬಹುದು?
ಹೀಗೆ ಸೇತುವೆ ಮಧ್ಯೆ ಉದ್ಭವಿಸಿದ ಪ್ರಶ್ನೆಗಳ ಪ್ರವಾಹದಲ್ಲಿ ಗೋಪಾಲ ಕಳೆದುಹೋದ...

11.11.08

ಚಂದಿರನೊಂದಿಗೆ ಒಂದು ರಾತ್ರಿ....



ಧರೆಗಿಂದು ಬಹಳ
ಬಾಯಾರಿಕೆ
ತುಸುತುಸುವಾಗಿ
ಬೆಳದಿಂಗಳ
ಮೊಗೆದು ಕೊಡು

************

ಪೂರ್ತಿ ಹುಣ್ಣಿಮೆಯಾಗಿ
ಅರಳಬೇಡ
ಮೋಡದ ಮರೆಗೆ ಸರಿ
ನಿನ್ನ ಓರಗೆಯ ತಾರೆಯರನ್ನೂ
ಸ್ವಲ್ಪ ನೋಡಬೇಕಿದೆ


**********

ಬೆಳದಿಂಗಳ ನಶೆಗೆ
ಮರಗಿಡಬಳ್ಳಿ
ತೂಗುತ್ತವೆ ಜೋಕಾಲಿ
ಹಾಡೇ ಇಲ್ಲದ
ಬದುಕಲ್ಲಿ ಅರಳಿದೆ ರಂಗೋಲಿ

31.10.08

ವಿಷಾದದ ಬಣ್ಣ

ನನ್ನ ಕಾಡುವ
ಕಗ್ಗತ್ತಲೆಯ ಹೊಡೆತಗಳಿಗೆ
ನೀನು ಹೆಗಲು
ಕೊಡುವೆ ಎಂದುಕೊಂಡೆ
ಹುಸಿಯಾಯಿತು ನಂಬಿಕೆ,
ನೀನು ಹೊದಿಕೆಯೊಳಗೆ
ಗೊರಕೆ ಹೊಡೆಯುತ್ತಲಿದ್ದೆ!

*********
ವಿಷಾದದ ಬಣ್ಣಗಳಿಗದ್ದಿದ
ಕುಂಚ
ನನ್ನ ಹೃದಯವನ್ನು
ತೋಯಿಸಿಬಿಟ್ಟಿದೆ
ಹತ್ತಿರಬರಬೇಡ
ಕಲೆಯಾಗಿಬಿಟ್ಟೀತು

********
ನನ್ನ ಹೃದಯದ ಹಾಡು
ಕೇಳಲು ಚಂದಿರನಿದ್ದಾನೆ,
ನಕ್ಷತ್ರಗಳು ಸಾಲುಗಟ್ಟಿ ನಿಂತಿವೆ
ಇಬ್ಬನಿ ಕೊಡವಿಕೊಂಡು
ಹುಲ್ಲೂ ಕಿವಿ ನಿಮಿರಿಸಿದೆ
ನೀನು ಮಾತ್ರ
ಹೆಡ್‌ಫೋನಲ್ಲಿ ತಲೆಹುದುಗಿಸಿರುವೆ!

******
ಕನಸಲೋಕದಿಂದ
ಚಿಟ್ಟೆಯೊಂದು
ಹುರುಪಿನಿಂದ
ಹಾರಿಬಂತು
ಹೂತೋಟದಲ್ಲೂ
ಕಾಣದ ಹೂವಿಗಾಗಿ ಪರಿತಪಿಸಿತು!

19.10.08

ಎಸ್‌ಎಂಎಸ್ ಕನವರಿಕೆಗಳು

ಇನ್‌ಬಾಕ್ಸ್‌ಗೆ ಬಂದು
ಬಿದ್ದ ನಿನ್ನ
ಎಸ್ಸೆಂಎಸ್
ಡಿಲೀಟಾಗುವ
ತನಕವಾದರೂ
ನನ್ನೊಂದಿಗಿರು ಸಾಕು!
******
ಆಕೆಗಾಗಿ
ಮನಸಿನಾಳದಿಂದ
ಸುಂದರ ಮೆಸೇಜ್
ರೂಪಿಸಿ ಕಳುಹಿಸುತ್ತಿದ್ದೆ
ಅದನ್ನೇ ಫಾರ್ವರ್ಡ್
ಮಾಡಿ ಅವಳು ಕನಸಿನ
ಹುಡುಗನನ್ನು ಪಡೆದಳು!
ಈಗ ನನ್ನ ಮನಸಿನ
ಟೈಪ್‌ಪ್ಯಾಡ್ ಬರಿದು...

******
ನಾನು ನಿನ್ನನ್ನು
ಎಷ್ಟು ಪ್ರೀತಿಸುವೆನೆಂಬುದಕ್ಕೆ
ನಿನಗೆ ಮೆಸೇಜ್
ಟೈಪಿಸಿ ನೋಯುತ್ತಿರುವ
ಈ ಬೆರಳುಗಳೇ ಸಾಕ್ಷಿ!

14.10.08

ಕಡತದೊಳಗಿನ ಕನಸು

ಈ ದೇಶ ಎಷ್ಟೊಂದು
ಅದೃಷ್ಟಶಾಲಿ!
ತಮ್ಮ ಭವ್ಯಭವಿತವ್ಯಕ್ಕೆ
ಗರಿಗರಿ ನೋಟು ಕಾಪಿಡುವವರು
ಅವರ ನಾಳೆಗಳಿಗೆ
ತೊಂದರೆಯಾಗದಂತೆ
ಗಡಿಯಲ್ಲಿ ನುಸುಳುವವರನ್ನು
ಹೊಡೆದುರುಳಿಸಲು
ಕಣ್ಗಾಹಿ ಯೋಧರು
ಬೋಲೋ ಮೇರೆ ಸಂಗ್.. ಜೈಹಿಂದ್

ಈ ದೇಶದ ಬಡವರು
ಅದೆಷ್ಟು ಪುಣ್ಯವಂತರು
ಅವರಿಗಾಗಿ
ನೂರೆಂಟು ಯೋಜನೆಗಳು
ಯೋಚನೆಗಳು
ಬುಲೆಟ್‌ಪ್ರೂಫ್ ಕಾರಿನಲ್ಲಿ
ಓಡಾಡುವರ
ಕಡತಗಳಲ್ಲಿ
ಬೆಚ್ಚಗೆ ಮಲಗಿವೆ
ದೇಶದ ಕನಸುಗಳು
ಬೋಲೋ ಮೇರೇ ಸಂಗ್ ಜೈಹಿಂದ್

ಬಲು ಭಾಗ್ಯವಂತರು
ಈ ಮಹಾನ್ ದೇಶದ
ಪುಟ್ಟ ಕಂದಮ್ಮಗಳು
ಬೆನ್ನ ಚೀಲದಲ್ಲಿ
ಹೊಸಜಗತ್ತು
ನಿರ್ಮಾಣದ ಹೊರೆ
ಹೊತ್ತ ವಿಶ್ವಮಾನವರು
ಬೋಲೋ ಮೇರೇ ಸಂಗ್ ಜೈ ಹಿಂದ್

5.10.08

ಎರಡು ಸಿನಿಮಾಗಳು ಮತ್ತು ಮಂಗಳೂರಿನ ‘ಶಂಕಿತ’ ಉಗ್ರರು

ಕೆಲವರ್ಷಗಳ ಮೊದಲಷ್ಟೇ ಉತ್ತರ ಭಾರತದಲ್ಲೆಲ್ಲೋ ಆಗುತ್ತಿದ್ದ ಬಾಂಬ್ ಸ್ಫೋಟ, ಶೂಟೌಟ್ ಇವೆಲ್ಲವನ್ನು ನಾವು ಬೆಳಗ್ಗೆ ಬಿಸಿಬಿಸಿ ಕಾಫಿ ಚಪ್ಪರಿಸುತ್ತ ಓದುತ್ತಿದೆವು.
ಈಗ ನಮ್ಮ ಬೆಂಗಳೂರಿನ ಚರಂಡಿಯಲ್ಲೂ ಅಮೋನಿಯಂ ನೈಟ್ರೇಟ್(ಗೊಬ್ಬರವಲ್ಲ!) ಸ್ಫೋಟಕಗಳು ಸಿಗುತ್ತಿವೆ, ಧಾರಾವಾಡದಲ್ಲೂ ಬಾಂಬ್ ಸ್ಫೋಟಗೊಳ್ಳುತ್ತದೆ...ಪರಶುರಾಮ ಸೃಷ್ಟಿ ಎನ್ನಿಸಿಕೊಂಡ ಪಶ್ಚಿಮ ಕರಾವಳಿ ಮಂಗಳೂರಿನ ತೆಕ್ಕೆಯಲ್ಲೂ ‘ಶಂಕಿತ’ ಭಯೋತ್ಪಾದಕರು ಮುಂಬೈ ಪೊಲೀಸರ ಕೈಗೆ ಸಿಕ್ಕಿದ್ದಾರೆ....

**********


ಕೆಲ ದಿನಗಳ ಹಿಂದೆ ಎರಡು ಸಿನಿಮಾ ನೋಡಿದ್ದು ನೆನಪಾಯ್ತು.
ಒಂದು ‘ಅಮೀರ್‍’ ಇನ್ನೊಂದು ‘ಎ ವೆಡೆನ್ಸ್‌ ಡೇ’.
ಎರಡೂ ಭಯೋತ್ಪಾದನೆಗೆ ಸಂಬಂಧಿಸಿದವು, ಹಾಗೆ ನೋಡಿದರೆ ಈಗ ಬಾಲಿವುಡ್ಡಲ್ಲಿ ಭಯೋತ್ಪಾದನೆ ಕುರಿತ ವಸ್ತುವಿನ ಚಿತ್ರಗಳ ಭರಾಟೆ ಈಗ ಹಿಂದೆಂದಿಗಿಂತಲೂ ಹೆಚ್ಚು. ಇರಲಿ...ಅಂತಹ ಅನೇಕ ಸಿನಿಮಾ ನೋಡಿದ್ದೆ, ಆದರೆ ಮೇಲೆ ಹೇಳಿದ ಎರಡೂ ಸಿನಿಮಾಗಳೂ ತಮ್ಮ ವಿಭಿನ್ನ ನಿರೂಪಣೆಯಿಂದ ನನ್ನ ಗಮನ ಸೆಳೆದವು.

ಲಂಡನ್ನಿಂದ ಹಿಂದಿರುಗುವ ಅಚ್ಚ ಭಾರತೀಯ ಮುಸ್ಲಿಂ ಯುವ ವೈದ್ಯ ಡಾ.ಅಮಿರ್‍ ಸುತ್ತ ಗಿರಕಿ ಹೊಡೆಯುವ ‘ಅಮೀರ್‍’ ನೀವು ಒಂದು ಸಿಟ್ಟಿಂಗ್‌ನಲ್ಲೇ ಕುಳಿತು ನೋಡಿಬಿಡಬಹುದು. ಯಾಕೆಂದರೆ ಅಷ್ಟು ಪರಿಣಾಮಕಾರಿಯಾಗಿ ಅದು ವ್ಯಾಪಿಸಿಕೊಳ್ಳುತ್ತದೆ. ಈತ ಮುಂಬೈನಲ್ಲಿ ಬಂದಿಳಿದಂತೇ ಆತನನ್ನು ಅಪರಿಚಿತ ಫೋನ್ ಕರೆ ಹಿಂಬಾಲಿಸತೊಡಗುತ್ತದೆ.

ನಿಜವಾದ ನಾಯಕ(ಅಮೀರ್‍) ಆಗಬೇಕಾದರೆ ನಾನು ಹೇಳಿದಂತೆ ಮಾಡು ಎಂಬ ಫೋನ್ ಆದೇಶ ಅಮೀರ್‍ ಅಲಿಗೆ ಬರುತ್ತದೆ. ಚಿತ್ರವಿಡೀ ಫೋನ್ ಕರೆಗಳು ಮಾತ್ರ. ಇಲ್ಲಿ ಫೋನೇ ವಿಲನ್! ಈ ಫೋನ್ ಕರೆ ಮೂಲಕ ಹಳೆ ಮುಂಬೈ ಶಹರದ ಕತ್ತಲ ಗಲ್ಲಿಗಳಲ್ಲಿ ಕಟು ವಾಸ್ತವಗಳಿಗೆ ಕಣ್ಣಾಗುತ್ತಾ ಕ್ಯಾಮೆರಾ ಸಾಗುತ್ತದೆ. ಕುರಿ ಕಡಿಯುವವನ ಮುಂದೆ ಅಮೀರ್‍ ಸಾಗುವಾಗ ಹಿನ್ನೆಲೆಯಲ್ಲಿನ ಧ್ವನಿಯೊಂದು ಹೇಳುತ್ತದೆ ‘ಆಜ್ ತೋ ತಾಜಾ ಬಕ್ರಾ ಮಿಲಾ ಹೈ ಭಾಯ್’...

ತನ್ನ ಮನೆಯವರನ್ನು ಅಪಹರಿಸುವುದು ತಿಳಿದಾಗಲಂತೂ ಅಮೀರ್‍ ತುಮುಲ...ತನ್ನ ಮನೆಯವರಿಗಾಗಿ ಬಸ್ಸಲ್ಲಿ ಬಾಂಬ್ ಇರಿಸಬೇಕಾಗಿ ಬರುತ್ತದೆ. ಅದೂ ಆತನ ಗಮನಕ್ಕೆ ಬರದತೆ. ಕೊನೆಗೂ ಬಾಂಬ್ ಸ್ಫೋಟಿಸುತ್ತದೆ...ಆದರೆ ಡಾ.ಅಮೀರ ನಿಜಕ್ಕೂ ಅಮೀರ(ಅಮರ)ನಾಗುತ್ತಾನೆ. ಎಂದಿನಂತೆ ಮಾಧ್ಯಮಗಳಲ್ಲಿ ಒಂದೇ ಬದಿಯ ಸತ್ಯ ಪ್ರಕಟಗೊಳ್ಳುತ್ತದೆ.

ರಾಮಗೋಪಾಲ ವರ್ಮರ ‘ಕಾಂಟ್ರಾಕ್ಟ್‌’ಗೆ ಹೋಲಿಸಿದರೆ ಮೊದಲ ಬಾರಿಗೆ ನಿರ್ದೇಶಕರಾದ ರಾಜ್ ಕುಮಾರ್ ಗುಪ್ತ ಅವರ ಅಮೀರ್‍ ಮುಂದಿನ ಸಾಲಿನಲ್ಲಿ ನಿಲ್ಲುತ್ತದೆ. ಅಮೀರ್‍ ಆಗಿ ರಾಜೀವ್ ಖಂಡೇವಾಲ್ ಮನೋಜ್ಞ ಅಭಿನಯದಲ್ಲಿ ಗಮನ ಸೆಳೆದಿದ್ದಾರೆ. ತಾಂತ್ರಿಕವಾಗಿಯೂ ಚಿತ್ರ ಸುಪರ್ಬ್.


*********

‘ಎ ವೆಡೆನ್ಸ್‌ ಡೇ’ ಭಯೋತ್ಪಾದನೆಯ ಮತ್ತೊಂದು ಕೋನವನ್ನು ಚಿತ್ರಿಸಿದೆ. ಒಂದು ಬುಧವಾರ ಮುಂಬೈ ಕಮಿಷನರ್‍ಗೆ ಬರುವ ಫೋನ್‌ ಕರೆ, ಎಂದಿನಂತೆ ಇದೊಂದು ಭಯೋತ್ಪಾದಕ ಕೃತ್ಯ ಎಂದು ಭಾವಿಸುವಂತೆ ಮಾಡುತ್ತಾ ಹೋಗುತ್ತದೆ. ಕಮಿಷನರ್‍ ಆಗಿ ಅನುಪಮ್ ಖೇರ್‍ ಮತ್ತು ಸಂಶಯಿತ ಉಗ್ರಗಾಮಿಯಾಗಿ ನಾಸಿರುದ್ದೀನ್ ಶಾಗೆ ಪೂರ್ಣ ಅಂಕ ಸಲ್ಲುತ್ತದೆ. ಪೊಲೀಸ್ ಇನ್‌ಸ್ಪೆಕ್ಟರ್‍ ಆರಿಫ್ ಆಗಿ ಜಿಮ್ಮಿ ಶೆರ್ಗಿಲ್ ಕೂಡಾ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಸೀಟ್‌ನ ಅಂಚಿನಲ್ಲಿ ಕುಳಿತು ನಿಮ್ಮನ್ನು ಸೆಳೆಯುವ ಅಂಶಗಳು ಈ ಚಿತ್ರದಲ್ಲಿವೆ. ಕೊನೆಯಲ್ಲಿ ಭಯೋತ್ಪಾದಕ ನಿಜವಾಗಿಯೂ ಯಾರೆನ್ನುವುದು ತಿಳಿಯುತ್ತದೆ.

ಯಾವುದೇ ಸಿನಿಮಾ ಸ್ಪರ್ಶಿಸದ ಅಂಶವನ್ನು ವೆಡೆನ್ಸ್‌ ಡೇ ಎತ್ತಿ ಹಿಡಿಯುತ್ತದೆ.

‘ಬ್ಲಡಿ ಕಾಮನ್ ಮನ್ ಆಫ್ ಇಂಡಿಯಾ’ ಅಥವಾ ಭಾರತದ ಸಾಮಾನ್ಯ ನಾಗರಿಕನೊಬ್ಬ ಯಾವ ರೀತಿ ಭಯೋತ್ಪಾದನೆಯಿಂದ, ಅಫ್ಜಲ್ ಗುರುವಿನಂತಹ ಉಗ್ರರ ಬಗ್ಗೆ ಸರ್ಕಾರದ ನಡವಳಿಕೆಯಿಂದ ರೋಸಿ ಹೋಗಿದ್ದಾನೆ ಎನ್ನುವುದಕ್ಕೆ ವೆಡೆನ್ಸ್‌ ಡೇ ಕೈಗನ್ನಡಿ. ಮಾಮೂಲಿ ಆಲೋಚನೆಗೆ ಕಟ್ಟುಬೀಳದೆ ಇಂತಹ ಭಿನ್ನ ಚಿತ್ರ ನೀಡಿದ್ದಕ್ಕೆ ನಿರ್ದೇಶಕ ನೀರಜ್ ಪಾಂಡೆ ಅಭಿನಂದನಾರ್ಹರು.



*******************



ಮತ್ತೆ ನಿಜ ಜೀವನಕ್ಕೆ ಬರೋಣ. ಮೇಲೆ ಹೇಳಿದ ಎರಡೂ ಚಿತ್ರಗಳಲ್ಲೂ ಭಯೋತ್ಪಾದನೆ ಜನರ ಬದುಕಿಗೆ ಎಷ್ಟು ಬಾಧೆ ತರುತ್ತಿದೆ ಎಂಬುದರ ಚಿತ್ರಣ ವಸ್ತುಸ್ಥಿತಿಗೆ ಹತ್ತಿರವಿದೆ. ಮಂಗಳೂರಿನಲ್ಲಿ ನೆರೆ ಮನೆಯವರಿಗೆ ಅನುಮಾನವೇ ಬಾರದ ರೀತಿಯಲ್ಲಿ ‘ಶಂಕಿತ’ರು ನಡೆದುಕೊಂಡಿದ್ದಾರೆ. ಈಗೇನಿದ್ದರೂ ಅವರು ಆರೋಪಿಗಳು ನಿಜ. ಕೆಲ ಮಾಧ್ಯಮಗಳು ಇವರನ್ನು ಉಗ್ರರೆಂದೇ ಚಿತ್ರಿಸಿವೆ, ಇನ್ನು ಕೆಲವು ಇವರು ಅಮಾಯಕರು, ಇದೆಲ್ಲ ಪೊಲೀಸರ ಕಟ್ಟುಕತೆ ಎಂಬಂತೆ ಬಿಂಬಿಸಿವೆ. ಒಂದು ಪತ್ರಿಕೆಯಂತೂ ಚರ್ಚ್ ಮೇಲಿನ ದಾಳಿಯನ್ನು ಮುಚ್ಚಿ ಹಾಕಲು ಸರ್ಕಾರ ಈ ಕಾರ್ಯಾಚರಣೆ ನಡೆಸಿದೆ ಎಂದು ಬಾಲಿಶವಾಗಿ ಬರೆಯಿತು!
ಇದನ್ನು ಕಂಡು ಕೆಲ ಅಧಿಕಾರಿಗಳಂತೂ ನಮ್ಮಲ್ಲೂ ಒಂದು ಬ್ಲಾಸ್ಟ್ ಆಗಬೇಕು, ಇಲ್ಲವಾದರೆ ನಾವು ಏನನ್ನೂ ನಂಬುವುದಿಲ್ಲ ಎಂದು ನನ್ನಲ್ಲಿ ಹೇಳಿಕೊಂಡರು....ಇಲ್ಲೂ ಸ್ಫೋಟ ನಡೆದ ಬಳಿಕವೇ ಎಚ್ಚೆತ್ತುಕೊಳ್ಳುವಂತಹ ಎಮ್ಮೆ ಚರ್ಮ ನಮ್ಮದಾಗದಿರಲಿ ಎಂದಷ್ಟೇ ಹಾರೈಸಬಹುದೇನೋ


(ಕಳೆದ ಕೆಲ ದಿನಗಳಿಂದ ಮಂಗಳೂರಿನ ಘಟನೆಗಳಿಂದ ಬ್ಲಾಗ್‌ ಕಡೆ ಸುಳಿಯಲಾಗಲಿಲ್ಲ...ಬರೆಯುವುದು ಸಾಕಷ್ಟಿದೆ...ಇನ್ನೊಮ್ಮೆ ಸಿಗೋಣ)

19.9.08

ಮರೀಚಿಕೆ


ಮನೆಯೊಳಗೆ,
ಹಾಗು
ಬಾಗಿಲಿನ ಹೊರಗೆ
ಕಿವಿಗಡಚಿಕ್ಕುವ ಶಬ್ದಗಳು
ದೇವಸ್ಥಾನದ
ಪ್ರಸಾದದ ತಟ್ಟೆಯಲ್ಲೇ
ಬಾಂಬ್
ಇಗರ್ಜಿಯಲ್ಲಿ
ಮುರಿದು ನೇತಾಡುವ ಶಿಲುಬೆ
ಸಮುದ್ರ ತಟಕ್ಕೂ
ಅಪ್ಪಳಿಸಿ ಪಾದ ತೋಯಿಸುತ್ತಿದೆ
ಸಂಕಟದ ಅಲೆ
ಮಟನ್ನು ಮಾರ್ಕೆಟ್ಟಲ್ಲಿ
ದಿನವೂ ಭರ್ಜರಿ ವ್ಯಾಪಾರ
ಕ್ಷೀಣವಾಗಿದೆ ಆಡುಗಳ ಅರಚಾಟ

ಓಡು...ಬೆಳಕಿನತ್ತ
ಕತ್ತಲ ಮರೆಯಿಂದ
ಗುಂಡು ಗುಂಡಿಗೆ
ಸೀಳಿಬಿಡಬಹುದು..

ವಿ ಚಿ ತ್ರ....
ಆದರು ಸತ್ಯ
ಹಿಂಸೆಯ ಬಾಜಾರಿನಲ್ಲಿ
ಇನ್ನೂ ಬಿಳಿ ಪಾರಿವಾಳ
ಹುಡುಕುತ್ತಾರೆ!!!

ಚಿತ್ರಕೃಪೆ: adriansvcblog.blogspot.com

12.9.08

ಹೆದ್ದಾರಿ ಕಥಾನಕಗಳು

ಅಬ್ಬಾ ಇದು ಹೆದ್ದಾರಿಯೇ ಎಂಬ ಅನುಮಾನ ಬರುವಂತಹ ಕೆಟ್ಟ ರಸ್ತೆ ಅದು.
ಸಾಮಾನ್ಯವಾಗಿ ಇಡೀ ದಿನ ಬ್ಯುಸಿಯಾದ ರಸ್ತೆಗೆ ನಿದ್ರಿಸಲೂ ಬಿಡದಂತೆ ಅನಿಲ, ಅದಿರು ಟ್ಯಾಂಕರ್‍ಗಳು ಓಡುತ್ತವೆ.
ಆದರೆ ಇಂದು ಎಂದಿನಂತಿಲ್ಲ...
ಬಹಳ ದಿನದ ಬಳಿಕ ಮಳೆಯಾಗಿ ರಸ್ತೆಯೇ ತೊಯ್ದು ಹೋಗಿದೆ. ಅದಕ್ಕೋ ಏನೋ ರಾತ್ರಿ ಓಡಾಟದ ಲಾರಿ ಚಾಲಕರು ರಸ್ತೆ ಬದಿಯೇ ಲಾರಿ ನಿಲ್ಲಿಸಿ ನಿದ್ರೆಗೆ ಶರಣಾಗಿದ್ದಾರೆ.
ಆದರೆ ಆ ಜಂಕ್ಷನ್‌ನಲ್ಲಿ ಇನ್ನೂ ಮನುಷ್ಯ ಜೀವವೊಂದು ಕಾಣುತ್ತಿದೆ.
ಸರಿಯಾಗಿ ಉರಿಯದೆ ಮಿಣಕ್ ಮಿಣಕ್ ಅನ್ನುವ ಸೋಡಿಯಂ ವೇಪರ್‍ ಲೈಟಿನಡಿಯೇ ಸಣ್ಣ ಗೂಡಂಗಡಿಯಲ್ಲಿ ನೀರು ದೋಸೆ ಮಾರುವವನಾತ.
ಯಾವಾಗಲೂ ಸಾಲುಗಟ್ಟಿ ನಿಂದು ನೀರು ದೋಸೆ ತಿಂದು ಟೀ ಕುಡಿದು ಹೋಗುವವರು ಇಂದೇಕೋ ಕಾಣುತ್ತಿಲ್ಲ. ಹಾಗಾಗಿ ಆತನ ಮುಖದಲ್ಲೂ ನಿರಾಸೆ.
ದೋಸೆಯಾತ ನಿದ್ದೆಗೆ ಜಾರುವಷ್ಟರಲ್ಲಿ ಬೈಕ್ ಹಾರ್ನ್. ನೋಡಿದರೆ ಬೈಕ್ ಮೇಲೆ ಥೇಟ್ ರಸ್ತೆಯಂತೇ ತೊಯ್ದು ಹೋದ ಯುವಕ.
ನೋಡಿದರೆ ಕಾಲ್ ಸೆಂಟರಿನವನೋ, ರಾತ್ರಿ ಬೀಟ್ ಮುಗಿಸಿ ಬರುವ ಪತ್ರಕರ್ತನೋ ಇರಬಹುದು.
೨೦ ಪ್ಲೇಟ್ ಪಾರ್ಸೆಲ್ ಮಾಡು ರೂಂಮೇಟ್‌ಗಳೂ ಹಸಿದಿರಬಹುದು...ಎಂದ ಬೈಕ್ ಸವಾರ.
ಖುಷಿಯಾಯ್ತು ದೋಸೆಯಾತನಿಗೆ.
ಸ್ಯಾಂಪಲ್ ಒಂದು ಕೊಡು, ಎಂದು ಒಂದು ಪ್ಲೇಟ್ ನೀರು ದೋಸೆ ತಿಂದ ಬೈಕ್‌ನವನು.
ಗಿರಾಕಿಯಿಲ್ಲದೆ ಎರೆದ ದೋಸೆ, ಉಳಿದ ಹಿಟ್ಟು ಹಾಳಾಗಿ ಹೋಗುತ್ತಿತ್ತು, ಈ ಮಹಾಮನುಷ್ಯ ಬಂದು ೨೦ ಪ್ಯಾಕ್ ಮಾಡು ಎಂದದ್ದು ದೋಸೆಯಾತನಿಗೆ ಹೊಸ ಉತ್ಸಾಹ ಮೂಡಿಸಿತು.
೨೦ ಪ್ಲೇಟ್ ಪಾರ್ಸೆಲ್ ಕೊಟ್ಟ.
ಬೈಕ್‌ನಾತ ನೋಟೊಂದನ್ನು ಚಾಚಿದ.
ದೋಸೆ ನಿಜಕ್ಕೂ ಚೆನ್ನಾಗಿದೆ...ಹಾಗಾಗಿ ಚಿಲ್ಲರೆ ಬೇಡ ಎಂದ...
ಹಾಗಾದರೆ ಇನ್ನೆರಡು ಬಿಸಿ ದೋಸೆ ಇಕೋ ಎಂದು ಪ್ಯಾಕ್ ಮಾಡಿಕೊಟ್ಟ ದೋಸೆಯಾತ...
ಇಬ್ಬರೂ ನಕ್ಕರು...
ಯಾವುದೋ ಜನ್ಮದ ಬಂಧುಗಳಂತೆ...
ಮಿಣಗುಡುತ್ತಿದ್ದ ಸೋಡಿಯಂ ವೇಪರ್‍ ಈಗ ಪ್ರಕಾಶಮಾನವಾಗಿ ಉರಿಯಿತು.
ಬೈಕ್ ಮುಂದಕ್ಕೋಡಿತು...ಮಳೆ ಸುರಿಯುತ್ತಲೇ ಇತ್ತು....


***************

ಅದು ಎಕ್ಸ್‌ಪ್ರೆಸ್ ಹೈವೇ...
ರಾಷ್ಟ್ರವನ್ನು ವಿಶ್ವದಲ್ಲೇ ಪ್ರಖ್ಯಾತಗೊಳಿಸಲು ಪಣತೊಟ್ಟವರಿಗೆ ತೊಂದರೆಯಾಗಬಾರದು, ಅವರು ಬೇಗಬೇಗನೆ ತಮ್ಮ ಗಮ್ಯ ಸೇರಬೇಕು ಎಂದು ನಿರ್ಮಿಸಿದ ಆರು ಪಥಗಳ ಹೆದ್ದಾರಿ.
ಮಿಂಚಿನಂತೆ ಕಣ್ಣು ಕೋರೈಸುವ ಹೆಡ್‌ಲೈಟ್‌ಗಳೊಂದಿಗೆ ವಾಹನಗಳು ಹರಿದಾಡುತ್ತಿವೆ. ರಸ್ತೆಗೆ ಅಡ್ಡ ಬರುವ ನಾಯಿಗಳಿಗೆ ಯಾವ ವಾಹನವೂ ಅಲ್ಲಿ ಬ್ರೇಕ್ ಹಾಕದು, ಅಪರೂಪಕ್ಕೊಮ್ಮೆ ಓಡುವ ಟೂ ವೀಲರ್‍ ಹೊರತು ಪಡಿಸಿ. ಹಾಗಾಗಿ ಆ ರಸ್ತೆಯನ್ನು ನಾಯಿಗಳು ಆತ್ಮಹತ್ಯಾ ತಾಣವಾಗಿ ಗುರುತಿಸಿಕೊಂಡಿದ್ದವು.
ಲೇಟ್‌ನೈಟ್ ಪಾರ್ಟಿ ಮುಗಿಸಿದ ತಂಡವೊಂದು ಯಾವುದೋ ಪಬ್ಬೊಂದರಿಂದ ಹೊರಬಿದ್ದಿದೆ, ಅವರ ಕಾರಿನ ನಾಗಾಲೋಟಕ್ಕೆ ಬೈಕೊಂದು ಸಿಕ್ಕಿ ಅದರಲ್ಲಿದ್ದ ಇಬ್ಬರು ವಿಲವಿಲನೆ ಒದ್ದಾಡುತ್ತಿದ್ದಾರೆ.
ಕಾರ್‌ನಿಂದ ಹೋ ಎಂಬ ಕೇಕೆ ಬಿಟ್ಟರೆ ಬೇರೇನೂ ಕೇಳಲಿಲ್ಲ. ಹಿಂದಿನಿಂದ ಬಂದ ಮರ್ಸಿಡೀಸ್‌ ಹಾಗೇ ಬ್ರೇಕ್ ಹಾಕಿತು. ಕಿಟಿಕಿ ಕೆಳಗೆ ಸರಿದು ಮುಖವೊಂದು ಇಣುಕಿದು. ರಸ್ತೆ ಮೇಲೆ ನರಳುತ್ತಿದ್ದ ವ್ಯಕ್ತಿ ದೈನ್ಯನಾಗಿ ನೋಡಿದ.
ಕಿಟಿಕಿ ಮತ್ತೆ ಮುಚ್ಚಿತು. ಮರ್ಸಿಡಿಸ್ ಮುಂದಕ್ಕೋಡಿತು.
ನರಳುತ್ತಿದ್ದವರಿಬ್ಬರು ನಿಧಾನವಾಗಿ ನಿಶ್ಚಲರಾಗುತ್ತಿದ್ದುದನ್ನು ರಸ್ತೆ ಮೀಡಿಯನ್‌ನಲ್ಲಿ ಮಲಗಿದ್ದ ನಾಯಿಯೊಂದು ಅಸಹಾಯಕತೆಯಿಂದ ನೋಡಿ ಬಾಲ ಅಲ್ಲಾಡಿಸಿತು.

10.9.08

ದಪ್ಪ ಬೊಟ್ಟಿನ ಅಜ್ಜನಿಗೆ ಕೊನೆ ನಮನ

ಅವರು ಥೇಟ್ ಅಜ್ಜಿಯಂತೇ ಕಾಣುತ್ತಾರೆ. ನೊಸಲ ಮೇಲೆ ದಪ್ಪ ವಿಭೂತಿಯ ಬರೆ, ಅದಕ್ಕೆ ತಾಗುವಂತೆ ಹಣೆ ಮೇಲೆ ಕುಂಕುಮದ ದೊಡ್ಡ ಬೊಟ್ಟು.
ಪುನೀತಭಾವದಲ್ಲಿ ಕೈಯಲ್ಲಿ ಪಿಟೀಲು ಹಿಡಿದು ಕುಂತರೆ ಗಂಟೆಗಟ್ಟಲೆ ಕಾಲ ಸಂಗೀತ ವೈಭವ...ಕೇಳುಗ ನೋಡುಗರಿಗೆ ಬೇಜಾರಾಗದಂತೆ ರಾಗ ಮಿಡಿಯುವವರು.
ಎರಡು ವರ್ಷ ಹಿಂದೆ ಮೂಡುಬಿದ್ರೆಯ ಆಳ್ವಾಸ್ ವಿರಾಸತ್‌ಗೆ ಬಂದಿದ್ದ ಕುನ್ನಕುಡಿ ಒಂದೂವರೆ ಗಂಟೆ ಕಾಲ ಮೋಡಿ ಮಾಡಿದ್ದರು. ಈ ಅಜ್ಜನಿಗೆ ಇತರ ಅನೇಕ ಸಂಗೀತಗಾರರಂತೆ ಸಿಟ್ಟು ಬರದು. ಸಂಗೀತ ನುಡಿಸುತ್ತಲೇ ಮುಖಭಾವಗಳಲ್ಲು ನವರಸ ಸೂಸುತ್ತಾ ನೋಡುಗರಲ್ಲಿ ನಗು ಎಬ್ಬಿಸಬಲ್ಲವರು. ಮೂಡುಬಿದಿರೆಯ ಕಛೇರಿಯಲ್ಲಿ ಆರಂಭದಿಂದ ಅಂತ್ಯದ ವರೆಗೂ ಎಲ್ಲೂ ಗುಣುಗುಟ್ಟುವಿಕೆ ಇರಲಿಲ್ಲ, ಕೇಳಿದ್ದು ಚಪ್ಪಾಳೆ ಮಾತ್ರ.

ಕೇಳುಗರನ್ನು ಗಂಟೆಗಟ್ಟಲೆ ಕಾಲ ಪರವಶಗೊಳಿಸುವ ಅಂತಹ ಕಲೆ ಬೆರಳೆಣಿಕೆಯ ಸಂಗೀತಗಾರರಿಗಷ್ಟೇ ಸಿದ್ಧಿಸಿದೆ.
ಅವರ ಪಿಟೀಲಿನ ಮೊರೆತ ಅನೇಕರ ಮೊಬೈಲಿಗೆ ರಿಂಗ್‌ಟೋನ್ ಆಗಿದೆ. ಮನಸಿಗೆ ಬೇಸರವೆನಿಸಿದಾಗ ಪಿಟೀಲಿನ ದನಿ ಸುಶ್ರಾವ್ಯವಾಗಿ ಮನಮುಟ್ಟುತ್ತದೆ.
ಅದರಲ್ಲು ಕರ್ನಾಟಕ ಸಂಗೀತ ಶೈಲಿಯಲ್ಲಿ ಅವರ ದಾಸರ ಪದಗಳನ್ನು ಕೇಳಿದರೆ ಎಂಥವರೂ ತಲೆದೂಗಲೇ ಬೇಕು. ಯುವವೃಂದಕ್ಕೂ ಕೇಳಲು ಖುಷಿಕೊಡುವ ಅವರ ಡ್ರೀಂ ಡಾನ್ಸ್‌ನಂತಹ ಆಲ್ಬಂಗಳು ಮನಮೋಹಕ.
೧೨ರ ಹರೆಯದಲ್ಲೇ ಪಿಟೀಲಿನತ್ತ ಆಕರ್ಷಿತರಾದರು ಕುನ್ನಕುಡಿ. ಅದುವರೆಗೆ ಕೇವಲ ಪಕ್ಕವಾದ್ಯವಾಗಿಯಷ್ಟೇ ಬಳಕೆಯಲ್ಲಿದ್ದ ಪಿಟೀಲಿಗೂ ಅದರದ್ದೇ ಆದ ಘನತೆಯನ್ನು ತಂದುಕೊಟ್ಟು ಸೋಲೋ ಆಗಿ ಪ್ರದರ್ಶನಕೊಟ್ಟವರವರು. ಪಿಟೀಲು ನುಡಿಸುತ್ತೇನೆ ಎಂಬ ಕಾರಣಕ್ಕೆ ಜನ ಅಸಡ್ಡೆ ತೋರಿದರು. ಅದನ್ನೇ ಸವಾಲಾಗಿ ಸ್ವೀಕರಿಸಿದೆ, ನನ್ನದೇ ಆದ ಶೈಲಿ ರೂಪಿಸಿಕೊಂಡೆ, ಇದನ್ನು ಜನ ಒಪ್ಪಿಕೊಂಡರು ಎಂದು ಒಂದೆಡೆ ಸಂದರ್ಶನದಲ್ಲಿ ಕುನ್ನಕುಡಿ ಹೇಳಿಕೊಂಡಿದ್ದಾರೆ.
ಪಿಟೀಲಿನಲ್ಲಿಯೂ ಬೆರಳುಗಳ ಸೂಕ್ಷ್ಮ ಚಲನೆ ಮೂಲಕ ವಿಸ್ಮಯ ಸೃಷ್ಟಿ ಅವರ ವಿಶೇಷ. ಕೇವಲ ಶಾಸ್ತ್ರೀಯ ಶೈಲಿಯನ್ನೇ ನೆಚ್ಚಿಕೊಂಡಿರಲಿಲ್ಲ. ನಮ್ಮನ್ನು ಬೆಳೆಸಿದ್ದು ಪ್ರೇಕ್ಷಕರು, ಅವರಿಗಾಗಿ ಆಗಾಗ ಲಘುಸಂಗೀತ ನುಡಿಸಿದರೆ ತಪ್ಪಿಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ನಮ್ಮ ವೀಟ್ಟು ದೈವಂ, ಕನ್ನಕಾಚಿ, ಮೆಲ್ ನಟ್ಟ ಮರುಮಗಲ್ ಎಂಬ ಚಿತ್ರಗಳಿಗೆ ಅವರು ಸಂಗೀತವನ್ನೂ ನೀಡಿದ್ದಾರೆ.

೭೫ರ ಹರೆಯದಲ್ಲಿ ಕುನ್ನಕುಡಿ ಪಿಟೀಲು ಸ್ತಬ್ದವಾಗಿದೆ, ಅವರ ಸುಮಧುರ ರಚನೆಗಳಷ್ಟೇ ನಮ್ಮ ಮನದಲ್ಲಿ ಅನಂತವಾಗಿರುತ್ತದೆ.
ಅವರ ಸುಂದರ ಕಲಾಕೃತಿಯೊಂದು ಇಲ್ಲಿದೆ. ಕೇಳಿ, ದೊಡ್ಡ ಬೊಟ್ಟಿನ ಅಜ್ಜನಿಗೆ ನಿಮ್ಮ ಮನತುಂಬಿದ ಶ್ರದ್ಧಾಂಜಲಿ ಇರಲಿ......

7.9.08

ಫೂಂಕ್‌ನಲ್ಲೇನಿದೆ?

ರಾಮ್ ಗೋಪಾಲ್ ವರ್ಮಾ ನನಗಿಷ್ಟವಾಗುವುದು ಆತನ ಪ್ರಯೋಗಶೀಲತೆ, ಅಧ್ಯಯನಕ್ಕೆ.
ನನಗೆ ರೆಸ್ಟ್ ಎನ್ನುವುದೇ ಇಲ್ಲ, ಪತ್ನಿಯೂ ಇಲ್ಲ, ಮಕ್ಕಳಿಲ್ಲ. ಬೆಳಗ್ಗೆ ಎದ್ದು ಮಾಡುವ ಕೆಲಸ ಎಂದರೆ ಸಿನಿಮಾ ನೊಡೋದು ಎಂದು ಇತ್ತೀಚೆಗೆ ವರ್ಮಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಏಕತಾನತೆಗೆ ಕಟ್ಟುಬಿದ್ದಿದ್ದ ಬಾಲಿವುಡ್ಡಿಗೆ ಪ್ರಯೋಗಶೀಲತೆ ತಂದುಕೊಟ್ಟವರು ವರ್ಮಾ. ನಿರಂತರ ಪ್ರಯೋಗಶೀಲತೆಯ ಧಾರೆಯಲ್ಲಿ ಅವರು ಆಗೀಗ ವಿರ್ಮಕರಿಂದ ಭೇಷ್ ವರ್ಮಾ ಅನ್ನಿಸಿಕೊಂಡದ್ದಿದೆ, ಹೀನಾಮಾನಾ ಟೀಕಿಸಲ್ಪಟ್ಟದ್ದೂ ಇದೆ. ಆದರೆ ವಿಮರ್ಶಕರು ಏನೇ ಬರೆಯಲಿ, ತನ್ನ ಪ್ರಯೋಗಶೀಲತೆಯನ್ನು ವರ್ಮಾ ಉಳಿಸಿಕೊಂಡಿದ್ದಾರೆ ಎಂದೇ ಹೇಳಬಹುದು.



ಮೊನ್ನೆ ವರ್ಮಾನ ಇತ್ತೀಚೆಗಿನ ಚಿತ್ರ ‘ಫೂಂಕ್’ ನೋಡಿದೆ. ಅನೇಕ ಹಾರರ್‍ ಸಿನಿಮಾಗಳು ಬಂದಿವೆ ನಿಜ, ಆದರೆ ಹೆಚ್ಚಿನವೂ ಭೂತ, ಪ್ರೇತಗಳ ಬಗ್ಗೆಯೇ ತಯಾರಾದವು. ಬ್ಲಾಕ್ ಮ್ಯಾಜಿಕ್ ಅಥವಾ ವಾಮಾಚಾರ, ಮಾಟಮಂತ್ರಗಳ ಬಗ್ಗೆ ಸಿನಿಮಾ ಸಾಕಷ್ಟು ಬಂದಿಲ್ಲ, ವಾಮಾಚಾರವನ್ನೂ ಭಯಾನಕವಾಗಿ ತೋರಿಸುತ್ತದೆ ಫೂಂಕ್.

ತಮ್ಮ ಚಿತ್ರಗಳಿಗೆ ಹೊಸಮುಖಗಳನ್ನ ಅರಸುತ್ತಿರುವ ವರ್ಮಾಗೆ ಈ ಸಲ ನಮ್ಮ ಕಿಚ್ಚ ಸುದೀಪ್ ಸಿಕ್ಕಿದ್ದಾರೆ. ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾರೆ ಸುದೀಪ್. ಅವರ ಮುಖಭಾವ ಇಂತಹ ಹಾರರ್‍ನ ಗಂಭೀರತೆಗೆ ಸರಿಯಾಗಿ ಒಪ್ಪುತ್ತದೆ. ದೇವರನ್ನು, ದೈವವನ್ನು ನಂಬದೆ ಶುದ್ಧ ನಾಸ್ತಿಕ ಸಿವಿಲ್ ಇಂಜಿನಿಯರ್‍ ರಾಜೀವ್ (ಸುದೀಪ್). ಕಟ್ಟಡ ನಿರ್ಮಾಣಕ್ಕೆ ನೆಲ ಅಗೆಯುವಾಗ ಗಣಪತಿ ಆಕಾರದ ಬಂಡೆ ಸಿಗುತ್ತದೆ, ಅಲ್ಲಿ ಒಂದು ಚಿಕ್ಕ ಗಣಪತಿ ಗುಡಿ ನಿರ್ಮಿಸಲು ಕೆಲಸದವರು ಮನವಿ ಮಾಡಿದರೂ ಕೇಳುವುದಿಲ್ಲ. ಇಂತಿಪ್ಪ ರಾಜೀವ್‌ಗೆ ಆಸ್ತಿಕ ಪತ್ನಿ, ಧಾರ್ಮಿಕ ಶ್ರದ್ಧೆಯ ತಾಯಿ ಮತ್ತು ಇಬ್ಬರು ಮುದ್ದಾದ ಮಕ್ಕಳು. ಇವರಲ್ಲದೆ ಮನೆಯಲ್ಲಿ ಅಡುಗೆಯವಳು ಹಾಗೂ ಕಾರಿನ ಚಾಲಕ ವಾಸಿಸುತ್ತಾರೆ.

ತನ್ನ ಹೊಸ ಕಾಂಟ್ರಾಕ್ಟ್‌ವೊಂದರಲ್ಲಿ ತನ್ನೊಂದಿಗಿರುವ ಮಧು ಮತ್ತು ಅನ್ಶುಮನ್ ಮೋಸ ಮಾಡಿದ್ದು ತಿಳಿದು ಅವರನ್ನು ಕೆಲಸದಿಂದ ಕಿತ್ತು ಹಾಕುವ ರಾಜೀವ್‌ ಮನೆ ಮೇಲೆ ಮಾಟದ ಛಾಯೆ ಕಾಡುತ್ತದೆ. ಮುದ್ದಿನ ಮಗಳನ್ನು ಆಗಿಂದಾಗ್ಗೆ ಕಾಡುವ ಕಾಣದ ಶಕ್ತಿಗಳು ಆಸ್ತಿಕನ ನಂಬಿಕೆಯನ್ನು ಕ್ಷೀಣಿಸುವಂತೆ ಮಾಡುತ್ತವೆ ಎನ್ನುವುದೇ ಕಥೆಯ ಹಂದರ. ಅಂತಿಮವಾಗಿ ಸಿನಿಮಾ ಏನನ್ನೂ ಹೇಳುವುದಿಲ್ಲ. ಮಗು ಹುಷಾರಾಗುತ್ತದೆ. ಅದು ವಾಮಾಚಾರಕ್ಕೆ ಪ್ರತಿಯಾದ ಮಂತ್ರದಿಂದಲೋ, ಅಥವಾ ಮನೋವೈದ್ಯೆಯ ಚಿಕಿತ್ಸೆಯಿಂದಲೋ ಎಂಬುದನ್ನು ವೀಕ್ಷಕರ ನಿರ್ಧಾರಕ್ಕೆ ಬಿಟ್ಟಿದ್ದಾರೆ ವರ್ಮಾ.

ಸಮಾಜದ ವಿವಿಧ ಮಜಲುಗಳನ್ನು ಕೈಗೆತ್ತಿಕೊಂಡು ಆ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿ ಚಿತ್ರ ಸಿದ್ಧ ಪಡಿಸುವುದೇ ವರ್ಮಾ ಮರ್ಮ. ಯಂಡಮೂರಿ ವೀರೇಂದ್ರನಾಥ್ ವಾಮಾಚಾರದ ಕುರಿತು ಬರೆದ ‘ತುಳಸಿ’ ಮತ್ತು ‘ತುಳಸೀದಳ’ ಕಾದಂಬರಿಗಳನ್ನು ನೀವು ಓದಿರಬಹುದು, ಅದರಂದಲೇ ವರ್ಮಾ ಕೂಡ ಪ್ರಭಾವಿತರಾಗಿ ಈ ಚಿತ್ರ ಸಿದ್ಧಪಡಿಸಿದ್ದಾರೆ.
ಇದೊಂದು ಅತ್ಯುತ್ತಮ ಚಿತ್ರ ಎನ್ನಲಾಗದು. ಆದರೆ ಅವರ ಪ್ರಯತ್ನಕ್ಕೆ ಶಾಭಾಷ್ ಎನ್ನದಿರಲೂ ಆಗದು.

ಹಿಂದೆ ‘ಕೌನ್’, ‘ಡರ್ನಾ ಮನಾ ಹೈ’ ಮುಂತಾದ ಒಳ್ಳೆಯ ಹಾರರ್‍ ಚಿತ್ರ ಕೊಟ್ಟವರು ಆರ್‍ಜೀವಿ. ಅದೇ ರೀತಿ ಭೂತ್, ಡರ್ನಾ ಜರೂರಿ ಹೈ ಮುಂತಾದ ಡಬ್ಬಾ ಚಿತ್ರಗಳನ್ನೂ ಕೊಟ್ಟವರೇ.

ಮನೆಯ ಚಿಕ್ಕ ಪುಟ್ಟ ವಸ್ತುಗಳನ್ನೇ ಎದ್ದು ಕಾಣುವಂತೆ ಫೋಕಸ್ ಆಗುತ್ತಾ, ಅನೂಹ್ಯ ಕೋನಗಳಿಂದ ಸೆರೆ ಹಿಡಿಯುವ ಕ್ಯಾಮೆರಾ ವರ್ಕ್ ಸೂಪರ್‍. ಮರದ ಮೇಲೆ ಕೂತಿರುವ ಕಾಗೆ, ಚರಂಡಿಯೊಳಗೆ ಅವಿತ ಕಪ್ಪು ಬೆಕ್ಕು ಕೂಡಾ ಕ್ಯಾಮೆರಾ ಕಣ್ಣಿಂದ ತಪ್ಪಿಸಿಕೊಂಡಿಲ್ಲ! ಆದರೆ ಕೆಲವೆಡೆ ಅನಗತ್ಯ ಎನ್ನುವಷ್ಟು ಕರ್ಕಶ ಹಿನ್ನೆಲೆ ಸಂಗೀತ.

ಸುದೀಪ್ ಬಿಟ್ಟರೆ ನಟನೆಯಲ್ಲಿ ಮಿಂಚಿದ್ದು ಬಾಲಕಿ ರಕ್ಷಾ (ಅಹಸಾಸ್ ಚನ್ನಾ) ವಾಮಾಚಾರದ ಪ್ರಭಾವಕ್ಕೊಳಗಾಗುವ ಆಕೆಯ ನೋಟವೇ ಕಣ್ಣಿನಲ್ಲಿ ಉಳಿದುಬಿಡುತ್ತದೆ. ಉಳಿದಂತೆ ಮಾಂತ್ರಿಕ ಝಾಕಿರ್‍ ಹುಸೈನ್ ಎಂದಿನಂತೆ ತಮ್ಮ ಕೊಡುಗೆ ಸಲ್ಲಿಸಿದ್ದಾರೆ.
ಮೊದಲಾರ್ಧದಲ್ಲಿ ನಿಮ್ಮನ್ನು ಅಷ್ಟೇನು ಭಯಭೀತಗೊಳಿಸದಿದ್ದರೂ ಉತ್ತರಾರ್ಧದಲ್ಲಿ ಪೂರ್ತಿಯಾಗಿ ವಾಮಾಚಾರದ ಲೋಕ ಆವರಿಸಿಬಿಡುತ್ತದೆ. ಆದರೆ ವರ್ಮಾ ಹೇಳುವಷ್ಟೇನೂ ಹಾರರ್‍ ಅಂಶಗಳು ಇಲ್ಲಿಲ್ಲ.
ಕೊನೆ ಮಾತು: ನಿರೀಕ್ಷೆ ಇಟ್ಟು ಕೊಂಡು ವರ್ಮಾ ಸಿನಿಮಾ ನೋಡಬೇಡಿ. ಹಾಗೇ ಸುಮ್ಮನೆ ಡಿಫರೆಂಟ್ ಅನುಭವಕ್ಕಾಗಿ ನೋಡಿ!
(ಫೂಂಕ್ ಹಿಂದಿ ಪದದ ಅರ್ಥ ಬಾಯಿಯಿಂದ ಗಾಳಿ ಊದುವುದು)

31.8.08

ಸಿಯಾಚಿನ್ ಡೈರಿ

ಶೀತ ಗಟ್ಟಿಯಾಗಿ ಹಿಮಾಲಯದ ನದಿ ಧಾರೆಗಳೆಲ್ಲ ಕೆಳಗೆ ಹರಿಯುವುದೋ ಬೇಡವೋ ಎಂಬಂತೆ ನಿಧಾನವಾಗಿ ಸಾಗುತ್ತಿದ್ದರೆ ಹಿಮಾಚ್ಛಾದಿತ ಗಿರಿಶಿಖರಗಳೂ ಇನ್ನೂ ಚಂದ್ರನ ನೆನಪಿಂದ ಹೊರಗೆ ಬಂದಿಲ್ಲ...
ಶಿಖರಗಳ ತುದಿಯಿಂದ ಸ್ವಲ್ಪ ಕೆಳಗೆ ಕೆಳಗೆ ವಿಶಾಲ ಭರತಖಂಡದವರು ಯಾವಾಗಲಾದೊಮ್ಮೆ ಮಾತ್ರ ನೆನಪಿಸಿಕೊಳ್ಳುವ ಕೆಲ ನತದೃಷ್ಟರ ಬಂಕರ್‍ ಇದೆ.

ಅದು ಸಿಯಾಚಿನ್. ವಿಶ್ವದ ಅತೀ ಎತ್ತರದ ಯುದ್ಧಭೂಮಿ...

ಎಂಟು ಮಂದಿ ಇರಬಹುದಾದ ಬಂಕರಿನಲ್ಲಿ ಸರಿರಾತ್ರಿ ವರೆಗೂ ದೂರದಲ್ಲಿ ಸುರಿಯುವ ಮಂಜಿನ ತೆರೆಯಲ್ಲೇಲ್ಲೋ ಇದೆ ಎಂಬಂತೆ ಭಾಸವಾಗುವ ಕಾಲ್ಪನಿಕ ಗಡಿಯೊಂದರ ಮೇಲೆ ಕಣ್ಣಿಟ್ಟು ಸುಸ್ತಾದ ಮಂದಿ ಪಾಳಿ ಮುಗಿಸಿ ಸ್ಲೀಪಿಂಗ್ ಬ್ಯಾಗ್ ಒಳಗೆ ತೂರಿಕೊಂಡಿದ್ದಾರೆ. ಜಮ್ಮುಕಾಶ್ಮೀರ ರಾಷ್ಟ್ರೀಯ ರೈಫಲ್ಸ್‌ನ ಲೆಫ್ಟಿನೆಂಟ್ ಶರ್ಮಾ ನಾಯಕತ್ವದ ಸೆಕ್ಷನ್ ಅದು. ಇಬ್ಬರು ಸೈನಿಕರು ಅದಾಗಲೇ ಮಷಿನ್ ಗನ್‌ಗಳ ಹಿಂದೆ ವಿಗ್ರಹಗಳಂತೆ ಕೂತಿದ್ದಾರೆ. ಬಂಕರಿನ ಗೋಡೆಯಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ನಗುತ್ತಿದ್ದಾಳೆ.

ವಾರದ ಹಿಂದೆಯಷ್ಟೇ ಹೊಸದಾಗಿ ಸಿಯಾಚಿನ್ನಿಗೆ ಕಾಲಿರಿಸಿದ ಸೈನಿಕರಿವರು. ಇನ್ನು ೯೦ ದಿನಗಳ ಕಾಲ ಇಲ್ಲಿಬೇಕಿದೆ. ಅದರೊಳಗೆ ಸಿಯಾಚಿನ್ನಿನ ವಿಚಿತ್ರ, ಕಠಿಣ ಪರಿಸ್ಥಿತಿಗಳಿಗೆ ಎಷ್ಟು ಮಂದಿ ಮರಗಟ್ಟಿ ಹೋಗುತ್ತಾರೋ, ಗಡಿಯಾಚೆಯಿಂದ ಮಂಜಿನೆಡೆ ಹಾರಿ ಬರುವ ಮೋರ್ಟಾರ್‍, ರೈಫಲ್ ಗುಂಡುಗಳಿಗೆ ಬಲಿಯಾಗುತ್ತಾರೋ ತಿಳಿಯದು. ಸೈನಿಕ ತೇಜ್ ಬಹಾದ್ದೂರನ ಕೈಯಲ್ಲಿ ರೈಫಲ್ ಹಿಡಿದರೂ ಮನಸ್ಸು ತನ್ನೂರು ಶ್ರೀನಗರಕ್ಕೆ ಹಾರುತ್ತದೆ.

ಇನ್ನೋರ್ವ ಸೈನಿಕ ಆಸೀಫನಿಗೆ ಎರಡು ದಿನಗಳಿಂದ ಕಾಲು ಜೋಮು ಬಂದಿದೆ. ಸರಿಯಾಗಿ ನಡೆಯದಂತಹ ಪರಿಸ್ಥಿತಿ..

ಸು.....ಶ್‌ಶ್‌ ಎಂದು ಒಂದೆ ಸವನೆ ಬೀಸುತ್ತಲೇ ಇರುವ ಮಂಜುಗಾಳಿ...ಉಸಿರಾಡಲು ಆಮ್ಲಜನಕದ ಕೊರತೆ..ಸದಾ ಶೂನ್ಯಕ್ಕಿಂತಲೂ ಕೆಳಗೆ ಇರುವ ಉಷ್ಣತೆ...ಆಗಾಗ ಹಿಮಪಾತ..ಇವೆಲ್ಲದರ ನಡುವೆ ಇತರ ಸಹೋದ್ಯೋಗಿಗಳಿದ್ದರೂ ಕಾಡುವ ಒಂಟಿತನಕ್ಕೆ ಆಸೀಫ ಬಲಿಯಾದಂತಿದೆ. ಆದರೂ ಅದು ಕರ್ತವ್ಯಕ್ಕೆ ಅಡ್ಡಿಯಾಗಿಲ್ಲ. ಆದರೆ ಕುಸಿಯುತ್ತಲೇ ಇರುವ ಆತನ ಬಗ್ಗೆ ಬೇಸ್ ಕ್ಯಾಂಪ್‌ಗೆ ಸ್ಯಾಟಲೈಟ್ ಫೋನ್‌ನಲ್ಲಿ ಸುದ್ದಿ ಮುಟ್ಟಿಸಿದ್ದಾನೆ ಲೆಫ್ಟಿನೆಂಟ್ ಶರ್ಮಾ.

ಕಾರಕೋರಂ ರೇಂಜಲ್ಲಿ ಭಾರೀ ಹಿಮಪಾತವಾಗುತ್ತಿದೆ, ಈಗಲೇ ಹೆಲಿಕಾಪ್ಟರ್‍ ಕಳಿಸಲಾಗದು, ಮುಂದಿನವಾರ ಸೈನಿಕರ ಮತ್ತು ಮಷಿನ್‌ಗನ್‌ಗಳ ಆಹಾರ, ಬಟ್ಟೆಬರೆ ಮತ್ತು ಕೆರೋಸಿನ್ ಹೊತ್ತು ಬರುವ ಆರ್ಮಿ ಹೆಲಿಕಾಪ್ಟರ್‍ನಲ್ಲಿ ಆತನನ್ನು ಕಳುಹಿಸಿ ಎಂಬ ಉತ್ತರ ಬೇಸ್ ಕ್ಯಾಂಪ್‌ನಿಂದ.

ಯಾವುದೋ ಹಳೆ ಹಾಡು ಗುನುಗುತ್ತಲೇ ಹಿಮ ಕರಗಿಸಿ ಆಗತಾನೇ ಮಾಡಿದ ಮಸಾಲಾ ಚಾ ಕಪ್ಪಿನೊಂದಿಗೆ ಬಂದ ಸಂಜಯ ಸಿಂಗ್ ‘ಸಾಬ್ ಮುಂದೆ ಇರುವ ಪಾಕಿಗಳು ಟೀ ಕುಡಿದಿರಬಹುದೇ’ ಕುಚೋದ್ಯ ಮಾಡಿದ. ‘ಹೋಗಿ ನೋಡು, ಎದ್ದಿಲ್ಲವಾದರೆ ಎಬ್ಬಿಸಿ ಹಾಗೇ ಟೀ ಕೊಟ್ಟು ಬಾ’ ಅಷ್ಟೇ ಕುಚೋದ್ಯದ ದನಿಯಲ್ಲಿ ಮೆಲುವಾಗಿ ಹೇಳಿದ.

‘ಸೂರ್ಯ ಕಿರಣಗಳು ಮೂಡತೊಡಗಿವೆ. ಇಂದು ಆಕಾಶ ಶುಭ್ರ ಇದೆ’ ರಾಮ್‌ ಸಿಂಗ್ ಉತ್ಸಾಹದಲ್ಲಿ ಹೇಳಿದ.

ಅಲ್ಲಿ ಯಾರೂ ತಮ್ಮ ಊರಿನ ಬಗ್ಗೆ ಮಾತಾಡುವುದೇ ಇಲ್ಲ. ಹಾಗಾಗಿ ಬೇರೇನೂ ಮಾತನಾಡಲು ಉಳಿದಿಲ್ಲ. ಹೀಗೇ ಒಮ್ಮೊಮ್ಮೆ ಕುಚೋದ್ಯದ ಮೂಲಕ ಜೀವನೋತ್ಸಾಹ ಇನ್ನೂ ಇದೆಯೇ ಎಂದು ತಮ್ಮನ್ನೇ ಪರೀಕ್ಷಿಸಿಕೊಳ್ಳುತ್ತಾರೆ!


ವಾರ ಕಳೆದಿದೆ, ಆಸೀಫನ ಸ್ಥಿತಿ ಬಿಗಡಾಯಿಸಿದೆ...ಪಾಕಿಸ್ಥಾನೀಯರಿಂದ ಸರಿಯಾಗಿ ಎಂಟು ಬಾರಿ ಗುಂಡು ಹಾರಿದೆ. ಗುರಿ ಎಲ್ಲಿಗೆ ಎಂದು ಬಹುಷಃ ಅವರಿಗೂ ಗೊತ್ತಿಲ್ಲ..ಅಷ್ಟರ ಮಟ್ಟಿಗೆ ಹಿಮಪಾತವಾಗುತ್ತಿದೆ. ಅದೋ ಮೆಲ್ಲಗೆ ಶಿಖರಗಳ ಮರೆಯಿಂದ ಹಾರಿ ಬಂತು ಹೆಲಿಕಾಪ್ಟರ್‍.

ಆಸೀಫ ಸ್ಟ್ರೆಚರ್‌ನಲ್ಲಿ ಹೆಲಿಕಾಪ್ಟರ್‍ ಒಳಗೆ ಹೋಗುತ್ತಾನೆ. ಆಹಾರದ ರಾಶಿ, ಮದ್ದುಗುಂಡಿನ ಬಾಕ್ಸ್ ಮುಂದಿನ ತಿಂಗಳಿಗಾಗುವಷ್ಟು ಬಂದಿದೆ. ಎರಡು ಕಿಮೀ ಮುಂದೆ ಇರುವ ಇನ್ನೊಂದು ಬಂಕರಿಗೂ ಹೋಗಬೇಕಿದೆ.

ಹೇಗಿದೆ ಕಾಶ್ಮೀರ? ಹೆಲಿಕಾಪ್ಟರ್‍ ಪೈಲಟ್‌ಗೆ ಕೇಳಿದ ಲೆಫ್ಟಿನೆಂಟ್ ಶರ್ಮಾ.

ಏನು ಹೇಳೋದು ಸಾಬ್..ಒಂದು ವಾರದಿಂದ ಕಾಶ್ಮೀರ ಪ್ರತ್ಯೇಕತೆ ಕೂಗು. ಚಾನೆಲ್ಲೊಂದರಲ್ಲಿ ಅನೇಕರು ಹೇಳುತ್ತಿದ್ದರು ಕಾಶ್ಮೀರವನ್ನ ಪಾಕಿಗಳಿಗೆ ಕೊಡೋದೇ ಒಳ್ಳೇದಂತೆ. ಒಂದು ವೇಳೆ ಅವರಿಗೆ ಕೊಡೋದಾದ್ರೆ ನೀವಿಲ್ಲಿರೋದ್ಯಾಕೆ ಸಾಬ್ ಪ್ರಶ್ನಿಸಿದ ಪೈಲಟ್.

‘ಹಹ್ಹಹ್ಹ...ನಾವೆಲ್ಲಾ ಹಾಗಾದರೆ ನಿರುದ್ಯೋಗಿಗಳಾಗುತ್ತೇವೆ’ ತಾತ್ಸಾರ ಬೆರೆತ ನಗೆಯೊಂದಿಗೆ ಹೇಳಿ ಬಂಕರ್‍ಗೆ ಮರಳಿದ ಶರ್ಮಾ.

ದೂರದಲ್ಲಿ ನಾಲ್ಕು ಚುಕ್ಕಿಗಳು ಹರಿದಾಡಿದಂತೆ ಅನಿಸಿತು. ಹೈಪವರ್‍ ಬೈನಾಕ್ಯುಲರ್‍ನಲ್ಲಿ ವೀಕ್ಷಿಸಿದರೆ ಧರ್ಮಯುದ್ಧಕ್ಕೆ ಹೊರಟ ನಾಲ್ಕು ಮಂದಿ. ಬೆನ್ನಲ್ಲಿ ಎಕೆ ರೈಫಲ್, ರಾಕೆಟ್ ಲಾಂಚರ್‍. ಕಣಿವೆಯೊಳಗೆ ಇಳಿಯಲು ಹೊರಟಂತಿದೆ.

ರಾಮ್ ಸಿಂಗ್ ಎಲ್ಲಿ ರೈಫಲ್, ಇಲ್ಲಿ ಕೊಡು ಕಾಶ್ಮೀರ ಕೇಳೋರು ಬಂದಿದ್ದಾರೆ, ಅವರಿಗೆ ವೆಲ್ ಕಂ ಹೇಳಬೇಕಲ್ವೇ ಅದೇ ನಗೆಯೊಂದಿಗೆ ರೈಫಲ್ ಎತ್ತಿಕೊಂಡ ಶರ್ಮಾ.....

ಶಿಖರಗಳಲ್ಲಿ ಮತ್ತೆ ಗುಂಡುಗಳ ಮೊರೆತ......


(ಭಾರತದ ಮುಕುಟ ಕಾಶ್ಮೀರ ಈಗ ಪ್ರತ್ಯೇಕತಾವಾದದ ಕೆಂಡದಲ್ಲಿದೆ, ಇತ್ತೀಚೆಗಿನ ಬೆಳವಣಿಗೆ ಗಮನಿಸುತ್ತಿದ್ದಾಗ ಮನದಲ್ಲಿ ಹುಟ್ಟಿದ ಕೆಲ ಪ್ರಶ್ನೆ, ಭಾವನೆ ಈ ಕಥೆಗೆ ಪ್ರೇರಣೆ)

8.8.08

ಭಾವಚಿತ್ರದ ನೋವು ನಲಿವು


ಹಳೆಮನೆಯ

ಮೂಲೆಯಲ್ಲಿ

ಕಪ್ಪಾಗುತ್ತಿರುವ

ಹಿರಿಯಜ್ಜನ
ಭಾವಚಿತ್ರಕ್ಕೆ
ಈಗ ಆಸರೆ
ತುಕ್ಕು ಹಿಡಿದ
ಮೊಳೆ ಮಾತ್ರ!


**********
ಸುಂದರ ಚೌಕಟ್ಟಿನ
ಭಾವಚಿತ್ರದಲ್ಲಿರುವ
ಅಜ್ಜನ ಕಂಗಳಲ್ಲಿ
ಸಾವಿರಾರು ಕಥೆಗಳು....
ಆದರೆ
ಕೇಳಿಸಿಕೊಳ್ಳಲು ಕಿವಿಗಳಿಲ್ಲ!

********

ಕಡುಬೇಸಗೆಯಲ್ಲಿ
ದಾರಿತಪ್ಪಿ
ಮನೆಯೊಳಗೆ ಬಂದ
ದುಂಬಿಯೊಂದು
ಚೌಕಟ್ಟಿನ ಚಿತ್ರದೊಳಗಿರುವ
ಗುಲಾಬಿ ಸುತ್ತ
ಸುತ್ತುತ್ತಿದೆ...
ಚಿತ್ರಕಾರನ
ಬದುಕೀಗ ಪಾವನ!

*******
ಭಾವಚಿತ್ರದಲ್ಲಿ
ಬಂಧಿಯಾದ
ಹದ್ದನ್ನು ನೋಡಿ
ಗಡಿಯಾರಗೂಡಿನ
ಗುಬ್ಬಕ್ಕನಿಗೆ
ದಿನವೂ ದು:ಖ

3.8.08

ಮಣ್ಣಿನ ಮಕ್ಕಳು ನಾವೆಲ್ಲಾ....

ನಮಗೆ ಸತ್ವ ನೀಡುವ ಮಣ್ಣಲ್ಲಿ, ಪ್ರಕೃತಿಯ ಮಡಿಲಲ್ಲಿ ಸೇರಿಕೊಳ್ಳುವುದೆಂದರೆ ಎಂತಹ ಸೊಗಸು!










ಮಣ್ಣಿನ ಮಕ್ಕಳು ನಾವೆಲ್ಲಾ....
ಈ ಮಾತು ನೆನಪಾಗಬಹುದು ಈ ಚಿತ್ರಗಳನ್ನು ನೋಡಿದರೆ...ಯಾವುದೋ ಹಳ್ಳಿಗಾಡಿನ ದೃಶ್ಯದಂತೆ ಕಂಡೀತು ಕೂಡಾ.
ಮಂಗಳೂರೆಂಬುದು ಮಾಯಾನಗರಿಯಾಗುತ್ತಿದ್ದರೂ ಅದರ ಹೊರವಲಯದಲ್ಲಿ ಇನ್ನೂ ಹಸಿರು ಹೊದ್ದ ತಾಣಗಳು ಕೆಲವಾದರೂ ಉಳಿದುಕೊಂಡಿರುವ ಕಾರಣ ಈ ಚಿತ್ರ ನಿಮ್ಮ ಮುಂದಿವೆ.

ಬೊಂಡಂತಿಲ ಎಂಬಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉತ್ಸಾಹಿ ಯುವಕರು ಸೇರಿಕೊಂಡು ಪ್ರತಿ ವರ್ಷ ಇಡೀ ದಿನ ಕೆಸರಲ್ಲಿ ಕಳೆಯುತ್ತಾರೆ.

ಹಾಗೆಂದ ಮಾತ್ರಕ್ಕೆ ಮೂಗು ಮುರಿಯಬೇಡಿ. ಕ್ರಮಬದ್ಧವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಗ್ರಾಮೀಣ ಕ್ರೀಡೆಗಳಾದ ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ, ಕೆಸರಿನಲ್ಲಿ ಚೆಂಡಾಟದ ಸ್ಪರ್ಧೆ, ನೇಜಿ ನಡುವ ಸ್ಪರ್ಧೆ ನಡೆಯುತ್ತದೆ. ಮಹಿಳೆಯರಿಗಾಗಿ ಪಾಡ್ದನ ಹೇಳುವ ಸ್ಪರ್ಧೆ ಇದೆ.

ಗ್ರಾಮಾಭಿವೃದ್ಧಿ ಯೋಜನೆಯ ‘ಯಶಸ್ವಿನಿ’ಯರು ತುಳು ನಾಡಿನ ಪಾರಂಪರಿಕ ಕಡುಬು(ಅಡ್ಯೆ) ತಯಾರಿಸುತ್ತಾರೆ, ಅದರ ಪ್ರದರ್ಶನ ಇರುತ್ತದೆ.
ಈ ಭಾನುವಾರ ಮೂರನೇ ವರ್ಷದ ಕಾರ್ಯಕ್ರಮವಿತ್ತು. ಎಂದಿನಂತೆ ಭರ್ಜರಿ ಜನ. ಎಂದಿನಂತೆ ಸ್ಪರ್ಧೆಗಳು, ಸ್ಪರ್ಧಿಗಳು. ಮಹಿಳೆಯರು, ಮಕ್ಕಳೂ ದೊಡ್ಡಸಂಖ್ಯೆಯಲ್ಲಿದ್ದರೆ ನೋಡಲೂ ಸಾಕಷ್ಟು ಪ್ರೇಕ್ಷಕರು. ಮೊದಲ ವರ್ಷ ಈ ಹಬ್ಬಕ್ಕೆ ಆಟಿಡೊಂಜಿ ದಿನ ಎಂಬ ಹೆಸರು ಕೊಟ್ಟಿದ್ದರೆ, ಕಳೆದ ವರ್ಷ ಕೆಸರಡೊಂಜಿ ದಿನ ಎಂಬ ನಾಮಕರಣ. ಈ ಬಾರಿ ಗ್ರಾಮೊದ ಗೌಜಿ!
ಹೆಚ್ಚೇನೂ ಕೊರೆಯುವುದಿಲ್ಲ ಇಲ್ಲಿ....ಈ ಚಿತ್ರಗಳನ್ನು ನೋಡಿದರೆ ನಿಮಗೆ ಒಂದಿಷ್ಟಾದರೂ ಮಾಹಿತಿ ಸಿಗಬಹುದು.

25.7.08

ಒಂದು ಆತ್ಮಹತ್ಯೆ ಪ್ರಸಂಗ


ಆತ್ಮಹತ್ಯೆಯೇ ಲೇಸು....
ರಾತ್ರಿ ಇಡೀ ನಿದ್ದೆಯಿಲ್ಲದೆ ಮಗ್ಗುಲು ಬದಲಾಯಿಸಿ ಕಳೆದ ಆತ ಬೆಳಗ್ಗೆ ಕೋಳಿ ಕೂಗುವ ಹೊತ್ತಿಗೆ ಹಾಗೆಂದು ನಿರ್ಧರಿಸಿಯಾಗಿತ್ತು.
ಚಳಿಗಾಗಿ ಹೊದ್ದಿದ್ದ ಕಂಬಳಿ ಒಳಗೇ ಕಾಡುತ್ತಿದ್ದ ಯೋಚನೆಗಳು ಇರಿಯುವ ಈಟಿಯಂತೆ ಭಾಸವಾಗಿ ಬಲವಂತವಾಗಿಯೇ ಆತ ಎದ್ದು ಮನೆಯಿಂದ ಹೊರನಡೆದ.
ಬೆಳಕು ಹರಿದಿತ್ತು, ಪತ್ನಿ ಅಡುಗೆ ಕೋಣೆಯಿಂದ ಕೆಮ್ಮಿದಂತೆ ಕೇಳಿತು, ರೋಗಿಷ್ಟ ನಾಯಿ ಬಚ್ಚಲು ಮನೆಯ ಒಲೆಯ ಬೂದಿಯಲ್ಲಿ ಮೈಮರೆತು ಮಲಗಿತ್ತು, ಅಲ್ಲೊಮ್ಮೆ ದೃಷ್ಟಿ ಹಾಯಿಸಿದಾತ ಮನೆಯ ಮುಂದಿನ ಬೇಲಿ ದಾಟಿ ಸರಸರನೆ ಸಾಗಿದ.

ಮೈಲಿ ದೂರದಲ್ಲೇ ಭೋರ್ಗರೆಯುತ್ತಿದೆ ಸಮುದ್ರ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಅಬ್ಬರವಿದ್ದೂ ಇಲ್ಲದಂತೆ ಮಲಗಿದ ಹುಲಿಯಂತೆ ಅದು ಆತನಿಗೆ ಕಾಣಿಸಿತು. ಸಮುದ್ರ ತೀರದ ಎತ್ತರದ ಬಂಡೆಯೊಂದರ ಅಂಚಿನಲ್ಲಿ ಬಂದು ಕುಳಿತು ಬಿಟ್ಟ.
ಅಲ್ಲಿಂದ ಹಾರಿ ಸತ್ತವರು ಹಲವರು. ಅಂಚಿಗೆ ಯಾರೂ ಹೋಗಬಾರದು, ಅಪಾಯಕಾರಿ ಜಾಗ ಎಂಬ ಹಳೆಯ ಮಾಸಲು ಫಲಕ ತನ್ನನ್ನು ನೋಡಿ ಅಣಕಿಸಿದಂತಾಯಿತು.
ಏನಿದೆ ಬದುಕಲ್ಲಿ?
೪೦ ವರ್ಷದ ಬದುಕಿನ ಹೋರಾಟದಲ್ಲಿ ಸೋತು ಸುಣ್ಣವಾದವನು. ಗದ್ದೆ ಬೇಸಾಯ ಮಾಡಿ ಸುಖವಿಲ್ಲ ಎಂದು ಅಡಕೆ ಹಾಕಿ, ಆ ಮಣ್ಣಿಗೆ ಅಡಕೆ ಒಗ್ಗಿಕೊಳ್ಳದೆ ಪೀಚಾಗಿ ಹೋದದ್ದು, ಮಾಡಿದ ಸಾಲ ಮುಗಿಸಲಾಗದೆ ತೋಟದಿಂದ ಬರುವ ಅಲ್ಪಸ್ವಲ್ಪ ಆದಾಯವೆಲ್ಲ ಬಡ್ಡಿಗೇ ಹೋಗುವುದು, ಮನೆಯಲ್ಲಿ ಪತ್ನಿಯೂ ಏನಾದರೂ ಚುಚ್ಚಿ ಮಾತನಾಡುವುದು.....ಇಷ್ಟೆಲ್ಲದರ ಮಧ್ಯೆ ಈಗ ಕೈಗಾರಿಕಾ ವಲಯ ಯೋಜನೆ ಆತನಿಗೆ ಗರಬಡಿಸಿದೆ.
ಭೂಮಿ ಉಳಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಊರಿನ ಮೇಷ್ಟರು ಹೇಳಿದ್ದಾಗಿದೆ. ಸಿಗುವ ಪರಿಹಾರದಲ್ಲಿ ಇನ್ನೊಂದು ತನಗೆ ಬೇಕಿರುವ ಭೂಮಿ ಖರೀದಿ ಆಗದ ಮಾತು.
ಇವೆಲ್ಲ ನೋಡಿಯೂ ಮನೆಯಲ್ಲಿ ಮುದುಕಿ ತಾಯಿ, ಪತ್ನಿ ಇಬ್ಬರೂ ಬೆದರಿಲ್ಲ. ಅದೇ ಆತನಿಗೆ ಒಗಟು. ಯೋಜನೆ ವಿರೋಧಿ ಆಂದೋಲನದಲ್ಲಿ ಪಾಲ್ಗೊಂಡವರೇ ಅವರು. ಆದರೂ ಅವರಿಗೆ ಇರುವ ಧೈರ್ಯ ತನಗೇಕಿಲ್ಲ ಅನಿಸುವುದಿದೆ. ಏನಿದ್ದರೂ ಸಾಯುವುದೇ ಲೇಸು ಎನ್ನುತ್ತಾ ಎದ್ದು ಸಮುದ್ರ ನೋಡಿದ.
ಒಂದು ವೇಳೆ ಹಾರಿದರೆ ಏನಾಗಬಹುದು. ಇದು ವರೆಗೆ ಹಾರಿದವರಲ್ಲಿ ಎಲ್ಲರೂ ಸತ್ತಿದ್ದಾರೆ ಅನ್ನೋದು ಅವನಿಗೆ ಗೊತ್ತು.
ಹಾರುವ ವೇಗ ಹೆಚ್ಚು ಕಡಮೆ ಆದರೆ ಕೆಳಗಿರುವ ಬಂಡೆಗೆ ತಲೆ ಬಡಿದು ಚೂರಾಗಬಹುದು, ಇಲ್ಲವಾದರೆ ನೇರ ಸಮುದ್ರದ ನೀರಿಗೇ ಬೀಳಬಹುದು, ತಿಮಿಂಗಿಲವೋ ಷಾರ್ಕ್ ಮೀನೋ ಇದ್ದರೆ ನೇರವಾಗಿ ಅವುಗಳ ಹೊಟ್ಟೆಗೇ. ಇಲ್ಲವಾದರೆ ಉಪ್ಪು ನೀರು ಪುಪ್ಪುಸ ಸೇರಿ ಉಸಿರುಗಟ್ಟುತ್ತದೆ. ಇವೆಲ್ಲ ಆಲೋಚಿಸುವಾಗ ಮೈ ಬೆವರಿತು, ಮತ್ತೆ ಹಿಂದೆ ಕುಳಿತ.
ಪ್ಚ್! ಇಷ್ಟೇ ಕಾರಣಕ್ಕೆ ಸಾಯುವುದೇಕೆ ಅನ್ನಿಸತೊಡಗಿತು. ಪಿರಿಪಿರಿ ಎಂದರೂ ಮಡದಿ ಪ್ರೀತಿಸುತ್ತಾಳೆ, ತಾಯಿ ಬೆಂಬಲವೂ ಇದೆ, ಪರಿಹಾರ ಸಿಕ್ಕ ಬಳಿಕ ದೂರ ಊರಲ್ಲಿ ಚಿ‌ಕ್ಕದಾದರೂ ಭೂಮಿ ಖರೀದಿಸಿ ಬದುಕುವುದು ಸಾಧ್ಯ ಅನ್ನಿಸಿತು.
ಸಮುದ್ರದತ್ತ ನೋಡುತ್ತಿದ್ದವನು ಈಗ ಸಮುದ್ರಕ್ಕೆ ಬೆನ್ನು ಹಾಕಿದ. ನೀಲಿ ಆಕಾಶ, ದೂರದ ಲೈಟ್ ಹೌಸ್, ಪಕ್ಕದ ದೇವಸ್ಥಾನದ ಗಂಟೆ ಸದ್ದು, ಈಗ ಎಲ್ಲವೂ ಸುಂದರವಾಗಿ ಕಾಣತೊಡಗಿತು.....
ಮೈ ಮರೆತಂತೆ ಆಯಿತು.....
ಕುಳಿತಿದ್ದ ಬಂಡೆ ತುಸು ಜರುಗಿದಂತಾಯಿತು....
ಮತ್ತೆ ಕತ್ತಲೆ.....ಬೆಳಕೇ ಕಾಣದತ್ತ ಪಯಣ ಮಾಡಿದಂತೆ.ಖುಷಿಯೂ ಇಲ್ಲದ ದುಃಖವೂ ಇಲ್ಲದ ಊರಿಗೆ ಹೋದಂತೆ...

24.7.08

ಅನುಬಂಧ

ಅಣುರೇಣು
ತಿಣುಕಾಡುತಲಿದ್ದರು
ಬ್ರಹ್ಮಾಂಡ ಬಿದ್ದು ಹೋದರೂ ಸರಿ
ನಮಗವರು ಬೇಕು
ನಮ್ಮ ಜತೆ ಬರುವವರು ಬನ್ನಿ
ಹೋದವರು ಹೋಗಲಿ ಬಿಡಿ

ಶರಧಿಯಾಚೆಗಿನ ಹೊಸ
ಗೆಳೆಯರ ಅನುಬಂಧ
ಚಿಪ್ಪುಗಟ್ಟುತ್ತಿದೆ ಈಗತಾನೇ
ಊರೊಳಗಿನ ದೀಪಗಳೂ
ಬೆಳಗಲಿವೆ ನೋಡಿ!

ನೀವು ನಿನ್ನೆಯ ಮಿತ್ರರು
ನಿನ್ನೆ ನಿನ್ನೆಗೆ ಇಂದು ಇಂದಿಗೆ
ನಿಮ್ಮ ಸ್ನೇಹದ ಬಲ
ಅಳೆದಾಗಿದೆ ಬಿಡಿ
ಸದ್ಯಕ್ಕೆ ನಿಮ್ಮದು
ಮುಗಿದ ಅಧ್ಯಾಯ
ಹೊಸ ಅನುಬಂಧಕ್ಕೆ ಮುನ್ನುಡಿ

6.7.08

ಗೆಲ್ಲು ಚಿಗುರು ಹಾಗೂ ಹನಿ


ಗಾಳಿಮಳೆಗೆ
ಹಳೆಗೆಲ್ಲು
ಮುರಿದು
ಬೀಳುವಾಗ
ಮರ
ಕಣ್ಣೀರಿಳಿಸಿತು
ಮರದ ತೆಕ್ಕೆಯಲ್ಲಿ
ಮೂಡಿದ
ಹೊಸ ಚಿಗುರು
ಮರದ ಕಣ್ಣೀರೊರೆಸಿತು!

***********

ತಲೆಮೇಲೆ
ಗಿರಗಿರ ಸುತ್ತುವ
ಸೀಲಿಂಗ್ ಫ್ಯಾನು
ಮನೆಹಿಂದಿನ
ಹಳಿಯಲ್ಲಿ
ಶಬ್ದವೇದಿ ರೈಲು
ಹೈವೇಯಲ್ಲಿ
ಹರಿಹಾಯುವ
ಸೂಪರ್‍ ಫಾಸ್ಟ್
ಕಾರು

ಆ ದ ರೆ

ಹೃದಯಲ್ಲಿ
ಮಾತ್ರ
ನಿನ್ನ ಚಿತ್ರಗಳ
ಸ್ಲೋಮೋಶನ್
ಮೆರವಣಿಗೆ

********

ಗಾಯಕ ಈಗ
ಹಾಡಿದ್ದು ಹಾಡನ್ನಲ್ಲ
ಪ್ರೇಕ್ಷಕರಲ್ಲಿ ಹಲವರ
ಶೋಕವನ್ನು

2.7.08

ಮಂಗಳೂರಿನ ಮತ್ಸ್ಯಕನ್ಯೆ



ಇನ್ನು ಮಂಗಳೂರಿಗೆ ಪಿಕ್‌ನಿಕ್ ಬರುವವರು ದೇವಸ್ಥಾನ, ಬೀಚ್ ನೋಡಿ ಇಷ್ಟೇನಾ ಎಂದು ಮೂಗುಮುರಿದು ಹೋಗಬೇಕಿಲ್ಲ...
ಮಂಗಳೂರಿಗೆ ವರವಾಗಿರುವ ಹಿನ್ನೀರುಗಳು ಸೃಷ್ಟಿಸಿದ ಚಿಕ್ಕ ಕುದ್ರುಗಳು ಅನೇಕ ಇವೆ...ಇಂತಹ ಕುದುರು ಅಥವಾ ದ್ವೀಪಗಳೂ ಪ್ರವಾಸಿಗರನ್ನು ಆಕರ್ಷಿಸಬಹುದು.
ನೇತ್ರಾವತಿ ನದಿಯ ಕೊಟ್ಟಾರಿ ಕುದ್ರು, ಉಳಿಯ ಪಾವೂರು ಹೀಗೆ ಅನೇಕ ಕುದ್ರುಗಳಿವೆ. ಕೆಲವದರಲ್ಲಿ ಜನವಸತಿಯೂ ಇದೆ. ಆದರೆ ಹೋಗಬೇಕಾದರೆ ದೋಣಿ ಬೇಕೇ ಬೇಕು. ಸರ್ಕಾರ ಇಂತಹ ದ್ವೀಪಗಳನ್ನು ಪ್ರವಾಸಿ ಕೇಂದ್ರವಾಗಿಸುವ ಯೋಚನೆ ಹೊಂದಿದೆ.
ಹೀಗೆ ಸರ್ಕಾರ ಯೋಚನೆಯಲ್ಲಿ ತೊಡಗಿರುವಾಗಲೇ ಮಂಗಳೂರಿನ ಜಗದೀಶ್ ಬಂಗೇರ ಎಂಬವರು ಕಾರ್ಯೋನ್ಮುಖವಾಗಿದ್ದಾರೆ. ಗುರುಪುರ ನದಿ ಸೃಷ್ಟಿಸಿದ ಚಿಕ್ಕ ದ್ವೀಪವೊಂದನ್ನು ಲೀಸ್‌ಗೆ ಖರೀದಿಸಿ, ದ್ವೀಪ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.



ಗುರುಪುರ ನದಿ ಮಂಗಳೂರು ಹೊರವಲಯದ ಕುಳೂರು ಮೂಲಕ ಸಮುದ್ರದ ಬದಿಯಲ್ಲಿಯೇ ಹರಿಯುತ್ತಾ ಸಮುದ್ರವನ್ನು ಕುಚೋದ್ಯ ಮಾಡುತ್ತಾ ಮುಂದುವರಿದು ಹೊಯ್ಗೆಬಜಾರು ಬಳಿ ನೇತ್ರಾವತಿಯೊಂದಿಗೆ ಒಂದಾಗಿ ಬಳಿಕವೇ ಸಮುದ್ರ ಸೇರುತ್ತದೆ.


ಮಂಗಳೂರಿನ ಲೇಡಿಹಿಲ್ ಸರ್ಕಲಿಂದ ಸುಲ್ತಾನ ಬತ್ತೇರಿ ಬಳಿ ಹೋದರೆ ನಿಮಗೆ ಗುರುಪುರ ನದಿ ಕಾಣಿಸುತ್ತದೆ. ಇಲ್ಲಿಂದ ತಣ್ಣೀರುಬಾವಿ ವರೆಗೆ ಹೋಗಲು ಇಲ್ಲಿ ದೋಣಿ ಇದೆ. ಇಲ್ಲಿ ರೋಪ್‌ ವೇ ಮಾಡಬೇಕು ಎಂಬ ಸರ್ಕಾರದ ಪ್ರಸ್ತಾವನೆ ಹಾಗೇ ಮುರುಟಿ ಬಿದ್ದಿದೆ.


ನದಿಯೊಳಗೆ ಇಲ್ಲೇ ಕೆಲವು ಮೀಟರ್‍ನಲ್ಲಿದೆ ಬಂಗೇರರ ದ್ವೀಪ. ಇದಕ್ಕೆ ಮೆರ್ಮೈಡ್ ಐಲ್ಯಾಂಡ್ ಎಂಬ ಹೆಸರನ್ನೂ ಇರಿಸಿದ್ದಾರೆ. ಈ ದ್ವೀಪವನ್ನು ವಾರಾಂತ್ಯ ಪ್ರಶಾಂತ ಸ್ಥಳ ಬಯಸುವವರಿಗೆ ನೀಡುವುದಾಗಿ ಹೇಳುತ್ತಾರೆ. ಹಾಗೆಂದು ಇದನ್ನು ಹೆಚ್ಚು ಕಮರ್ಷಿಯಲ್ ಆಗಿ ಪರಿವರ್ತಿಸಲು ಅವರಿಗೆ ಮನಸ್ಸಿಲ್ಲ.



ಸುಮಾರು ೧.೫ ಎಕ್ರೆ ಇರುವ ಈ ದ್ವೀಪ ತುಂಬ ಮರಳು. ದ್ವೀಪ ತನ್ನ ಹರವನ್ನು ತಾನಾಗಿ ಹೆಚ್ಚಿಸಿಕೊಳ್ಳುವುದಕ್ಕೆಂದು ಅಂಚಿನಲ್ಲಿ ಗಾಳಿಸಸಿ, ಕಾಂಡ್ಲಾ ಸಸಿ ನಟ್ಟಿದ್ದಾರೆ. ಈ ದ್ವೀಪದಲ್ಲಿ ಕುಳಿತು ಪ್ರಶಾಂತವಾಗಿ ಹರಿಯುವ ನದಿ/ಹಿನ್ನೀರನ್ನು ನೋಡುವುದೇ ಆಹ್ಲಾದಕರ ಅನುಭವ.


ಮಂಗಳೂರಿನ ಹಳೆ ನೆನಪು ಸಾರುವ ಕೆಲವು ಹೆಂಚಿನ ಫ್ಯಾಕ್ಟರಿಗಳು, ರಿಪೇರಿಗೆಂದು ಭೂಮಿ ಮೇಲೇರಿ ನಿಂತ ದೋಣಿಗಳು, ಗಾಳಿಗೆ ತೊಯ್ದಾಡುವ ತೆಂಗಿನ ಮರಗಳು added attractions.


ಈಗ ಮಳೆಗಾಲವಾದ್ದರಿಂದ ದ್ವೀಪಕ್ಕೆ ಹೋಗುವುದು ತುಸು ಕಷ್ಟ. ಆದರೆ ಇನ್ನು ನಾಲ್ಕು ತಿಂಗಳಲ್ಲಿ ದ್ವೀಪವನ್ನು ಪೂರ್ಣವಾಗಿ ಸಿದ್ದಪಡಿಸುವುದಾಗಿ ಜಗದೀಶ್ ಬಂಗೇರ ಹೇಳುತ್ತಾರೆ. ಅವರ ಪ್ರಯತ್ನಕ್ಕೆ ಹ್ಯಾಟ್ಸಾಫ್ ಹೇಳಬಯಸುತ್ತೀರಾದರೆ ಇಲ್ಲಿದೆ ಅವರ ಮೊಬೈಲು ಸಂ.9448472807.

17.6.08

ಜೂನ್ ಮಳೆಯ ಮತ್ತಷ್ಟು ಹನಿ



ತುಂತುರು ಹನಿಗಳು
ಭಾವವಿಲ್ಲದೆ ಸುರಿದು
ಕೊಚ್ಚೆ ಸೇರುತ್ತಿವೆ
ಈ ಥಂಡಿಯಲ್ಲಿ
ಬಿಸಿಕಾಫಿ ಹಂಚಿಕೊಳ್ಳಲು
ನೀನಿಲ್ಲದೆ ಹಾಗೇ ಆರಿಹೋಗಿದೆ....


*************

ವಸುಂಧರೆಯ ಸೇರಲು
ತವಕಿಸಿದ್ದ
ಅಷ್ಟೊಂದು ಮಳೆ
ಹನಿಗಳೆಲ್ಲಾ ಸುರಿದು
ಎತ್ತಲೋ ಹರಿದು
ಅಪರಿಚಿತರಂತೆ
ಹೋಗಿಬಿಟ್ಟವು



********


ಅಂಗಳದಲ್ಲಿ ಧೋ ಎಂದು
ಸುರಿವ ಆಟಿ ಮಳೆಗೆ
ಮಕ್ಕಳಿಲ್ಲದ ಮನೆಯಲ್ಲಿ
ಕುಳಿತ
ಅಜ್ಜ ಅಜ್ಜಿ
ಯಾವಾಗಲೋ
ಮೆದ್ದ ಹಪ್ಪಳ, ಚಕ್ಕುಲಿ
ನೆನೆದುಕೊಳ್ಳುತ್ತಿದ್ದಾರೆ..

**********

ಹಳ್ಳಿಯಲ್ಲಿ ಆಕಾಶ
ತೂತುಬಿದ್ದಂತೆ
ಸುರಿವ ಮಳೆಗೂ
ಯಾಕೋ ಉತ್ಸಾಹವಿಲ್ಲ
ಮಳೆಗೆ ನೆನೆದು ಸೀನುತ್ತಾ
ತೋಡಲ್ಲಿ ಮೀನು
ಹಿಡಿವ ಪುಟಾಣಿಗಳೂ ಊರಲ್ಲಿಲ್ಲ...

10.6.08

ಬುರುಡೆ ಜೋಗದ ಮಡಿಲಲ್ಲಿ..(trek to burude joga)

ಚುನಾವಣೆ ವರದಿಗಾರಿಕೆ ಬಿಸಿ ಮುಗಿದ ಕೂಡಲೇ ಕಾಡಿನತ್ತ ತೆರಳಿ ಏರಿದ್ದ ಮಂಡೆ ಬಿಸಿ ತಣಿಸಲೇಬೇಕಿತ್ತು...ಕುಮಾರ ಪರ್ವತ ಏರಿಬಿಡುವುದು ಎಂದು ನಿರ್ಧಾವಾಗಿ ನಮ್ಮ ತಂಡವೂ ರೆಡಿಯಾಗಿತ್ತು.
ಆದರೆ ಕುಮಾರಪರ್ವತದಲ್ಲಿ ಭಾರೀ ಮಳೆ ಸುರಿಯುತ್ತದೆ, ಮೇಲಾಗಿ ಸುಬ್ರಹ್ಮಣ್ಯದಲ್ಲಿ ಚಿಕುನ್ ಗುನ್ಯಾ ಕೂಡಾ ಹರಡಿದ್ದರಿಂದ ನಮ್ಮ ತಂಡದ ಕೆಲವರಿಂದ ಕುಮಾರಪರ್ವತ ಬೇಡ ಎಂಬ ಅಪಸ್ವರ ಬಂತು...
ಮತ್ತೆ ಕಾರ್ಯಕ್ರಮದಲ್ಲಿ ದಢೀರ್‍ ಬದಲಾವಣೆ...
ಉತ್ತರಕನ್ನಡದ ಕುಮಟಾ ಸಮೀಪ ಎಲ್ಲೋ ಬುರುಡೆ ಯಾನೆ ಬುರುಡೆ ಜೋಗ ಎಂಬ ಹೆಸರಿನ ಜಲಪಾತ ಇದೆಯೆಂಬ ಮಾಹಿತಿ ಮೊದಲೇ ರಾಜೇಶ್ ನಾಯಕ್, ರಾಕೇಶ ಹೊಳ್ಳರಿಂದ ತಿಳಿದಿತ್ತು..ಹಾಗಾಗಿ ಅಲ್ಲಿಗೇ ಹೋಗುವುದೆಂದು ನಿರ್ಧರಿಸಿಬಿಟ್ಟೆವು.
ಹಿಂದಿನ ದಿನವೇ ಕುಮಟಾದ ಹೆಗಡೆಯಲ್ಲಿರುವ ಹಿರಿಯ ಮಿತ್ರ ಜಿ.ಟಿ.ಭಟ್ಟರ ಆತಿಥ್ಯ. ಅವರಲ್ಲಿ ಲೋಕಾಭಿರಾಮ ಮಾತಾಡಿದಾಗ ಅವರ ಸ್ನೇಹಿತರೊಬ್ಬರು ಗಣೇಶ ಹೆಗಡೆ ಎಂಬವರು ಬುರುಡೆ ಫಾಲ್ಸಿನ ಪಕ್ಕದಲ್ಲೆಲ್ಲೋ ಮನೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಕೊಟ್ಟರು. ನಮಗೂ ಮಧ್ಯಾಹ್ನಕ್ಕೆ ಅನ್ನದಾನಿಯೊಬ್ಬರ ಕೃಪೆ ಬೇಕಿತ್ತು...ಹೆಗಡೆಯವರ ಫೋನ್ ನಂಬರ್‍ ಹುಡುಕಿ ನಮ್ಮ ಮರುದಿನದ ಭೇಟಿ ಬಗ್ಗೆಯೂ ನಮ್ಮ ಊಟಕ್ಕೆ ವ್ಯವಸ್ಥೆಯಾದರೆ ಉತ್ತಮ ಎಂದು ಜಿ.ಟಿ.ಭಟ್ಟರು ಅರುಹುವ ಮೂಲಕ ನಮ್ಮ ತಲೆಬಿಸಿ ಇಳಿಸಿದರು. ಅಂತೂ ‘ಅಡ್ಡಿಲ್ಲ ಮಧ್ಯಾಹ್ನ ಊಟಕ್ಕೆ ಅಗತ್ಯ ಬನ್ನಿ’ ಎಂಬ ಹೆಗಡೆಯವರ ಸೂಚನೆ ಬಂತು.

ಮರುದಿನ ಮುಂಜಾವ ಬೇರೆಲ್ಲೂ ನಾವು ನೋಡಿರದ ಹೆಸರೇ ಇಲ್ಲದ ಮಾರುತಿ ಆಮ್ನಿಯಂತೆ ಭಾಸವಾಗುವ ಒಂದು ವಾಹನದಲ್ಲಿ ಹೊರಟೆವು. ಕುಮಟಾದಿಂದ ಸಿದ್ಧಾಪುರಕ್ಕೆ ಹೋಗುವ ಮಾರ್ಗದಲ್ಲಿ ೫೫ ಕಿ.ಮೀ ಪ್ರಯಾಣಿಸಿದಾಗ ಇಳಿಮನೆ ಕ್ರಾಸ್ ಸಿಗುತ್ತದೆ. ಅಲ್ಲಿಂದ ಎಡಕ್ಕೆ ಮಾರ್ಗದಲ್ಲಿ ಸುಮಾರು ಐದು ಕಿ.ಮೀ ತೆರಳಬೇಕು(ಈ ಸೂಚನೆಯಿರುವ ಫಲಕ ರಸ್ತೆ ಬದಿಯಲ್ಲೂ ಇದೆ).
ಗಣೇಶ ಹೆಗಡೆಯವರ ಮನೆ ಸಿಗುವ ಮುಂಚೆ ಸಣ್ಣ ನದಿ ಮಾರ್ಗಕ್ಕೆ ಅಡ್ಡಲಾಗಿ ಸಿಗುತ್ತದೆ, ಅದೇ ಮುಂದೆ ಜಲಪಾತವಾಗುತ್ತದೆ ಎಂಬ ಮಾಹಿತಿ ಕೊಟ್ಟರು ಇಲ್ಲಿಗೆ ಮೊದಲೇ ಹೋಗಿದ್ದ ರಾಕೇಶ್ ಹೊಳ್ಳ.

ಹೆಗಡೆಯವರು ನಮಗಾಗಿ ಮೊದಲೇ ಕಾದಿದ್ದರು. ಅವರಲ್ಲಿ ಸಣ್ಣ ಚಹಾ ಆತಿಥ್ಯ ಸ್ವೀಕರಿಸಿ, ಜಲಪಾತ ನೋಡುತ್ತಾ ಮುಕ್ಕಲು ಅಗತ್ಯವಿದ್ದಷ್ಟು ಬಾಳೆಹಣ್ಣನ್ನೂ ಅವರಿಂದಲೇ ನಾಚಿಕೆ ಬಿಟ್ಟು ಸ್ವೀಕರಿಸಿ ತೆರಳಿದೆವು.
ಹೆಗಡೆಯವರ ಮನೆಯಿಂದ ಹೊರಟರೆ ಸುಮಾರು ಅರ್ಧ ಗಂಟೆ ಹಾದಿ ಜಲಪಾತಕ್ಕೆ. ಆದರೆ ಕಾಡಿನ ದಾರಿಯಲ್ಲಿ ನಡೆದು ಮತ್ತೆ ೮೦-೯೦ ಡಿಗ್ರಿ ಕೋನದ ಇಳಿಜಾರಲ್ಲಿ ಇಳಿಯುತ್ತಾ ಸಾಗಿದಾಗ, ಬಂಡೆಗಲ್ಲನ್ನು ಜಾಗ್ರತೆಯಾಗಿ ದಾಟಿ ಇಳಿದಾಗ ಕಾಣಿಸುತ್ತದೆ ಬುರುಡೆ ಜೋಗ ಜಲಪಾತದದ ಶಿಖರ.

ನಾವು ಹೋದದ್ದು ಮೇ ಕೊನೆ ವಾರ. ಆದರೂ ಸಾಕಷ್ಟು ನೀರು ಹರಿಯುತ್ತಿತ್ತು ಜಲಪಾತದಲ್ಲಿ. ಇದೊಂದು ಸರ್ವಋತು ಜಲಪಾತ. ಸುಮಾರು ೬ ಹಂತಗಳಿರುವ ಈ ಜಲಪಾತ ಮಳೆಗಾಲದಲ್ಲಿ ಚಾರಣಾಸಕ್ತರಿಂದ ದೂರ ದೂರ...ಯಾಕೆಂದರೆ ಹೆಗಡೆಯವರ ಮನೆ ಬಳಿ ರಸ್ತೆಗಡ್ಡವಾಗುವ ನದಿ ದಾಡಲು ಇಲ್ಲಿ ಇನ್ನೂ ಸೇತುವೆ ಆಗಿಲ್ಲ... ಸೇತುವೆ ಆಗಿದ್ದರೆ ಸುಮಾರು ೧೦೦೦ ಮಂದಿ ಗ್ರಾಮಸ್ಥರಿಗೆ
ಉಪಕಾರವಾಗುತ್ತಿತ್ತು ಎನ್ನುತ್ತಾರೆ ವಯೋವೃದ್ಧ ಗಣೇಶ ಹೆಗಡೆ. ಇಲ್ಲಿ ಸೇತುವೆ ನಿರ್ಮಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಶಿಲಾನ್ಯಾಸ ಮಾಡಿದ ಕಲ್ಲು ಹಾಗೇ ನಗುತ್ತಿದೆ. ಅದನ್ನು ನೋಡಿ ಜನ ನಗಬೇಕಷ್ಟೇ.
ಇನ್ನು ಜಲಪಾತದ ಬಗ್ಗೆ....
ಮೇಲಿನಿಂದ ಎರಡನೇ ಹಂತದ ಬುಡಕ್ಕೇ ಹೋಗಿ ಧಾರೆಗೆ ತಲೆಕೊಟ್ಟು ಸ್ನಾನ ಮಾಡುವುದು ಅಷ್ಟೇನು ಕಷ್ಟವಲ್ಲ. ಆದರೆ ಕೆಳಗಿನಿಂದ ಮೊದಲ ಎರಡು ಹಂತಗಳಿಗೆ ಹೋಗುವುದು ಬಹಳ ಕಷ್ಟ..ಗೋಡೆಯಂತಹ ಕಲ್ಲನ್ನು ಇಳಿದು ಹೋಗಬೇಕು. ಆದರೆ ರಾಕೇಶ ಹೊಳ್ಳ ಮತ್ತು ಇನ್ನೊಬ್ಬ ಮಿತ್ರ ಅಶೋಕ್ ಅಲ್ಲಿಗೂ ಇಳಿದು ಬಿಟ್ಟರು!
ಇತರ ಜಲಪಾತಗಳಿಗೆ ಹೋಲಿಸಿದರೆ ಇನ್ನೂ ಪರಿಶುದ್ಧ ಬುರುಡೆಜೋಗ. ಅಂದ ಹಾಗೆ ಈ ಬುರುಡೆಗೆ ಜೋಗ ಎಂಬ ಸಫಿಕ್ಸ್ ಸೇರಿದ್ದು ಯಾಕೋ ಗೊತ್ತಿಲ್ಲ.
ಮತ್ತೆ ಹೆಗಡೆಯವರ ಮನೆ ಸೇರಿ ಭೂರಿ ಭೋಜನ ಸ್ವೀಕರಿಸಿ, ಇನ್ನೊಮ್ಮೆ ಬನ್ನಿ ಎಂಬ ಮನಃಪೂರ್ವಕ ಮನವಿ ಕೇಳುತ್ತಾ ಕುಮಟಾಕ್ಕೆ ನಮ್ಮ ಆಮ್ನಿಯಂತೆ ಭಾಸವಾಗುವ ವಾಹನ ಮರಳಿತು.....
ಜಲಪಾತದ ಕೆಲವು ನೋಟಗಳನ್ನು ಹೊಳ್ಳರ ಬ್ಲಾಗಲ್ಲಿ ನೋಡಬಹುದು.

6.6.08

ಜೂನ್ ಮಳೆ


ಇಂದು ಮುಗಿಲಪ್ಯಾಟೆಯಲ್ಲಿ ಸಂಜೆ ಎಂದಿನಂತಿಲ್ಲ.
ಪಶ್ಚಿಮದಲ್ಲಿ ಅದೇಕೋ ಸೂರ್ಯನನ್ನೇ ಮುಚ್ಚಿ ಹಾಕುವಂತಹ ತಳಮಳ....
ಇದ್ದಕ್ಕಿದ್ದಂತೆಯೇ ರಾತ್ರಿಯಾಯಿತೇನೋ ಎಂಬಂತೆ ಬೆಳಕು ಇನ್ನಿಲ್ಲದಂತೆ ಮಾಯ....
ಅಂಗಡಿಯಲ್ಲಿ ಗೋಳಿಬಜೆ ಹಿಟ್ಟು ಕಲಸುತ್ತಿದ್ದವನಿಗೆ, ಮರದಡಿ ಮೀನು ಮಾರುವವರಿಗೆ, ಮುಂದಿನ ಗದ್ದೆಯಲ್ಲಿ ಕಸ ಒಟ್ಟು ಮಾಡಿ ಬೆಂಕಿ ಹಾಕುತ್ತಿದ್ದ ರೈತರಿಗೆ, ಗಂಭೀರವಾಗಿ ಕ್ರಾಪ್ ಬಿಡಿಸುತ್ತಿದ್ದ ಕ್ಷೌರಿಕನಿಗೆ, ಸುಮ್ಮನೇ ಕ್ಯಾಸೆಟ್ ಹಾಡು ಕೇಳುತ್ತಿದ್ದ ರಿಕ್ಷಾವಾಲನಿಗೆ, ಪಕ್ಕದ ಹೊಳೆಯಲ್ಲಿ ಗಾಳ ಇಳಿಸಿ ಧ್ಯಾನ ಮಗ್ನರಾಗಿ ಕುಂತವರಿಗೆಲ್ಲಾ ಇಂದು ಮಳೆ ಬರೋದಂತೂ ಗ್ಯಾರಂಟಿ ಅನ್ನಿಸಿತು.

ಇನ್ನೇನು ಶಾಲೆ ಬಿಡೋದಕ್ಕೂ ಆಯ್ತು. ಶಾಲೆ ಗಂಟೆ ಬಾರಿಸುವುದಕ್ಕೂ ಪಶ್ಚಿಮದಲ್ಲೆಲ್ಲೋ ತಿರುಗುತ್ತಿದ್ದ ಮೋಡಗಳೆಲ್ಲ ಥೇಟ್ ಯುದ್ಧವಿಮಾನಗಳ ರೀತಿ ಪೇಟೆಯತ್ತಲೇ ಧಾವಿಸಿಬಂದವು. ಶಾಲೆ ಅಂಗಳದಲ್ಲಿ ಚಿಣ್ಣರು ಓಡುತ್ತಿರುವಂತೆಯೇ ಸಣ್ಣಗೆ ಸುರಿಯತೊಡಗಿತು ಮಳೆ. ಮಳೆಗಾಗಿ ಅದೆಷ್ಟು ದಿನಗಳ ಕಾಯುವಿಕೆ ಇಂದು ಸಾರ್ಥಕ.

ಅಲ್ಲಿವರೆಗೆ ಮುಗಿಲಪ್ಯಾಟೆಯ ಇಡೀ ಧರೆ ಶುಷ್ಕವಾಗಿತ್ತು. ಗದ್ದೆಗಳೆಲ್ಲ ಒಡೆದಿದ್ದವು. ಇಡೀ ಹಳ್ಳಿಗೆ ಅದೇನೋ ದುಗುಡ ಆವರಿಸಿತ್ತು. ರೈತರು ತಲೆಗೆ ಕೈಹೊತ್ತು ಕುಳಿತಿದ್ದರು. ಮೋಡ ಬಂದರೂ ಮಳೆಯಾಗುತ್ತಿರಲಿಲ್ಲ. ತುರ್ತು ಕೆಲಸಕ್ಕೆಂಬಂತೆ ಮುಗಿಲ ಪ್ಯಾಟೆಯ ಸೂರಿನ ಮೇಲಿಂದಲೇ ಹಾದು ಹೋಗುತ್ತಿತ್ತು.
ಈಗ ಮಳೆ ಬಂದಿದೆ...ಮಳೆ ಬಂದೇ ಬಿಟ್ಟಿದೆ
ಖುಷಿಯಲ್ಲಿ ಚಿಣ್ಣರು ಮಳೆಯಲ್ಲಿಯೇ ಕುಣಿಯುತ್ತಾ ಓಡತೊಡಗಿದರು. ಶಾಲೆಯ ಗೋಡೆಗಂಟಿ ನಿಂತಿದ್ದ ಪುಟ್ಟಿಯೊಬ್ಬಳನ್ನು ಪೋರನೊಬ್ಬ ಮಳೆಗೆ ಎಳೆದ ಕಿಲ ಕಿಲ ನಕ್ಕ, ನೋಡಿದ ಮಕ್ಕಳೆಲ್ಲ ನಗತೊಡಗಿದರು...
ಅದನ್ನು ನೋಡಿದ ಮೇಷ್ಟರೂ ನಕ್ಕರು...ಬಜ್ಜಿ ಹಿಟ್ಟು ಕಲಸಿದವನು, ಗಾಳ ಹಾಕುತ್ತಿದ್ದಾತ, ಮೀನು ಮಾರುವವರು, ರೈತ, ಆಟೋವಾಲ ಎಲ್ಲರ ಬಾಯಿಗೂ ಈಗ ನಗು ಅಂಟಿಕೊಂಡಿತು...ಎಲ್ಲರೂ ನಗತೊಡಗಿದರು...ಬಹಳ ದಿನಗಳ ಬಳಿಕ...

ಮುಗಿಲಪ್ಯಾಟೆಯಲ್ಲಿ ಈಗ ಇಡೀ ಮಳೆಗೇ ಹೆದರಿಕೆ ಹುಟ್ಟುವಂತೆ ನಗುವಿನ ಮಳೆ!

29.5.08

ಉದುರಿದ ಎಲೆಗಳು




ಮರದ ತೆಕ್ಕೆಯಿಂದ
ಕಳಚಿಕೊಂಡು ಬಿದ್ದ
ಹಣ್ಣೆಲೆಗೆ
ನದಿ ಪ್ರವಾಹದಲ್ಲಿ
ಸಿಲುಕಿಕೊಳ್ಳುವ ಆತುರ

********



ಅರ್ಧ ರಾತ್ರಿ ಮೊಂಬತ್ತಿಗಳು
ಉರಿಯುತ್ತಲೇ ಇವೆ
ಪಾಠ ಪ್ರವಚನ ಸರಿಯಾಗಿಯೇ ನಡೆಯುತ್ತವೆ
ಹೆಣ ಉರುಳೋದು ನಿಂತಿಲ್ಲ



********



ಹಗಲಲ್ಲಿ
ರಂಗು ಮಾರುವ
ಬಾಲೆಯ ಕೈತುಂಬಾ
ಬಣ್ಣಗಳ ಓಕುಳಿ
ರಾತ್ರಿ ಬರೀ
ಕಡುಕಪ್ಪು ಕನಸು



********


ಮಹಾನ್
ಪರ್ವತದ ತುದಿಯಿಂದ
ಉರುಳುರುಳಿ
ಪ್ರತ್ಯೇಕ ಅಸ್ತಿತ್ವ
ಸ್ಥಾಪಿಸಿದ
ಬಂಡೆಗಲ್ಲನ್ನು ಕೇಳುವವರೇ ಇಲ್ಲ!

18.5.08

ಮೇ ತಿಂಗಳ ಮೋಡಗಳು

ಬೇಸಗೆ ರಜೆಗೆ ಮಕ್ಕಳು ಸಾಲಾಗಿ
ಪ್ರವಾಸ ಹೊರಟಂತೆ
ಎತ್ತಲೋ ಹೊರಟಿವೆ
ಮೇ ತಿಂಗಳ ಮೋಡಗಳು

ಬತ್ತಿ ಒಡೆದ ಗದ್ದೆ ನೋಡುತ್ತ
ಕುಳಿತ ರೈತನ ಮುಂದೆ
ಅದೋ ಠೀವಿಯಿಂದ
ನಾಲ್ಕೇ ನಾಲ್ಕು ಹನಿ ಪನ್ನೀರು!

ಪೂರ್ತಿ ಮಳೆ ಸುರಿಸಲು ಈಗ
ಮೋಡಗಳಿಗಿಲ್ಲ ಸಮಯ

ಎತ್ತಲೋ ಪ್ರವಾಸ ಹೊರಟಿವೆ ನೋಡಿ

ಪಾತಾಳ ತಲಪಿರುವ
ಬಾವಿ ನೀರು ಪಾಚಿಗಟ್ಟಿದೆ
ಎಂದು ದೂರುವವರಿಗೆ,
ಪಟ್ಟಣದ ಪೈಪುಗಳಲ್ಲಿ ನೀರೇ
ಹರಿಯುತ್ತಿಲ್ಲ ಎಂಬ ನೀರೆಯರಿಗೆ
ಮೇಲಿಂದಲೇ ಅಣಕಿಸುತ್ತಾ
ಮೋಡ ಓಡೋಡಿ ಸಾಗಿದೆ

ನಗರದ ಗಗನಚುಂಬಿಗಳ
ಹಾದು
ವಲಸೆ ಹಕ್ಕಿಗಳ ರೆಕ್ಕೆ
ಚುಂಬಿಸುತ್ತಾ
ಬೆಳ್ಳಕ್ಕಿಗಳಂತೆ
ಹಾರಿವೆ ಮೇ ತಿಂಗಳ ಮೋಡಗಳು

ಇಂದು ರಾತ್ರಿ
ಅಥವಾ ನಾಳೆ ಘಟ್ಟ
ದಾಟಲಾರದೆ ಮಳೆ ಸುರಿಯಬಹುದು

11.5.08

ಅಮ್ಮ ಎಂಬ ಸಂಜೀವಿನಿ

ಕತ್ತಲಮೂಲೆಯಲ್ಲಿ
ದುಃಖವನ್ನೇ ಹೊದ್ದು
ಮಲಗಿದ್ದ ನನ್ನ
ಮೌನವನ್ನೇ ಹೆಕ್ಕಿ
ಅರಗಿಸಿಕೊಳ್ಳುತ್ತಾಳೆ
ಬಿಕ್ಕುವ ಮನಕ್ಕೆ
ಸದಾ ಸಂಜೀವಿನಿ ನನ್ನಮ್ಮ!

ಅಗಲ ಮುಖ, ಸುಕ್ಕು
ಗಟ್ಟಿದ ಚರ್ಮ
ನಸುವೇ ಹರಡಿದೆ ಕುಂಕುಮ
ಆಕೆಯ ಬಟ್ಟಲು ಕಂಗಳೇ
ನನಗೆ ಲಾಲಿ ಹಾಡುವ ಚಂದ್ರಮ

ದೇವರಕೋಣೆಯಲ್ಲಿ ಅಮ್ಮನ ಪೂಜೆ
ಮುಖತುಂಬಾ ದೀಪದ ಬೆಳಗು
ಕೋಣೆಯಿಂದ ನಸುನಸುವೇ
ಹರಡುತ್ತಾ ಬರುವ
ಅಗರಬತ್ತಿಯ ಪರಿಮಳ
ದೇವರಿಗೆ ನೈವೇದ್ಯದ ಕಲ್ಲುಸಕ್ಕರೆ
ಮಕ್ಕಳಿಗೆ ಮನತುಂಬಿದ ಅಕ್ಕರೆ

ಅಮ್ಮನ ದಿನ ಎಂಬ ದಿನ ಮಾತ್ರ ಆಕೆಯನ್ನು ನೆನಪಿಸಬೇಕೇ?
ಇಲ್ಲ ಯಾವಾಗಲೂ ನೆನಪಿಸಬೇಕು...ಅದೇನೋ ಸರಿ.... ಆದರೆ ಅಮ್ಮನ ದಿನ ಎಂಬ ವಿಶೇಷ ಅವಕಾಶ ಸಿಕ್ಕರೆ ಅಂದೂ ವಿಶೇಷವಾಗಿ ಸ್ಮರಿಸಿಕೊಂಡರೆ ನಷ್ಟವೇನು?
ಅದಕ್ಕೇ ಈ ನಾಲ್ಕು ಸಾಲು ನನ್ನ ಹೆತ್ತಬ್ಬೆಗೆ.....

24.4.08

ಅಮ್ಮ ಮಿಸ್ಸಾದ ಫಜೀತಿ

ಹಳ್ಳಿಯಿಂದ ಪಟ್ಟಣಕ್ಕೆ ಬಂದು ಕೆಲವರ್ಷಗಳಾದರೂ ಅಮ್ಮ ಇಂದಿಗೂ ಪೇಟೆಗೆ ಹೊಂದಿಕೊಂಡವಳಲ್ಲ ಎಂದೇ ಹೇಳಬಹುದು....

ಮೊನ್ನೆ ಊರಲ್ಲಿ ಅಜ್ಜಿಯ ತಿಥಿಗೆಂದು ಅಮ್ಮ ಹೊರಟಳು. ಕಚೇರಿ ಕೆಲಸದೊತ್ತಡದ(ಯಾವಾಗಲೂ ಅದೇ ಕಾರಣ) ಜತೆಗೆ ಜ್ವರವೂ ಇದ್ದ ಕಾರಣ ನನಗೆ ಹೋಗಲಾಗುವುದಿಲ್ಲ ಎಂದು ನಾನು ಹೊರಡಲು ನಿರಾಕರಿಸಿದೆ.
ಅಜ್ಜಿಮನೆಯಲ್ಲಿ ಏನಾದರೂ ಕಾರ್ಯಕ್ರಮ ನಡೆದಾಗ ನಾನು ಹೋಗಲಾಗದಿದ್ದರೆ ಮಂಗಳೂರಿಂದ ಸುಮಾರು ೩೫ ಕಿ.ಮೀ ದೂರದ ಕಾಸರಗೋಡು ಜಿಲ್ಲೆಯ ಹೊಸಂಗಡಿಯಲ್ಲಿರುವ ಚಿಕ್ಕಪ್ಪ ಚಿಕ್ಕಮ್ಮನೊಂದಿಗೆ ಅವರ ಆಮ್ನಿಯಲ್ಲಿ ಅಮ್ಮ ಅಜ್ಜಿಯ ಮನೆಗೆ ಹೋಗುವುದು, ಅಲ್ಲಿ ಎರಡು ದಿನ ಕಳೆದು, ಚಿಕ್ಕಮ್ಮನೊಂದಿಗೆ ಮರಳುವುದು, ಅವರು ಅಮ್ಮನನ್ನು ಹೊಸಂಗಡಿಯಿಂದ ಮಂಗಳೂರು ಎಕ್ಸ್‌ಪ್ರೆಸ್ ಬಸ್ಸಿಗೆ ಹತ್ತಿಸುವುದು ಅನೇಕ ಬಾರಿ ನಡೆದ ಪ್ರಸಂಗಗಳು. ಅಲ್ಲಿ ಯಾವ ಬಸ್ಸಿಗೆ ಅಮ್ಮ ಏರಿದ್ದಾರೆ ಎಂಬುದನ್ನು ಚಿಕ್ಕಮ್ಮ ನನಗೆ ಫೋನಲ್ಲಿ ತಿಳಿಸಿದರೆ, ಸಮಯಕ್ಕೆ ಸರಿಯಾಗಿ ನಾನು ಮಂಗಳೂರು ಬಸ್‌ ನಿಲ್ದಾಣಕ್ಕೆ ಹೋಗಿ ಆ ಬಸ್ಸಿಂದ ಅಮ್ಮ ಇಳಿದ ಬಳಿಕ ನಮ್ಮ ಮನೆ ಸುರತ್ಕಲ್‌ನತ್ತ ಹೋಗುವ ಬಸ್‌ಗೆ ಹತ್ತಿಸಿದರಾಯಿತು, ಅವಳು ಸ್ಟಾಪಲ್ಲಿ ಇಳಿಯುತ್ತಾಳೆ.
ಮನೆ ಸ್ಟಾಪಲ್ಲಿ ಇಳಿಯಲು ಅವಳಿಗೆ ಕಷ್ಟವಾಗದು, ಆದರೆ ಮಂಗಳೂರಿನ ಜನಜಂಗುಳಿಯಲ್ಲಿ ಸುರತ್ಕಲ್ ಬಸ್ ಹಿಡಿಯುವ ಕೆಲಸ ನನ್ನಿಂದಾಗದು ಎಂದು ಯಾವಾಗಲೂ ಹೇಳುತ್ತಿರುತ್ತಾಳೆ.
ಹಾಗೆಯೇ ಮೊನ್ನೆಯೂ ಚಿಕ್ಕಪ್ಪ ಫೋನ್‌ ಮಾಡಿ ಸಂಜೆ ೫-೧೫ಕ್ಕೆ ಹೊಸಂಗಡಿಯಿಂದ ವೈಶಾಖ್ ಬಸ್ಸಲ್ಲಿ ಅಮ್ಮ ಹೊರಟಿದ್ದಾರೆ ಎಂದು ಹೇಳಿದರು. ಹೊಸಂಗಡಿಯಿಂದ ಮುಕ್ಕಾಲು ಗಂಟೆ ದಾರಿ ಮಂಗಳೂರಿಗೆ. ಹಾಗೆ ೬ ಗಂಟೆಗೆ ಹೊರಟು ಮಂಗಳೂರು ಸರ್ವಿಸ್ ಬಸ್ ನಿಲ್ದಾಣಕ್ಕೆ ಹೋದೆ, ಆಗಲೇ ಒಂದು ವೈಶಾಖ್ ಬಸ್ ನಿಂತಿತ್ತು, ಕಂಡಕ್ಟರ್‌ಗೆ ಕೇಳಿದರೆ ಅದು ಬಂದು ಆಗಲೇ ೧೦ ನಿಮಿಷ ಕಳೆದಿದೆ. ಅಷ್ಟು ಬೇಗ ಬಂದಿರಲು ಸಾಧ್ಯವಿಲ್ಲ, ಹೊಸಂಗಡಿಯಲ್ಲಿ ೫.೧೫ಕ್ಕೆ ಪಾಸಾಗುವ ಇನ್ನೊಂದು ವೈಶಾಖ್ ಇದೆಯೇ ಕೇಳಿದೆ, ಹೌದು, ಅದು ಇನ್ನೊಂದೈದು ನಿಮಿಷದಲ್ಲಿ ಬರಬಹುದು ಎಂದ.
ಬಸ್‌ಗಳ ಬೋರ್ಡ್ ನೋಡುತ್ತಾ ನಿಂತಿದ್ದೆ, ಎರಡನೇ ವೈಶಾಖ್ ಕೂಡಾ ಬಂತು, ಆದರೆ ಅದರಲ್ಲಿ ಅಮ್ಮ ಇಲ್ಲ!
ಮತ್ತೆ ಚಿಕ್ಕಪ್ಪನಿಗೆ ಫೋನ್ ಮಾಡಿ ಅಮ್ಮ ಬಂದಿಲ್ಲ ಎಂದೆ.
ಈಗ ಗೊಂದಲಕ್ಕೊಳಗಾಗುವುದು ಚಿಕ್ಕಪ್ಪನ ಸರದಿ.. ನಾನು ಹತ್ತಿಸಿದ ಬಸ್‌ ವೈಶಾಖವೋ ವೈಶಾಲಿಯೋ ಎಂದು ಅವರಿಗೂ ಕನ್‌ಫ್ಯೂಶನ್. ನೋಡೋಣ ಎಂದು ಮತ್ತಷ್ಟು ಹೊತ್ತು ಕಾದೆ, ಇನ್ನೋರ್ವ ಬಸ್ ಕಂಡಕ್ಟರ್‌ನಲ್ಲಿ ವೈಶಾಲಿ ಬಸ್ ಬಂತೇ ಕೇಳಿದೆ, ಅದು ಬಂದೂ ಆಗಿದೆ ಮರಳಿ ಕಾಸರಗೋಡಿನತ್ತ ಹೋಗಿಯೂ ಆಗಿದೆ ಎಂದ. ಮತ್ತೆ ವಿಚಾರಿಸಿದೆ, ಇನ್ನೊಂದು ವೈಶಾಲಿ ಮಂಗಳೂರಿನ ಒಳಕ್ಕೆ ಬರುವುದೇ ಇಲ್ಲ, ಹೊರಗಿನ ಕಂಕನಾಡಿ ಬಸ್ಟಾಂಡಿಗೆ ಬರುತ್ತೆ ಎಂಬ ಹೆಚ್ಚು‘ವರಿ’ ಮಾಹಿತಿಯನ್ನೂ ಕೊಟ್ಟ.
ಬೈಕೇರಿ ಕಂಕನಾಡಿಗೆ ಓಡಿಸಿ ಅಲ್ಲೂ ಬಸ್ಟಾಂಡ್‌ಗೆ ಹೋದರೆ ವೈಶಾಲಿಯಿಲ್ಲ, ಅಮ್ಮನೂ ಕಾಣುವುದಿಲ್ಲ...ಆಗಲೇ ಕತ್ತಲೆ ಕವಿದಿತ್ತು ಮೋಡ ಬೇರೆ ಆವರಿಸಿತ್ತು.
ಅಮ್ಮನಿಗೆ ನನ್ನ ಮೊಬೈಲ್ ನಂಬರ್‍ ಅಂತೂ ನೆನಪಿಲ್ಲ, ಏನ್ ಮಾಡೋದು ಎಂದೆಲ್ಲಾ ಚಿಂತಿಸುತ್ತಿದ್ದೆ. ಪಕ್ಕದ ಮನೆಯ ಹುಡುಗ ತೇಜಸ್ವಿಗೆ ಫೋನ್ ಮಾಡಿ ಎಲ್ಲಾದರೂ ಅಮ್ಮ ಸ್ವತ: ಬಸ್ಸೇರಿ ಬಂದರೇ ಎಂದು ವಿಚಾರಿಸಿದರೆ ಬಂದಿಲ್ಲ ಎಂಬ ಉತ್ತರ.
ಈಗ ನಿಜಕ್ಕೂ ನನ್ನ ಬೆವರಿಳಿಯಲು ಶುರುವಾಯ್ತು. ಗೊಂದಲದಲ್ಲಿ ಅಮ್ಮನ ಬೆದರುಕಂಗಳು ನನ್ನ ಕಣ್ಣಮುಂದೆ. ಮತ್ತೆ ಸರ್ವಿಸ್ ಬಸ್ ನಿಲ್ದಾಣಕ್ಕೆ ಬಂದೆ, ಅಲ್ಲೂ ಅಮ್ಮನಿಲ್ಲ.
ಪೊಲೀಸರಿಗೆ ದೂರು ಕೊಡೋದೇ, ಗೆಳೆಯರನ್ನು ಕರೆಯುವುದೇ, ಏನ್‌ ಮಾಡೋದು? ತಲೆ ಗೋಜಲು ಗೋಜಲು.
ದಾರಿ ಕಾಣದವರನ್ನು ಮತ್ತಷ್ಟು ದಾರಿ ತಪ್ಪಿಸಿ ಕೀಳುವವರು ನೆನಪಾದರು...ದಾರಿ ತಪ್ಪಿ ಯಾವ್ಯಾವದೋ ಬಸ್ ಏರಿ ಕಂಗಾಲಾದವರು ಸ್ಮರಣೆಗೆ ಬಂದರು...ಅವರಂತೆಯೇ ಅಮ್ಮನೂ ಹೋದದ್ದಿರಬಹುದೇ?
ಅನ್ಯಮನಸ್ಕನಾಗಿ ಬಸ್‌ ನಿಲ್ದಾಣದ ತುಕ್ಕು ಹಿಡಿದ ಕಂಬಕ್ಕೊರಗಿ ನಿಂತಿದ್ದೆ ಮೊಬೈಲ್ ಕೂಗಿತು. ಪಕ್ಕದ ಮನೆ ತೇಜಸ್ವಿಯ ಸ್ವರ...‘ಅಮ್ಮ ಬಂದಿದ್ದಾರೆ, ಈಗಷ್ಟೇ ಮಾತಾಡಿ ಬಂದೆ’.
ಥ್ಯಾಂಕ್ಸ್ ಹೇಳಿ, ಮನೆಗೆ ಫೋನಾಯಿಸಿದೆ, ಅಮ್ಮ ರಿಸೀವ್ ಮಾಡಿದಳು. ‘ನಾನು ಬಂದು ನಿನ್ನ ಹುಡುಕಿದೆ, ನೀ ಕಾಣ್ಲಿಲ್ಲ...ಸುರತ್ಕಲ್‌ ಬಸ್ ಗೊತ್ತಾತು, ಹಾಗೆ ಬಂದು ಬಿಟ್ಟೆ..’
ಏನು ಉತ್ತರಿಸುವುದು ಗೊತ್ತಾಗಲಿಲ್ಲ...ಹಾಗೇ ಫೋನಿಟ್ಟು ಆಫೀಸಿಗೆ ಗಾಡಿ ಓಡಿಸಿದೆ.

18.4.08

ಗುಬ್ಬಿ ಇಲ್ಲದ ಗೂಡು

ಈಚೆಗೆ ಎಲ್ಲವೂ ಸರಿ ಇಲ್ಲ
ಮನೆಮೂಲೆಯ
ಕುಂಡದ ಗಿಡ ಮಂಕು ಹಿಡಿದು
ಕೂತುಬಿಟ್ಟಿದೆ, ಹೂ ಅರಳುವುದೇ ಇಲ್ಲ
ಮನದ ವೇದಿಕೆಯಲ್ಲಿ
ನಿನ್ನ ಬಿಂಬಗಳು ಈಚೆಗೆ ನರ್ತಿಸುವುದೂ ಇಲ್ಲ

ಒಡಲಾಳದಲ್ಲಿ ಶಬ್ದಗಳು
ಕವಿತೆಯಾಗಲು ಹಿಂಜರಿಯುತ್ತಿವೆ
ಗೋಡೆಗಡಿಯಾರದ ಎಡೆಯಲ್ಲಿ
ಗೂಡುಕಟ್ಟಿದ್ದ ಗುಬ್ಬಿ
ಹಾರಿಹೋಗಿ ತಿಂಗಳುಗಳೆ ಕಳೆದಿವೆ
ಈಗಂತೂ ಆ ಗೂಡಲ್ಲಿ ಜಿರಲೆಗಳ ಹರಿದಾಟ

ಅಬ್ಬರದಲ್ಲಿ ಹರಿವ ತೊರೆಯಲ್ಲಿ
ಚಪ್ಪಲಿ ಕಳೆದು ಹೋದಾ‌ಗ
ದಿಗಿಲಿನಿಂದ ನೋಡುವ ಹುಡುಗ ನಾನಾಗಿದ್ದೇನೆ
ಥತ್...ಈಚೆಗೆ ಯಾವುದೂ ಸರಿ ಎನಿಸುವುದಿಲ್ಲ...

ಮೇಲ್ನೋಟಕ್ಕೆ ಮೌನದ
ಮೇಲೊಂದು ಹುಸಿನಗುವಿನ ತೆರೆ ಬಿದ್ದಿದೆ
ಚಿಂತೆಯ ಕಾರ್ಮೋಡ ಕರಗಿಸಲು
ಉತ್ಸಾಹದ ಬಿರುಗಾಳಿ
ವೃಥಾ ಯತ್ನಿಸುತ್ತಿದೆ
ಪ್ರಯತ್ನಗಳು ಕೈಗೂಡುತ್ತಿಲ್ಲ

ನೀನು ಇಲ್ಲವಾದರೂ ಪರವಾಗಿಲ್ಲ
ಕುಂಡದ ಗಿಡ ಹೂಬಿಟ್ಟರೆ,
ಗುಬ್ಬಿ ಗೂಡಿಗೆ ಮರಳಿದರೆ
ಶಬ್ದಗಳು ಮತ್ತೆ ಕವಿತೆಗಳಾದರೆ ಸಾಕು
ನೀನೆ ಬೇಕೆಂದಿಲ್ಲ....

10.4.08

ಉಗ್ರಗಾಮಿಗಳು

ತಿದಿಯೊತ್ತುವಾಗ ಭಗ್ಗನೇ
ಉರಿದೇಳುವ ಬೆಂಕಿಚೆಂಡು
ಗುರಿ ಉಡಾಯಿಸಲು
ನುಗ್ಗುವ ಕ್ಷಿಪಣಿಯಂತೆ
ಬೆದರಿಸುತ್ತಾರೆ ಭಯೋತ್ಪಾದಕರು
ಸದಾ ಸಿಡಿಗುಂಡು
ಮುಂದಿರುವುದೇನು?
ಯಾಕೆ ಈ ಪಾಪ?
ಪಾಪ, ಮಗುವಲ್ಲವೇ ಬಿಟ್ಟುಬಿಡೋಣ..
ಊಹೂಂ....
ಯಾವುದೇ ಪರಿವೆ ಇಲ್ಲ
ಎಕೆ ೪೭ರ ಕುದುರೆ ಮೀಟಿ
ಆರ್ಭಟಿಸುವುದೇ ಹವ್ಯಾಸ
ಆಜ್ಞಾಧಾರಕ ರೋಬೋಟ್‌ಗಳಂತೆ
ಜೀನುಕಟ್ಟಿದ ಕುದುರೆಗಳಂತೆ
ಸ್ವರ್ಗ ಕೆಡವಿ ಸದಾ ರೌರವ ನರಕ
ಸೃಷ್ಟಿಯೇ ಗುರಿ
ಅರಳಿದ ಸುಂದರ ಹೂಗಳ ಸಂಹಾರ
ಕಾರ್ಯಕ್ಕೆ ಇವರದೇ ಪೌರೋಹಿತ್ಯ

2.4.08

ತಿಂದಿರಾ ಪೊಳಲಿ ಕಲ್ಲಂಗಡಿ?(watermelon of polali)

ಮಂಗಳೂರಿಗೆ ಬಂದವರು ಹೋಗಲೇಬೇಕಾದ ಕೆಲ ಸ್ಥಳಗಳು ಅನೇಕ ಇವೆ. ಮಂಗಳೂರಿನಿಂದ ಸುಮಾರು ೧೨ ಕಿ.ಮೀ ದೂರದಲ್ಲಿರುವ ಪೊಳಲಿಯ ಶ್ರೀ ರಾಜರಾಜೇಶ್ವರಿಯ ದೇವಳ ಅಂತಹ ಸ್ಥಳಗಳಲ್ಲೊಂದು. ಈ ದೇವಳದಲ್ಲೊಂದು ವಿಶೇಷ ಇದೆ.
ಏನ್ ಗೊತ್ತಾ ? ಈ ದೇವಸ್ಥಾನದಲ್ಲಿ ‘ಪೊಳಲಿ ಬಚ್ಚಂಗಾಯಿ’ ಪ್ರಸಾದ.
ಪೊಳಲಿಗೆ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಬರುವವರಿಗೆ ಪೊಳಲಿ ಬಚ್ಚಂಗಾಯಿ(ಕಲ್ಲಂಗಡಿ ಹಣ್ಣು) ಇಲ್ಲಿ ಲಭ್ಯ. ಹಾಗೆಂದ ಮಾತ್ರಕ್ಕೆ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಸಿಗುತ್ತದೆ ಎಂದಲ್ಲ. ಪೊಳಲಿ ದೇವಸ್ಥಾನದ ಬೀದಿ ಬದಿ ಅಂಗಡಿಗಳಲ್ಲಿ ಇಲ್ಲೇ ಬೆಳೆಯಲಾದ ತಾಜಾ ಕಲ್ಲಂಗಡಿ ಲಭ್ಯ.
ಪೊಳಲಿಯ ಕಲ್ಲಂಗಡಿ ಖ್ಯಾತಿ ಪಡೆಯಲು ಪೊಳಲಿ ದೇವಿಯ ಮಡಿಲಲ್ಲಿ ಬೆಳೆಯುವ ಹಣ್ಣು ಎಂಬುದೊಂದು ಕಾರಣವಾದರೆ, ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇರೆ ಯಾವ ಮಣ್ಣಿನಲ್ಲೂ ಇದು ಬೆಳೆಯಲಾರದು ಎಂಬುದೂ ಮಗದೊಂದು ಕಾರಣ.
ವರ್ಷದಿಂದ ವರ್ಷಕ್ಕೆ ಕಲ್ಲಂಗಡಿ ಬೆಳೆಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ ಎನ್ನುತ್ತಾರೆ ಇಲ್ಲಿನ ಹಿರಿಯ ವಾಸುದೇವ ಭಟ್ಟರು. ತಮಗೆ ಸ್ವಂತ ಜಾಗ ಇಲ್ಲದಿದ್ದರೂ ಖಾಲಿ ಇರುವ ಸ್ಥಳದ ಮಾಲೀಕರಿಂದ ಜನವರಿ-ಏಪ್ರಿಲ್ ವರೆಗೆ ಒಪ್ಪಂದದ ಮೇರೆಗೆ ಕೆಲವರು ಕೃಷಿಕರು ಪಡೆದುಕೊಂಡು ಕಲ್ಲಂಗಡಿ ಬೆಳೆಸಿ ಮೊದಲ ಹಣ್ಣನ್ನು ಶ್ರೀ ರಾಜರಾಜೇಶ್ವರಿಗೆ ಒಪ್ಪಿಸಿ ಕೃತಾರ್ಥರಾಗಿ ಮಾರಾಟಕ್ಕೆ ಇರಿಸುತ್ತಾರೆ.
ಇಲ್ಲಿಂದ ಹೊರಕ್ಕೆ ಕಲ್ಲಂಗಡಿ ಹೋಗುವುದಿಲ್ಲ. ಬೆಳೆದದ್ದೆಲ್ಲಾ ಖರ್ಚಾಗಿ ಹೋಗುತ್ತದೆ, ಅದೇ ವಿಶೇಷ. ಬರುವ ಭಕ್ತಾದಿಗಳನ್ನು ಕಲ್ಲಂಗಡಿ ಸೆಳೆದೇ ಸೆಳೆಯುತ್ತದೆ ಎನ್ನುತ್ತಾರೆ ಸ್ಥಳೀಯರಾದ ಯಶವಂತ.
ಪೊಳಲಿಯೆಂದರೆ ದೊಡ್ಡ ಊರೇನಲ್ಲ. ಮಂಗಳೂರಿಂದ ಮೂಡುಬಿದಿರೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ರಲ್ಲಿ ಸಾಗಿ ಗಂಜಿಮಠದ ಬಳಿ ಬಲಕ್ಕೆ ಇರುವ ಬೃಹತ್ ದ್ವಾರದಲ್ಲಿ ಒಳಗೆ ಹೋದರೆ ಅಡ್ಡೂರು ಸಿಗುತ್ತದೆ. ಅಲ್ಲೇ ಎಡಕ್ಕೆ ಸಾಗಿದರೆ ಇನ್ನೂ ಹಸಿರು ಹೊದ್ದಿರುವ ಪೊಳಲಿ ಸೇರಬಹುದು.
ಈ ವರುಷ ಮಳೆ ಭಾರಿಯಾಗಿ ಸುರಿದು ಕಲ್ಲಂಗಡಿ ಬೆಳೆಗೆ ನಷ್ಟ ಉಂಟು ಮಾಡಿದೆ. ಶೇ.೪೦ರಷ್ಟು ಬೆಳೆ ಹಾನಿಯಾಗಿದೆ. ಗದ್ದೆಯಲ್ಲಿ ನೀರು ನಿಂತು ಕೊಳೆತು ಹೋಗಿದೆ.
ಆದರೂ ಎಲ್ಲವೂ ದೇವಿಯ ಇಚ್ಛೆ, ಆಕೆಗೆ ಎಷ್ಟು ಬೇಕೋ ಅಷ್ಟನ್ನು ಬೆಳೆಸುತ್ತಾಳೆ ಎನ್ನುತ್ತಾರೆ ೨೫ಕ್ಕೂ ಹೆಚ್ಚು ವರ್ಷದಿಂದ ಇಲ್ಲಿ ಕಲ್ಲಂಗಡಿ ಬೆಳೆಯುತ್ತಿರುವ ಹಿರಿಯರಾದ ನಾರಾಯಣ ಪೂಜಾರಿ. ನೆನಪಿಡಿ ಅವರು ಬೆಳೆಸಿದ ಕಲ್ಲಂಗಡಿ ಪೈಕಿ, ಐದು ಕೆ.ಜಿ ಮೇಲ್ಪಟ್ಟ ನೂರೈವತ್ತಕ್ಕೂ ಹೆಚ್ಚು ಕಲ್ಲಂಗಡಿ ಹಾಳಾಗಿದೆ.

ಬೇಸರ ಎಂದರೆ ಪೊಳಲಿ ತಳಿಯೆಂದೇ ಇದ್ದ ತಳಿಯೊಂದು ಮಾತ್ರ ಕಾಲಾಂತರದಲ್ಲಿ ಕಣ್ಮರೆಯಾಗಿ ಹೋಗಿದೆ, ಈಗ ಹೈಬ್ರಿಡ್ ತಳಿಗಳಾದ ಮಧು, ಭಟ್ನಗರ್‌ನಂತಹ ತಳಿಗಳನ್ನು ಇಲ್ಲಿ ಬೆಳೆಯುತ್ತಾರೆ. ಇಲ್ಲಿನ ಲೋಕಲ್ ತಳಿ ದಶಕಗಳ ಹಿಂದೆಯೇ ಅಳಿದು ಹೋಗಿದೆ, ಅದು ಭಾರೀ ಗಾತ್ರದ್ದಾಗಿತ್ತು ನೋಡಿದ ನೆನಪು ಈಗಲೂ ಇದೆ ಎನ್ನುತ್ತಾರೆ ನಾರಾಯಣ.

ಅದೇನೆ ಇರಲಿ ದೇವಸ್ಥಾನವೊಂದರ ಕಾರಣದಲ್ಲಾದರೂ ದಕ್ಷಿಣ ಕನ್ನಡದಲ್ಲಿ ಕಲ್ಲಂಗಡಿ ಬೇರು ಬಿಟ್ಟಿರುವುದಂತೂ ಅಚ್ಚರಿಯ ಸಂಗತಿ.

24.3.08

ಶಿರಾಡಿಯ ವೆಂಕಟಗಿರಿ ನೆತ್ತಿಯಲ್ಲಿ(atop shiradi venkatagiri peak)


ಬೆಂಗಳೂರಿಂದ-ಮಂಗಳೂರಿಗೆ ಬರುವವರನ್ನು ಯಾವಾಗಲೂ ಸೆಳೆಯುತ್ತದೆ ಶಿರಾಡಿ ಘಾಟ್‌ನ ಅರಣ್ಯ, ಅಲ್ಲಿನ ಇಕ್ಕೆಲಗಳಲ್ಲಿನ ಹೆಸರೇ ಅರಿಯದ ಗಿರಿ ಶಿಖರಗಳು.
ನಾನೂ ಅನೇಕ ಬಾರಿ ಆ ಗಿರಿಗಳ ಮೇಲೇರುವ ಕನಸು ಕಂಡದ್ದಿದೆ. ಶಿರಾಡಿ ಘಾಟಿಯ ಹಚ್ಚ ಹಸಿರಿನ ಸೆರಗಲ್ಲಿ ಹರಿಯುತ್ತದೆ ಕೆಂಪು ಹೊಳೆ. ಇದೀಗ ಈ ಹೊಳೆಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ ಮಿನಿ ಹೈಡ್ರೋ ಸ್ಥಾವರ ಸ್ಥಾಪನೆಯಾಗಿದೆ, ಒಂದಷ್ಟು ಹಸಿರನ್ನು ಈ ಸ್ಥಾವರ ನುಂಗಿ ಹಾಕಿದ್ದೂ ಇದೆ.
ಆದರೂ ಪ್ರಕೃತಿಯ ಸಹಚರ್ಯ ಬಯಸುವವರಿಗೆ ಶಿರಾಡಿಯ ಕಾಡು ಬೆಟ್ಟ ಯಾವಾಗಲೂ ಚೇತೋಹಾರಿ. ಇಲ್ಲಿಗೆ ನಡೆದು ನೋಡುವ ಕಾರ್ಯಕ್ರಮವೊಂದನ್ನು ಮಂಗಳೂರಿನ ಚಾರಣಿಗ ಮಿತ್ರ ದಿನೇಶ್ ಹೊಳ್ಳ ಆಯೋಜಿಸಿದ್ದರು. ಮಂಗಳೂರಿನಿಂದ ೨೧ ಮಂದಿಯ ತಂಡ ಹೊರಟಿತು ಶಿರಾಡಿಯತ್ತ. ಮಂಗಳೂರಿನಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಹಾಗಾಗಿ ನಾವು ಹೋಗಬೇಕು ಎಂದಿದ್ದ ಶಿಖರ ‘ವೆಂಕಟಗಿರಿ’ ಹೋಗುವುದು ಸಾಧ್ಯವೇ ಎಂಬ ದಿಗಿಲೂ ನಮ್ಮಲ್ಲಿತ್ತು. ಮಳೆ ಇದ್ದರೆ ಗುಂಡ್ಯದ ರೈಲ್ವೇ ಹಳಿಯಲ್ಲಿ ನಡೆಯುವುದು ಎಂದು ನಿರ್ಧರಿಸಿ ಹೊರಟೆವು.

ಅಚ್ಚರಿ ಎಂದರೆ ನಾವು ಶಿರಾಡಿ ತಲಪುವಾಗ ಮಳೆ ಮಾಯ! ಗುಂಡ್ಯದಿಂದ ಬಲಕ್ಕೆ ತಿರುಗಿ ಸುಬ್ರಹ್ಮಣ್ಯಕ್ಕೆ ಹೋಗುವ ದಾರಿಯಲ್ಲಿ ಮುಂದುವರಿದೆವು. ಅಲ್ಲಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆ ಎಡಕ್ಕೆ ಕವಲೊಡೆವ ಸಪುರ ರಸ್ತೆಯ ಸಮೀಪವೇ ಮಹೀಂದ್ರ ಟೆಂಪೊ ನಿಲ್ಲಿಸಿ, ಅಲ್ಲಿಂದ ವೆಂಕಟಗಿರಿಗೇ ಚಾರಣ ಆರಂಭ.
ಮೇ ತಿಂಗಳಾದ್ದರಿಂದ ಇನ್ನೂ ಅಲ್ಲಲ್ಲಿ ಗೇರು ಹಣ್ಣು. ಹಣ್ಣು ತಿಂದು ಬೀಜ ಅಲ್ಲೇ ಇರಿಸಿ ಮುಂದುವರಿದೆವು. ಅಕಾಲಿಕ ಮಳೆಯಾದ್ದರಿಂದ ತೋಡುಗಳಲ್ಲಿ ಕೆನ್ನೀರು ಹರಿಯುತ್ತಿತ್ತು. ಒಣಗಿದ್ದ ಮರಗಳೆಲ್ಲಾ ತೊಳೆದ ಹಾಗೆ ಕಾಣುತ್ತಿದ್ದವು, ಅಲ್ಲಲ್ಲಿ ಮತ್ತೆ ಹಸಿರು ಕಾಣುತ್ತಿತ್ತು. ಊರಿನವರೇ ಆದ ರಾಜಶೇಖರ್ ಅಲಿಯಾಸ್ ರಾಜಣ್ಣ ನಮಗೆ ಲೋಕಲ್ ಗೈಡ್.


ದೂರದಿಂದ ಎತ್ತರದಲ್ಲಿ ನಮ್ಮ ಚಾರಣ ತಾಣ ವೆಂಕಟಗಿರಿಯ ಬೋಳು ನೆತ್ತಿ ಕೈಬೀಸಿ ಕರೆಯುತ್ತಿತ್ತು.
ಸುಮಾರು ಅರ್ಧ ಗಂಟೆಯ ಪ್ರಯಾಣ ಮಾಡಿ ಊರಿನ ಮನೆಗಳ ನಡುವೆ ಸಾಗುತ್ತಾ ಕಾಡಿನ ಮಡಿಲು ಪ್ರವೇಶಿಸಿದ ನಾವು ಮಂಗಳೂರು-ಬೆಂಗಳೂರು ರೈಲ್ವೇ ಟ್ರಾಕ್ ಸೇರಿದೆವು. ಬೃಹತ್ ಸುರಂಗಮಾರ್ಗವೊಂದು ಅಲ್ಲೇ ಇತ್ತು. ಪಕ್ಕದಲ್ಲೇ ನೀರಿನ ತೋಡು.
ಮೋಡ ಕವಿದಿದ್ದರಿಂದ ಎಲ್ಲರಿಗೂ ಬೆವರು. ಅಲ್ಲೇ ಹಳಿಯ ಪಕ್ಕ ಕುಳಿತು ಒಂದಷ್ಟು ದಣಿವಾರಿಸಿದೆವು. ಬೆಂಗಳೂರಿನತ್ತ ಮುಖಮಾಡಿ ನಿಂತರೆ ಅದುರಿಗೆ ಸುರಂಗ, ಅದರ ಎಡ ಪಕ್ಕದಲ್ಲೇ ಒಂದು ಕಾಡು ದಾರಿ ಮುಂದುವರಿಯುತ್ತದೆ, ಅದರಲ್ಲಿ ಸಾಗಿದರೆ ಅರಣ್ಯ ಇಲಾಖೆಯವರು ರಚಿಸಿದ ಕಲ್ಲಿನ ಗುಪ್ಪೆಯೊಂದು ಸಿಗುತ್ತದೆ. ಕಲ್ಲಿನ ಗುಪ್ಪೆಗೆ ಎದುರೇ ಸಿಕ್ಕುವ ಕಾಲು ಹಾದಿಯೇ ನಮ್ಮ ಚಾರಣದ ಹಾದಿ. ದಾರಿಯಲ್ಲಿ ಹೇರಳವಾಗಿ ಕಂಡು ಬಂದದ್ದು ನಮಗೆ ಆನೆ ಲದ್ದಿ, ಆದರೆ ಆನೆ ಮಾತ್ರ ಎಲ್ಲೂ ನೋಡಲು ಸಿಗಲಿಲ್ಲ. ಅಥವಾ ನಮ್ಮ ತಂಡವನ್ನು ನೋಡಿ ಬೆದರಿ ದೂರ ಹೋಗಿರಲೂ ಬಹುದು. ಇದ್ದರೂ ನಮಗೆ ಕಾಣದಿರಬಹುದು. ಆದರೆ ಈ ಭಾಗದಲ್ಲಿ ಆನೆಗಳ ಗುಂಪೇ ಸಂಚರಿಸುತ್ತದೆ ಎಂಬ ಮಾಹಿತಿ ನಮಗೆ ನೀಡಿದ ರಾಜಣ್ಣ.


ಅಗಾಗ ಮಳೆಹನಿ, ತೇವಗೊಂಡ ಹುಲ್ಲು ತುಂಬಿದ ನೆಲ, ಮೇಲೆ ಹೋದಂತೆ ಕಾಡಕಿಚ್ಚು ಬಿದ್ದು ಸುಟ್ಟ ಮರ, ಹುಲ್ಲಿನ ಗಡ್ಡೆ ಕಂಡುಬಂದವು, ಮಳೆಯಾದ್ದರಿಂದ ಮರ, ಹುಲ್ಲು ಮತ್ತೆ ಚಿಗುರತೊಡಗಿದ್ದವು. ಎಡಕ್ಕೆ ನೋಡಿದರೆ ದಟ್ಟ ಅರಣ್ಯ, ಬಲಕ್ಕೆ ನೋಡಿದರೆ ಹತ್ತಿಯಂಥ ಮೋಡ ಹೊದ್ದು ಮುಗುಮ್ಮಾಗಿ ಕುಳಿತಿದೆ ‘ಮುಗಿಲಗಿರಿ’ ಶಿಖರ. ಎಲ್ಲಾ ಕಾಲದಲ್ಲೂ ಒಂದಷ್ಟು ಮೋಡಗಳನ್ನು ತನ್ನ ಹತ್ತಿರವೇ ಇರಿಸುವ ಕಾರಣ ಆ ಹೆಸರು ಪಡೆದುಕೊಂಡಿದೆ ಮುಗಿಲಗಿರಿ ಎಂಬ ಮಾಹಿತಿಕೊಡುತ್ತಾರೆ ದಿನೇಶ್ ಹೊಳ್ಳ.
ಗುಡ್ಡ ಏರುತ್ತಾ ಹೋದಂತೆ ಮರಗಳು ಕಡಮೆಯಾದವು, ಅಲ್ಲೊಂದು ಇಲ್ಲೊಂದು ನೆಲ್ಲಿ ಮರಗಳು. ಕೆಲವದರಲ್ಲಿ ಇನ್ನೂ ನೆಲ್ಲಿಕಾಯಿ ಉಳಿದಿತ್ತು. ನಮ್ಮಲ್ಲಿನ ‘ಹುಡುಗುಬುದ್ಧಿ’ ಕಲ್ಲು ಎಸೆಯುವಂತೆ ಪ್ರೇರೇಪಿಸದೆ ಇದ್ದೀತೇ, ದೊಡ್ಡವರೂ ಚಿಕ್ಕವರಾಗಿ ನೆಲ್ಲಿಕಾಯಿ ಉದುರಿಸಿದೆವು. ನೆಲ್ಲಿಕಾಯಿ ಸವಿಯುತ್ತ, ಅದರ ಮೇಲೆ ನೀರು ಕುಡಿದು ಆ ಸಿಹಿ ಅನುಭವಿಸುತ್ತಾ ಹೋಗುವಾಗ ಆಯಾಸ ಪರಿಹಾರ. ವೆಂಕಟಗಿರಿಯ ತುದಿಯೂ ಹತ್ತಿರವಾಗುತ್ತಿತ್ತು.
ಸುತ್ತ ನೋಡಿದರೆ ಬೇರೆ ಬೇರೆ ಶಿಖರ ಸಾಲು. ಅಮೇದಿಕಲ್ಲು, ಎತ್ತಿನಭುಜ, ಗಡಾಯಿಕಲ್ಲು, ಮಿಂಚುಕಲ್ಲು, ಇನ್ನೂ ಹಲವಾರು, ಕೆಳಗೆ ನೋಡಿದರೆ ಹಾವಿನಂತೆ ಕಾಣುವ ಕೆಂಪುಹೊಳೆ, ಅದರ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ ೪೮.
ಸುಮಾರು ಮೂರು ಗಂಟೆಯ ಚಾರಣ ಸಾಕು ವೆಂಕಟಗಿರಿ ತಲಪಲು. ಶೇ.೯೦ರಷ್ಟು ಸುಲಭ ಚಾರಣವಾದರೆ, ಕೊನೆಯಲ್ಲಿ ಶಿಖರ ತಲಪುವಾಗ ಒಂದಷ್ಟು ಏದುಸಿರು ಖರ್ಚಾಗುತ್ತದೆ!
ಮೇಲೆ ತಲಪಿದರೆ ಬೋಳುಗುಡ್ಡ, ಒಂದೆರಡು ಕಲ್ಲಿನಗುಪ್ಪೆ, ಬಿರುಬೀಸು ಗಾಳಿ, ಅಷ್ಟೇ ಲಭ್ಯ. ಅದು ಬಿಟ್ಟರೆ ಸುತ್ತಲಿನ ಪ್ರಕೃತಿಯ ರಮ್ಯನೋಟ.
ಮಧ್ಯಾಹ್ನದ ಊಟಕ್ಕಾಗಿ ತಂದಿದ್ದ ಮೂಡೆ (moode) ಹೊಟ್ಟೆಗಿಳಿಸಿ, ಮತ್ತೆ ಕೆಳಕ್ಕಿಳಿದೆವು. ಕಲ್ಲುಗಳು ಬುಡ ಹಸಿಯಾದ ಕಾರಣ ಅಲುಗಾಡುತ್ತಿದ್ದು, ಎಚ್ಚರಿಕೆಯಿಂದ ಇಳಿಯಬೇಕಿತ್ತು, ಹಾಗಾಗಿ ಇಳಿಯಲೂ ಅಷ್ಟೇ ಸಮಯ ಬೇಕು.
ಇಳಿಯುವಾಗಲೂ ನಮ್ಮನ್ನು ಆಕರ್ಷಿಸುತ್ತಿದ್ದುದು, ಆ ಕಾಡು, ಆ ಬಿದ್ದ ತರಗೆಲೆ, ಮೋಡ ಕವಿದ ಮುಗಿಲಗಿರಿ, ಬೋಳು ತುದಿಯ ವೆಂಕಟಗಿರಿ.......
ಚಿತ್ರ : ಸುನಿಲ್
Related Posts Plugin for WordPress, Blogger...